ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೇವಕಣಗಿಲೆಯೊಂದು ತೊಟ್ಟು ಕಳಚಿದ ಹೊತ್ತು..

"ಇಷ್ಟು ನಿಸ್ವಾರ್ಥವಾಗಿ ಪ್ರೀತಿಸುವುದೂ ಸಾಧ್ಯವೇ...!? ಪದೇಪದೇ ಇದೊಂದು ವಿಷಯ ಅವನನ್ನು ಇನ್ನಿಲ್ಲದಂತೆ ಕಾಡಿ , ಉತ್ತರಕ್ಕೆ ಬದಲಾಗಿ ಮಂದಹಾಸ ಮೂಡಿ , ಸುರಸುಂದರಿಯರಿರುವ ಮಹಾನಗರದಲ್ಲೂ ಅವನ ನಿಷ್ಠೆ ಬದಲಾಗದಂತೆ ಕಾಪಾಡಿದೆ...." ಹೀಗೊಂದು ಪ್ರೇಮ ನಿವೇದನೆಯ ಸುಂದರ ಕಥೆ ಹೆಣೆದದವರು ಲೇಖಕಿ ನಂದಿನಿ ಹೆದ್ದುರ್ಗ.
ನಂದಿನಿ ಹೆದ್ದುರ್ಗ
ಇತ್ತೀಚಿನ ಬರಹಗಳು: ನಂದಿನಿ ಹೆದ್ದುರ್ಗ (ಎಲ್ಲವನ್ನು ಓದಿ)

“ಓ ಗಾಡ್…ಫ್ಲೈ ಓವರ್ ಹತ್ಬಿಟ್ವಲ್ಲಾ ಚಿನ್ನಾ..
ನಾ ಹೇಳ್ಲಿಲ್ವಾ ನಿನಗೆ.
ರಸ್ತೆ ಕಡೆಗೆ ಗಮನ ಇರಲಿ ಅಂತ..
ಹೋಗಲಿ..
ನಾ ನೋಡಕ್ಕೊಳ್ಳಲ್ಲಾಅಂತಾದ್ರೂ ಹೇಳಬೇಕಿತ್ತು ತಾನೇ..?
ನಾನೇ ಸ್ವಲ್ಪ ನಿಧಾನವಾಗಿ ಗಮನಿಸ್ಕೊಂಡೆ ಡ್ರೈವ್ ಮಾಡ್ತಿದ್ದೆ..”

ಹಿಮವಂತ್ ಸ್ವರದಲ್ಲಿ ಒಂಚೂರಾದ್ರೂ ಅಸಮಾಧಾನ ಬೆರೆಸದೆ ಶಿವಾನಿಯನ್ನ ಗದರಿದ..
ಅವನಿಗೆ ಕೋಪ ಬರುವುದೇ ಹಾಗಾ..ಅಥವಾ ನನ್ನೊಡನೆ ಮಾತ್ರ ಹೀಗಾ..?
ಡ್ರೈವ್ ಮಾಡ್ತಿದ್ದ ಅವನ ಎಡತೋಳಿಗೆ ಮೃದುವಾಗಿ ಮುತ್ತಿಕ್ಕಿ’ಹು’ಅಂತಷ್ಟೇ ಅಂದಳು ಶಿವಾನಿ.
ಅವಳಿಗೀಗಾ ತನ್ನ ತಲೆದಿಂಬಾಗಿರುವ ಅವನ ತೋಳನ್ನು ಗಾಢವಾಗಿ ಕಚ್ಚಬೇಕು ಅಂತನ್ನಿಸ್ತಿದೆ..

“ಅಲ್ಲೇ ಲೆಫ್ಟಿಗೆ ತಗೋಬೇಕಿತ್ತು ಅಲ್ವಾ ಮುದ್ದು.?
ಇವತ್ತೂ ಸರಿಯಾಗಿ ರೂಟ್ ಹೇಳ್ಲಿಲ್ಲ ನೀನು…
ಈಗ ನೋಡು..
ಮತ್ತೆ ಎರಡು ಕಿಮೀ ‌ಮುಂದೆ ಹೋಗಿ ಯೂ ಟರ್ನ್ ತಗೊಂಡು ಮತ್ತಿದೇ ದಾರಿಯಲ್ಲಿ ಬರಬೇಕು..”

ಅವನು ಹೀಗಂದಾಗ ಸಣ್ಣಗೆ ಬೆವರಿದ ಶಿವಾನಿಗೆ
ಅಂದಿನ ಇಡೀ ದಿನ ಕಣ್ಣೆದುರು‌ ಬಂದಿತು.

ಶಿವಮೊಗ್ಗೆಯಿಂದ ಬೆಳಿಗ್ಗೆ ಬಂದವಳನ್ನು ಪಿಕ್ ಮಾಡಿ ಬನಶಂಕರಿಯಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನ ಕ್ಕೆ ಕರೆದು ಕೊಂಡು ಹೋಗಿ,ಗಾಂಧಿಬಜಾರಿಗೆ ಬಂದು ಅವಳಿಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಂಡು ಅವಳಿಗಿಷ್ಟ ಅಂತ ತುಮಕೂರು ರಸ್ತೆಯಲ್ಲಿರುವ ರೆಸ್ಟೊರೆಂಟ್ ಗೆ ಊಟಕ್ಕೆ ‌ಹೋಗಿ ತಡವಾಯಿತೆಂದು ಅವಸರಿಸಿದವಳನ್ನು ಸಮಾಧಾನ ಪಡಿಸಿ ದೇವನಹಳ್ಳಿ ಯ ಬಳಿಯಿರುವ ಅವಳ ಚಿಕ್ಕಮ್ಮನ ಅಪಾರ್ಟ್ಮೆಂಟ್ ಗೆ ಸಮಯಕ್ಕೆ ಸರಿಯಾಗಿ ತಲುಪಿಸುತ್ತೇನೆ ಅಂತ‌ ಮಾತು ಕೊಟ್ಟು ತನ್ನ ಗಾಢ ಕಡುನೀಲಿ ಬಣ್ಣದ ಪಜೆರೋದಲ್ಲಿ ಹಿತವಾದ ಸಂಗೀತ ಹಾಕಿ ಡ್ರೈವ್ ‌ಮಾಡುತ್ತಿದ್ದವನಿಗೆ ಎಂದಿನಂತೆ ಅದೇ ಫ್ಲೈ ಓವರ್ ಬಳಿಯಲ್ಲಿ ಕನ್‌ಫ್ಯೂಸ್ ಆಯ್ತು..

ಆರೇಳು ತಿಂಗಳಿಗೊಮ್ಮೆ ಆರ್ಟ್ ವರ್ಕ್ ನ ಕೆಲಸದ ನಿಮಿತ್ತ ಬರುವ ತನ್ನ ಆತ್ಮಸಖಿಗಾಗಿ ಅವನ ಎಂದಿನ ಬಿಡುವಿಲ್ಲದ ದಿನಚರಿಯನ್ನು ಬದಲಿಸಿಕೊಳ್ಳುತ್ತಿದ್ದ ಹಿಮವಂತ.
ಆದರೆ..
ಪ್ರತಿ ಬಾರಿ ಬಂದಾಗಲೂ ಸಂಜೆ ಹೊರಡುವಾಗ ಅವಳ ತಡವಾಯಿತು ಎಂಬ ದಿಗಿಲೂ ,
ಸರಿಯಾದ ಸಮಯಕ್ಕೆ ತಲುಪಿಸುತ್ತೇನೆಂಬ ಅವನ ಅನುನಯವೂ ಬೆಂಗಳೂರೆಂಬ ಮಹಾನಗರದ ಆ ರಸ್ತೆಗೂ ಚಿರಪರಿಚಿತವಾಗಿ ಅದು ಅವರಿಗಾಗಿಯೇ ತಾನಿದ್ದೇನೆ ಅಂದುಕೊಂಡು ಅವಳು ಬರುವು ದಿನಗಳಿಗಾಗಿಯೇ ತಾನಿಷ್ಟು ಬಿಡುವಾಗಿ ಆ ಸಂಜೆಗಳನ್ನು ಮಧುರವಾಗಿಸುತ್ತಿತ್ತು.

ಭಾನು ಕಡುಗೆಂಪಾಗಿ,ಬದಿಯ ಮರಗಳೆಲ್ಲಾ ಮೈ ತುಂಬಾ ಹೂವಿಡಿದು..
ರಸ್ತೆಯಲ್ಲಿ ಆಗೀಗಾ ಮಾತ್ರ ಟ್ರಾಫಿಕ್ಕು ಹೆಚ್ಚಾಗಿ ..
ಎಫ್ ಎಮ್‌ನಲ್ಲಿ ಪ್ರೇಮ ಉಸುರುವ ಹಾಡುಗಳೇ ಪ್ರಸಾರವಾಗಿ..
ಅಲ್ಲಲ್ಲಿ ಅಷ್ಟು ಹಕ್ಕಿಗಳು ಹಾರಾಡಿ..!!!
ಆ ಇಬ್ಬರ ನಡುವೆ ಗಾಳಿಯೂ
ತೂರದಷ್ಟೂ ಗಾಢ ಭಾವ ಸಂಭವಿಸಿ…

ಒಟ್ಟಿನಲ್ಲಿ ಮಹಾನಗರವೆಂಬಾ ಆ ಅವಸರಾಸುರಿಗೂ ಈ ಅಪರೂಪದ ಪ್ರೇಮಿಗಳನ್ನು ಖುಷಿಯಾಗಿಡುವ ಬಗೆ ತಿಳಿದಿತ್ತು..!!

ಪರಿಚಯವಾಗಿ ಆರು ವರ್ಷಗಳ ಈ ಅವಧಿಯ ಪ್ರತಿ ಭೇಟಿಯಲ್ಲೂ ಅದೇ ಫ್ಲೈ ಓವರ್ ಬಳಿಯಲ್ಲಿ ಅವರು ಹಾದಿ ತಪ್ಪುತ್ತಿದ್ದರು..
ಇಡೀ ದಿನದ ಓಡಾಟ..
ಆಯಾಸದ ನಂತರವೂ ಅವನು ಹಾಗೆ ತಪ್ಪಿದ್ದಕ್ಕೆ ಬೇಸರಿಸುತ್ತಿರಲಿಲ್ಲವಾದರೂ ಅಲ್ಲಿ ತುಸು ಗಮನಿಸಿಕೊಳ್ಳುವಂತೆ ಶಿವಾನಿಗೆ ಹೇಳಿರುತ್ತಿದ್ದ…
ಶಿವಾನಿ ಅತೀ ಪರಿಚಿತದ ಆ ಹಾದಿಯಲ್ಲಿ ಪ್ರತಿಸರ್ತಿಯೂ ಎಡಕ್ಕೆ ಹೊರಳುವುದನ್ನು ಹೇಳಲು ಎಂದಿನಂತೆ ಮರೆಯುತ್ತಿದ್ದಳು.

‘ನಿಂಗೆ ಕೋಪ ಬರಲ್ವಾ.?’
ಸಣ್ಣ ಧ್ವನಿಯಲ್ಲಿ
ಸ್ವಗತವೆಂಬಂತೆ ಕೇಳಿದಳು ಶಿವಾನಿ…
ನನ್ನ ಕಣ್ಣ ಗೊಂಬೆ
ನನ್ನ ಹೃದಯದ ಬೆಳಕು,
ನಾನೆಂಬ ‌ನನ್ನನ್ನು ಸಂಪೂರ್ಣವಾಗಿ ತನ್ನ ಅಮಾಯಕ ಪ್ರೇಮದಿಂದ ಸುತ್ತಿಕೊಂಡ ತನ್ನ ಹುಡುಗಿಯನ್ನು ಡ್ರೈವ್ ಮಾಡುತ್ತಿದ್ದ ಹಿಮವಂತ ಒಮ್ಮೆ ಮೋಹದಿಂದ ನೋಡಿ ತನ್ನ ಎಡಗೈಯಲ್ಲಿ ಅವಳ ನಡು ಬಳಸಿ ಹಣೆಗೆ ತುಟಿಯೊತ್ತಿದ.
ಎಫ್ ಎಮ್ ನಲ್ಲಿ ಅವಳಿಷ್ಟದ
‘ನಿನ್ನ ಪ್ರೇಮದ ಪರಿಯ ನಾನಾರಿಯೇ ಕನಕಾಂಗಿ’ಹಾಡು ಬರುತ್ತಿತ್ತು..

ಬಿರುಬಿಸಿಲು ಮೆತ್ತಿ ಆಯಾಸಗೊಂಡಿದ್ದ
ದೇವನಹಳ್ಳಿಯ ಆ ರಸ್ತೆಗೆ ಅಕಾಲ ಮಳೆ ಸುರಿದಂತಾಯಿತು.

ಎಂದಿನಂತೆ ಸಮಯಕ್ಕೆ ಹತ್ತು ನಿಮಿಷ ಮೊದಲೇ ಅವಳನ್ನು ಮನೆ ತಲುಪಿಸಿ ಸಂಜೆಯ ನಂತರ ಇರುವೆ ಗೂಡಿನಂತಾಗುವ ಆ ದಾರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿಯ ತನ್ನ ಮನೆ ತಲುಪಬೇಕಿತ್ತು.
ಆ ಹಗಲಿನ ಅವಳ ಸನಿಹದ ಮಾರ್ಧವ ಅವನನ್ನು ಅಮಲಿನಂತೆ ಆವರಿಸಿ ಮತ್ತದೇ ಎರಡು ತಾಸು ಹಾದಿಯ ವಾಪಸು ಪ್ರಯಾಣವನ್ನೂ ಮಧುರವಾಗಿಸುತ್ತಿತ್ತು…

….
‘ಎಲ್ಲಿ ಊಟ ಮಾಡೋಣ ನೀನೇ ಹೇಳು?’
ಕಳೆದ ಬಾರಿಯೇ ತುಮಕೂರು ರಸ್ತೆಯ ರೆಸ್ಟುರಾದ ಊಟವನ್ನು
ಮುಂದಿನ ಸರ್ತಿ ಬದಲಾಯಿಸೋಣಾ ಅಂತ ಮಾತಾಡಿಕೊಂಡಿದ್ದರಿಂದ ಶಿವಾನಿ ಅವನನ್ನೇ ಕೇಳಿದಳು.
ಈ ಬಾರಿಯ ಅವರ ಭೇಟಿಗೆ ಎಂಟು ತಿಂಗಳು
ಮುಗಿದು ಒಂಬತ್ತಾಗಿತ್ತು..
ಈಗಿನ ಈ ಕಾಲದಲ್ಲೂ ಇಷ್ಟಿಷ್ಟು ದೀರ್ಘವಾಗಿ ಭೇಟಿಯಾಗದೇ ಉಳಿಯಬಹುದೇ…?
ಅನ್ನುವ ತನ್ನ ಗೆಳತಿಯರ ಪ್ರಶ್ನೆಗೆ ಅವಳು ಯಾವಾಗಲೂ ನಕ್ಕು ಸುಮ್ಮನಾಗುತ್ತಿದ್ದಳು.

ಎಂದಿನಂತೆ ಬೆಳಿಗ್ಗೆ ಒಂಬತ್ತಕ್ಕೆ ಬಂದಿಳಿದವಳ ಇಡೀ ದಿನದ ಕೆಲಸಗಳನ್ನು ಹಿಂದಿನ ದಿನವೇ ಕೇಳಿಕೊಂಡು ಅದಕ್ಕೆ ತಕ್ಕಂತೆ ಪ್ಲ್ಯಾನ್ ಮಾಡಿದ್ದ ಹಿಮವಂತ.
ಮೊದಲು ರಾಜಾಜಿನಗರದಲ್ಲಿ ಅವಳಿಗೆ ಕೆಲಸವಿದ್ದ
ಆರ್ಟ್ ಗ್ಯಾಲರಿಗೆ ಹೋಗಿ,
ಅವಳೊಂದಷ್ಟು ಪೇಯ್ಟಿಂಗ್ ಸಾಮಾಗ್ರಿ ಕೊಂಡ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಮುಗಿಸಿ,
ಅಪರೂಪಕ್ಕೆ ಆಸೆ ಪಟ್ಟ ಕಾಂಜೀವರಂ ರೇಷ್ಮೆ ಸೀರೆಯಂಗಡಿಗೂ ಭೇಟಿಕೊಟ್ಟು ,ಚರ್ಚ ಸ್ಟ್ರೀಟ್ ಪಕ್ಕದ ‘ಥರ್ಟೀಂಥ್ ಫ್ಲೋರ್’ ಗೆ ಊಟಕ್ಕೆ ಹೋಗುವಷ್ಟರಲ್ಲಿ ಎರಡೂವರೆ ಆಗಿ ,ಮತ್ತಿನ್ನೇನೋ ಕೆಲಸ ನೆನಪಿಸಿಕೊಂಡವಳನ್ನು ಸಮಾಧಾನಿಸಿ ಎಲ್ಲಾ ಮುಗಿಸಿ ಹೊರಡುವಾಗ ಸಂಜೆ ಐದು…

ಅವಳ ಬಟ್ಟಲು ಕಣ್ಣುಗಳು ಸಂಜೆಯಾಗುತ್ತಲೇ ಎಂದಿನಂತೆ ದಿಗಿಲು ತುಂಬಿಕೊಂಡು ಅವಸರಿಸುವುದನ್ನು ಕಣ್ಣು ತುಂಬಿಕೊಳ್ಳುವುದೆಂದರೆ ಹಿಮವಂತನಿಗೆ ಅತೀ ಪ್ರೀತಿ.
‘ನೋ ವರೀಸ್ ಬೇಬಿ..ಸರಿಯಾದ ಸಮಯಕ್ಕೆ ತಲುಪಿಸ್ತೀನಿ..ಈ ಬಾರಿ ನಂದಿಯಲ್ಲಿ ಕಾಫಿ ಕುಡಿದು ಹೋಗುವುದು ಅಂತ ನಿನ್ನೆಯೇ ಮಾತಾಡಿಯಾಗಿದೆ..
ಸರಿಯಾ..
ನೌ…ಸ್ಮೈಲ್…”

‘ಹು’
ಜಗತ್ತಿಗೆ ಪ್ರಬುದ್ಧ ಹೆಣ್ಣಿನಂತೆ ಕಾಣುವ ಶಿವಾನಿ ಅವನ ತೆಕ್ಕೆಯಲ್ಲಿ ಮಗುವಾಗುತ್ತಾಳೆ..
ಇಷ್ಟು ನಿಸ್ವಾರ್ಥವಾಗಿ ಪ್ರೀತಿಸುವುದೂ ಸಾಧ್ಯವೇ…!?
ಪದೇಪದೇ ಇದೊಂದು ವಿಷಯ ಅವನನ್ನು ಇನ್ನಿಲ್ಲದಂತೆ ಕಾಡಿ ,
ಉತ್ತರಕ್ಕೆ ಬದಲಾಗಿ ಮಂದಹಾಸ ಮೂಡಿ ,
ಸುರಸುಂದರಿಯರಿರುವ ಮಹಾನಗರದಲ್ಲೂ ಅವನ ನಿಷ್ಠೆ ಬದಲಾಗದಂತೆ ಕಾಪಾಡಿದೆ.

ಅವಳ ಸ್ವಗತದಂತಹ ಮಾತುಗಳು ಅವನಿಗದೆಷ್ಟು ಪ್ರಿಯವೆಂದರೆ ತುಸು ಹೊತ್ತು ಮೌನವಾಗಿದ್ದರೆ ಸಾಕು..
‘ಏನಾದರೂ ಹೇಳು ಚಿನ್ನಾ’ ಅನ್ನುತ್ತಾನೆ.
ಅವಳಿಗೆ ಅವನೂ,ಅವನಿಗೆ ಅವಳೂ ಸದಾ ಅಚ್ಚರಿಯೇ…
ಆರು ವರ್ಷದ ಈ ಪ್ರೇಮದ ಅವಧಿ ಎಂದೂ ಹಣ್ಣಾಗಿಸಿಲ್ಲ ಅವರಿಬ್ಬರನ್ನೂ..
ಒಂದು ತೃಪ್ತ ಸ್ಥಿತಿ ತೂಕರಹಿತ…!

ಸದ್ಯ ದೇವರ ಕಣ್ಣು,ದಯ್ಯದ ಕಣ್ಣು,ಓದಿದವರ ಕಣ್ಣು ಈ ಪಾರಿಜಾತದಂಥ ಪ್ರೇಮಿಗಳನ್ನು ತಾಕದಿರಲಿ…!!

ಹೆಚ್ಚು ಟ್ರಾಫಿಕ್ ಇಲ್ಲದ ರಸ್ತೆ ಹುಡುಕಿ ಏರ್ಪೋರ್ಟ್ ರಸ್ತೆಗೆ ಬರುವ ವೇಳೆಗೆ ಮಹಾನಗರ ತನ್ನ ಮನೆ ಮಹಡಿ ಹಾದಿ ಬೀದಿಗೆಲ್ಲಾ ಲೈಟು ಹತ್ತಿಸಿಕೊಂಡು ಓಡಿಹೋಗಲು ತಯಾರಾದ ವಧುವಿನಂತೆ ಕಾಣಹತ್ತಿತು..

ಅವನು ಹೇಳದೆಯೂ ಈ ಬಾರಿ
ಶಿವಾನಿ ಜಾಗ್ರತಳಾದಳು.
ಈ ಸರ್ತಿ ಸರಿಯಾಗಿ ಹೇಳಬೇಕು..ಇನ್ನೇನು ಒಂದು ಫರ್ಲಾಂಗು.
ಫ್ಲೈ ಓವರ್ ಬಳಿಯಲಿ ಎಡಕ್ಕೆ ತಿರುಗುವುದು..
ದಟ್ಟಣೆ ಹೆಚ್ಚಿದ್ದರೂ ಮೂರು ನಿಮಿಷ ಮೊದಲೇ ಹೇಳಿದರೆ ಅವನಿಗೂ ಸಲೀಸು…
ಬೆಳಗಿಂದ ನನಗಾಗಿ ಅವನ ಓಡಾಟ,ಈ ಊರ ಬಿಸಿಲು, ಧೂಳು,ಟ್ರಾಫಿಕ್ಕನಲ್ಲಿ ಸುತ್ತಾಡಿ ತುಸು ಹೆಚ್ಚೇ ಆಯಾಸವಾದಂತೆ ಕಾಣ್ತಿದ್ದಾನೆ..

ಶಿವಾನಿಯ ಸ್ವರ ಅವಳಿಗೂ ತಿಳಿಯದಂತೆ ತುಸು‌ ಕಸಿವಿಸಿಯನ್ನು ಬೆರೆಸಿಕೊಳ್ಳುತ್ತಿದೆ.
ಯಾವುದಿದು..ಗಾಢ ನೋವು…?
ಮೆಲ್ಲಮೆಲ್ಲಗೆ ಆವರಿಸಿದ ಸಂಕಟ ಮೂರು ಸೆಕೆಂಡಿನೊಳಗೆ ಒಳಹೊರಗನ್ನೆಲ್ಲಾ ವ್ಯಾಪಿಸಿ..,
ಒಂದು ಉದ್ವಿಗ್ನ ಸ್ಥಿತಿ ಅವಳಿಗೇ ಅರಿವಾಗದಂತೆ ಅವಳೊಳಗೆ ಮನೆ ಮಾಡುತ್ತಿದೆ.
ಕಣ್ಣು ತುಂಬಿ, ಗಂಟಲು ಬಿಗಿಯುವ ಮುನ್ನವೇ ಅವಳೆರಡು ದೀರ್ಘ ಉಸಿರು ತೆಗೆದುಕೊಂಡು ತಹಬಂದಿಗೆ ಬಂದು
“ಹಾ..ಹಿಮು…
ಫ್ಲೈ ಓವರ್ ಬರ್ತಿದೆ…
ಎಡಕ್ಕೆ ತಿರುಗ ಬೇಕು..ನೆನಪಿರಲಿ..ಪ್ರತಿಬಾರಿಯಂತೆ ನಾನು ಮರೆತಿಲ್ಲ…ನೆನಪಿಸಿಲ್ಲ ಅಂತ ಗದರುವ ಹಾಗಿಲ್ಲ ನೀನು..”
ನಗಲಾರದೇ ನಕ್ಕವಳು
‘ಸರ್ವಿಸ್ ರಸ್ತೆಯಲ್ಲಿ ಕಿರಿಕಿರಿಯಿದೆ‌ ನೋಡು..
ಇಲ್ಲೇ…ಹಿಮು…ಎಡಕ್ಕೆ… ಎಡಕ್ಕೋ….’
ಹಿಮವಂತ್ ಪ್ರತಿಬಾರಿಯಂತೆ ತನ್ನ ಕಡುನೀಲಿ ಪಜೆರೋವನ್ನು ಫ್ಲೈ ಓವರ್ ಹತ್ತಿಸಿಯಾಗಿತ್ತು…

‘ಓಯ್….ಹಿಮ್ಮೂಊಉ…ಹೇಳಲಿಲ್ವಾ ನಿಂಗೆ…
ಲೆಫ್ಟಿಗೆ ತಗೋ ಅಂತ…ಥೋ..
ನೋಡು..ಇವತ್ತೂ ‌ನಿಂಗೆ ವಾಪಸು ಹೋಗಲು ತಡವಾಗ್ತದೆ.’
ಶಿವಾನಿ ಹೀಗೆ ಹೇಳುವಾಗ ತಾನಾಡಿದ ಆ ನಾಲ್ಕು ಪದಗಳಲ್ಲಿ ಎಷ್ಟು ತಲ್ಲೀನಳಾಗಿದ್ದಳೆಂದರೆ ಯಾವುದೋ ಟ್ರ್ಯಾನ್ಸನಲ್ಲಿದ್ದವಳಂತೆ ,
ತನ್ನ ಧ್ವನಿಯೇ ತನಗೆ ಅಪರಿಚಿತವಾದಂತೆ,
ಮಲ್ಲಿಗೆ ಬಳ್ಳಿ ಮೈತುಂಬಾ ಹೂಮುಡಿದು ಘಮಘಮಿಸಿದಂತೆ ಹೇಳುತ್ತಿದ್ದಾಳೆ..
ಮನಸ್ಸು ಪ್ರಸನ್ನವಾದದ್ದು ಮಾತಿನಲ್ಲೂ ಇಣುಕುತ್ತದೆ.!

ಮುಖವುದಿಸಿ‌ ಮಗುವಿನಂತೆ ಆಡುತ್ತಿದ್ದವಳು ಅವನ ಕಣ್ಣಿಗೆ ಅದೆಷ್ಟು ಮುದ್ದಾಗಿ ಕಂಡಳೆಂದರೆ ಅವಳ ಬಳಸಿ‌ ಮುದ್ದಿಡುವುದನ್ನು ನಿಯಂತ್ರಿಸಲಾಗಲೇ ಇಲ್ಲ..

‘ಹೋಗ್ತಿರು…
ನಾ ಹೇಳ್ತಿದ್ರೂ ಯಾಕೆ ಎಡಕ್ಕೆ ತಗೋಳ್ಲಿಲ್ಲ ಹಿಮ್ಮೂ ನೀನು..ಈಗ ನೋಡು..
ಮತ್ತೆ ಹೋಗುವಷ್ಟರಲ್ಲಿ ನಿಂಗೆ ಆಯಾಸವಾಗ್ತದೆ…”
ಅವನಿಂದ ಬಿಡಿಸಿಕೊಂಡು ಅವನ ಕಡುಗಪ್ಪು ದಟ್ಟ ಹುಬ್ಬನ್ನೇ ನೋಡುತ್ತಾ ಕೇಳಿದಳು ಶಿವಾನಿ.

“ಚಿನ್ನಾ..
ಪ್ರತಿಬಾರಿ ನೀನು ಇನ್ನರ್ಧ ಗಂಟೆ ಹೆಚ್ಚಿಗೆ ನನ್ನ ಜೊತೆಗಿರಬೇಕಂತ ಹಾದಿ ಮರೆತಂತೆ ನಟಿಸ್ತಿದ್ದದ್ದು ನಂಗೆ ಗೊತ್ತಿಲ್ಲಾಂತ ತಿಳಿದಿದ್ಯಾ..!?
ಮರೆತು ಹತ್ತಿದ ಈ ಫ್ಲೈ ಓವರ್ ದಾಟುವಾಗ ನೀನು ನನ್ನ ಇನ್ನೂ ಒತ್ತಿಕೂತು ನಂಗೆ ತಿಳಿಯದಂತೆ ಒತ್ತುತ್ತಿದ್ದ ಮುತ್ತುಗಳನ್ನು ನಾ ಕಳೆದುಕೊಳ್ಳುವುದಾದರೂ ಹೇಗೆ ಹೇಳು.!!”

ಹೀಗೊಂದು ಪ್ರೇಮ ಸಂಭವಿಸಬಹುದೇ ಎಂಬಷ್ಟು ಅವಳೂ,ಆ ರಸ್ತೆಯೂ,ಮರವೂ,ಮರಮುಡಿದ ಹೂವೂ,ಕೆಂಪಡರಿದ ಆ ನಭವೂ ಬೆರಗಾಗಿದೆ..!
ಅವನ ಬೆಚ್ಚನೆಯ ತುಟಿಗಳು ಅವಳ ಹಣೆಗೊತ್ತಿಕೊಂಡಿವೆ..

ಶಿವಾನಿ‌ ಇನ್ನೂ ಹತ್ತಿರಾದಳು…
ಅವಳ ತುಟಿಗಳು ಅವನ ಎಡತೋಳಿನ ‌ಮೇಲೆ ಅದೆಷ್ಟು ಮೃದುವಾಗಿ ಒತ್ತಿಕೊಂಡವೆಂದರೆ ಅದೇ ಸಮಯಕ್ಕೆ ಸರ್ವಿಸ್ ರಸ್ತೆಯ ಬಲ ಬದಿಯಲಿದ್ದ ಕೆಂಪು ದೇವಕಣಗಿಲೆ ಮರದಿಂದ ಹೂವೊಂದು ಮೆಲ್ಲ ತೊಟ್ಟು ಕಳಚಿ ನೆಲಕ್ಕೆ ಬೀಳುವಾಗ ಸದ್ದಾಯಿತೆಂದು ಸಣ್ಣಗೆ ನಾಚಿಕೊಂಡಿತು…