- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
ಆಯಾ ರಾಷ್ಟ್ರಗಳ ನೆಲದ ಮಹಿಮೆಯನ್ನರಿಯಬೇಕಾದರೆ ಮೊದಲು ಅವುಗಳ ನೆಲದ ಸುವಾಸನೆಯಲ್ಲಿ ಘಮ್ಮೆನ್ನುವ ಧಾರ್ಮಿಕ ಸೂಕ್ಷ್ಮಗಳನ್ನಾಘ್ರಾಣಿಸಬೇಕು. ನಂತರ ಸಾಹಿತ್ಯ, ಕಲೆ, ಜಾನಪದೀಯ ಸಂಪ್ರದಾಯ, ರಾಜಕೀಯ ಕಲಾಪಗಳಿಂದ ಆಯಾ ರಾಷ್ಟ್ರದ ನಾಡಿಮಿಡಿತಗಳು ಅವಗತವಾಗುತ್ತವೆ. ರಾಷ್ಟ್ರಕ್ಕೆ ಸಂಬಂಧಿಸಿದ ಎಲ್ಲ ನರನಾಡಿಗಳಿಗೂ ಧರ್ಮವೇ ಸುಷುಮ್ನಾ, ಸಾಹಿತ್ಯ/ಕಲೆಯೇ ಇಡಾ ಹಾಗೂ ರಾಜತಂತ್ರಪ್ರಜ್ಞೆಯೇ ಪಿಂಗಳಾ. ರಾಷ್ಟ್ರಕ್ಕೆ ಅವೇ ತ್ರಿಕರಣಗಳು ಹಾಗೂ ಮೂಲ ವ್ಯಾಕರಣಗಳು.
ಧರ್ಮ, ಧಾರ್ಮಿಕತೆ ಎಂದಾಗ ಅದು ಕೇವಲ ಅಧ್ಯಾತ್ಮಕ್ಕೆ, ಭಗವಂತನಿಗೆ ಸಂಬಂಧಿಸಿದ್ದು, ಧರ್ಮಗ್ರಂಥಗಳಿಗೆ ಸಂಬಂಧಿಸಿದ್ದು ಎಂದು ಮೂಗು ಮುರಿಯುವವರು ಸ್ವಲ್ಪ ಮೂಗನ್ನು ಅಮುರಿಯಾಗಿಸಿ, ಹುರಿಯಾದ ಮೇರುದಂಡವನ್ನು ನೆಟ್ಟಗಿರಿಸಿ, ಕಿಂಚಿತ್ ಧರ್ಮದ ಪ್ರಾಣವಾಯುವಿನ ನಿಗಮನವನ್ನು ಗಮನಿಸಿ.
ಹಿಂದೊಮ್ಮೆ ಹೇಳಿದಹಾಗೆ – “ಧಾರಣಾತ್ ಶ್ರೇಯ ಆದಧಾತಿ ಇತಿ ಧರ್ಮಃ” (ಯಾವುದು ನಮಗೆ ಶ್ರೇಯಸ್ಸನ್ನು ತಂದುಕೊಡುವುದೋ ಅದು ಧರ್ಮ.) ಇದಷ್ಟೇ ಧರ್ಮದ ಹೂರಣ, ಮಿಕ್ಕ ವ್ಯಾಖ್ಯಾನಗಳು, ವ್ಯಂಗ್ಯಾರ್ಥಗಳು ಎಲ್ಲವೂ ಮನಸ್ಸಿಗೆ ಮಣ ಭಾರ, ಆ ಭಾರವಾದ ಮನಸ್ಸಿನಿಂದ ಸಜೀವಿಗಳು ಎಷ್ಟು ದೂರ ಹಾರಬಲ್ಲವು !? ಇದು ಬ್ರಹ್ಮಾಂಡದಲ್ಲಿರುವ ಸಕಲ ಜೀವರಾಶಿಗಳಿಗೂ ಅನ್ವಯ, ಅದೇ ಜಗದ ಸ್ವಯ. ಆಸ್ತಿಕ-ನಾಸ್ತಿಕ, ಆಧ್ಯಾತ್ಮಿಕ-ಚಾರ್ವಾಕ, ವೈದಿಕ-ಅವೈದಿಕ ಇವೆಲ್ಲವೂ ಅರಳಿಮರದ ಮೂಕ ನೆರಳಿನಾಸರೆಯಲ್ಲಿ ಕುಳಿತು ಒಗರು ಧ್ವನಿಯಲ್ಲಿ ಒದರುವ ಅಜ್ಜ-ಅಜ್ಜಿಯ ತರ್ಕಮಾತ್ರದ ಮಾತುಗಳು, ಅಷ್ಟೇ.
ಪ್ರಪಂಚದ ಅಣುರಣುವಿನಲ್ಲೂ ವಿಜ್ಞಾನವಿದೆ, ವಿಜ್ಞಾನವನ್ನೂ ಮೀರಿದ್ದು ಪ್ರಪಂಚದಲ್ಲೇ ಇದೆ. ತಿಳಿಸೆಳೆವಿನ ಅಂಚಿನಲ್ಲಿ ನಿಂತು ನೋಡುವವನಿಗೆ ಸಾಗರಗರ್ಭರತ್ನದ ದರ್ಶನ ಎಂದಿಗೂ ಅಸದಳವೇ. ತೆರೆಗಳನ್ನಷ್ಟೇ ಕಂಡವ ಸಾಗರದಾಗರಕ್ಕೆ ಎಂದಿಗೂ ತನ್ನನ್ನು ತೆರೆದುಕೊಳ್ಳುವುದಿಲ್ಲ. ಒಳಗಿಳಿಯಬೇಕು, ಆಳಕ್ಕೆ ಇಳಿಯಬೇಕು, ಬಹುಳಕ್ಕೆ ಬೆಳೆಯಬೇಕು. ಆಗಲೇ ಬಾಳುವೆಯೆಲ್ಲ ತುಂಬು ಬೆಳಕು.
ಎಲ್ಲ ದೇಶ (ಸ್ಥಾನ), ಕಾಲ, ಅವಸ್ಥೆಗಳಲ್ಲಿ ಧರ್ಮ ಎಂದಿಗೂ ಬದಲಾಗುವಂಥದ್ದಲ್ಲ. ಅದು ಸಾರ್ವತ್ರಿಕ, ಸರ್ವಮಾನ್ಯ, ಅಸಾಮಾನ್ಯ, ಪ್ರಾಮಾಣ್ಯ, ಗಣ್ಯ. ಧರ್ಮ ದರಿದ್ರರನ್ನೂ ಧರಿಸುತ್ತದೆ, ಅದಕ್ಕೆಂದೇ ಅದು ಧರ್ಮ (“ಧಾರಣಾತ್ ಧರ್ಮಂ ಇತ್ಯಾಹುಃ”). ಪ್ರಪಂಚದ ಯಾವ ಮೂಲೆಗೇ ಹೋಗಿ ವಿಚಾರಿಸಿ ನೋಡಿ- ಪರರ ವಸ್ತುವನ್ನು ಅಪಹರಿಸುವುದು, ಸುಳ್ಳು ನುಡಿಯುವುದು, ಅಕಾರಣ ದುರ್ಬಲರ ಮೇಲೆ ಬಲಪ್ರಯೋಗ ಮಾಡುವುದು, ಇತ್ಯಾದಿಗಳನ್ನು ತಿಳಿದವರಾರೂ ಧರ್ಮಕಲಾಪಗಳೆನ್ನುವುದಿಲ್ಲ, ಅವುಗಳು ಅಧರ್ಮವೆಂದು ನಾಸ್ತಿಕರಿಗೂ ಗೊತ್ತು, ನಾಸ್ತಿಕರೂ ಧರ್ಮದಲ್ಲಿ ಆಸ್ಥೆಯುಳ್ಳವರೇ, ಅವರೂ ಆಸ್ತಿಕರೇ, ಅದಕ್ಕೆಂದೇ ಧರ್ಮ ಸರ್ವಮಾನ್ಯ.
ನೀರನ್ನು ಪರಿಶೋಧಿಸಿ ಕುಡಿಯುವುದು, ಸ್ನಾನಾದಿ ಕರ್ಮಗಳಿಂದ ದೇಹವನ್ನು ಶುಚಿಯಾಗಿಡುವುದು, ಪ್ರಾಣಾಯಾಮದ ಮೂಲಕ ಉಸಿರಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು, ದುಡಿದು ಧನ ಸಂಪಾದಿಸಿ ಕೂಳು ತಿನ್ನುವುದು, ಲೋಕಸಂಗ್ರಹ ಕಾರ್ಯಗಳಲ್ಲಿ ತೊಡಗುವುದು, ಅಗತ್ಯಕ್ಕಿಂತ ಹೆಚ್ಚು ಗಿಡಮರಗಳನ್ನು ಕಡಿಯದೇ ಆದಷ್ಟು ಅವುಗಳನ್ನು ಸಂರಕ್ಷಿಸುವುದು ಇತ್ಯಾದಿಗಳೆಲ್ಲ ಧರ್ಮಕಾರ್ಯಗಳೇ, ಅವುಗಳಿಗೆ ಅನುಗೊಳ್ಳುವವರಿಗೆ ಧಾರ್ಮಿಕರೆನ್ನುತ್ತಾರೆ. ಈಗ ಹೇಳಿ – ಇಲ್ಲಿ ಎಲ್ಲಿಯಾದರೂ ದೇವರು, ಧರ್ಮಗ್ರಂಥ, ಅಧ್ಯಾತ್ಮ, ದೇವಸ್ಥಾನಗಳೆಂಬುವುವು ಕೇಳಸಿಕ್ಕಿತೇ ? ನೋಡಸಿಕ್ಕಿತೇ ? ಇಲ್ಲ ಎಂದಾದರೆ ಧರ್ಮ ಎಂದಾಗ ನಾವೆಲ್ಲ ದೇವರ ಕಡೆ, ದೇವಸ್ಥಾನಗಳ ಕಡೆ ಮುಖಮಾಡಿ ನಿಲ್ಲುವುದೇಕೆ ? ಮನಸ್ಸನ್ನು ಅವುಗಳೆಡೆಗೆ ಹರಿಬಿಡುವುದೇಕೆ ? ಸಿಂಹಾವಲೋಕನ ಲವವಾದರೂ ಬೇಕು !!.
ಸನಾತನದಲ್ಲಿ (ಒಂದಾನೊಂದು ಕಾಲದಲ್ಲಿ) ಎಲ್ಲರೂ ಸ್ವತಂತ್ರರಾಗಿದ್ದರು, ತೆರೆದ ಹೃದಯಿಗಳಾಗಿದ್ದರು. ಅಂತೆಯೇ ಎಲ್ಲರೂ ಎಲ್ಲರ ಅಭಿಪ್ರಾಯಗಳನ್ನು ಆದರಿಸಿ, ವಿಶ್ಲೇಷಿಸಿ, ಒಪ್ಪಿತವಾದರೆ ಅಪ್ಪಿಕೊಂಡು, ಇಲ್ಲವಾದರೆ ಇರಬಹುದೆಂದು ಸುಮ್ಮನಿರುತ್ತಿದ್ದರು, ಈಚಿನವರ ಹಾಗೆ ಒಪ್ಪಿತವಾಗಿದ್ದರೂ ಒಪ್ಪದೇ ಕಿಂಚಿತ್ ತಪ್ಪುಗಳನ್ನೇ ಎತ್ತಿ ಉಪ್ಪರಿಗೆಯಲ್ಲಿರಿಸಿ, ನಿಂದು ಸಲ್ಲ, ನಂದೇ ಎಲ್ಲ ಎಂದು ಬೀಗುತ್ತಿರಲಿಲ್ಲ.
ಹಿಂದೆಲ್ಲ ವೈದಿಕ-ಅವೈದಿಕರು, ಆಧ್ಯಾತ್ಮಿಕ-ಚಾರ್ವಾಕರು ಎಲ್ಲರೂ ಒಂದೆಡೆ ಸೇರಿ ಚರ್ಚೆಗೈಯ್ಯುತ್ತಿದ್ದರು, ಆಲೋಚಿಸುತ್ತಿದ್ದರು, ಲವಲವವಾಗಿ ಅವಲೋಕಿಸುತ್ತಿದ್ದರು. ಯಾರೂ ಅವರವರ ಮತಾಭಿಮಾನವನ್ನು ಇನ್ನೊಬ್ಬರ ಮೇಲೆ ಹೇರುತ್ತಿರಲಿಲ್ಲ, ಎಲ್ಲರೂ ಪರಸ್ಪರ ಗೌರವಾದರಗಳಿಂದ ಹಸನಾಗಿ ಬದುಕುತ್ತಿದ್ದರು.
ಒಂದೊಂದು ಕಾಲಖಂಡದಲ್ಲಿ ಒಂದಾನೊಂದು ಮತ, ಸಂಪ್ರದಾಯಗಳು ಅಸ್ತಿತ್ವಕ್ಕೆ ಬಂದು ಖಂಡತುಂಡವಾಗಿ ಮತ್ತೆ ಕಾಲವಾದವು, ಕಾಣೆಯಾದವು. ಧರ್ಮ ಮಾತ್ರ ಇಂದಿಗೂ ಅಪರಿಣಾಮಿ, ಸರ್ವಾಂತರ್ಯಾಮಿ. ಋಷಿಗಳಾದರು, ಮುನಿಗಳಾದರು, ಚಾರ್ವಾಕರಾದರು, ಸಾಂಖ್ಯರಾದರು, ಯೌಗಿಕರಾದರು, ವೈಶೇಷಿಕರಾದರು, ಆಚಾರ್ಯರಾದರು, ರಾಯರಾದರು, ಶಾಕ್ತರಾದರು, ಗಾಣಪತರಾದರು, ಶೈವೋಷ್ಣವರಾದರು, ಮೀಮಾಂಸಿಕರಾದರು, ದ್ವೈತಾದ್ವೈತಿಗಳಾದರು, ವಿಶಿಷ್ಟರಾದರು, ತೀರ್ಥಂಕರರಾದರು, ಯಾನರಾದರು, ಶರಣರಾದರು, ಕ್ರೈಸ್ತರಾದರು, ವಿಜ್ಞಾನಿಗಳಾದರು, ಅಜ್ಞಾನಿಗಳಾದರು, ಆಗಿ ಹೋದರು. ಉಳಿದವರಾರು ?
ಧರ್ಮ !
ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು
ಹಾಲೊಡೆಯೆ ಕಡೆದದನು ತಕ್ರವಾಗಿಪುದು
ಹಾಳ ಹಾಳಾಗಿಪುದು ಹಳದ ಹೊಸದಾಗಿಪುದು
ಬಾಳಿಗಿದೆ ಚಿರಧರ್ಮ – ಮಂಕುತಿಮ್ಮ ||
ಯುಗಾದಿ ಪ್ರಕೃತಿಧರ್ಮ, ಪಂಚಾಂಗಧರ್ಮವಲ್ಲ.
ಪೂಜಾದಿ ಧರ್ಮಾನ್ಯಾಸಗಳು ಪ್ರಕೃತಿಗೆ ಹಾನಿಕಾರಕವಾಗದೇ, ಪೂರಕವಾಗಿರಲಿ. ಧಾರ್ಮಿಕವಾಗಿರಲಿ. ಸಹೃದಯರಿಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
*******
ಪ್ಲವನಾಮ ಸಂವತ್ಸರ : ಉತ್ತರಾಯನ : ವಸಂತ ಋತು : ಚೈತ್ರಮಾಸ : ಶುಕ್ಲಪಕ್ಷ : ಮಂಗಳವಾರ.
*******
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ