- ಮೇಘದೂತ ಎಂಬ ಭಾವಗೀತೆ - ಅಕ್ಟೋಬರ್ 14, 2021
- ೨೦೨೦ –ಒಂದು ಪಕ್ಷಿನೋಟ - ಡಿಸಂಬರ್ 31, 2020
- ಹುಾವು ಅರಳುವವು ಸುಾಯ೯ನ ಕಡೆಗೆ ಕುರಿತು - ಸೆಪ್ಟೆಂಬರ್ 22, 2020
ಶ್ರೀ ತೇಜಸ್ವಿಯವರು ಹತ್ತಿರದವರು ಅನಿಸೋದು ಹಲವಾರು ವಿಷಯಗಳಿಗೆ, ಒಂದಂತೂ ನಮ್ಮೂರಿನವರು ಅನ್ನುವುದಂತೂ ನಿಜ. ಅವರ ಬರಹಗಳ ನೈಜತೆ ಎಷ್ಟರಮಟ್ಟಿಗೆ ಎಂದರೆ ಪಾತ್ರಗಳು ನಮ್ಮದೇ ಎನ್ನುವಷ್ಟರಮಟ್ಟಿಗೆ.
ನನಗೆ ತೇಜಸ್ವಿಯವರ ಪರಿಚಯವಾದದ್ದು ನಮ್ಮ ತಂದೆಯವರಿಂದ ಮೂಡಿಗೆರೆಯಲ್ಲಿ ದಯಾನಂದ ನಾಯಕರ ಅಂಗಡಿಯಲ್ಲಿ, ನಾನಾಗ ಚಿಕ್ಕವಳು ಅಂದರೆ 3ನೇ ತರಗತಿ. ಮತ್ತೊಮ್ಮೆ ಅವರನ್ನು ಹತ್ತಿರದಿಂದ ನೋಡುವ ಅವಕಾಶವೆಂದರೆ ಅವರು ನಮ್ಮ ಮನೆಗೆ ಬಂದಾಗ ಅದೂ ಒಂದು ವಿಶೇಷ ಸಂದರ್ಭ ಅಂದರೆ ತಪ್ಪಾಗಲಾರದು. ನಮ್ಮ ತಂದೆಯವರ ಹತ್ತಿರ ಇದ್ದ ಒಂದು ಕೋವಿ (ಗನ್) ನೋಡಲು ಬಂದಿದ್ದರು. ಆ ಗನ್ ಮೇಡ್ ಇನ್ ಇಂಗ್ಲೆಂಡ್ ಆಗಿದ್ದು ತುಂಬಾ ಚೆನ್ನಾಗಿತ್ತು. ಅವರಿಗೆ ಅಂತಹ ವಸ್ತುಗಳನ್ನು ನೋಡುವುದೆಂದರೆ ಬಹಳ ಇಷ್ಟ. ಹತ್ತಿರದಿಂದ ಅವರ ತೊಡೆಮೇಲೆ ಕುಳಿತದ್ದನ್ನ ನಾನು ಮರೆಯಲಾರೆ. ಆಗ ಅವರು ಕಥೆ ಕಾದಂಬರಿ ಬರೀತಾರೆ ಅಂತ ನಮ್ಮ ತಂದೆಯವರು ಹೇಳಿದಾಗ ನಾನು ಕೇಳಿದ್ದೆ ಹಾಗಂದರೆ ಏನು? ಅಂತ, ಅದಕ್ಕವರು ನಾವೇನನ್ನು ನೋಡುತ್ತೇವೋ ಅದು ಬರೆದರೆ ಅದೇ ಕಥೆಯಾಗುತ್ತೆ ಅಂದರು ಹಾಗಾದರೆ ನಾನೂ ಬರೀಬಹುದಾ ಅಂತ ಕೇಳಿದ್ದಕ್ಕೆ ಬರೀಬಹುದು, ಬರಿ ನೋಡೋಣ ಅಂದರು. ಚಿಕ್ಕವಳಾದ ನಾನು ಓಡಿಹೋಗಿ ಪೇಪರ್ ಪೆನ್ನು ತಂದು ನಮ್ಮ ಮನೆ ಕೆಲಸದವನು ದಿವಸಾ ರಾತ್ರಿ ಕುಡಿದು ಹಾಡುವ ರೀತಿ, ಮಾತಾಡುವ ರೀತಿಯನ್ನ ಬರೆದೆ. ಅವರ ಕೈಗೆ ಕೊಟ್ಟೆ ಅದನ್ನೋದಿ ಅವರು ನಗುತ್ತಾ ಅರೇ! “ನೀನು ಕತೆಗಾರ್ತಿ ಆಗೇಬಿಟ್ಟೆ!” ಅಂತ ಹೇಳಿ ಆ ಹಾಳೆ ಮಡಚಿ ಜೇಬಲ್ಲಿ ಇಟ್ಟುಕೊಂಡು ನನಗೆ ದಿನಾ ಹೀಗೆ ನೋಡಿದ್ದನ್ನ ಬರೀತಾ ಹೋಗು ಆಗ ನನ್ನ ತರಾನೇ ಆಗಬಹುದು ಅಂದರು ಅದು ಇನ್ನೂ ನೆನಪಿದೆ ನನಗೆ, ಆದರೆ ಆಗ ಅವರ ಮಾತನ್ನು ತಿಳಿದುಕೊಳ್ಳುವ ವಯಸ್ಸಲ್ಲ ಆದರೂ ನಾನು ಅದು-ಇದೂ ಗೀಚುತ್ತಿದ್ದೆ ಅವರ ಮಾತಿನಂತೆ.
ಮತ್ತೊಮ್ಮೆ ಅವರು ಮೂಡಿಗೆರೆಯಲ್ಲಿ ನಮ್ಮ ತಂದೆಗೆ ಸಿಕ್ಕಾಗ “ನಿಮ್ಮ ಮಗಳ ಬರಹಾನ ನಾನು ಕಾದಂಬರಿಗೆ ಹಾಕುತ್ತೇನೆ” ಎಂದರಂತೆ ಅದು ಯಾವುದರಲ್ಲಿ ಹಾಕಿದರೋ ಗೊತ್ತಿಲ್ಲ ನನ್ನ ತಂದೆ ಕೂಡ ಕೇಳಲಿಲ್ಲ ಅನ್ನಿಸತ್ತೆ ಅದು ಹಾಗೇ ಮರೆತುಹೋಯಿತು ಆದರೆ ಅದರ ನೆನಪು ಮಾತ್ರ ಇನ್ನೂ ಹಸಿರಾಗೇ ಇದೆ. ದೊಡ್ಡವಳಾದ ಮೇಲೆ ಅವರ ಬರಹಗಳನ್ನ ಓದುವ ಭಾಗ್ಯ ಬಂತು. ನಮ್ಮವರೇ ಆದ ಅವರ ಬಗ್ಗೆ ನನಗೆ ತಿಳಿದ ಎರಡು ಮಾತುಗಳನ್ನು ಹೇಳಿದರೆ ನನಗೂ ಸಮಾಧಾನ.
ಅವರ ಬರಹಗಳು ಎಷ್ಟು ನೈಜತೆ ಹೊಂದಿದ್ದವು ಎಂದರೆ ಎಲ್ಲೂ ಉತ್ಪ್ರೇಕ್ಷೆ ಅನಿಸದೆ ಸರಳ ರೀತಿಯಲ್ಲಿ ಸಾಗುತ್ತಿತ್ತು. ಅವರ ನೇರ ಸಹಜ ಮಾತು, ಬೈಗುಳ ಎಲ್ಲ ಅದರಲ್ಲಿ ಇರುತ್ತಿತ್ತು. “ಕಿರಗೂರಿನಲ್ಲಿ ಗಾಳಿಗೆ ಹಾರಿದ ಸೀರೆಯಿಂದ ಆದ ಪರಿಣಾಮವನ್ನು ಗಯ್ಯಾಳಿಗಳ ಬಾಯಲ್ಲಿ ಬೈಸಿರುವ ರೀತಿಯಂತೂ ನಮ್ಮ ಎದುರು ಮನೇಲೇ ಜಗಳ ಆಗುತ್ತಿದೆಯೇನೋ ಎನ್ನುವಂತಿದೆ. ಅದೇ “ಮಂದಣ್ಣ” ನಮ್ಮವನೇ ಅನಿಸುತ್ತಾನೆ ಅಲ್ಲದೇ “ಪ್ಯಾರ” ನಿಗೆ ಹೇಳುವ ಕುಹಕಗಳು ಎಲ್ಲರನ್ನೂ ಆತ್ಮೀಯವಾಗಿ ಸೆಳೆಯುತ್ತವೆ. ಅವರ “ಮಾಯಾಲೋಕ” ವಂತೂ ಹೊಸ ಸೃಷ್ಟಿಯಾಗಿ ನಿಂತು ಆ ಮಹಾಮಳೆಯ ನಂತರ ಏನಾಗಿರಬಹುದು? ಎಂಬ ಕಲ್ಪನೆ ಮೂಡಿಸುತ್ತಲೇ ಇರುತ್ತದೆ.
ಅದೇ ಕೃಷ್ಣೇಗೌಡರ ಆನೆಯ ಮಾವುತ ವೇಲಾಯುಧನ ಹೆಂಡತಿಯ ಮಾತುಗಳು ಆ ಗಜರಾಜನಿಗೆ ನೋವಾಯ್ತು ಎಂಬಂತೆ ಹೇಳುವಲ್ಲಿ ಯಶಸ್ವಿಯಾಗಿರುವ ಇವರು ಒಂದೇ ದಿನದಲ್ಲಿ ರಹಸ್ಯ ಬೇಧಿಸುವ ಜುಗಾರಿ ಕ್ರಾಸ್, ಕರ್ವಾಲುಗೆ ಹಾರುವ ಓತಿಕ್ಯಾತ ಇನ್ನೇನು ಸಿಕ್ಕಿತೇನೋ ಎಂದಾದಾಗ ತಪ್ಪಿಸಿಕೊಳ್ಳುವ ರೀತಿ ಆಗ ಉಂಟಾಗುವ ಭಾವ ನಮ್ಮನ್ನು ಕಥಾಭಾಗ ಮಾಡುವಲ್ಲಿ ಆಶ್ಚರ್ಯವಿಲ್ಲ. ಕಥೆಯಲ್ಲಿ ಸ್ವತಃ ಪಾತ್ರವಾಗುವ ಇವರು ವಿವರಿಸುತ್ತಾ ಹೋಗುವಾಗ ತರುವ ಆಪ್ತತೆ ಅಸಾಧಾರಣ. ಪರಿಸರದ ಕತೆ, ಏರೋಪ್ಲೇನ್, ಚಿಟ್ಟೆ ಮತ್ತಿತರ ಕತೆಗಳು ಇವೆಲ್ಲ ಅವರ ಬದುಕಿನ ಬಿಡಿ ಬರಹಗಳು.
ಒಂದು ಮೀನಿನಿಂದಾಗಿ ಒಬ್ಬ ಮಗನ್ನ ಕಳೆದುಕೊಳ್ಳುವ ಪರಿಯ ಕತೆಯಲ್ಲಡಗಿರುವ ಮರ್ಮ, ಕಲ್ಪನೆಯಲ್ಲೂ ವಾಸ್ತವತೆಯ ಸೊಗಡು. ಅವರ ಅಬಚೂರಿನ ಪೊಸ್ಟಾಫೀಸ್, ತಬರನ ಕತೆ ಇವುಗಳು ಹಳ್ಳಿಯಲ್ಲಿ ನಡೆಯುವ ಘಟನೆಗಳ ವರ್ಣನಾ ರೀತಿ ಇವೆಲ್ಲ ಅದ್ಭುತ. ತೇಜಸ್ವಿಯವರ ಬರಹಗಳಲ್ಲಿ ಅವರ ತಂದೆಯವರಾದ ಕುವೆಂಪುರವರ ಬರವಣಿಗೆಯ ಛಾಯೆ ಇನಿತೂ ಇರಲಿಲ್ಲ. ಇವರದೇ ಒಂದು ವಿಶಿಷ್ಟವಾದ ನೈಜ ಬರವಣಿಗೆ, ಇಲ್ಲಿ ಕಲ್ಪನೆಗಿಂತ ವಾಸ್ತವವೇ ಹೆಚ್ಚಾಗಿತ್ತು, ಓದುತ್ತಾ ಹೋದಂತೆಲ್ಲ ನಮ್ಮನ್ನೇ ಪಾತ್ರವನ್ನಾಗಿ ಮಾಡುವ ನೈಜತೆ ನಮಗೆ ಸಿಗುತ್ತದೆ.
ಇವರ ಬರಹಗಳನ್ನು ನಾವು ಬೇರೆಯವರೊಂದಿಗೆ ಹೋಲಿಸಲು ಸಾಧ್ಯವೇ ಇಲ್ಲ. ಬರವಣಿಗೆಯಲ್ಲಿ ಪರಿಸರದ ಪ್ರಭಾವ, ಅದರೊಳಗಿರುವ ಸಾಮಾಜಿಕ ಕಳಕಳಿ ನಮ್ಮನ್ನು ಸೆಳೆಯುತ್ತಾ, ಹಾಗೆಯೇ ರಾಜಕೀಯ ಹಿತಾಸಕ್ತಿಗಳನ್ನು ಎಳೆದು ಜರಿಯುತ್ತಿರುವುದೂ ಉಂಟು. ಅವರು ಎಲ್ಲರಿಗೂ ಹತ್ತಿರವಾಗುವುದು ಅವರ ನೈಜತೆಯಿಂದ ಎಂದರೆ ತಪ್ಪಾಗಲಾರದು. ಅವರ ಬರಹಗಳು ನಮ್ಮ ಪಕ್ಕದಲ್ಲೇ ಕುಳಿತು ಯಾರೋ ಮಾತಾಡುತ್ತಿದ್ದಾರೇನೋ ಎಂಬಂತೆ ನಮ್ಮನ್ನು ಸೆಳೆಯುತ್ತವೆ. ಇವರು ಬರೀ ಬರಹಗಾರರಲ್ಲದೆ ಸದಾ ಫೋಟೋಗ್ರಫಿಯಲ್ಲಿ ಏನಾದರೂ ಹೊಸದನ್ನು ಹುಡುಕುತ್ತಾ ಸಾಗುತ್ತಿದ್ದರು. ಇವರದು ನನಗೆ ನೆನಪಿರುವಂತೆ ಒಂದು ಬಜಾಜ್ ಸ್ಕೂಟರ್ ಅದರಲ್ಲಿ ಹಿಂದಿನ ಸೀಟು ಇರುತ್ತಿರಲಿಲ್ಲ. ಕಾರಣ ಕೇಳಿದರೆ ಅವರು ಹೇಳುತ್ತಿದ್ದ ಮಾತುಗಳು “ಸೀಟಿಲ್ಲದಿದ್ದರೆ ಯಾರೂ ಡ್ರಾಪ್ ಕೇಳುವುದಿಲ್ಲ” ಅಂತ! ಎಂತಹ ನೇರ ನುಡಿ ನೋಡಿ ಇಂತಹ ಅಪರೂಪ ಬರಹಗಳ ತೇಜಸ್ವಿಯವರು ಇನ್ನೂ ಬೇಕು ಎನ್ನುವಾಗಲೇ ಹೊರಟಿದ್ದು ವಿಷಾದಕರ. ಆದರೂ ಅವರ ನೆನಪುಗಳು ಅವರ ಬರಹ ಅದರಲ್ಲಿರುವ ಭಾವನೆಗಳು ನಮ್ಮ ಮನಸ್ಸಿನಾಳದಲ್ಲಿ ಬೇರೂರುವುದಂತೂ ನಿಜ! ಅಂತಹ ನೈಜ ಸಾಹಿತಿಗೆ ನಾವೆಷ್ಟು ನಮನಗಳನ್ನು ಸಲ್ಲಿಸಿದರೂ ಕಡಿಮೆಯೆ, ಎಲ್ಲೋ ದೂರದಿಂದ ನಮ್ಮನ್ನವರು ನೋಡುತ್ತಿರುವರೋ ಎಂಬ ಭಾವದೊಂದಿಗೆ ವಿರಮಿಸುವೆ!
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್