ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೇಘದೂತ ಎಂಬ ಭಾವಗೀತೆ

ಡಾ.ಸುಧಾ ಜೋಷಿ
ಇತ್ತೀಚಿನ ಬರಹಗಳು: ಡಾ.ಸುಧಾ ಜೋಷಿ (ಎಲ್ಲವನ್ನು ಓದಿ)

ಸಂಸ್ಕೃತ ಸಾಹಿತ್ಯಲೋಕದಲ್ಲಿ ಮಹಾಕವಿ ಕಾಳಿದಾಸನ ಕಾವ್ಯಪ್ರತಿಭೆ ಅತ್ಯಂತ ಶ್ರೇಷ್ಠಮಟ್ಟದ್ದಾಗಿದ್ದು ಇವನ ಶಬ್ದಸಾರವನ್ನು ಅದರ ಶ್ರೇಷ್ಠತೆಯನ್ನು ಮೀರಿಸಬಲ್ಲ ಮತ್ತೊಬ್ಬ ಕವಿ ಇಲ್ಲವೆಂದು ಸಾಹಿತ್ಯಲೋಕದಲ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ. ಇಂತಹ ಕಾಳಿದಾಸನ ಹುಟ್ಟಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ವಿಷಾದನೀಯ. ಅವನ ಅನೇಕ ಕಾವ್ಯಗಳನ್ನು ಆಧರಿಸಿ ಅನೇಕ ಊಹಾಪೋಹಗಳಿವೆ, ಆದರೆ ಪ್ರಪಂಚದ್ಯಾದಂತ ಕಾಳಿದಾಸನ ಕೀರ್ತಿ ಎಲ್ಲಡೆಯೂ ಹಬ್ಬಿದೆ. ಇಂತಹ ಕಾಳಿದಾಸನ ಜನನವು ಆಷಾಢ ಮಾಸದಲ್ಲಿ ಆಯಿತೆಂದು ಕೆಲವರು ಅಭಿಪ್ರಾಯ ಪಡುತ್ತಾರೆ, ಅಂತೆಯೇ ಈ ಆಷಾಢ ಮಾಸದಲ್ಲಿ ಅವನ ಖಂಡಕಾವ್ಯವಾದ ಮೇಘದೂತವನ್ನು ನನಗೆ ತಿಳಿದಂತೆ ವಿಮರ್ಶೆಮಾಡಿ ಆ ಕವಿಪುಂಗವನಿಗೆ ಒಂದು ನಮನ ಸಲ್ಲಿಸುವ ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.
“ಕವಿಕುಲಗುರು: ಕಾಳಿದಾಸೋ ವಿಲಾಸಃ” ಎಂದು ಪ್ರಸಿದ್ಧಿ ಪಡೆದ ಮಹಾಕವಿ ಕಾಳಿದಾಸನು ಭಾರತ ದೇಶದಲ್ಲಿ ಅದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ.
“ಅದ್ಯಾಪಿತತುಲ್ಯ ಕವೇರಭಾವಾತ್ ಅನಾಮಿಕಾ ಸಾರ್ಥಕ ನಾಮಧೇಯಾ” ಎಂಬ ವಾಕ್ಯವೇ ಇದಕ್ಕೆ ಪ್ರಮಾಣವಾಗಿದೆ. ಇಂತಹ ವರಕವಿಯು ಮೇಘದೂತ ಎಂಬ ಖಂಡಕಾವ್ಯವನ್ನು ರಚಿಸಿದ್ದಾನೆ.
ಮೇಘದೂತವು ಭಾರತೀಯ ಸಾಹಿತ್ಯದಲ್ಲಿ ಸರ್ವಪ್ರಥಮ ಮತ್ತು ಸರ್ವಶ್ರೇಷ್ಠ ಭಾವಗೀತೆ (ಖಂಡಕಾವ್ಯ) ಎಂದು ಕವಿಗಳು ಮತ್ತು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಇದೊಂದು ಸಂದೇಶ ಕಾವ್ಯವಾಗಿದ್ದು ಸಾಹಿತ್ಯದ ಅರುಣೋದಯಕ್ಕೆ ಹೊಸಹಾದಿಯನ್ನು ಹಾಕಿಕೊಟ್ಟಂತಹ ಶ್ರೇಯಸ್ಸು ಕಾಳಿದಾಸನಿಗೆ ಸಲ್ಲುತ್ತದೆ. ಇದೊಂದು ವಿಪ್ರಲಂಭ ಶೃಂಗಾರಕ್ಕೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಹಲವಾರು ಭಾವನೆಗಳು ಹಾಗೂ ವರ್ಣನೆಗಳ ಮಹಾಪೂರವೇ ಅಡಗಿದೆ. ಪೂರ್ವಮೇಘ ಹಾಗೂ ಉತ್ತರಮೇಘ ಎಂಬ ಎರಡು ಭಾಗಗಳಿಂದ ಕೂಡಿದ್ದು ಪೂರ್ವಮೇಘದಲ್ಲಿ ನಾಗಪುರದ ರಾಮಗಿರಿಯಿಂದ ಆರಂಭಿಸಿ ಕೈಲಾಸಪರ್ವತದ ಇಳುಕಿನಲ್ಲಿರುವ ಅಲಕಾನಗರಿಯವರೆಗೂ ಇರುವ ಪರ್ವತಗಳೂ, ನದಿಗಳು ಹಾಗೂ ಅಲ್ಲಿನ ಜನರ ವರ್ಣನೆ ಮಾಡಿರುವುದು ಅತ್ಯದ್ಭುತ ಇದರಿಂದಲೇ ಕಾಳಿದಾಸನಿಗೆ “National Poet” ಎಂಬ ಪ್ರಶಂಸೆ ಸಾರ್ಥಕವೆನಿಸುತ್ತದೆ. ಒಟ್ಟು 120 ಪದ್ಯಗಳಿವೆ ಒಂದೊಂದು ಒಂದು ಮುಕ್ತಾಫಲ.
ಕಥಾ ಪರಿಚಯ:- ಯಕ್ಷ ಕುಭೇರನ ಸೇವಕ ಒಮ್ಮೆ ತನ್ನ ಕೆಲಸದಲ್ಲಿ ಮಾಡಿದ ತಪ್ಪಿನಿಂದ ಕುಬೇರನಿಂದ ಶಾಪಕ್ಕೆ ಒಳಗಾಗುತ್ತಾನೆ. “ಒಂದು ವರುಷ ಕಾಲ ನೀನು ಕಾಂತೆಯನ್ನಗಲಿರು” ಎಂಬುದೇ ಆ ಶಾಪ. ಆಗ ತಾನೇ ಹೊಸದಾಗಿ ಮದುವೆಯಾಗಿರುವ ಯಕ್ಷನಿಗೆ ಇದು ಸಹಿಸ¯ಸಾಧ್ಯವಾದುದು. ಈ ರೀತಿ ಶಾಪಕ್ಕೊಳಗಾದ ಯಕ್ಷನು ರಾಮಗಿರಿಯ ಪುಣ್ಯಾಶ್ರಮಗಳಲ್ಲಿ ವಾಸಮಾಡುತ್ತಿದ್ದಾನೆ, ಎಂಟು ತಿಂಗಳು ಕಳೆದಿದ್ದು ಇನ್ನು 4 ತಿಂಗಳುಗಳು ಉಳಿದಿವೆ. ಅಷ್ಟರಲ್ಲಿ ಆಷಾಢಮಾಸ ಬಂದಿದೆ, ಒಳಗೇ ವಿರಹ ದುಃಖವನ್ನು ಅದುಮಿಕೊಂಡಿದ್ದ ಯಕ್ಷನಿಗೆ ಆಷಾಡದ ಮೊದಲ ಮೋಡವನ್ನು ನೋಡಿದೊಡನೆ ಮನಸ್ಸು ಉದ್ವಿಗ್ನಗೊಳ್ಳುತ್ತದೆ. ಕೊರಳನ್ನಪ್ಪಿಕೊಳ್ಳಲು ಕಾತರಿಸುತ್ತಿರುವ ಕಾಂತೆ ಹೇಗಿದ್ದಾಳೋ? ಅವಳ ಪಾಡೇನೋ? ಎಂದು ಚಿಂತಾಕ್ರಾಂತನಾಗಿದ್ದಾನೆ, ವಿರಹ ಪೀಡಿತನಾಗಿ ಕೈಯಿನ ಕಂಕಣವು ಜಾರಿಹೋದ ರೀತಿಯಲ್ಲಿ ಕೃಶನಾಗಿ ಸಮಾಧಾನವಿಲ್ಲದೆ ತಳಮಳಗೊಂಡವನಾಗಿ ತನ್ನ ಎರಡನೆಯ ಪ್ರಾಣದಂತಿರುವ (ಜೀವಿತಂ ಮೇ ದ್ವಿತೀಯಂ) ಪ್ರೇಯಸಿಯನ್ನು ಹೊಂದಲು ಉತ್ಕಂಟಿತನಾಗಿದ್ದಾನೆ. ಅಂತಹ ಸಂದರ್ಭದಲ್ಲಿ ಆಷಾಢಮಾಸದ ಮೋಡವನ್ನು ಕಂಡ ಕೂಡಲೇ ಅವನ ಮನಸ್ಸಿಗೆ ಅದು ಉತ್ತರ ದಿಕ್ಕಿನಲ್ಲಿ ಸಂಚರಿಸುವ ವ್ಯಕ್ತಿಯಂತೆ ತೋರುತ್ತದೆ. ಆಗ ಮೋಡದ ಮೂಲಕ ತನ್ನ ಪ್ರೇಯಸಿಗೆ ಸಂದೇಶವೊಂದನ್ನು ಕಳುಹಿಸುತ್ತಾನೆ. ಈ ಸಂದೇಶವೇ ಮೇಘಸಂದೇಶವೆಂಬ ಸುಂದರ ಭಾವಗೀತೆ, ಇದು ಕಥಾ ಸಾರಾಂಶವಾಗಿದೆ.
ಮೋಡವನ್ನು ಕಂಡ ಯಕ್ಷನಿಗೆ ಅದು ಜಡವೆಂಬ ಭಾವನೆ ಬರಲೇ ಇಲ್ಲ, ಯಕ್ಷನ ದೃಷ್ಟಿಯಲ್ಲಿ ಅದೊಂದು ಚೇತನ, ಅದು ಅವನ ಸಂದೇಶವನ್ನು ಮುಟ್ಟಿಸುವ ಕಾರುಣ್ಯ ಮಿತ್ರನಂತೆ ತೋರುತ್ತದೆ. ತತ್‍ಕ್ಷಣವೇ ಸಮೀಪದಲ್ಲಿ ಅರಳಿದ ಮಲ್ಲಿಗೆ ಹೂವನ್ನು ತೆಗೆದುಕೊಂಡು ಎದ್ದುನಿಂತು ಮೋಡವನ್ನು ಸ್ವಾಗತಿಸಿ ಪ್ರೀತಿಯಿಂದ ಮಾತನಾಡತೊಡಗುತ್ತಾನೆ. ಎಲೈ! ಮೇಘರಾಜನೇ, ಬೇಗೆಯಿಂದ ಬೇಯುತ್ತಿರುವವನಿಗೆ ನೀನೇ ರಕ್ಷಕ (ಸಂತಪ್ತಾನಾಂ ತ್ವಮಸಿ ಶರಣಂ ತತ್ಪಯೋದ ಪ್ರಿಯಾಯಾಃ ಸಂದೇಶಂ ಮೇ ಹರ ಧನಪತಿಕ್ರೋಧವಿಶ್ಲೇಷಿತಸ್ಯ|) ಆದ್ದರಿಂದ ಕುಭೇರನ ಶಾಪಕ್ಕೊಳಗಾಗಿ ನಲ್ಲೆಯನ್ನಗಲಿರುವ ನನ್ನ ಸಂದೆಶವನ್ನು ಮುಟ್ಟಿಸಬೇಕೆಂದು ಪ್ರಾರ್ಥಿಸುತ್ತಾನೆ. ಆ ಮೋಡವನ್ನು ಹುರಿದುಂಬಿಸಿ ನೀನು ಯಕ್ಷರುಗಳ ವಸತಿಯಾದ ಅಲಕಾನಗರಿಗೆ ಹೋಗಬೇಕು, ಆ ನಗರದ ಹೊರಗೆ ಶಿವನು ನೆಲೆಸಿರುವುದರಿಂದ ಅವನ ಮುಡಿಯಲ್ಲಿರುವ ಚಂದ್ರನ ಬೆಳದಿಂಗಳು ಆ ಪಟ್ಟಣದ ಮಾಳಿಗೆ ಮನೆಗಳನ್ನು ಬೆಳಗುತ್ತಿರುತ್ತವೆ. ಅಂತಹ ನಗರದಲ್ಲಿ ನನ್ನ ಪ್ರೇಯಸಿಯು ವಾಸವಾಗಿದ್ದಾಳೆ ಅವಳಿಗೆ ನನ್ನ ಸಂದೇಶವನ್ನು ಮುಟ್ಟಿಸು ಎಂದು ಅಲಕಾನಗರಿಯ ಮಾರ್ಗವನ್ನು ಹೇಳುತ್ತಾನೆ. ನಿಶ್ಚಯವಾಗಿಯೂ ನನ್ನ ಹೆಂಡತಿಯು ನನ್ನನ್ನು ಹೊಂದಬೇಕೆಂಬ ಇಚ್ಛೆಯಿಂದ ಜೀವಂತವಾಗಿಯೇ ಇರುತ್ತಾಳೆ. “ಹೂವಿನಂತೆ ಮೃದುವಾದ ಅವಳ ಹೃದಯ ಆಸೆಯೆಂಬ ಬಂಧನದಿಂದ ಕಟ್ಟಲ್ಪಟ್ಟಿರುತ್ತದೆ” ““Hope to hope is more than enjoying hope itself”” ಎಂದು ಶೇಕ್ಸ್‍ಫೀಯರ್ ಹೇಳಿರುವುದು ಇಲ್ಲಿ ಸ್ಮರಣಾರ್ಹ. ಮಾರ್ಗ ಮಧ್ಯದಲ್ಲಿ ನೀನು ದಣಿದಾಗ ಪರ್ವತದ ಶಿಖರಗಳಲ್ಲಿ ವಿಶ್ರಾಂತಿ ಪಡೆದು, ಕ್ಷೀಣನಾದಾಗ (ಹಸಿವೆ) ಮಾರ್ಗದಲ್ಲಿ ಬರುವ ನದಿಗಳ ನೀರನ್ನು ಕುಡಿಯುತ್ತಾ ಸಾಗು, ಹಿತವಾಗಿ ಹಿಂದಿನಿಂದ ಬೀಸುವ ಗಾಳಿ ಮೆಲ್ಲ-ಮೆಲ್ಲನೆ ನಿನ್ನನ್ನು ಮುಂದೊಯ್ಯುತ್ತದೆ, ಕಾಮೋನ್ಮತ್ತ ಚಾತಕ ಪಕ್ಷಿಯು ನಿನ್ನ ನೋಡಿ ಇಂಪಾಗಿ ಹಾಡುತ್ತಾ ಜೊತೆಗೂಡುತ್ತವೆ, ಸಾಲು ಸಾಲಾಗಿ ಹಾರುವ ಬೆಳ್ಳಕ್ಕಿಗಳು ನಿನ್ನನ್ನು ಸತ್ಕರಿಸುತ್ತವೆ. ನಿನ್ನನ್ನು ನಂಬಿದ ಕೃಷಿಕರೆಲ್ಲ (ಮಳೆಯನ್ನೇ ನಂಬಿದ ರೈತರಿಗೆ ಆಷಾಢಮಾಸದ ಮೋಡ ಸಂತಸ ತರುತ್ತದೆ) ನಿನ್ನನ್ನು ಸ್ವಾಗತಿಸುತ್ತಾರೆ. ಆಮ್ರಕೂಟ ಪರ್ವತವು ನಿನ್ನನ್ನು ತನ್ನ ಶಿರದಲ್ಲಿ ವಹಿಸಿ ಸ್ವಾಗತ ಮಾಡುತ್ತದೆ. ಮಾರ್ಗ ಮಧ್ಯದಲ್ಲಿ ಬರುವ ನದಿಗಳು ನಿನ್ನ ಪ್ರೇಯಸಿಯರು ನೀನು ಕೆಳಗೆ ಇಳಿದು ಆ ನೀರನ್ನು ಆಸ್ವಾದಿಸಿ ಪ್ರೇಯಸಿಯರನ್ನು ಸಂತುಷ್ಟಗೊಳಿಸು. ಉಜ್ಜಯನಿ ಪಟ್ಟಣದ ಮಾಳಿಗೆಯ ಮೇಲೆ ಸಂಚರಿಸುವ ಸುಂದರ ಸ್ತ್ರೀಯರ ಮಿಂಚಿನಂತೆ ಹೊಳೆಯುವ ಕಣ್ಣುಗಳಿಂದ ನೀನು ಸಂತುಷ್ಟನಾಗದಿದ್ದರೆ ನಿನ್ನ ಕಣ್ಣುಗಳಿಂದ ನೀನೇ ವಂಚಿತನಾದಂತೆ ಎಂದು ಹೇಳಿದ್ದಾನೆ.
ಉಜ್ಜಯನೀ ನಗರದ ವೈಭವವನ್ನು, ದೇವತೆಗಳಂತೆ ಹೊಳೆಯುವ ಇಲ್ಲಿನ ವನಿತೆಯರು, ನಿತ್ಯಯೌವನದಿಂದ ಕೂಡಿದ ಪುರುಷರು ಎಲ್ಲರಿಂದ ಕೂಡಿದ ಉಜ್ಜಯಿನಿಯು ಸ್ವರ್ಗದ ಬಾಗಿಲೇ ಸರಿ ಎಂದಿದ್ದಾನೆ. ಮಹಾಕಾಲನ ಪ್ರದೋಷ ಪೂಜೆಯನ್ನು ತಪ್ಪದೇ ನೋಡು ಎನ್ನುತ್ತಾ, ಅಲ್ಲಿನ ವೇಶ್ಯಾ ಸ್ತ್ರೀಯರು ಕಾರ್ಗತ್ತಲಿನಲ್ಲಿ ತಮ್ಮ ತಮ್ಮ ಇನಿಯರ ಮನೆಗೆ ಹೋಗುತ್ತಿರುತ್ತಾರೆ ಅವರಿಗೆ ಸಣ್ಣ ಪ್ರಕಾಶದಿಂದ ಕೂಡಿದ ಹೊನ್ನಗೆರೆಯಂತೆ ಕಾಣುವ ನಿನ್ನ ಮಿಂಚೆಂಬ ಬೆಳಕನ್ನು ತೋರಿಸಿ ಸಹಾಯಮಾಡು. ಒಂದು ವೇಳೆ ನೀನು ಹೆಚ್ಚು ಬೆಳಗಿದೆ ಎಂದರೆ ನಿನ್ನ ಮಿಂಚೆಂಬ ಪ್ರೇಯಸಿಗೆ ಶ್ರಮವಾಗಬಹುದು ಆದ್ದರಿಂದ ಅವಳೊಂದಿಗೆ ಆ ರಾತ್ರಿಯನ್ನು ಉಜ್ಜಯಿನಿಯ ಉಪ್ಪರಿಗೆಯ ಮೇಲೆ ಕಳೆದು ಮರುದಿನ ಪ್ರಯಾಣ ಬೆಳೆಸು.

ಮಂದಾಯಂತೇ ನ ಖಲು ಸುಹೃದಾಮಭ್ಯುಪೇತಾರ್ಥಕೃತ್ಯಾಃ|” (ಗೆಳೆಯನ ಕಾರ್ಯದ ಹೊಣೆ ಹೊತ್ತವರು ಎಂದೂ ನಿಧಾನಿಸುವುದಿಲ್ಲ) ಎಂದು ಜವಾಬ್ದಾರಿಯ ಅರಿವನ್ನು ಮೂಡಿಸುತ್ತಾನೆ.
ಮಾರ್ಗದಲ್ಲಿ ಹಿಮವತ್ಪರ್ವದಿಂದ ಕೆಳಗಿಳಿದು ಸಗರ ಪುತ್ರರಿಗೆಲ್ಲ ಸ್ವರ್ಗವನ್ನೇರಲು ಪಾವಟಿಕೆಗಳ ಸಾಲಾದವಳು ಹಾಗೂ ತೆರೆಗಳೆಂಬ ಕೈಯಿಂದ ಚಂದ್ರನನ್ನು ಹಿಡಿದು ಶಿವನ ತಲೆಯಮೇಲೆ ನೆಗೆದು, ಗೌರಿಯ ಮೋರೆಯ ಮೇಲೆ ಹುಬ್ಬುಗಂಟಿಕ್ಕುವಂತೆ ಮಾಡಿದ ‘ಜಾಹ್ನವಿ’ಯನ್ನು ಕಂಡು ಆ ಪವಿತ್ರ ಗಂಗೆಯ ನೀರನ್ನು ಸ್ವೀಕರಿಸು, ಅಲ್ಲಿಂದ ಮುಂದೆ ಸಾಗಿದಾಗ ಅಲ್ಲಿ ಬಿದಿರುಗಳು ಗಾಳಿಯಿಂದ ತುಂಬಿ ಇಂಪಾಗಿ ಧ್ವನಿಮಾಡುತ್ತಿರುತ್ತವೆ, ಸ್ತ್ರೀಯರು ಇಂಪಾದ ಕಂಠದಿಂದ ಶಿವನ “ತ್ರಿಪುರ ವಿಜಯ”ದ ಹಾಡನ್ನು ಹಾಡುತ್ತಿರುತ್ತಾರೆ. ಆಗ ಅಲ್ಲಿ ನಿನ್ನ ಗುಡುಗುಗಳು ಮೃದಂಗದಂತೆ ಜೊತೆಗೂಡಿದರೆ ಪಶುಪತಿಯ ಸಂಗೀತ ಸೇವೆ ಮಾಡಿದ ಪುಣ್ಯವು ನಿನಗೆ ಲಭಿಸುತ್ತದೆ. ಅಲ್ಲಿಂದ ಮುಂದೆ ಮರಕತ ಶಿಲೆಗಳಿಂದ ನಿರ್ಮಿತವಾದ ಮೆಟ್ಟಿಲುಗಳು, ಹೊಳೆಯುವ ನೀಲಮಣಿಗಳಿಂದ ತುಂಬಿದ ಕ್ರೀಡಾಪರ್ವತ ಬಂಗಾರದ ಹೂಗಳನ್ನು ಬಿಟ್ಟಿರುವ ಗಿಡಗಳು, ರತ್ನ ಖಚಿತವಾದ ದೀಪಗಳು, ಎಲ್ಲಾ ಋತುಗಳಲ್ಲೂ ಅರಳುವ ಪುಷ್ಪಗಳು ನಳನಳಿಸುತ್ತಿರುತ್ತವೆ. ಗಗನ ಚುಂಬಿಯಾದ ಏಳು ಅಂತಸ್ತಿನಿಂದ ಕೂಡಿದ ಮಾಳಿಗೆ ಮನೆಗಳು ಮನೆಯ ಕಿಟಕಿಯ ಸಮೀಪದಲ್ಲಿ ಜೋಲಾಡುವ ಚಂದ್ರಕಾಂತ ಶಿಲೆಗಳು – ಇದೇ ನನ್ನ ಅಲಕಾನಗರಿ ಎನ್ನುತ್ತಾನೆ ಯಕ್ಷ. ಇವೆಲ್ಲ ಎಲ್ಲೂ ಕಾಣಸಿಗದ ಕಲ್ಪನಾರಾಶಿ “ಯಥಾಸ್ಮೇ ರೋಚತೇ ವಿಶ್ವಂ ತಥೈವ ಪರಿವರ್ತತೇ” ಎಂಬ ಮಾತು ಸತ್ಯ.
ಇಂತಹ ಅಲಕಾನಗರಿಯಲ್ಲಿ ನನ್ನ ಪ್ರೇಯಸಿಯು ಚಕ್ರವಾಕ ಪಕ್ಷಿಯಂತೆ ವಿರಹಿತಳಾಗಿ, ಶಿಶಿರ ಋತುವಿನಲ್ಲಿ ಬಾಡಿದ ಕಮಲದ ಬಳ್ಳಿಯಂತೆ ಆ ರೀತಿ ಬಾಡಿದ ಮುಖವುಳ್ಳವಳಾಗಿ ಅಳುತ್ತಾ, ನಿಟ್ಟುಸಿರು ಬಿಡುತ್ತಾ, ಕೆನ್ನೆಯ ಮೇಲೆ ಕೈಯಿಟ್ಟುಕೊಂಡು ನನ್ನ ಚಿತ್ರವನ್ನು ಕಲ್ಪಿಸಿಕೊಂಡು, ಮಲಿನವಸ್ತ್ರಧಾರಿಯಾಗಿ ತೊಡೆಯಮೇಲೆ ವೀಣೆಯನ್ನಿಟ್ಟುಕೊಂಡು ಹಾಡಲು ಯತ್ನಿಸಿ ಸೋತು ಆ ಮೂರ್ಛೆಯನ್ನೇ (tune) ಮರೆತಂತವಳಾಗಿರುತ್ತಾಳೆ. ಉಳಿದಿರುವ ವಿರಹದ ದಿನಗಳನ್ನು ಎಣಿಸುತ್ತಾ ನನ್ನ ಸಮಾಗಮವನ್ನು ಧ್ಯಾನ ಮಾಡುತ್ತಾ ಕಾಲ ಸವೆಸುತ್ತಿರುತ್ತಾಳೆ.

ಹೇ ಜೀಮೂತವೇ! ನೀನು ಅವಳು ಮಲಗಿದ್ದರೆ ಗುಡುಗಿಸದೆ ಸ್ವಲ್ಪ ಮೌನವಾಗಿರು ಏಕೆಂದರೆ ಸ್ವಪ್ನದಲ್ಲಿ ಹೇಗೋ ನನ್ನನ್ನು ಹೊಂದಿದ್ದರೆ ತನ್ನ ಭುಜಲತೆಗಳಿಂದ ಉಂಟಾದ ಗಾಢಪೋಗೂಡವಾದ ನನ್ನ ಕೊರಳಿಗೆ ಅವಳು ಬಿಗಿದ ನಳಿದೋಳಪ್ಪುಗೆಯ ಗಂಟು ಬಿಚ್ಚಿ ಹೋಗುವುದು ಬೇಡ. ನಿನ್ನ ತುಂತುರು ಹನಿಗಳಿಂದ ತಂಪಾಗಿರುವ ಗಾಳಿಯಿಂದ ಅವಳನ್ನೆಬ್ಬಿಸಿ ನೀನು ನನ್ನ ಸಂದೇಶದ ಮಾತುಗಳನ್ನು ಹೇಳಲಾರಂಭಿಸು. “ಮುತ್ತೈದೆಯೇ, (ಗಂಡನು ಬದುಕಿದ್ದಾನೆಂದು ಮೊದಲು ಹೇಳುವುದಕ್ಕಾಗಿ) ನಿನ್ನ ಪತಿಯ ಮಿತ್ರನಾದ ಮೇಘನು ಅವನ ಸಂದೇಶವನ್ನು ತಂದಿದ್ದೇನೆ” ಎಂದು ಹೇಳು ಆಗ ಹನುಮಂತನನ್ನು ಕಂಡು ಸೀತಾದೇವಿಯು ಹೇಗೆ ಮಾಡಿದಳೋ ಹಾಗೆ ಅರಳಿದ ಕಣ್ಣುಗಳಿಂದ ನಿನ್ನನ್ನು ಗೌರವದಿಂದ ನೋಡುತ್ತಾಳೆ. “ಹೇ ಮಂಗಳಕರಳೇ! ನೀನು ಹೆದರದಿರು ದುಃಖವು ನಿರಂತರವಲ್ಲ ಚಕ್ರದಲ್ಲಿರುವ ಕಡ್ಡಿಗಳಂತೆ ಮೇಲೆ-ಕೆಳಗೆ ತಿರುಗುತ್ತಿರುತ್ತದೆ ಹಾಗೆ ಇದೂ ಸಹ “ಏತಿ ಜೀವಂತಮಾನಂದಃ ನರಂ ವರ್ಷಶತಾದಪಿ” (ನೂರು ವರ್ಷವಾದರೂ ಆನಂದ ಎಂಬುದು ಮನುಷ್ಯನಿಗೆ ಬಂದೇ ಬರುತ್ತದೆ) ಶಾಪದ ಕೊನೆಯು ಚಾತುರ್ಮಾಸದ ಕೊನೆಯಲ್ಲಿ ಮಹಾವಿಷ್ಣವು ಶೇಷಶಯನದಿಂದ ಏಳುವಾಗ ಕೊನೆ ಆಗುತ್ತದೆ. ಹೇಗಾದರೂ ಇನ್ನು 4 ತಿಂಗಳು ಕಳೆ, ನನ್ನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳಬೇಡ ತಮಗೆ ಇಷ್ಟವಾದ ವಸ್ತುಗಳಲ್ಲಿ ಇಟ್ಟಿರುವ ಪ್ರೀತಿಯು ದಿನೇ ದಿನೇ ಪ್ರೇಮರಾಶಿಯಾಗಿ ಬೆಳೆಯುತ್ತದೆ (ಇಷ್ಟೇ ವಸ್ತುನ್ಯುಪಚಿತರಸಾಃ ಪ್ರೇಮರಾಶೀಭವಂತೀ) ಹೇ ಮೋಡವೇ! ಒಳ್ಳೆಯ ಸಖನೇ ಬಂಧುವಿಗೆ ಮಾಡಿದ ಉಪಕಾರವನ್ನು ಮಾಡಿದಂತಾಯಿತು. ನನ್ನಲ್ಲಿ ದಯಾಬುದ್ಧಿಯನ್ನಿಟ್ಟು ಈ ಕೆಲಸ ಮಾಡಿಬಿಡು ಆಮೇಲೆ ನಿನ್ನ ಮಳೆಯ ವೈಭವವನ್ನು ಮೆರೆಯುತ್ತಾ ಬೇಕು-ಬೇಕಾದ ಕಡೆಗೆ ಸಂಚರಿಸುವೆಯಂತೆ.
ನನ್ನಂತೆ, ನಿನಗೆಂದೂ ನಿನ್ನ ಇನಿಯಳಾದ ಮಿಂಚಿನಿಂದ ವಿರಹ ಬಾರದಿರಲಿ” ಎನ್ನುತ್ತಾನೆ.
ಮೋಡವು ತನ್ನ ಮಿಂಚಿನಿಂದ ಯಕ್ಷಣಿಗೆ ಸಂತೋವನ್ನುಂಟುಮಾಡಿದ್ದು ಅಷ್ಟರಲ್ಲಿ ಶಾಪವಿಮೋಚನೆಯಾಗಿ ಅವರಿಬ್ಬರ ಸಮಾಗಮವಾಗಿ ಕೃತಿಯು ಸುಖಾಂತವನ್ನು ಹೊಂದಿದ್ದರೂ ಸಹ ಪ್ರತಿಯೊಬ್ಬ ಓದುಗರೂ ಸಹ ಮೇಘಸಂದೇಶ ಓದಿದಾಗ ಉಂಟಾದ ವಿರಹತಾಪವು ಅವರ ಹೃದಯದಲ್ಲಿ ಯಾವಾಗಲೂ ಇರುತ್ತದೆ. ಯಕ್ಷನ ವಿರಹ ಅವಸ್ಥೆಯನ್ನು ಓದಿದ ಸಹೃದಯರಿಗೆ ತಾನು ಯಕ್ಷನೋ ಎಂಬಂತೆ ಭಾವಿಸಿ ತನ್ಮಯನಾಗಿ ಎರಡು ಅಶ್ರುಬಿಂದು ಸುರಿದರೆ ಆಶ್ಚರ್ಯವೇನಿಲ್ಲ ಉತ್ತರಮೇಘವನ್ನು ಓದುವಾಗ ಈ ಭಾವನೆಗಳು ಸ್ಪಷ್ಟವಾಗುವುದು. ತನ್ನ ವಿರಹತಾಪವನ್ನು ಮಾತ್ರ ಹೇಳುತ್ತಿಲ್ಲ ಬದಲಿಗೆ ತನ್ನ ಪ್ರೇಯಸಿಯ ವಿರಹತಾಪ ಅವಸ್ಥೆಯು ಹೇಗಿರಬಹುದೆಂದು ಊಹಿಸಿ ಅವಳ ಬಗೆಗಿನ ಕನಿಕರವನ್ನು ತೋರಿಸುವ ಸಂದರ್ಭಗಳು ಕರುಣಾಜನಿಕವಾಗಿದ್ದು, ಈ ಕೃತಿಯಲ್ಲಿನ ಕಾರುಣ್ಯ ನಿಜವಾಗಿಯೂ ದಂಪತಿಗಳಲ್ಲಿ ಪ್ರೀತಿಯೆಂದರೆ ಏನು ಎಂಬುದನ್ನು ತೋರಿಸುವುದಕ್ಕಾಗಿಯೇ ಕಾಳಿದಾಸನು ಈ ಕೃತಿಯನ್ನು ಬರೆದಿರುವನೋ ಎಂಬಂತೆ ಇದೆ.
ಯಕ್ಷನು ತನ್ನ ಪ್ರಿಯ ಪತ್ನಿಗೆ ಸಂದೇಶವನ್ನು ಕಳಿಸುವ ಆತುರದಲ್ಲಿ ಅತ್ಯಂತ ಸಮೀಪದ (shortest route) ಮಾರ್ಗವನ್ನು ತೋರಿಸಬಹುದಾಗಿತ್ತು. ಆದರೆ ಮಹಾಕವಿಯ ಉದ್ದೇಶ ಉತ್ತರ ಭಾರತದ ಸಾಂಸ್ಕøತಿಕ ಪರಿಚಯದ ಜೊತೆಗೆ ಆಯಾ ಪ್ರದೇಶದ ಸೌಂದರ್ಯದ ವರ್ಣನೆಯೂ ಆಗಿತ್ತು. ಹಾದಿಯಲ್ಲಿ ಮೇಘ ಸಂದರ್ಶಿಸಲಿರುವ ಗಿರಿನದಿಗಳು, ಊರುಗಳು, ರಾಮಗಿರಿ, ಆಮ್ರಕೂಟ ಪರ್ವತ, ನರ್ಮದಾ, ದಶಾರ್ಣ, ವಿದಿಶಾ ನೀಚೈಃ ಪರ್ವತ, ವನ, ನಿರ್ವಿಂದ್ಯಾ, ಸಿಂಧು, ಆವಂತಿ, ಉಜ್ಜಯಿನಿ, ಗಂಧವತೀ, ಗಂಭೀರಾ, ದೇವಗಿರಿ, ಚರ್ಮಣ್ವತಿ, ದಶಪುರ, ಕುರುಕ್ಷೇತ್ರ, ಸರಸ್ವತಿ, ಕನಖಲ, ಗಂಗಾ, ಹಿಮಾಲಯ, ಚರಣನ್ಯಾಸ, ಕ್ರೌಂಚರಂಧ್ರ, ಕೈಲಾಸ ಮತ್ತು ಕೊನೆಯಲ್ಲಿ ಅಲಕಾನಗರಿ. ಇಲ್ಲಿ ಪ್ರತಿ ಪರ್ವತಗಳು ಮೇಘನನ್ನು ತಮ್ಮ ಶಿರದ ಮೇಲೆ ಹೊತ್ತು ಸ್ವಾಗತಿಸುವ ವರ್ಣನೆಯಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕವಿಯ ಧಾರ್ಮಿಕ ಮನೋಭಾವ ರಾಮಗಿರಿಯಿಂದ ಅಲಕಾದವರೆಗಿನ ತೀರ್ಥಕ್ಷೇತ್ರಗಳ ದರ್ಶನ ಮತ್ತು ಯಥಾಶಕ್ತಿ ಸೇವೆಸಲ್ಲಿಸಿ ಧನ್ಯಾತ್ಮನಾಗಬೇಕೆಂದು ಯಕ್ಷನು ಮೋಡಕ್ಕೆ ವಿನಂತಿಸಿಕೊಳ್ಳುವ ಪರಿ. ಪ್ರಕೃತಿ ವರ್ಣನೆ ಮತ್ತು ಪ್ರೇಮ ನಿರೂಪಣೆ ಎರಡನ್ನೂ ಸಮಾನವಾಗಿ ಹೆಣೆದು ಕಾಳಿದಾಸನು ನಮ್ಮನ್ನು ಒಂದು ಸುಂದರವಾದ ಸ್ವಪ್ನಲೋಕಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಪ್ರೇಮದ ಹೊಂಬೆಳಕಿನಿಂದ ಮನಸ್ಸು ಪುಳಕಿತಗೊಂಡರೆ, ಪ್ರಕೃತಿಯ ಪ್ರೇಮದ ತಾಳಕ್ಕೆ ಮೃಗ-ಪಕ್ಷಿ-ನವಿಲು, ಗಿಡ-ಬಳ್ಳಿಗಳೂ ನರ್ತಿಸಿ ದನಿಗೂಡಿಸುತ್ತವೆ, ಗಿರಿನದಿಗಳು ಓಗೂಡುತ್ತವೆ, ಸಾಕ್ಷಾತ್ ಪಾರ್ವತಿ-ಪರಮೇಶ್ವರರು ಇಲ್ಲಿ ಈ ಪ್ರೇಮದ ಪಾವಿತ್ರ್ಯತೆಯ ಪ್ರತೀಕರಾಗಿ ನಮ್ಮನ್ನು ಭಕ್ತಿಯಲ್ಲಿ ತೇಲಿಸುತ್ತಾರೆ. ಇಂತಹ ಕವಿಪುಂಗವನನ್ನು ಪಡೆದ ಭಾರತೀಯರು ಧನ್ಯ ಧನ್ಯ.