ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶರಣಗೌಡ ಬಿ ಪಾಟೀಲ್
ಇತ್ತೀಚಿನ ಬರಹಗಳು: ಶರಣಗೌಡ ಬಿ ಪಾಟೀಲ್ (ಎಲ್ಲವನ್ನು ಓದಿ)

ನಾವು ಮೊದಲಿನಿಂದ ತಂದೆ, ತಾಯಿ, ಗುರು ಹಾಗೂ ಅತಿಥಿಯನ್ನು ದೇವರ ಸಮಾನ ಅಂತ ಭಾವಿಸಿ  ಗೌರವ ಕೊಡುತ್ತಲೇ ಬಂದಿದ್ದೇವೆ. ಈ ಪರಂಪರೆ ಹಿಂದಿನಿಂದ ಇಂದಿನ ತನಕ ಚಾಲ್ತಿಯಲ್ಲಿದೆ. ಮಾತೃ ದೇವೋಭವ, ಪಿತೃದೇವೋಭವ, ಗುರುದೇವೋಭವ, ಅತಿಥಿದೇವೋಭವ ಅಂತ  ವೇದ ಪುರಾಣಗಳಲ್ಲಿ ಕೂಡ  ಉಲ್ಲೇಖವಿದೆ. ಅವರೆಲ್ಲರ ಬಗ್ಗೆ ಪೂಜ್ಯ ಭಾವನೆ ತೋರಿಸುವ ವಿಷಯದಲ್ಲಿ ಯಾವುದೇ ಜಾತಿ, ಮತ, ಲಿಂಗ, ಪಂಥ, ಪಂಗಡಗಳ ಭೇದವಿಲ್ಲ. ಇದು ಸಾರ್ವತ್ರಿಕವಾಗಿ ಒಪ್ಪಿಕೊಂಡು ಬಂದಿರುವ ವಿಷಯ.

ಆದರೆ ಇವರೆಲ್ಲರ ಜೊತೆ ಇನ್ನೊಬ್ಬ ವ್ಯಕ್ತಿ ಕೂಡ ಎಲ್ಲರ ಗೌರವ, ಪ್ರೀತಿಗೆ ಪಾತ್ರನಾಗುತ್ತಾನೆ. ಅವನೇ ಮನೆ ಅಳಿಯ ಅಂತ ನಿಸ್ಸಂಶಯವಾಗಿ ಹೇಳಬಹುದು. ಪ್ರತಿ ಸಮಾಜ, ಪ್ರತಿ ಕುಟುಂಬದಲ್ಲಿ  ಅಳಿಯನಿಗೆ ವಿಶೇಷ ಸ್ಥಾನಮಾನ ಇದ್ದೇ ಇರುತ್ತದೆ. ಯಾರೊಬ್ಬರೂ ಕೂಡ ಅಳಿಯನಿಗೆ ಅಗೌರವ ತೋರುವದಾಗಲಿ ಇಲ್ಲವೇ ತಿರಸ್ಕಾರದಿಂದ ಕಾಣುವದಾಗಲಿ ಮಾಡಲಾರರು. ನಮ್ಮ ಕಡೆ ಅಳಿಯ  ಮಾವನ ಮನೆಗೆ ಬಂದರೆ ಮನೆಮಂದಿಯ ಸಂತೋಷಕ್ಕೆ ಪಾರವೇ ಇರುವದಿಲ್ಲ. ಆತ ಮಾವನ ಮನೆಯಲ್ಲಿ ಇರುವ ತನಕ ಆತನ ಬೇಕು ಬೇಡ ಪೂರೈಸಲು ಎಲ್ಲರೂ  ಕಂಕಣಬದ್ದರಾಗಿರುತ್ತಾರೆ. ಅಳಿಯನ ಸೇವೆಯಲ್ಲಿ ನಿರತರಾಗುತ್ತಾರೆ. ಅಕ್ಕ, ತಂಗಿ, ಸೋದರತ್ತೆಯ ಮಕ್ಕಳು ಕೂಡ ಅಳಿಯಂದಿರೇ  ಆದರೆ ಮಗಳ ಗಂಡ ಅನಿಸಿಕೊಂಡ ಅಳಿಯನಿಗೆ ಸಿಗುವ ಗೌರವ ಅವರಿಗೆ ಸಿಗುವದಿಲ್ಲ. ಅವರು ಕೇವಲ   ನಾಮಕಾವಾಸ್ತೆ ಅಳಿಯಂದಿರರು ಅಂತ ಹೇಳಬಹುದು.

ಅಳಿಯ ಮನೆಗೆ ಬಂದರೆ ತುಂಬಿದ ಹೊಳೆಯೇ ಬಂದಂತಾಗುತ್ತದೆ. ಎಲ್ಲರ ಮುಖದಲ್ಲಿ ಚೈತನ್ಯ  ತೇಲಾಡುತ್ತಿರುತ್ತದೆ.  ಅಳಿಯನ ಬಗ್ಗೆ ಎಲ್ಲಿಲ್ಲದ ಪ್ರೀತಿ ಕಾಳಜಿ ಕಂಡುಬರುತ್ತವೆ. ಅಳಿಯಂದಿರರು ನಮ್ಮ ಕಡೆ ಮಾವನ ಮನೆಗೆ ಬರುವದು ಅಪರೂಪ. ಹೆಂಡತಿ ತವರು ಮನೆಗೆ ಬಂದಾಗ ತಪ್ಪದೆ ಬರುತ್ತಾರೆ. ಹೆಂಡತಿ ತವರಿಗೆ ಬರಬೇಕಾದರೂ ಯಾವುದೇ ಹಬ್ಬ ಹುಣ್ಣಿಮೆ  ಮದುವೆ ಮುಂಜಿ ನಿಶ್ಚಿತಾರ್ಥ ಹೀಗೆ ವಿಶೇಷ ಸಂದರ್ಭ ಬರಬೇಕು. ಆಗ ಅಳಿಯ  ಬರುವದು ಕೂಡ  ಅನಿವಾರ್ಯವಾಗುತ್ತದೆ . ನೂರೆಂಟು  ಕೆಲಸವಿದ್ದರೂ ಅಳಿಯ ಬಿಡುವ ಮಾಡಿಕೊಂಡು ಬರುತ್ತಾನೆ. ಹೆಂಡತಿಯ  ಮರ್ಜಿ ಮುಲಾಜಿಗಾದರೂ ಬರಲೇಬೇಕಾಗುತ್ತದೆ. ಬಂದಮೇಲೆ  ಒಂದೆರಡು ದಿನ ಮುಕ್ಕಾಂ ಮಾಡಲೇಬೇಕು. ಆತ ಮಾವನ ಮನೆಯಲ್ಲಿ  ಇರುವಷ್ಟು ದಿನ ಆತನ ಊಟ ತಿಂಡಿ ಮತ್ತಿತರ  ಯಾವ  ಕೊರತೆಯಾಗದು. ಅಳಿಯನಿಗೆ  ಇಷ್ಟವಿರುವ ರುಚಿ ರುಚಿಯಾದ ಅಡುಗೆ  ಮಾಡಿ  ಹೊಟ್ಟೆ ತುಂಬಾ ಉಣಿಸುತ್ತಾರೆ.  ಆತ  ಹೆಚ್ಚಿಗೆ ಊಟ ಮಾಡಿದಷ್ಟೇ ಎಲ್ಲರಿಗೂ  ತೃಪ್ತಿಯಾಗುತ್ತದೆ. ಅಳಿಯ ಹೊರತು ಪಡಿಸಿ ಬೇರೆ ಯಾರೇ ಸಂಬಂಧಿಕರು  ಬಂದರೂ ಯಾರೂ  ಅಷ್ಟೊಂದು ತಲೆಕೆಡಿಸಿಕೊಳ್ಳುವದಿಲ್ಲ. ನಮ್ಮ ಕಡೆ ಒಂದು ಗಾದೆ ಚಾಲ್ತಿಯಲ್ಲಿದೆ ಮಳೆ ಬಂದ ಮರುದಿನ ಬೆಳೆ ನೋಡು ಅಳಿಯ ಬಂದ ಮರುದಿನ ಮಗಳ ಮಾರಿ ನೋಡು ಅಂತ ಅರ್ಥಾತ್ ಮಳೆ ಬಂದ ಮರುದಿನ ಬೆಳೆಯ ಲಕ್ಷಣ ಬದಲಾಗುವಂತೆ ಅಳಿಯ ಬಂದಾಗ ಮಗಳ ಮುಖದ ಮೇಲೆ ಲಕ್ಷಣ ಬದಲಾಗುತ್ತದೆ. ಮುಖದ ಮೇಲೆ  ಲವಲವಿಕೆ ಮಂದಹಾಸ ತೇಲಾಡುತ್ತದೆ.

ಅಳಿಯಂದಿರರು ಮಾವನ ಮನೆಗೆ ಬರುವಾಗ  ಖಾಲಿಗೈಯಿಂದ ಯಾವತ್ತೂ  ಬರುವದಿಲ್ಲ.  ಏನಾದರೂ ತಿಂಡಿ ತಿನಿಸು ತೆಗೆದುಕೊಂಡೇ ಬರುತ್ತಾರೆ. ಹೆಂಡತಿ ತವರು ಮನೆಯಲ್ಲಿದ್ದಾಗಲೇ ಜಾಸ್ತಿ ಬರುತ್ತಾರೆ.  ಇಲ್ಲದಿದ್ದರೆ ಬರೋದು  ಅಪರೂಪ. ಒಮ್ಮೊಮ್ಮೆ  ಬಂದರೂ ಬಂದ ಕೆಲಸ ಮುಗಿಸಿಕೊಂಡು ಮುಕ್ಕಾಂ ಮಾಡದೆ ಹಾಗೇ  ಹೋಗುತ್ತಾರೆ. ಮದುವೆಯಾದ ಹೊಸದರಲ್ಲಿ ಅಳಿಯ ಜಾಸ್ತಿ ಮಾವನ ಮನೆಗೆ  ಬರಲೇಬೇಕು ಯಾಕೆಂದರೆ ಹೊಸದರಲ್ಲಿ ಅನೇಕ ಕಾರ್ಯಕ್ರಮ ನೆರವೇರಿಸಬೇಕಾಗಿರುವದು ಅನಿವಾರ್ಯವಾಗಿರುತ್ತದೆ. 

ನಮ್ಮ ಊರಿನ  ಅಳಿಯಂದಿರರು ಒಂದೇ  ರೀತಿ ಇರುವದಿಲ್ಲ. ಬಡವರು, ಶ್ರೀಮಂತರು, ಮಧ್ಯಮ ವರ್ಗದವರು, ಗ್ರಾಮೀಣರು, ನಗರವಾಸಿಗಳು , ಸರಕಾರಿ ನೌಕರರು, ಖಾಸಗಿ ಕೆಲಸದವರು ಇದ್ದಾರೆ. ಶ್ರೀಮಂತರು ಮತ್ತು  ನಗರವಾಸಿ ಅಳಿಯಂದಿರು ಊರಿಗೆ ಬಂದರೆ ವೈಯಕ್ತಿಕ ಸಮಸ್ಯೆ ಎದುರಿಸಬೇಕಾಗುತ್ತದೆ.  ಊರಲ್ಲಿ  ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ . ಯಾರ ಮನೆಯಲ್ಲೂ ಶೌಚಾಲಯ ವ್ಯವಸ್ಥೆ, ಕೂಲರ ವ್ಯವಸ್ಥೆ ಫಿಲ್ಟರ್ ನೀರಿನ ವ್ಯವಸ್ಥೆ ಇಲ್ಲ. ದಿನದ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಕೂಡ  ಅನುಮಾನ. ಬೇಸಿಗೆ ಬಂದರೆ ಗಾಳಿ ಹಾಕಿಕೊಳ್ಳಲು ಬೀಸಣಿಕೆಯೇ ಗತಿ. ಕೂಲರು ಫ್ರಿಜ್ಜ  ಫ್ಯಾನ ಇವೆಲ್ಲ ಕನಸಿನ ಮಾತೇ ಸರಿ. ಇಂತಹ ವ್ಯವಸ್ಥೆಯಿಂದ ಸಹಜವಾಗಿ ತೊಂದರೆ ಅನುಭವಿಸಬೇಕಾಗುತ್ತದೆ.

ಅಳಿಯಂದಿರರು ಅನುಭವಿಸುವ ತೊಂದರೆ  ಶ್ರೀಮತಿಯರು ಅನುಭವಿಸುವದಿಲ್ಲ. ಯಾಕೆಂದರೆ ಅವರು ಇಲ್ಲೇ ಹುಟ್ಟಿ ಬೆಳೆದು ಇಲ್ಲಿನ ವಾತಾವರಣಕ್ಕೆ  ಹೊಂದಿಕೊಂಡಿರುತ್ತಾರೆ. ಇವರಿಗೆ  ಹಳ್ಳಿಯಾದರೇನು ದಿಲ್ಲಿಯಾದರೇನು ಎಲ್ಲವೂ ಒಂದೇ ಇವರೊಂದು  ರೀತಿ ಉಭಯವಾಸಿಗಳು ಅಂತ ಹೇಳಬಹುದು.  ತಮ್ಮ  ಶ್ರೀಮತಿಯರು  ತೊಂದರೆ ಅನುಭವಿಸದೆ ಆರಾಮಾಗಿ ಇರುವದು ನೋಡಿ  ಅಳಿಯಂದಿರರಿಗೆ ಕಸಿವಿಸಿಯಾಗುತ್ತದೆ. ಅಳಿಯಂದಿರರಿಗೆ  ತಮ್ಮ ಮನೆಗೆ ಹೋಗಬೇಕು ಅಂತ  ಅನಿಸಿದರು   ಬಂದ ಕಾರ್ಯ ಮುಗಿಸದೆ  ಹೇಗೆ ಹೋಗುವದು ಅಂತ ದ್ವಂದ್ವ ಕಾಡುತ್ತದೆ.

ಅಳಿಯ  ಕಷ್ಟ ಅನುಭವಿಸದಿರಲಿ ಅಂತ ಮಾವನ ಮನೆಯಲ್ಲಿ  ತಮ್ಮ ಕೈಲಾದ  ವ್ಯವಸ್ಥೆ ಮಾಡಿರುತ್ತಾರೆ. ಅಳಿಯನಿಗೆ ಬೇಕಾಗುವ ವಸ್ತು ಮನೆಯಲ್ಲಿರದಿದ್ದರೆ  ಬೇರೆಯವರ ಮನೆಯಿಂದ  ಕಡಾ  ತಂದು ಖುಷಿ ಪಡಿಸಲು ಮುಂದಾಗುತ್ತಾರೆ . ಅಳಿಯನಿಗೆ ಯಾವುದೇ ಕಿರಿಕಿರಿ ಆಗದಿರಲಿ ಅಂತ  ಪ್ರತ್ಯೇಕ ರೂಮಿನ ವ್ಯವಸ್ಥೆಯೂ ಮಾಡಿರುತ್ತಾರೆ. ಆದರೂ ಅಳಿಯಂದಿರರು ಸಮಸ್ಯೆ ಎದುರಿಸುವದು ತಪ್ಪುವದಿಲ್ಲ.

ಕೆಲ  ಅಳಿಯಂದಿರರಿಗೆ ಯಾವ ಸುವ್ಯವಸ್ಥೆ ಕೂಡ   ಬೇಕಾಗುವದಿಲ್ಲ  ಅವರು ಎಲ್ಲ ಕಡೆ   ಹೊಂದಾಣಿಕೆಯಾಗಬಲ್ಲರು.  ಮಾವನ ಮನೆ ಹೇಗೆ ಇರಲಿ  ಸುವ್ಯವಸ್ಥೆ ಇರಲಿ ಬಿಡಲಿ ಅವರಿಗೆ ಮಾವನ ಮನೆ ಅರಮನೆಯಂತೆ  ಕಾಣುತ್ತದೆ. ಹೆಂಡತಿ ತವರು ಮನೆಯಲ್ಲಿ ಇರುವಷ್ಟು ದಿನ ಅವಳ ಜೊತೆ ಇದ್ದು ಕಷ್ಟ ಸುಖ ಸಮವಾಗಿ ಹಂಚಿಕೊಂಡು ತೃಪ್ತಿ ಪಡುತ್ತಾರೆ.

ಚಿತ್ರ ಕೃಪೆ : https://www.weddingwire.in/wedding-tips/hindu-bride-groom-images–c6355

ಅಳಿಯ ಕೇವಲ ಮಾವನ ಮನೆಗೆ ಅಷ್ಟೇ  ಅಳಿಯನಾಗಿರದೆ  ಊರವರಿಗೂ ಊರ ಅಳಿಯ ಅನ್ನುವ ಗೌರವಕ್ಕೆ ಪಾತ್ರನಾಗುತ್ತಾನೆ. ಎಲ್ಲರೂ  ಗೌರವ ಕೊಡುತ್ತಾರೆ. ಊರಿನ ಪರಿಚಯ ಇಲ್ಲದವರಿಗೆ  ತಮ್ಮ ಜೊತೆ ಕರೆದುಕೊಂಡು ಹೋಗಿ  ಪರಿಚಯವೂ  ಮಾಡಿಸುತ್ತಾರೆ ಹಾಗೂ ತಮ್ಮ ಮನೆಗೆ ಕರೆದುಕೊಂಡು ಹೋಗಿ ಚಹಾ ನಾಷ್ಟಾ ಮಾಡಿಸಿ ಕುಶಲೋಪರಿ ವಿಚಾರಿಸುತ್ತಾರೆ.  ಒಳ್ಳೆ  ಸ್ವಭಾವದ ಅಳಿಯಂದಿರಿಗೆ ಎಲ್ಲರಿಂದ ಗೌರವದ ಸ್ಥಾನ ಸಿಕ್ಕೇ ಸಿಗುತ್ತದೆ. ಜೊತೆಗೆ, ಹೊಗಳಿಕೆಯ ಮಾತುಗಳು ಕೇಳಿ ಬರುತ್ತವೆ.

ಕೆಲ  ಅಳಿಯಂದಿರರಿಗೆ  ಗೌರವ  ದೊರೆಯುವದಿಲ್ಲ  ಅವರು ಊರಿನ ಕೆಲ ಉಡಾಳರ ಜೊತೆ ಸೇರಿಕೊಂಡು ಇಸ್ಪೀಟ್ ಮಟಕಾ ಮತ್ತಿತರ  ದುಷ್ಚಟ ಅಂಟಿಸಿಕೊಂಡಿರುತ್ತಾರೆ.

ಊರಿಗೆ ಬರುವ ಅಳಿಯಂದಿರರಲ್ಲಿ  ಹೆಚ್ಚು ಫೇಮಸ ಆಗಿರುವ  ಅಳಿಯನೊಬ್ಬನಿದ್ದಾನೆ. ಆತನ ಬಗ್ಗೆ   ಕೇಳಿದರೆ  ನಿಮಗೂ ಆಶ್ಚರ್ಯವಾಗಬಹುದು. ಅತನಿಗೆ ಜಾಣ ಅಳಿಯ ಅನ್ನುವ ಬಿರುದು ಕೂಡ ನೀಡಲಾಗಿದೆ. ಅವನೇ ನಾಗರಾಜ. ಹೆಂಡತಿ  ಬಾಣಂತಿತನಕ್ಕೆ ಬಂದಿದ್ದಳು. ಆಗ ಅವನೂ ತನ್ನ ಕೆಲಸದಲ್ಲಿ ಬಿಡುವು ಮಾಡಿಕೊಂಡು ಬಂದಿದ್ದ. ಮಾವ  ಮನೆಯಲ್ಲಿರಲಿಲ್ಲ. ಸಂತೆಗೆ  ಹೋಗಿದ್ದ. ಅಳಿಯ ಬಂದದ್ದು ನೋಡಿ  ಅತ್ತೆಗೆ  ಖುಷಿಯಾಯಿತು. ಕಾಲಿಗೆ ನೀರು ಕೊಟ್ಟು  ಉಪಚರಿಸಿದಳು.  ಅಳಿಯನಿಗಾಗಿ ತರತರಹದ ಅಡುಗೆ ಮಾಡಿದಳು. ಹಪ್ಪಳ ಕುರುಡಿಗೆ ಸಂಡಿಗೆ ಮತ್ತಿತರ ತಿಂಡಿ ಪದಾರ್ಥ ಕರಿದು ಬುಟ್ಟಿ ತುಂಬಿದಳು. ಆತನ  ಹೊಟ್ಟೆ ತುಂಬಾ ಹಸಿದಿತ್ತು  ಅಡುಗೆ ವಾಸನೆ ಮೂಗಿಗೆ ಘಮ ಅಂತ ಬಡಿದು ಬಾಯಲ್ಲಿ ನೀರೂರಿತು. ಸ್ವಲ್ಪ ಸಮಯದ ನಂತರ ಊಟಕ್ಕೆ ಕರೆ ಬಂದಿತು. ಅತ್ತೆ  ಬಿಸಿ ಬಿಸಿ ಹೋಳಿಗೆ  ಬಡಿಸಿದಳು.  ಆದರೆ ಕರಿದ ತಿಂಡಿ ಪದಾರ್ಥ ಕೊಡಲು ಮರೆತು ಬಿಟ್ಟಿದ್ದಳು. ನಾಗರಾಜ್ ಕರಿದ ತಿಂಡಿ ಪದಾರ್ಥದ ಕಡೆ ಓರೆಗಣ್ಣಿನಿಂದ ನೋಡಿ ಅತ್ತೆ ನನಗಾಗೇ ಇವೆಲ್ಲ ಮಾಡಿದ್ದಾಳೆ ಆದರೆ ಕೊಡಲು ಮರೆತಿದ್ದಾಳೆ ಹೇಗೆ ಕೇಳುವದು ಹೆಂಡತಿ ಬಳಿ ಇದ್ದದ್ದಿರೆ ಅವಳ ಕಡೆಯಿಂದ ಕೇಳಿ ಪಡೆಯುತಿದ್ದೆ ಈಗ ಅವಳು ಬಾಣಂತಿಯಾಗಿ ಆರೈಕೆಯಲ್ಲಿದ್ದಾಳೆ ಏನು ಮಾಡೋದು  ಅಂತ ಯೋಚಿಸಿದ. ತಕ್ಷಣ  ಒಂದು  ಉಪಾಯ ಹೊಳೆಯಿತು   ಊರಿಂದ ಬರುವಾಗ ರಸ್ತೆಯಲ್ಲಿ ಹಾವು ನೋಡಿದೆ ಅತ್ತೆ ಅಂತ ಹೇಳಿದ.

ಅತ್ತೆ ಗಾಬರಿಯಾಗಿ ದೊಡ್ಡದಿತ್ತಾ? ಸಣ್ಣದಿತ್ತಾ ಅಂತ ಗಾಬರಿಯಾಗಿ ಪ್ರಶ್ನಿಸಿದಳು ಹಾವು ಬಹಳ ದೊಡ್ಡದಾಗಿತ್ತು  ಇಲ್ಲಿಂದ ಸುಮಾರು ಆ ಹಪ್ಪಳದ  ಬುಟ್ಟಿಯವರೆಗೆ ಇದ್ದಿರಬೇಕು  ಅಂತ  ಹೇಳಿದ. ತಕ್ಷಣ  ಅತ್ತೆಗೆ  ಕರಿದ ತಿಂಡಿ ಪದಾರ್ಥಗಳ ನೆನಪು ಬಂದು, ಅಯ್ಯೋ  ಹೋಳಿಗೆ ಊಟದ ಜೊತೆ  ಕೊಡಲು ನೆನಪೇ ಬಂದಿಲ್ಲ ಅಂತ ಹಳಹಳಿಸಿಕೊಂಡು ತಿನ್ನಲು ಕೊಟ್ಟಳು. ಈ ವಿಷಯ ಆಗಲೇ ಕೇರಿಯ ಜನರಿಗೆ ಗೊತ್ತಾಗಿ ಜಾಣ ಅಳಿಯ ಅಂತ ನಾಗರಾಜನಿಗೆ ಆಗಾಗ ನೆನಪಿಸಿ ನಕ್ಕುಬಿಡುತ್ತಾರೆ.

ನಮ್ಮ ಕಡೆ ಭಾವಿ ಅಳಿಯಂದಿರರಿಗೆ ಸಿಗುವ ಗೌರವ ಎಲ್ಲದಕ್ಕಿಂತ ಹೆಚ್ಚು.  ಮಾವನ ಕಡೆ ಮದುವೆ ಇದ್ದರೆ ಒಂದೆರಡು ದಿನ ಮುಂಚಿತವಾಗೇ ಕರೆಯಿಸಿ ಬ್ಯಾಂಡ ಬಾಜಿಯ ಜೊತೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ.  ಮನೆಯ ತಲೆಬಾಗಿಲ ಮುಂದೆ ನಿಲ್ಲಿಸಿ ಪಾದ ತೊಳೆದು ಪೂಜೆ ಮಾಡಿ ಆರತಿ ಬೆಳಗಿ ಬಲಗಾಲಿರಿಸಿ ಒಳ ಬರುವಂತೆ ಸೂಚಿಸುತ್ತಾರೆ. ಅಳಿಯನಿಗೊಂದು ಅದ್ಭುತ ಸ್ವಾಗತ ಅಂತ ಹೇಳಬಹುದು. ಅಳಿಯನ ಜೊತೆಗೆ  ಬಂದ ಅತಿಥಿಗಳಿಗೂ  ಹೋಳಿಗೆ ತುಪ್ಪದ ಮೃಷ್ಟಾನ್ನ ಭೋಜನದ ವ್ಯವಸ್ಥೆ ಇರುತ್ತದೆ. 

ಮದುವೆಯ ದಿನವಂತೂ  ಮಂಟಪದಲ್ಲಿ ಭಾವಿ ಅಳಿಯನೇ  ಮಹಾರಾಜ ಮಗಳೇ ಮಹಾರಾಣಿ. ಅವರೀರ್ವರ ಪಾಲಿಗೆ  ಇದೊಂದು ಅಪೂರ್ವ ದಿನ. ಇಬ್ಬರ ಮುಖದಲ್ಲೂ ಮಂದಹಾಸ ಎದ್ದು ಕಾಣುತ್ತದೆ.  ಭಾವಿ ಅಳಿಯ ಭಾವಿ ಶ್ರೀಮತಿಯ ಕೊರಳಿಗೆ ಮೂರು ಗಂಟು ಹಾಕಿ ಮಂಗಳಸೂತ್ರ ಕಟ್ಟಿದಾಗ ಎಲ್ಲರಿಗೂ ಒಂದು ರೀತಿಯ ನಿರಾಳತೆ. ಶಾಸ್ತ್ರೋಕ್ತವಾಗಿ ಇಬ್ಬರೂ ಪತಿ ಪತ್ನಿಯಾಗಿ ಸುಂದರ ಸಂಸಾರ ಸಾಗಿಸಿಕೊಂಡು ಹೋಗಲು ಪರವಾನಿಗೆ ಸಿಕ್ಕಂತಾಗುತ್ತದೆ.  ಭಾವಿ  ಅಳಿಯ  ಖಾಯಂ ಅಳಿಯನಾಗಿ ಬದಲಾಗುತ್ತಾನೆ.  ಮನೆ ಅಳಿಯ ಅನ್ನುವ ಪಟವೂ  ದೊರೆತು ಬಿಡುತ್ತದೆ. ಅಳಿಯ ಮದುವೆಯಾದ ಮೇಲೆ ಮೊದಲ ಬಾರಿಗೆ ಮಾವನ ಬಂದರೆ ಸಾಕ್ಷಾತ್ ದೇವರೇ ಬಂದಂತಾಗುತ್ತದೆ. ಆತನಿಗೆ ಮನೆಮಂದಿ ಮಾಡುವ ಸತ್ಕಾರ ನೋಡಲು ಎರಡು ಕಣ್ಣು ಸಾಲದು. ಆತನ ಸೇವೆಗಾಗಿ ಮನೆಯವರೆಲ್ಲ ತಮ್ಮ ಕೆಲಸ ಕಾರ್ಯ ಬಿಟ್ಟು ಟೊಂಕಕಟ್ಟಿ ನಿಲ್ಲುತ್ತಾರೆ. ವಿಶೇಷ  ಊಟ ತಿಂಡಿಯ ಪಕ್ವಾನವೂ ಇರುತ್ತದೆ.  ಅಳಿಯನಿಗೆ  ಮನೆಯವರಲ್ಲದೆ  ಅಕ್ಕ ಪಕ್ಕದ ಮನೆಯವರು ಕೂಡ  ತಮ್ಮ ಮನೆಗೆ ಆದರದಿಂದ  ಕರೆದು ಚಹಾ ನಾಷ್ಟಾ ಮಾಡಿಸಿ ಸತ್ಕಾರ  ಮಾಡುತ್ತಾರೆ.

ಅಳಿಯ ತಮ್ಮೂರಿಗೆ ವಾಪಸ್  ಹೊರಡಲು ತಯಾರಾದಾಗ  ಮಾವನ ಮನೆಯವರು ಅವನನ್ನು ಹಾಗೇ ಕಳಿಸದೇ ನಾಲ್ಕು ಜನರ ಸಮ್ಮುಖದಲ್ಲಿ ಬಟ್ಟೆ ಆಯೇರಿ ಮಾಡಿ ತಮ್ಮ ಶಕ್ತ್ಯಾನುಸಾರ ಬಂಗಾರವೂ ಹಾಕುತ್ತಾರೆ. ಬಂಗಾರ ಹಾಕುವ ಶಕ್ತಿ ಇರದವರು ಬಟ್ಟೆ ಆಯೇರಿ ಮಾಡಿ ಕಣ್ತುಂಬಿಕೊಳ್ಳುತ್ತಾರೆ.  ಅಳಿಯ ಒಂದು ರೀತಿಯ ಅದೃಷ್ಟವಂತ ಅಂತಲೇ ಹೇಳಬಹುದು. ಯಾಕೆಂದರೆ ಮದುವೆಯಾದ ನಂತರ ಕೂಡ  ಮಾವನ ಕಡೆಯಿಂದ ಆಗಾಗ  ಸನ್ಮಾನ ಗೌರವ  ಪಡೆಯುತ್ತಲೇ ಇರುತ್ತಾನೆ.  ಅಳಿಯನಿಗೆ ತಾನು  ತಂದೆಯಾಗುವ ಅವಕಾಶ ಕೂಡಿ ಬಂದರೆ ಅವನ ಗೌರವ ಮತ್ತಷ್ಟು ಹೆಚ್ಚಾಗುವದು. ಬಟ್ಟೆ ಆಯೇರಿ ಜೊತೆ ಬಂಗಾರ ಕೂಡ ನಿಶ್ಚಿತ. ಕೆಲವೊಮ್ಮೆ ಕೆಲ  ಅಳಿಯಂದಿರು ಹೆಚ್ಚಿನ ಬಂಗಾರಕ್ಕೆ ಬೇಡಿಕೆ ಇಡುತ್ತಾರೆ. ಕೆಲವು ಮಾವಂದಿರಿಗೆ ಜಾಸ್ತಿ ಬಂಗಾರ ಹಾಕುವ ಯೋಗ್ಯತೆ ಇರುವುದಿಲ್ಲ. ಆದರೂ ಸಹ ತಮ್ಮ ಗೌರವ ಮರ್ಯಾದೆ ಪ್ರಶ್ನೆ ಅಂತ ಬಂಗಾರ ಹಾಕಿ ನಿಟ್ಟುಸಿರು ಬಿಡುತ್ತಾರೆ. ಸ್ಥಿತಿವಂತ ಮಾವಂದಿರರಿಗೆ ಬಂಗಾರ ಬೇಡಿಕೆ ಈಡೇರಿಸುವದು ಕಷ್ಟವಾಗದು. ಅಳಿಯ ಕೇಳದಿದ್ದರೂ ಜಾಸ್ತಿ  ಹಾಕೇ ಹಾಕುತ್ತಾರೆ. ಆದರೆ ಬಡ ಮಾವಂದಿರರಿಗೆ ಬಂಗಾರ ಹಾಕುವದು ಕಷ್ಟವೇ ಸರಿ. ಹತ್ತರ ಜೊತೆ ಹನ್ನೊಂದು ಅಂತ ಅನಿವಾರ್ಯವಾಗಿ ಹಾಕಿ ಕೈ ತೊಳೆದುಕೊಳ್ಳುತ್ತಾರೆ. ನಮ್ಮ ಕಡೆ ಅಳಿಯ ಅಂದರೆ ಗೌರವದ ವ್ಯಕ್ತಿ ಅಷ್ಟೇ ಅಲ್ಲ ಅದೃಷ್ಟದ ವ್ಯಕ್ತಿಯೂ ಹೌದು.. ಮಾವನ ಮನೆ ಎಂದರೆ ಅಳಿಯಂದಿರಿಗೆ  ಹಾಲು ಹಿಂಡುವ ಎಮ್ಮೆ ಅಂತ ಅನೇಕರು  ಹೇಳುತ್ತಾರೆ. ಯಾಕೆಂದರೆ ಮಾವನ ಕಡೆಯಿಂದ ನಿರಂತರ ಪ್ರತಿಫಲ ಸಿಗುತ್ತಲೇ ಇರುತ್ತದೆ. ಸ್ವಲ್ಪ ದಿನದಲ್ಲೇ  ಮಕ್ಕಳ ಜಾವಳ,  ಶಾಲು ಹೊದಿಸುವದು, ಪ್ರವಾಸ ಹೋಗಿ ಬಂದರೆ, ಹೊಸ ವ್ಯಾಪಾರ ಉದ್ಯೋಗ ಒಕ್ಕಲುತನ ಮಾಡಿದರೆ. ಮದುವೆ ವಾರ್ಷಿಕೋತ್ಸವ ಮಾಡಿಕೊಂಡರೆ ಬಟ್ಟೆ ಆಯೇರಿ ಗೌರವ ಸನ್ಮಾನ ಇದ್ದೇ ಇರುತ್ತವೆ. ಮಾವನ ಮನೆ ಅನುಕೂಲಸ್ಥವಾಗಿದ್ದರೆ ಅಳಿಯನಿಗೆ ಯಾವ ಕೊರತೆಯೂ ಇರದು. ಒಂದು ವೇಳೆ ಅಳಿಯ  ನಿರುದ್ಯೋಗಿಯಾಗಿದ್ದರೆ ಏನಾದರೂ ಉದ್ಯೋಗ ಮಾಡಲಿ ಅಂತ ಅನುಕೂಲಸ್ಥ ಮಾವಂದಿರಿಂದ  ಹಣಕಾಸಿನ ಸಹಾಯವೂ ಸಿಗುತ್ತದೆ.

ಕೆಲ ಅಳಿಯಂದಿರು ಮಾವನ ಮನೆಯ ಸ್ಥಿತಿಗತಿ ಅರ್ಥ ಮಾಡಿಕೊಳ್ಳದೆ ಹೆಚ್ಚಿನ ಹಣದ ಬೇಡಿಕೆ ಇಡುವವರೂ ಇದ್ದಾರೆ.  ಹೆಂಡತಿಗೆ  ಮಾನಸಿಕ , ದೈಹಿಕ ಕಿರುಕುಳ ನೀಡಿ  ಹಣ ತರುವಂತೆ ಪೀಡಿಸುತ್ತಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಹೆಂಡತಿಗೆ ತವರು ಮನೆಗೆ ಅಟ್ಟುವ ಬೆದರಿಕೆ ಹಾಕುತ್ತಾರೆ.  ಇಂತಹ ಅಳಿಯಂದಿರರು  ತಾವು ಒಂದಿನ  ಮಾವನ ಸ್ಥಾನ ಅಲಂಕರಿಸುತ್ತೇವೆ ಅನ್ನುವುದ​ ಮರೆತು ಬಿಟ್ಟಿರುತ್ತಾರೆ.  ಅತ್ತೆಗೊಂದು ಕಾಲವಾದರೆ ಸೊಸೆಗೊಂದು ಕಾಲ ಇದ್ದೇ ಇರುತ್ತದೆ ಅಂತ ಯೋಚಿಸುವದಿಲ್ಲ. ಅಳಿಯನಾದವನು ಹೃದಯ ವೈಶಾಲ್ಯತೆಯಿಂದ ನಡೆದುಕೊಂಡರೆ ಅಳಿಯ ದೇವೋಭವ ಅನ್ನುವ ಗೌರವ ಸಿಕ್ಕೇ ಸಿಗುತ್ತದೆ. ಇಲ್ಲವಾದರೆ  ಅಳಿಯ ಹೊಳೆಯಾಗಿ ಕಾಣಲ್ಪಡುವ​ ಬದಲು  ಕೊಳೆಯಾಗಿ ಕಾಣಲ್ಪಡುತ್ತಾನೆ.