- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಯದುಗಿರಿಯ ಮೌನವನ್ನು ವಿಕಸಿಸಿದ ಕವಿ ಪು.ತಿ.ನ ವಿರಚಿತ ‘ವಸಂತ ಚಂದನ’ ನೃತ್ಯೋತ್ಸವ ರೂಪಕ ಕೃತಿ ವಸಂತಮಾಸದ ವಸ್ತುವನ್ನು ಒಳಗೊಂಡಿರುವ ಸುಂದರ ಹಾಗು ಅನುರೂಪದ ಕೃತಿ. ‘ಚೈತ್ರ ಬಂದಿಹಳು ಚೈತನ್ಯ ತಂದಿಹಳು’ ಎಂಬ ಕವಿವಾಣಿಯಂತೆ ಚೈತ್ರಾನುಸಂಧಾನಕ್ಕೆ ವಸಂತ ಚಂದನ ಅನನ್ಯವಾಗಿದೆ. ವಸಂತ ಋತು ನವವಧುವಿನಂತೆ ಶೃಂಗಾರಗೊಂಡು ಮನಮೋಹಕವಾಗಿ ಕಾಣಿಸುತ್ತಿರುತ್ತದೆ. ಶಿಶಿರ ಋತು ಮುಗಿಯುತ್ತಲೇ ಮಂದಗಮನೆಯಾಗಿ ನಲಿದಾಡುತ ಬರುವ ಈ ಕಾಲ ನಿಜಕ್ಕೂ ರಮ್ಯ ಕಾಲ. ಗಿರಿ, ಪರ್ವತ,ಸರೋವರ, ತೋಟ- ತುಡಿಕೆಗಳಲ್ಲಿ ನವಪಲ್ಲವಗಳು ಒಡಮೂಡಿ ಹೊಂಬಣ್ಣದ ಕಾಂತಿಯಂತೆ, ತಾಮ್ರಪರ್ಣಿಯಂತೆ ಕಾಣುತ್ತಿರುತ್ತವೆ. ಮಾವು ಮಲ್ಲಿಕಗಳೆ ಈ ವಸಂತದ ವಿಶೇಷತೆ ಎನ್ನಬಹುದು. ವಸಂತ ಮಾಸವೆ ಹಾಗೆ ನವವರ್ಷ, ನವೋಲ್ಲಾಸದಿಂದ ಸಕಲರನ್ನು ಲಾಸ್ಯವಾಡಿಸುತ್ತದೆ ಎಂದರೆ ತಪ್ಪಿಲ್ಲ. ಇದೊಂದು ಪರ್ವ ಕಾಲವೂ ಹೌದು! ಯುಗಾದಿ, ರಾಮನವಮಿ, ವಸಂತನವರಾತ್ರಿ, ದವನದ ಹುಣ್ಣಿಮೆ, ಶಂಕರ ಜಯಂತಿ ಇಲ್ಲ ಬರುವ ಪರ್ವಕಾಲಗಳು.
ಹಣ್ಣನೀವ ಕಾಯನೀವ ಪರಪಪರಿಯ ಮರಂಗಳೋ
ಪತ್ರಮೀವ ಪುಷ್ಪಮೀವ ಲತೆಯ ತರಂಗಗಳೋ
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ
ಬುಗುರಿಯೀಯೆ ಶಬರಿಕಾಯೆ ರಾಮನಿಲ್ಲಿ ಬಂದನೆ
ಎಂಬ ಗೋವಿಂದ ಪೈಗಳ ಮಾತಿನಂತೆ ರಾಮನನ್ನು ಮಾಧವವನ್ನು ವಸಂತೋತ್ಸವಕ್ಕೆ ಆಹ್ವಾನಿಸುವ ಪರಿ ಇಲ್ಲಿ ವಿಶೇಷವಾಗಿದೆ, ಕಾವ್ಯ, ಗೇಯತೆ, ಪ್ರಕೃತಿ, ಪಾರಮಾರ್ಥ, ಜೀವನೋತ್ಸಾಹಗಳು ಇಲ್ಲಿ ಮಿಳಿತಗೊಂಡಿದೆ. ವಸಂತ ಮಾಸದ ಉತ್ಸಾಹ ಎಂದಿಗೂ ಮಾಸದೆ ಇರುವುದು ಎಂಬುದನ್ನು ಅರ್ಥೈಸುತ್ತದೆ.
ಪು.ತಿ.ನ.ರವರ ‘ಈಚಲು ಮರದ ಕೆಳಗೆ’ ಪ್ರಬಂಧ ಸಂಗ್ರಹದಲ್ಲಿರುವ ವಸಂತಚಂದನೋತ್ಸವದ ಹಂಬಲು ಇಲ್ಲಿ ನೃತ್ಯೋತ್ಸವವಾಗಿ ಆವಿರ್ಭವಿಸಿದೆ. ವಸಂತ ಚಂದನಕ್ಕೆ ಪ್ರೇರಕ ಶಕ್ತಿಯಾಗಿರುವುದು ‘ಹರಿಣಾಭಿಸರಣ’. ಮುಂದುವರೆದಂತೆ ‘ವಸಂತ- ಚಂದನ’ ಕೃತಿ ‘ಹಂಸದಮಯಂತಿ’ಗೆ ಪ್ರೇರಕವಾಯಿತು. ಗೀತನಾಟಕಗಳೊಡೆಯ ಪು.ತಿ.ನ ರವರು ಸಹೃದಯರ ಮನೋಭಿಲಾಷೆಗೆ ತಕ್ಕಂತೆಯೇ ಈ ಸಂಗೀತ ರೂಪಕಗಳು ನೃತ್ಯರೂಪಕಗಳು ಒಡಮೂಡಿವೆ ಎನ್ನುತ್ತಾರೆ. ಎಚ್ಚರದ ಕನಸಿನಲ್ಲಿ ಯಾರೋ ಎಲ್ಲೋ ಹಾಡಿದ ಹಾಡುಗಳು ಅಲೆದಲೆದು ಇಲ್ಲಿ ಅಕ್ಷರರೂಪಿಯಾಗಿವೆ ಅವುಗಳಿಗೆ ಸ್ವರಪ್ರಸ್ತಾರ ಹಾಕಿ ತಾಳ ಪರಿಷ್ಕರಣೆ ಮಾಡಿದವರು ಸಂಗೀತದಿಗ್ಗಜರಾದ ಶ್ರೀ. ಎ.ವಿ ಕೃಷ್ಣಮಾಚಾರ್ಯರು ಎಂದು ನಮ್ರವಾಗಿ ನೆನೆಯುವುದು ಕವಿಯ ಕೃತಜ್ಞತಾ ಭಾವವನ್ನು ಅನಾವರಣಗೊಳಿಸುತ್ತದೆ.
ವಸಂತ ಚಂದನ ಮೊದಲೆ ಹೇಳಿದಂತೆ ನೃತ್ಯರೂಪಕ. ಸೂತ್ರಧಾರ, ನಟಿ, ತರುಣ-ತರುಣಿಯರು, ವ್ಯಕ್ತಿ, ಹಳ್ಳಿಗರು , ಹೊಸವೃಂದವರು ಇಲ್ಲಿ ನೃತ್ಯ ಸಂಗೀತದ ಮೂಲಕವೇ ಕೃತಿಯನ್ನು ಮುನ್ನಡೆಸುತ್ತಾರೆ. ನಟಿ ಮತ್ತು ಸೂತ್ರಧಾರರು ಕ್ವಚಿತ್ತಾಗಿ ಸಂಭಾಷಣೆ ನಡೆಸುತ್ತಾರೆ ಅದೂ ಹಿನ್ನೆಲೆ ಸಂಗೀತದ ತನಿರಸದಲ್ಲಿ. ವಸಂತ ಕಾಲವನ್ನು ಇನ್ನಷ್ಟು ರಂಗುಗೊಳಿಸುವ ರಾಗಗಳಾದ ಸ್ವತಃ ವಸಂತ, ಮೋಹನ, ಬಾಗೇಶ್ರಿ, ಶುಭಪಂತುವರಾಳೀ, ಮಧ್ಯಮಾವತಿ, ಕೇದಾರಗೌಳ, ಕಾಪಿನಾರಾಯಣಿ ರಾಗಗಳಲ್ಲಿ ಹಾಡುಗಳು ಸಂಯೋಜಿತವಾಗಿವೆ. ಈ ಕೃತಿಯ ವಿಶೇಷತೆ ಎಂದರೆ ಪುಟದ ಅರ್ಧ ಬಾಗದಲ್ಲಿ ಸಾಹಿತ್ಯವಿದ್ದರೆ ಇನ್ನರ್ಧ ಭಾಗದಲ್ಲಿ ಸ್ವರಪ್ರಸ್ತಾರ ಹಾಕಿ ಸಂಗೀತಪ್ರಿಯರಿಗೆ ರಸದೌತಣವನ್ನೇ ನೀಡಿರುವುದು.
ಸೂತ್ರಧಾರ ಪ್ರಾರಂಭಕ್ಕೆ ವಸಂತವೆಂಬ ನವವಧು ಬೇಸಗೆಯ ತಾಪಕ್ಕೆ ನಲುಗಿದೆ ಈ ವಾತಾವರಣಕ್ಕೆ ತಂಪು ಬೇಕು ಆ ತಂಪಿಗೆ ನರ್ತನ ಸಂಗೀತ ಇದ್ದರೆ ಸುಂದರಎನ್ನುವ ಭಾವವನ್ನು ವ್ಯಕ್ತಪಡಿಸುತ್ತಾ ಇದ್ದರೆ ನಟಿ
ಬಂತಿದಿಗೋ ಬೇಸಿಗೆ
ಸಂದ ಸಮಯದ ಕೊರಗ ಕಳೆಯುತ
ಮಂದಿಯೆಲ್ಲರ ಲೇಸಿಗೆ
ಮುನಿಮನದ ಮೊನೆಮುರಿವ ಮಲ್ಲಿಗೆ
ನನೆಯ ಕಂಪಿನ ಸೂಸಿಗೆ
ಬಂದಿತಿದಿಗೋ ಬೇಸಿಗೆ
ಮಾವಿನ ಕೆಂದಳಿರ ಕೈಬೀಸಿಗೆ ಎನ್ನುತ್ತಾ ರಂಗವನ್ನು ಚೈತನ್ಯದ ಅನುಭೂತಿಗೆ ಎಲ್ಲರನ್ನು ಅಣಿಗೊಳಿಸುತ್ತಾಳೆ
‘ತುಂಬು ಚಂದ್ರನ ಜೊನ್ನದೊಲವೊಳು ಬಂತಿದಿಗೋ ಬೇಸಗೆ’ ಎನ್ನುತ್ತಾ ಬೆಳದಿಂಗಳ ಮೂರ್ತಿ ಚಂದ್ರನನ್ನು ಆರಾಧಿಸುವ ರೀತಿ ಪ್ರಕೃತಿಯ ಆರಾಧನೆಯ ರೀತಿಯಾಗಿಯೇ ಹರಿದಿದೆ.
ಚಂದ್ರನ ಬೆಳದಿಂಗಳನ್ನು ಎಚ್ಚರವಾಗಿದ್ದೂ ಸುಪ್ತವಾಗಿರುವ, ರಂಜಿಸುತ್ತಿದ್ದರೂ ನಿರ್ಲಿಪ್ತವಾಗಿರುವ, ಜತ್ತನ್ನೂ ಬೆಳಗುತ್ತಿದ್ದರೂ ವಿಶ್ರಾಂತವೂ ಶಾಂತವೂ ಅನ್ನುವ ಹಾಗೆ ಹೇಳಿರುವುದು ಧ್ಯಾನಸ್ಥ ಮೌನವನ್ನು ಹೇಳುತ್ತದೆ. ಚಂದ್ರನನ್ನು ;ಭಾವದೀಪ; ಅನ್ನುವುದಕ್ಕೂ ಕವಿ ಇಲ್ಲಿ ಬಣ್ಣನೆ ಮಾಡಿರುವುದಕ್ಕೂ ಹಾಲು-ಜೇನಿನ ಮಿಳಿತವಿದೆ.
ನೃತ್ಯ ರೂಪಕ ಮುಂದುವರೆಯುತ್ತಿದ್ದಂತೆ ಕೋಗಿಲೆಯ ಇಂಪಾದ ಧ್ವನಿಯೂ ಕೇಳಿಸುತ್ತದೆ. ಸೂತ್ರಧಾರ ಸೃಷ್ಟಿಯ ಚೆಲುವನ್ನು ಆರಾಧಿಸುವಂತೆ ‘ಧ್ವನಿ ನಿನ್ನದೋ ಕೋಗಿಲೆಯದ್ದೋ’ ಎಂದು ಕೇಳೀದಾಗ ನಟಿ “ ಯಾವ ಕೋಗಿಲೆ ಕೂಗಿದರೂ ನನ್ನರಕೆ ನಿನಗಾಗದು” ಎನ್ನುತ್ತಾಳೆ. ಅಂದರೆ ಹೆಣ್ಣಿನ ಮನಸ್ಸನ್ನು ಹೇಗೆ ಅರಿಯಲು ಸಾಧ್ಯವಿಲ್ಲವೋ ಅಂತೆಯೇ ಪ್ರಕೃತಿಯ ಆಂತರ್ಯವನ್ನು ಅರಿಯಲು ಸಾಧ್ಯವಿಲ್ಲ ಎಂಬ ಸೂಕ್ಷ್ಮವನ್ನು ದಾಖಲಿಸುತ್ತಾಳೆ.
ಅಷ್ಟರಲ್ಲಿ ಉತ್ಸವ ಹೊರಟು ಬರುತ್ತಿರುವ ಖಾತ್ರಿಯಾಗುತ್ತದೆ ಆ ಸಂದರ್ಭದಲ್ಲಿ ನಟಿ “ನೆರವಿಯನ್ನು ನರೆಯಿಸಬೇಕು” ಎನ್ನುವ ಮಾತುಗಳನ್ನು ಹೇಳುವುದು ಒಂದರ್ಥದಲ್ಲಿ ಬದ್ಧತೆಯನ್ನು, ಪದಲಾಲಿತ್ಯದ ಪರಿಯನ್ನು ಅನಾವರಣಗೊಳಿಸುತ್ತದೆ.
ಅಷ್ಟರಲ್ಲಿ ತರುಣ-ತರುಣಿಯರ ಗುಂಪು ಪ್ರವೇಶಿಸುತ್ತದೆ ತರುಣ ತರುಣಿಯರರು ಅನ್ನುವುದನ್ನು ಕಾದಲ್- ಕಾದಲೆಯರ್ ಅನ್ನು ಮಾತುಗಳಿಂದಲೂ ಹೇಳಿದ್ದಾರೆ ಅಂದರೆ ಈ ಪ್ರಕೃತಿಯೂ ತಾರುಣ್ಯಪೂರ್ಣವಾಗಿ ಭಗವಂತನ ಪೂರ್ಣಕರುಣೆಯನ್ನು ಅನುರಣಿಸಲು ಅನುವುಗೊಂಡಿದೆ ಅನ್ನುವ ವಿಚಾರವನ್ನು ಸ್ಫುಟಗೊಳಿಸುತ್ತದೆ.
‘ ಕೋಗಿಲೆಯು ಕುಕಿಲುತಿದೆ ಬನ್ನಿರೆಂದೀಗಲೆ’ ಎಂದು ಮತ್ತೆ ಮತ್ತೆ ಕೇಳಿ ಬರುವ ಮಾತು ಚಂದನೋತ್ಸದ ಸಂತಸವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ.
ಸೂತ್ರಧಾರ ಇದೇ ಸಮಯಕ್ಕೆ ಸರಿಯಾಗಿ ‘ಈ ಕಾಡು, ಈ ನಾಡು, ಈ ಗುಡಿ, ಈ ಜನ ಈಸಂಜೆ ಈ ತಂಪು ಬನದ ಕಂಪು ಎಲ್ಲವೂ ಋತುಧರ್ಮವನ್ನು ಸಾರುತ್ತಿದೆ’ ಎನ್ನುವುದಕ್ಕೂ. ಪ್ರಾಣ ಪ್ರೇರಕ ಶಕ್ತಿಯಾಗಿರುವ ಹೊಸ ಚೈತನ್ಯವನ್ನು ತರುಣ ತರುಣಿಯರು
ಅಕ್ಕಕ್ಕು ಕೋಗಿಲೆ ಕುಕಿಲುತಿದೆ
ತಿರೆಯೊಳು ನಂದನ ಗಂಧನ…….. ಎಂದು ವರ್ಣಿಸುತ್ತಾರೆ.
ಹಾಡಿನ ನಡುವೆ ತರುಣಿಯರು ‘ಮಾಧವೋತ್ಸಾಂಕ ಮಲ್ಲಿಕಾ’ ಅಂದರೆ ತರುಣರು “ಸ್ಫುರನ್ಮನೋವಿಲಾಸ ಝಲ್ಲಕಾ” ಎನ್ನುತ್ತಾರೆ ಅರ್ಥಾತ್ ಪ್ರಕೃತಿ –ಪುರುಷರ ಪರಿಪ್ರೇಕ್ಷನ್ನು ಒಟ್ಟಂದದಲ್ಲಿ ಸ್ಥಾಪಿತಗೊಳಿಸುತ್ತದೆ. ಅಷ್ಟರಲ್ಲಿ ಒಕ್ಕೊರಲಿನಿಂದ ‘ಕುಕಿಲುತಿದ ಕೋಗಿಲೆ ಕುಕಿಲುತಿದೆ ಕೋಗಿಲೆ’ ಎಂಬ ಧ್ವನಿ ಕೇಳಿ ಬರುತ್ತದೆ.
ಈ ಸಂದರ್ಭದಲ್ಲಿ ಮಾನವರು ಇದ್ದಾರೆ ಮಾಧವನಿಲ್ಲ ಎಂಬ ಎಚ್ಚರದಲ್ಲಿ ಹಾಡೊಂದು ಸಂಜೆ ನಕ್ಷತ್ರ ಮಿಂಚಿದಂತೆ ಮಿಂಚಿ ನೇಪಥ್ಯಕ್ಕೆ ಸರಿಯುತ್ತಿದೆ ಮೂಲ ಉತ್ಸವವನ್ನೆ ಮರೆತವಲ್ಲ ಎನ್ನುತ್ತಾನಾವು ವಸಂತೋತ್ಸವವನ್ನು ಸ್ವಾಗತಿಸಬೇಕು ಎನ್ನುತ್ತಾರೆ. ಇದನ್ನೇ ಜಿ.ಎಸ್.ಎಸ್ ವಸಂತ ಬಂದಿದೆ ಸಖಿಯೇ….. ಎಂದಿರುವುದು.
ಅದಕ್ಕೆ ಪೂರಕವೆಂಬಂತೆ ವಸಂತ ಚಂದನ
ನಂದನ ಗಂಧವ ಸೂಸುತಿಹ
ನಂದನದೊಳಂಜಲಿಯೊಳು ಕೊಳುವೆಲರಿನ
ವಸಂತ-ಚಂದನ ಎಂಬ ಸುಂದರ ಸಾಲುಗಳು ಲಾಸ್ಯವಾಡುತ್ತವೆ. ಉತ್ಸವವೇ ಮುಖ್ಯ ಎನ್ನುವುದು ಇಲ್ಲಿ ಪರಮಾತ್ಮನ ಆರಾಧನೆ ಮುಖ್ಯ ಎಂಬುದನ್ನು ಸಾಧಿಸುತ್ತದೆ.
ನೀಲದ ತಂಪ ತರುವ ತಂಗಾಳಿ
ಚಂದನಗಂಧಕದರ ವೈಹಾಳಿ
ಕಾತರಿಸುವ ಕೋಗಿಲೆಯ ದನಿ ಕೇಳಿ “ಚಿತ್ತಕ್ಕಿಟ್ಟ ಚಿತ್ತಜನಿದೋ ದಾಳೀ” ಎನ್ನುತ್ತಾ ಮನ್ಮಥನನ್ನು ಕರೆಯುವುದನ್ನು ಮರೆಯುವುದಿಲ್ಲ. ತರುಣಿಯರು ‘ತರುಗಳ ಪ್ರಸೂನಹಾಸ’ ಎಂದರೆ ತರುಣರು “ಹೊಳೆವೀ ನೀರಿನ ಮಲೆವೀ ಗಾಳೀ ಬಂದೀ ಮಾಮರದೊಳಗೆ ಬಸಂತ ದೊಳಗೆ” ಎಂದು ಹಾಡುತ್ತಾರೆ. ಒಟ್ಟಾರೆಯಾಗಿ . ‘ವಸಂತ ಚಂದನ’ ಕೃತಿ ಗೋಧೂಳಿ ಸಮಯದಿಂದ ಬೆಳದಿಂಗಳ ಸವಿಯೊಲವನ್ನು ವಿಸ್ತಾರವಾಗಿ ಹೇಳುತ್ತದೆ.
ನಂದನವನವನ್ನು ಹೂದೋಟ, ಉದ್ಯಾನವನ ಎಂದು ಹೇಳುವುದರ ಸಂಗಡ ‘ಬಳ್ಳಿವಾಡು’ ಎಂದು ಕರೆದಿರುವುದು ವಿಶೇಷವಾಗಿದೆ ಏಕಕಾಲಕ್ಕೆ ಉದ್ಯಾನವನ ಮತ್ತು ಹಾಡು ಎನ್ನುವ ಅರ್ಥವನ್ನು ಕೊಡುತ್ತದೆ. ಅಷ್ಟರಲ್ಲಿ ಲೋಕ ಸಹಜವಾದ ಮಾನವನ ಮನಸ್ಥಿತಿಯನ್ನು ಕುರಿತು ಸೂತ್ರಧಾರ “ಉತ್ಸವದಲ್ಲಿ ಪಾಲ್ಗೊಳ್ಳಲು ಮನಸ್ಸಿಲ್ಲ ಉತ್ಸವ ಸಂಪನ್ನವಾದ ಮೇಲೆ ಉತ್ಸವದಲ್ಲಿ ಭಾಗಿಯಾಗುವ ಮನಸ್ಸಾಗುತ್ತದೆ” ಎಂದು ಹೇಳುವುದು ಅಡಿಗರ ‘ಇದ್ದುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೆ ಜೀವನ’ ಎಂಬ ಮಾತನ್ನು ನೆನಪಿಸುತ್ತದೆ. ಬಾನಿನ ತಿಳಿ ಬಣ್ಣ ಮನಸ್ಸಿನ ಪ್ರಶಾಂತತೆಯನ್ನೂ ಬದಲಾಗುವ ಬಣ್ಣಗಳು ಮನಸ್ಸಿನ ಸಂಕ್ಷೋಭೆಯ ದ್ಯೋತಕವಾಗಿದೆ ಎಂಬುದನ್ನು ಇಲ್ಲಿ ಹೇಳುತ್ತಾರೆ. ಜಗತ್ತಿನ ಸೌಂದಾರ್ಯಾನುಭೂತಿ ಸ್ವಾರ್ಥವಲ್ಲ ಜಗತ್ತಿನ ಪ್ರತಿ ಜೀವಕ್ಕೂ ಅದನ್ನು ಅನುಭವಿಸುವ ಹಕ್ಕಿದೆ ಎಂಬ ಸತ್ಯವನ್ನು ಕವಿ ಸೂತ್ರಧಾರನ ಮೂಲಕ ಹೇಳಿಸಿರುವುದು ಅನನ್ಯವಾಗಿದೆ.
ವಸಂತೋತ್ಸವ ಮುಂದುವರೆದಂತೆ ಹಳ್ಳಿಗರ ಪ್ರವೇಶವಾಗಿ ಅವರೂ
ಬಾರಣ್ಣ ಬೆಳದಿಂಗಳೆ
ಬಂದು ಸೇರಣ್ಣ ಬೆಳದಿಂಗಳೆ
ತಿಂಗಳೇ ತಿಂಗಳೇ ಬೆಳು ಬೆಳುದಿಂಗಳೆ ಎಂದರೆ
ಇನ್ನೊಂದು ಗುಂಪು ಮನದ ಮಾತು ಪಿಸುಮಾತಾದಂತೆ, ಮೆಲುಮಾತಾದಂತೆ, ಸಂಕಲ್ಪದ ಧ್ವನಿಯಾದಂತೆ ಏರುಧ್ವನಿಯಾದಂತೆ ನೃತ್ಯೋನ್ಮತ್ತವಾದಂತೆ
ಕೋಲೇ ಕೋಲಣ್ಣ ಕೋಲೆ
ಬಾಲೆಯರಾಟಕೆ ಬಾರಣ್ಣ ಬೆಳದಿಂಗಳೇ
ನೀ ಜತೆ ಕೋರಣ್ಣ ಬೆಳದಿಂಗಳೆ ಎಂದು ಹಾಡುತ್ತಾರೆ. ಭಕ್ತಿಯ ಪಾರಮ್ಯಹಾಗು ಶೃಂಗಾರದ ವೈಭವ ಏಕ ಕಾಲಕ್ಕೆ ಮೇಳೈಸಿವೆ.
ಹಾಲು ಬೆಳದಿಂಗಳು ಮಧು, ಮಾಧವ ಮಧುರೋತ್ಸವ, ಹರಿಚಂದನದೊಸಗೆ , ಮಧು ಮಧನ , ಮಧುವನದೊಳು ಮುದವೇರಿದೆ ಎನ್ನುವಮಾತುಗಳು ವಸಂತೋತ್ಸವದ ಪರಾಕಷ್ಟೆಯ ಸನ್ನೆಯಾಗಿವೆ. ಈ ನಡುವೆ ವ್ಯಕ್ತಿ “ಈ ವಸಂತೋತ್ಸವ ಇಡೀ ದಿನವಿರುತ್ತದೆ ನಾಳೆ ಇಲ್ಲ ಅನ್ನುವ ಹಾಗಿಲ್ಲ ನಾಳೆಯೂ ಇರುತ್ತದೆ ಬರುವ ವರ್ಷವೂ ಇರುತ್ತದೆ ಎಂದೆಂದಿಗೂ ಇರುತ್ತದೆ” ಎಂದು ಪ್ರಕೃತಿ ಚಿರಂಜೀವಿ ಮಾನವ ಕ್ಷಣಿಕಬಂಧು ಎಂಬ ಕವಿಯಂತರ್ಗತ ತತ್ವವನ್ನು ಸ್ಫುಟಪಡಿಸುವುದು ಬಹಳ ಮಾರ್ಮಿಕವಾಗಿದೆ. ಇದನ್ನೇ ಬೇಂದ್ರೆಯವರು ‘ಬಾನ್ ಹೊಗರಲುಂಟು ಮರ ಚಿಗುರಲುಂಟು’ ಎಂದಿರುವುದು. ಲೌಖಿಕವಾಗಿ ವಸಂತೋತ್ಸವದಲ್ಲಿ ಬಾಗಿಯಾಗುವ ತರುಣ -ತರುಣಿಯರು ಕಡೆಗೆ ನಾ-ರಾಘವ, ನಾ-ಜಾನಕಿ,ಅಜ- ನಾ ಇಂದುಮತಿ-ನಾ, ನಳ-ನಾ ದಮಯಂತಿ-ನಾ ಎಂದು ಮಾಧವೋಪಾಸನೆಯಲ್ಲಿ ತೊಡಗುವುದು ಬದುಕಿನ ಪರಮ ಆರಾಧಕ ಭಗವಂತನೆ ಆಗಿರುತ್ತಾನೆ ಎಂಬ ಆತ್ಯಂತಿಕೆಯನ್ನು ಸಾಧಿಸುತ್ತದೆ. ವಸಂತೋತ್ಸವ ಇಲ್ಲಿ ಪ್ರಕೃತಿ ಆರಾಧನೆಯನ್ನು ಮೀರಿ ಏಕೋಭಾವವಾಗಿ
ಹಕ್ಕಿ ಹೊಳ ಸದ್ದಡಗಲು ಮಿಕ್ಕ ಸೃಷ್ಟಿ ಮೌನ
ಮಡುಗೊಳೆ ಸುಮ್ಮಾನ
ಬಗೆಯೊಳೆಸೆಯೆ ಗಾನ
ಎಂಬ ಮಾತು ಅತ್ಯಂತ ಮಾರ್ಮಿಕವಾಗಿ ಬಂದಿದೆ. ಜಗತ್ತು ಎಚ್ಚರಗೊಳ್ಳುವುದು ಖಗಕೂಜನದಿಂದ ಅವುಗಳ ಸದ್ದೇ ಅಡಗಿದರೆ ಸೃಷ್ಟಿ ನೀರವ ಮೌನಾಬ್ಧಿಯಲಿರಬೇಕಾಗುತ್ತದೆ. ಒಲಿದಂತೆ ಹಾಡುವ,ಹಾಡಿದಂತೆ ನರ್ತಿಸುವ ಜಗತ್ತಿನ ನಿಯಾಮಕ ಮಾಧವನಲ್ಲದೆ ಇನ್ಯಾರು. ಸೌಂದರ್ಯ ಎನ್ನುವುದು ಮಾನವನಸ್ತಿತ್ವದ ಸಂಜೀವಿನಿ ಎನ್ನುವ ಸಂದೇಶವನ್ನು ಇಲ್ಲಿ ಸಾದ್ಯಂತವಾಗಿ ಹೇಳಿದ್ದಾರೆ.
ಕಡೆಯದಾಗಿ ಸೂತ್ರಧಾರನಿಂದ ಕವಿ
ಕವಿಯ ಕನಸು ಕವಿಗಿರಲಿ
ಅದರ ನನಸು ನಮಗಿರಲಿ
ಕನಸು ನನಸುಗಳ ಸವಿ ಪ್ರೇಕ್ಷಕರಿಗಿರಲಿ
ಎನ್ನುವುದು ವಸಂತೋತ್ಸವದ ಸಂಪನ್ನತೆಯನ್ನು ‘ವಸಂತ ಚಂದನ’ ಕೃತಿಯ ಸಂಪನ್ನತೆಯನ್ನು ಏಕಕಾಲಕ್ಕೆ ದರ್ಶಿಸುತ್ತದೆ.
‘ಪ್ರಕೃತಿಯಿಂದ ಹೊರಗಿನವಾರು ಸೃಷ್ಠಿಯಲಿ’ ಎನ್ನುವ ಡಿ.ವಿ.ಜಿಯವರ ಮಾತು ನೂರಕ್ಕೆ ನೂರು ಸತ್ಯ ಎನ್ನುವುದನ್ನು ಸಾಧಿಸಿದೆ. ಸಾಮಾನ್ಯ ಕೇಳುಗರಿಗೆ ನೋಡುಗರಿಗೆ ಇದೊಂದು ನೃತ್ಯ ರೂಪಕ ಆದರೆ ಭಾಷಾ ಮೋಹಿಗಳಿಗೆ ಇದು ತತ್ಸಮ ತದ್ಭವಗಳ ಸಮಾನಾರ್ಥಗಳ ತವನಿಧಿಯೇ ಆಗಿದೆ ಉದಾಹರಣೆಗೆ ಅಲರ್, ನನೆ,ಮೊನೆ,ಮನ್ನೆ ವೈಹಾಳೀ ಬಸಂತ, ಜೊನ್ನ ,ಚಿತ್ತಜ, ಕಂದರ್ಪ, ಮನ್ಮಥ, ಮಧು,ಮಥನ ಸೊಗ,ಖಗ, ತರು ಪದಗಳನ್ನು ಉದಾಹರಿಸಬಹುದು.
‘ವಸಂತ ಚಂದನ’ ಹೆಸರೇ ಹೇಳುವಂತೆ ಪ್ರಕೃತಿ ಹಳತನ್ನು ಬಿಟ್ಟು ಹೊಸತನ್ನು ಪಲ್ಲವಿಸುವಂತೆ ಮಾನವನ ಮನಸ್ಸು ಸಹ ಹಳೆಯ ನಿಸ್ತೇಜದ ನೆನಪನ್ನು ಕಳಚಿ ಭ್ರಮರಿಯಂತೆ ನವನವೋನ್ಮೇಷಶಾಲಿಯಾದ ಪ್ರಕೃತಿಯೊಡನೆ ವಿಹರಿಸಬೇಕು ಎನ್ನುವ ಸಂದೇಶವನ್ನು ನೀಡುತ್ತದೆ. ‘ನೃಪತಿಗೆ ಆತ್ಮವಿಚಾರವೂ ಬೇಕು ಭೋಗವಿಚಾರವೂ ಬೇಕು’ ಎಂಬಂತೆ ವಸಂತವೆಂದರೆ ಶೃಂಗಾರ ಶೃಂಗಾರದ ತುತ್ತತುದಿ ವೈರಾಗ್ಯ ಎಂಬ ಸೂಕ್ಷ್ಮವನ್ನು ಅರುಹಿದೆ . ಪ್ರಕೃತಿ ಮತ್ತು ಪರಮಾತ್ಮರ ಆರಾಧನೆ ವಸಂತ-ಚಂದನದ ಉದ್ದೇಶವಾಗಿದೆ.
ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಅಳಿಯ ದೇವೋಭವ !