ಸುಮಾವೀಣಾ ಅವರು ಮೂಲತ: ಮಡಿಕೇರಿಯವರು ಪ್ರಸ್ತುತ ಹಾಸನದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕಿ. ಸಾಹಿತ್ಯದ ಓದು ಹಾಗೂ ಬರಹಗಳಲ್ಲಿ ಅಪಾರ ಆಸಕ್ತಿ. ಸೂರ್ಪನಖಿ ಅಲ್ಲ ಚಂದ್ರನಖಿ, ಮನಸ್ಸು ಕನ್ನಡಿ, ಲೇಖಮಲ್ಲಿಕಾ, ಭಾವಪ್ರಣತಿ, ನುಡಿಸಿಂಚನ, ಇಳಾದೀಪ್ತಿ, ಮಧುರಾನುಭೂತಿಯ ಬುಟ್ಟಿ ಪ್ರಕಟವಾಗಿರುವ ಪುಸ್ತಕಗಳು. ಇವರ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಹಾಗೂ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ISBN,ISSN ನಂಬರ್ಗಳಲ್ಲಿ ಹತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರದಿಂದ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗು ಚಿಂತನ ವಿಭಾಗದಲ್ಲಿ, ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.೨೦೧೯ ರ ಡಿಸೆಂಬರ ತಿಂಗಳಲ್ಲಿ ‘’ನಲವಿನ ನಾಲಗೆ’” ಎಂಬಪ್ರಬಂಧ ಸಂಕಲನ ಹೊರತಂದಿದ್ದಾರೆ.
ಅಚ್ಚಕನ್ನಡದ ಬನಿಯುಳ್ಳ ಕಾದಂಬರಿ ನೀಲಕಿನ್ನರಿ ಮತ್ತು ಸೂತ್ರದ ಗೊಂಬೆ
ಮೂಲ ಇಟಲಿಯ ಕಾರ್ಲೋಕೊಲೌಡಿ
ಕನ್ನಡಕ್ಕೆ ರಜನಿ ನರಹಳ್ಳಿ
ಪ್ರಕಾಶಕರು ;ಅಭಿನವ ಪ್ರಕಾಶನ ಬೆಂಗಳೂರು
ಬೆಲೆ 150 ರೂಗಳು
ಕೊರೊನಾ ಎರಡನೆ ಅಲೆ ,ಎರಡನೆ ಲಾಕ್ಡೌನ್ ಊಹಿಸಲಾಗದ ಆರೋಗ್ಯ ತುರ್ತುಪರಿಸ್ಥಿತಿ ಇರುವ ಈ ಹೊತ್ತಿನಲ್ಲಿ ಮನೋಲ್ಲಾಸವನ್ನು ಹೆಚ್ಚಿಸುವ ಮಕ್ಕಳ ಕಾದಂಬರಿಯೊಂದು ರಜನಿ ನರಹಳ್ಳಿಯವರಿಂದ ಇಟಲಿ ಭಾಷೆಯಿಂದ ಕನ್ನಡಕ್ಕೆ ಬಂದಿದೆ. ಹೆಸರಿಗೆ ಮಕ್ಕಳ ಕಾದಂಬರಿ ಆದರೂ ಹಿರಿಯರು ಕಿರಿಯರಿಗೆ ಓದಿ ಹೇಳಬಹುದಾದ ಜೊತೆಗೆ ತಮ್ಮ ಬಾಲ್ಯದ ದಿನಗಳನ್ನು ನೆನಪಿಸುವ ಆ ಬಾಲ್ಯದ ಒಮ್ಮೆ ತಿರುತಿರುಗಿ ನೋಡಲೇಬೇಕು ಎಂದೆನಿಸಿ, ಹಳೆಯ ನೆನಪುಗಳ ಬುತ್ತಿಯನ್ನು ಮಕ್ಕಳೊಂದಿಗೆ ಹಂಚಿಕೊಳ್ಳಲೂ ಪ್ರೇರೇಪಿಸುವ ಪುಸ್ತಕವಾಗಿದೆ. ಈ ಪುಸ್ತಕದ ಶೀರ್ಷಿಕೆಯೇ ಸೊಗಸಾಗಿದೆ. ನೀಲ ಕಿನ್ನರಿ, ಕಿನ್ನರಿ ಎಂದರೆ ಸುಂದರ ಭ್ರಮಾಲೋಕಕ್ಕೆ ನಮ್ಮನ್ನು ಕರೆದೊಯ್ಯುವ ಪದ, ಇನ್ನು ಸುತ್ರದ ಗೊಂಬೆ ಹಳಬರಿಗೆ ಮಾತ್ರ ಗೊತ್ತಿರುವಂಥದ್ದು ಈಗಿನ ಮಕ್ಕಳ ಭಾಷೆಯಲ್ಲಿ ಪಪೆಟ್. ಆನಂದ ವಿ. ಪಾಟೀಲ ಅವರ ಮುನ್ನುಡಿಯೊಂದಿಗೆ ಓದುಗರನ್ನು ಕಿನ್ನರ ಲೋಕಕ್ಕೆ ಕರೆದೊಯ್ಯುತ್ತದೆ ಎಂದರೆ ತಪ್ಪಿಲ್ಲ. ಉದ್ದ ಕೋಲು ತೋರಿಸಿ ಹೆದರಿಸುವುದು, ಇಪ್ಪತ್ತು ಮೂವತ್ತು ಬಸ್ಕಿ ಹೊಡೆಸಿ, ಕುರ್ಚಿ ಕೂರಿಸುವುದು ಇತ್ಯಾದಿಗಳೆಲ್ಲ ಮಕ್ಕಳಿಗೆ ಕೊಡುವ ಶಿಕ್ಷೆಗಳು ಇದರ ಹಿಂದೆ ಇರುವ ಕಾರಣ ಮಕ್ಕಳನ್ನು ತಿದ್ದುವುದಷ್ಟೆ. ಇಷ್ಟೆಲ್ಲಾ ಕಷ್ಟ ಯಾಕೆ ಮೊಬೈಲ್ ಒಳಹೊಕ್ಕೇ ಬಿಡುತ್ತ ವೇನೋ ಅನ್ನುವ ಮಕ್ಕಳನ್ನು ಆಚೆಗೆ ತರಲು ಇದೊಂದು ಪುಸ್ತಕ ಸಾಕು ಅನ್ನಿಸುತ್ತದೆ. ಆಟದ ಜೊತೆ ಪಾಠ ಅನ್ನುವಂತೆ ಇಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ತಮಾಷೆಯ ಜೊತೆಗೆ ಮಕ್ಕಳಿಗೆ ಹಿತವಾಗಿ ನೀತಿಯನ್ನು ಹೇಳುತ್ತವೆ. ಸುಳ್ಳು ಹೇಳಬಾರದು ಹಿರಿಯರು ಹೇಳಿದ ,ಮಾತನ್ನು ಕೇಳ ಬೇಕು , ದುಷ್ಟರ ಸಹವಾಸ ಮಾಡಬಾರದು, ಮನಸ್ಸಿಗೆ ಹೊಳೆದದ್ದಲ್ಲ ಬುದ್ಧಿಗೆ ಹೊಳೆದದ್ದನ್ನು ಮಾಡಬೇಕು ಇತ್ಯಾದಿ ಮೌಲ್ಯಗಳು ಈ ಕಾದಂಬರಿಯ ಉದ್ದಕ್ಕೂ ಇವೆ.
ಕೃತಿಯ ಪ್ರಾರಂಭವೇ ಅತ್ಯಂತ ಚೇತೋಹಾರಿಯಾಗಿದೆ. ಇಲ್ಲಿನ ವರ್ಣನೆಗಳು ಕಿನ್ನರಲೋಕದ ಸುಂದರ ಕಲ್ಪನೆಯನ್ನು ಮೂಡಿಸುತ್ತವೆ. ವ್ಯರ್ಥ ಮರದ ಕೊರಡು ಸೊಣ್ಣಪ್ಪನಾಗಿ ರೂಪುಗೊಳ್ಳುವುದೇ ಅದ್ಭುತ . ಪ್ರಾರಂಭದಲ್ಲಿ ಬಡಗಿ ಅರ್ಥಾತ್
ಬಡಗಿಯ ಜೊತೆ ಸಂವಹನ ನಡೆಸುವುದು ಅಸಂಗತ ಅನ್ನಿಸಿದರೂ ಕಾದಂಬರಿಯ ಕಡೆಗೆ ಸಂಗತ ಅನ್ನಿಸುತ್ತದೆ. (ಸೊಣ್ಣಪ್ಪ ಗೊಂಬೆಯಿಂದ ಬಾಲಕನಾಗಿ ಬದಲಾದಾಗ ) ಸುಮಾರು ಮೂವತ್ತೆಂಟು ಅಧ್ಯಾಯಗಳಲ್ಲಿ ಮೈ ಹರವಿಕೊಂಡಿರುವ ಕಾದಂಬರಿ ನಿರ್ಗಳವಾಗಿ ಓದಿಸಿಕೊಂಡು ಹೋಗುತ್ತದೆ.
ಮನುಷ್ಯ ನಾಗರಿಕ ಜಗತ್ತಿಗೆ ಬಂದ ನಂತರವೇ ಪ್ರಾಣಿಯನ್ನು ಮನೆಯ ಹೊರಗಿಟ್ಟಿರುವುದು . ಅದಕ್ಕೂ ಮೊದಲು ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳ ಜೊತೆಗೆ ಬದುಕುತ್ತಿದ್ದ. ಇಲ್ಲಿ ಬರುವ ಸೋಮಾರಿ ಸೊಣ್ಣಪ್ಪ ಮಾನವರ ಜೊತೆಗೆ ಸಂಪರ್ಕಕ್ಕೆ ಬರುವುದಕ್ಕಿಉಂತ ಎರೆಹುಳುವುನಿಂದ ಹಿಡಿದು ದೈತ್ಯ ತಿಮಿಂಗಿಲದವರೆಗೆ ಎಲ್ಲಾ ಜೀವಿಗಳೊಂದಿಗೆ ಮುಖಾಮುಖಿಯಾಗುತ್ತಾನೆ.
ಮತ್ತೆ ಮತ್ತೆ ಎಡವಟ್ಟುಗಳನ್ನು ಮಾಡಿಕೊಳ್ಳುವ ಆತ ಕೊರಡು ಕೊನರಿದಂತೆ ಜವಾಬ್ದಾರಿಯುತನಾಗುತ್ತಾನೆ. ಗೆಳೆಯ ಗಪ್ಪುವಿಗೆ ನೆರವು ಅನ್ನು ಅಧ್ಯಾಯದಲ್ಲಿ ಟೋಪನ್ ಪರಸ್ಪರ ಕೈಯಲ್ಲಿ ಹಿಡಿದುಕೊಳ್ಳುವ ಪ್ರಸಂಗವಂತೂ ಎಂಥವರಲ್ಲಿಯೂ ನಗು ತರಿಸುತ್ತದೆ. ಸೊಣ್ಣಪ್ಪನನ್ನು ಬದಲಾಯಿಸಲು ಪ್ರಯತ್ನಿಸುವುದು ನೀಲಕಿನ್ನರಿ ಕಡೆಗೆ ಆಕೆ ತಾಯಿಯಾಗುತ್ತಾಳೆ. ಗೊಂಬೆಯ ರೂಪ ಕೊಟ್ಟ ಬಡಗಿ ತಂದೆಯಾಗುತ್ತಾನೆ. ಕುದುರೆ ಹುಳ ಸೊಣ್ಣಪ್ಪನನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತದೆ ಮೊದಲೆ ಪೋಕರಿ, ಸೋಮಾರಿ ಸೊಣ್ಣಪ್ಪ ಕೇಳುವುದಿಲ್ಲ ಅದನ್ನು ಮಣ್ಣಲ್ಲಿ ಹೂಳುವ ಪ್ರಸಂಗ ಚಮತ್ಕಾರಿಯಾಗಿದೆ. ಮೊದಲೆ ಮರದ ಕಾಲುಗಳು ಅವುಗಳು ಸುಡುವುದು ಹಾಗಾಗಲು ಕಾರಣವೇನು ಎನ್ನುತ್ತಾ ಸುಳ್ಳು ಹೇಳುವಾಗ ಅವನಿಗೆ ಅರಿವಿಲ್ಲದೆ ಮೂಗು ಉದ್ದಕ್ಕೆ ಬೆಳೆಯುವುದು ಮತ್ತೆ ನಿಜ ಹೇಳುವುದು ಕಾದಂಬರಿಯಲ್ಲಿರುವ ಕುತೂಹಲವನ್ನು ಇಮ್ಮಡಿಸುತ್ತವೆ. ಶಾಲೆ ಎಂದರೆ ಶಿಕ್ಷೆ ಎಂದೇ ಅನ್ವಯಿಸಿ ಹೆದರುವ ಮಕ್ಕಳಿಗೆ ಓದಿಗೆ ವಿಮುಖರಾದರೆ ಯಾವೆಲ್ಲ ಪಡಿಪಾಟಲನ್ನು ಪಡೆಯಬೇಕಾಗುತ್ತದೆ ಎಂಬುದನ್ನು ವಿವರಿಸಿ ಶಾಲೆ ಅಂದರೆ ಶಿಕ್ಷಣ ಎಂಬುದನ್ನು ಸೌಮ್ಯವಾಗಿ ಅರುಹುವ ಪ್ರಯತ್ನ ಇಲ್ಲಿದೆ.
ಗೊಂಬೆ ಆಟ ನೋಡಲು ಕೋಟನ್ನು ಮಾರುವುದು ಅಲ್ಲಿ ಆಟದ ಟೆಂಟಿನಲ್ಲಿ ತನ್ನ ಬಂಧುಗಳೆನ್ನೆಲ್ಲ ನೋಡುವುದು ಕಡೆಗೆ ಬೆಂಕಿಜವಾನನ ಕೈಗೆ ಸಿಲುಕುವುದು ಅವನು ಚಿನ್ನದ ನಾಣ್ಯಗಳನ್ನು ಕೊಡುವುದು.ಅದನ್ನು ತಂದ ಸೊಣ್ಣಪ್ಪ ಕುಂಟ ನರಿ ಮತ್ತು ಕುರುಡು ಬೆಕ್ಕಿನ ಕುತಂತ್ರಕ್ಕೆ ಬೀಳುವುದು ಮತ್ತೆ ಮರುಮೋಸ ಹೋಗಿ ನಾಣ್ಯವನ್ನು ದುಡ್ಡಿನ ಗಿಡಕ್ಕಾಗಿ ಬಿತ್ತುವುದು ಇವೆಲ್ಲಾ ಸೊಗಸಾಗಿ ಮೂಡಿಬಂದಿವೆ. ಏಡಿಯ ಸಹವಾಸ, ಮುಸುಕುಧಾರಿಗಳ ಕೈಯಲ್ಲಿ ಸಿಲುಕಿ ಬಾಯಿ ಬಿಡದೇ ಇರುವುದು ತುಂಟ ಸೊಣ್ಣಪ್ಪನ ಚಾಣಾಕ್ಷತನವನ್ನು ಹೇಳಿದರೂ ಪದೇ ಪದೇ ಮನಸ್ಸಿನ ಚಂಚಲತೆಗೆ ಬುದ್ಧಿಯನ್ನು ಕೊಟ್ಟ ಸಂಕಷ್ಟಗಳಲ್ಲಿ ಸಿಲುಕುವುದು ಜೋಳ ಮುರಿದು ತಿನ್ನಲು ಹೋಗಿ ರೈತನ ಬಂಧಿಯಾಗುವುದು.ಕೋಳಿ ಕಳ್ಳರನ್ನು ಹಿಡಿದು ಕೊಡುವ ಸನ್ನಿವೇಶ, ಮೋಸ ಮಾಡಿದ ನಾಯಿಯ ಕುತಂತ್ರವನ್ನು ಬಯಲಿಗೆ ಎಳೆಯದೆ ಇರುವುದು ಚೆನ್ನಾಗಿದೆ. ಇವುಗಳನ್ನು ಮಕ್ಕಳು ಓದುತ್ತಾ ಹೋದಂತೆ ಅವರಲ್ಲಿರುವ ಲಿಟಲ್ ಹೀರೋಗಳು ಇನ್ನಷ್ಟು ತುಂಟಾಟ ಮಾಡಲು ಪ್ರೇರೇಪಣೆ ಹೊಂದುತ್ತಾರೆ ಅನ್ನಿಸುತ್ತದೆ.
ಸೊಣ್ಣಪ್ಪ ಸಿಲುಕುವ ಪೇಚುಗಳಿಗೆ ಇಲ್ಲಿ ರಜನಿ ನರಹಳ್ಳಿಯವರು ಮಂಕುದಿಣ್ಣೆ ಸೊಣ್ಣಪ್ಪ, ಕಾಪಾಡಿದ ಕರಿನಾಯಿ, ಮನಸ್ಸು ಬದಲಿಸಿದ ಹಂಚಿನ ಕಡ್ಡಿ, ಸೋಜಿಗದ ನಗರದತ್ತ ಸೊಣ್ಣಪ್ಪನ ಪಯಣ ಇತ್ಯಾದಿ ಹೆಸರುಗಳನ್ನು ಕೊಟ್ಟು ಓದುಗರನ್ನು ಆಕರ್ಷಿಸಿದ್ದಾರೆ ಎನ್ನಬಹುದು.
ಕತ್ತೆಗಳಾಗಿ ಪರಿವರ್ತನೆ ಆಗುವುದು ಅಲ್ಲಿ ದುಡಿಮೆಯ ಮಹತ್ವ ಹೇಳುವುದು ಸರ್ಕಸ್ ಕಂಪೆನಿಯಲ್ಲಿ ಕಾಲು ಮುರಿದುಕೊಳ್ಳುವುದು ಇವೆಲ್ಲಾ ಮಕ್ಕಳಿಗೆ ನೀತಿ ಪಾಠವನ್ನು ಸ್ವಾರಸ್ಯಕರವಾಗಿ ಹೇಳುವಂತಿದೆ. ತಿಮಿಂಗಿಲದ ಹೊಟ್ಟೆಯಿಂದ ಪಾರಾಗಿ ಬರುವ ಪ್ರಯಾಸಕಾರಿ ಪ್ರಸಂಗವಂತೂ ಮಸ್ತ್ ಎನ್ನಬಹುದು. ಕಾದಂಬರಿಯ ಪ್ರಾರಂಭಕ್ಕೆ ಸೊಣ್ಣಪ್ಪ ಒಂದು ಗೊಂಬೆ ಕಾದಂಬರಿ ಮಧ್ಯಾಂತರದಲ್ಲಿ ಎಡವಟ್ ಮಹಾಶಯನಾದರೂ ಕಾದಂಬರಿ ಅಂತ್ಯಕ್ಕೆ ಜವಾಬ್ದಾರಿಯನ್ನು ಕಲಿಯುವುದು ಸಾಮಾಜಿಕ ಮೌಲ್ಯಗಳನ್ನು ಹೇಳುತ್ತವೆ. ನೀಲಕಿನ್ನರಿ ಸೊಣ್ಣಪ್ಪನ ಆಟಾಟೋಪ ಮುಂದುವರೆದಂತೆ ಕೆಲವೊಮ್ಮೆ ಪ್ರೀತಿಯಿಂದ ಕೆಲವೊಮ್ಮೆ ಶಿಕ್ಷೆ ಕೊಡುತ್ತಾ ಕೆಲವೊಮ್ಮೆ ಭಾವ ತೀವ್ರತೆಯಿಂದ ಆಲಂಗಿಸುವ ಪ್ರಸಂಗ ತಾಯಿ ಮಕ್ಕಳ ಭಾಂದವ್ಯವನ್ನು ಸಂವೇದನೆಯನ್ನು ತಹತಹವನ್ನು ನೆನಪಿಸುತ್ತವೆ. ಗೊಬೆಯಿಂದ ಬಾಲಕನಾಗುವ ಸೊಣ್ಣಪ್ಪ ಜವಾಬ್ದಾರಿ ಪಡೆಯುವುದು, ದುಡಿಯುವುದು ಅಸೌಖ್ಯದ ಕಿನ್ನರಿಯನ್ನು ನೋಡುವುದು ತನ್ನ ತಂದೆಯನ್ನು ಕೋಟಿನಲ್ಲಿ ನೋಡುವ ಸುಖಭಾವ ಅದ್ಭುತವಾಗಿ ದೇಸಿ ಭಾಷೆಯಲ್ಲಿ ರಜನಿ ನರಹಳ್ಳಿಯವರು ಕೃತಿಯ ಪ್ರಾರಂಭದಲ್ಲೇ ಹೇಳುವಂತೆ ಗ್ರಾಮ್ಯ ಬನಿಯಲ್ಲೇ ನಿರೂಪಿಸಿರುವುದು ಚೆನ್ನಾಗಿದೆ. ಇಲ್ಲಿ ಅವರು ಬಳಸುವ ಭಾಷೆ ಅತ್ಯಂತ ಸರಳ ಇದರ ನಡುವೆ ಕೆಲವೊಮ್ಮೆ ಇವರು ಕೊಡಗಿನವರು ಅನ್ನುವುದನ್ನು ಸಾಬೀತು ಮಾಡುತ್ತದೆ. ಅಕ್ಕನಾಗಿ, ತಾಯಿಯಾಗಿ ಅಜ್ಜಿಯಾಗಿ ನಿರೂಪಿಸಿದ, ಓದುಗ ಮುಗ್ಧ ಮಕ್ಕಳಿಗೆ ಅರ್ಪಿಸಿದ ಪಿನೋಕಿಯೋ ಕತೆ ಇಟಲಿಯ ಕಾರ್ಲೋಕೊಲೊಡಿ ಅವರದ್ದು ಎಂದು ಅನ್ನಿಸಲಾರದಷ್ಟು ಕನ್ನಡ ಭಾಷೆಯಯ ಸೊಗಡಿನಲ್ಲಿ ಬೆರೆತಿದೆ. ಯಾವುದೇ ಪ್ರಖ್ಯಾತ ಕಾರ್ಟೂನ್ ಪಾತ್ರವನ್ನೂ ತನ್ನ ಮ್ಯಾನರಿಸಂನಿಂದಲೇ ಹಿಂದಿಕ್ಕಿ ಮುನ್ನುಗ್ಗುವ ಸೊಣ್ಣಪ್ಪ ತುಂಟ ನಾಯಕನಾಗಿ ಕಾದಂಬರಿಯ ತುಂಬೆಲ್ಲಾ ವಿಹರಿಸುತ್ತಾನೆ. ಹಿರಿಯರು ಕಿರಿಯರು ಅನ್ನುವ ಭೇದವಿಲ್ಲದೆ ಓದಿ ಸಂತಸ ಪಡುವ ಸೊಣ್ಣಪ್ಪನ ತುಂಟಾಗಳಲ್ಲೂ ಓದುಗರು ಸೊಗಯಿಸಿ ಸಂತುಷ್ಟಿ ಹೊಂದಬಹುದಾದ ಕೃತಿ ಇದು ಎನ್ನಬಹುದು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ