ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೀವಿದನ್ನೆಲ್ಲ ಮಾಡಿದರೆ…..

ವಿದ್ಯಾ ಭರತನಹಳ್ಳಿ
ಇತ್ತೀಚಿನ ಬರಹಗಳು: ವಿದ್ಯಾ ಭರತನಹಳ್ಳಿ (ಎಲ್ಲವನ್ನು ಓದಿ)

ಉಸಿರು ನಿಲ್ಲುವುದು
ಹೇಗೆ ಮತ್ತು ಯಾವಾಗ?
ನನಗೆ ಗೊತ್ತಿಲ್ಲ.ಅಕಸ್ಮಾತ್
ಯಾರಿಗೂ ಹೇಳದೆ
ವಿದಾಯ ಹೇಳಿದೆನಾದರೆ
ಸೂರ್ಯನನ್ನೇ ನೋಡದ ಜೀವಕ್ಕೆ
ನನ್ನ ಕಣ್ಣುಗಳ ಕೊಟ್ಟುಬಿಡಿ.

ನೋವೆಂದರೇನೆಂದು ಅರಿತ
ಹೃದಯಕ್ಕೆ
ಸಾಂತ್ವನಿಸಲು
ನನ್ನ ಹೃದಯವನ್ನು ಕೊಟ್ಟುಬಿಡಿ.

ಅಪಘಾತವಾಗಿ
ನುಜ್ಜುಗುಜ್ಜಾದ ಕಾರಲ್ಲಿ
ಉಸಿರಿರುವ
ಬದುಕು ಕಟ್ಟಿಕೊಳ್ಳಬೇಕಾದ
ಯುವ ಜೋಡಿಗೆ
ನನ್ನ ರಕ್ತವನ್ನು ಕೊಟ್ಟುಬಿಡಿ.
ಅವರು ಮೊಮ್ಮಕ್ಕಳು
ಆಟವಾಡುವುದನ್ನು
ನೋಡಿ ನಲಿಯಲಿ.

ನಡೆದಾಡಲಿ ಮಗುವೊಂದು
ಮುರಿದಿರದ ನನ್ನ ಎಲುಬುಗಳ
ಬಳಸಿಕೊಂಡು.

ತೊಟ್ಟು ವಿಷವೂ ಇರದ
ನನಗೆ ಸಾವಾದರೆ
ನನ್ನ ಮೂತ್ರಪಿಂಡಗಳು
ರೋಗಿಯ ವಿಷವನ್ನು
ಹೊರಹಾಕಲಿ

ಅಳಿದುಳಿದ ನನ್ನ ದೇಹವ ಸುಟ್ಟು
ಬಂದ  ಬೂದಿಯನು
ಗಾಳಿಯಲಿ ತೂರಿಬಿಡಿ
ಹೂಗಳೆಲ್ಲ ಅರಳಿಬಿಡಲಿ.

ನನ್ನ ದೇಹವ ನೀವು
ಹೂಳುವಿರಾದರೆ
ನನ್ನ ತಪ್ಪುಗಳನ್ನು
ಮತ್ತು
ಅವರಿವರ ಕುರಿತ ನಿಮ್ಮ
ಪೂರ್ವಗ್ರಹಗಳನ್ನೂ
ಜೊತೆ ಸೇರಿಸಿ
ಹೂಳಿಬಿಡಿ.

ದೆವ್ವಗಳಿಗೆ ನನ್ನ ಪಾಪವನ್ನೂ
ದೇವರಿಗೆ ನನ್ನ ಆತ್ಮವನ್ನೂ ಕೊಟ್ಟುಬಿಡಿ.

ನೀವು ನನ್ನನ್ನು ನೆನಪಿಟ್ಟುಕೊಳ್ಳ ಬಯಸಿದರೆ, ಅಗತ್ಯವಿರುವವರಿಗೊಂದು ಒಳ್ಳೆಯ ಮಾತನಾಡಿ.
ನನ್ನ ಕೃತಿಯಿಂದ ನನ್ನ
ನೆನಪಿಡಿ.
ನಾನು ಮರಣ ಹೊಂದಿದರೂ ಜೀವಂತವಿರುತ್ತೇನೆ,
ನೀವಿದನ್ನೆಲ್ಲ ಮಾಡಿದರೆ.

******

ಪ್ರೇರಣೆ: Philosophy of Life…Buji Chinoy