ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

Temple Gardens (1920) by Paul Klee. Original from The MET Museum. Digitally enhanced by rawpixel.

ನೀವು ಪ್ರಾಯಶಃ ಓದಿರದ ತಿರುಮಲೇಶ್ ಕ್ಲಾಸ್ಸಿಕ್ಸ್ – ೧

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

೧.ಬೆಲ್ಲು ಬಾರಿಸುವವ

ಲೋಕದ ಪ್ರವಾದಿಗಳನ್ನೆಲ್ಲ ಕರೆಸಿ ಕನಿಷ್ಠ
ಒಂದು ದಿನವಾದರೂ ಒಬ್ಬೊಬ್ಬರನ್ನು ಶಾಲಾ
ಬೆಲ್ಲು ಬಾರಿಸುವುದಕ್ಕಿರಿಸಿ…

ಆಗ ಗೊತ್ತಾಗುತ್ತೆ ಏನೆಂದು..?

ಏನು ಗೊತ್ತಾಗುತ್ತೆ..? ಆಹ ಇದೂ ಒಂದು ಪ್ರಶ್ನೆಯೇ….
ಏನು ಗೊತ್ತಾಗಬೇಕೊ ಅದು ಗೊತ್ತಾಗುತ್ತೆ….
ಪ್ರವಾದಿತ್ವ ಬಿಟ್ಟು ಇನ್ನೆಲ್ಲವೂ ಗೊತ್ತಾಗುತ್ತೆ…!
ಮೊದಲ ಬೆಲ್ಲಿಗೂ ಕೊನೆಯ ಬೆಲ್ಲಿಗೂ ಇರುವ,
ವ್ಯತ್ಯಾಸ ಗೊತ್ತಾಗುತ್ತೆ ….ಒಂದರ ಅನುರಣನ
ಇನ್ನೊಂದರಂತಿಲ್ಲ ಪರಿಣಾಮವೂ ಬೇರೆ
ಎನ್ನುವುದು ಗೊತ್ತಾಗುತ್ತೆ ……ಆಗುವುದಿಲ್ವೆ ?
ಮನುಷ್ಯ ಮೊದಲು ಹುಸಿ ಗಾಂಭೀರ್ಯ
ಬಿಡಬೇಕು
ಉಟ್ಟ ಬಟ್ಟೆಬರೆ ಬಿರುಗಾಳಿಗೆ ಬಿಚ್ಚಿ ಹೋದಂತೆ…

ಹಕ್ಕಿಗಳಿಗಿದು ಗೊತ್ತಿರ್ತದೆ ಎಂದುಕೊಂಡಿದ್ದೇನೆ ನಾನು
ಅದು ತಪ್ಪ್ಪಾಗಿರಬಹುದು ಆಗಿದ್ದರೂ ಅದು ಚಂದವಾಗಿರುತ್ತೆ
ಅವು ಪುರ್ರನೆ
ಹಾರಿಹೋಗುತ್ವೆ ಹಾಗೆಯೇ ಬರುತ್ವೆ
ಯಾವಾಗ ಏನು ಯಾಕೆಂದು ಕೇಳದೆಯೆ
ಹೇಳದೆಯೆ ನಿಂತು ಬೆಲ್ಲು ಬಾರಿಸುವವ
ನಿಂತಲ್ಲೆ

ಮತ್ತೆ ಕೆಲಕಾಲ ಉಳಿಯುವುದು
ಏನೊ ಗೊತ್ತಿಲ್ಲ ಕೇಕೆ ಕಲರವ ಮತ್ತು
ನಿರಾಳ
ಯಾಕೆ ಏನೆಂದು ಕೇಳುವವರೆ ಇಲ್ಲ

೨.ಮೊವೆಝ್ ಫ್ವಾ

sartre.jpg

ಹೋಟೆಲ್ ಎನ್ನುವುದೊಂದು
ಅತಿ ಬಿಸಿಯ ಜಾಗ
ಜನ ಬರ್ತಾರೆ ಹೋಗ್ತಾರೆ
ಎಲ್ಲೆಲ್ಲು ಗದ್ದಲವೆ
ಪಾತ್ರೆ ಪಗಡೆಗಳದ್ದು ಪಿಂಗಾಣಿ
ಸ್ಟೀಲು ಕಬ್ಬಿಣ

ತಿಂಡಿಯ
ಅರ್ಡರುಗಳದ್ದು
ಮಾಣಿಗಳು ಸಪ್ಲೈ ಮಾಡುತ್ತಲೇ
ಇದ್ದಾರೆ
ಮುಸರೆಯವರು ಪಾತ್ರೆ ತಿಕ್ಕುತ್ತಲೇ ಇದ್ದಾರೆ
ಒಳಗೆ ಅಡುಗೆಯವರು ಅಡುಗೆ
ಮಾಡುತ್ತಲೆ ಇದ್ದಾರೆ

ಆದರೆ ಅವರ ಮನಸ್ಸು ಇನ್ನೆಲ್ಲೊ ಇದೆ
ತಾವು ಮಾಡುವ ಕೆಲಸದಲ್ಲಿಲ್ಲ
ಇದಲ್ಲ ಇದಲ್ಲ ಎನ್ನುತ್ತಿದೆ

ಇದೊಂದು ವೈರುಧ್ಯ ಇದನ್ನು
ಕಂಡು ಹುಡುಕಿದವನು ಫ್ರೆಂಚ್ ಫಿಲಾಸಫರ್
ಜಾನ್-ಪಾಲ್ ಸಾತ್ರ್ರ್
ಅದನ್ನವನು ಮೊವೆಝ್ ಫ್ವಾ ಎಂದು ಕರೆದ
ಆಮೇಲೆ ಅದು ಇತರೆಡೆಗೆ ಹರಡಿತು
ಭಾರತಕ್ಕೂ ಬಂತು
ಮೂವೆ ಫ್ವಾ ಎಂದರೆ
ಸಮಗ್ರತೆ ಅಸಾಧ್ಯವಾಗುವುದು

ಈಗ ಪೋಸ್ಟ್ ಟ್ರುತ್ ನಡೆಯುತ್ತಿದೆ
ಇದು ಇನ್ನೊಂದು ಅದ್ಭುತ
ಸತ್ಯೋತ್ತರ
ಸತ್ಯಕ್ಕಿಂತ ನಂಬಿಕೆ ಮುಖ್ಯ ಎನ್ನುವುದು
ಬಹುಶಃ ಇದಕ್ಕಾಗಿಯೇ ಏನೊ ಪ್ಲೇಟೋ
ಕವಿಗಳಿಗೆ ರಿಪಬ್ಲಿಕ್‍ನಲ್ಲಿ ಸ್ಥಾನ ಕೊಡಲಿಲ್ಲ

೩.ಯಾತ್ರಿಕ

ದೂರದೂರಿಗೆ ಪ್ರಯಾಣ ಹೊರಟ
ಯಾತ್ರಿಕನೊಬ್ಬ ಬಯಸುವುದೇನನ್ನು
ರಾತ್ರಿ ಉಳಕೊಳ್ಳುವುದಕ್ಕೊಂದು ಸತ್ರ

ತಿನ್ನವುದಕ್ಕೊಂದು ರೊಟ್ಟಿ
ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವ
ಸಹಯಾತ್ರಿಕರು

ಮೋಡವಿಲ್ಲದ ಆಕಾಶದಲ್ಲಿ
ರಾತ್ರಿಯಿಡೀ ಕಾವಲಿರುವಂತೆ
ಹೊಳೆಯುವ ನಕ್ಷತ್ರಗಳು

ಯಾವಾಗ ಬಂತೆಂದು ತಿಳಿಯದ ನಿದ್ದೆ
ಅಂಥ ಅನುಭವವನ್ನು ಅವನು ಎಂದಿಗೂ
ಮರೆಯಲಾರ

೪. ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ

ನಿಜದ ಮಾತು ನಿರರ್ಗಳವಲ್ಲ
ನಿರರ್ಗಳವಾದ ಮಾತು ನಿಜವಲ್ಲ

ಯು. ಆರ್. ಅನಂತಮೂರ್ತಿ, “ದಾವ್ ದ ಜಿಂಗ್”

ನಿರರ್ಗಳವಾಗಿ ನಾನು
ಮಾತಾಡಲಾರೆ
ತಡವರಿಸುವೆ
ನಾಲ್ಕು ಜನರೆದುರು
ಸುಮ್ಮನಿರುವೆ

ಮಾತಾಡುವಷ್ಟು ಖಚಿತತೆಯಿಲ್ಲ ನನಗೆ
ನಿಷ್ಠುರವಾಗಿರಲು ಸಾಧ್ಯವೇ ಇಲ್ಲ
ಸ್ವಾನುಮಾನಿ
ಲೋಕವ ನಾನಿನ್ನೂ ತಿಳಿದೇ ಇಲ್ಲ
ನನ್ನ ತಾಯ್ನುಡಿಯನ್ನು ಕೂಡ
ಇನ್ನೂ ಕಲಿಯುತಿದ್ದೇನೆ

ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ
ಹುಡುಗನಂತೆ ನಾನು
ಕುಳಿತುಕೊಳ್ಳಲು ಸ್ಥಳ
ಹುಡುಕುತ್ತೇನೆ

ಗಾಬರಿ ಭಯ ಮುಂಬರುವ
ದುರಂತಗಳ ಸೂಚನೆ
ಅವನನ್ನು ದಿಙ್ಮೂಢನ ಮಾಡಿದೆ

ಅರಿಯದೇ ಮಾಡಿದ ಅಪರಾಧಕ್ಕೆ ಅವನನ್ನು
ದಯವಿಟ್ಟು ಕ್ಷಮಿಸಿ

೫. ಅಣಬೆ

ಕೀಟಕ್ಕೆ ಕಾಯುವ ಕಪ್ಪೆ
ಬೆಂಕಿಗೆ ಹಾರುವ ಪತಂಗ
ದಾರಿ ತಪ್ಪಿದ ಇರುವೆ

ಒಕ್ಕಲು ಹೋದ ಮನೆಗಳು
ಮುಂದರಿಯದ ಕೊನೆಗಳು

ಹಾಳುಬಿದ್ದ ಕೋಟೆಗಳು
ಬೇಸರ ತರಿಸುವ ದ್ವೈತಾದ್ವೈತ
ವಾದಗಳು
ದೇವರ ಮೆಟ್ಟು ಅರ್ಥಾತ್
ಪಾರೆಯಲ್ಲಿ ಮೂಡಿದ ದೇವರ ಪಾದಗಳು
ಮುಗಿಯಿತೆಂದರು ಇನ್ನು ಎದ್ದು ಬರುತ್ತಿರುವ
ತತ್ವಪದಕಾರರು

ಪಾತ್ರೆ ತೊಳೆಯುತ್ತ ಮುಖಕ್ಕೆ ಬೀಳುವ
ಕೂದಲ ಮೊಣಕೈಯಿಂದ
ಹಿಂದಕ್ಕೆ ಒತ್ತರಿಸುತ್ತಿರುವ
ಹೆಣ್ಣು ಮತ್ತು
ಬೆಟ್ಟವೇರುತ್ತಿರುವ ಭಿಕ್ಕು