- ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ - ಅಕ್ಟೋಬರ್ 30, 2024
- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
ನಾಸ್ತಿಕ ಹುಳ
ಕೋಟೆ ಕೊತ್ತಲಗಳು ಮುರಿಯವುವು
ಮಹಲು ಮಿನಾರಗಳು ನಿರ್ನಾಮ
ವಾಗುವುವು
ಅರಮನೆ ರಾಣೀವಾಸಗಳು ವಿನಾಶ
ವಾಗುವುವು
ಮಂತ್ರಿ ಸೇನಾನಿ ಜ್ಯೋತಿಷಿ ವಿದೂಷಕರು
ಹೊರಟು ಹೋಗುವರು
ನದ್ರಿಸಿದ ಜ್ವಾಲಾಮುಖಿಗಳು
ಸೂಚನೆ ಕೊಡದೆ ಎದ್ದಾವು
ಬೆಂಕಿ ಕೆಂಡಗಳು ತಲೆ ಮೇಲೆ
ಬಿದ್ದಾವು
ಲಾವಾ ಹರಿಯುವುದು ನದಿಯುಕ್ಕಿದಂತೆ
ಸಮುದ್ರ ಉಮ್ಮಳಿಸುವುದು ದುಃಖದಂತೆ
ಭೂಗರ್ಭ ತಟ್ಟೆಗಳು
ಚಲಿಸುತ್ತವೆ
ಭೂಖಂಡಗಳು ಬದಲಾಗುತ್ತವೆ
ಜನ ವಲಸೆ ಹೋಗುವರು
ತಿಳಿಯದ ನಾಡುಗಳಿಗೆ
ಕಾಲಾಂತರದಲ್ಲಿ
ಭಾಷೆ ಮರೆತು ಹೋಗುವುದು
ಅಪರಿಚಿತವಾಗುವುದು
ಬೆಟ್ಟ ಬಂದು ಕೂರುವುದು
ಮನೆ ಮುಂದೆ
ಯಾವ ದೇವರ ದೇವಳ
ವನ್ನು ಕೂಡ ಕೊಜಳಿ
ಬಿಸಾಕುವುದೊಂದು ನಾಸ್ತಿಕ ಹುಳ
ಅಗ್ರಸಾಲೆ
ಹೌದು ಅಗ್ರಸಾಲೆ
ಸಮುದಾಯದ ಏಳಿಗೆಗೆಂದು ಹಿರಿಯರು
ಕಟ್ಟಿಸಿದ್ದ ಕಟ್ಟಡ ಅಥವ ಕಟ್ಟಡ ಸಮುಚ್ಚಯ
ಚಾವಡಿ ಕೈಸಾಲೆ ಮೊಗಸಾಲೆ ಮಠ ಮಂದಿರ
ಪೂಜೆ ಪುರಸ್ಕಾರಕ್ಕೆ ಪುರಾಣ ವಾಚನಕ್ಕೆ
ಪ್ರವಚನಕ್ಕೆ ಭಜನೆಗೆ ಹರಿಕಥೆ ತಾಳ
ಮದ್ದಳೆಗೆ
ಒಂದು ಬದಿ ಹಳ್ಳ ಇನ್ನೊಂದು ಬದಿ ಕಾಡು
ನಾಡು ಕಾಡಿನ ನಡುವೆ ಈ ನಮ್ಮ
ಸೌಧ
ತರೆ ಮಣ್ಣು ಗೋಡೆ ಕಲ್ಲು
ಮಾಡು ಮಂಗ್ಳೂರು ಹಂಚು
ಉಳಿದೆಲ್ಲವೂ ಮರ ಅದೇ
ಪರಿಸರದಿಂದ ಮರದ
ಮರದ ಬಾಜಿರ ಕಂಭ ಮರದ ತೊಲೆ
ಮರದ ಪಕ್ಕಾಸು ರೀಪು
ದಳಿ ಬಾಗಿಲು ಮತ್ತು ಗಿಳಿಬಾಗಿಲು
ಆರಂಭದ ಉತ್ಸಾಹ ಕ್ರಮೇಣ ಕುಗ್ಗುತ್ತ
ಅಗ್ರಸಾಲೆಗೆ ಬರುವ ಜನ ಕಡಿಮೆಯಾಗುತ್ತದೆ
ತಲೆಮಾರುಗಳು ಬದಲಾಗುತ್ತವೆ
ನಂಬಿಕೆಗಳು ಕುಸಿಯುತ್ತವೆ
ಅಪರೂಪಕ್ಕೆ ಅಲ್ಲಿ ಹಾದು ಹೋಗುವ ದಾರಿ
ಹೋಕರಿಗೆ
ಒಳಗಿಂದ ಭುಂಯ್ ಎಂಬ ಉದ್ಘೋಷವೊಂದು
ಕೇಳಿಸಿ ಅನಿಸುವುದು ಬಹುಶಃ ಮಂತ್ರಪಠಣ
ಅವರಿಗೇನು ಗೊತ್ತು
ಅಗ್ರಸಾಲೆಯ ಉದ್ಘಾಟನೆಯ ದಿನವೆ
ಅಲ್ಲಿ ಸೇರಿತ್ತೊಂದು ಜೀರುಂಡೆಯ ದಂಡು
ಪ್ರಮೇಯನ ಜೊತೆ ಅಪ್ರಮೇಯ ಸೇರುವ
ಹಾಗೆ
ಕಾಲಾಂತರದಲ್ಲಿ ಯಾವುದೂ ಇದ್ದಂತೆ
ಇರುವುದಿಲ್ಲ
ಎಲ್ಲವೂ ಪುಡಿಯಾಗುತ್ತವೆ
ಒಂದಕ್ಕೆ ಒಂದು ಕಾರಣ
ಸೋಲೊಮನ್‍ನ ದೇವಳಕ್ಕೆ ನೆಬೂಚೆಡ್‍ನೆಝರ್
ನಮ್ಮದಕ್ಕೆ ಜೀರುಂಡೆಗಳ ನಝರ್
ವಡ್ಡಾರಾಧನೆ
ವಡ್ಡರು ಬರುತ್ತಿದ್ದಾರೆ ಬರಮಾಡಿ
ಕೊಳ್ಳುವಿರ
ಎಲ್ಲೆಲ್ಲಿಂದಲೊ ಬರುತಿದ್ದಾರೆ
ಕೆಲವರು ಬಹಳ ಹಿಂದಿದ್ದಾರೆ
ಅವರಿಗೆ ಕೈಕಾಲು ತತ್ತರಿಸುತ್ತಿದೆ
ಎಡವುತ್ತ ತೊಡರುತ್ತ ಬರುತಿದ್ದಾರೆ
ಕೆಲವರ ಕೂದಲು ತುಂಬಾ ಬೆಳೆದಿದೆ
ಕೆಲವರ ತಲೆಬೋಳು ಕೂದಲೂ ಇಲ್ಲದೆ
ಕಣ್ಣು ಇಳಿದಿದೆ ಪಾತಾಳಕ್ಕೆ
ಗಡ್ಡದ ಗತಿಯಂತು ದೇವರಿಗರ್ಪಿತ
ಸ್ನಾನವಿಲ್ಲದೆ ಶತಮಾನ
ಅವರನು ಕರೆದು ಮೈ ತಿಕ್ಕಿ ತೊಳೆದು
ನೈಲ್‍ಕಟ್ಟರಿನಲಿ ಉಗುರನು ತೆಗೆದು
ಅಳಿದುಳಿದ ಹಲ್ಲುಗಳ ಬ್ರಶ್ಶಿಂದ ಉಜ್ಜಿಸಿ
ಶುಭ್ರಗೊಳಿಸಲು ಸಿದ್ಧರಿರುವಿರ
ಒಂದು ಕಾಲದಲ್ಲಿವರು ವೀರರು
ಧೀರರು
ಪರೋಪಕಾರಿಗಳು
ಪಾಪಿಗಳು ಕೋಪಿಗಳು
ಆದರೂ ಈಗ ಎಲ್ಲರೂ
ವೃದ್ಧರು
ಕೆಲವರು ಮನೆ ಬಿಟ್ಟವರು
ಕೆಲವರು ಹೊರ ಹಾಕಲ್ಪಟ್ಟವರು
ನಿರ್ಗತಿಕರು ಅನಾಥರು
ದಾರಿ ತಪ್ಪಿದವರು
ತಂತಮ್ಮ ಹೆಸರನ್ನೆ ಮರೆತವರು
ಹೆಸರು
ಎಂದೂ ಇರದವರು
ಕೇವಲ ಮನುಷ್ಯ
ಕಾಲು ಹೇಳಿದಲ್ಲಿಗೆ
ಹೋಗುವುದಿಲ್ಲ
ಕೈ ಬಯಸಿದಲ್ಲಿಗೆ ಚಾಚುವುದಿಲ್ಲ
ಅಂಧನಲ್ಲ ಆದರೂ
ಕಣ್ಣು ಕಾಣಿಸುವುದಿಲ್ಲ
ಕಿವುಡನಲ್ಲ ಅಲ್ಲದಿದ್ದರೂ
ಕಿವಿ ಕೇಳಿಸುವುದಿಲ್ಲ
ಡಯಾಬೆಟಿಸ್ ಹೈ ಬೀಪಿ
ಅತಿ ಮೂತ್ರ ಮೈ ನಡುಕ
ವರ್ಟಿಗೋ ನನ್ನದೇ ಈಗೋ
ಎಲ್ಲವೂ ಇವೆ
ಜನ್ಮತಃ ಬಂದ ಅಸ್ತ್ಮ
ನಾನೇ ತರಿಸಿಕೊಂಡ
(ಅಲ್ಲದಿದ್ದರೆ ಯಾರು?)
ಪಾರಾನೋಯಿಯಾ
ನಿಜ, ಕವಿತೆಗೆ ತಕ್ಕ
ವಸ್ತುಗಳಲ್ಲ
ಆದರೂ ಒಬ್ಬ ಮನುಷ್ಯ
ಏನು ಮಾಡಬೇಕು?
ಒಂದು ಮರಕ್ಕಾದರೆ
ಎಷ್ಟು ವಯಸ್ಸಾದರೂ
ಪ್ರತಿ ವಸಂತವೂ ವಸಂತವೇ
ಲಗ್ಗೆಯಟ್ಟ ಕೋಟೆಯಂತೆ
ಮನುಷ್ಯ
ಅಲ್ಲಲ್ಲಿ ಒಡೆದು ಅಲ್ಲಲ್ಲಿ
ಕುಸಿದು
ನಾಮಾವಶೇಷವಾಗಬೇಕೆ
ಕುಂಬಳೆ ಕೋಟೆಯ ಹಾಗೆ?
ಕ್ಷಮಿಸಿ, ಕುಂಬಳೆಗಾದರೂ
ಒಂದು ಐತಿಹ್ಯವಿದೆ
ಕೇವಲ ಮನುಷ್ಯನಿಗೆ
ಏನಿದೆ
ಕುಳಿತರೆ ಮಂಪರು,
ಮಲಗಿದರೆ ನಿದ್ದೆ..
ಒಂಟಿತನ
ಮಧ್ಯಾಹ್ನದ ಮೌನ
ಸಂಜೆಯ ಅಯೋಮಯ
ಮಧ್ಯರಾತ್ರಿಯ ಅಪರಿಚಿತ
ಪ್ರಾಣಿಯ ಊಳಿಡುವಿಕೆ
ನನ್ನ ಒಂಟಿತನವನ್ನು ಹೆಚ್ಚಿಸುತ್ತಿವೆ
ಅರೆತೆರೆದ ಬಾಗಿಲು
ಗಿಳಿ ಬಂದು ಕೂರದ ಗವಾಕ್ಷಿ
ಶಕುನ ಉಲಿಯುವ ಹಲ್ಲಿ
ಮರ್ಮರಿಸುವ ಮರ
ಯಾರೂ ಮರಳದ ದಾರಿ
ನದಿ ತನಕ ಬಂದು
ಸಂಕ ದಾಟದ ಮನುಷ್ಯ
ಮಳೆಯಾಗುವ ಮೊದಲೇ
ಚದುರಿಹೋದ ಮೋಡ
ಇದೀಗ ಹುಟ್ಟಿ ನಳನಳಿಸುವ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ