ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ-೧

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಭಾಷೆ ಸಂವಹನ ಮಾಧ್ಯಮ ಎಂದು ಸರಳ ವ್ಯಾಖ್ಯೆ ನೀಡಿಬಿಡುತ್ತೇವೆ. ನಾಡು-ನುಡಿ (Land & Letter)ಎಂದು ಕರೆದುಬಿಟ್ಟೆವು.ಅನಿವಾಸಿ ಕನ್ನಡಿಗರಾದರೂ; ದೇಶದ , ವಿದೇಶದ ಯಾವುದೇ ಮೂಲೆಯಲ್ಲಿದ್ದರೂ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಕೈ ಎತ್ತಿದೆವು.
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀಃ !
ಆದರೆ ಕರ್ಮಭೂಮಿ, ಜನ್ಮಭೂಮಿ ಒಂದೇ ಆದ ಹಲ-ಕೆಲವರಿಗೂ,ಮಾತೃಭಾಷೆಯ ಮೇಲೆ ಪ್ರೇಮಾನುರಾಗ ಇದ್ದೇ ಇರುತ್ತದೆ ಎನ್ನುವುದಕ್ಕೆ ನಮ್ಮೆಲ್ಲರಿಗಿಂತ ಬೇರೆ ಉದಾಹರಣೆ ಬೇಕೆ ?

ಈ ನುಡಿ ಯ ಹುಟ್ಟು ಎಂದಿನಿಂದ ಮತ್ತು ಹೇಗೆ ? ಸಂಕೇತ ಗಳಿಂದ ಮೊದಲ್ಗೊಂಡು ನಮ್ಮ ಧ್ವನಿಪೆಟ್ಟಿಗೆಯಿಂದ ಧ್ವನಿಮಾಗಳನ್ನು ಹೊರಚೆಲ್ಲುವ ಕ್ರಿಯಯೇ ? ವ್ಯುತ್ಪತ್ತಿ ಬಗೆಗೆ ಹೇಳಿರುವ ಭಾಷಾ ತಜ್ಞರು, ಉಗಮದ ಬಗ್ಗೆ ಮಾತ್ರ ನಿಖರವಾದ ಉತ್ತರ ನೀಡಿಲ್ಲ. ಆದರೆ ಭಾಷೆ ಭಾವಜನ್ಯ ಎನ್ನುವ ನಂಬಿಕೆ ಮಾತ್ರ ಖಚಿತವಾದ ಸಂಗತಿ. ಪುರಾತನ ಸಂಸ್ಕೃತಿ ಗಳ ಆಳವಾದ ತಿಳಿವಳಿಕೆ ಇರುವ ಪಂಡಿತರುಗಳ ಹೇಳಿಕೆಯ ಪ್ರಕಾರ ಮಾನವನಿಗೇ ಒಲಿದಿರುವ ಭಾಷೆ, ಅವನ ಹಸಿವು,ಕಾಮ ಕ್ರೋಧ ಮೊದಲಾದ ಆರು ಗುಣಗಳು, ಭಯ ,ಮಾಟ,ಮಂತ್ರ ಮುಂತಾದ ಅತಿರೇಕಗಳ ಕಾರಣವಾಗಿ ಹುಟ್ಟಿರಬೇಕು.ಒಂದಂತೂ ನಿಜ.ಈ ಸಿದ್ಧಾಂತ ವನ್ನು ಇನ್ನೂ ಸ್ವಲ್ಪ ಇಣುಕಿ ನೋಡುವಾಗ, ಕಾವ್ಯ ವಿಮರ್ಶೆ ದೃಷ್ಟಿಯಿಂದ, ಕವಿತೆ,ನಮ್ಮನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಕುತ್ತದೆ. ಅದು ಚುಟುಕು ಕವಿತೆ ಇರಲಿ ಮಹಾಕಾವ್ಯವೇ ಇರಲಿ ಎಲ್ಲಾ ಪ್ರಕಾರಗಳ ಕಾವ್ಯದ ಭಾಷೆ ಅರ್ಥವನ್ನು ಮೀರಿ ಭಾವ ಪ್ರಕಟಿಸುವಲ್ಲಿ ನಿರತವಾಗಿರುತ್ತದೆ.ಇಲ್ಲಿ ತರ್ಕಕ್ಕಿಂತ ಧ್ವನಿ ಪ್ರಾಮುಖ್ಯ ವಾಗಿರುವುದನ್ನು ಗಮನಿಸಿಯೇ ಇರುತ್ತೇವೆ.

ಬೇಂದ್ರೆಯವರ ಮಾತಿನಲ್ಲಿ ಹೇಳುವದಾದರೆ, ‘ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ .’ ನನ್ನ ಕವಿತೆ ಅತರ್ಕ್ಯವಾದದ್ದು ಎಂದು ಬೇಂದ್ರೆ
ಗ್ಯಾರಂಟಿ ಕೊಡುತ್ತಾರೆ.ಆದರೆ ಒಂದು ಗಮ್ಮತ್ತು ನೋಡಿ.ಅದು ಅರ್ಥ ತರ್ಕ,ಚಿಂತನೆ ಸಂವಹನ ಗಳಿಗೆ ಒಳಗಾಗಿ, ಗದ್ಯವಾದಾಗ ! ಮಾತ್ರ ‘ಭಾವ’ ದಿಂದ ದೂರವಾಗಿ ಭಾವೋದ್ವೇಗಕ್ಕೆ, ಅರ್ಥಕ್ಕೆ ಸಮೀಪವಾಯಿತು.
ವಚನಕಾವ್ಯ ಕನ್ನಡ ಕಾವ್ಯಲೋಕದಲ್ಲಿ ಪ್ರವೇಶ ಪಡೆಯುವ ವರೆಗಿನ ಸಾಹಿತ್ಯ ಚರಿತ್ರೆ ಯ ಕಾಲ ಜೈನಯುಗ ಅಥವಾ ಪಂಪ ಯುಗ ಮತ್ತು ಪಂಪ ಪೂರ್ವ ಯುಗವೆಂದೇ ಕರೆಯಲ್ಪಡುತ್ತದೆ. ಶಿವಕೋಟಾಚಾರ್ಯರ ವಡ್ಡಾರಾಧನೆಯ. ನಂತರ ಪಂಪ ಬಳಕೆಗೆ ತಂದ ಚಂಪೂ ಪ್ರಕಾರ ಸಹ ಸಂಸ್ಕೃತ ಪ್ರಭಾವದಿಂದ ಹೊರತಾಗಲಿಲ್ಲ. ಆರಂಕುಸಮಿಟ್ಟೊಡಂ ನೆನೆವುದೆನ್ನಮನಂ ಬನವಾಸಿ ದೇಶಮಂ ಎಂದ ಪಂಪ ಯಾರೇ ನನ್ನನ್ನು ಅಂಕುಶ ದಿಂದ ಚುಚ್ಚದರೂ ನನ್ನ ಮನ ಬನವಾಸಿ ದೇಶ ಅಂದರೆ ಕನ್ನಡ ನಾಡನ್ನೇ ನೆನೆಯುತ್ತದೆ ಎಂದು ಪಂಪಭಾರತ ದೀಪಿಕೆ ಬರೆದ ವಿದ್ವಾಂಸರಿಂದ ಮೊದಲ್ಗೊಂಡು ಅನೇಕ ವಿಮರ್ಶಕರು ಅರ್ಥೈಸಿದರು. ನಂತರ ಅದು ಹಾಗಿರಲಿಕ್ಕಿಲ್ಕ ಅದು ಬನವಾಸಿಯ ಉತ್ಸವದ ವರ್ಣನೆ ಎನ್ನುವ ಬೇರೊಂದು ಅರ್ಥವೂ ಮೂಡಿ ಬರಲಾರಂಭಿಸಿತು ಇರಲಿ.ಉದ್ದೇಶ ಅದಲ್ಲ.ಸಂಸ್ಕೃತ. ಕನ್ನಡ ಕಾವ್ಯದ ಮೇಲೆ ಹೇಗೆ ತನ್ನ ಹಿಡಿತ ಸಾಧಿಸಿತ್ತು ಎನ್ನುವುದರ ಕಡೆ ಗಮನ ನೀಡುವುದು ಆಗಿದೆ.ಅಂದರೆ ಕಾವ್ಯ ರಚನೆಗೆ ಸಂಸ್ಕೃತ ಅನಿವಾರ್ಯ ಎನ್ನುವುದನ್ನು ಸರಿ ಸುಮಾರು ಎಲ್ಲ ಆಶ್ರಿತ ಕವಿಗಳು ಬಿಂಬಿಸಿದರು.

ಆದರೆ ಕಬ್ಬಿಗರ ಕಾವಂ ದ ಕವಿ ಅಂಡಯ್ಯ ಮಾತ್ರ ಇದಕ್ಕೆ ಹೊರತಾಗಿ ನನ್ನ ಕಾವ್ಯ ನಿಲ್ಲಲಿದೆ ಎಂದು ಪಣ ತೊಟ್ಟಂತೆ ರಚಿಸಿದ. ಕ್ರಿ.ಶ.1235 ಕಾಲದಲ್ಲಿ ಜೀವಿಸಿದ್ದ ಕವಿ ಅಂದು ಪ್ರಚಲಿತವಿದ್ದ ಪಂಪ,ರನ್ನ,ಪೊನ್ನ,ಚಾವುಂಡರಾಯ, ಜನ್ನ, ನಾಗಚಂದ್ರರು ಹಾಕಿಕೊಟ್ಟ ಕಾವ್ಯ ಪ್ರಕಾರವಾದ ಚಂಪೂವನ್ನು ತನ್ನ ಕಾವ್ಯ ರಚನೆಗೆ ಉಪಯೋಗಿಸಿದ.
ಚಂಪೂವಿನ ಕುರಿತು ಒಂದು ಸಿದ್ಧ ವ್ಯಾಖ್ಯೆ ನೀಡಬಹುದಾದರೆ :-

ಚಂಸಾಹಿತ್ಯಪ್ರಕಾರ :ಅದು ಪದ್ಯ ಮತ್ತು ಗದ್ಯಗಳ ಸಂಯೋಜನೆ. ಇಲ್ಲಿ ಕಾವ್ಯ ಎನ್ನುವುದಕ್ಕಿಂತ ಪದ್ಯ ಎನ್ನುವ ಪದದ ಬಳಕೆಯೇ ಸೂಕ್ತ. ಏಕೆಂದರೆ ಕಾವ್ಯವು ಹೆಚ್ಚು ವಿಶಾಲವಾದ ಅರ್ಥವಲಯಗಳನ್ನು ಒಳಗೊಂಡಿದೆ.

‘ಕಬ್ಬಿಗರ ಕಾವಂ’ ಭಾಷೆಗೆ ಸಂಬಂಧಿಸಿದ ಇನ್ನೊಂದು ಕಾರಣಕ್ಕಾಗಿಯೂ ಪ್ರಸಿದ್ಧವಾಗಿದೆ. ಆಂಡಯ್ಯನು ತನ್ನ ಕಾವ್ಯದಲ್ಲಿ ಸಂಸ್ಕೃತವನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಕನ್ನಡ ಪದಗಳನ್ನು ಬಳಸುವೆನೆಂಬ ತೀರ್ಮಾನವನ್ನು ಪ್ರಜ್ಞಾಪೂರ್ವಕವಾಗಿಯೇ ತೆಗೆದುಕೊಳ್ಳುತ್ತಾನೆ. ಪ್ರಾಯಶಃ ಸಂಸ್ಕೃತದ ವ್ಯಾಪಕವಾದ ಬಳಕೆಯು ಅನಿವಾರ್ಯವೆಂದು ಹೇಳುತ್ತಿದ್ದ ಇತರ ಕವಿಗಳನ್ನು ಗೇಲಿ ಮಾಡಲು ಬಯಸಿರಬಹುದು. ಆದರೆ, ಆಂಡಯ್ಯನು ಸಂಸ್ಕೃತವನ್ನು ಉಪಯೋಗಿಸುವ ಬಳಸುದಾರಿಯೊಂದನ್ನು ಕಂಡುಕೊಳ್ಳುತ್ತಾನೆ. ಅವನು ಕೇವಲ ತತ್ಸಮ ಪದಗಳನ್ನು ಮಾತ್ರ ಉಪಯೋಗಿಸುವುದಿಲ್ಲ. ತತ್ಸಮ ಎಂದರೆ, ಧ್ವನಿಯ ನೆಲೆಯಲ್ಲಿ ಹಾಗೂ ಅರ್ಥದ ನೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಪಡೆಯದೆ, ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ಪದಗಳು. ಅಂದರೆ, ತದ್ಭವ ಪದಗಳನ್ನು ಬಳಸಲು ಅವನಿಗೆ ಯಾವ ಅಭ್ಯಂತರವೂ ಇಲ್ಲ. ಇಂತಹ ತದ್ಭವಗಳಲ್ಲಿ ಧ್ವನಿಬದಲಾವಣೆಯು ಸಾಮಾನ್ಯವಾಗಿಯೂ ಅರ್ಥ ಬದಲಾವಣೆಯು ಅಪರೂಪವಾಗಿಯೂ ಅಗುತ್ತದೆ. ಒಂದು ನಿದರ್ಶನರೂಪವಾಗಿ

ಅಂಡಯ್ಯನ ಕಾವ್ಯದ ಒಂದು ಪದ್ಯ.

ಸೊಗವಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ|
ಬಗೆಗೊಳೆ ಪೇಳಿಲಾರರಿನಿತುಂ ಸಲೆ ಮುನ್ನಿನ ಪೆಂಪನಾಳ್ದ ಕ||
ಬ್ಬಿಗರದು ಮಾತನಾಡಿದವೊಲಂದವನಾಳ್ದಿರೆ ಪೇಳ್ವ್ ಬಲ್ಪು ನೆ||
ಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ ||
{ಸೊಗಸು ಎನಿಸ ಬಹುದಾದ ಸಂಸ್ಕೃತ ಸೇರಿಸದೇ ಕನ್ನಡದಲ್ಲಿ ಕಾವ್ಯ ಎಂದು ಪರಿಗಣಿಸಬಹುದಾದರೆ,ಕಾವ್ಯರಚನೆಯ ಧ್ವನಿ ಮೊದಲಿಗಿದ್ದ ಹಿರಿಮೆಯನ್ನು ಏಕೆ ಸಾಧಿಸಲಾಗದು.ಈ ರೀತಿಯಾಗಿ, ಕವಿ ಅಂದವಾಗಿರುವ ಕಾವ್ಯ ರಚನಾ ಸಾಮರ್ಥ್ಯ ಪ್ರೀತಿಯಿಂದ ಪಡೆದುಕೊಳ್ಳುವುದನ್ನು ಯಾರು ಸಮ್ಮತಿಸುವದಿಲ್ಲ ಹೇಳಿ}

ಹೀಗೆ ‘ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು ‘ ಕವಿ ಒಂದು ಹೊಸ ಮಾರ್ಗ ಹಾಕಲು ಪ್ರಯತ್ನ ಪಟ್ಟನಾದರೂ ಹಲ ಕೆಲವು ಕಾರಣಗಳಿಂದ ಜನಮನ ಗೆಲ್ಲಲಿಲ್ಲ ಎಂದು ವಿಮರ್ಶಕರು ಹೇಳಿದ್ದು ಸರಿ ಇರಬಹುದು.ಆದರೆ, ಕನ್ನಡ ಅನಿವಾರ್ಯ,ಕಳೆದ ಸಿಗುರಿನ ಕಬ್ಬಿನಂದದಿ,ಭಾರತ ಜನನಿಯ ತನುಜಾತೆ, ಕನ್ನಡತಿ- ಎಮ್ಮೊಡತಿ ಮುಂತಾದ ಕವಿ ಘೋಷಣೆಗಳಿಗೆ ಹದಿ ಮೂರನೆಯ ಶತಮಾನದಲ್ಲಿಯೇ ಅಂಡಯ್ಯ ನಾಂದಿ ಹಾಕಿದ್ದು ಮಾತ್ರ ವಾಸ್ತವ.