ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ – ೩

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯಿ

ಮಾನವ ಸಂಘಜೀವಿ ಪರಿಸರ ಪ್ರೇಮಿ. ತನ್ನಸುತ್ತ ನಡೆಯುವ ಸಂಗತಿಗಳಿಗೆ ಅವನ ಸಂವೇದನೆ ಸ್ಪಂದಿಸಲು ಪ್ರೇರೇಪಿಸುತ್ತದೆ. ಅದು ಅವನ ಅಂತರ್ಗತವಾದ ತಾಕತ್ತು. ತನ್ನಲ್ಲಿರುವ ವಿಶಿಷ್ಟ ಅಧ್ಯಯನ,ಪದಸಂಪತ್ತು,ಭಾವನಾತ್ಮಕ ಆಲೋಚನೆಗಳಿಗೆ ಅಕ್ಷರರೂಪ ಕೊಡುತ್ತಾನೆ. ಅದು ಕವಿತೆ,ಕತೆ,ಪ್ರಬಂಧ,ನಾಟಕ ಹೀಗೆ ಸಾಹಿತ್ಯದ ಒಂದು ಪ್ರಕಾರವಾಗಿ ಹೊರಹೊಮ್ಮುತ್ತದೆ.ಅದಕ್ಕಾಗಿ ಅವನು ಪಡುವ ಪಾಡು ಅಷ್ಟಿಷ್ಟಲ್ಲ.ಸಾಹಿತ್ಯದ ಪರಿಚಯ ಇರಬೇಕಾಗುತ್ತದೆ.

ಅದು ಬೆಳೆದು ಬಂದದಾರಿ,ಸಮಕಾಲೀನ ಸಂಗತಿಗಳ ಅರಿವು, ಪ್ರಸ್ತುತ ಸಾಹಿತ್ಯ ಸಂದರ್ಭದಲ್ಲಿ ಕವಿ ಕೃತಿಯನ್ನು ರಚಿಸಿದರೆ ಅದು ಅರ್ಧ ಭಾಗದ ಕೆಲಸವಷ್ಟೇ ಆಗುತ್ತದೆ. ತೀವ್ರವಾದ ಆತನ ಅನುಭವಗಳು ಬೇರೆಯವರ ಮನಸ್ಸಿನಲ್ಲಿ ರಸ ಪ್ರಚೋದಿಸಿದರೆ ಕೈಕೊಂಡ ಕೆಲಸ ಪೂರ್ಣ ರೂಪ ಪಡೆದಂತೆ. ಇದು ನಾನು ನೀವೂ ಸೇರಿದಂತೆ ನಮ್ಮ ಎಲ್ಲ ಬರಹಗಾರರ ಮೂಲಭೂತ ಆಶಯ. ಸಾಹಿತ್ಯಿಕ ಈ ಪ್ರಕ್ರಿಯೆಯಲ್ಲಿ ಓದುಗ, ಆ ಅನುಭವದ ಸುಖವನ್ನು ಪಡೆಯದಿದ್ದರೆ ನಾವುಗಳು ರಚಿಸಿದ ಕವಿತೆ, ಲೇಖನ , ಪ್ರಬಂಧ,ಕತೆ,ಏನಿದ್ದರೂ ಯಾಕೆ ಬರೆಯುತ್ತೇನೆ ಎನ್ನುವ ಜಿಜ್ಞಾಸೆ ಆರಂಭವಾಗುತ್ತದೆ.

ಹೂವಿನ ಅಂಗಡಿಯವನು ಬಹು ಕಷ್ಟಪಟ್ಟು ಮಾಲೆ ಕಟ್ಟುತ್ತಾನೆ. ಅದು ದೇವರ ಪೂಜೆಗೋ ಮುತ್ತೈದೆಯ ಮುಡಿಗೋ ಸೇರದಿದ್ದರೆ ? ಕವಿ ಕಾವ್ಯದಲ್ಲಿ ಒಡಮೂಡಿಸಿದ ಸೌಂದರ್ಯಾನುಭವವನ್ನು ಕಾವ್ಯದ ಮೂಲಕ ಏರಿ ಸಹೃದಯ ಮುಟ್ಟುತ್ತಾನೆ.

ಕಾವ್ಯ ಮೀಮಾಂಸಕರು, ಕವಿಗೆ ಹೇಳಿರುವಂತೆಯೇ ಸಹೃದಯನಿಗೂ ಕೆಲವು ಲಕ್ಷಣಗಳನ್ನು ಹೇಳಿದ್ದಾರೆ. ಓದುಗ ಕಾವ್ಯದಲ್ಲಿ ತನ್ಮಯತ್ವ ಸಾಧಿಸಬೇಕು.ಶುದ್ಧಾಂತಃಕರಣದಿಂದ ಗ್ರಹಿಸುವ, ಕಾವ್ಯವನ್ನು ಎಲ್ಲಾ ಕೋನಗಳಿಂದ ಒರೆಗೆ ಹಚ್ಚಿ ಕಾವ್ಯದ ಸೊಬಗನ್ನು ಉಣಬಡಿಸುವ, ಯೋಗ್ಯತೆಯನ್ನು ಗಳಿಸಬೇಕು ಹಾಗಾದಾಗ ಮಾತ್ರ ಕವಿ
ಸಂತೃಪ್ತಿ ಹೊಂದುತ್ತಾನೆ.


ಕವಿಪ್ರತಿಭೆ ಸೌಂದರ್ಯಾನುಭವವನ್ನು, ಕೃತಿಯಲ್ಲಿ ಮೂರ್ತಗೊಳಿಸಿದ್ದನ್ನು ಕೃತಿಯ ಮೂಲಕ ತನ್ನ ಅನುಭವವಾಗಿಸಿಕೊಳ್ಳುವ ಇವನಿಗೂ (ಸಹೃದಯ) ಪ್ರತಿಭೆ ಅಗತ್ಯ. ಕವಿಯ ಸೂಕ್ಷ್ಮಾನುಭವಗಳು ಸೂಚ್ಯವಾಗಿ ಧ್ವನಿಪೂರ್ಣ ಶಬ್ದಗಳಲ್ಲಿ ಅಡಕಗೊಂಡಿರುತ್ತವೆ. ಆ ಮಾತುಗಳ ಶಕ್ತಿಯಿಂದ ಅನುಭವದ ಅನೇಕ ಪದರುಗಳನ್ನು ಗುರುತಿಸುವ ಇವನ ಆಸ್ವಾದನ ಕ್ರಿಯೆಯೂ ಸೃಷ್ಟಿಕ್ರಿಯೆಯಂತೆ ವಿಶಿಷ್ಟ ಶಕ್ತಿಯಿಂದ ಮಾತ್ರವೇ ಸಾಧ್ಯ ಕವಿ ಶ್ರೇಷ್ಟ, ವಿಮರ್ಶಕ ಶ್ರೇಷ್ಟ ಎನ್ನು ಮಾತೇ ಇಲ್ಲ.ಇದೊಂದು ರೀತಿಯ ಕೊಡುಕೊಳ್ಳವಿಕೆ.

ಸಹೃದಯಿ ತನ್ನ ಪ್ರತಿಭೆಯನ್ನು ಉಪಯೋಗಿಸಿ,ನಿಜವಾದ ಅನಿಸಿಕೆಗಳನ್ನು ದಾಖಲಿಸುವ ಕಾರ್ಯ ಕೈಕೊಳ್ಳುತ್ತಾನೆ.ಏನಿರಬೇಕಿತ್ತು ಏನಿರಬಾರದಿತ್ತು ಎನ್ನುವುದು ವಸ್ತುನಿಷ್ಟವಾಗಿರುತ್ತದೆ ಮತ್ತು ಒಳ್ಳೆಯದನ್ನು ಆನಂದಿಸುವ ಸ್ವಭಾವ ಅವನದು.

ಹೀಗೊಬ್ಬ ರಾಜ. ದಕ್ಷ ಆಡಳಿತಗಾರ, ಜನಾನುರಾಗಿ ಮತ್ತು ಶಾಸ್ತ್ರೀಯ ಸಂಗೀತಗಾರನೂ ಆಗಿದ್ದ.ವಿಶೇಷ ಸಂದರ್ಭಗಳಲ್ಲಿ, ಅಸ್ತಾನದಲ್ಲಿ ರಾಜನ ಹಾಡುಗಾರಿಕೆ ಇರುತ್ತಿತ್ತು ಸಭಾಸದರು ರಾಜನೆಂದೋ ಭಯ ಭಕ್ತಿಯಿಂದೋ ವಾಹ ! ವಾಹ್ವಾ ವಾಹ್ವಾ,ಬಹುತ ಅಚ್ಛೆ, ಬಹುತಖೂಬ್,ಎಂದು ಪೈಪೋಟಿಯಿಂದ ಉದ್ಗರಿಸುತ್ತಿದ್ದರು.ರಾಜನಿಗೆ ಇದೆಲ್ಲ ನಾಟಕೀಯತೆ, ಸಹೃದಯಿಗಳಲ್ಲ,ನನ್ನನ್ನು ಮೆಚ್ಚಿಸಲು ಎಂದು ಅನುಮಾನ ಬಂದು, ನನ್ನ ಹಾಡುಗಾರಿಕೆಯ ಸಮಯದಲ್ಲಿ ಯಾರೂ ಚಕಾರವೆತ್ತುವ ಹಾಗಿಲ್ಲ ಎಂದು ಆದೇಶ ಹೊರಡಿಸಿದ. ರಾಜ ತನ್ಮಯನಾಗಿ ಹಾಡುತ್ತಿದ್ದಾನೆ. ಸಭಾಗಣ ನಿಶ್ಯಬ್ದ.ಸೂಜಿಬಿದ್ದರೂ ಕೇಳಿಸುವಷ್ಟು. ಮೂಲೆಯಲ್ಲಿದ್ದ ವ್ಯಕ್ತಿಯೊಬ್ಬ, ಎದ್ದು ನಿಂತು,’ಅರೆ ! ಮಾಹಾರಾಜ ಕ್ಯಾ ಬಾತ ಹೈ’ ಎಂದು ಜೋರಾಗಿ ಹೇಳಿ, ಲಾಜವಾಬ ಎಂದ. ಸಭೆ ಘಾಬರಿ. ಇವನ್ಯಾವನಿವ ಅವಿವೇಕಿ ರಾಜಾಜ್ಞೆ ಉಲ್ಲಂಘನೆ. ಮರಣ ದಂಡನೆ ಕಾದಿದೆ ಎಂದು ಗುಸ-ಪಿಸ ಮಾತಾಡತೊಡಗಿದರು.ರಾಜ ಮಾತ್ರ ನಸುನಗುತ್ತ ಸೇವಕರಿಂದ ಶಾಲು ಹೂ ಗುಚ್ಛ, ಚಿನ್ನದ ನಾಣ್ಯ ತರಿಸಿ ಆ ವ್ಯವ್ಯಕ್ತಿಯನ್ನು ಸನ್ಮಾನಿಸಿ,ಸಭೆಗೆ ಹೇಳಿದ.ನಿಜವಾದ ಸಹೃದಯಿ ಇವನು.ನಿಜವಾದ ರಸಿಕ.ಮರಣದಂಡನೆಗೆ ಹೆದರದೆ ತನ್ನ ಪ್ರಶಂಸೆಯನ್ನು ಪ್ರಕಟಿಸಿದ.ಅದು ಕಲೆ(ಅದು ಸಾಹಿತ್ಯ,ಸಂಗೀತ ನೃತ್ಯ, ಚಿತ್ರಕಲೆ ಯಾವುದೇ ಇರಲಿ) ಮತ್ತು ಸಹೃದಯಿಗೆ ಇರುವ ಅವಿನಾಭಾವ ಸಂಬಂಧ.


ಕವಿ/ಕಲಾವಿದರ ಹೃದಯವೂ ಸಹೃದಯಿ ಯ ವಿಚಾರಗಳನ್ನು ಧನಾತ್ಮಕವಾಗಿ ಸ್ವೀಕರಿಸಿ,ತನ್ನ ಮುಂದಿನ ರಚನಾತ್ಮಕ ಚಟುವಟಿಕೆಗಳಿಗೆ ಉಪಯೊಗಿಸಿಸಿಕೊಳ್ಳುತ್ತಾನೆ. ಇನ್ನು ಸಹೃದಯಿ ಅರಸಿಕನಾದರೆ,ಅದು ಇನ್ನೂ ದೊಡ್ಡ ಫಜೀತಿ.

ಇತರ ಕರ್ಮಫಲಾನಿ ಯುದ್ಧಚ್ಛಯಾ

ವಿತರ ತಾನಿ ಸಹೇ ಚತುರಾನನ

ಸರಸಿಕೇಷು ಕವಿತ್ವನಿವೇದನಂ

ಸಿರಸಿ ಮಾ ಲಿಖ ಮಾ‌ ಲಿಖ ಮಾ ಲಿಖ

(ಸುಭಾಷಿತ ರತ್ನಭಾಂಡಾಗಾರ ಪು‌೪೦ ಪ.೪೭.)

ಉಳಿದ ನನ್ನ ಪಾಪದ ಫಲಗಳು ಏನೇ ಇದ್ದರೂ ಕಳಿಸು ಬ್ರಹ್ಮ ದೇವಾ ಅವುಗಳೆಲ್ಲವನ್ನು ಸಹಿಸುತ್ತೇನೆ.ಆದರೆ ಅರಸಿಕರ ಮುಂದೆ ಕಾವ್ಯ ಓದುವಂತೆ ನನ್ನ ಹಣೆಯ ಮೇಲೆ ದಯಮಾಡಿ ಬರೆಯದಿರು ಬರೆಯದಿರು ಬರೆಯದಿರು.ಬಹುಶಃ ಇದು ರಾಜಾಶ್ರಿತ ಕವಿಗಳು ಗೋಳು ನೋಡಿ ಸುಭಾಷಿತ ರಚಿಸಿರಬಹುದೇನೋ ಎನಿಸಿದರೂ ಎಲ್ಲರೂ ಇಂತಹ ದುರ್ಭರ ಪ್ರಸಂಗ ಒಂದಿಲ್ಲೊಂದು ದಿನ ಎದುರಿಸಿರಬಹುದು.

ಒಂದಂತೂ ಸತ್ಯ. ಕವಿ-ಸಹೃದಯಿ ಇವರನ್ನು ಪ್ರಶಂಸಿಸದೆ ಇರಲಾರೆವು.ಕವಿಯ ಪ್ರತಿಭೆಯಿಂದ ಮೂಡಿಬರುವ ‘ದೃಷ್ಟಿ- ಸೃಷ್ಟಿ’ ಕಾರ್ಯ ಜೊತೆಗೆ ಸಹೃದಯ, ಪ್ರತಿಭೆಯ ‘ಅನುಸೃಷ್ಟಿ’ಕಾರ್ಯ ಎನ್ನುವುದು ಮಾತ್ರ ಒಪ್ಪಲೇಬೇಕಾದ ಮಾತು.