- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
ಕರ್ಣಾಟದ ಕುಲದೈವ ಪಂಪಾಪತಿಯ ದರ್ಶನ ಕೆಲವು ಸಲ ಪ್ರಾಪ್ತವಾಗಿದ್ದರೂ, ಅದು ಪ್ರಜ್ಞಾಪೂರ್ವಕವಾಗಿ ವ್ಯವಧಾನ – ಸಾವಧಾನ, ಏಕಾಂತ – ಸುಕಾಂತಗಳಿಂದ ಕೂಡಿದ್ದಿರಲಿಲ್ಲ
ಕೆಲವಾರು ಸಹೃದಯ ಸಹಚರರೊಂದಿಗೆ ಪಂಪಾಪತಿಯ ದರ್ಶನ ಮಾಡಬೇಕೆಂದು ಹಲವು ಸಲ ತಿಣುಕಾಡಿ ಪ್ರಯತ್ನಿಸಿದರೂ ವಿರೂಪಾಕ್ಷನಿಗೆ ನಮ್ಮ ಮೇಲೆ ಏಕೋ ಮುನಿಸು, ನಮ್ಮ ಪ್ರಯಾಸಯುತ ಪ್ರವಾಸದ ಯೋಜನೆಗೆ ಯೋಗ್ಯ ಫಲ ದೊರಕಿರಲಿಲ್ಲ. ಹಲವು ತಿಂಗಳುಗಳ ಕಾಲ, ಕಾಲಚಕ್ರವು ಕೆಸರು ಕಲ್ಲು ಮುಳ್ಳುಗಳಿರುವ ಜಾಗದಲ್ಲಿ ಕುಂಟುತ್ತ ನಡೆದಿತ್ತು. ಪ್ರಪಂಚದಲ್ಲಿ ಪಂಪಾಪತಿಯೂ ನಿರೀಕ್ಷಿಸದ ಮಹಾಮಾರಿಯೊಂದು ಬಂದೊದಗಿತ್ತು. ಮಾನವ ಸಮೂಹ ಅದಕ್ಕೆ ‘ಕೊರೋನ’ ಎಂಬ ಹೆಸರಿನಿಂದ ನಾಮಕರಣವನ್ನೂ ಮಾಡಿತು. ನಾಮಕರಣಾನಂತರ ಕೆಲವಾರು ಗಂಟೆಗಳಲ್ಲೇ ಅದು ಬೃಹತ್ತಾಗಿ ಬೆಳೆದು ಭೂದೇವಿಯ ಬಹುತರ ದೇಶಗಳ ಪ್ರ’ದೇಶ’ಗಳಿಗೆ ಹಬ್ಬಿ, ಎಲ್ಲರನ್ನೂ ಹೈರಾಣಾಗಿಸಿತು.
ಅದು ಎಷ್ಟೂ ಎಗ್ಗಿಲ್ಲದೆ ಬೆಳೆದರೂ ಮಾನವನ ಸಾಹಸ ಪ್ರಿಯತೆಗೆ, ಜೀವನೋತ್ಸಾಹಕ್ಕೆ ಕೊನೆಗೂ ಮಣಿಯಲೇಬೇಕಾಗಿ ಬಂತು. ಮೀಮ್ಸುಗಳ ಭರದಲ್ಲಿ ಮಾಸ್ಕುಗಳೆಲ್ಲ ಮಂಗಮಾಯವಾದವು. ಈಗೇನಿದ್ದರೂ ಮೂಗ್ಮುಸುಕು ಧೂಳಿನ ಕಣಗಳಿಗೇ ಹೊರತು ಧಾಳಿಯಿಟ್ಟ ವೈರಾಣುವಿನ ವೈರಾಗ್ಯಕ್ಕಲ್ಲ. ಎರಡು ವಸಂತಗಳ ನಂತರ ಕಾಲಚಕ್ರ ಈಗ ರಹದಾರಿಗೆ ಬಂದಿತ್ತು. ಉತ್ಸಾಹ, ವೇಗ ಎಲ್ಲವೂ ಭರ್ಜರಿಯಾಗಿತ್ತು. ಈಗ ಹಂಪೆಯೆಂಬ ಸ್ವರ್ಗಕ್ಕೆ ಮೂರೇ ಗೇಣು. ಸ್ವರ್ಗದ ಆ ಮೂರು ಗೇಣು, ನಮ್ಮಂಥ ಭೂವಾಸಿಗಳ ಲೆಕ್ಕದಲ್ಲಿ ಹಲವು ಹರಿದಾರಿಗಳು.
ಸಂಸ್ಕೃತಿಯ ಪ್ರಜ್ಞೆ, ಇತಿಹಾಸದ ಅಭಿಜ್ಞೆ, ತೀರ್ಥಕ್ಷೇತ್ರದ ಪರ್ಯಟನೆಯ ಮಹಾಹುರುಪಿನ ಸಂಜ್ಞೆ, ಇವುಗಳೆಲ್ಲದರೊಂದಿಗೆ ಆರ್ಯನ ಅತಿಪ್ರಿಯ ಏಕಾಂತ ಪ್ರವಾಸದ ಪ್ರತ್ಯಭಿಜ್ಞೆ ಎಲ್ಲವೂ ಸೇರಿ ‘ಹಂಪೆ’ ಎಂಬ ಕರ್ಣಾಟದ ಸಾಂಸ್ಕೃತಿಕ ರಾಜಧಾನಿಯನ್ನು ದರ್ಶಿಸುವ ಸುಸಮಯ ಕೊನೆಗೂ ಬಂದಿತ್ತು. ಒಬ್ಬ ಹಳೆಯ ಗೆಳೆಯನೊಡನೆ ಹಂಪೆಯ ಯೋಜನೆ ಸಿದ್ಧವಾಗಿತ್ತು. ಮರುದಿನ ಗೆಳೆಯನಿಂದ ಸಂದೇಶವೊಂದು ಬಂತು, ಪ್ರಸಂಗವಶದಿಂದ ಅವನ ಮನೆಯಲ್ಲಿ ಸೂತಕವಿದ್ದುದರಿಂದ ಸುತ್ತುವುದಕ್ಕೆ ಸೂಕ್ತಸಮಯವಲ್ಲವೆಂದ, ದ್ವೈತಕ್ಕೆ ಈಗ ಅದ್ವೈತ ಭಾವ ಬಂದೊದಗಿತ್ತು.
ಹೌದು ಪರಮ ಅದ್ವೈತಿಗಳಾದ ಶಂಕರಾಚಾರ್ಯರ ಹಸ್ತದ್ವಯಗಳಿಂದ ಸ್ಥಾಪಿಸಲ್ಪಟ್ಟ ದಕ್ಷಿಣಾಮ್ನಾಯ ಶೃಂಗೇರಿ ಪೀಠಕ್ಕೆ ವಿಧೇಯರಾದ ಮಾಧವಾಚಾರ್ಯರ ( ವಿದ್ಯಾರಣ್ಯ ) ಬ್ರಹ್ಮತೇಜ ಹಾಗೂ ಕಡುಗಲಿ ಕುಮಾರರಾಮನ ಲೆಂಕಗಣದಲ್ಲಿನ ಹಕ್ಕ – ಬುಕ್ಕರೆಂಬುವರ ಕ್ಷಾತ್ರತೇಜದ ಸಮ್ಮೇಳದಿಂದ ಸ್ಥಾಪಿತವಾದ ವಿಜಯನಗರವೆಂಬ ಧರ್ಮಕ್ಷೇತ್ರಕ್ಕೆ ಅದ್ವೈತಿಗಳಾಗೇ ಹೋಗುವುದಾಗಬೇಕು.
ಆಷಾಢದ ಕೃಷ್ಣ ಪಕ್ಷ ದಶಮಿ ( ಜುಲೈ ೨೩ ) ಯಂದು ಬ್ರಹ್ಮ ಮುಹೂರ್ತದಲ್ಲಿ ಮೌರ್ಯಾರೂಢನಾಗಿ ಪಂಪಾಪತಿಯ ದರ್ಶನಕ್ಕೆ ವಿಜಯಂಗೈಯ್ಯುವುದೆಂದು ನಿಶ್ಚಯ ಮಾಡಿದ್ದಾದ ಕಾರಣ ಹಿಂದಿನ ದಿನವೇ ರಾತ್ರಿ – ಪ್ರಯಾಣಕ್ಕೆ ಒದಗುವ ಅತ್ಯವಶ್ಯಕ ವಸ್ತುಗಳನ್ನು ಒತ್ತಟ್ಟಿಗಿಟ್ಟು ಸ್ವಸ್ತಿಯೆಂದು ಮಲಗಿದೆ.
ಮರುದಿನ ಪ್ರಯಾಣವೆಂದರೆ ಹಿಂದಿನ ದಿನ ರಾತ್ರಿ ನನಗೆ ಸರಿಯಾಗಿ ನಿದ್ದೆ ಬಂದಿದ್ದು ನನ್ನ ಜಾಯಮಾನದಲ್ಲೇ ಇಲ್ಲ. ಆದಷ್ಟು ನಿದ್ದೆ ಮಾಡಿ ಯಥಾಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಪ್ರಾತರಾಹ್ನೀಕಗಳನ್ನು ಪೂರೈಸಿಕೊಂಡು ಪ್ರಯಾಣಸನ್ನದ್ಧನಾಗಿ ಪುರುಷಸೂಕ್ತದ (ಋಗ್ವೇದಾಂತರ್ಗತ) ಮಾನಸ ಪಠಣದೊಂದಿಗೆ ಕರುವಿನ ಕಟ್ಟನ್ನು ಬಿಚ್ಚಿದ ತತ್ಕ್ಷಣವೇ ಅದು ತಾಯಿಹಸುವಿನತ್ತ ಅತ್ಯಂತ ಉತ್ಸಾಹದಿಂದ ನೆಗೆಯುತ್ತ ಬರುವ ಹಾಗೆ ಪಂಪೆಯತ್ತ ಹೊರಟೆ. ಹ್ಞಾ ! ನಮ್ಮೆಲ್ಲರ ಸಾಂಸ್ಕೃತಿಕ, ಐತಿಹಾಸಿಕ ಪ್ರಜ್ಞೆಗೆ ಹಂಪೆಯೇ ರತ್ನಗರ್ಭ, ನಾವುಗಳು ಪುತ್ರರತ್ನರು.
ಲಾಕ್ ಡೌನ್ ಸಮಯದಲ್ಲಿ, ವಿಜಯನಗರ ಸ್ಥಾಪನೆಗೆ ಪೂರ್ವಸಿದ್ಧತೆಯಂತಿದ್ದ ಕುಮ್ಮಟದುರ್ಗದ ವೀರ ಕಂಪಿಲರಾಯ ಹಾಗೂ ಆತನ ಪುತ್ರ ಕಡುಗಲಿ ಕುಮಾರ ರಾಮ ( ಶ್ರೀ ರುದ್ರಮೂರ್ತಿ ಕೃತ ), ವಿಭೂತಿ ಪುರುಷ ವಿದ್ಯಾರಣ್ಯ ( ಶತಾವಧಾನಿ ಡಾ|| ರಾ. ಗಣೇಶ ಕೃತ ), ವಿದ್ಯಾರಣ್ಯ ವಿಜಯ ( ಡಿ. ವಿ. ಜಿ. ಕೃತ ), ಕರ್ಣಾಟಕ ಗತವೈಭವ ( ಆಲೂರು ವೆಂಕಟರಾಯ ಕೃತ ), ವಿದ್ಯಾರಣ್ಯ (ಗೋವಿಂದ ಪೈ ಕೃತ – ಗಿಳಿವಿಂಡು) ಪುಸ್ತಕಗಳನ್ನೋದಿದ ಮೇಲಂತೂ ಹಂಪೆಯ ಪವಿತ್ರ ಮಣ್ಣಿಗೆ ಹಣೆಮಣಿಸಿ ನಮಸ್ಕರಿಸಬೇಕೆಂದು ಎಲ್ಲಿಲ್ಲದ ತುಡಿತ. ಬಹುದಿನದ ಈ ಯೋಚನೆಯ ಮೋಡಗಣಗಳು ಮಳೆಯಾಗಿ ಸುರಿಯುವ ಕೊನೆಯ ಕ್ಷಣಗಣನೆಗೆ ಮೊದಲಾಗಿದ್ದವು.
ಸಮಯ ಬೆಳಗಿನ ಸಂಧ್ಯೆ ೬:೦೦ ಗಂಟೆ. ದಿನಮಣಿಯು ಅಂಬರದಲ್ಲಿ ಅಂಬೆಗಾಲಿಡುತ್ತ ಅವನಿಯ ಸನಿಹಕ್ಕೆ ಆಗಮಿಸುತ್ತಿದ್ದ. ನಾನು ವಿಜಯನಗರದ ಸೂರ್ಯನಾದ ಮಾಧವಾಚಾರ್ಯರ ಮಹಿಮೆಯ ಮಾಹಿತಿಗಳನ್ನು ಮನದಲ್ಲೇ ಮನನ ಮಾಡುತ್ತ ಹೊರಟಿದ್ದೆ. ಒಂದು ತಾಸಿನ ಮೌರ್ಯನ ಓಟದ ನಂತರ ಬಲಪಾರ್ಶ್ವದಲ್ಲಿ ತುಂಬಿ ಹರಿಯುವ ಕೃಷ್ಣೆಯ ವೇಗಕ್ಕೆ ಅ-ವೇಗವನ್ನು ಕಲ್ಪಿಸುವ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಆಣೆಕಟ್ಟೆಯ ಕಾಣ್ಕೆ, ಮುಂದೆ ತುಸು ಪ್ರಯಾಣದ ನಂತರ ಎಡಪಾರ್ಶ್ವದಲ್ಲಿ ಕೂಡಲ ಸಂಗಮ ದೇವನ ದೇವಸ್ಥಾನದ ಭವ್ಯ ಶಿಖರದ ಕಾಣ್ಕೆಯಿಂದ ಆರ್ಯನ ಹೃದಯ ಹಾಗೂ ಆಗಸದ ಮೋಡಗಳು ಎರಡೂ ಆನಂದದಿಂದ ತುಂಬಿದ್ದವು.
ಮೂರು ದಿನಗಳ ಯೋಜನೆಯಾದ್ದರಿಂದ ಯಾವುದೇ ಧಾವಂತಗಳಿಲ್ಲದೇ ಸಮಸ್ಥಿತಿಯಲ್ಲಿ ಮೌರ್ಯನೊಂದಿಗೆ ಹೊರಟಿದ್ದೆ (ಮೌರ್ಯನ ನಿಧಾನ ಗತಿಗೆ ಪೆಟ್ರೋಲಿನ ದರ ಕೂಡ ಕಾರಣವಾಗಿತ್ತು!). ಮನೆಯಿಂದ ಹೊರಗಾಗಿ ಆಗಲೇ ಮೂರು ಗಂಟೆಯಾಗಿತ್ತು. ನಿಧಾನವಾಗಿ ಒಂದೊಂದೇ ದೊಡ್ಡ ದೊಡ್ಡ ಬಂಡೆಗಳ ಸಮೂಹ, ಬೆಟ್ಟಗಳ ಸಾಲು ಕಂಡು ಬಂದವು. ಇದು ನಾನು ವಿಜಯನಗರದ ವ್ಯಾಪ್ತಿಗೆ ಒಳಗಾಗಿದ್ದೆ ಎನ್ನುವ ಸೂಚನೆ.
(ಮುಂದುವರೆಯುವುದು…)
*******
ಪದಕೋಶ:
*ಲೆಂಕ (ಪ್ರತಿರಾಮರು) – ನಾಯಕನ ಸಂರಕ್ಷಣೆಗೆ ತಮ್ಮ ಎಡಗಾಲಿಗೆ ಕಡಗ ಹಾಕಿಕೊಂಡು ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡುವವರು.
1 thought on “ಪಂಪಾ ಕ್ಷೇತ್ರದ ಇತಿಹಾಸ ಗಮನ – ೧”
Comments are closed.