ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮಾ ವೀಣಾ

ನರಹಳ್ಳಿ ಬಾಲಸುಬ್ರಹ್ಮಣ್ಯರವರ ಅನನ್ಯ ಕೃತಿ ‘ಪದಸೋಪಾನ’

ಕನ್ನಡದ ಖ್ಯಾತ ವಿಮರ್ಶಕರು ನರಹಳ್ಳಿ ಬಾಲಸುಬ್ರಹ್ಮಣ್ಯರವರ ಇನ್ನೊಂದು ಕೃತಿ ‘ಪದಸೋಪಾನ’ ಈಗ ಓದುಗರಿಗೆ ಲಭ್ಯವಿದೆ. ‘ಪದ ಸೋಪಾನ’ ಈ ಶೀರ್ಷಿಕೆ ವಚನಕಾರರನ್ನು ನೆನಪಿಸುತ್ತದೆ. ವಚನಕಾರರು ತಮ್ಮ ವಚನಗಳ ಮೂಲಕ ಸಮಾಜಿಕರನ್ನು ತಲುಪಿದಂತೆ ನರಹಳ್ಳಿಯವರು ತಮ್ಮ ಬಹುಮುಖಿ ಚಿಂತನೆಯಿಂದ, ಸಾಹಿತ್ಯಿಕ ಬರಹಗಳಿಂದ ಸಾಮಾಜಿಕ ಸಂಚಲನ ಉಂಟುಮಾಡಬೇಕೆಂದು ಬಯಸುವವರು. ಈ ಕೃತಿಯನ್ನು ನಾಡಿನ ಖ್ಯಾತ ಪ್ರಕಾಶನ ಸಂಸ್ಥೆಯಾದ ಅಭಿನವ ಪ್ರಕಾಶನದವರು ಹೊರತಂದಿದ್ದಾರೆ. ಈ ಕೃತಿಯ ಬೆಲೆ 400 ರೂಗಳು. ಅಕ್ಷರ ಅಕ್ಷರ ಸೇರಿ ಪದಗಳಾಗುತ್ತವೆ. ಪದಗಳು ಸೇರಿ ವಾಕ್ಯವೃಂದ, ನಂತರ ಬರಹಗಳ ವೃಂದ ಇದನ್ನು ಸೂಚ್ಯವಾಗಿ ಒಳಗೊಂಡಿರುವ ‘ಪದಸೋಪಾನ’ದ ಮುಖಪುಟದ ವಿನ್ಯಾಸವೂ ವಿಶಿಷ್ಟವಾಗಿದೆ,. ಕೃತಿಯ ಅಡಕಗಳ ಕುರಿತು ಸುಳುಹುಗಳನ್ನು ನೀಡುತ್ತದೆ. “ಕವಿಗೆ ಕವಿ ಮಣಿಯುತ್ತಾನೆ” ಎಂಬಂತೆ ಸ್ವತಃ ವಿಮರ್ಶಕರಾದ ನರಹಳ್ಳಿಯವರು ನಾಡಿನ ಹಿರಿಯ ವಿಮರ್ಶಕರನ್ನು ಕವಿಗಳನ್ನು ಕುರಿತು ಹಂಚಿಕೊಂಡ ಮನದಾಳದ ಮಾತುಗಳು ‘ಪದ ಸೋಪಾನ’ ಕೃತಿಯಲ್ಲಿ ದಾಖಲಾಗಿವೆ.

ಒಡನಾಟ

ಕೃತಿಯಲ್ಲಿ ಒಡನಾಟ, ಸುತ್ತಾಟ ,ಒಳನೋಟ ಎಂಬ ಮೂರು ಭಾಗಗಳಿದ್ದು ಮೊದಲನೆ ಭಾಗದ ಮೊದಲ ಲೇಖನ ಕಾದಂಬರಿ ಸಾರ್ವಭೌಮ ಅ. ನ. ಕೃ ಅವರನ್ನು ಕುರಿತದ್ದಾಗಿದೆ. ಕನ್ನಡಕ್ಕೆ ಕನ್ನಡತ್ವಕ್ಕೆ ಒದಗುತ್ತಿರುವ ಸಂಚನೆಗಳನ್ನು ಇಲ್ಲಿ ಅ. ನ .ಕೃ ಅವರ ಮೂಲಕವೇ ಹೇಳಿಸಿದಂತಿದೆ. ನುಡಿಗೆ ಗಡಿಯಿಲ್ಲ ಸಾಗರದಾಚೆಗೂ ಅದರ ಕಂಪನ್ನು ಬಿತ್ತರಿಸಬೇಕು , ಅಲ್ಲಿಯೂ ಕನ್ನಡ ಆಧ್ಯಯನ ಕೇಂದ್ರಗಳು ಸ್ಥಾಪನೆಯಾಗಬೇಕು ಎಂದಿರುವ ಈ ಸಂದರ್ಭದಲ್ಲಿ ಗಡಿಗಳ ತಕರಾರಿನಲ್ಲಿ ಕಿರಿಕಿರಿ ಅನುಭವಿಸುತ್ತಿರುವ ನಮ್ಮ, ದೌರ್ಬಲ್ಯವು ಇಲ್ಲಿ ನೆನಪಾಗುತ್ತದೆ. ವಿಮರ್ಶಕರ ಮುಖ್ಯಗುಣ ಸಮಚಿತ್ತ ಅಂತಹ ಸಮಚಿತ್ತವುಳ್ಳ ಗಿರಡ್ಡಿರವರ ಕುರಿತ ಎರಡನೆ ಬರಹದ ಮೂಲಕ ಲೇಖಕರು ಉತ್ತಮ ವಿಮರ್ಶಕರಿಗಿರಬೇಕಾದ ಗುಣವನ್ನು ಇನ್ನೊಮ್ಮೆ ಮಾರ್ಮಿಕವಾಗಿ ನೆನಪಿಸಿದ್ದಾರೆ. ಸಂಸ್ಕೃತಿ, ಪರಂಪರೆ, ಸೃಜನಶೀಲತೆ. ಜೀವನಧರ್ಮ, ಮಾನವತಾವಾದ ಇವೆಲ್ಲವು ಜೀವಂತ ಜನಾಂಗದ ಮುಖ್ಯ ಲಕ್ಷಣಗಳು. ಇವುಗಳನ್ನು ಕನ್ನಡ ನಾಡಿನ ಪ್ರಾಜ್ಞರನ್ನು ಕುರಿತ ಬರಹಗಳಲ್ಲಿ ಹೇಳಿದ್ದಾರೆ.

ಶಿವಕುಮಾರಸ್ವಾಮೀಜಿಯವರು, ಎಲ್.. ಎಸ್. ಶೇಷಗಿರಿರಾಯರು, ಹಂಪನಾ, ಹೆಚ್.ಎಸ್ವಿ, ಎಂ.ಎನ್ ವ್ಯಾಸರಾವ್, ಷ.ಶೆಟ್ಟರ್, ಲಕ್ಷ್ಮೀಶ್ ತೊಳ್ಪಾಡಿ, ಕಂಬಾರರು , ಕಣವಿಯವರು, ಆಂದೋಲನದ ರಾಜಶೇಖರ ಕೋಟಿ, ಕಾರ್ನಾಡರು, ವಿವೇಕ ರೈಗಳನ್ನು ಅವರ ಸಾಹಿತ್ಯಿಕ ಸಾಧನೆಗಳ ಮೂಲಕವೇ ಪರಿಚಯ ಮಾಡಿರುವುದು ಈ ಕೃತಿಯ ವೈಶಿಷ್ಟ್ಯ ಎನ್ನಬಹುದು. ಇದಕ್ಕೂ ಮಿಗಿಲಾಗಿ ಈ ಕೃತಿ ಸಮರ್ಪಣೆಯಾಗಿರುವುದು ಕನ್ನಡದ ಖ್ಯಾತ ವಿಮರ್ಶಕರಾದ ಜಿ.ಎಚ್. ನಾಯಕ ಮತ್ತು ಶ್ರೀಮತಿ ಮೀರಾ ನಾಯಕರಿಗೆ.

ಸುತ್ತಾಟ

ಕೃತಿಯ ಎರಡನೆ ಭಾಗ ‘ಸುತ್ತಾಟ’ ಇದು ನರಹಳ್ಳಿಯವರು ಕೈಗೊಂಡ ಪ್ರವಾಸದ ಅನುಭವಗಳು. ಹಾಗು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಸಾಮಯಿಕ’ ಬರಹಗಳನ್ನು ಒಳಗೊಂಡಿದೆ. ದಿನ ಪತ್ರಿಕೆಗೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಅಭಿನವ ಪ್ರಕಾಶನದವರು ಹೊರತರುತ್ತಿರುವ ಮೌಲ್ಯಯುತ ಹಾಗು ಸಂಶೋಧನಾ ಬರೆಹಗಳನ್ನು ಒಳಗೊಂಡ ಅಭಿನವ ಚಾತುರ್ಮಾಸ ಪತ್ರಿಕೆಯ ಕಿರುಪರಿಚಯವನ್ನೂ ಈ ಕೃತಿಯಲ್ಲಿ ಮಾಡಿದ್ದಾರೆ. ‘ದೇಶ ಸುತ್ತು ಕೋಶ ಓದು’ ಎಂಬ ಮಾತಿಗೆ ನರಹಳ್ಳಿಯವರು ಅನ್ವರ್ಥ. ಜಾಗತಿಕ ಸಾಹಿತ್ಯವನ್ನು ಅಧ್ಯಯನ ಮಾಡಿರುವ ಇವರು ಪ್ರವಾಸಾಸಕ್ತರಾದ ಹೌದು. ತಾವು ಪ್ರವಾಸ ಕೈಗೊಂಡಾಗ ಆದ ಅನುಭವಗಳನ್ನು, ಕಂಡ ವಿಚಾರಗಳನ್ನು, ಅಲ್ಲಿಯ ಕಲೆ ಸಂಸ್ಕೃತಿ ಭಾಷಾ ಸೊಗಸು ಇತ್ಯಾದಿಗಳನ್ನು ತಮ್ಮ ಪ್ರಬಂಧಗಳಲ್ಲಿ ತಂದಿದ್ದಾರೆ. .

ಪದಸೋಪಾನ ಕೃತಿ ಲೇಖಕರು: ನರಹಳ್ಳಿ ಬಾಲಸುಬ್ರಹ್ಮಣ್ಯ

ಕನ್ನಡದಲ್ಲಿ ಪಂಪನಿಂದ ಮೊದಲುಗೊಂಡು, ವಚನಗಳ ಸಾಲುಗಳು, ನಡು ಸಾಹಿತ್ಯದ ಪದ್ಯದ ಸಾಲುಗಳು, ಕೀರ್ತನೆಗಳ ತುಣುಕುಗಳು, ಗೋಪಾಲಕೃಷ್ಣ ಅಡಿಗ, ಕುವೆಂಪು, ಜಿ.ಎಸ್ ಶಿವರುದ್ರಪ್ಪ, ಕೆಎಸ್.ನ ಅವರ ಸಾಲುಗಳು. ಜಾನಪದ ತ್ರಿಪದಿಗಳ ಸಾಲುಗಳು ಇವರ ಬರೆಹದಲ್ಲಿ ಇರುತ್ತವೆ. ಭಕ್ತಿ ಸಾಹಿತ್ಯ, ತಮಿಳಿನ ತಿರುಪ್ಪಾವೈ, ತೇವರಮ್ಗಳನ್ನು, ಹರಿದಾಸರ ಕೀರ್ತನೆಗಳನ್ನು, ದೋಹೆಗಳನ್ನು ತಮ್ಮ ತಾತ್ವಿಕ ಚಿಂತನಗಳ ಹಿನ್ನೆಲೆಯಿಂದಲೇ ಬಂದಿವೆ. ಗ್ರೀಕಿನ ನುಡಿಗಟ್ಟುಗಳು, ರೂಮಿಯ ಪದ್ಯಗಳು, ಎಲಿಯಟ್, ಕೀಟ್ಸ್, ವರ್ಡ್ಸ್ವರ್ತ್ ಮೊದಲಾದವರ ಪ್ರಸ್ತಾಪಗಳು ಕಲಿಕಾಸಕ್ತರಿಗೆ ಇವುಗಳ ಬಗ್ಗೆ ತಿಳಿಯಬೇಕೆಂಬ ಉತ್ಸಾಹ ಮೂಡುತ್ತದೆ. ಎಲ್ಲವನ್ನು ಒಂದೇ ಚೌಕಟ್ಟಿನಲ್ಲಿ ತಂದು ಸಂದರ್ಭವನ್ನು ಸರಿಯಾಗಿ ವಿವರಿಸಿರುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ‘ಒಪೆರಾ ಹೋಗೊಂದು ಚಿಂತನ’ ಎನ್ನುವ ಬರೆಹ. ವಾರ್ ಮೆಮೋರಿಯಲ್ ಒಪೇರ ಹೌಸ್ ರಂಗಮಂದಿರದ ಕುರಿತು ಹೇಳುತ್ತಾ ಶೇಕ್ಸ್ಪಿಯರನ ನಾಟಕಗಳಾದ ‘ರೋಮಿಯೊ ಜೂಲಿಯೆಟ್’, ‘ಹ್ಯಾಮ್ಲೆಟ್’, ‘ಮ್ಯಾಕ್ಬೆತ್’, ‘ಜೂಲಿಯಸ್ ಸೀಸರ್’, ‘ಕಿಂಗ್ಲಿಯರ’ಗಳನ್ನು ಹೇಳಿ ಬೆಂಗಳೂರಿನ ಎ. ಡಿ. ಎ ರಂಗಮಂದಿರವನ್ನೂ ನೆನಪಿಸಿಕೊಂಡು ನಮ್ಮಲ್ಲಿನ ಗೀತನಾಟಕಗಳ ಪರಂಪರೆಯನ್ನೂ ಹೇಳಿ ತಮ್ಮೂರು ನರಹಳ್ಳಿಯ ಜಾನಪದ ವಾದ್ಯವನ್ನು ನೆನಪಿಸಿಕೊಳ್ಳುತ್ತಾರೆ.

ಹೀಗೆ ಒಂದೇ ಒಂದೇ ಚೌಕಟ್ಟಿನಲ್ಲಿ ಅನೇಕ ಪರಿಪ್ರೇಕ್ಷಗಳನ್ನು ನೀಡಿ ಓದುಗರನ್ನು ವಿಷಯ ಕುತೂಹಲಿಗಳನ್ನಾಗಿ ಮಾಡಿ ಅರಿವನ್ನು ಹೆಚ್ಚಿಸಿಕೊಳ್ಳಲು ಪ್ರೇರೇಪಿಸುತ್ತಾರೆ.
‘ಪ್ರಾಚೀನ ಸಂಸ್ಕೃತಿ ಸಂಪತ್ತಿನ ಈಜಿಪ್ಟ್’ ಲೇಖನದಲ್ಲಿ ಈಜಿಪ್ಟ್ ಹಾಗು ಕನ್ನಡ ಕರಾವಳಿ ನಂಟಿನ ಕುರಿತು ಹೇಳಿದ್ದಾರೆ. ಕಾಶ್ಮೀರದ ಪ್ರವಾಸದ ಕುರಿತು ಬರೆಯುವಾಗ ಸಾಂಸ್ಕೃತಿಕ ವೈವಿಧ್ಯವನ್ನೂ, ಭಾಷಾ ಸೊಗಸಿನ ದ್ಯೋತಕ ನುಡಿಗಟ್ಟುಗಳನ್ನು ಉದಾಹರಿಸಿದ್ದಾರೆ.

ಆಲಸ್ಕ ಟೂರಿನ ಬಗ್ಗೆ ಬರೆದ್ದ ಸಾಲುಗಳನ್ನು ಓದಿದಾಗಂತೂ ನಾವೂ ಅಲ್ಲಲ್ಲಿ ಅಡ್ಡಾಡಿ ಬಂದೆವೇನೋ ಅನ್ನುವ ಭಾವನೆ ಆವರಿಸುತ್ತದೆ. ಕಾಡ್ಗಿಚ್ಚಿನ ಸಂದರ್ಭದಲ್ಲಿ ಕುಟುಂಬದವರಿಗೆ ಅಲ್ಲೆ ವಾಹನದಲ್ಲೇ ಕಾಯಬೇಕಾಗಿ ಸಂದರ್ಭ ವನ್ನು ವಿವರಿಸುತ್ತಾ ಅಲ್ಲಿಯ ಪೋಲಿಸ್ ವ್ಯವಸ್ಥೆಯನ್ನು ವಿವರಿಸಿಬಿಡುತ್ತಾರೆ. ಭೂತಾನ್ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಜನರು ತೊಡುವ ವಿಷೇಶ ಉಡುಗೆಗಳ ಬಗ್ಗೆ ಹೇಳುತ್ತಾರೆ. ನಮ್ಮ ಪದ್ಮಸಂಭವ ಅಲ್ಲಿ ಗುರು ರಿಂಫೋಚಿ ಅಗಿರುವುದನ್ನು ಹೇಳುತ್ತಲೇ ಅಲ್ಲಿನ ಆಡಳಿತ ವ್ಯವಸ್ಥೆ, ಅಬ್ಬರವಿಲ್ಲದ ಚುನಾವಣಾ ಪ್ರಕ್ರಿಯೆ, ಪ್ರಚಾರಗಳು, ಭಿತ್ತಿ ಪತ್ರಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರವೇ ಬಳಸುವ ಅಲ್ಲಿನ ಶಿಸ್ತಿನ ಬಗ್ಗೆ ತಿಳಿಸುತ್ತಾರೆ. ವಿದೇಶಿ ಪ್ರವಾಸವನ್ನು ವಿವರಿಸುತ್ತಲೆ ವಿದೇಶಿಸಾಹಿತ್ಯದ , ಅನುವಾದ ಸಾಹಿತ್ಯದ ಅಗತ್ಯತೆಯನ್ನು ಕುರಿತು ‘ಅನುವಾದ ಸಾಹಿತ್ಯ ಅನ್ಯ ಜಗತ್ತುಗಳ ಜೊತೆ ಅನುಸಂಧಾನ’ ಎಂಬ ಶೀರ್ಷಿಕೆಯಡಿ ಇನ್ನೊಂದು ಅನನ್ಯ ಬರಹವನ್ನು ಬರೆದು ಅನುವಾದ ಸಾಹಿತ್ಯವೂ ಬೇರೊಂದು ಭಾಷೆಯ ಭೇರೊಂದು ನಾಡಿನ ಜನರ ಭಾವನೆಗಳನ್ನು ಸ್ಪರ್ಶಿಸಿವಂತಾಗಿಸುತ್ತದೆ ಎಂದಿದ್ದಾರೆ., ಇವುಗಳು ನಮ್ಮಲ್ಲಿ ಹೊಸ ಬಗೆಯ ಸಂಚಲನಕ್ಕೆ ಕಾರಣವಾಗಬಹುದು ಅದರಿಂದ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಕೃತಿಯ ಮೂರನೆಯ ಭಾಗ ‘ಒಳನೋಟ’ ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸುವಂತಿದೆ.

ಒಳನೋಟ

ಯುದ್ಧೋನ್ಮಾದದ, ಯುದ್ಧ ಭೀತಿಯ ಸನ್ನಿವೇಶಗಳನ್ನು ಹೇಳುವ ಬದಲು ಯುದ್ಧಾನಂತರ ಹಾಗು ಭೀಕರ ಪರಿಣಾಮಗಳ ಬಗ್ಗೆ ಆಲೋಚಿಸುವುದು ಉತ್ತಮ ಎಂದು ಕದನ ಕುತೂಹಲವನ್ನು ಲೇಖಕರು ಧಿಕ್ಕರಿಸುತ್ತಾರೆ. ಮನುಷ್ಯ ಮನೆಯೊಳಗೆ ಬಂಧಿಯಾಗಿ ಸಾಮಾಜಿಕ ಸಂಬಂಧ ಕಡಿದುಕೊಂಡಿರುವುದು ವಿಷಾದ ಎಂಬುದನ್ನು “ಮನೆಯೊಳಗೆ ನಾವೆ ಬಂಧಿಗಳು ಕೊಠಡಿ ಮಾತ್ರ ನಮ್ಮದು” ಎಂದು ವಿಡಂಬನೆ ಮಾಡುತ್ತಾರೆ
“ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ” ಎಂದು ಅಕ್ಕನ ವಚನದ ಸಾಲುಗಳನ್ನು ಉಲ್ಲೇಖಿಸಿ ಕೊರೊನಾ ಬಂದಿರುವ ಈ ಕಾಲದಲ್ಲಿ ‘ಬೆದರುವೆನೆ ನಾನು ಬೆಚ್ಚುವೆನೆ ನಾನು’ ಎಂದು ಬರೆದು ‘ಕೊರೊನಾ’ಕ್ಕೆ ಮಂಡಿಯೂರುವುದರ ಬದಲು ಮನಸ್ಸನ್ನು ಅಣಿಗೊಳಿಸಿಕೊಳ್ಳೋಣ ಎಂದಿದ್ದಾರೆ. ಕೊರೊನಾ ಕಾಲದ ಪರಿಭಾಷೆಗಳಲ್ಲಿ ‘ಖಿನ್ನತೆ’ ಸೇರಿದೆ ಅದರ ಬಗ್ಗೆಯೂ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಉತ್ತಮ ಸಲಹೆ ನೀಡಿದ್ದಾರೆ. ಭಾವ ತಲ್ಲಣಗಳಿಂದ ಹೊರಬರಲು ಸಾಹಿತ್ಯ ಪರಿಹಾರ ಎಂದಿರುವುದು ಸಾಮಾಜಿಕರಿಗಿರುವ ಸಾಹಿತ್ಯದ ಓದಿನ ಅವಶ್ಯಕತೆಯನ್ನು ಹೇಳುತ್ತದೆ.

ಇದನ್ನು ಅವಲೋಕಿಸುವಾಗ “ನರಹಳ್ಳಿಯವರ ಚಿಂತನೆ ಈ ಹೊತ್ತಿನ ಸಾಂಸ್ಕೃತಿಕ ಅಗತ್ಯವಾಗಿದೆ” ಎಂಬ ಜಿ. ಎಸ್. ಎಸ್. ಅವರ ಮಾತುಗಳು ನೆನಪಾಗುತ್ತವೆ. “ಉತ್ಸಾಹವಿರಲಿ ವಿವೇಕ ಮಂಕಾಗದಿರಲಿ” ಎನ್ನುತ್ತಾ ವಿವೇಕ ಮತ್ತು ಜ್ಞಾನ ಸಂಪಾದನೆಗೆ ಆದ್ಯತೆ ನೀಡುವ ಇವರು ಬಹಳ ಸೀರಿಯಸ್ ಆದ ವಿಚಾರಗಳನ್ನು ಸರಳವಾಗಿ ಸುಂದರವಾಗಿ ಕನ್ವಿನ್ಸ್ ಆಗಿ ಬರೆಯುತ್ತಾರೆ. ನಾಗರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಮಗೆ ಅನೇಕ ಅಪಸವ್ಯಗಳು, ಬ್ಯೂಟಿ ಆಫ್ ದ ಡೆಮಾಕ್ರಸಿ ಎನ್ನಬಹುದಾದ ಸನ್ನಿವೇಶಗಳು ಎದುರಾಗುತ್ತವೆ ಅವುಗಳನ್ನು ನರಹಳ್ಳಿಯವರು ಪ್ರಜಾಪ್ರಭುತ್ವ ಆರಾಧನೆ, ವಿಮರ್ಶಾಪ್ರಜ್ಞೆ, ಕುಟುಂಬಕಾರಣ, ಪ್ರಜಾಭುತ್ವದ ಅಣಕ,ಪ್ರಜಾಪ್ರಭುತ್ವ ಸತ್ವ ಎಂಬ ಮಾತುಗಳಲ್ಲಿ ತರುತ್ತಾರೆ. ಅದರಂತೆ “ಹಿಂಸೆ ರಾಕ್ಷಸೀ ಪ್ರವೃತ್ತಿ” ಎಂದು ನಾಗರಿಕ ಸಮಾಜದಲ್ಲಿ ಅಗತ್ಯವಾಗಿರುವ ಸಹಬಾಳುವೆಯನ್ನೂ , ಸಾಮಾಜಿಕ ಬದ್ಧತೆಯ ಕುರಿತು ಬರೆಯುತ್ತಾರೆ, ಹಾಗೆ ಸಿನಿಮಾ ಜತ್ತಿನಲ್ಲಿರುವ ಕ್ಯಾಸ್ಟಿಂಗ್ ಕೌಚ್ನ ವಿರುದ್ಧವೂ ‘ಕ್ಯಾಸ್ಟಿಂಗ್ ಕೌಚ್’:ಪುರುಷ ಪಧಾನ ಸಮಾಜದ ಪಿಡುಗು ಎಂಬ ಬರಹದಲ್ಲಿ ಧ್ವನಿಯೆತ್ತಿದ್ದಾರೆ.


ಯುವಜನತೆಯನ್ನು ಕುರಿತು ‘ಯೌವ್ವನ ಬಂದಾಗ ಉತ್ಸಾಹ ಉನ್ಮತ್ತತೆಯ ಅಪಾಯ’ ಎಂಬ ಬರೆಹದಲ್ಲಿ ಹರೆಯದ ಗುಣಾವಗುಣಗಳು, ದುಡುಕು ಉತ್ಸಾಹ, ಇತ್ಯಾದಿಗಳನ್ನು ಕೋತಿಗೆ ಹೋಲಿಸಿ ಅದಕ್ಕೆ ಹೆಂಡ ಕುಡಿಸಿ ಅದರಲ್ಲೂ ಅದರ ಬಾಲಕ್ಕೆ ಬೆಂಕಿ ಹಚ್ಚಿದರೆ ಆಗುವ ಅನಾಹುತಗಳಂತೆ ಯುವಕರಲ್ಲಿನ ತಾರುಣ್ಯದ ಶಕ್ತಿ, ಅಪ್ಪಂದಿರು ಮಾಡಿಟ್ಟ ಹಣ, ಪರರಿಗಿಲ್ಲ ಎನಿಸುವ ಸೌಂದರ್ಯ ಇವುಗಳು ಇದ್ದರೆ ಹೇಗಾಡುತ್ತಾರೆ, ಹೇಗಾಗಬೇಕು ಎಂಬುದನ್ನು ಅಡಿಗರ ಪದ್ಯದಲ್ಲಿ ಬರುವ ‘ಹನುಮದ್ವಿಲಾಸ’ ಆಗಬಾರದು ‘ಹನುಮದ್ವಿಕಾಸ’ ಆಗಬೇಕು ಎಂಬ ಪದಗಳ ಉದಾಹರಣೆಯೊಂದಿಗೆ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಸಾಹಿತ್ಯಾಸಕ್ತರ ಸಂಗ್ರಹದಲ್ಲಿ ಅಗತ್ಯವಾಗಿ ಇರಬೇಕಾದ ಕೃತಿ ‘ಪದಸೋಪಾನ’. ಇಲ್ಲಿನ ಪ್ರಬಂಧಗಳು ಏಕತಾನತೆಯಿಂದ ಕೂಡಿರದೆ ಸಂಕೀರ್ಣ ವಿಷಯವ್ಯಾಪ್ತಿ ಹೊಂದಿವೆ. ‘ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡ’ ಎಂಬ ಅಲ್ಲಮಪ್ರಭುವಿನ ವಚನದ ಸಾಲಿನಂತೆ ನರಹಳ್ಳಿಯವರ ಅಂತರ್ಮುಖಿ ಚಿಂತನಗಳು ಇಲ್ಲಿ ಅಕ್ಷರ ರೂಪ ತಳೆದಿವೆ?. ಬಹಳ ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ಒಪ್ಪಿತವಾಗುವಂತೆ , ವಿಷಯಕ್ಕೆ ತಕ್ಕಂತೆ, ಆಯಾ ಸಂದರ್ಭಕ್ಕೆ ತಕ್ಕಂತೆ ನಿರೂಪಿಸಿರುವ ನರಹಳ್ಳಿಯವರ ನಿರೂಪಣಾ ಶೈಲಿ ಅನನ್ಯವಾದದ್ದು. ಹಾಗೆ ಯಾವುದೇ ವಿಷಯವನ್ನು ಒಂದೇ ದೃಷ್ಟಿಕೋನಕ್ಕೆ ಸೀಮಿತಗೊಳಿಸದೆ ಬಹುಮುಖಿ ಅಯಾಮಗಳ ಹಿನ್ನೆಲೆಯಲ್ಲಿ ಚರ್ಚಿಸಿ ಅರಿಸಿಕೊಂಡ ವಿಷಯಕ್ಕೆ ಸಮಗ್ರತೆಯನ್ನು ಕಟ್ಟಿಕೊಡುವುದು ನರಹಳ್ಳಿಯವರ ಬರಹಗಳ ವಿಶೇಷತೆ. ಪ್ರಸ್ತುತ ‘ಪದಸೋಪಾನ’ ಕೃತಿ ವಿಷಯ ಸೋಪಾನವೂ ಆಗಿ ವರ್ತಮಾನದ ತಲ್ಲಣಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಿದೆ.