- ಕ್ಯಾಮೆರಾ ಮನ್.. - ಡಿಸಂಬರ್ 31, 2021
- ಯುದ್ಧ ಗೆದ್ದ ನಂತರ - ಜುಲೈ 20, 2021
- ಪುಸ್ತಕ ದಿನ ಮತ್ತು ಚೆಕ್ ರೋಲ್ ಸಾಹಿತ್ಯ - ಏಪ್ರಿಲ್ 23, 2021
ಬಹಳ ದಪ್ಪಗಿನ ,ಹಳೆಯದಾದ, ಮೊದಲ ಮತ್ತು ಕೊನೆಯ ಪುಟಗಳು ಕಿತ್ತು ಹೋದ ಆ ಪುಸ್ತಕ ಮಲಗುವ ಕೋಣೆಯ ಮರದ ಬೀರುವಿನಲ್ಲಿ ನಮಗೆ ಬುದ್ದಿ ತಿಳಿದಾಗಿನಿಂದಲೂ ಇತ್ತು.
ಅಪರೂಪಕ್ಕೆ ಬಿಡುವು ಸಿಕ್ಕ ಸಂಜೆ ಅಪ್ಪ ಅದರ ಹಾಳೆ ಮಗುಚಿ ಹಾಕುತ್ತಿದ್ದರು.
ಮತ್ತು ನನಗೂ ಅಣ್ಣನಿಗೂ ಅರ್ಥವಾಗದ ರೀತಿಯಲ್ಲಿ ‘ನ್ನ್ನ ನಙನಂ್ಂಮನಙಙನನಙ’ ಅನ್ನುವ ಸಣ್ಣ ಸದ್ದಿನೊಂದಿಗೆ ಓದಿಕೊಳ್ತಿದ್ರು.
ಆ ಪುಸ್ತಕದ ಹೆಸರು’ಶ್ರೀ ವಿಜಯ’
ಅದರಲ್ಲಿ ಪಂಡರಾಪುರದ ವಿವರಗಳು ಯಥೇಚ್ಛವಾಗಿ ಇದ್ದಂತೆ ನೆನಪು.
ನೆನಪು ಯಾಕೆಂದರೆ ಆ ಪುಸ್ತಕದ ಗಾತ್ರಕ್ಕೆ ಹೆದರಿ ಇಲ್ಲಿ ತನಕ ಅದನ್ನು ಬಿಡಿಸಿ ನೋಡಿಲ್ಲ.
ಹಾಗೆ ಓದದೇ ಹೋದದ್ದು ಎಂಥಾ ನಷ್ಟ ಎಂಬುದು ತಿಳಿಯಬೇಕಾದರೆ ಮುಂದಿನ ಬಾರಿ ತವರಿಗೆ ಹೋದಾಗ ಅದರ ಗಾತ್ರದ ಹೊರತಾಗಿಯೂ ಅದರ ನಾಕಾರು ಪುಟಗಳನ್ನು ಓದಿನೋಡಬೇಕು.
ಇರಲಿ.
ಅದು ಪ್ರಜಾಮತದ ಜ಼ಮಾನ. ಪೋಸ್ಟಣ್ಣ ಏಳುಬೆಟ್ಟದ ನಡುವಿನ ನಮ್ಮ ಒಂದೇ ಮನೆಗೆ ಬೆವರಿಳಿಸುತ್ತ ತಂದುಕೊಟ್ಟು ಹೋಗುತ್ತಿದ್ದ ಪ್ರಜಾಮತವನ್ನು ಅಮ್ಮ ಪಿಟಿಪಿಟಿ ಸದ್ದಿನೊಡನೆ ಮೊದಲು ಓದುತ್ತಿದ್ದರು.ಅದಾದ ಮೇಲೆ ಅಪ್ಪ. ಅವರ ನಂತರದಲ್ಲಿ ನಾನು ತಪ್ಪಿದ್ರೆ ಅಣ್ಣ.
ನನ್ನ ತಮ್ಮನಿಗೆ ನಮ್ಮಿಬ್ಬರ ಹಾಗೆ ಓದುವ ಹುಚ್ಚು ಇರಲಿಲ್ಲ.
ನಾವು ಶಿವಭಕ್ತರಾದರೂ ಅಪ್ಪ ಬೆಳಿಗ್ಗೆ ಎದ್ದು ಕೈಕಾಲು ಮುಖ ತೊಳೆದು ವಿಭೂತಿ ಧರಿಸುವಾಗ
‘ಜಯತು ಜಯ ವಿಠಲ,
ನಿನ್ನ ನಾಮವು ಶಾಂತಿಧಾಮವು
ಪುಣ್ಯದದಾಮ.ಆಆಆಆಆ.
ಜಯತುಜಯ ವಿಠಲ’
ಅಂತ ಸಣ್ಣ ಸ್ವರದಲ್ಲಿ ರಾಗವಾಗಿ ಹಾಡುವುದನ್ನು ಕಲಿತದ್ದು ನನ್ನ ಆಗಿನ ತಿಳುವಳಿಕೆಯ ಪ್ರಕಾರ ‘ಶ್ರೀ ವಿಜಯ’ ದ ಓದಿನಿಂದ.
ಹಾಗೆ ನೋಡಿದರೆ ಬ್ರಾಹ್ಮಣರ ಮನೆಯ ಮಕ್ಕಳ ಬಾಲ್ಯಕ್ಕೂ ,ಕೃಷಿ ನೆಚ್ಚಿದ ಶೈವರ ಮನೆಯ ಬಾಲ್ಯಕ್ಕೂ ಅಜಗಜಾಂತರವಿದೆ.
ನಾವು ಚಿಕ್ಕವರಿದ್ದಾಗ ಸಿಕ್ಕುತ್ತಿದ್ದ ಚಿಕ್ಕಚಿಕ್ಕ ಕಾಗದದ ತುಂಡುಗಳು, ಬೇಳೆಕಾಳು ತರುತ್ತಿದ್ದ ಕಾಗದದ ಪಾಕೀಟುಗಳನ್ನು ಏಕಾಗ್ರತೆಯಿಂದ ಓದುತ್ತಿದ್ದರೆ ನನಗೆ ಗೊತ್ತಿದ್ದ ಹಿರಿಯರೊಬ್ಬರು
‘ಅದ್ಯಾವ ಸೀಮೆ ಹುಡ್ಳೊ ನಾನಂತೂ ಕಾಣೆ,ಬ್ರಾಂಬ್ರರ ಮಕ್ಕಳು ಕೆಟ್ಟೊದ್ವಾ ಇವೇನಾ.,ಮೂರೊತ್ತೂ ಓದಕೆ,ಕ್ಯಾಮೆ ನೋಡದುಬಿಟ್ಟು’ಅನ್ನುತ್ತಿದ್ದರು.
ಅವರು ಅಂದಿದ್ದು ಆಗಿನ ಕಾಲಕ್ಕೆ ನಿಲುಕದಿದ್ದರೂ ಈಗ ಅದರ ಅರ್ಥ ವ್ಯಾಪ್ತಿ ತಿಳಿಯುತ್ತದೆ.
ನಮ್ಮ ಬಾಲ್ಯದಲ್ಲಿ ಮನೆಯಲ್ಲಿದ್ದ ಆ ಪುಸ್ತಕದ ಬೀರುವಿನಲ್ಲಿ ಶ್ರೀವಿಜಯದ ಆ ದಪ್ಪ ಪುಸ್ತಕದ ಜೊತೆಗೆ ಪ್ರಜಾಮತದ ಪ್ರತಿಗಳು ಮತ್ತು ಅಪ್ಪನ ವಾರ್ಷಿಕ
‘ಆಳುಗಳ ಲೆಕ್ಕ ಹಾಗು ಮಳೆ ಲೆಕ್ಕದ ಚೆಕ್ ರೋಲ್’
ಪುಸ್ತಕಗಳಿಗಷ್ಟೇ ಜಾಗ ಸೀಮಿತವಾಗಿತ್ತು.
ನಮಗೆ ಹೇಗೆ ಬಾಲ್ಯದಲ್ಲಿ ಸಾಹಿತ್ಯದ ಓದು ಅಪರಿಚಿತವಾಗಿತ್ತೋ ಹಾಗೇ ಬ್ರಾಂಬ್ರರ ಮಕ್ಕಳಿಗೆ ಈ ಚೆಕ್ ರೋಲ್ ಪುಸ್ತಕವೆಂದರೆ ಏನೆಂದು ಗೊತ್ತಿರಲಾರದು.
ಸಾಹಿತ್ಯದ ಪುಸ್ತಕಗಳನ್ನು ಬಾಲ್ಯದಿಂದಲೂ ಓದಿಯೇ ಇರುವವರು ಇಲ್ಲಿ ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ.
ವಿಶ್ವ ಪುಸ್ತಕ ದಿನದ ಈ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಇರುತ್ತಿದ್ದ,ಈಗಲೂ ಹಿರಿಯ ಬೆಳೆಗಾರರು ಬರೆಯುವ ಈ ಚೆಕ್ ರೋಲ್ ಪುಸ್ತಕದ ಒಂದು ಒಳನೋಟ ಕೊಡುವೆ.
1984ನೇ ಜನವರಿ 12_ನೇ ತಾರೀಖು. ನನಗಾಗ ಒಂಬತ್ತು ವರ್ಷ.ನಾನು ಅಪ್ಪನ ಒಂದು ಚೆಕ್ ರೋಲ್ ಪುಸ್ತಕವನ್ನು ಓದಲು ಕುಳಿತಿದ್ದೇನೆ ಅಂತ ಊಹಿಸಿಕೊಳ್ಳುವುದು ಓದುಗರು.
ಅದರ ಹೊರಪುಟದಲ್ಲಿ ಹೀಗಿರುತ್ತದೆ.
…
1975-76ನೇ ಸಾಲಿನ ತೋಟದ ಲೆಕ್ಕಪತ್ರದ ವಿವರ ಹಾಗೂ ಮಳೆ ಲೆಕ್ಕದ ವಿವರ.
ಸಾಮನ್ಯವಾಗಿ ಚೆಕ್ ರೋಲ್ ಬರಹ ಜನವರಿಯಿಂದ ಆರಂಭವಾಗುತ್ತದೆ.
ದಿನಾಂಕ 21/1/75ನೇ ಸೋಮವಾರ ಏಣಿಮಂಟಿ ಪಟ್ಟೆಗೆ ನಾಲ್ಕು ಜನ ಹೆಣ್ಣಾಳು ತಿಪ್ಪೆಗೊಬ್ಬರ ಹೊತ್ತಿರುವುದು.
ಒಂದು ಆಳಿಗೆ ಮೂರುಸಾಲಿನಂತೆ ಗುತ್ತಿಗೆ ಕೊಡಲಾಗಿರುತ್ತದೆ.
ದಿನಾಂಕ _12/2/75ನೇ ಗುರುವಾದ ಇಟ್ಟಿಗೆ ಗೂಡಿನ ಪಟ್ಟೆಯಲ್ಲಿ ಆರು ಜನ ಹೆಣ್ಣಾಳು ಅಂಟುವಾಳ ಆಯ್ದಿರುತ್ತಾರೆ.ಒಬ್ಬ ಗಂಡಾಳು ಉದುರಿಸಿರುತ್ತಾನೆ.
ಅದೇ ದಿನ ನಾನು ಬ್ಯಾಂಕಿನ ಕೆಲಸಕ್ಕಾಗಿ ಮಗ್ಗೆಗೆ ಹೋಗಿರುತ್ತೇನೆ.
ಬ್ಯಾಂಕಿನಿಂದ ಅಂದು ಬಟವಾಡೆಗಾಗಿ ಡ್ರಾ ಮಾಡಿದ ಹಣ_____179ರೂ
ಬೈಕಿಗೆ ಪೆಟ್ರೋಲ್____6ರೂ
ಮನೆಗೆ ಕಾಲು ಕೆಜಿ ದ್ರಾಕ್ಷಿ ತಂದಿರುವುದು 1.50ರೂಪಾಯಿ.
ದಿನಾಂಕ 13/5/75ನೇ ಮಂಗಳವಾರ ನಮ್ಮ ನಾಗಮ್ಮನಿಗೆ ಹೆರಿಗೆ ನೋವು ಬಂದಿದ್ದು ಮಗ್ಗೆಯ ಆಸ್ಪತ್ರೆಗೆ ಸೇರಿಸಲಾಗಿರುತ್ತದೆ.
ರಾತ್ರಿ ಎಂಟೂ ನಲ್ವತ್ತಕ್ಕೆ ನಮಗೆ ಎರಡನೆಯ ಮಗು ಹುಟ್ಟಿರುತ್ತದೆ.ಹೆಣ್ಣು ಮಗು.
ಮೊದಲ ದಿನದ ಖರ್ಚು— ಔಷಧಿ ಬ್ರೆಡ್ಡು…3ರೂಪಾಯಿ
ಇದು ನಾನು ಹುಟ್ಟಿದ್ದರ ವಿವರ!!
ಹೀಗೇ ಪ್ರತಿದಿನದ ವಿಶೇಷ ಘಟನೆಗಳ ಜೊತೆಗೆ ಆಳುಗಳ ಲೆಕ್ಕ,ಅವರು ಮಾಡಿದ ಕೆಲಸದ ವಿವರಗಳು ,ಕೊಟ್ಟ ಕೆಲಸದ ಪ್ರಮಾಣ,ತೋಟದ ಯಾವ ಪಟ್ಟೆಯಲ್ಲಿ ಕೆಲಸ ಆಗಿದ್ದು ಇದೆಲ್ಲದರ ವಿವರ ದಾಖಾಲಾಗಿರುತ್ತದೆ.
ಮತ್ತು ಅಲ್ಲೇ ಆಳುಗಳ ಹಾಜರಾತಿ ಕೂಡ ಬರೆದಿರ್ತಾರೆ.
ಇದಲ್ಲದೆ ಆಯಾ ವರ್ಷದ ಮಳೆ ಲೆಕ್ಕದ ವಿವರಗಳು ಕೂಡ ಪುಸ್ತಕದ ಒಂದು ಬದಿಯಲ್ಲಿ ಅದಕ್ಕೆಂದೇ ಮೀಸಲಿರುವ ಪುಟಗಳಲ್ಲಿ ದಾಖಲಾಗುತ್ತದೆ.
ಆಯಾ ಮಳೆ ನಕ್ಷತ್ರದ ಯಾವಯಾವ ದಿನದಲ್ಲಿ ಎಷ್ಟೆಷ್ಟು ಮಳೆ ಬಂತು ಎನ್ನುವುದನ್ನು ಅಲ್ಲಿ ಬರೆಯಲಾಗುತ್ತದೆ.
ಉದಾಹರಣೆಗೆ…
ದಿನಾಂಕ 21/3/86 ರ ಬುಧವಾರ ರೇವತಿ ಮಳೆ ನಕ್ಷತ್ರ ಮೆಟ್ಟಿರುತ್ತದೆ.
ಗುರುವಾರದ ಮಳೆ ವಿವರ—65 ಸೆಂಟ್ಸ್
ಶನಿವಾರದಂದು —1.25_ಸೆಂಟ್ಸ್
ಸೋಮವಾರ–30ಸೆಂಟ್ಸ್
ಇಂತಹ ದಾಖಲೆಗಳು ಕೃಷಿಕರಾದ ಬ್ರಾಂಬ್ರರ ಮನೆಯಲ್ಲೂ ಇದ್ದಿರಬಹುದು ಅಥವಾ ಇಲ್ಲದೆಯೂ ಇರಬಹುದು.
ಆದರೆ ಬ್ರಿಟಿಷ್ ರ ಜೀವನವಿಧಾನದಿಂದ ಇನಫ್ಲುಯೆನ್ಸ್ ಆಗಿರುವ ಕಾಫಿ ಬೆಳೆಗಾರರು ಅದರಲ್ಲೂ ಈ ಜನರೇಶನ್ ಗಿಂತ ಹಿಂದಿನವರು ಇಂತಹ ದಾಖಲೆಗಳನ್ನು ಕರಾರುವಾಕ್ಕಾಗಿ ಇಡುತ್ತಿದ್ದರು.
ಮತ್ತು ಬಹುತೇಕ ಮನೆಗಳಲ್ಲಿ ಈಗಲೂ ಏಳೆಂಟು ದಶಕಗಳಷ್ಟು ಹಿಂದಿನ ದಾಖಲೆಗಳ ಚೆಕ್ ರೋಲ್ ಪುಸ್ತಕಗಳನ್ನು ಇಟ್ಟಿರುತ್ತಾರೆ.
ನಾನೂ ಅಣ್ಣನೂ ಅಕ್ಷರ ಕಲಿತು ಬ್ರಾಂಬ್ರರ ಮಕ್ಕಳಂತೆ ಓದಿನ ಆಸಕ್ತಿ ಬೆಳೆಸಿಕೊಂಡ ಹೊತ್ತಿನಲ್ಲಿ ಈ ಚೆಕ್ ರೋಲ್ ಸಾಹಿತ್ಯ ನಮಗೆ ಸಾಕಷ್ಟು ತಮಾಷೆಯೆನಿಸುತಿತ್ತು.
ಈಗ ಕುಳಿತು ಹಿಂದಿನ ಲೆಕ್ಕದ ವಿವರಗಳನ್ನು ಓದುವಾಗ ಹಳೆಯ ಖರ್ಚಗಳ ವಿವರದ ಓದು ಎಂಥ ಮಜವಾಗಿರ್ತದೆ ಅಲ್ವಾ?
ವಿಶ್ವ ಪುಸ್ತಕ ದಿನ ಎಂದಾಗ ಇದೆಲ್ಲವೂ ನೆನಪಾಗುತ್ತಿದೆ.
ಅಮ್ಮನಿಗೆ ಹಳೆಯ ವಸ್ತುಗಳ ಮೇಲೆ ವ್ಯಾಮೋಹ ಕಡಿಮೆ.
ಅಪ್ಪ ಹಾಗಲ್ಲ.
ಮುತ್ತಾತನ ಕಾಲದ್ದೂ ಕೂಡ ‘ಇದು ಬೇಕಾಗ್ತದೆ,ಇದರ ಬೆಲೆ ಗೊತ್ತಿದ್ರೆ ತನೆಯಾ,ಆ ನನ್ಮಗಂದಕ್ಕೆ’ಅಂದುಕೊಂಡು ಅಟ್ಟವನ್ನು ಅಟಾರಾ ಕಛೇರಿ ಮಾಡಿಟ್ಟಿದ್ದಾರೆ.
ಈ ಬಾರಿ ತವರಿಗೆ ಹೋದಾಗ ಒಂದು ಚೆಕ್ ರೋಲ್ ಪುಸ್ತಕ ತಂದು ನನ್ನ ಪುಸ್ತಕದ ಕಪಾಟಿಗಿಡಬೇಕು.
ಅದೊಂದು ಚಂದದ ಓದಾದೀತು.
ಜೊತೆಗೆ ಹಿರಿಯರ ಬೇರನ್ನು ನನ್ನ ಪುಸ್ತಕದ ಕಪಾಟಿನೊಳಗೆ ಇಳಿಸಿದ ಖುಷಿ.
ಹೌದಲ್ವಾ??
…
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ