ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪುಸ್ತಕ ಪರಿಚಯದ ಸಮಯದಲ್ಲಿ ‌ಕವಿ ಸಮಯ

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಇದೇನಿದು ಹೀಗೆ ಹೇಳಿದ್ದಾನೆ ಅಂದುಕೊಳ್ಳುತ್ತಿದ್ದಿರಾ…? ಮೇಲಿನ ತಲೆ ಬರಹವನ್ನು ನೋಡಿ..

ಒಂದು ತಂತ್ರಜ್ಞಾನವನ್ನು ಹೇಗೆ ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ಅದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಎನ್ನುವುದಕ್ಕೆ ಹಲವು ನಿದರ್ಶನಗಳು, ದಿನಂಪ್ರತಿ ನಮ್ಮ ಕಣ್ಣ ಮುಂದೆ ಕಾಣುತ್ತಲೇ ಇರುತ್ತವೆ.

ಅಂತಹ ಒಂದು ತಂತ್ರಜ್ಞಾನದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಮುಖಪುಸ್ತಕ. ಇದನ್ನು ಬಹಳಷ್ಟು ಜನ ಸಮರ್ಪಕವಾಗಿ ಬಳಸೋದನ್ನು ನಾವು ನೋಡುತ್ತಿದ್ದೇವೆ ಅಲ್ಲವೇ?.
ಹಾಗೆ ಕಳೆದ ವರುಷದ ‘ಕೊರೊನಾ’ ಲಾಕ್ ಡೌನ್ ಸಮಯದಲ್ಲಿ ಕಂಡುಬಂದ ಒಂದು ಸರಣಿ ಅಂಕಣದ ಮಾಲಿಿಕೆ..

“ಕವಿ ಸಮಯ”

ಇದು ಹೆಸರೇ ಹೇಳುವಂತೆ ಕವಿಗಳ ಜೊತೆ ಕಳೆದ ಸಮಯ. ಕಳೆದ ನಲ್ವತ್ತು ವರ್ಷಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣದ ಸಮಯದಿಂದ ಮೊದಲುಗೊಂಡು ಮೊನ್ನೆ ಮೊನ್ನೆವರೆಗೆ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಜೊತೆಗೆ ಕಳೆದ ಸಮಯದ ಅನುಭವ ಕಥನಗಳನ್ನು ಮುಖಪುಸ್ತಕದಲ್ಲಿ ನೀಡಿದ ಸತ್ಯನಾರಾಯಣ ಸರ್, ಇವರೊಬ್ಬ ಅದ್ಬುತ ವಾಗ್ಮಿ, ಮತ್ತು ಅಷ್ಟೇ ಚೆಂದದ ಬರಹಗಾರ.

‘ಕವಿಸಮಯ’ ಎಂಬ ಹೆಸರಿನಲ್ಲಿ ಇವರು ಬರೆಯುತ್ತಾ, ಬರೆಯುತ್ತಾ ಆದ ಒಟ್ಟು ೫೧ ಅಂಕಣಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಎಷ್ಟು ಪಟ್ಟಾಗಿ ಕುಳಿತು ಓದುವಂತೆ ಮಾಡುತ್ತದೆ ಎಂದರೆ ನಮ್ಮ ಅವಶ್ಯಕ ಕೆಲಸಗಳು ನಡುವೆ ಬಂದರೆ ಯಾಕಿಷ್ಟು ತೊಂದರೆ ಆಗುತ್ತಪ್ಪ ಓದುವಾಗ, ಅನಿಸುವಷ್ಟರ ಮಟ್ಟಿಗೆ ಅದು ನಮ್ಮನ್ನು ಆವರಿಸುತ್ತದೆ.

ಬೇಂದ್ರೆಯವರಿಂದ ದುಂಡಿರಾಜ್ ವರೆಗೆ, ಕುವೆಂಪು, ಕಾರಂತ, ಅಡಿಗರು, ಲಕ್ಷ್ಮಿ ನಾರಾಯಣ ಭಟ್ಟ, ನಿಸಾರ್, ಅನಂತಮೂರ್ತಿ, ಎಸ್. ಎಲ್. ಬೈರಪ್ಪ, ಮಲ್ಲಿಗೆ ಕವಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಒಬ್ಬ ಸಾಹಿತ್ಯಾಸಕ್ತ ಆಗಿ ಖಂಡಿತವಾಗಿಯೂ ಹೀಗೆ ಸಾಹಿತಿಗಳ ಜೊತೆಗೆ ಒಡನಾಡಬೇಕು ಮತ್ತು ಇಂದಿನ ದಿನಗಳಲ್ಲಿ ನಮ್ಮ ತಲೆಮಾರಿನ ಹುಡುಗರು ತಾವು ಏನನ್ನೂ ಓದದೆ ಬರೆಯುತ್ತೇವೆ ಎನ್ನುವುದು ದುರಂತ.
ಇಂತಹ ಕಾರಣಗಳು ಸಾಕು ಇದನ್ನು ಓದಬೇಕಾದ ಪುಸ್ತಕದ ಪಟ್ಟಿಯಲ್ಲಿ ಸೇರಿಸಲು.

ಹಾಗೂ ಇದರ ಗುರಿ, ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸುವ ಮುನ್ನ ಯಾವೆಲ್ಲ ಪುಸ್ತಕಗಳನ್ನು, ಯಾರೆಲ್ಲ ಕೃತಿ ಕಾರರನ್ನು ಓದಿಕೊಳ್ಳಬೇಕು ಎಂದೇ. ಈ ಪುಸ್ತಕ ಕನ್ನಡ ಸಾಹಿತ್ಯ ಲೋಕವನ್ನು ಪರಿಚಯಿಸುವ ಪ್ರಬಂಧದ ರೀತಿಯ ಕೈಪಿಡಿ ಆಗಿದೆ, ಹಾಗೂ ಅದರ ಗುರಿಯನ್ನು ಸಮರ್ಪಕವಾಗಿ ಮುಟ್ಟಿದ್ದಾರೆ ಲೇಖಕರು.

Every good thing must come to an end ಅನ್ನುವ ಮಾತಿದ್ದರೂ, ಇವು ಐವತ್ತೊಂದಕ್ಕೆ ನಿಂತಿದ್ದು ಅಲ್ಪವಿರಾಮ ಆಗಿರಲಿ. ಸ್ವತಃ ಲೇಖಕರು ಹೇಳಿದ ಹಾಗೆ ಅವರ ಉಳಿದ ಅನುಭವ ಕಥನವನ್ನು ಮುಂದೆ ಪುಸ್ತಕ ರೂಪದಲ್ಲಿ ಇಡುತ್ತಾರೆ ಎಂದು ನಂಬಿರುವೆ.

ಇಂತಿಪ್ಪ ‘ಅಪೂರ್ವ ಒಡನಾಟ’ ಕೃತಿಯನ್ನು ತರಿಸಿಕೊಂಡು ಎರಡು ತಿಂಗಳು ನಂತರ ಓದಿ ಮುಗಿಸಿದ ಮರುದಿನವೇ ಒಂದು ಸಾಹಿತ್ಯ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಅವರನ್ನು ಮುಖತಃ ಭೇಟಿಯಾಗಿದ್ದು ಒಂದು ಅರ್ಪೂವ ಸುಯೋಗ. ಅವರಿಗೆ ನಮಸ್ಕಾರ ಹೇಳಿದಾಗ…

“ಹೆಸರು ಹೇಳಲು ನೀವು ನನ್ನ ಪುಸ್ತಕ ತರಿಸಿಕೊಂಡಿರಿ ತಾನೇ? ಬನ್ನಿ! ಬೆಳಗಿನ ಉಪಾಹಾರ, ತಿಂಡಿ ತಿನ್ನೋಣ”

ಎಂದು ಹೇಳಿ ತಿನ್ನಿಸಿದ್ದಲ್ಲದೆ ಒಂದಷ್ಟು ಉಪಯುಕ್ತ ಸಲಹೆಗಳನ್ನು ಸಾಹಿತ್ಯ ಕೃಷಿಗೆ ಸಂಬಂಧಿಸಿದಂತೆ ನೀಡಿದರು.

ಪುಸ್ತಕ ಓದುವಾಗ ಎಷ್ಟೆಲ್ಲ ನೆನಪು ಇದೆ ಇವರಿಗೆ ಎಂದು ಕೊಳ್ಳುತ್ತಿದ್ದವನಿಗೆ ಎದುರಿಗೆ ಸ್ವತಃ ಅವರು ಪುಸ್ತಕ ತರಿಸಿಕೊಂಡಿದ್ದನ್ನು ನೆನಪಿಸಿಕೊಂಡು ಮಾತಾನಾಡಿದಾಗ ಅವರ ನೆನಪಿನ ಶಕ್ತಿಯು ಅನುಭವಕ್ಕೆ ಬಂತು. ಯಾವುದೇ ತಾರತಮ್ಯ ಮಾಡದೇ ವಿನಯವಾಗಿ ಎಲ್ಲರ ಬಳಿ ಮಾತಾನಾಡಿದರು.

ಬೇಂದ್ರೆಯವರನ್ನು ಇವರು ಚಿಕ್ಕಂದಿನಲ್ಲಿ ಭೇಟಿ ಮಾಡಿದಾಗ ಇವರು ಆಟೋಗ್ರಾಫ್ ಕೇಳಿದರಂತೆ. ಆದರೆ ಇವರ ಬಳಿಯಿದ್ದ ಪೆನ್ನು ಹಿಡಿದು, ಬೇಂದ್ರೆಯವರು ಎಷ್ಟು ಬರೆಯಲು ಪ್ರಯತ್ನಿಸಿದರೂ ಬರಿಯಲೇ ಇಲ್ಲ. ಆಗ ಬೇಂದ್ರೆಯವರು ಇವರಿಗೆ ಆಟೋಗ್ರಾಫ್ ಪುಸ್ತಕದಲ್ಲಿ ಸಹಿ ಮಾಡು ಎಂದು ಹೇಳಿದಾಗ, ಪೆನ್ನು ಆರಾಮಾಗಿ ಬರೆಯಿತಂತೆ. ಅದಕ್ಕೆ ಬೇಂದ್ರೆಯವರು ನಿನ್ನ ಪೆನ್ನು ಪತಿವ್ರತೆ!! ಎಂದಿದ್ದರಂತೆ.

ಆದರೆ ನಾನು ಪುಸ್ತಕದ ಮೇಲೆ ಇವರ ಆಟೋಗ್ರಾಫ್ ಕೇಳಿದಾಗ ನನ್ನ ಬಳಿಯಿದ್ದ ಲೇಖನಿ ಆ ರೀತಿ ವರ್ತಿಸಲಿಲ್ಲ !!

ಮೇಲೆ ಹೇಳಿದ ಹಾಗೆ ಕನ್ನಡ ಸಾಹಿತ್ಯ ಲೋಕದ ಪರಿಚಯ ಪ್ರಬಂಧ ಕೈಪಿಡಿಯಾದ ಕೃತಿ ‘ಅಪೂರ್ವ ಒಡನಾಟ’ ಓದಿಕೊಳ್ಳಿ. ಅದು ನೀಡುವ ಆನಂದದಲ್ಲಿ ತೇಲಿ ಹೋಗಿ.

ಪುಸ್ತಕ : ಅಪೂರ್ವ ಒಡನಾಟ
ಲೇಖಕರು : ಡಾ| ಎಚ್ ಎಸ್ ಸತ್ಯನಾರಾಯಣ
ಪ್ರಕಾಶಕರು : ಕಣ್ವ ಪ್ರಕಾಶನ

ಪ್ರತಿಗಳಿಗಾಗಿ ಈ ಕೆಳಗಿನ ಸಂಖ್ಯೆ
9845052481

ಅಥವಾ ಲೇಖಕರನ್ನು 8147544454 ಸಂಪರ್ಕಿಸಬಹುದು.