ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬದುಕಲು ಕಲಿಸುವ ವಿಶ್ವ ಸಂತ

ಕೆ.ಜನಾರ್ದನ ತುಂಗ
ಇತ್ತೀಚಿನ ಬರಹಗಳು: ಕೆ.ಜನಾರ್ದನ ತುಂಗ (ಎಲ್ಲವನ್ನು ಓದಿ)

ಬದುಕಲು ಕಲಿಸುವ ವಿಶ್ವ ಸಂತ – ಶ್ರೀ ಶ್ರೀ ರವಿ ಶಂಕರರು

ಮನುಷ್ಯನಿಗೆ ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳಿರುವುದು ಎಲ್ಲರಿಗೂ ತಿಳಿದೇ ಇದೆ. ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳ ಕಾರ್ಯವನ್ನು ನಿಯಂತ್ರಿಸುತ್ತವೆ. ಜ್ಞಾನೇಂದ್ರಿಯಗಳು ಹೊರಮುಖವಾಗಿ ಪ್ರಯಾಣಿಸಿದಾಗ ಕರ್ಮೇಂದ್ರಿಯಗಳ ಮೂಲಕ ಮನುಷ್ಯ ಭೌತಿಕ ವ್ಯವಹಾರಗಳಲ್ಲಿ ನಿರತನಾಗುತ್ತಾನೆ. ಆದರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭೌತಿಕ ವ್ಯವಹಾರಗಳಲ್ಲಿ ಅನಾಸಕ್ತಿಯನ್ನು ತೋರಿ ಅಂತರ್ಮುಖಿಯಾಗುತ್ತಾರೆ. ಹೀಗೆ ಅಂತರ್ಮುಖಿಯಾಗುವುದು, ಅಂತರಂಗದ ಪ್ರಯಾಣ. ಇದು ಆಧ್ಯಾತ್ಮ ಲೋಕದ ಪ್ರಯಾಣ. ಕೆಲವರು ಇದೇ ಹಾದಿಯಲ್ಲಿ ಮುನ್ನಡೆಯುತ್ತಾರೆ. ಅನೇಕರ ವಿಷಯದಲ್ಲಿ ಇದು ಒಂದೆರಡು ಕಾಲಘಟ್ಟಗಳ ಆಕಸ್ಮಿಕವಾಗಿಯೇ ಉಳಿಯುತ್ತದೆ.

ಹೀಗೆ ಅಂತರಂಗದ ಆಧ್ಯಾತ್ಮಿಕ ಲೋಕದಲ್ಲಿ ಪ್ರಯಾಣಿಸುವವರು ನಿಮಗೆ ಭಾರತದಲ್ಲಿ ಎಲ್ಲೆಲ್ಲಿಯೂ, ಎಲ್ಲ ಕಾಲದಲ್ಲಿಯೂ ಕಾಣಸಿಗುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಮಾರ್ಗದಲ್ಲಿ ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಮುಂದೆ ಸಾಗಿರುತ್ತಾರೆ. ಜ್ಞಾನೇಂದ್ರಿಯಗಳು ಬಹಿರ್ಮುಖವಾಗಿ ಪ್ರಯಾಣಿಸುವಾಗ ಸುಖವನ್ನು ಅರಸುತ್ತಿದ್ದರೆ, ಅಂತರ್ಮುಖವಾದಾಗ, ಆನಂದವನ್ನು ಅರಸುತ್ತವೆ. ಈಗ ಇರುವ ಎಲ್ಲವುಗಳಿಂದ ಬಿಡುಗಡೆಯನ್ನು ಬಯಸುತ್ತವೆ. ಹೀಗೆ ಆನಂದ ಮತ್ತು ಬಿಡುಗಡೆ, ಆಧ್ಯಾತ್ಮಿಕ ಲೋಕದ ಎರಡು ಪ್ರಮುಖ ಸಿದ್ಧಿಗಳು.

ಆನಂದದ ಅರಸಾಟದಲ್ಲಿ ಬಿಡುಗಡೆಗಾಗಿ ಉಂಟಾಗುವ ತಹತಹ, ಒಬ್ಬೊಬ್ಬ ಸಾಧಕನ ಜೀವನದಲ್ಲಿ ಒಂದೊಂದು ಕಾಲಘಟ್ಟದಲ್ಲಿ ಉಂಟಾಗಬಹುದು. ಬೇರೆಯವರಿಗೆ ಅದು ತಿಳಿಯದಿರಬಹುದು. ಆದರೆ ವ್ಯಕ್ತಿ ಒಂದು ಹಂತವನ್ನು ತಲುಪಿದ ನಂತರ, ಇತರರಿಗೆ ಈ ಬಿಡುಗಡೆಯ ಹೋರಾಟದ ಕುರುಹುಗಳು ನಿಚ್ಚಳವಾಗಿ ಕಾಣಿಸುತ್ತವೆ.

ಮಂಜಿನ ಹನಿಗಳು

ಭಾರತದ ಅಗ್ರಶ್ರೇಣಿಯ ಆಧ್ಯಾತ್ಮಿಕ ನಾಯಕರಲ್ಲಿ ಮುಂಚೂಣಿಯಲ್ಲಿರುವವರು ಶ್ರೀ ಶ್ರೀ ರವಿ ಶಂಕರರು. ಶಿಷ್ಯರಿಂದ ಗುರುದೇವ ಎಂದು ಸಂಬೋಧಿಸಲ್ಪಡುವ ಶ್ರೀ ಶ್ರೀ ರವಿ ಶಂಕರರು, ಶ್ರೀಶ್ರೀ ಎಂದೇ ಲೋಕವಿಖ್ಯಾತರು. ಇವರು ಕನ್ನಡಿಗರು, ಬೆಂಗಳೂರಿನ ನಿವಾಸಿಗಳು ಎಂದರೆ ಸಾಲದು; ಇವರು ಬಾಲ್ಯದಲ್ಲಿ ಕನ್ನಡದಲ್ಲಿ ರಚಿಸಿದ ಕವನಗಳನ್ನು ನಾವು ಗಮನಿಸಬೇಕು. ಶ್ರೀಶ್ರೀಯವರು 1972 ರಿಂದ 1976 ಫೆಬ್ರವರಿಯ ವರೆಗೆ ಬರೆದ ಅನೇಕ ಕವನಗಳನ್ನು ಅವರ ಮಿತ್ರರೊಬ್ಬರು “ಮಂಜಿನ ಹನಿಗಳು” ಎಂಬ ಸಂಕಲನ ರೂಪದಲ್ಲಿ ಪ್ರಕಟಿಸಿದ್ದಾರೆ. ಸಂಕಲನದಲ್ಲಿ ಅನೇಕ ಮುದ್ರಣ ದೋಷಗಳಿದ್ದರೂ ಇಲ್ಲಿರುವ ಎಲ್ಲ ಕವನಗಳಲ್ಲಿ ಅವರಲ್ಲಿ ತುಡಿಯುತ್ತಿದ್ದ ಬಿಡುಗಡೆಯ ಬಯಕೆಯ ಬೀಜಗಳನ್ನು ಗುರುತಿಸಬಹುದು.

“ತುಂಟನ ತಂಟೆ ತಾಳಲಾಗದು
ಕಂಕದಿ ಕೂರಲೂ ಒಲ್ಲ ಇಳಿಯಲೂ ಒಲ್ಲ”

ಹೀಗೆಂದು ಬರೆದದ್ದು ಅಡಿಗರ ಕುರಿತಾದರೂ ಅದು ಅವರು ಆ ಸಮಯದಲ್ಲಿ ಅನುಭವಿಸುತ್ತಿದ್ದ ಸ್ಥಿತಿಗೂ ಅನ್ವಯವಾಗುತ್ತಿತ್ತು.

“ಹೊತ್ತು ತಿರುವಿದ್ದೇ ತಪ್ಪು
ಸದ್ಯ ಬೇಡಪ್ಪ ಎಂದು
ದೂರ ಸರಿದಷ್ಟೂ ಆಯಸ್ಕಾಂತ”

ತಮ್ಮ ಆರಂಭಿಕ ದಿನಗಳಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದ ಶ್ರೀಶ್ರೀಯವರು —

“ನನ್ನ ಮನಸ್ಸಿನಲ್ಲಿರುವುದು
ನಿಮ್ಮ ಹೊತ್ತು ಹೊರಹಾಕುವುದು”

ಎಂದು ತಮ್ಮ ಸಂಕಲ್ಪವನ್ನು ಪ್ರಕಟಪಡಿಸಿ ಕೊನೆಗೆ —

“ಇಗೋ ಈ ರಸ್ತೆಯಲೀಗ
ನಗರ ಸಭೆಯ ಕರಿ ವ್ಯಾನು
ನಿಮ್ಮ ಬದಲು ನಿಮ್ಮ ಕೂಸು
ಸುತ್ತಲೂ ಹತ್ತು ಮಂದಿ
ಅಪಪ್ರಲಾಪ!”

ಎಂದು ಬರೆಯುತ್ತಾರೆ.

“ಅಡಿಗರಿಗೆ” ಎಂದು ಬರೆದ ಅವರ ಕವನ ಹದಿಹರೆಯದಲ್ಲಿ ಅವರ ಮನೋಭಾವವನ್ನು ಸಮರ್ಥವಾಗಿ ಪ್ರತಿನಿಧಿಸುತ್ತದೆ.

ಇಲ್ಲಿ ಅಡಿಗರು ಕೇವಲ ಸಂಕೇತ. ತಮ್ಮ ಮೇಲೆ ಉಂಟಾಗಿರುವ ಎಲ್ಲ ಪ್ರಭಾವಗಳೂ ತಮ್ಮ ಮುಂದಿನ ಜೀವನವನ್ನು ನಿರ್ಣಯಿಸುವುದಾದರೆ, ತಾವು ಬಯಸಿದ ಬಿಡುಗಡೆಯ ಮಾರ್ಗ ದೂರವಾಗಬಹುದಲ್ಲವೆ? ಹೀಗಾಗಿ ಮೊದಲು ಈ ಎಲ್ಲ ಪ್ರಭಾವಗಳಿಂದ ಬಿಡುಗಡೆ ಪಡೆಯಬೇಕು ಎಂದು ಶ್ರೀಶ್ರೀ ಅಂದೇ ದೃಢ ಸಂಕಲ್ಪ ತೊಟ್ಟಿದ್ದರು. ಅದರಂತೆ, ಹಿಮಾಲಯದ ತಪ್ಪಲಿಗೆ ತೆರಳಿ ಮಹರ್ಷಿ ಮಹೇಶ್ ಯೋಗಿಗಳ ಜೊತೆ ಸೇರಿದರು. ಆ ಸಂದರ್ಭದಲ್ಲಿ ಹೀಗೆ ಬರೆಯುತ್ತಾರೆ —

“ಹೊಸ ದಿಗಂತಕ್ಕೆ ಹಾರುವ ಹಕ್ಕಿಗೆ ಹಿಂದು ಹಿಂದಕೆ ಹಾರಿ ತುಡಿವ ಮೀನು ಈಗೊಂದು ಹಂತ ಕಂಡು ಹಾರೈಸುತ್ತಿದೆ ‘ಜೇನುಕ್ಕಿ ಹರಿಯಲಿ’”

ಜೇನುಕ್ಕಿ ಹರಿಯಿತು. ಜಗತ್ತಿನ ಎಲ್ಲೆಡೆ ಹರಿಯಿತು. ಜಗತ್ತಿನ 156 ದೇಶಗಳಲ್ಲಿ ಇಂದು ಅವರ ನೆಲೆಯಿದೆ. 192 ದೇಶಗಳಲ್ಲಿ ಅವರ ಶಿಷ್ಯರಿದ್ದಾರೆ. ಅವರ ಶಿಷ್ಯವೃಂದ 30 ಕೋಟಿಗೂ ಮಿಗಿಲಾಗಿದೆ ಎಂದರೆ ಅವರ ಅಂದಿನ ಸಂಕಲ್ಪಶಕ್ತಿಯನ್ನು ಊಹಿಸಿಕೊಳ್ಳಬಹುದು.

ಬಾಲ್ಯವು ಕನಸುಗಳ ಕಾಲ. ಹೊಸ ದಿಗಂತಕ್ಕೆ ನೆಗೆಯುವ ಕನಸು ಕಾಣುವ ಕಾಲ. ಇಂದ್ರಿಯಗಳು ಬಹಿರ್ಮುಖವಾಗುತ್ತಿರುವಾಗ ಅದನ್ನು ಸಾಕ್ಷೀಭಾವದಿಂದ ನೋಡುವ ಮನಸ್ಸು ತನ್ನ ನೆಲೆಯನ್ನು ಕಂಡು ಎಲ್ಲ ಕಡೆ ಜೇನುಕ್ಕಿ ಹರಿಯಲಿ ಎಂದು ಹಾರೈಸುತ್ತಿದೆ. ಮುಂದೆ ಪ್ರೇಮದ ಜೇನು ಉಕ್ಕಿ ಹರಿಯಲಿ ಎಂಬುದೇ ಶ್ರೀಶ್ರೀಯವರ ಜೀವನದ ಧ್ಯೇಯವಾಯಿತು.

ಹನಿಗಳು ಘನಿಸಿ ಪ್ರೇಮಸಾಗರ

ಪ್ರೇಮ, ಜಗತ್ತಿನ ಚಾಲಕ ಶಕ್ತಿ ಎನ್ನುವುದು ಶ್ರೀಶ್ರೀಯವರ ಪ್ರಧಾನ ತತ್ತ್ವ. ನಿಮ್ಮ ಉಸಿರು ದೇಹವನ್ನು ಪ್ರೀತಿಸುತ್ತಿದೆ, ನಿಮ್ಮ ಜೀವಕೋಶಗಳು ಪರಸ್ಪರ ಪ್ರೇಮದಲ್ಲಿವೆ, ನಿಮ್ಮ ಆಹಾರ ನಿಮ್ಮನ್ನು ಪ್ರೇಮಿಸುತ್ತಿದೆ. ಈ ಭೂಮಿ ನಿಮ್ಮನ್ನು ಪ್ರೀತಿಸುತ್ತಿದೆ, ಈ ಗ್ರಹ, ಸೂರ್ಯ, ಆಕಾಶಗಂಗೆಗಳನ್ನು ಅವುಗಳ ನಡುವೆ ಇರುವ ಅಗಾಧವಾದ ಶೂನ್ಯ ಪ್ರೀತಿಸುತ್ತಿದೆ. ಈ ಜಗತ್ತಿನ ಅಸ್ತಿತ್ವಕ್ಕೆ, ಜಗತ್ತಿನಲ್ಲಿ ನಿಮ್ಮ ಅಸ್ತಿತ್ವಕ್ಕೆ ಕಾರಣ ಪ್ರೇಮ. ಪ್ರೇಮ ನಿಮ್ಮ ಸಹಜ ಸ್ವಭಾವ ಎಂದು ಸದಾ ಹೇಳುತ್ತಿರುವ ಶ್ರೀಶ್ರೀಯವರು ಪ್ರೇಮದ ಮೂಲಕ ಬಾಳುವೆಯನ್ನು ನಡೆಸಲು ನೆರವಾಗುವ ಉದ್ದೇಶದಿಂದ “ಆರ್ಟ್ ಆಫ್ ಲಿವಿಂಗ್” ಸಂಸ್ಥೆಯನ್ನು ಪ್ರಾರಂಭಿಸಿದರು.

“ರೂಕ್ಷವಾಗಿರುವ ಎಡ ಮಿದುಳು ಪ್ರಧಾನವಾಗಿರುವ ವ್ಯಕ್ತಿಗೆ ಪ್ರಥಮ ಪುರುಷ (ಅವನು) ಉತ್ತಮವಾಗಿ ಕಾಣಿಸುತ್ತದೆ. ವ್ಯಕ್ತಿಯ ಹೃದಯವನ್ನು ಮೀಟಲು ಅವನು ಉತ್ತಮ ಪುರುಷಕ್ಕೆ (ನಾನು) ಬರಬೇಕು. ಸೂಕ್ಷ್ಮತೆಯನ್ನು ಉಂಟುಮಾಡಲು, ಸೂಕ್ಷ್ಮತೆಯು ಪ್ರಕಟವಾಗಲು ಉತ್ತಮ ಪುರುಷವನ್ನೇ ಬಳಸಬೇಕು. ಉತ್ತಮ ಪುರುಷದಿಂದ ನಂತರ ಮಧ್ಯಮ ಪುರುಷ. ನೀನೂ ಅದೇ ಎಂಬ ಮಧ್ಯಮ ಪುರುಷದ ಜ್ಞಾನವನ್ನು ಪಡೆಬೇಕು. ಅವನಿಂದ ನಾನು, ನನ್ನಿಂದ ನೀನು ಎನ್ನುವುದೇ “ಆರ್ಟ್ ಆಫ್ ಲಿವಿಂಗ್”ನ ಮೂಲತತ್ತ್ವ ಎಂದು ಶ್ರೀಶ್ರೀಯವರೇ ಭಗವದ್ಗೀತೆಯ ವ್ಯಾಖ್ಯಾನದ ಸಮಯದಲ್ಲಿ ಹೇಳಿದ್ದಾರೆ. ಇದರ ಅರ್ಥ ಇಷ್ಟೇ: “ಜಗತ್ತಿನ ಪ್ರತಿಯೊಂದು ಸೃಷ್ಟಿಯಲ್ಲಿಯೂ ಅವನನ್ನು ಕಾಣಬೇಕು. ಅವನನ್ನು ನನ್ನ ಹೃದಯಕ್ಕೆ ತಂದುಕೊಂಡು ನಾನೂ ಅವನೂ ಒಂದೇ, ಜಗತ್ತಿನ ಎಲ್ಲ ಚರಾಚರಗಳೂ ನಾನೂ ಒಂದೇ ಎಂಬ ಭಾವವನ್ನು ರೂಢಿಸಿಕೊಳ್ಳಬೇಕು. ನಂತರ ನಮ್ಮ ಸಮೀಪವಿರುವ, ಸಂಪರ್ಕಕ್ಕೆ ಬರುವ ಎಲ್ಲ ಚರಾಚರ ವಸ್ತುಗಳಲ್ಲಿಯೂ ನನ್ನೊಳಗಿನ ದೈವತ್ವವನ್ನೇ ಕಾಣಬೇಕು.” ಈ ರೀತಿಯಾಗಿ ಭಾವಿಸಿಕೊಳ್ಳುವಾಗ, ಪ್ರೇಮವೊಂದೇ ಸ್ಥಾಯೀ ಭಾವವಾಗಿ ಶಾಂತಿ ನೆಲೆಸುವುದು ನಿಶ್ಚಿತ. ಇಷ್ಟಕ್ಕೂ ಸನಾತನ ಧರ್ಮದ ಆಶಯ ಅಧಿಭೂತ, ಅಧಿದೈವ ಮತ್ತು ಆಧ್ಯಾತ್ಮಿಕ ನೆಲೆಗಳಲ್ಲಿ ಶಾಂತಿಯೇ ತಾನೆ!

ಬದುಕುವ ಕಲೆ

ಆರೋಗ್ಯವಿದ್ದಲ್ಲಿ ಶಾಂತಿಯೂ ಇರುತ್ತದೆ. “ಆರ್ಟ್ ಆಫ್ ಲಿವಿಂಗ್”ನಲ್ಲಿ ಎಲ್ಲ ಪ್ರಕ್ರಿಯೆಗಳೂ ಸ್ವಸ್ಥ ದೇಹ ಮತ್ತು ಸ್ವಸ್ಥ ಮನಸ್ಸಿನ ಗುರಿ ಹೊಂದಿವೆ. ಶ್ರೀಶ್ರೀಯವರು ಆರೋಗ್ಯವನ್ನು ಈ ರೀತಿಯಾಗಿ ವಿವರಿಸುತ್ತಾರೆ —

“ರೋಗಮುಕ್ತ ಶರೀರ
ಕಂಪನಮುಕ್ತ ಉಸಿರಾಟ
ಒತ್ತಡಮುಕ್ತ ಮನಸ್ಸು
ಪ್ರತಿಬಂಧವಿಲ್ಲದ ಬುದ್ಧಿಮತ್ತೆ
ಗೀಳುಮುಕ್ತ ಸ್ಮೃತಿ
ಎಲ್ಲವನ್ನೂ ಒಳಗೊಳ್ಳುವ ಅಹಂ
ದುಃಖಮುಕ್ತ ಆತ್ಮ”

ರೋಗಮುಕ್ತ ಶರೀರಕ್ಕಾಗಿ ಯೋಗಾಭ್ಯಾಸ ಮತ್ತು ಆಯುರ್ವೇದಗಳಿಗೆ ಶ್ರೀಶ್ರೀಯವರು ಒತ್ತು ನೀಡುತ್ತಾರೆ. ಕಂಪನಮುಕ್ತ ಉಸಿರಾಟಕ್ಕಾಗಿ ಪ್ರಾಣಾಯಾಮದ ಅಭ್ಯಾಸ ಒಳ್ಳೆಯದು. ಒತ್ತಡಮುಕ್ತ ಮನಸ್ಸಿಗಾಗಿ ಸುದರ್ಶನ ಕ್ರಿಯಾ ಯೋಗವನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರತಿಬಂಧವಿಲ್ಲದ ಬುದ್ಧಿಮತ್ತೆ, ಗೀಳುಮುಕ್ತ ಸ್ಮೃತಿಗಾಗಿ ಅನೇಕ ವಿಧದ ಧ್ಯಾನಗಳನ್ನು ಪರಿಚಯಿಸಿದ್ದಾರೆ. ಸೇವೆಯ ಮೂಲಕ ಎಲ್ಲವನ್ನೂ ಒಳಗೊಳ್ಳುವ ಪ್ರವೃತ್ತಿ ಉಂಟಾಗುತ್ತದೆ. ಅದಕ್ಕಾಗಿ ತಮ್ಮ ಅನೇಕ ಸಂಸ್ಥೆಗಳ ಮೂಲಕ ಸೇವೆಯ ಅವಕಾಶವನ್ನು ಒದಗಿಸಿದ್ದಾರೆ. ದುಃಖಮುಕ್ತ ಆತ್ಮಕ್ಕೆ ಧ್ಯಾನವೊಂದೇ ಸಾಧನ. ಇದು ಬಿಡುಗಡೆಗೆ ಶ್ರೀಶ್ರೀಯವರು ತೋರಿಸಿದ ಹಾದಿಯೂ ಆಗಿದೆ.

ಆತ್ಮಕ್ಕೆ ಏಳು ಪದರಗಳಿವೆ ಎಂದು ಶ್ರೀಶ್ರೀಯವರು ಹೇಳುತ್ತಾರೆ. ಈ ಎಲ್ಲ ಪದರಗಳನ್ನು ಕ್ರಮವಾಗಿ ಗಮನಿಸಿವುದು ಅಗತ್ಯ. ಮೊತ್ತಮೊದಲ ಪದರ ಶರೀರ. ಇದನ್ನು ರೋಗಮುಕ್ತವಾಗಿ ಇರಿಸಿಕೊಳ್ಳಬೇಕು. ಎರಡನೆಯದು ಉಸಿರು. ಉಸಿರು ಭಾವನೆಗಳನ್ನು ಪ್ರಕಟಪಡಿಸುತ್ತದೆ. ಭಾವನೆಗಳು ಪ್ರಶಾಂತವಾಗಿರಬೇಕಾದರೆ, ಉಸಿರು ಕಂಪನಮುಕ್ತವಾಗಿರಬೇಕು. ವಿಲೋಮವಾಗಿ ಉಸಿರಿನ ಕಡೆಗೆ ಗಮನ ಹರಿಸಿದರೆ, ಭಾವನೆಗಳು ಪ್ರಶಾಂತವಾಗುತ್ತವೆ. ಮುಂದಿನ ಪದರ ಮನಸ್ಸು. ಮನಸ್ಸಿನಲ್ಲಿ ಎಲ್ಲ ಯೋಚನೆಗಳೂ, ಭಾವನೆಗಳೂ ಹುಟ್ಟಿಕೊಳ್ಳುತ್ತವೆ, ಹುಟ್ಟಿಕೊಂಡಂತೆಯೇ ನಾಶವಾಗುತ್ತವೆ. ಈ ಮೂರು ನೆಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಗತಿ ಅಸಾಧ್ಯ.

ನಾಲ್ಕನೆಯ ಪದರ ಬುದ್ಧಿ. ಸರಿ-ತಪ್ಪುಗಳನ್ನು ವಿಮರ್ಶಿಸುವ ಶಕ್ತಿ. ಇದು ಸಮತ್ವದಲ್ಲಿರಬೇಕು. ಪೂರ್ವಾಗ್ರಹ ಪೀಡಿತವಾಗಿರಬಾರದು. ನಂತರ ಚಿತ್ತ ಅಥವಾ ಸ್ಮೃತಿ. ಎಲ್ಲ ಸಂಚಿತ ಕರ್ಮಗಳ ಸ್ಥಾನ ಈ ಸ್ಮೃತಿ. ಇದು ಮಾನವನ ಮನಸ್ಸಿನಲ್ಲಿ ಜನ್ಮ ಜನ್ಮಾಂತರಗಳಲ್ಲಿ ಉಂಟಾಗಿರುವ ಪ್ರಭಾವಗಳ ಒಟ್ಟು ಮೊತ್ತ. ಈ ಸ್ಮೃತಿಗಳನ್ನು ಪರಿಶೋಧಿಸಬೇಕು. ಇವು ನಮ್ಮನ್ನು ಗೀಳಿನಂತೆ ಕಾಡಬಾರದು. ಇದರ ನಂತರ ಅಹಂಕಾರ; ನಾನು ಎಂದು ಗುರುತಿಸಿಕೊಳ್ಳುವುದು. ಈ ನಾನು ಎಂಬ ಪದದ ಅರ್ಥವನ್ನು ವಿಸ್ತರಿಸಿ ಎಲ್ಲರೂ ಇದರಲ್ಲಿ ಬರುವಂತೆ ಮಾಡಿಕೊಂಡರೆ, ಅದು ಸ್ವಾಸ್ಥ್ಯ. ಈ ಆರು ಪದರಗಳು ಸ್ವಸ್ಥವಾದಾಗ ಅತ್ಯಂತ ಒಳಗಿನ ಪದರವಾದ ಆತ್ಮ ದುಃಖಮುಕ್ತವಾಗಿರುತ್ತದೆ. ಈ ಪದರಗಳ ಮೂಲಕ ಪಯಣಿಸುವುದೇ ಅಂತರಂಗದ ಪಯಣ. ಇದೇ “ಆರ್ಟ್ ಆಫ್ ಲಿವಿಂಗ್”.

ಲೌಕಿಕ ವ್ಯವಹಾರಗಳನ್ನು, ಲೌಕಿಕ ಕರ್ಮಗಳನ್ನು ತಿರಸ್ಕರಿಸಬಾರದು. ಯಾವ ಕೆಲಸವನ್ನು ಮಾಡಿದರೂ ಸಂಪೂರ್ಣ ಆಸಕ್ತಿಯಿಂದ ಮಾಡಬೇಕು ಎಂದು ಹೇಳುತ್ತಾರೆ ಶ್ರೀಶ್ರೀ. ಹಣ ಗಳಿಸುವುದು ಅಪರಾಧವಲ್ಲ. ಪ್ರತಿಯೊಬ್ಬರೂ ಹಣ ಗಳಿಸಬೇಕು. ತಲೆಯಿಂದ ವ್ಯವಹಾರ ಮಾಡಬೇಕು, ಹೃದಯದಿಂದ ಧರ್ಮಕಾರ್ಯ ಮಾಡಬೇಕು ಎನ್ನುತ್ತಾರೆ ಶ್ರೀಶ್ರೀ. ಇದು ವಿರುದ್ಧವಾದರೆ ನಾಶ ಕಟ್ಟಿಟ್ಟ ಬುತ್ತಿ. ಶ್ರೀ ಶ್ರೀ ರವಿ ಶಂಕರರು ವ್ಯವಹಾರದಲ್ಲಿ ನೈತಿಕತೆಯನ್ನು ಪ್ರತಿಪಾದಿಸಿ ಜಗತ್ತಿನ ಪ್ರಮುಖ ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಜಾಗತಿಕ ಸಮ್ಮೇಳನಗಳನ್ನು ನಡೆಸಿದ್ದಾರೆ.

ಸಾಧನೆ-ಸೇವೆ-ಸತ್ಸಂಗ

“ಆರ್ಟ್ ಆಫ್ ಲಿವಿಂಗ್” ಸಂಸ್ಥೆಯ ಮೂರು ಸ್ತಂಭಗಳು — ಸಾಧನೆ, ಸೇವೆ ಮತ್ತು ಸತ್ಸಂಗ. ಯೋಗ, ಪ್ರಾಣಾಯಾಮ, ಧ್ಯಾನ, ಕ್ರಿಯೆಗಳೆಲ್ಲವೂ ಸಾಧನೆಯ ಭಾಗವಾದರೆ, ಸೇವೆ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ಶ್ರೀಶ್ರೀ ಹೇಳುತ್ತಾರೆ. ಸೇವೆ ಎಂದರೆ “ಸ ಇವ” — ಅವನೇ ನಾನು ಎಂದು ಭಾವಿಸಿಕೊಂಡು ಮಾಡುವ ಕೆಲಸ. ಇದು ವ್ಯಕ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ವ್ಯಕ್ತಿಯು ಭಾಗವಾಗಿರುವ ಸಮಾಜಕ್ಕೆ, ವ್ಯಕ್ತಿಯು ವಾಸಿಸುವ ಪರಿಸರಕ್ಕೂ ಸೇವೆ ಸಲ್ಲಬೇಕು. ಈ ದಿಸೆಯಲ್ಲಿ ಜಗತ್ತಿನಾದ್ಯಂತ ಕೋಟ್ಯಂತರ ಜನರು ವಿವಿಧ ರೀತಿಯ ಸೇವೆಯಲ್ಲಿ ನಿರತರಾಗಿದ್ದಾರೆ. ದಿನದ ಒಂದು ಸ್ವಲ್ಪ ಸಮಯವನ್ನಾದರೂ ಸೇವೆಗೆ ಮೀಸಲಿಡಿ ಎಂಬ ಅವರ ಸಂದೇಶವನ್ನು ಲಕ್ಷಾಂತರ ಜನರು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ವ್ಯಕ್ತಿಯು ಮಾಡಬೇಕಾಗಿರುವ ಇನ್ನೊಂದು ಕೆಲಸ ಸತ್ಸಂಗ. ಸತ್ಸಂಗವೇ ಜೀವನವಾಗಬೇಕು. ಸತ್ಸಂಗದಲ್ಲಿ ಹರಟೆ ಹೊಡೆಯಿರಿ, ಹರಟೆಯಲ್ಲಿಯೂ ಸತ್ಸಂಗವಿರಲಿ ಎಂಬ ಕಿವಿ ಮಾತನ್ನು ಶ್ರೀಶ್ರೀ ಆಗಾಗ ಹೇಳುತ್ತಿರುತ್ತಾರೆ.

ವಿಚಾರಧಾರೆ

ಶ್ರೀಶ್ರೀಯವರ ವಿಚಾರಗಳನ್ನು ನೂರಾರು ಪುಸ್ತಕಗಳಲ್ಲಿ ಸಂಗ್ರಹಿಸಲಾಗಿದೆ. ಇವು ಎಲ್ಲ ಭಾಷೆಗಳಿಗೂ ಅನುವಾದವಾಗಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಮನನ ಮಾಡುವುದರಿಂದ ಶ್ರೀಶ್ರೀಯವರನ್ನು ಕೆಲಮಟ್ಟಿಗೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಬಹುದು.

“ನೀವು ನಿಮ್ಮ ಕಾರ್ಯಗಳ ಕರ್ತೃತ್ವವನ್ನು ಉಳಿಸಿಕೊಳ್ಳಬೇಡಿ. ನಿಮ್ಮ ಕಾರ್ಯಗಳನ್ನು ಸಮರ್ಥಿಸಿಕೊಳ್ಳಬೇಡಿ. ಇದರಿಂದ ನೀವು ಇತರರ ಅಭಿಪ್ರಾಯಗಳಿಗೆ ಕಿವುಡರಾಗುತ್ತೀರಿ. ಜೊತೆಗೆ ಇತರರಲ್ಲಿಯೂ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತೀರಿ.”

“ಇತರರನ್ನು ಸಹಿಸಿಕೊಳ್ಳುತ್ತೇನೆ ಎಂಬ ಮಾತು ಸರಿಯಲ್ಲ. ಸಹಿಸಿಕೊಳ್ಳುತ್ತೇನೆ ಎನ್ನುವಾಗ ಅವರು ಮಾಡಿದ್ದು ಸರಿಯಲ್ಲ ಎಂಬ ಭಾವನೆ ಉಂಟಾಗುತ್ತದೆ. ಅದರ ಬದಲು ಒಪ್ಪಿಕೊಳ್ಳುತ್ತೇನೆ ಎಂಬ ಪ್ರವೃತ್ತಿ ಬೆಳೆಸಿಕೊಳ್ಳಿ. ಜನರನ್ನು, ಘಟನೆಗಳನ್ನು ಹೇಗೆ ಇವೆಯೋ ಹಾಗೆಯೇ ಸ್ವೀಕಾರ ಮಾಡಿ.”

“ವರ್ತಮಾನ ಕಾಲ ಮಾತ್ರ ಸದಾ ಇರುವ ಕಾಲ. ಭೂತಕಾಲ ಈಗಾಗಲೇ ಸರಿದು ಹೋಗಿದೆ. ಭೂತಕಾಲದ ಘಟನೆಗಳ ಬಗ್ಗೆ ಚಿಂತಿಸಬೇಡಿ. ಅವು ಈಗಾಗಲೇ ಮುಗಿದ ಘಟನೆಗಳು. ಅವುಗಳನ್ನು ಸರಿಪಡಿಸುವುದು ಸಾಧ್ಯವಿಲ್ಲ. ಈಗ ಇರುವ ವರ್ತಮಾನ ಅನಿವಾರ್ಯ. ಇದನ್ನು ಒಪ್ಪಿಕೊಂಡು ಮುಂದೆ ಸಾಗಿ.”

“ನೀವು ಇದುವರೆಗೆ ಎದುರಿಸಲು ಸಾಧ್ಯವಾಗದಿರುವಂತಹ ಘಟನೆ ನಿಮ್ಮ ಜೀವನದಲ್ಲಿ ನಡೆದೇ ಇಲ್ಲ. ಎಲ್ಲವನ್ನೂ ಎದುರಿಸಿಕೊಂಡು ಬದುಕಿದ್ದೀರಿ. ಆದುದರಿಂದ ಕಷ್ಟ ಬಂದಾಗ ಎದೆಗುಂದಬೇಡಿ.”

“ಪ್ರತಿಯೊಬ್ಬ ಅಪರಾಧಿಯ ಹೃದಯದಲ್ಲಿಯೂ ಒಬ್ಬ ಬಲಿಪಶು ಇದ್ದಾನೆ. ಆದುದರಿಂದ ಅಪರಾಧಿಗಳ ಬಗ್ಗೆ ಅನುಕಂಪವಿರಬೇಕು. ಅವನಲ್ಲಿರುವ ಮುಗ್ಧ ಬಾಲಕನನ್ನು ಗುರುತಿಸಿ ಅವನನ್ನು ಪೋಷಿಸಬೇಕು.”

“ಸಮಸ್ಯೆಯ ಭಾಗವಾಗಿದ್ದಾಗ ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಅದರಿಂದ ಹೊರಗೆ ನಿಂತು ಗಮನಿಸಬೇಕು.”

“ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲ ಧರ್ಮಗಳ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆಯನ್ನಾದರೂ ಪಡೆದುಕೊಂಡಿರಬೇಕು. ಜಗತ್ತಿನಲ್ಲಿ ಯಾವುದೇ ಒಂದು ಸಣ್ಣ ಜನವರ್ಗವು ಅಸುರಕ್ಷಿತ ಭಾವನೆಯನ್ನು ತಳೆದರೂ, ಇಡೀ ಜಗತ್ತೇ ಅಸುರಕ್ಷಿತವಾಗುತ್ತದೆ.”

“ಯಾರನ್ನೂ ದ್ವೇಷಿಸಬೇಡಿ. ದ್ವೇಷಿಸುವ ವ್ಯಕ್ತಿ ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಾನೆ. ನೀವೂ ಅವನಂತೆಯೇ ಆಗುತ್ತೀರಿ.”

“ಅಸೂಯೆ ಎಂದರೆ ಇತರರಲ್ಲಿ ದೋಷ ಹುಡುಕಿಕೊಂಡು ಹೋಗುವ ಪ್ರವೃತ್ತಿ. ಅರ್ಜುನನ್ನು ಶ್ರೀಕೃಷ್ಣ ಅನಸೂಯ ಎಂದು ಸಂಬೋಧಿಸುತ್ತಾನೆ. ನಿಮಗಿಂತ ಮುಂದೆ ಇರುವ ಜನರ ಜೊತೆ ಸ್ನೇಹದಿಂದಿರಿ. ನಿಮಗಿಂತ ಹಿಂದೆ ಇರುವವರು, ಸುಧಾರಿಸುವ ಲಕ್ಷಣವಿಲ್ಲದವರು, ನಿಮಗೆ ತೊಂದರೆ ಕೊಡುವವರು; ಅಂಥವರ ಬಗ್ಗೆ ಕರುಣೆಯಿಂದಿರಿ.”

“ಎರಡಿರುವುದರಿಂದಲೇ ಭಯ. ಎಲ್ಲ ಕಡೆಯೂ ಎಲ್ಲರಲ್ಲಿಯೂ ನಿಮ್ಮನ್ನೇ ಕಾಣುವುದು ಸಾಧ್ಯವಾದರೆ, ಭಯ ಇರುವುದಿಲ್ಲ.”

ಶ್ರೀಶ್ರೀಯವರು ಪ್ರವಚನಗಳ ಮೂಲಕ ವ್ಯಕ್ತಪಡಿಸಿದ ವಿಚಾರ ಧಾರೆಗಳು ನೂರಾರು ಗ್ರಂಥಗಳಲ್ಲಿ ದಾಖಲಾಗಿವೆ. ಅವುಗಳಲ್ಲಿ ಲೇಖಕನಿಗೆ ದಾರಿದೀಪವೆನಿಸಿದ ಕೆಲವನ್ನು ಮಾತ್ರ ಮೇಲೆ ಪ್ರಸ್ತಾಪಿಸಲಾಗಿದೆ.

ನಿತ್ಯ ಸಂಚಾರಿ – ಪರಿವ್ರಾಜಕ

ಎಲ್ಲೋ ಒಂದು ಕಡೆ ಆಶ್ರಮವನ್ನು ಕಟ್ಟಿಕೊಂಡು ಸುಮ್ಮನೆ ಕುಳಿತು ಪ್ರವಚನ ನೀಡುವುದು ಶ್ರೀಶ್ರೀಯವರ ಕ್ರಮವಲ್ಲ. ಜಗತ್ತಿನಾದ್ಯಂತ ಪರಿವ್ರಾಜಕನಂತೆ ವರ್ಷವಿಡೀ ಅಲೆದಾಡುತ್ತಾರೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳ ಮಹತ್ವವನ್ನು ಸಾರುವ ಜೊತೆಗೆ, ಸನಾತನ ಧರ್ಮದ ಸಾರವನ್ನೂ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ವರ್ಷವೊಂದಕ್ಕೆ ಕನಿಷ್ಟ ನಲವತ್ತು ದೇಶಗಳನ್ನು ಸುತ್ತುವ ಶ್ರೀ ಶ್ರೀ ರವಿಶಂಕರರು, ಜಗತ್ತಿನ ಎಲ್ಲ ದೇಶಗಳಲ್ಲಿಯೂ ತಮ್ಮ ಅನುಯಾಯಿಗಳನ್ನು ಹೊಂದಿದ್ದಾರೆ. ಅನೇಕ ಸರಕಾರಗಳು ತಮ್ಮ ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಇವರಿಗೆ ನೀಡಿ ಗೌರವಿಸಿವೆ. ಮಂಗೋಲಿಯಾ, ಅರ್ಜೆಂಟೀನಾ, ಮುಂತಾದ ಅನೇಕ ದೇಶಗಳ ಬಹುಪಾಲು ಜನರು ಇವರ ಅನುಯಾಯಿಗಳಾಗಿದ್ದಾರೆ. ಎಲ್ಲ ಅರಬ್ ದೇಶಗಳು, ಪಾಕಿಸ್ತಾನ, ಅಮೆರಿಕ, ಕೆನಡ, ಯೂರೋಪ್, ಲ್ಯಾಟಿನ್ ಅಮೆರಿಕ, ರಶಿಯಾ, ಚೀನಾ, ಕೊರಿಯಾ, ಆಗ್ನೇಯ ಏಷಿಯಾ ದೇಶಗಳು, ನೇಪಾಲ, ಶ್ರೀಲಂಕಾ ಮುಂತಾದ ಜಗತ್ತಿನ ಬಹುತೇಕ ಎಲ್ಲ ದೇಶಗಳಿಗೆ ಶಾಂತಿ ಮತ್ತು ಸನಾತನ ಧರ್ಮದ ಸಂದೇಶ ಹೊತ್ತು ಭೇಟಿ ನೀಡಿದ್ದಾರೆ. ಭಾರತದ ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡಿದ್ದಾರೆ.

ಬೋಧನೆಯ ವಿಧಾನ

ಸರಳವಾದ ಭಾಷೆಯಲ್ಲಿ ವೇದಾಂತದ ಗಹನವಾದ ವಿಷಯಗಳನ್ನು ತಿಳಿಸಿಕೊಡುವಲ್ಲಿ ಶ್ರೀಶ್ರೀ ಪರಿಣಿತರು. ಇವರು ವ್ಯಾಖ್ಯಾನಿಸುವ ರೀತಿ ವಿಭಿನ್ನವಾಗಿದ್ದು, ಜನರಿಗೆ ಅತ್ಯಂತ ಆಪ್ತವಾಗುತ್ತವೆ. ಪುರಾಣಗಳನ್ನು ಇವರು “ಪುರೇ ನವ” ಎಂದರೆ ಎಲ್ಲ ಪ್ರದೇಶಗಳಲ್ಲಿಯೂ, ಎಲ್ಲ ಕಾಲಗಳಲ್ಲಿಯೂ ನಿತ್ಯನೂತನವಾಗಿ ಕಾಣಿಸುವ ಕಥನಗಳು ಎಂದು ವಿವರಿಸುತ್ತಾರೆ. ಪುರಾಣದ ಘಟನೆಗಳಿಗೆ ಸಾಂಕೇತಿಕ ಅರ್ಥಗಳಿವೆ; ಅವುಗಳನ್ನು ಗಮನಿಸಿ ಎನ್ನುತ್ತಾರೆ. ಉದಾಹರಣೆಗೆ ರುದ್ರರು ಎಂದರೆ ನಮ್ಮನ್ನು ಅಳಿಸುವವರು. ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಮನಸ್ಸು ನಮ್ಮನ್ನು ದಿಕ್ಕುಗೆಡಿಸಿ ದುಃಖಗಳಿಗೀಡುಮಾಡುತ್ತವೆ ಎಂದು ಅವರು ಹೇಳುತ್ತಾರೆ. ಮಧುಕೈಟಭರೆಂದರೆ ನಮ್ಮೊಳಗಿನ ದೈತ್ಯರು. ಮಧು ಎಂದರೆ ಸಿಹಿಯಾದದ್ದು. ಇದನ್ನು ನಾವು ಬಯಸುತ್ತೇವೆ. ಕೈಟಭ ಎಂದರೆ ಅಹಿತಕಾರಿಯಾದದ್ದು. ನಾವು ಇದನ್ನು ತಿರಸ್ಕರಿಸುತ್ತೇವೆ. ಈ ರೀತಿಯಾಗಿ ಆಸೆ ಮತ್ತಿ ತಿರಸ್ಕಾರಗಳೇ ಮಧುಕೈಟಭರು. ಇವು ಕರ್ಣ ಮಲಗಳು; ಅಂದರೆ ಕೇಳಿಸಿಕೊಂಡಿದ್ದರಿಂದ ಹುಟ್ಟುವ ವಿಕಾರಗಳು. ಇವು ಬ್ರಹ್ಮವನ್ನು ಅಂದರೆ ಸಮಗ್ರ ಸೃಷ್ಟಿಯನ್ನೇ ಪೀಡಿಸುತ್ತವೆ. ಕಿವಿಯಲ್ಲಿ ಹುಟ್ಟಿದ ಈ ದಾನವರನ್ನು ತನ್ನ ದೇಹದಲ್ಲಿ ಅಂದರೆ ಮನಸ್ಸಿನಲ್ಲಿ ಹೊತ್ತು ಹೋರಾಡುತ್ತಿರುತ್ತಾನೆ ನಾರಾಯಣ. ಇವು ಎಚ್ಚರವಿದ್ದಾಗ ಮಾತ್ರ ಇರುತ್ತವೆ. ನಿದ್ರೆ ಮಾಡುವಾಗ ಇರುವುದಿಲ್ಲ. ಹೀಗಾಗಿ ಅವರಿಬ್ಬರ ಜೊತೆ ಸಾವಿರಾರು ವರ್ಷಗಳಲ್ಲಿ ಹಗಲಿನಲ್ಲಿ ಯುದ್ಧ ಮಾಡುತ್ತಾನೆ. ಯುದ್ಧ ನಿರಂತರವಾಗಿ ನಡೆಯುತ್ತದೆ. ನಂತರ ದೇವಿಯು ನಾರಾಯಣನಿಗೆ ನೀರಿನಲ್ಲಿ ನಿಂತು ಯುದ್ಧ ಮಾಡಿದರೆ ಮಧುಕೈಟಭರನ್ನು ಸೋಲಿಸಬಹುದು ಎಂದು ಸಲಹೆ ನೀಡುತ್ತಾಳೆ. ದೇವಿಯು ಬೇರೆಲ್ಲಿಯೂ ಇಲ್ಲ, ನಾರಾಯಣನಲ್ಲಿಯೇ ಪ್ರೇಮಸ್ವರೂಪಿಯಾಗಿ ಇದ್ದಾಳೆ. ನೀರು ಪ್ರೇಮದ ಸಂಕೇತವೂ ಹೌದು. ಸಂಸ್ಕøತದ ಅಪ್ ಎಂಬ ಶಬ್ದಕ್ಕೆ ದಯೆ, ಅನುಕಂಪ, ಪ್ರೇಮ ಎಂಬ ಅರ್ಥಗಳೂ ಇವೆ. ಮನಸ್ಸಿನ ಮಲವನ್ನು ತೊಡೆಯಲು ಪ್ರೇಮವೇ ಸಾಧನ. ಪ್ರೇಮದಿಂದ ಮನಸ್ಸನ್ನು ಶೋಧಿಸಿದಾಗ ಮಧುಕೈಟಭರೆಂಬ ಕರ್ಣಮಲವನ್ನು ತೊಡೆಯಲು ಸಾಧ್ಯವಾಗುತ್ತದೆ. ಇದು ಮಧುಕೈಟಭರ ಕಥೆಯ ಸಾಂಕೇತಿಕತೆಯನ್ನು ಶ್ರೀಶ್ರೀಯವರು ವಿವರಿಸುವ ರೀತಿ. ಇವು ಕೇವಲ ಎರಡು ಉದಾಹರಣೆಗಳು.

ವೇದೋಪನಿಷತ್ತುಗಳನ್ನು ಶ್ರೀಶ್ರೀಯವರು ವಿಭಿನ್ನವಾಗಿ ವ್ಯಾಖ್ಯಾನಿಸುತ್ತಾರೆ ಎಂದು ಈ ಮೊದಲೇ ಹೇಳಿದ್ದೇನೆ. ಉದಾಹರಣೆಗೆ: ಭಗವದ್ಗೀತೆಯ ವಿಭೂತಿ ಯೋಗವನ್ನು ವಿವರಿಸುವಾಗ ಎಲ್ಲರೂ ಎಲ್ಲ ಶ್ರೇಷ್ಠ ವಸ್ತುಗಳಲ್ಲಿಯೂ ಭಗವಂತನಿದ್ದಾನೆ ಎಂದು ವ್ಯಾಖ್ಯಾನಿಸುತ್ತಾರೆ. ಆಯುಧಗಳಲ್ಲಿ ನಾನು ವಜ್ರಾಯುಧ, ಹಸುಗಳಲ್ಲಿ ಕಾಮಧೇನು, ವೃಕ್ಷಗಳಲ್ಲಿ ಅಶ್ವತ್ಥ, ದೇವರ್ಷಿಗಳಲ್ಲಿ ನಾರದ, ದೈತ್ಯರಲ್ಲಿ ಪ್ರಹ್ಲಾದ, ಪಾಂಡವರಲ್ಲಿ ಧನಂಜಯ ಎಂದು ಮುಂತಾಗಿ ಪದಶಃ ಅರ್ಥೈಸುತ್ತಾರೆ. ಆದರೆ ಶ್ರೀಶ್ರೀಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲ ಶ್ರೇಷ್ಠವಾದ ಹಾಗೂ ಆಕರ್ಷಕವಾದ ವಿಷಯಗಳ ಹಿಂದೆ ಮನಸ್ಸು ಓಡುವಾಗ ಅಲ್ಲೇ ನಿಂತುಕೊಳ್ಳಬೇಡ, ಈ ಎಲ್ಲ ಶ್ರೇಷ್ಠವಾದವುಗಳ ಹಿಂದೆ ನಾನಿದ್ದೇನೆ, ನನ್ನನ್ನು ನೋಡು ಎಂದು ಕೃಷ್ಣ ಸೂಚಿಸುತ್ತಿದ್ದಾನೆ ಎನ್ನುತ್ತಾರೆ. ಅಂದರೆ ನಿನ್ನ ಮನಸ್ಸು ಎಲ್ಲ ಆಕರ್ಷಣೆಗಳ ಹಿಂದೆ ಓಡುವಾಗ ಅದರ ಹಿಂದೆ ತಾನು ನಿಂತು ಮತ್ತೆ ಕೇಂದ್ರಕ್ಕೆ ಎಳೆದು ತರುತ್ತಾನೆ ಎನ್ನುತ್ತಾರೆ. ವೈಯಕ್ತಿಕವಾಗಿ ಶ್ರೀಶ್ರೀಯವರ ವ್ಯಾಖ್ಯಾನವನ್ನು ಓದುವವರೆಗೂ ವಿಭೂತಿಯೋಗದಲ್ಲಿ ಕೃಷ್ಣನ ನಿಲುವು ಪಕ್ಷಪಾತಪೂರ್ಣ ಎನ್ನಿಸಿತ್ತು. ಇಡೀ ಭಗವದ್ಗೀತೆಗೆ ವಿಭಿನ್ನವಾದ, ವೈಜ್ಞಾನಿಕವಾದ ವ್ಯಾಖ್ಯಾನವನ್ನು ಶ್ರೀಶ್ರೀ ನೀಡಿದ್ದಾರೆ.

ಬುದ್ಧ, ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ. ಆದರೆ ಉಪನಿಷತ್ತುಗಳ ಪ್ರಕಾರ ಆಸೆಗಳು ದುಃಖಕ್ಕೆ ಮೂಲವಲ್ಲ. ಆಸೆಗಳೊಡನೆ ಸಮೀಕರಿಸಿಕೊಳ್ಳುವುದು ದುಃಖಕ್ಕೆ ಮೂಲ. ನಿಮಗೆ ಆಸೆಗಳಿರಲಿ, ನೀವೇ ಆಸೆಗಳಾಗಬೇಡಿ. ಆಸೆಗಳು ನಿಮ್ಮ ಅನುಮತಿಯನ್ನು ಬೇಡಿ ಬರುವುದಿಲ್ಲ. ಅವು ಬಂದಾಗ ಸಾಕ್ಷಿಯಾಗಿರಿ. ಎಲ್ಲವನ್ನೂ ಸಾಕ್ಷೀಭಾವದಿಂದ ನೋಡಿ. ಆಸೆಗಳು ಈ ಜಗತ್ತಿನಲ್ಲಿ ದುಃಖಕ್ಕೆ ಕಾರಣಗಳಲ್ಲವೇ ಅಲ್ಲ. ಆಸೆಗಳ ಜೊತೆ ಗುರುತಿಸಿಕೊಳ್ಳುವುದು ದುಃಖಕ್ಕೆ ಕಾರಣ. “ನಾನು ಯಾವ ಆಸೆಗಳನ್ನೂ ಇಟ್ಟುಕೊಳ್ಳಲು ಬಯಸುವುದಿಲ್ಲ” ಎನ್ನುವುದೂ ಒಂದು ಆಸೆ. “ನಾನು ಆಸೆಗಳಿಂದ ಪಾರಾಗಬೇಕು” ಎನ್ನುವುದೂ ಇನ್ನೊಂದು ಆಸೆ ಎಂದು ವಿವರಿಸುತ್ತಾರೆ. ಈ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಬೇಕು.

ಬುದ್ಧನ ಬಗ್ಗೆ ಬರೆಯುತ್ತ ಅವರು, “ಬುದ್ಧನು ಕ್ಷೇತ್ರದ ಕುರಿತು ಮಾತನಾಡಿದ. ತಾನು ಹುಡುಕಿದೆ, ಹುಡುಕಿದೆ, ಆತ್ಮವನ್ನು ಎಲ್ಲಿಯೂ ನೋಡಲಿಲ್ಲ” ಎಂದು ಅವನು ಹೇಳುತ್ತಾನೆ. ಆದುದರಿಂದ ಬೌದ್ಧಧರ್ಮವನ್ನು ಅನಾತ್ಮವಾದಿ ಎನ್ನುತ್ತಾರೆ. ಆಗ ಶಂಕರಾಚಾರ್ಯರು ಬಂದು ಯಾರು ಹುಡುಕಿದ್ದು? ಯಾರಿಗೆ ಕಾಣಿಸಲಿಲ್ಲ? ಯಾರು ಇದನ್ನೆಲ್ಲ ಅನುಭವಿಸಿದವರು? ಎಂದು ಪ್ರಶ್ನಿಸುತ್ತಾರೆ. ಅದೇ ಆತ್ಮ ಎಂದರು. ಬೌದ್ಧ ಮತವು ಉತ್ತಮ ಜೀವನ ವಿಧಾನ. ಆದರೆ ಅದರ ಜ್ಞಾನ ಸಮಗ್ರವಾಗಿಲ್ಲ. ಅದು ತತ್ತ್ವಜ್ಞಾನದ ಕುರಿತು ಮಾತನಾಡುತ್ತದೆ. ಜಗತ್ತಿನ ನಶ್ವರತೆಯ ಕುರಿತು ಮಾತನಾಡುತ್ತದೆ. ಆದರೆ ಯಾವುದರಿಂದಲೂ ಲಿಪ್ತವಾಗದ ಆತ್ಮದ ಬಗ್ಗೆ ಮಾತನಾಡುವುದಿಲ್ಲ. ಯಾವುದೋ ಒಂದು ಶಾಶ್ವತವಾದದ್ದು ಇಲ್ಲದಿದ್ದರೆ, ನಶ್ವರತೆಯ ಬಗ್ಗೆ ನಿಮಗೆ ಅರಿವಾಗುವುದೇ ಇಲ್ಲ. ಯಾವುದೋ ಒಂದು ಆಧಾರ ಬಿಂದುವಿನ ನೆಲೆಯಿಂದ ಇವೆಲ್ಲವೂ ನಶ್ವರ ಎಂದು ಹೇಳಬಹುದು. ನೀವು ದುಃಖ, ಕ್ಲೇಶಗಳ ಬಗ್ಗೆ ಮಾತನಾಡುತ್ತೀರಿ. ಆದರೆ ಸ್ವಲ್ಪ ಮುಂದುವರೆದು ವಿಚಾರ ಮಾಡಿ; ನಿಮ್ಮಲ್ಲಿ ಯಾವುದೋ ಒಂದು ಶಾಶ್ವತವಾದದ್ದು ಇದೆ. ನಿಮ್ಮೊಳಗಿನ ತಿಳಿವುಗಾರ ನಿತ್ಯನಾದವನು. ಆಧ್ಯಾತ್ಮಜ್ಞಾನ ನಿತ್ಯತ್ವಂ. ವ್ಯಕ್ತಿನಿಷ್ಠ ತಿಳುವಳಿಕೆ ಮತ್ತು ವಸ್ತುನಿಷ್ಠ ವಿಶ್ಲೇಷಣೆ ಎರಡೂ ಜೀವನಕ್ಕೆ ಬೇಕು. ಈ ಎರಡೂ ಭಾಗಗಳು ಇದ್ದರೆ ಮಾತ್ರ ಅದು ಜ್ಞಾನ. ಒಂದು ಇಲ್ಲದಿದ್ದರೂ ಅದು ಅಜ್ಞಾನ, ಅದು ಕಾಲದ ಪರೀಕ್ಷೆಯನ್ನು ಎದುರಿಸಲು ಶಕ್ತವಾಗುವುದಿಲ್ಲ” ಎಂದು ಹೇಳುತ್ತಾರೆ.

ಶ್ರದ್ಧಾವಾನ್ ಲಭತೇ ಜ್ಞಾನಂ — ಶ್ರದ್ಧೆ ಇರುವವರಿಗೆ ಜ್ಞಾನ ದೊರೆಯುತ್ತದೆ. ಶ್ರದ್ಧೆ ಎಂದರೆ ಅಂಧವಿಶ್ವಾಸ ಎಂದು ತಿಳಿಯುತ್ತಾರೆ. ಆದರೆ ಶ್ರದ್ಧಾವಾನ್ ಎಂದರೆ ಸರಳವಾದ ಮುಕ್ತ ಮನಸ್ಸಿನವರು, ಹೊಸ ಕಲ್ಪನೆಗಳಿಗೆ ತೆರೆದುಕೊಂಡವರು ಮತ್ತು ಕೇಳಲು ಸಿದ್ಧರಾಗಿರುವವರು ಎಂದು ಅನೇಕರು ಹೇಳುತ್ತಾರೆ. ಆದರೆ ಬುದ್ಧಿಯಿಂದ ಆಚೆಗೆ, ನಮ್ಮಲ್ಲಿ ಈಗಾಗಲೇ ಇರುವ ಮಾಹಿತಿಗಳಿಂದಾಚೆಗೆ, ಇಡುವ ಒಂದು ಹೆಜ್ಜೆಯನ್ನು ಶ್ರದ್ಧೆ ಎನ್ನುತ್ತಾರೆ — ಇದು ಶ್ರೀಶ್ರೀಯವರ ಮಾತು.

ಶ್ರೀಶ್ರೀಯವರ ಪ್ರವಚನಗಳು ಕೇಳಿಸಿಕೊಳ್ಳಲು ಶುಷ್ಕವಾಗಿರುವುದಿಲ್ಲ. ಅಲ್ಲಲ್ಲಿ ಕಥೆ, ಉಪಕಥೆಗಳು, ವಿನೋದಮಯ ಪ್ರಸಂಗಗಳು ಹಾಸುಹೊಕ್ಕಾಗಿ ಬರುತ್ತವೆ. ಭೌತ ವಿಜ್ಞಾನದ ಸ್ನಾತಕರಾಗಿರುವ ಅವರು ಯಾವ ಸಂದರ್ಭದಲ್ಲಿಯೂ ವೈಜ್ಞಾನಿಕ ದೃಷ್ಟಿಕೋನವನ್ನು ಮರೆಯುವುದಿಲ್ಲ. ಪರಿಮಾಣ ಭೌತಶಾಸ್ತ್ರ ಅವರಿಗೆ ಅಚ್ಚುಮೆಚ್ಚು. ಅದು ಅದ್ವೈತ ದರ್ಶನಕ್ಕೆ ಅತ್ಯಂತ ಸಮೀಪವಿದೆ ಎನ್ನುವುದು ಅವರ ಅಭಿಪ್ರಾಯ. ಅವರ ಎಲ್ಲ ಪ್ರವಚನಗಳಲ್ಲೂ ಪರಿಮಾಣ ಭೌತಶಾಸ್ತ್ರದ ಉದಾಹರಣೆಗಳನ್ನು ತಂದೇ ತರುತ್ತಾರೆ.

ಸಮಾಜ ಸುಧಾರಕ ಶ್ರೀಶ್ರೀ

ಶ್ರೀಶ್ರೀಯವರು ಈ ಕಾಲಘಟ್ಟದ ಶ್ರೇಷ್ಠ ಸಮಾಜ ಸುಧಾರಕರೂ ಹೌದು. ಎಲ್ಲ ಜಾತಿ, ಮತ, ಪಂಗಡಗಳ ಜನರಿಗೆ ಆಶ್ರಮದಲ್ಲಿ ಮುಕ್ತ ಪ್ರವೇಶವಿದೆ. ಆಶ್ರಮದ ಎಲ್ಲ ಶಿಬಿರಗಳಲ್ಲಿ, ಎಲ್ಲ ಚಟುವಟಿಕೆಗಳಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸುತ್ತಾರೆ. ಮನುಷ್ಯ ಮನುಷ್ಯನ ನಡುವಣ ಭೇದವನ್ನು ಅವರು ಒಪ್ಪುವುದಿಲ್ಲ. ಈ ಕುರಿತು ಜನರಿಗೆ ಸರಳವಾದ ಉದಾಹರಣೆಗಳ ಮೂಲಕ ವಿವರಣೆ ನೀಡುತ್ತಾರೆ. ಒಂದು ಅಂಗಡಿಯಲ್ಲಿ ಬಗೆ ಬಗೆಯ ಧಾನ್ಯಗಳು ಮತ್ತು ಪದಾರ್ಥಗಳಿರುತ್ತವೆ. ಅವುಗಳನ್ನು ಎಲ್ಲರೂ ಕೊಂಡುಕೊಳ್ಳುತ್ತಾರೆ. ಇಂದು ಒಂದೇ ಮೂಟೆಯಲ್ಲಿರುವ ಅಕ್ಕಿ-ಬೇಳೆಗಳು, ನಾಳೆ ಅನೇಕರ, ಬೇರೆ ಬೇರೆ ಜನರ ದೇಹದ ಭಾಗಗಳಾಗುತ್ತವೆ. ಹೀಗಿರುವಾಗ ಮನುಷ್ಯ ಮನುಷ್ಯರ ನಡುವೆ ಭೇದವೇಕೆ ಎಂದು ಪ್ರಶ್ನಿಸುತ್ತಾರೆ. ಇನ್ನೊಮ್ಮೆ ವಿನೋದವಾಗಿ, “ಮಾರುಕಟ್ಟೆಯಲ್ಲಿ ವಿಧವಿಧದ ತರಕಾರಿಗಳಿವೆ. ಈ ಬದನೆಕಾಯಿ, ಸೌತೇಕಾಯಿ, ಈರುಳ್ಳಿ, ಟೊಮೆಟೋಗಳು ತಲೆಗಳಾಗಿ ಬದಲಾಗುತ್ತವೆ. ಮಾರುಕಟ್ಟೆಯ ಎತ್ತರದ ಸ್ಥಳದಲ್ಲಿ ನಿಂತು ಈ ತಲೆಗಳಲ್ಲಿ ತರಕಾರಿಗಳನ್ನು ಗುರುತಿಸಿ” ಎಂದು ಹೇಳುತ್ತಾರೆ. ಅವರ ಮಾತಿನಲ್ಲಿ ವಿನೋದವಿದ್ದರೂ ಗಹನವಾದ ಅರ್ಥವಿರುತ್ತದೆ. ಶ್ರೀಶ್ರೀಯವರು ವಿಧವಾ ವಿವಾಹ, ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸುತ್ತಾರೆ.

ಆತ್ಮಹತ್ಯೆಯ ಬಗ್ಗೆ ಶ್ರೀಶ್ರೀಯವರ ಮಾತುಗಳನ್ನು ಕೇಳಿ —

“ಸಾಮಾನ್ಯವಾಗಿ ಸ್ಥೂಲಶರೀರಕ್ಕಿಂತ ಪ್ರಾಣಶರೀರವು ದೊಡ್ಡದಾಗಿರುತ್ತದೆ. ಪ್ರಾಣಶರೀರವು ಸಂಕುಚಿತವಾಗುತ್ತ ಆಗುತ್ತ ಸ್ಥೂಲ ಶರೀರಕ್ಕಿಂತ ಚಿಕ್ಕದಾದರೆ, ಆಗ ನಮಗೆ ಉಸಿರು ಕಟ್ಟಿದಂತಾಗುತ್ತದ. ನಮಗೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಮನಸ್ಸಾಗುತ್ತದೆ. ನಿಮ್ಮ ಎದೆಯು 40 ಇಂಚು ಅಗಲವಾಗಿದ್ದು, ನೀವು 36 ಇಂಚಿನ ಬನಿಯನ್ ಧರಿಸಿದರೆ, ನಿಮ್ಮ ಭುಜ ಮತ್ತು ಎದೆ ಹಿಂಡಿದಂತಾಗುತ್ತದೆ. ಅದರೊಳಗೆ ಸಿಕ್ಕು ಒದ್ದಾಡಿದಂತಾಗುತ್ತದೆ. ಯಾವಾಗ ಈ ಬನಿಯನ್ ತೆಗೆದುಬಿಡುತ್ತೇನೋ ಎಂಬ ಚಡಪಡಿಕೆಯಾಗುತ್ತದೆ. ಆತ್ಮಹತ್ಯೆಗೆ ಪ್ರಯತ್ನಿಸುವ ಜನರಿಗೂ ಹಾಗೆಯೇ ಆಗುತ್ತದೆ. ಪ್ರಾಣಶರೀರವು ಸಂಕುಚಿತಗೊಂಡು ಸ್ಥೂಲ ಶರೀರಕ್ಕಿಂತ ಚಿಕ್ಕದಾದಾಗ, ವ್ಯಕ್ತಿಯು ಈ ಶರೀರದಿಂದ ಎಷ್ಟು ಬೇಗ ಹೊರಗೆ ಹೋಗಿ ಮುಕ್ತನಾಗಬಹುದು ಎಂದು ಚಿಂತಿಸುತ್ತಾನೆ. ಆಗ ಅವರು ತಮ್ಮ ಭೌತಿಕ ಶರೀರವನ್ನು ಕೊನೆಗಾಣಿಸಲು ಬಯಸುತ್ತಾರೆ. ನಿಯಮಿತವಾಗಿ ಪ್ರಾಣಾಯಾಮ, ಧ್ಯಾನ ಮಾಡುವುದರಿಂದ, ನಿಮ್ಮ ಪ್ರಾಣಶರೀರ ದೊಡ್ಡದಾಗುತ್ತದೆ. ನಿಮಗೆ ಮತ್ತೆ ಸಾಮಾನ್ಯ ಸ್ಥಿತಿಗೆ ತಲುಪಿದಂತಾಗುತ್ತದೆ. ಇದನ್ನು ನೀವು ನಿಮ್ಮದೇ ಅಳತೆಯ ಅಥವಾ ದೊಡ್ಡ ಬನಿಯನ್ ಧರಿಸುವುದಕ್ಕೆ ಹೋಲಿಸಬಹುದು. ಆಗ ನಿಮಗೆ ಯಾವ ಕಿರಿಕಿರಿಯೂ ಆಗುವುದಿಲ್ಲ. ನಿಮ್ಮ ಅಳತೆಗಿಂತ ದೊಡ್ಡ ಬನಿಯನ್ ಧರಿಸಿದರೆ, ಅದು ನಿಮ್ಮ ಸುತ್ತಮುತ್ತ ಸುಳಿಯುತ್ತಿರುವ ಹಾಗೆ ಭಾಸವಾಗುತ್ತದೆ. ಸಂತೋಷದಿಂದಿರುವ ಮತ್ತು ಉತ್ಸಾಹಶೀಲರಾದ ವ್ಯಕ್ತಿಗಳ ಪ್ರಾಣಶರೀರ ಸ್ಥೂಲ ಶರೀರಕ್ಕಿಂತ ದೊಡ್ಡದಾಗಿರುತ್ತದೆ.”

“ಕೆಟ್ಟ ಕರ್ಮ, ಒಳ್ಳೆಯ ಕರ್ಮಗಳೆಲ್ಲವುಗಳಿಂದ ಮುಕ್ತರಾಗುವುದು ಸನ್ಯಾಸ. ನ್ಯಾಸ ಎಂದರೆ ಏಕಾಗ್ರತೆ. ಸನ್ಯಾಸ ಎಂದರೆ ಸಂಪೂರ್ಣವಾದ ಏಕಾಗ್ರತೆ; ನಿಮ್ಮ ಕೇಂದ್ರದಲ್ಲಿ ಸ್ಥಿತರಾಗುವುದು. ಇಲ್ಲಿ ನಿಮ್ಮನ್ನು ಯಾರೂ ಪ್ರಭಾವಿಸುವುದಿಲ್ಲ, ವಿಚಲಿತಗೊಳಿಸುವುದಿಲ್ಲ. ನಿಮ್ಮ ಮನಸ್ಸಿನ ಶಾಂತಿ ಮತ್ತು ಸ್ತಿಮಿತಗಳನ್ನು ನಾಶಮಾಡುವುದಿಲ್ಲ” ಎಂದು ಸನ್ಯಾಸವನ್ನು ವ್ಯಾಖ್ಯಾನಿಸುವ ಶ್ರೀಶ್ರೀಗಳು, ಸಕಲ ಚರಾಚರ ಜಗತ್ತಿನ ಉಳಿವಿಗೆ ಬೇಕಾದ ಎಲ್ಲ ಕಡೆಗಳಲ್ಲಿಯೂ ಆಸಕ್ತಿ ವಹಿಸುತ್ತಾರೆ. ಅದು ಸನ್ಯಾಸಿಯ ಸಹಜ ಧರ್ಮ. ಜಗತ್ತಿನಲ್ಲಿ ಶಾಂತಿಗಾಗಿ ಪ್ರಾರ್ಥಿಸುವುದು ಸನ್ಯಾಸಿಯ ಧರ್ಮ. ಇದಕ್ಕನುಗುಣವಾಗಿ ಶ್ರೀಶ್ರೀಯವರು ಸತತವಾದ ಪ್ರಯತ್ನಗಳನ್ನು ನಡೆಸಿದ್ದಾರೆ.

ಸಂಧಾನ ಚತುರ ಶ್ರೀಶ್ರೀ

ರಾಮಜನ್ಮಭೂಮಿ ವಿವಾದದ ವಿಷಯದಲ್ಲಿ ಶ್ರೀಶ್ರೀಯವರ ಸಂಧಾನ ಕೌಶಲ್ಯವನ್ನು ಇಡೀ ಜಗತ್ತೇ ಗಮನಿಸಿತ್ತು. ಕಾಶ್ಮೀರದ ಉಗ್ರವಾದಿಗಳನ್ನು, ಝಾರ್ಖಂಡ್ ಮತ್ತು ಕೇರಳದ ನಕ್ಸಲೀಯರನ್ನು, ಅಸ್ಸಾಮಿನ ತೀವ್ರಗಾಮಿಗಳನ್ನು ಮನವೊಲಿಕೆ ಮಾಡಿ ಸಮಾಜದ ಮುಖ್ಯಧಾರೆಗೆ ತಂದ ಕೀರ್ತಿ ಇವರದು. ಅಮೆರಿಕದ ಧಾಳಿಗೆ ಇರಾಕ್ ನಲುಗಿದಾಗ, ಇರಾಕಿಗೆ ಪ್ರಯಾಣ ಮಾಡಿ ಅತ್ಯಂತ ಅಪಾಯಕಾರಿ ಕೆಂಪು ವಲಯಗಳಲ್ಲಿಯೂ ಸಂಚರಿಸಿ ಶಾಂತಿಯ ಸಂದೇಶವನ್ನು ನೀಡಿದರು. ಇರಾಕಿನ ಜನತೆಗೆ ಮಾನಸಿಕ ಆಘಾತದಿಂದ ಹೊರ ಬರಲು ನೆರವು ನೀಡಿದಂತೆಯೇ, ದೀರ್ಘ ಕಾಲದಿಂದ ಕುಟುಂಬದಿಂದ, ದೇಶದಿಂದ ದೂರವಾಗಿ, ಯುದ್ಧ ಭೂಮಿಯಲ್ಲಿ ಜೀವನವನ್ನು ಕಳೆದ ಅಮೆರಿಕನ್ ಯೋಧರಿಗೂ ಶಮನಕಾರಿ ತಂತ್ರಗಳನ್ನು ಹೇಳಿಕೊಟ್ಟರು. ಐಸಿಸ್ ಉಗ್ರಗಾಮಿಗಳು ಯಾಜಿಡಿ ಜನಾಂಗದವರನ್ನು ಅಮಾನುಷವಾಗಿ ದಮನಿಸುತ್ತಿದ್ದಾಗ, ಅವರ ನೆರವಿಗೆ ನಿಂತರು. ಸರ್ಬಿಯಾ ದೇಶವು ಅಂತಃಕಲಹದಿಂದ ಜರ್ಝರಿತವಾಗಿದ್ದಾಗ, ಅಲ್ಲಿನ ಜನರಿಗೆ ಉಂಟಾದ ಮಾನಸಿಕ ಆಘಾತಗಳನ್ನು ಎದುರಿಸಲು ಶಿಬಿರಗಳನ್ನು ನಡೆಸಿದರು.

ಇವೆಲ್ಲವಕ್ಕೆ ಕಲಶ ಪ್ರಾಯವಾಗಿರುವಂತಹದು, ಕೊಲಂಬಿಯಾದಲ್ಲಿ ನಡೆದ ಶಾಂತಿ ಸಂಧಾನ ಪ್ರಕ್ರಿಯೆ. ಕೊಲಂಬಿಯಾ ದೇಶವು ಐದು ದಶಕಗಳ ಅಂತಃಕಲಹದಿಂದ ಕಂಗೆಟ್ಟಿತ್ತು. ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆ ಎಂಬ ಹೆಸರಿನ ತೀವ್ರಗಾಮಿಗಳ ಗುಂಪು ಮತ್ತು ಕೊಲಂಬಿಯನ್ ಸರಕಾರಗಳ ನಡುವೆ ಶ್ರೀಶ್ರೀಯವರು ನೇರ ಸಂಧಾನವನ್ನು ನಡೆಸಿ 2016ರಲ್ಲಿ ಒಂದು ಹೊಸ ಶಾಂತಿ ಒಪ್ಪಂದಕ್ಕೆ ಉಭಯ ಪಕ್ಷಗಳೂ ಸಹಿ ಹಾಕುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರಿಂದಾಗಿ 2,60,000ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ, ಲಕ್ಷಗಟ್ಟಲೆ ಜನರನ್ನು ನೆಲೆ ತಪ್ಪಿಸಿದ ಐದು ದಶಕಗಳ ಅಂತಃಕಲಹ ಕೊನೆ ಕಂಡಿತು.

ಸಂಸ್ಥೆಗಳ ಸ್ಥಾಪನೆ

“ಆರ್ಟ್ ಆಫ್ ಲಿವಿಂಗ್” ಸಂಸ್ಥೆಯ ಸ್ಥಾಪನೆಯೂ ಒಂದು ರೋಚಕ ಕಥೆ. ಇದರ ಮಾತೃಸಂಸ್ಥೆ ವೇದವಿಜ್ಞಾನ ಮಹಾ ವಿದ್ಯಾಪೀಠ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಶ್ರೀಶ್ರೀಯವರು ಮಹರ್ಷಿ ಮಹೇಶ್ ಯೋಗಿಯವರ ಸೆಳೆತಕ್ಕೆ ಒಳಗಾಗಿ ಅವರ ಸಂಸ್ಥೆಯ ಪರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು, ಪ್ರವಚನಗಳನ್ನು ನೀಡುತ್ತಿದ್ದರು ಹಾಗೂ ಧ್ಯಾನ ಶಿಬಿರಗಳನ್ನು ನಡೆಸುತ್ತಿದ್ದರು. ಮಹರ್ಷಿಯವರ ಅಪೇಕ್ಷೆಯ ಮೇರೆಗೆ ಬೆಂಗಳೂರಿನಲ್ಲಿ ಒಂದು ಗುರುಕುಲವನ್ನು ಸ್ಥಾಪಿಸಿ 160 ವಿದ್ಯಾರ್ಥಿಗಳಿಗಾಗಿ ವೇದಾಧ್ಯಯನದ ಅವಕಾಶ ಕಲ್ಪಿಸಿದರು. ಇದೊಂದು ವಸತಿ ಗುರುಕುಲವಾಗಿದ್ದು ಇಲ್ಲಿ ಎಲ್ಲವೂ ಉಚಿತವಾಗಿತ್ತು. ಆದರೆ ಅದೇಕೋ ಮಹರ್ಷಿಗಳು ಈ ಗುರುಕುಲವನ್ನು, ವಿದ್ಯಾರ್ಥಿಗಳನ್ನು ದೆಹಲಿಗೆ ವರ್ಗಾಯಿಸುವಂತೆ ಅಥವಾ ಮುಚ್ಚುವಂತೆ ಆದೇಶ ನೀಡಿದರು. 160 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತಿರುವುದನ್ನು ಕಂಡ, ಇನ್ನೂ 25 ವರ್ಷ ತುಂಬಿರದ ಶ್ರೀ ಶ್ರೀ ರವಿ ಶಂಕರರು ಬೆಂಗಳೂರಿಗೆ ಮರಳಿ ಆ ವಿದ್ಯಾರ್ಥಿಗಳ ಹೊಣೆಯನ್ನು ತಾವೇ ವಹಿಸಿಕೊಂಡರು. ಕೈಯಲ್ಲಿ ಕವಡೆ ಕಾಸಿರಲಿಲ್ಲ, ನೆಲೆಸಲು ನೆಲೆಯಿರಲಿಲ್ಲ. ಆದರೂ ದಾನಿಗಳ ಸಕಾಲಿಕ ನೆರವಿನಿಂದ ಗುರುಕುಲ ಮುಂದುವರೆಯಿತು. ಹೀಗೆ ಸ್ಥಾಪನೆಯಾದ ವೇದವಿಜ್ಞಾನ ಮಹಾ ವಿದ್ಯಾಪೀಠದ ಆಶ್ರಯದಲ್ಲಿ ಆರ್ಟ್ ಆಫ್ ಲಿವಿಂಗ್, ಅಂತಾರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಸ್ಥೆ ಮುಂತಾದ ನೂರಾರು ಸಂಸ್ಥೆಗಳ ಬೆಳೆದವು.

ಸುದರ್ಶನ ಕ್ರಿಯಾಯೋಗ ಮತ್ತು 5ಊ ಕಾರ್ಯಕ್ರಮ

ಮಹರ್ಷಿ ಮಹೇಶ ಯೋಗಿಗಳಿಂದ ದೂರವಾಗಿ ಬೆಂಗಳೂರಿಗೆ ಮರಳಿದ ಶ್ರೀ ಶ್ರೀ ರವಿ ಶಂಕರರು ಶಿವಮೊಗ್ಗ ಜಿಲ್ಲೆಯ ಭದ್ರಾ ನದಿಯ ದಂಡೆಯಲ್ಲಿ ಅಖಂಡ ಹತ್ತು ದಿನಗಳ ಮೌನ ವ್ರತವನ್ನಾಚರಿಸಿದಾಗ, ಸುದರ್ಶನ ಕ್ರಿಯಾಯೋಗದ ಅವಿರ್ಭಾವವೂ ಉಂಟಾಯಿತು. ಇದು “ಆರ್ಟ್ ಆಫ್ ಲಿವಿಂಗ್” ಸಂಸ್ಥೆಯ ಆಧಾರಭೂತ ಕಾರ್ಯಕ್ರಮವಾಯಿತು. ಇದು ನಡೆದದ್ದು 1982ರಲ್ಲಿ. ಅಂದಿನಿಂದ ಇಂದಿನವರೆಗೆ ಜಗತ್ತಿನಾದ್ಯಂತ 30 ಕೋಟಿಗೂ ಹೆಚ್ಚು ಜನರೊಂದಿಗೆ ಶ್ರೀಶ್ರೀಯವರು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಸಂಪರ್ಕವನ್ನು ಸಾಧಿಸಿದ್ದಾರೆ.

“ಆರ್ಟ್ ಆಫ್ ಲಿವಿಂಗ್” ಮತ್ತು ಇತರ ಎಲ್ಲ ಸಂಸ್ಥೆಗಳನ್ನು ವ್ಯಕ್ತಿ ವಿಕಾಸ ಕೇಂದ್ರ (ಭಾರತ) ಎಂಬ ಸಂಸ್ಥೆ ನಿಯಂತ್ರಿಸುತ್ತಿದೆ. ಹೆಸರೇ ಸೂಚಿಸುವಂತೆ, ವ್ಯಕ್ತಿಯ ವಿಕಾಸವೇ, ವ್ಯಕ್ತಿತ್ವದ ವಿಕಾಸವೇ ಇದರ ಮುಖ್ಯ ಧ್ಯೇಯ. ಈ ದಿಸೆಯಲ್ಲಿ ಹಲವಾರು ಕಾರ್ಯಕ್ರಮಗಳು, ಶಿಬಿರಗಳು ಸದಾ ನಡೆಯುತ್ತಿರುತ್ತವೆ. ಇದರ ಜೊತೆಗೆ 5ಊ (ಮನೆ, ಆರೋಗ್ಯ, ನೈರ್ಮಲ್ಯ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳು) ತತ್ತ್ವವನ್ನೊಳಗೊಂಡ ಯುವ ನಾಯಕತ್ವ ತರಬೇತಿ ಶಿಬಿರಗಳು ಯುವಕರಿಗೆ ಸಮಾಜದ ನೇತೃತ್ವ ವಹಿಸಿಕೊಳ್ಳುವ ತರಬೇತಿ ನೀಡುತ್ತಿವೆ. ಸಮಾಜದ ಎಲ್ಲ ವರ್ಗದ, ವಯೋಮಾನದ ಜನರಿಗೆ ಒತ್ತಡರಹಿತ ಜೀವನ ನಡೆಸಲು, ಹೊಸ ದಾರಿ ಕಂಡುಕೊಳ್ಳಲು ನೆರವಾಗುವ ಕಾರ್ಯಕ್ರಮಗಳು, “ಆರ್ಟ್ ಆಫ್ ಲಿವಿಂಗ್”ನ ಬತ್ತಳಿಕೆಯಲ್ಲಿವೆ.

ವ್ಯಕ್ತಿಯಾಗಿ ಶ್ರೀಶ್ರೀ

ಶ್ರೀ ಶ್ರೀ ರವಿಶಂಕರರು ಜನಿಸಿದ್ದು 1956ರ ಮೇ 13ರಂದು. ಅಂದು ಅಕ್ಷಯ ತದಿಗೆಯಾಗಿತ್ತು. ಅದು ಶಂಕರಾಚಾರ್ಯರ ಜನ್ಮದಿನವೂ ಆಗಿದ್ದುದರಿಂದ ಅವರಿಗೆ ರವಿ ಶಂಕರ ಎಂಬ ಅಭಿದಾನವನ್ನು ಅವರ ತಂದೆ ತಾಯಿಯರಾದ ಶ್ರೀ ವೆಂಕಟರತ್ನಂ ಮತ್ತು ಶ್ರೀಮತಿ ವಿಶಾಲಾಕ್ಷಿಯವರು ನೀಡಿದರು. ತಂದೆ ಬೆಂಗಳೂರಿನಲ್ಲಿ ಆಟೋಮೊಬೈಲ್ ವ್ಯವಹಾರ ಮಾಡುತ್ತಿದ್ದರೂ ಅವರು ಜನಿಸಿದ್ದು ತಮಿಳುನಾಡಿನ ಪಾಪನಾಶಂ ಎಂಬ ಊರಿನಲ್ಲಿದ್ದ ತಾಯಿಯ ತವರುಮನೆಯಲ್ಲಿ. ಮುಂದೆ ಬೆಂಗಳೂರಿನಲ್ಲಿಯೇ ಬೆಳೆದು ನಗರದ ಪ್ರತಿಷ್ಠಿತ ಸೇಂಟ್ ಜೋಸೆಫ್ ಕಾಲೇಜಿನಿಂದ ವಿಜ್ಞಾನದ ವಿಷಯದಲ್ಲಿ ಪದವೀಧರರಾದರು. ಅರಸಿಕೊಂಡು ಬಂದ ಬ್ಯಾಂಕ್ ಹುದ್ದೆಯನ್ನು ತ್ಯಜಿಸಿ ಆಧ್ಯಾತ್ಮದ ಸೆಳೆತಕ್ಕೊಳಗಾಗಿ, ಮಹರ್ಷಿ ಮಹೇಶ ಯೋಗಿಗಳ ಜೊತೆಗೂಡಿದರು. ಮುಂದಿನದು ಇತಿಹಾಸ!

ಕೇವಲ ನಾಲ್ಕು ವರ್ಷದವರಿದ್ದಾಗ ಭಗವದ್ಗೀತೆಯ ಶ್ಲೋಕಗಳನ್ನು ಸರಾಗವಾಗಿ, ನಿರರ್ಗಳವಾಗಿ ಪಠಿಸುತ್ತಿದ್ದ ಶ್ರೀಶ್ರೀಯವರು ಯೋಗ, ಆಯುರ್ವೇದ, ವೇದೋಪನಿಷತ್ತುಗಳಲ್ಲಿ ತಮ್ಮ ಎಳೆಯ ವಯಸ್ಸಿನಲ್ಲಿಯೇ ಪಾರಂಗತರಾಗಿದ್ದರು.

ಜಗತ್ತಿನಾದ್ಯಂತ ಅನೇಕ ಗೌರವ ಸನ್ಮಾನಗಳು ಅವರನ್ನು ಅರಸಿ ಬಂದಿವೆ. ಭಾರತದ ಎರಡನೆಯ ಅತ್ಯುನ್ನತ ನಾಗರಿಕ ಸನ್ಮಾನವಾದ ಪದ್ಮವಿಭೂಷಣ ಪ್ರಶಸ್ತಿ ಅವರ ಸೇವೆಗೆ ಸಂದಿದೆ. ಜಗತ್ತಿನಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಅವರನ್ನು ಸನ್ಮಾನಿಸಿವೆ. ಪರಾಗ್ವೆ, ಮಂಗೋಲಿಯಾ ಮತ್ತು ಕೊಲಂಬಿಯಾ ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಇವರಿಗೆ ಲಭ್ಯವಾಗಿವೆ. ಅಮೆರಿಕದ 25ಕ್ಕೂ ಹೆಚ್ಚು ರಾಜ್ಯಗಳು ರವಿಶಂಕರ್ ದಿನವನ್ನು ಘೋಷಣೆ ಮಾಡಿವೆ. ಇಷ್ಟೆಲ್ಲ ಸಾಧನೆ ಮಾಡಿದ ಕನ್ನಡಿಗರಾದ ಶ್ರೀಶ್ರೀಯವರಿಗೆ ವರ್ಷದ ಕನ್ನಡಿಗ ಪ್ರಶಸ್ತಿಯೂ ಲಭ್ಯವಾಗಿದೆ.

ಶ್ರೀಶ್ರೀಯವರೇ ಬರೆದಿರುವ ಈ ಕವನದೊಂದಿಗೆ ಲೇಖನಿಗೆ ವಿರಾಮ ನೀಡುತ್ತೇನೆ —

ಲಯ

ಕಾಯದಲೆದ್ದು ಕಾಡುವ ನೋವಿನ ಹಾಗಲ್ಲ
ಮಾಯೆಯ ಮಣ್ಣೆಂದು ದೂರವಾದ ಹಾಗೆ
ನನ್ನ ಮೇಜಿನ ಮೇಲಿನ ಗಾಜಿನ ಗೋಳದ ಹಾಗಲ್ಲ
ಸಾವಿರ ಕಣ್ಣುಗಳು ನೆಟ್ಟ ಪರದೆಯೊಳು ಬೇರು ಬಿಟ್ಟ ಹಾಗೆ
ಬೇರಿಲ್ಲದೆ ಹರಡುವ ಮನಿ ಪ್ಲಾಂಟ್‍ನ ಹಾಗಲ್ಲ
ಬಣ್ಣದ ಭೇದಗಳೆಲ್ಲಾ ಕಳೆದ ಕವಿದ ಕತ್ತಲ ಹಾಗೆ
ನನ್ನ ಬಗ್ಗೆ ನಿಮ್ಮ ಬುದ್ಧಿಗನಿಸುವ ಹಾಗಲ್ಲ
ನಾವು ನಾವೊಳಗೆ ನೀವೆಲ್ಲಾ ಬಂದು ಹೋಗುವ ಹಾಗೆ
ಉಸಿರು ಕರಗಿದೊಡೆ ನನ್ನ ನಾ ಎತ್ತಿ ಹೆಡೆದ ಹಾಗೆ
ಸುಕ್ಕುಗಟ್ಟಿದ ನೆತ್ತಿ ಹೊತ್ತಿ ಉರಿವ ಬತ್ತಿ
ಎತ್ತಿ ಮೆರೆವೆದೆಯ ಹುರುಪು ಬತ್ತದೆ, ನಗದೆ ನಗುವೆ ಹಾಗೆ
ಬೇಕು ಬೇಡಗಳೆಲ್ಲಾ ಹೂಡಿ ಬಾಡಿದ ಮೇಲೆ ಕೂಡುವ ಕೋಡು ಹೆಣಗನ ಹಾಗೆ
ನಲ್ಲನೆದೆಗೊರಗಿದ ಬಲ್ಲ ಬಾಲೆಯ ಹಾಗೆ
ಅತ್ತಿತ್ತ ಅಲೆಯದೆ ಒಳ ಆಲಯದೊಳು
ಆಗಲು ಲಯ ಇರದು ಭಯ..

ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ ಶ್ರೀಶ್ರೀಯವರ ಎಲ್ಲ ಬೋಧನೆಗಳ ಸಾರ ಈ ಕವನದಲ್ಲಿ ಅಡಕವಾಗಿದೆ. “ನಲ್ಲನೆದೆಗೊರಗಿದ ಬಲ್ಲ ಬಾಲೆಯ ಹಾಗೆ ಅತ್ತಿತ್ತ ಅಲೆಯದೆ ಒಳ ಆಲಯದೊಳು ಆಗಲು ಲಯ ಇರದು ಭಯ” ಬದುಕಿನ ಬಗ್ಗೆ ಭಯವನ್ನು ನಿವಾರಿಸಿಕೊಳ್ಳಲು ಇದಕ್ಕೆಂತ ಉತ್ತಮ ಸೂತ್ರ ಬೇಕೆ? ಭಯವನ್ನು ಕಳೆದುಕೊಂಡರೆ ಅದೇ ಮುಕ್ತಿ.

ಎಂದೂ ಬೆಳೆಯದ ಬಾಲಕ, ಏಕಕಾಲದಲ್ಲಿ ಎಲ್ಲ ಸಂಬಂಧಗಳಲ್ಲಿ ಎದುರಾಗುವ ಅಪೂರ್ವ ಬಂಧು, ಗೆಳೆಯ, ಕವಿ, ಮಹಾನ್ ವೇದಾಂತಿ, ರಾಜಕಾರಣಿ, ಶಾಂತಿದೂತ, ಸದ್ಗುರು, ಸಂಧಾನ ಚತುರ, ಸಮಾಜ ಸುಧಾರಕ, ಅದ್ವೈತ ಸಿದ್ಧಾಂತ ಪ್ರತಿಪಾದಕ, ಯೋಗ ಗುರು, ಸರ್ವಧರ್ಮ ಸಮನ್ವಯಕಾರ, ಎಲ್ಲವೂ ಆಗಿರುವ ಶ್ರೀಶ್ರೀಯವರಿಗೆ ನಮೊ ನಮ:.