- ಡಾ. ಅರವಿಂದ ಮಾಲಗತ್ತಿ ಬರೆದ ಹೊಸ ನಾಟಕದ ಕುರಿತು - ಅಕ್ಟೋಬರ್ 11, 2022
- ಸಾವಿತ್ರಿಬಾಯಿ ಫುಲೆ : ಕ್ರಾಂತಿಯ ದೀಪಮಾಲೆ - ಸೆಪ್ಟೆಂಬರ್ 8, 2022
- ಬರಗೂರರ ´ಪರಂಪರೆಯೊಂದಿಗೆ ಪಿಸುಮಾತು´ - ಆಗಸ್ಟ್ 23, 2022
ಛಳಿಗಾಲ ಮುಗಿದು ಬೇಸಿಗೆ ಕಾಲೂರುವ ಹೊಣಾರ ಜೋರಾಗಿತ್ತು. ಆದರೂ ಛಳಿಯೇನು ಕಡಿಮೆಯಾಗಿರಲಿಲ್ಲ. ತಣ್ಣನೆಯ ಗಾಳಿ ಬೀಸುತ್ತಿತ್ತು. ಸುಳಿಸುಳಿದು ಬೀಸುವ ಗಾಳಿಗೆ ಮೈಬಿರಿಯುತ್ತಿತ್ತು, ತುಟಿ ಕಪ್ಪಾಗಿ ಬಾಯಿ ತೆರೆದರೆ ಸಾಕು ಬಿರಿದು ಬಿಡುತ್ತಿದ್ದವು. ಹಿಮ್ಮಡಿ, ಪಾದ ಸೀಳಿ ರಕ್ತ ಚಿಮ್ಮುತ್ತಿತ್ತು. ಅಂತಹದ್ದರಲ್ಲೂ ಸಾಹುಕಾರನ ಆಜ್ಞೆಯಂತೆ ಬಂಡಿ ಕಟ್ಟಿಕೊಂಡು ಇಂಡಿ ರೈಲು ನಿಲ್ದಾಣಕ್ಕೆ ಬಂದು, ಗಾಡಿಕೊಳ್ಳ ಹರಿದು ಎತ್ತುಗಳಿಗೆ ಮೇವು ಹಾಕಿದ ಶಂಕರ. ಚಿಪಾಟಿ, ಕಡ್ಡಿಕಸ ಆಯ್ದು ಬೆಂಕಿ ಹಚ್ಚಿ ಉರಿಕಾಸಿಕೊಳ್ಳುತ್ತ ಶಂಕರ ಕೂತಿದ್ದ…
ಎಚ್. ಟಿ. ಪೋತೆಯವರು ತಮ್ಮ ಹಳ್ಳಿಯ ಪರಿಸರವನ್ನು ವರ್ಣಿಸುವಾಗ ಕಾದಂಬರಿಯಲ್ಲಿ ಬರುವ ಮಾತು
ಬಯಲೆಂಬೊ ಬಯಲು: ಗ್ರಾಮೀಣ ದಲಿತ ಸಂವೇದನೆಯ ಕಥನ
ಬಯಲೆಂಬೊ ಬಯಲು
ಲೇ: ಡಾ. ಎಚ್. ಟಿ. ಪೋತೆ
ಪುಟ:214, ಬೆಲೆ:200/-
ಪ್ರಕಾಶನ: ಕುಟುಂಬ ಪ್ರಕಾಶನ, ಕಲಬುರಗಿ
ಡಾ. ಎಚ್. ಟಿ. ಪೋತೆ ನಾಡಿನ ಪ್ರಮುಖ ಲೇಖಕ, ವಿದ್ವಾಂಸ, ವಾಗ್ಮಿ ಮತ್ತು ಸಂಸ್ಕøತಿ ಚಿಂತಕರು. ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾವ್ಯ, ವಿಮರ್ಶೆ, ಅನುವಾದ, ಸಂಶೋಧನೆ, ಪ್ರವಾಸ ಕಥನ, ಪ್ರಬಂಧ ಕ್ಷೇತ್ರಗಳಲ್ಲಿ ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರಭಾವಿತರಾದ ಎಚ್. ಟಿ. ಪೋತೆಯವರು ಆ ವಿಚಾರಗಳಿಗೆ ಪೂರಕವಾಗುವಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಹೊಸ ಶಿಕ್ಷಣದ ಪ್ರಭಾವದಿಂದ ಸುಧಾರಿಸಿದ ದಲಿತರ ಬದುಕು ಅವರ ಎಚ್ಚೆತ್ತ ಪ್ರಜ್ಞೆಯ ವಿವಿಧ ನೋಟಗಳು ಪೋತೆಯವರ ಕೃತಿಗಳಲ್ಲಿ ಪ್ರಕಟಗೊಂಡಿದ್ದರಿಂದ ದಲಿತ ಸಾಹಿತ್ಯಕ್ಕೆ ಅವರ ಕೊಡುಗೆ ಹೆಚ್ಚು ಮಹತ್ವದ್ದೆನಿಸುತ್ತದೆ.
ಪ್ರಸ್ತುತ ‘ಬಯಲೆಂಬೊ ಬಯಲು’ ಡಾ. ಎಚ್. ಟಿ. ಪೋತೆಯವರ ಪ್ರಥಮ ಕಾದಂಬರಿ. ಕನ್ನಡದಲ್ಲಿ ಇದೊಂದು ವಿಶಿಷ್ಟವಾದ ಬಯೋಪಿಕ್ ಕಾದಂಬರಿ. ಈ ಬಯೋಪಿಕ್ ಕಾದಂಬರಿ ಎಚ್. ಟಿ. ಪೋತೆಯವರ ಕುಟುಂಬದ ಕಥಾನಕವೇ ಆಗಿದೆ. ಈ ಕಾದಂಬರಿ ಇಪ್ಪತ್ತೊಂದು ಅಧ್ಯಾಯಗಳನ್ನು ಒಳಗೊಂಡಿದೆ. ಪ್ರತಿಯೊಂದು ಅಧ್ಯಾಯವೂ ತನ್ನದೆಯಾದ ವಸ್ತು ಹಾಗೂ ನಿರ್ದಿಷ್ಟ ಗುರಿಯನ್ನು ಹೊಂದಿದೆ. ಈ ಕಾದಂಬರಿಯ ವೈಶಿಷ್ಟ್ಯವೆಂದರೆ ಇದು ಕಾದಂಬರಿಯೆಂದರೆ ಕಾದಂಬರಿಯಾಗುತ್ತದೆ. ಜೀವನಕಥನವೆಂದರೆ ಜೀವನಕಥನವಾಗುತ್ತದೆ. ದಲಿತ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ತುಳಿತಕ್ಕೊಳಗಾಗಿ, ಪಶು ಸಮಾನ ಬದುಕನ್ನು ಬದುಕಿ ಶೋಷಣೆಗೆ ಒಳಗಾಗಿದೆ. ಯುಗಯುಗಳಿಂದ ಅನುಭವಿಸುವ ತಳವರ್ಗದ ಶೋಷಣೆಯ ಚಿತ್ರಣ ಈ ಕಾದಂಬರಿಯಲ್ಲಿ ಸಹಜವಾಗಿ ಮೂಡಿಬಂದಿದೆ. ‘ಬಯಲೆಂಬೊ ಬಯಲು’ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುವ ಗ್ರಾಮೀಣ ಬದುಕಿನ ಸ್ಥಿತ್ಯಂತರಗಳ ದಾಖಲಾತಿ. ಮೂರು ತಲೆಮಾರುಗಳ ಬದುಕಿನ ಸುದೀರ್ಘ ಚಿತ್ರಣ. ಈ ಕಾದಂಬರಿ ಎಚ್. ಟಿ. ಪೋತೆಯವರ ಜೀವನಕಥನದಂತೆ ಪ್ರಕಟವಾದರೂ ಅದನ್ನು ಸ್ವಾತಂತ್ರ್ಯನಂತರ ಬೆಳೆಯುತ್ತಿದ್ದ ಭಾರತದಲ್ಲಿ, ಅನಕ್ಷರತೆಯ ಗ್ರಾಮೀಣ ಜೀವನಕ್ರಮಕ್ಕಿಂತ ಆಧುನಿಕ ನಾಗರಿಕತೆಗೆ ಹೊರಳಿಕೊಂಡು, ಅಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಭಾರತದ ತಳಸಮುದಾಯದ ಪ್ರಜೆಯೊಬ್ಬ ಮಾಡಿದ ಹೋರಾಟದ ದಾಖಲೆಯಂತೂ ಓದಬಹುದು. ಪೋತೆಯವರಿಗೆ ಇಂತಹ ಬಿಡುಗಡೆಗೆ ಕನ್ನಡ ಸಾಹಿತ್ಯದ ಅಧ್ಯಯನ ಹಾಗೂ ಪ್ರಾಧ್ಯಾಪಕ ಹುದ್ದೆ ದೊರೆಯಿತು. ಅದರ ಹಲವಾರು ಏಳುಬೀಳುಗಳಲ್ಲಿ ಕನ್ನಡ ಪ್ರಾಧ್ಯಾಪಕನೊಬ್ಬ ಸಾಗಿಬಂದ ಕ್ರಮದ ದಾಖಲೆಯಾಗಿ ಈ ಕೃತಿಗೆ ಒಂದು ಮಹತ್ವವಿದೆ.
ಶಿಥಿಲವಾಗುತ್ತಿರುವ ಅವಿಭಕ್ತ ಕೌಟುಂಬಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಮತ್ತು ಅದರ ನಾಶವನ್ನೇ ಬಯಸುವ ಕಾಲ ಹಾಗೂ ವ್ಯಕ್ತಿ ಸಂಘರ್ಷ ಕಾದಂಬರಿಯುದ್ದಕ್ಕೂ ಒಡಮೂಡಿದೆ. ಈ ಕಾದಂಬರಿಯ ಹಿಂದೆ ಕಾದಂಬರಿಕಾರರ ಅಭಿವ್ಯಕ್ತಿ ಸಾಮಥ್ರ್ಯ ಹಾಗೂ ಸಾಮಾಜಿಕ ಕಾಳಜಿಯನ್ನು ಗುರುತಿಸಬಹುದಾಗಿದೆ. ಕೌಟುಂಬಿಕ ನೆಲೆಯನ್ನುಳ್ಳ ಸಂಕೀರ್ಣ ವಸ್ತು ವಿನ್ಯಾಸದ ಗತಕಾಲದ ‘ಹಂಜಗಿ’ಯ ನೆನಪುಗಳಿಂದ ಕಾದಂಬರಿ ಆರಂಭವಾಗುತ್ತದೆ. ಕಾದಂಬರಿ ಮೂರು ತಲೆಮಾರುಗಳ ಜೀವನದ ಘಟನೆಗಳನ್ನು ನಿರೂಪಿಸುತ್ತಲೇ ಕಟ್ಟಿಕೊಡುವ ಸಾಮಾಜಿಕ ವಿವರಗಳು ಭಾರತೀಯ ಅಕ್ಷರ ಚರಿತ್ರೆ ಜಾಣ ಕುರುಡಿನಿಂದ ಮರೆ ಮಾಡಿದ ಅನೇಕ ಸಂಗತಿಗಳನ್ನು ಬಯಲುಗೊಳಿಸುತ್ತದೆ. ಇಪ್ಪತ್ತನೆಯ ಶತಮಾನದ ಭಾರತೀಯ ಸಮಾಜದ ಬದುಕು ವೈಬ್ರೆಂಟ್ ನೆಲೆಯದು. ಗ್ರಾಮೀಣ ಸಮಾಜಗಳು ಆಧುನಿಕತೆಗೆ ತೆರೆದುಕೊಂಡಂತೆ ಅನುಭವಿಸಿದ ತಲ್ಲಣ, ಆತಂಕ, ಸಂಬಂಧಗಳಲ್ಲಿ ತೋರಿದ ಬಿರುಕುಗಳನ್ನು ತೆರದು ತೋರಿಸಿದ್ದೇ ಭಾರತೀಯ ಲೇಖಕರು. ಈ ಕಾದಂಬರಿಗೂ ಅಂತಹ ಆಯಾಮಗಳು ಯಥೇಚ್ಛವಾಗಿ ದಕ್ಕಿವೆ. ಈ ಕಾದಂಬರಿಯಲ್ಲಿ ಯಾವುದೇ ರೀತಿಯ ಆಕ್ರೋಶ ಮತ್ತು ಕೃತಕತೆಗೆ ಅವಕಾಶವಿಲ್ಲ. ಲೇಖಕರು ಸಂಯಮದಿಂದ ತಮ್ಮ ಅನುಭವಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ವಾಸ್ತವ ಸತ್ಯವನ್ನು, ಸಮಾಜ ವ್ಯವಸ್ಥೆಯ ವರ್ಣನೆಯನ್ನು ಮತ್ತು ವ್ಯಕ್ತಿಯ ಸುತ್ತ ನಡೆದ ಘಟನೆಗಳನ್ನು ಲೇಖಕರು ತಮ್ಮ ಬರವಣಿಗೆಯಲ್ಲಿ ಸಾಕಾರಗೊಳಿಸಿದ್ದಾರೆ.
ಎಚ್. ಟಿ. ಪೋತೆಯವರ ಬರಹ ಮತ್ತು ವ್ಯಕ್ತಿತ್ವದ ಛಾಪುಗಳನ್ನು ಅರಿತವರಲ್ಲಿ ಆಸಕ್ತಿ ಮತ್ತು ಕುತೂಹಲಗಳನ್ನು ಇಮ್ಮಡಿಗೊಳಿಸಬಲ್ಲ ಕಾದಂಬರಿ ‘ಬಯಲೆಂಬೊ ಬಯಲು’. ಪೋತೆಯವರ ನಿಜವಾದ ಕ್ಷೇತ್ರ ಸಣ್ಣ ಕಥೆಯಾದರೂ ‘ಬಯಲೆಂಬೊ ಬಯಲು’ವಿನತಂತಹ ಕಲಾತ್ಮಕ ಕಾದಂಬರಿಯನ್ನು ಅವರು ದಲಿತ ಕಾದಂಬರಿ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ‘ಬಯಲೆಂಬೊ ಬಯಲು’ ಕಾದಂಬರಿಯಲ್ಲಿ ಪೋತೆಯವರು ನಿವೇದಕರಾಗುತ್ತಾರೆ. ಅಲ್ಲಿಯ ಎಲ್ಲ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಭೂತಕಾಲ, ವರ್ತಮಾನಕಾಲ, ಭವಿಷ್ಯತ್‍ಕಾಲ -ಎಲ್ಲವೂ ಈ ನಿವೇದಕನ ಎದುರಿನಿಂದ ಹಾಯ್ದು ಹೋಗುತ್ತವೆ. ಅದೇ ‘ಬಯಲೆಂಬೊ ಬಯಲು’ ವಿನಲ್ಲಿ ಕಲಾತ್ಮಕತೆ, ವಾಸ್ತವತೆ ಇದೆ. ಅದನ್ನು ಚಿತ್ರಿಸುವಲ್ಲಿ ಪೋತೆಯವರು ಅಧಿಕ ಸಂಯಮತೆಯನ್ನು ಕಾಯ್ದುಕೊಂಡಿದ್ದಾರೆ. ಇದಕ್ಕೆ ಆತ್ಮಚರಿತ್ರೆಯ ಸ್ವರೂಪ ಬಂದಿರುವುದು ಸಹ ಇದೇ ಕಾರಣಕ್ಕಾಗಿರಬೇಕು. ಈ ಕಾದಂಬರಿಯ ನೈಜ ಸತ್ವ ಅಡಗಿರುವುದು ಕಾದಂಬರಿಯ ಗ್ರಾಮೀಣ ದಲಿತ ಬದುಕನ್ನು ಅದರ ಎಲ್ಲಾ ಸಂಕೀರ್ಣ ಅಂತರ್ ಸಂಬಂಧಗಳ ಜೊತೆ ‘ನೋಡುವ’ ದರ್ಶನ ಗುಣವನ್ನು ಪಡೆದಿರುವುದರಿಂದ. ಕಥನಕ್ಕೆ ಯಾವುದೇ ಪೂರ್ವ ನಿರ್ಧಾರಗಳನ್ನು ಘಟನೆಗಳ ಮೂಲಕ ಕಾಲಾನುಕ್ರಮಣಿಕೆಗೆ ಜೋಡಿಸಬೇಕೆಂಬ ಉಮೇದು ಇಲ್ಲ. ಆದ್ದರಿಂದಲೇ ಕಥನವು ಸರ್ವಸಾಕ್ಷಿತ್ವದ ನೆಲೆಯಲ್ಲಿ ರಾಮಪ್ಪ, ತಿಪ್ಪಣ್ಣ ಮತ್ತು ಹನುಮಂತ ಪಾತ್ರಗಳ ಮನೋಲಹರಿಗಳ ಮೂಲಕ ಗ್ರಾಮೀಣ ದಲಿತ ಜೀವನದ ಅಂತಸ್ಥ ನೆಲೆಗಳ ಶೋಧನೆಗೆ ತೊಡಗುತ್ತದೆ. ಕಳೆದ ಶತಮಾನದ ಸಾಮಾಜಿಕ, ಆರ್ಥಿಕ, ರಾಜಕೀಯ ತತ್ವಪ್ರಣಾಳಿಗಳನ್ನು ಮೀರಿ, ಕಾದಂಬರಿ ‘ಹಂಜಗಿ’ ಎಂಬ ಒಂದು ಹಳ್ಳಿಯನ್ನೇ ಸಂಸ್ಕøತಿಯ ಒಂದು ಸ್ವತಂತ್ರ ಘಟಕವನ್ನಾಗಿ ಸ್ವೀಕರಿಸಿ ‘ನೋಡಲು’ ಉಪಕ್ರಮಿಸುವುದು, ರಾಮಪ್ಪ, ತಿಪ್ಪಣ್ಣ ಮತ್ತು ಹನುಮಂತರ ಅರಿವುಗಳ ಮೂಲಕ ‘ಹಂಜಗಿ’ಯ ಎಲ್ಲ ವೈರುಧ್ಯಗಳು ತೆರೆದುಕೊಳ್ಳುತ್ತಾ ಹೋಗುವುದು ಅನನ್ಯವಾಗಿದೆ. ಶ್ರೀಮಾನ್ ವೀರಪ್ಪ ಮೊಯಿಲಿ ಮತ್ತು ಆಯುಷ್ಮಾನ್ ಮಲ್ಲಿಕಾರ್ಜುನ ಖರ್ಗೆ ಮೊದಲಾದವರೊಂದಿಗೆ ಲೇಖಕರು ಬೆಳೆಸಿಕೊಂಡಿರುವ ಪ್ರೀತಿ, ಸ್ನೇಹ, ನಂಬಿಕೆ ಮತ್ತು ವಿಶ್ವಾಸಗಳನ್ನು ಓದಿಯೇ ಸವಿಯಬೇಕು.
ಎಚ್. ಟಿ. ಪೋತೆಯವರು ತಮ್ಮ ಸೃಜನಶೀಲತೆಯಲ್ಲಿ ಅವಮಾನಕ್ಕೆ ಕಲಾತ್ಮಕತೆಯ ರೂಪ ಕೊಡುತ್ತಾರೆ. ಕಲಾತ್ಮಕತೆ ಓದುಗರನ್ನು ಸೆರೆಹಿಡಿಯುತ್ತದೆ. ಬರವಣಿಗೆ ಬಗ್ಗೆ ಯಾವ ಪೂರ್ವಗ್ರಹವೂ ಇಲ್ಲದ ಹಾಗೆಯೇ ಮೋಹವೂ ಇಲ್ಲದ ಅಭಿವ್ಯಕ್ತಿ. ಈ ನಿರ್ಲಿಪ್ತ ಗುಣವೇ ಈ ಕಥನವನ್ನು ಅನನ್ಯವಾಗಿಸಿರುವ ಅಂಶ ಎಂಬುದು ನನ್ನ ನಂಬಿಕೆ. ಲೇಖಕರ ಅಜ್ಜ ಮತ್ತು ಅಪ್ಪ ಗತಿಸಿದ ಅರ್ಧ ಶತಮಾನದ ನಂತರವೂ ತನ್ನ ನೆನಪಿನಲ್ಲಿ ಅಳಿಯದೆ ಉಳಿದು ಕಾಡುತ್ತಿದ್ದ ಅವರ ಆದರ್ಶ, ಜೀವನಪ್ರೀತಿ, ಜಾತಿ- ಧರ್ಮ ಮತ್ತು ಮತಗಳಾಚೆಗೆ ಅವರಿಗಿದ್ದ ನಂಬಿಕೆ ಮತ್ತು ಬದ್ಧತೆಯ ಸ್ಮøತಿಗಳ ಕ್ರೋಢೀಕರಣವೇ ಈ ಕಾದಂಬರಿ. ಇಂಥ ವೈಶಿಷ್ಟ್ಯವನ್ನು ಈ ಕಾದಂಬರಿಯಲ್ಲಿ ಧಾರಾಳವಾಗಿ ಕಾಣಬಹುದು. ಗ್ರಾಮೀಣ ದಲಿತ ಸಂವೇದನೆಯ ವಿಶೇಷ ಅಭಿವ್ಯಕ್ತಿಯನ್ನು ಅವರ ಈ ಕಾದಂಬರಿಯಲ್ಲಿ ನಾವು ಕಾಣುತ್ತೇವೆ.
ಭಾರತದಲ್ಲಿ ಸಮಾಜ, ಜಾತಿ, ಚರಿತ್ರೆ, ಸಂಸ್ಕøತಿ ಸೇರಿದಂತೆ ಎಲ್ಲವೂ ಸಂಕೀರ್ಣ ಸ್ವರೂಪದವು. ಭಾರತೀಯ ಸಮಾಜ ಅನೈಸರ್ಗಿಕವಾದ ಜಾತಿಗಳ ಸಮಾಜ. ಜಾತಿ ಭಾರತೀಯ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಇದು ಹುಟ್ಟಿನ ಮೇಲೆ ನಿರ್ಣಯವಾಗುವ ಒಂದು ಅಸಂಗತ ತರ್ಕ. ಜಾತಿ ಎಂಬುದು ಮನುಷ್ಯನ ಸಹಜ ಪ್ರತಿಭೆ ಮತ್ತು ಸಾಮಥ್ರ್ಯದ ಮೇಲೆ ನಿಯಂತ್ರಣವನ್ನು ಹೇರುತ್ತದೆ; ಹುಟ್ಟನ್ನು ಮಾನದಂಡವನ್ನಾಗಿ ಪರಿಗಣಿಸಿ ಮಾನವ ಹಕ್ಕುಗಳನ್ನು ನಿರಾಕರಿಸುವುದನ್ನು ಸಮರ್ಥಿಸುತ್ತದೆ. ಮನುಷ್ಯ ಮನುಷ್ಯರ ನಡುವೆ ಇಲ್ಲದ ಪ್ರತ್ಯೇಕತೆಯನ್ನು ಸೃಷ್ಟಿಸಿ ನಂಬಿಸುತ್ತದೆ. ಭಾರತೀಯ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿಯಾಧಾರಿತ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆಯನ್ನು ತೊಡೆದು ಹಾಕಿ ‘ಸಮ ಸಮಾಜ’ ನಿರ್ಮಾಣದಲ್ಲಿ ತಮ್ಮ ಬದುಕನ್ನು ಮುಡುಪಾಗಿಟ್ಟು ಅದಕ್ಕಾಗಿ ಅಹರ್ನಿಶಿ ಹೋರಾಟ ಮಾಡಿದವರು ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಅಂಬೇಡ್ಕರ್ ಅಗ್ರಗಣ್ಯರು. ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕುಗಳು ನಿರಾಕರಿಸಲ್ಪಟ್ಟು ಅಸಮಾನತೆಯ ಸಂಕೋಲೆಗೆ ಒಳಗಾದ ಶೂದ್ರ, ಹಿಂದುಳಿದವರು ಮತ್ತು ಅಸ್ಪøಶ್ಯರ ಬದುಕು ಅಸಹನೀಯ. ಬಡತನ, ನಿರುದ್ಯೋಗ, ಅವಕಾಶವಿಹೀನತೆ, ಆರ್ಥಿಕ ಹಿಂದುಳಿದಿರುವಿಕೆ, ಅಸ್ಪøಶ್ಯತೆ, ಮೌಢ್ಯ, ಕಂದಾಚಾರ, ಶೈಕ್ಷಣಿಕ ಹಿಂದುಳಿದಿರುವಿಕೆಯಂತಹ ಸಂಕಷ್ಟಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಬದುಕಬೇಕಾದ ದಾರುಣ ಸ್ಥಿತಿ ಹಿಂದುಳಿದ, ಶೂದ್ರ ಮತ್ತು ತಳಸಮುದಾಯಗಳದ್ದು.
ಸಾಮಾಜಿಕ ಶೋಷಣೆ ಮತ್ತು ತಾರತಮ್ಯ ನಿವಾರಣೆಗೆ ಹೋರಾಟ ರೂಪಿಸಿ ಸ್ವಾಭಿಮಾನ ಚಳವಳಿಯನ್ನು ಹುಟ್ಟು ಹಾಕಿದ ಪರ್ಯಾಯ ಪರಂಪರೆಯೇ ನಮ್ಮ ದೇಶದಲ್ಲಿ ಇದೆ. ಶೋಷಣೆ, ದೌರ್ಜನ್ಯ, ವಂಚನೆ ಮತ್ತು ತಾರತಮ್ಯಗಳನ್ನು ಪೋಷಿಸುವ ಪ್ರಧಾನ ವ್ಯವಸ್ಥೆಯ ವಿರುದ್ಧ ಸ್ವಾಭಿಮಾನ ಮತ್ತು ಸಮಾನ ಹಕ್ಕುಗಳಿಗಾಗಿ ನಡೆಸಿದ ಪರ್ಯಾಯ ಪರಂಪರೆಯು ಸಮಾಜದಲ್ಲಿ ಅಂತರ್ಗತವಾಗಿದೆ. ಶೂದ್ರಾತಿಶೂದ್ರ ಜಾತಿಗಳಿಗೆ ಸ್ವಾಭಿಮಾನ, ಸ್ವಂತಿಕೆ, ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ನ್ಯಾಯ ಒದಗಿಸಿದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಡೆಸಿದ ಸ್ವಾಭಿಮಾನ ಹೋರಾಟದ ಫಲವಾಗಿ ಶೂದ್ರಾತಿಶೂದ್ರರು ಇಂದು ಸಮಾಜದ ವಿವಿಧ ರಂಗಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತಾಗಿದೆ. ಅಂಬೇಡ್ಕರ್ ಅವರು ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶಗಳು ಮತ್ತು ಸೌಲಭ್ಯಗಳು ಸಿಗಬೇಕೆಂದು ಹೋರಾಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ದೊರೆಯಲು ಕಾರಣೀಭೂತರಾಗಿರುವರು.
ಈ ಕಾದಂಬರಿಯಲ್ಲಿ ಬರುವ ರಾಮಪ್ಪ, ತಿಪ್ಪಣ್ಣ ಮತ್ತು ಹನುಮಂತ ಈ ಮೂವರು ಮೂರು ತಲೆಮಾರುಗಳನ್ನು ಪ್ರತಿನಿಧಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ರಾಮಪ್ಪ, ಸ್ವಾತಂತ್ರ್ಯದ ಆಸುಪಾಸಿನಲ್ಲಿ ಜನಿಸಿದ ತಿಪ್ಪಣ್ಣ, ಸ್ವಾತಂತ್ರ್ಯ ಬಂದ ಉತ್ತರಾರ್ಧದ ಆರನೆಯ ದಶಕದಲ್ಲಿ ಜನಿಸಿದ ಹನುಮಂತರೇ ಈ ಬಯೋಪಿಕ್ ಕಾದಂಬರಿಯ ನಾಯಕರು. ಈ ಕಾದಂಬರಿಯ ಮೂವರು ನಾಯಕರು ಸಮುದಾಯ, ಸಮಾಜ ಮತ್ತು ದೇಶವನ್ನು ರೂಪಾತ್ಮಕವಾಗಿ ಪ್ರತಿನಿಧಿಸಿದ್ದು ಕಂಡುಬರುತ್ತದೆ. ಈ ಮೂರು ನಾಯಕರ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆಗಳೇ ಮೂಲ ಕಾರಣವಾಗಿವೆಯೆಂಬುದು ಸ್ಪಷ್ಟ.
ರಾಮಪ್ಪ ಈ ಕಾದಂಬರಿಯ ಮೊದಲನೆಯ ನಾಯಕ. ಅವನ ತಿಳುವಳಿಕೆ, ವಿವೇಕ, ವಿಚಾರ, ಧೈರ್ಯ, ಕೆಚ್ಚು, ಶ್ರಮ, ಪ್ರಾಮಾಣಿಕತೆ, ಆತ್ಮಪ್ರತ್ಯಯಗಳು ಕಾದಂಬರಿಯ ಪ್ರಾರಂಭದ ಬಹುಪಾಲು ಪುಟಗಳು ಆವರಿಸಿಕೊಂಡಿವೆ. ಕಾದಂಬರಿಯಲ್ಲಿ ರಾಮಪ್ಪನ ಪಾತ್ರ ಆದರ್ಶವನ್ನು ಬಿಂಬಿಸುತ್ತದೆ. ಅವನು ಬದುಕಿನಲ್ಲಿ ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಆದರ್ಶ ಬದುಕಿಗೆ ಮಾದರಿಯಾಗಿದ್ದಾನೆ. ಊಳಿಗಮಾನ್ಯ ಬದುಕಿನ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ಕಥಾನಾಯಕನು ಈ ಪಾತ್ರದ ದಾರಿಯನ್ನು ಹಿಡಿಯುತ್ತಾನೆ. ಈ ಪಾತ್ರದಲ್ಲಿ ವಂಚನೆರಹಿತ ಸಜ್ಜನಿಕೆ ಗೋಚರಿಸುತ್ತದೆ. ಮೇಲ್ವರ್ಗ ಮತ್ತು ಕೆಳವರ್ಗದ ಜನತೆಯ ನಡುವಿನ ಭಿನ್ನತೆಯನ್ನು ರಾಮಪ್ಪನ ಪಾತ್ರದ ಮೂಲಕ ಲೇಖಕರು ಯಥಾವತ್ತಾಗಿ ಪರಿಚಯಿಸಿದ್ದಾರೆ.
ತಿಪ್ಪಣ್ಣ ಈ ಕಾದಂಬರಿಯ ಎರಡನೆಯ ನಾಯಕ. ಇವರೇ ಎಚ್. ಟಿ. ಪೋತೆಯವರ ತಂದೆ. ಇವರು ತಂದೆ ರಾಮಪ್ಪನ ಪ್ರತಿರೂಪ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ತಳವರ್ಗದವರಿಗೆ ಆ ಸ್ವಾತಂತ್ರ್ಯ ಸಿಕ್ಕಿದೆಯೇ? ಈ ಪ್ರಶ್ನೆಯು ಕಥಾನಾಯಕ ತಿಪ್ಪಣ್ಣನಿಗೆ ಸಹಜವಾಗಿ ಕಾಡುತ್ತದೆ. ಮಗ ಹನುಮಂತ ಓದಿ ಮುಂದೆ ಬರಬೇಕೆನ್ನುವುದು ತಿಪ್ಪಣ್ಣನವರ ಆಸೆ. ಅವರು ಮಗನನ್ನು ಆಧನಿಕತೆಗೆ ನೂಕುತ್ತಾರೆ. ಗೌಡಪ್ಪಗೌಡನಂಥವರ ಶೋಷಣೆಯ ಹಿಂದಿನ ಸಾಮಾಜಿಕ ಅನ್ಯಾಯ, ಅಸಮಾನತೆ ಮತ್ತು ಕ್ರೌರ್ಯಗಳನ್ನು ತಿಪ್ಪಣ್ಣ ಎದುರಿಸುವಲ್ಲಿ ತೋರುವ ಸಮಚಿತ್ತ, ಪ್ರಶಾಂತತೆ, ನೈತಿಕ ಸ್ಥೈರ್ಯ, ಅರಳುವ ಬದುಕಿಗೆ ಆಸರೆಯಾಗಿ ನಿಲ್ಲುವ ಮನೋಭಾವ ಇವೆಲ್ಲ ಜೀವಪರವಾದದ್ದು, ಇತ್ಯಾತ್ಮಕವಾದದ್ದು. ಇದು ಅಮಾನವೀಯವಾದುದೆಲ್ಲವನ್ನೂ ಮೀರಿ ಮನುಷ್ಯನ ಘನತೆಯನ್ನೆತ್ತಿ ಹಿಡಿಯುವಂತ ಬೆಳವಣಿಗೆ ಮತ್ತು ಬರವಣಿಗೆ. ಕಾದಂಬರಿಯ ಮಧ್ಯಭಾಗದಲ್ಲಿ ಪೋತೆಯವರು ಕಾರಂತರ ‘ಚೋಮನದುಡಿ’ಯ ಚೋಮನ ಪಾಡನ್ನು ಪ್ರಸ್ತಾಪಿಸುತ್ತಾರೆ; ಭೂಮಿ ಉಳುವ ಒಕ್ಕಲಾಗಬೇಕೆಂಬ ದಲಿತನೊಬ್ಬನ ಆಸೆ ಏನೆಂಬುದನ್ನು ಚೋಮನ ಪಾತ್ರದ ಮೂಲಕ ವಿವರಿಸುತ್ತಾರೆ.
ಹನುಮಂತ ಈ ಕಾದಂಬರಿಯ ಮೂರನೆಯ ನಾಯಕ. ಹಳ್ಳಿಯ ಬಡತನದಲ್ಲಿ ಬೆಳೆದ ಹುಡುಗ ಆ ವಾತಾವರಣದಲ್ಲಿ ತನ್ನೊಳಗೆ ಆಳವಾಗಿ ಬೇರಿಳಿದಿದ್ದ ಕೀಳರಿಮೆಯನ್ನು ಕಾಲಕ್ರಮೇಣ ಜೀವನದಲ್ಲಿ ಮಾಗುತ್ತ ಕಳೆದು ಸ್ವಚ್ಛ ಮನಸ್ಸಿನವನಾದ ಕಥೆ ಬೆರಗು ಹುಟ್ಟಿಸುತ್ತದೆ. ಪೋತೆಯವರು ಅಸಮಾನತೆ, ಹಸಿವು, ಬಡತನದ ಅವಮಾನಗಳನ್ನು ಸ್ವಪ್ರಯತ್ನದಿಂದ ಮೀರಿ ಬೆಳೆದವರು. ವ್ಯಾಪಕವಾದ ಅಧ್ಯಯನ, ಅರ್ಥಪೂರ್ಣವಾದ ವಿವೇಚನೆ, ಆಧಾರಸಹಿತವಾದ ಚರ್ಚೆ, ಬದುಕಿನ ನಿರಂತರ ಓಡಾಟ ಮತ್ತು ಹೋರಾಟಗಳಲ್ಲಿ ತಮ್ಮ ನಿಜವನ್ನು ಶೋಧಿಸಿಕೊಂಡವರು. ವಿಜಯಪುರ ಜಿಲ್ಲೆಯಿಂದ ಬಂದು ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಪಡೆದ ಅವರ ಪಯಣ ರೋಮಾಂಚಕ. ಹಲವಾರು ಸಮಸ್ಯೆಗಳನ್ನು ಎದುರಿಸಿ ಜಯಶಾಲಿಯಾದ ಅವರ ಸಾಧನೆ, ಶೈಕ್ಷಣಿಕ-ಸಾಮಾಜಿಕ ಕಾಳಜಿ, ಸಮತೆಯ ಜೀವ ಸೆಲೆ, ಬತ್ತದಂತೆ ಕಾಪಿಟ್ಟುಕೊಂಡ ಬದ್ದತೆ, ಸಂಘಟನೆ ಮತ್ತು ಹೋರಾಟಗಳೆಲ್ಲ ಸಾಮಾನ್ಯವಲ್ಲ.
ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಸುಲಭ, ಆದರೆ ಕಟ್ಟುವುದು ಕಷ್ಟ, ಅದರಲ್ಲೂ ಪೋತೆಯವರ ದಾಖಲೆ ಗಮನಾರ್ಹ. ಹಲವು ಸಂಕಷ್ಟಗಳ ನಡುವೆ ಸಿಕ್ಕಿಬಿದ್ದ ಅವರು ಪಲಾಯನವಾದಿಯಾಗದೆ ಅವೆಲ್ಲವನ್ನು ಸಮರ್ಥವಾಗಿ ಎದುರಿಸುತ್ತಾರೆ. ಪೋತೆಯವರು ತಮ್ಮನ್ನು ಆವರಿಸಿದ ಭೂತದ ಹುತ್ತವನ್ನೊಡೆದು ಹೊರಬಂದು ತಮ್ಮೆಲ್ಲಾ ಸಾಧ್ಯತೆಗಳನ್ನು ಗುರುತಿಸಿಕೊಂಡು ಬದುಕು ಇರುವುದು ಅರ್ಥೈಯಿಸುವುದಕ್ಕಲ್ಲ ಬದುಕುವುದಕ್ಕೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ವ್ಯಕ್ತಿತ್ವದಲ್ಲಿ ಪ್ರಖರ ವೈಚಾರಿಕ ಪ್ರಜ್ಞೆಯಿದೆ, ಸಾಮಾಜಿಕ ಮತ್ತು ಶೈಕ್ಷಣಿಕ ಕಾಳಜಿಯಿದೆ. ಈಗ ಕರ್ನಾಟಕದ ಸಾಹಿತ್ಯಿಕ, ಸಾಂಸ್ಕøತಿಕ ಮತ್ತು ಆಡಳಿತಾತ್ಮಕ ನೆಲೆಗಳಲ್ಲಿ ಎಚ್. ಟಿ. ಪೋತೆಯವರಿಗೆ ವಿಶೇಷ ಹೆಸರಿದೆ. ಯಾವುದೇ ವಿಚಾರದಲ್ಲೂ ಅವರೊಡನೆ ಗೌರವಯುತ ಚರ್ಚೆ ಸಾಧ್ಯವಿದೆ. ಅವರದ್ದು ಉದಾರ ಮಾನವೀಯ ಗುಣದ ಗ್ರಾಮೀಣ-ನಾಗರಿಕ ವ್ಯಕ್ತಿತ್ವ. ಅವರು ಆಧುನಿಕತೆಯಿಂದ ಸಮಾನತೆಯ ಮೌಲ್ಯಗಳನ್ನು ಪಡೆದಿದ್ದಾರೆ. ತಮ್ಮ ಬದುಕಿನ ಸಾಧನೆಯಲ್ಲಿ ಎದುರಿಸಿದ ಅನೇಕ ಕಷ್ಟ ಮತ್ತು ಅವಮಾನಗಳ ನಡುವೆಯೂ ಮನಸ್ಸನ್ನು ಕಹಿಮಾಡಿಕೊಳ್ಳದೆ ಅವರದೇ ರೀತಿಯ ನಿಷ್ಠೆ, ಶಿಸ್ತು, ಶ್ರದ್ಧೆ, ಸ್ವಾಭಿಮಾನ ಮತ್ತು ಪ್ರಾಮಾಣಿಕತೆಗಳಿಂದಾಗಿ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸುವ ರೀತಿ ಲೇಖಕರ ಬದುಕಿನ ಪ್ರಬುದ್ಧ ಕಾಣ್ಕೆಗೆ ತೋರುಬೆರಳು.
‘ಹಂಜಗಿ’ಯ ಜನಸಮುದಾಯದ ದಿನನಿತ್ಯದ ಬದುಕಿನ ವಿವರಗಳಿಗೆ ಹೆಚ್ಚಿನ ಬೆಳಕು ಹರಿಸಿದ್ದರೂ ಪೋತೆಯವರ ಕಾದಂಬರಿಯು ಅಖಿಲಭಾರತ ವಿದ್ಯಮಾನಗಳಿಗೆ ಕುರುಡಾಗೇನೂ ಇಲ್ಲ. ಸ್ವಾತಂತ್ರೋತ್ತರ ಭಾರತದ ಹೊಸ ಪೀಳಿಗೆಗಳ ಬದಲಾದ ಆದ್ಯತೆ ಮತ್ತು ಆಶೋತ್ತರಗಳು ‘ಹಂಜಗಿ’ಯಂತಹ ಸಣ್ಣ ಊರಿನಲ್ಲೂ ಪ್ರತಿಫಲವಾಗುತ್ತವೆ. ಹೊಸಕಾಲದ ಶಿಕ್ಷಣ, ರಾಜಕೀಯ ವಿದ್ಯಮಾನಗಳು ‘ಹಂಜಗಿ’ಯನ್ನು ಪ್ರವೇಶಿಸುತ್ತವೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಹೋರಾಟ, ವಿಚಾರಗಳ ಪ್ರತಿಧ್ವನಿಗಳು ಹಂಜಗಿಯಲ್ಲೂ ಕೇಳಿಬರುತ್ತವೆ. ಕಾದಂಬರಿಯ ಪ್ರಾರಂಭದಲ್ಲೆ ಮುಂಬೈಯಿಂದ ಬಂದ ಬಸಣ್ಣ ಅಂಬೇಡ್ಕರ್ ಅವರ ವಿಚಾರಗಳನ್ನು ಗ್ರಾಮೀಣ ಪ್ರದೇಶಕ್ಕೆ ತರುವ ಪ್ರಯತ್ನ ಆಶ್ಚರ್ಯ ಹುಟ್ಟಿಸುತ್ತದೆ. ಅಂಬೇಡ್ಕರ್ ಅವರ ವಿಚಾರಗಳು ಎಚ್. ಟಿ. ಪೋತೆಯವರ ಮತ್ತು ಅವರ ಕುಟುಂಬದ ಸದಸ್ಯರ ಮನಸ್ಸಿನಲ್ಲಿ ಮೊಳಕೆಯೊಡೆದು ಬೆಳೆಯುತ್ತಾ ಹೋಗುತ್ತವೆ.
‘ಬಯಲೆಂಬೊ ಬಯಲು’ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು ಉತ್ತರ ಕರ್ನಾಟಕದ ಜೀವನದ ಅನುಭವವಿಲ್ಲದವರಿಗೆ ಬರಿಯ ಊಹೆಯಂತೆ ಕಾಣಬಹುದು; ಕೆಲವೊಮ್ಮೆ ನಂಬಲಸಾಧ್ಯವಾಗಬಹುದು. ಆದರೆ, ಅಲ್ಲಿ ಬರುವ ಸನ್ನಿವೇಶಗಳೆಲ್ಲವೂ ನಾನು ಕಂಡ ನಿತ್ಯದ ಉತ್ತರ ಕರ್ನಾಟಕದ ನಿಜ ಜೀವನ. ಈ ಕಾದಂಬರಿಯಲ್ಲಿ ಬರುವ ಶಂಕರ ಮತ್ತು ಮಾದ ಎಂಬ ಜೀತದಾಳುಗಳ ಕಡು ಬಡತನದ ಬದುಕು ನರಕಸದೃಶವಾಗಿದೆ. ಶ್ರೀಮಂತರ ಹೊಲಗಳಲ್ಲಿ ದನದಂತೆ ದುಡಿಯಲು ದಲಿತರೇ ಬೇಕು. ಆದರೆ ಅವರ ಬಡತನ,ಹಸಿವು, ಕೊರಗು ಮತ್ತು ಅನಾರೋಗ್ಯಗಳ ಬಗ್ಗೆ ಮಾತ್ರ ಶ್ರೀಮಂತರಿಗೆ ಯಾವ ಕಾಳಜಿಯೂ ಇಲ್ಲ. ಅವರ ಪಾತ್ರಗಳು ಸಹ ಕಾದಂಬರಿಯಲ್ಲಿ ಮುಖ್ಯವಾಗಿ ಬೆಳೆದು ಬಂದಿವೆ. ಜೀತ ಮಾಡುವುದು ನಾನು ಕಂಡಂತೆ ಈಗಲೂ ಗ್ರಾಮೀಣ ಪ್ರದೇಶದಲ್ಲಿದೆ. ಅವರ ಜೀವನ ವಿವರಣೆಯ ಮೂಲಕ ಪೋತೆಯವರು ತಳಸಮುದಾಯದ ಜನರ ಬದುಕು ಆಗಿನ ಉತ್ತರ ಕರ್ನಾಟಕದಲ್ಲಿ ಹೇಗಿತ್ತೆಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಎಚ್. ಟಿ. ಪೋತೆಯವರು ತಮ್ಮ ಹಳ್ಳಿಯ ಪರಿಸರವನ್ನು ವರ್ಣಿಸುವಾಗ ಕಾದಂಬರಿಯಲ್ಲಿ ಬರುವ ಮಾತು ಹೀಗೆ: “ಛಳಿಗಾಲ ಮುಗಿದು ಬೇಸಿಗೆ ಕಾಲೂರುವ ಹೊಣಾರ ಜೋರಾಗಿತ್ತು. ಆದರೂ ಛಳಿಯೇನು ಕಡಿಮೆಯಾಗಿರಲಿಲ್ಲ. ತಣ್ಣನೆಯ ಗಾಳಿ ಬೀಸುತ್ತಿತ್ತು. ಸುಳಿಸುಳಿದು ಬೀಸುವ ಗಾಳಿಗೆ ಮೈಬಿರಿಯುತ್ತಿತ್ತು, ತುಟಿ ಕಪ್ಪಾಗಿ ಬಾಯಿ ತೆರೆದರೆ ಸಾಕು ಬಿರಿದು ಬಿಡುತ್ತಿದ್ದವು. ಹಿಮ್ಮಡಿ, ಪಾದ ಸೀಳಿ ರಕ್ತ ಚಿಮ್ಮುತ್ತಿತ್ತು. ಅಂತಹದ್ದರಲ್ಲೂ ಸಾಹುಕಾರನ ಆಜ್ಞೆಯಂತೆ ಬಂಡಿ ಕಟ್ಟಿಕೊಂಡು ಇಂಡಿ ರೈಲು ನಿಲ್ದಾಣಕ್ಕೆ ಬಂದು, ಗಾಡಿಕೊಳ್ಳ ಹರಿದು ಎತ್ತುಗಳಿಗೆ ಮೇವು ಹಾಕಿದ ಶಂಕರ. ಚಿಪಾಟಿ, ಕಡ್ಡಿಕಸ ಆಯ್ದು ಬೆಂಕಿ ಹಚ್ಚಿ ಉರಿಕಾಸಿಕೊಳ್ಳುತ್ತ ಶಂಕರ ಕೂತಿದ್ದ” (ಪುಟ-01). ಈ ಮಾತು ಪೋತೆಯವರ ಭಾಷಾಶೈಲಿಯನ್ನು ಸಮರ್ಥವಾಗಿ ಪರಿಚಯಿಸುತ್ತದೆ.
ಗ್ರಾಮೀಣ ಬದುಕಿನ ಸುಖ-ದುಃಖದ ಚಿತ್ರಗಳು, ಅಸಮಾನತೆ, ಅಸೂಯೆ, ಕ್ರೋಧ, ರೋಷ, ಸಣ್ಣತನಗಳನ್ನು ಸವಿವರವಾಗಿ, ಪರಿಣಾಮಕಾರಿಯಾಗಿ ಚಿತ್ರಿಸುವ ಮೂಲಕ ಕಾದಂಬರಿಕಾರರು ತಮ್ಮ ಗ್ರಾಮೀಣ ಬದುಕಿನ ಅನುಭವಗಳ ಪರಿಪಕ್ವತೆಗಳನ್ನು ಮೆರೆದಿದ್ದಾರೆ. ಭಾಷೆಯ ದೃಷ್ಟಿಯಿಂದಲಂತೂ ಕನ್ನಡದ ಬಯೋಪಿಕ್ ಕಾದಂಬರಿ ಕ್ಷೇತ್ರದಲ್ಲೇ ಅತ್ಯಂತ ವಿಶಿಷ್ಟವಾದದ್ದು ‘ಬಯಲೆಂಬೊ ಬಯಲು’. ಕಾದಂಬರಿಯುದ್ದಕ್ಕೂ ಬಳಕೆಯಾಗಿರುವ ಆಡುಮಾತು, ಗಾದೆ, ವಚನ, ಜನಪದ ನುಡಿಗಟ್ಟುಗಳು ಅಧ್ಯಯನಕ್ಕೆ ಆಕರಗಳಾಗಿವೆ. ಕಥನದ ಕೇಂದ್ರ ಆಗಾಗ ವಿಜಯಪುರ, ರಾಯಚೂರು, ಕಲಬುರಗಿ, ಸೊಲ್ಲಾಪೂರಗಳತ್ತ ಚಲಿಸುತ್ತದೆ. ಅನುಭವದ ಸ್ವರೂಪದಲ್ಲಿ ಆದ ಬದಲಾವಣೆಯು ಕಾದಂಬರಿಯ ಶಿಲ್ಪ ಹಾಗೂ ನಿರೂಪಣಾ ವಿಧಾನಗಳ ಮೇಲೆಯೂ ತನ್ನದೇ ಆದ ಪ್ರಭಾವ ಬೀರಿದೆ. ಕಾದಂಬರಿಯ ಪಾತ್ರಗಳು ಮತ್ತು ಸನ್ನಿವೇಶಗಳು ಅವುಗಳನ್ನು ನಿರೂಪಿಸುವ ಭಾಷೆ ಎಲ್ಲ ಶುಭ್ರ ಮುಂಜಾವಿನಂತೆ ಪಾರದರ್ಶಕ. ಆಶಯ, ಜೀವನದೃಷ್ಟಿಗಳಲ್ಲಿನ ಈ ಪಕ್ವ ಬೆಳವಣಿಗೆ ವಸ್ತುವಿನ ನಿರ್ವಹಣೆಯಲ್ಲೂ ಎದ್ದು ಕಾಣುತ್ತದೆ. ಆಶಯ, ಉದ್ದೇಶ ಮತ್ತು ಗ್ರಹಿಕೆಗಳಂತೆ ಕಥನ ಶೈಲಿಯೂ ನೇರ ಹಾಗೂ ಸಹಜ.
ಸಿ.ಎಸ್.ಭೀಮರಾಯ (ಸಿಎಸ್ಬಿ) ಆಂಗ್ಲ ಉಪನ್ಯಾಸಕರು
ಅ/ಔ. ಎನ್ .ಎಸ್. ಜಾಗಿರದಾರ್,
ಲಕ್ಷ್ಮೀ ನಗರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ,
ಶಹಾಪುರ, ಜಿ|| ಯಾದಗಿರಿ-585223
ಮೊ. ನಂ: 9741523806/9008438993.
e-mail: csbhimaraya123@gmail.com
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ