- ಬಿಡಿಸಲಾಗದ ನಂಟು - ಸೆಪ್ಟೆಂಬರ್ 10, 2021
ಕುಂಜಾಲಿನಿಂದ ಪೇತ್ರಿಯ ಕಡೆಗೆ ಹೋಗುವಾಗ ಸಿಗುವ ಹೆಬ್ಬಾವಿನಂತೆ ಮಲಗಿದ ಹೆದ್ದಾರಿ. ಅದು ರಾಷ್ಟ್ರೀಯ ಹೆದ್ದಾರಿ ಅಲ್ಲದಿದ್ದರೂ ಪ್ರಾಮುಖ್ಯತೆ ಮಾತ್ರ ಅಷ್ಟೇ ಎನ್ನಬಹುದು. ಕುಂಜಾಲಿನಲ್ಲಿ ಹೆದ್ದಾರಿಯಿಂದ ಹದಿನೈದು ನಿಮಿಷ ನಡೆದರೆ ಸಿಗುವುದು ಅಂಗಡಿಬೆಟ್ಟು. ಅಲ್ಲಿ ಯಾರ ಹತ್ತಿರ ವಿಚಾರಿಸಿದರೂ ನಾಡಿ ವೈದ್ಯ ಶ್ರೀಕಾಂತ ರಾಯರು ಎಂದರೆ ಎಲ್ಲರಿಗೂ ಗೊತ್ತು. ಶ್ರೀಕಾಂತ ರಾಯರಿಗೆ ಈಗ ಇಳಿ ವಯಸ್ಸು. ಸಹಪಾಟಿಯಾದ ಶಾಂತರನ್ನೇ ರಾಯರು ಮದುವೆ ಆಗಿದ್ದರು. ಬೇರೆ ಜಾತಿಯ ಹುಡುಗಿಯೆಂದು ಅಂದು ಅದೆಷ್ಟೋ ರಂಪಾಟ ಆಗಿತ್ತು ಬಿಡಿ, ಅದೆಲ್ಲ ಇಂತಹ ಮದುವೆಯಲ್ಲಿ ಇದ್ದದ್ದೆ ಅನ್ನಿ. ಅವರಿಗೆ ಇಬ್ಬರು ಮಕ್ಕಳು,ಹುಡುಗಿ ಯನ್ನು ಕೌಡೂರಿನ ಆನಂದ ಪಾಟೀಲರ ಮಗನಿಗೆ ಕೊಟ್ಟು ಮದುವೆ ಮಾಡಿದ್ದರು. ಚಿಕ್ಕವನು ಅರುಣ್ ಓದಿ ದೂರದ ಊರಿನಲ್ಲಿದ್ದಾನೆ. ಮನೆಯಲ್ಲಿ ರಾಯರದ್ದೆ ಯಜಮಾನಿಕೆ ತನ್ನ ಕುದುರೆಗೆ ಮೂರೇ ಕಾಲು ಎನ್ನುವಂತೆ ತನ್ನ ಮಾತನ್ನು ಯಾರು ಮೀರಬಾರದು.ರಾಯರದ್ದು ಎರಡು ಸುತ್ತಿನ ಮನೆ. ಮನೆಯ ಸುತ್ತ ತೆಂಗು, ಅಡಿಕೆ, ಮಾವು, ಹಲಸಿನ ಮರಗಳು. ಮನೆಗೆ ತಾಗಿ ಪಶ್ಚಿಮ ದಿಕ್ಕಿಗೆ ದನದ ಕೊಟ್ಟಿಗೆ. ಮೊದಲು ಹಟ್ಟಿ ತುಂಬ ದನ ಗಳು ಇದ್ದಿರಬಹುದು ಆದರೆ ಈಗ ಆಳುಗಳು ಸಿಗದಕ್ಕೆ ಹಟ್ಟಿ ಸ್ಮಶಾನ ಸದೃಶ. ಬೇಸಾಯ ದವರ ಮನೆ ಅಂಗಳವೆಲ್ಲ ಹುಲ್ಲು ಬತ್ತ ತುಂಬಿ ಅಸ್ವಚ್ಛವಾರುತ್ತವೆ. ಆದರೆ ಶ್ರೀಕಾಂತರ ಮನೆಯ ಅಂಗಳ ಚೆಂದವಾಗಿ ಕೆಂಪು ಬಣ್ಣದ ಟೈಲಿನಿಂದ ಶೋಭಿಸುವುದು. ನಾಲ್ಕು ಅಡಿ ಬಿಟ್ಟು ಇಟ್ಟಿಗೆಯನ್ನು ಸುತ್ತಲೂ ಕಟ್ಟಿದ ಹೂ ತೋಟ. ಅಲ್ಲಿ ಅರಳಿದ ಹೂ ಸುತ್ತಲೂ ಘಮಿಸುತಿತ್ತು. ಶ್ರೀಕಾಂತರು ತಾನು ಮಾತ್ರ ಹೂವನ್ನು ನೋಡಿ ನಗುವುದು, ಅದನ್ನು ಜೋಪಾನವಾಗಿ ಕೊಯಿದು ದೇವರಿಗೆ ಇಡುವುದು. ಯಾರಿಗೂ ಕೂಡ ಯಾವ ವಸ್ತುವನ್ನು ಕೊಡುವ ಅಭ್ಯಾಸ ಅವರಿಗಿಲ್ಲ. ಓಣಿಯ ಆ ಬದಿಗೆ ಮಾವು, ಗೇರುಗಳ ತೋಟ. ದೂರದ ಊರಿಂದ ತಂದ ಹೊಸ ತಳಿಗಳನ್ನು ಹೊಸ ಪ್ರಯೋಗ ಮಾಡುವುದೆಂದರೆ ಅವರಿಗೆ ಕುತೂಹಲ. ಆ ತೋಟ ಕಾಯುವವಳು ನಿಂಗಿ. ಗಂಡಸರು ಹೆಚ್ಚು ಸಂಬಳ ಕೊಂಡು ಚೆನ್ನಾಗಿ ಕೆಲಸ ಮಾಡುದಿಲ್ಲ ಎಂಬುದು ಅವರ ದೂರು. ಮರಗಳಿಂದ ಬಿದ್ದ ಮಾವು ಗೇರು ಹಣ್ಣನ್ನು ನಿಂಗಿಗೂ ಮುಟ್ಟಲು ಅಧಿಕಾರವಿಲ್ಲ.
ಒಂದು ದಿನ ಶ್ರೀಕಾಂತ ರಾಯರು ಕಿಟಿಕಿ ಹತ್ತಿರ ಕುರ್ಚಿಯ ಮೇಲೆ ಕುಳಿತು ಸರಳಿನ ಎಡೆಯಿಂದ ಹೊರಗೆ ನೋಡುತಿದ್ದರು. ಸಣ್ಣ ಹುಡುಗಿ ಕೆಂಚು ಕೂದಲು ಎಣ್ಣೆ ನೀರು ಕಾಣದೆ ಹಲವು ದಿನಗಳಾದಂತೆ ಕಾಣುತಿದ್ದು ಉದ್ದದ ದಾವಣಿ ಹಾಕಿದ್ದಳು ಅಗಲವಾದ ಹಣೆ, ಕೂದಲು ಹಣೆಯ ಮೇಲೆ ಚೆಲ್ಲಾಡುತಿದ್ದವು. ಮೆಲ್ಲನೆ ಗೇಟು ತೆರೆದು ಒಳಗೆ ಕಾಲಿಟ್ಟಳು. ನಿಧಾನವಾಗಿ ಹೆಜ್ಜೆ ಇಡುತ್ತಾ ಮಾವಿನ ಮರದ ಹತ್ತಿರ ನಡೆದಳು. ಅಲ್ಲಿ ಬಿದ್ದ ಮಾವಿನ ಹಣ್ಣುಗಳನ್ನು ಹೆಕ್ಕಿ ತನ್ನ ಅಂಗಿಯನ್ನು ನೆರಿಗೆ ಮಾಡಿ ತುಂಬಿದಳು. ಹೊರಗೆ ನಡೆದು ಹೆಂಗಸೊಬ್ಬಳ ಸೆರಗಿಗೆ ಸುರಿದಳು. ರಾಯರು ಮೆಲ್ಲನೆ ಮೆಟ್ಟಿಲು ಇಳಿದು ಬಂದು ಗೇಟಿನ ಹೊರಗೆ ಬರುತ್ತಲೆ ಹೆಂಗಸು ಮತ್ತು ಹುಡುಗಿ ಮಾಯವಾಗಿದ್ದರು. ರಾಯರ ತೋಟದ ಮಾವಿನ ಹಣ್ಣು ಹೆಕ್ಕಲು ಯಾರು ಬರುವುದಿಲ್ಲ , ಯಾರೆಂದು ಯೋಚಿಸಿದರು. ಮರುದಿನ ಬೇಗನೆ ಎದ್ದು ರಾಯರು ಕಿಟಿಕಿ ಹತ್ತಿರ ಹೊರಗೆ ತೋರದ ಹಾಗೆ ಸರಿದು ಕೂತು ಗೇಟಿಗೆ ಕಣ್ಣಿಟ್ಟು ಕೂತರು. ಆ ಹುಡುಗಿ ಮರುದಿನ ಅದೆ ಹೆಂಗಸಿನ ಜೊತೆ ಬಂದಳು. ಇಂದು ಸ್ವಲ್ಪ ಧೈರ್ಯ ಬಂದವಳoತೆ ಸೀದಾ ಒಳಗೆ ಬಂದಳು. ಹಿಂದೆ ತಾಯಿ ಹೋಗಿ ಆಯಿದುಕೋ ಎಂದು ಕಣ್ಸನ್ನೆ ಯಲ್ಲೇ ಹೇಳಿದಳು. ಹುಡುಗಿ ಸೀದಾ ಮರದಡಿಗೆ ನಡೆದು ಮಾವು ಆಯಿದು ಅಂಗಿಯ ನೆರಿಗೆಯೊಳಗೆ ಹಾಕಿಕೊಂಡು ಹೊರಗೆ ನಡೆದು ತಾಯಿಯ ತೆರೆದ ಸೆರೆಗಿನೊಳಗೆ ಹಾಕಿದಳು. ಶ್ರೀಕಾಂತ ರಾಯರು ಅವರಿಬ್ಬರ ಹಿಂದೆ ಹಿಂದೆ ಹೆಜ್ಜೆ ಹಾಕಿದರು. ಅವರು ಮುಂದಿನ ತಿರುವಿನಿಂದ ಮಾರ್ಕೆಟ್ ಕಡೆ ನಡೆದರು. ಒಂದು ಬದಿಯಲ್ಲಿ ಸೀರೆ ಹರಿದ ಅರ್ಧ ತುಂಡನ್ನು ಹಾಸಿ ಮಾವುಗಳನ್ನು ನಾಲ್ಕು ನಾಲ್ಕರಂತೆ ಐದು ಪಾಲು ಮಾಡಿ ಇಟ್ಟು ಒಂದಕ್ಕೆ ಐದು ರೂಪಾಯಿ ಎಂದು ಹುಡುಗಿ ಕೂಗಿದಳು. ದೂರದಲ್ಲೆ ನಿಂತು ನೋಡುತಿದ್ದ ರಾಯರು ಮೆಲ್ಲನೆ ಹತ್ತಿರ ಹೋಗಿ , ಐದು ನಂಗೆ ಕೊಡಿ ಎಂದು ಇಪ್ಪತ್ತು ರೂಪಾಯಿ ಹುಡುಗಿಯ ಕೈಯಲ್ಲಿತ್ತು ಹೊರಟು ಹೋದರು. ಮನೆಗೆ ಹೋಗಿ ಹಣ್ಣನ್ನು ಮೇಜಿನ ಮೇಲಿಟ್ಟರು. ಮರುದಿನ ಆ ಹುಡುಗಿ ಮತ್ತು ತಾಯಿ ಅದೆ ರೀತಿ ಮಾವು ಒಯಿದು ಹೋದರು. ರಾಯರು ಹಿಂದಿನಂತೆ ಹೋಗಿ ಮಾವು ಕೊಂಡು ತಂದರು. ಆದರೆ ಸ್ವಲ್ಪ ದಿನದ ನಂತರ ಆ ಹುಡುಗಿ ಬರಲೇ ಇಲ್ಲ. ಅವಳಿಗಾಗಿ ಕಾದು ಕುಳಿತ ರಾಯರು ಸೀದಾ ಮಾರ್ಕೆಟ್ಗೆ ಹೋಗಿ ನೋಡಿದರೆ ಅಲ್ಲಿಯೂ ಅವರಿಬ್ಬರ ಸುಳಿವಿರಲಿಲ್ಲ. ರಾಯರು ಬದಿಯಲ್ಲೆ ಕುಳಿತ ಒಬ್ಬರಲ್ಲಿ ವಿಚಾರಿಸಿದಾಗ “ನಮಗೆ ಅವರು ಏನು ಹೇಳಿಲ್ಲ ಸರ್ ಅವರ ಮನೆ ದೊಂಡಿ ಕೇರಿಯಲ್ಲಿದೆ “ಎಂದ. ಕುತೂಹಲದಿಂದ ರಾಯರು ಅತ್ತ ಕಡೆ ನಡೆದರು.
ನಿಂಗಿ ಮಗಳು ಕಮಲ ಮತ್ತು ಅರುಣ್ ಸಹ ಪಾಟಿಗಳು. ಚಿಕ್ಕಂದಿನಲ್ಲೇ ಮುಂದಿನ ಓದಿಗಾಗಿ ಅರುಣ್ ಮೈಸೂರಿಗೆ ಹೋಗಿದ್ದ. ಆದರೆ ಊರಿಗೆ ಹೋದಾಗಲೆಲ್ಲ ಕಮಲ ಬಂದು ಅರುಣನಲ್ಲಿ ಮಾತನಾಡಿ ಹೋಗುತ್ತಿದ್ದಳು. ಹಾಗೆಯೆ ಊರಿಗೆ ಬಂದ ಅರುಣ್ ಕಮಲಳ ನ್ನು ಮಾತನಾಡಿಸಿ ಬರುವ ಅಂತ ಅತ್ತ ಕಡೆ ನಡೆದ, ಹೊರಗೆ ನಿಂತು ಕಮಲ ಎಂದ. ಹಜಾರದಲ್ಲಿ ಚಿಕ್ಕ ತಮ್ಮನ ತೊಟ್ಟಿಲು ತೂಗುತಿದ್ದ ಕಮಲ ನಿಲ್ಲಿಸಿ ಯಾರು ಎಂದಳು. ಹಚ್ಚಿಟ್ಟ ಹಣತೆಯ ಬೆಳಕಲ್ಲಿ ಅವಳು ಸೀರೆ ಉಟ್ಟಿದ್ದು , ತುಂಬಾ ದೊಡ್ಡ ಹುಡುಗಿಯಾಗಿ ಕಂಡಳು. ಸ್ವಲ್ಪ ಹತ್ತಿರ ಹೋಗಿ “ನಾನು ಅರುಣ್ , ಕಮಲ ನೀನು ನಮ್ಮನೆ ಕಡೆ ಯಾಕೆ ಬರಲಿಲ್ಲ ” ಎಂದೆ. ಕಮಲ ಸ್ವಲ್ಪ ದೂರದಲ್ಲೆ ನಿಂತಳು “ಇನ್ಮೇಲೆ ಎಲ್ಲೂ ಹೊರಗೆ ಹೋಗ್ ಬಾರ್ ದಂತೆ ನಂಗೆ ಮದುವೆ ಮಾಡಿಸ್ತಾರಂತೆ. ಮನೆಗೆ ಬಂದರೂ ಯಾರ ಜೊತೆ ಮಾತನಾಡಬಾರದು ಅಂತ ಹೇಳಿದ್ದಾರೆ” ಎಂದಳು. ಅವಳ ಮಾತಿನ ಅರ್ಥ ಆಗಲಿಲ್ಲ ಅರುಣ್ ಅಲ್ಲಿಂದ ಹೊರಟ. ಇನ್ನೊಮ್ಮೆ ಕಮಲಾಳನ್ನು ನೋಡಬೇಕೆನಿಸಿತು. ಹಿಂದೆ ನೋಡಿದ ಕಮಲ ಬಹಳ ಚೆಲುವೆಯಾಗಿ ಕಂಡಳು. ಎರಡು ಕಣ್ಣುಗಳಿಂದ ಮೊಗೆದು ನೋಡುವ ಹಾಗೆ ಅರುಣ್ ನನ್ನು ನೋಡುತಿದ್ದಳು. ನಂತರ ಒಳಗೆ ಹೋಗಿ ಚಿಲಕ ಹಾಕಿಕೊಂಡಳು . ಅರುಣ್ ಮನೆಗೆ ಹೋಗಿ ಪಲ್ಲಂಗದಲ್ಲಿ ಬಿದ್ದು ಏನನ್ನೊ ಎಣಿಸುತ್ತ ನಿದ್ದೆ ಹೋದ. ಎರಡು ದಿನ ಬಿಟ್ಟು ಮೈಸೂರಿಗೆ ಹೊರಟು ಹೋದ. ಸ್ವಲ್ಪ ದಿನ ಕಳೆದ ನಂತರ ಊರಿನಿಂದ ಬಂದ ಯಾರೊ ಕಮಲಳ ಮದುವೆಯಾದ ಬಗ್ಗೆ ಹೇಳಿದರು .ಆ ಮಾತು ಕೇಳಿದಾಗ ಅರುಣ್ ನಿಗೆ ಒಳಗಿನಿಂದ ಏನೊ ಕಳೆದುಕೊಂಡ ಹಾಗಾಯ್ತು. ದೀಪಾವಳಿ ರಜೆಗೆ ಬಂದ ಅರುಣ್ ತಂದೆ ಶ್ರೀಕಾಂತ ರಾಯರು ಕುಳಿತಲ್ಲಿ ಬಂದು ಕುಳಿತು ಕಿಟಿಕಿಯಿಂದ ಹೊರಗೆ ನೋಡುತಿದ್ದ ತಂದೆಯನ್ನು ನೋಡಿದಾಗ ಯಾವುದೊ ನೋವಿನ ಎಳೆಗಳನ್ನುಅವರ ಮುಖದಲ್ಲಿ ಕಂಡಂತಾಗಿ ವಿಚಾರಿಸಿದ “ರಾಯರು ಕೆಲವು ದಿನದಿಂದ ನಡೆದ ಸಣ್ಣ ಹುಡುಗಿಯ ಕತೆಯನ್ನು ಹೇಳಿದರು.. ಅರುಣ್ ಹೇಳಿದ “ಹಾಗಾದರೆ ಮಾರ್ಕೆಟ್ ನಲ್ಲಿ ಕೇಳಿ ಅವರ ಮನೆಗೆ ಹೋಗುವ ಎಂದ “ಹಾಗೆಯೆ ಕೇಳುತ್ತ ಹೋದಾಗ ಅವಳು ರಾಯರ ತೋಟ ಕಾಯುವ ನಿಂಗಿ ಮಗಳು ಕಮಲ ಎಂದು ಗೊತ್ತಾಯಿತು. ಅವಳ ಮಗನಿಗೆ ಮೈ ಹುಷಾರಿಲ್ಲ ಅದಕ್ಕೆ ಈಗ ಮಾರ್ಕೆಟ್ ಗೂ ಬರುದಿಲ್ಲ ಎಂದರು ಅಪರಿಚಿತರು. ಈಗ ಅರುಣನಿಗೆ ಅವಳು ಕಮಲ ಎಂಬುದರ ಬಗ್ಗೆ ನೆನಪಿನ ಎಳೆಯೊಂದು ಸೆಳೆದಂತಾಯಿತು. ಅಲ್ಲಿಯ ಚರಂಡಿ ಗಬ್ಬು ವಾಸನೆ ತಂದೆಗೆ ಸಹ್ಯವಾಗದು ಎಂದು ತಾನೇ ಮನೆ ಬಗ್ಗೆ ವಿಚಾರಿಸುವೆ ಎನ್ನುತ್ತಾ ರಾಯರನ್ನು ಕಳಿಸಿ ತಾನೊಬ್ಬನೇ ಪಾಚಿಗಟ್ಟಿ ಹಸಿರು ಬಣ್ಣಕ್ಕೆ ತಿರುಗಿದ ಕೆರೆ ಹತ್ತಿರ ಬಂದಾಗ ಬಟ್ಟಲು ಗಣ್ಣಿನ ಹುಡುಗಿ ಕೆರೆಯಿಂದ ಗಡಿಗೆಯಲ್ಲಿ ನೀರು ಒಯ್ಯುತಿದ್ದಳು. ಮುಖ ಕಮಲಳನ್ನು ಹೋಲುತಿದ್ದು ಆ ಹುಡುಗಿ ಹಿಂದೆ ಅರುಣ್ ಹೆಜ್ಜೆ ಹಾಕಿದ. ಎಂಟು ವರ್ಷದ ನಂತರ ಅವರ ಭೇಟಿ ಆದರೆ ಅವಳ ಬದುಕಿನ ವಸಂತ ಈಗ ಮುಗಿದು ಹೋಗಿದೆ. ಅವಳ ವಯಸ್ಸಿನ ಹುಡುಗಿಯರು ಮದುವೆಯಾಗದೆ ಭವಿಷ್ಯದ ಹೊಂಗನಸು ಕಾಣುತಿದ್ದಾರೆ. ಕಮಲ ಅರುಣ್ ನನ್ನು ಕಾಣುತ್ತಲೆ ಬನ್ನಿ ಎಂದು ಎರಡೆ ರೂಮುಗಳಿದ್ದ ಮನೆಯೊಳಗೆ ಕರೆದೊಯ್ದಳು . ಅವ್ಯವಸ್ಥಿತವಾದ ಮನೆಯೊಳಗೆ ಕಾಲಿಡುತ್ತಲೆ ಮುಗ್ಧ ಮಕ್ಕಳಿಬ್ಬರು ಮಿಕಿ ಮಿಕಿ ನೋಡುತಿದ್ದವು. ಒಂದು ಹಳೆಯ ಕುರ್ಚಿ ಯನ್ನು ಕಮಲ ನೂಕಿ ಕುಳಿತು ಕೊಳ್ಳಿ ಎಂದಳು. ಅವಳು ಅಡಿಗೆ ಮನೆಗೆ ನಡೆದಳು. ಅರುಣ್ ಮನೆಯೆಲ್ಲ ದೃಷ್ಟಿ ಹಾಯಿಸಿದ ಬಡತನ ಅಲ್ಲಿ ಕಾಲು ಮುರಿದು ಬಿದ್ದಿತ್ತು. ಸಣ್ಣದೊಂದು ಕಿಟಿಕಿಯಿರುವ ಉಸಿರು ಗಟ್ಟಿಸುವ ಗೂಡಿನೊಳಗೆ ಹೇಗೆ ನಾಲ್ಕು ಜೀವಗಳು ಉಸಿರಾಡುತ್ತವೆ ಯೋಚಿಸಿದ. ಹೊರಗೆ ಬೆಳಕಿದ್ದರು ಒಳಗೆ ಕತ್ತಲು ಕಾಲು ಚಾಚಿತ್ತು. ಕಮಲ ಲೈಟ್ ಹಾಕಿ ಕಾಫಿ ತಂದಿಟ್ಟಳು. ಒಳ ಮನಸಿನ ತೃಪ್ತಿಗಾಗಿ ಕಾಫಿ ಕುಡಿದ. ಅವಳ ಮಗನ ಕಾಯಿಲೆ ಬಗ್ಗೆ ಎಲ್ಲ ವಿಷಯ ತಿಳಿದ ನಂತರ ” ಆಸ್ಪತ್ರೆಗೆ ಹೋಗಲಿಲ್ಲವಾ ಎಂದು ಕೇಳಿದಾಗ “ಹೋಗಿದ್ದೇನೆ ನಾಳೆ ಬನ್ನಿ ಅಂತ ಹೇಳಿದ್ದಾರೆ “ಎಂದಳು.ಅಷ್ಟರಲ್ಲಿ ಅವಳ ಗಂಡ ಅಲ್ಲಿಗೆ ಬಂದ , ಡೊಳ್ಳು ಹೊಟ್ಟೆಗೆ ಚರ್ಮದ ಬೆಲ್ಟಿನಿಂದ ಪ್ಯಾಂಟನ್ನು ಬಿಗಿದಿದ್ದ. ಒಂದೆರಡು ಮಾತಾಡಿ ಟವೆಲ್ಲು ಹಿಡಿದು ಸ್ನಾನಕ್ಕೆ ನಡೆದ. ಅರುಣ್ ತಾನು ಹೋಗುವುದಾಗಿ ಹೇಳಿದಾಗ “ಬೇಸರ ಮಾಡಬೇಡಿ ನನ್ನ ಗಂಡನ ಸ್ವಭಾವವೇ ಹಾಗೆ ಎಂದಳು ” ತಿರುಗಿ ಮೈ ನೀರನ್ನು ಒರಸಿ ಕೊಳ್ಳುತ್ತಾ ಬಂದ ಅವನು ಅಡಿಗೆ ಮನೆಯಲ್ಲಿದ್ದ ಕಮಲಳಿಗೆ ಏನೊ ಹೇಳಿದ. ಅರುಣ್ ಗೆ ಅವನ ಮಾತು ಕೇಳಿಸಲಿಲ್ಲ. ಕಮಲ ಅವನ ಹಿಂದೆ ಜೋಲು ಮುಖ ಹಾಕಿ ನಿಂತಿದ್ದಳು. “ಬರ್ತೀನಿ ಅಂತ ಹೇಳಿ ಅರುಣ್ ಸರಸರನೆ ಅಲ್ಲಿಂದ ಹೊರಟು ತನ್ನ ಪರಿಚಯದ ಡಾಕ್ಟರ್ರ ಹತ್ತಿರ ಹೋಗಿ ಅವರಿಂದ ಒಂದು ಪತ್ರ ಬರೆಸಿ ಕೊಂಡು ಸೀದಾ ಕಮಲಳ ಮನೆಗೆ ಹೋಗಿ ಪತ್ರ ಅವಳ ಕೈಗೆ ಕೊಟ್ಟು “ನಾಳೆ ಗಂಡನೊಡನೆ ಬೆಂಗಳೂರಿಗೆ ಹೋಗಿ ಮಗುನ ಅಡ್ಮಿಟ್ ಮಾಡಿಬಿಡು. ಈ ಪತ್ರ ಕಂಡ ಕೂಡಲೆ ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ “ಎಂದ ಅರುಣ್. ಕಮಲ ಏನು ಮಾತಾಡಲಿಲ್ಲ.ಆದರೂ ಮರುದಿನ ಅವಳೊಡನೆ ಆಸ್ಪತ್ರೆಗೆ ಅರುಣ್ ಕೂಡ ಹೋಗಿದ್ದ . ಆ ದಿವಸ ಟೆಸ್ಟ್ ಮಾಡಿ ಇಂಜೆಕ್ಷನ್ ಕೊಟ್ಟು ಹೋಗಿ ಅಂದಿದ್ರು ಡಾಕ್ಟರ್. ಇಂಜೆಕ್ಷನ್ ತಿಂದು ನಿಸ್ತೇಜವಾಗಿದ್ದ ಮಗುವನ್ನು ಹೆಗಲ ಮೇಲೆ ಹಾಕಿಸೊರಗಿದ ಕಮಲ ಮೆಟ್ಟಿಲು ಇಳಿದು ದಣಿದು ನಿಂತಳು. ಏನಾದರೂ ಕುಡಿದು ಹೋಗುವ ಕಮಲ ಎಂದರೆ ಅವಳು ಒಪ್ಪಲಿಲ್ಲ. “ಗಾಡಿ ತರ್ತೇನೆ ಎಂದು ಅರುಣ್ ಹೇಳಿದಾಗ ಬೇಡ ಅಂದಳು “ಇಂತಹ ಕಷ್ಟದಲ್ಲೂ ಎಂತಹ ಸ್ವಾಭಿಮಾನ , ದುಷ್ಟ ಗಂಡನಾದರೂ ಅವನ ಮೇಲೆ ಕೋಪ ಮಾಡದೆ ಎಂತಹ ಪ್ರೀತಿ “ಅನಿಸಿತು ಅರುಣ್ ಗೆ. ಗಾಡಿಯ ಮೇಲೆ ಕುಳಿತ ಕಮಲ ಏನು ಹೇಳದೆ ಸುಮ್ಮನಿದ್ದಳು. “ಮೂರ್ನಾಲ್ಕು ದಿನ ಬಿಟ್ಟು ಬರ್ತೇನೆ ” ಅಷ್ಟರಲ್ಲಿ ನೀನು ಆಸ್ಪತ್ರೆಗೆ ಸೇರಿಸಿ ಬರ್ತಿಯಲ್ಲ ಎಂದ ಅರುಣ್ “ಅವಳಿಗೆ ಏನು ಹೇಳಲು ಇತ್ತೊ ಸಂಕಟ ಪಡುತ್ತಾ ಅರುಣನನ್ನೇ ನೋಡುತಿದ್ದಳು. ಉಕ್ಕಿ ಬಂದ ದುಃಖ ಅಸಾಯಕ ಭಾವ ಕಣ್ಣುಗಳಲ್ಲಿ ಅದುಮಿದ ಹಾಗಿತ್ತು. ಗಾಡಿ ಮುಂದೆ ಸಾಗಿತು. ಅರುಣನ ಕಣ್ಣು ತುಂಬಿ ಬಂದು ಗಾಡಿ ಹೋದ ಕಡೆ ಹೋಯಿತು ಎದೆ ತುಂಬಿ ಭಾರವಾಯಿತು. ಕಾಲೇಜಿನ ಮುಂದಿನ ತೋಟದಲ್ಲಿ ಗಿಡ ಮರಗಳು ಚಿಗುರಿ ನಳನಳಿಸುತ್ತಿದ್ದವು. “ಇಂತಹ ಬೇಸಿಗೆಯಲ್ಲು ಮರಗಳು ಚಿಗುರಿದ್ದು ನೋಡಿ ವಿಸ್ಮಯ ಅನಿಸಿತು. ಅರುಣ್ ಮತ್ತೆ ಮತ್ತೆ ಎಣಿಸಿದ “ನನಗೆ ಕಮಲ ಏನಾಗಬೇಕು ನನ್ನ ಮನಸ್ಸೇಕೆ ಇಷ್ಟು ವ್ಯಾಕುಲವಾಗಿದೆ. ಬೀಸಿ ಬಂದ ಗಾಳಿಗೆ ನೆನಪಿನ ಪುಟಗಳು ಪಟ ಪಟನೆ ತೆರೆದವು. “ಕಳೆದ ಎಂಟು ವರ್ಷ ದಿಂದ ನಾನು ಕಮಲಳನ್ನು ನೋಡಿಲ್ಲ,ಮಾತನಾಡಿಲ್ಲ, ನಾವಿಬ್ಬರೂ ಬೇರೆ ಬೇರೆ ಸಂಸ್ಕಾರಗಳಲ್ಲಿ ಹುಟ್ಟಿ ಬೆಳೆದವರಾಗಿದ್ದರೂ ಯಾವುದೊ ಒಂದು ನಂಟು ನಮ್ಮ ಬಾಲ್ಯದ ಹೃದಯಗಳನ್ನು ಬೆಸೆದಿದೆ “ಎಂದು ಬೀಸುವ ಗಾಳಿಯೊಡನೆ ತನ್ನ ಮನದ ಮಾತನ್ನು ಪಿಸುಗುಟ್ಟಿದ. ಅವರು ಒಟ್ಟಾಗಿ ಕುಣಿದು ಕುಪ್ಪಳಿಸಿದ ದಿನಗಳು ಅವನಿಗೆ ನೆನಪಾಗ ತೊಡಗಿತು.
ಅರುಣ್ ಮತ್ತು ಕಮಲ ದೂರದ ಹಳ್ಳಿಗೆ ಒಟ್ಟಿಗೆ ಓದಲು ಹೋಗುತಿದ್ದರು. ಆ ಊರಿನ ನದಿಯ ದಂಡೆಯಲ್ಲಿದ್ದ ಹೊನ್ನೆ ಮರಗಳ ಕೆಳಗೆ ಕುಳಿತು ಎಲ್ಲ ಮಕ್ಕಳು ತಾವು ತಂದ ಊಟ ಮಾಡುತಿದ್ದರು. ಅರುಣ್ ಮತ್ತು ಕಮಲ ಒಟ್ಟಿಗೆ ಕುಳಿತು ಊಟ ಮಾಡುವಾಗ ಕಮಲ ತಂದ ರುಚಿಯಾದ ತಿಂಡಿಯನ್ನು ಅರುಣಾನಿಗೂ ಕೊಡುತಿದ್ದಳು. ಆದರೆ ಅರುಣನ ತಿಂಡಿ ಹಂಚಿದರೆ ಕಮಲ ತನ್ನ ಅಜ್ಜಿ ಶೂದ್ರರ ಮನೇಲಿ ತಿಂದರೆ ನರಕಕ್ಕೆ ಹೋಗುತ್ತಾರೆ ಎನ್ನುತ್ತಾರೆ “ಎಂದು ಅರುಣ್ ನ ತಿಂಡಿ ನಿರಾಕರಿಸುತಿದ್ದಳು.
ದೀಪಾವಳಿ ಹಬ್ಬದಾಗ ಅರುಣನ ತೋಟದಲ್ಲಿ ರಾಶಿ ರಾಶಿ ಮಲ್ಲಿಗೆ ಘಮಿಸುತಿತ್ತು. ಎಲ್ಲರ ಮನೆಯಲ್ಲಿ ದನಗಳ ಕುತ್ತಿಗೆಗೆ ಮತ್ತು ಹೆಂಗಸರ ಮುಡಿಗೆ ಗೊಂಡೆ ಹೂವು ಅಲಂಕರಿಸಿದರೆ, ಅರುಣನ ಮನೆಯಲ್ಲಿ ಮಲ್ಲಿಗೆಯ ಚೆಂಡು ತಯಾರಾಗುತ್ತಿತ್ತು. ದೀಪಾವಳಿಯ ಮೊದಲನೆ ದಿನ ನಿಂಗಿ ಬಂದರೆ ಶ್ರೀಕಾಂತರಾಯರು ಅವಳಿಗೆ ಬೇಕಾದಷ್ಟು ಹೂವನ್ನು ಖುಷಿಯಿಂದಲೇ ನೀಡುತಿದ್ದರು. ಅರುಣ್ ಹೊಸ ಬಟ್ಟೆ ತೊಟ್ಟು ದೇವಸ್ಥಾನಕ್ಕೆ ಹೋಗಿದ್ದ. ಕಮಲ ಕೂಡ ಮುಡಿ ತುಂಬಾ ಮಲ್ಲಿಗೆ ಮುಡಿದು ಮಲ್ಲಿಯಾಗಿ ಬಂದಿದ್ದಳು. ಇಬ್ಬರೂ ದೇವಸ್ಥಾನದ ದೇವರ ಉತ್ಸವವನ್ನು ಮೈ ಮರೆತು ನೋಡಿದ್ದರು. ಇವೆಲ್ಲ ನೆನಪುಗಳು ಅರುಣನ ಕಣ್ಣೆದುರು ಚಿತ್ರ ದಂತೆ ಹಾದು ಹೋದವು. ಬೀದಿ ದೀಪಗಳು ಹೊತ್ತಿಕೊಂಡು ಕತ್ತಲಾಯಿತು ಎಂದು ಹೇಳುತಿದ್ದವು. ಅರುಣ್ ಎದ್ದು ಮನೆಗೆ ನಡೆದ. ನಾಲ್ಕು ದಿನ ಕಳೆಯಿತು. ಕಮಲಳ ಮಗನ ವಿಚಾರ ತಿಳಿದು ಬರುವ ಎಂದು ಎಣಿಸಿದ, ಬಿಸಿಲು ಕಡಿಮೆಯಾಗಿತ್ತು. ಕಮಲಳ ಗಂಡನ ಅನಾಧಾರದ ಒರಟು ಮುಖ ಮತ್ತೆ ನೆನಪಾಯಿತು. ಕಮಲ ಯಾವ ಪಾಪ ಮಾಡಿದಕ್ಕೆ ಇಂತಹ ಗಂಡ ಸಿಕ್ಕಿದನೊ ಎಂದು ಅರುಣ್ ಕೊರಗಿದ. ಮನೆಯ ಹೊರಗೆ ನಿಂತಿದ್ದ, ಆ ನಿಶ್ಶಬ್ದದಲ್ಲಿ ಅವಳ ಮಗನ ನೋವಿನಿಂದ ಚೀರಾಟ ಕೇಳಿ ಗಂಟಲು ಕಟ್ಟಿದಂತಾಯಿತು. ಹಾಗೆಯೆ ನಿಂತ ಅರುಣ್ ತೆರೆದೆ ಇದ್ದ ಬಾಗಿಲಿನ ಸಂದಿಯಿಂದ ಕಣ್ಣು ಹಾಯಿಸಿದ. ಒಂದು ಮೂಲೆಯಲ್ಲಿ ಅರೆ ಜೀವದಂತೆ ಮಲಗಿದ ಹುಡುಗ ಇನ್ನೊಂದು ಮೂಲೆಯಲ್ಲಿ ದಿಕ್ಕೆ ತೋಚದ ಪರದೇಸಿಯಂತೆ ಕುಳಿತ ಕಮಲಳನ್ನು ಕಂಡು ನಿಷ್ಠುಸಿರು ಬಿಟ್ಟ. ಕಮಲಳ ಕಣ್ಣು ಆಳಕ್ಕೆ ಇಳಿದು ಮುಖ ಸಪ್ಪೆಗಟ್ಟಿತ್ತು. “”ಯಾಕೆ ಕಮಲ ಬೆಂಗಳೂರಿಗೆ ಹೋಗಲಿಲ್ಲವೆ “ಅಂದಾಗ, ಕಮಲ ಬಿಕ್ಕಿ ಬಿಕ್ಕಿ ಅತ್ತಳು. “ನಿನ್ನ ಗಂಡ ಏನು ಹೇಳಿದ “ಎಂದಾಗ, ಸ್ವಲ್ಪ ಹೊತ್ತು ಹಾಗೆ ಮೌನಿಯಾದಳು, ನಂತರ ಬಿಕ್ಕಿ ಬಿಕ್ಕಿ ಅಳುತ್ತಾ ನಡೆದ ಸ್ಥಿತಿ ಹೇಳಿದಳು. “ಅಷ್ಟು ಹಣ ಎಲ್ಲಿಂದ ತರೋದು , ಸ್ವಲ್ಪ ದಿನ ಹೀಗೆ ಕಿರುಚಲಿ ನಂತರ ಎಲ್ಲ ಸರಿ ಹೋಗುತ್ತೆ “ಎಂದು ಕೂಗಿದ್ದ ಅವಳ ಗಂಡ. ಕಮಲ ಹಳ್ಳಿಯ ಮುಗ್ಧ ಹೆಣ್ಣು ಅವಳನ್ನು ರಾಕ್ಷಸನಂತೆ ಅವನು ಹಿಂಡುತ್ತಲೆ ಇದ್ದ. ಅವನ ಮೃಗ ಪ್ರವೃತ್ತಿಗೆ ಹೇಸಿಕೆಯಾಗಿ ಅರುಣ್ ಸೀದಾ ಮನೆಗೆ ಹೋದ. ಅಂದು ಬ್ಯಾಂಕ್ ಬಂದ್ ಆಗಿತ್ತು . ನೇರವಾಗಿ ತನ್ನ ಆಪ್ತ ಗೆಳೆಯನ ಹತ್ತಿರ ಹೋಗಿ ನಡೆದ ಘಟನೆಯನ್ನು ಅವನಿಗೆ ಮನದಟ್ಟು ಮಾಡಿಸಿದ. ಅವನು ಹಣ ಕೊಡಲು ಒಪ್ಪಿದಾಗ ಅವನಿಂದ ಹಣ ಪಡೆದು ಬೈಕ್ ಹತ್ತಿ ಅರುಣ್ ಸೀದಾ ಕಮಲಳ ಮನೆ ಕಡೆ ನಡೆದ. ಲಲಿತಾಳ ಮುಂದೆ ಹಣ ಇಟ್ಟು “ಇವತ್ತು ಸಂಜೆ ಮಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗು ಕಮಲ ಎಂದ ” ಕಮಲ ಮೌನವಾಗಿದ್ದಳು. ದುಃಖವನ್ನು ದಿನ ದಿನವು ನುಂಗಿ ನುಂಗಿ ಮುದ್ದೆಯಾಗುತಿದ್ದ ಕಮಲಳನ್ನು ಅರುಣನಿಗೆ ನೋಡಲಾಗಲಿಲ್ಲ.ತುಂಬಾ ಸಂಕಟವಾಯಿತು. ಕಣ್ಣೀರು ನಾಲ್ಕು ಹನಿ ಉದುರಿದವು. ಅರುಣ್ ಮನೆಗೆ ಬಂದ ಕಣ್ಣಿಗೆ ಕತ್ತಲೆಯಾಗಿ ಎಲ್ಲವು ಶೂನ್ಯ ಅನಿಸಿತು. “ಮನುಷ್ಯರು ಅಂದ ಮೇಲೆ ಒಬ್ಬರಿಗೊಬ್ಬರು ಸಹಾಯ ಮಾಡದಿದ್ದರೆ ಏನು ಪ್ರಯೋಜನ “ಎಂಬ ಅಮ್ಮನ ಮಾತುಗಳು ಅರುಣನ ಕಿವಿಯಲ್ಲಿ ಕೇಳಿಸಿದಂತಾಯಿತು.
ಈಗ ಹದಿನೈದು ದಿನಗಳಾದವು. ಕಮಲಳ ಮಗ ಹುಷಾರಾಗಿ ಬಂದಿರಬಹುದು “ಎಂದೆಣಿಸಿ ಅರುಣ್ ಕಮಲಳ ಮನೆಗೆ ಹೊರಟ. ಹೊತ್ತು ಮುಳುಗುವ ಹೊತ್ತು , ದೊಡ್ಡ ನೆರಳು ತಾರು ರಸ್ತೆಯ ಮೇಲೆ ಮಲಗಿದ್ದು, ಮರಗಳು ಕತ್ತಲನ್ನು ಕಕ್ಕುತ್ತಿದ್ದವು. ಹಕ್ಕಿಗಗಳೆಲ್ಲ ಗೂಡು ಸೇರುವ ತವಕದಲ್ಲಿದ್ದವು. ಅರುಣ್ ಕಮಲಳ ಮನೆ ಮುಟ್ಟಿದ, ಬಾಗಿಲಲ್ಲೆ ಇಬ್ಬರು ನಿಂತಿದ್ದರು. ಇಳಿ ವಯಸ್ಸಿನ ಹೆಂಗಸರು. “”ಕಮಲ ಬೆಂಗಳೂರಿಂದ ಬಂದಿದ್ದಾಳಾ ಎಂದ ” “ಬೆಂಗಳೂರಿಗೂ ಹೋಗ್ಲಿಲ್ಲ, ಎಲ್ಲಿಗೂ ಹೋಗ್ಲಿಲ್ಲ, ಆ ಮಗು ಹಗಲು ರಾತ್ರಿ ಕಿರುಚಿ ಕಿರುಚಿ ನಾಲ್ಕು ದಿನದ ಹಿಂದೆ ಸತ್ತೆ ಹೋಯಿತು, ನೀವೆ ಅಲ್ವಾ ಆ ದಿವಸ ದುಡ್ಡು ಕೊಟ್ಟು ಹೋದವ್ರು, ಅವನು ಪಾಪಿ ಅವಳ ಗಂಡ ಕಮಲಳನ್ನು ನಾಯಿಗೆ ಬಡಿದ ಹಾಗೆ ಬಡಿದ, ನಾವಿಲ್ಲದಿದ್ರೆ ಕೊಂದೆ ಹಾಕ್ತಿದ್ದನೇನೊ , ನಿಮ್ಮ ಬಗ್ಗೆನೂ ಕಟುವಾಗಿ ಹೇಳ್ತಿದ್ದ, ಅವನ ಬಾಯಿಗೆ ಹುಳ ಬೀಳ “ಎಂದು ಆ ಹೆಂಗಸು ಬಯ್ಯುತ್ತಲೆ ಇದ್ದಳು. ಕಮಲ ಎಂದು ಕರೆದ ಅರುಣ್ ” ಯಾರು ಎನ್ನುವ ನಿರ್ಜಿವ ಧ್ವನಿ ಒಳಗಿನಿಂದ ಬಂತು ” ಬಾಗಿಲು ದೂಡಿ ಒಳಗೆ ಹೋಗಿ ನಾನು ಎಂದ ” ಕಮಲಳ ಮುಖ ಬಿಳಿಚಿಕೊಂಡಿತ್ತು. ಕಮಲ ಮಾತನಾಡಲಿಲ್ಲ, ಅವಳ ಕಣ್ಣಲ್ಲಿ ಸ್ವಲ್ಪವು ಬೆಳಕಿರಲಿಲ್ಲ.. ಪುನ್ಹ ಕಮಲ ಎಂದ ಕಮಲ ಕೈ ಎತ್ತಿ ಸ್ಟ್ಯಾಂಡಿನತ್ತ ತೋರಿಸಿದಳು. ಅರುಣ್ ಕೊಟ್ಟ ಹಣ ಮತ್ತು ಪತ್ರ ಎರಡೂ ಅಲ್ಲೆ ಇತ್ತು. “ನೀನು ಅನ್ಯಾಯ ಮಾಡಿದೆ ಕಮಲ ” ಎಂದಾಗ ಎದ್ದು ಕೂರಲು ಪ್ರಯತ್ನಿಸಿದಳು. “ಹಾಗೆ ಮಲಗು ಕಮಲ ಎಂದ, ಕೊನೆಯ ಸಲ ನೋಡಿದ, ಕಮಲ ಹೃದಯ ತುಂಬಾ ತುಂಬಿಕೊಂಡಿದ್ದಳು “”ನಾನು ಬರುತ್ತೇನೆ ಎಂದ, ಮೌನ ತಾನೆ ಹೆಪ್ಪುಗಟ್ಟಿತು, ಅವಳ ಉತ್ತರಕ್ಕಾಗಿ ಅರುಣ್ ನಿಂತೆ ಇದ್ದ.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ