- ಕ್ಯಾಮೆರಾ ಮನ್.. - ಡಿಸಂಬರ್ 31, 2021
- ಯುದ್ಧ ಗೆದ್ದ ನಂತರ - ಜುಲೈ 20, 2021
- ಪುಸ್ತಕ ದಿನ ಮತ್ತು ಚೆಕ್ ರೋಲ್ ಸಾಹಿತ್ಯ - ಏಪ್ರಿಲ್ 23, 2021
ನಲ್ವತ್ತಾರನೇ ನಿಮಿಷಕ್ಕೆ ಇನ್ನೇನು ಹೋಗಿ ಬಂತು ಪ್ರಾಣ ಎನ್ನುವಾಗ ಅವನ ಸಂದೇಶಕ್ಕಾಗಿಯೇ ಇಟ್ಟಿದ್ದ ಸ್ಪೆಷಲ್ ಬೀಪ್ ಸೌಂಡ್ ಹೊಡೆದುಕೊಳ್ತು.
ಮುಂದೆ ಓದಿ…
ನಡುಗುವ ಕೈಗಳಿಂದ ಮೊಬೈಲ್ ಓಪನ್ ಮಾಡಿದರೆ…!
‘ಮಾರ್ನಿಂಗ್ಸ್ ಬೇಬಿ..’
ಜೊತೆಗೊಂದು ಕಡುಗೆಂಪು ಗುಲಾಬಿ ಮತ್ತದೇ ಬಣ್ಣದ ಹೃದಯದ ಈಮೋಜಿ ♥ ಇಟ್ಟು ಎದ್ದು ಅರ್ಧ ಗಂಟೆಯ ನಂತರ ಅವನಿಗೆ ಕಳಿಸುವ ಬೆಳಗಿನ ಸಂದೇಶ ಅದು.
ಮಾರ್ನಿಂಗ್ಸ್ ಬೇಬಿ ಹೇಳಿ ಹೃದಯ ಮಾತ್ರ ಇಟ್ಟರೆ ಗುಲಾಬಿ ಬಿಡಲಿಲ್ವಾ ಗಿಡದಲ್ಲಿ ಅಂತಾನೆ.
ಗುಲಾಬಿ ಮಾತ್ರ ಇಟ್ಟರೆ ಹೃದಯ ಎಲ್ಲಿ ಬೀಳಿಸ್ದೆ ಅಂತ ಉರಿಮೋರೆಮಾಡ್ತಾನೆ.
ಅದೆರಡೂ ಇಟ್ಟು ಬೇಬಿ ಮರೆತರೆ ಬೇಬಿ ಹೇಳು ಅಂತ ರಚ್ಚೆ ತೆಗೀತಾನೆ.
ಅಚ್ಚುಕಟ್ಟಾಗಿ ಅವನಿಗಿಷ್ಟವಾಗುವ ಹಾಗೆ ಕಳಿಸಿದರೆ ‘ಚಿನ್ನಾ ಗುಡ್ ಮಾರ್ನಿಂಗ್…’
ಎರಡುಮುತ್ತು,ಮೂರು ಗುಲಾಬಿ, ನಾಲ್ಕು ಹೃದಯ ಇಟ್ಟು ಕಳಿಸುವ ಆ ಬೆಳಗಿನ ಸಂದೇಶದಲ್ಲಿ ನನ್ನ ನಿರೀಕ್ಷೆ ಮೀರಿ ತೂಗುವ ಅವನ ಪ್ರೀತಿ ಗಾಢವಾಗಿ ಧ್ವನಿಸುತ್ತದೆ.
ಆದರೆ..
ಇಂದು ಕಳಿಸಿ ಒಂದೂವರೆ ಗಂಟೆಯಾದರೂ ಪ್ರತಿಕ್ರಿಯಿಸಿಲ್ಲ.
ಲಾಸ್ಟ್ ಸೀನ್ ಬೆಳಿಗ್ಗೆ ಆರು ನಲ್ವತೈದಕ್ಕಿದೆ.
ಅಂದರೆ..
ಎದ್ದ ಮೇಲೆ ನನಗೆ ವಿಶ್ ಮಾಡುವುದನ್ನು ಮರೆತನೇ?
ಅಥವಾ…
ಅಥವಾ ಬೇಕೆಂದೇ ಕೈ ಬಿಟ್ಟನೇ.
ಇನ್ನೂ ಅರ್ಧಗಂಟೆಯಾಯಿತು.
ಹೀಗೆ ನಿರ್ಲಕ್ಷಿಸಿ
ಹೇಳಲಾಗದ ಯಾವುದಾದರೂ ಮಾತನ್ನು ಹೇಳಲು ಯತ್ನಿಸ್ತಿರಬಹುದೇ.?
ಹಣೆಯ ಮೇಲೆ ಒಮ್ಮೆಗೆ ಬೆವರ ಸಾಲುಗಳೊಡೆದವು.
ಯೋಚನೆಗೆ ಹಣೆ “ಧೀಂ” ಎನ್ನತೊಡಗಿದೆ.
ಕಾಟಾಚಾರಕ್ಕೆತಿಂಡಿಯ ಶಾಸ್ತ್ರ ಮುಗಿಸಿ
ಆಫೀಸಗೆ ತಯಾರಾಗುವಾಗಲೂ ಏನೂ ಬೇಕಿಲ್ಲದ ಭಾವ.
ಉಸಿರಾಡಿದಷ್ಟೇ ಸರ್ತಿ,ರೆಪ್ಪೆ ಮಿಟುಕಿದಷ್ಟೇ ಬಾರಿ ಮೊಬೈಲ್ ತೆಗೆದು ನೋಡಿ ನಿಟ್ಟುಸಿರಿಟ್ಟು…
ಹಮ್ಮ್್ಮ್……
ಮತ್ತೆ ಅವನ ಡಿಪಿ ನೋಡಬೇಕೆನಿಸ್ತಿದೆ.
ಮುಗ್ದವೆನಿಸುವ ಪ್ರಬುದ್ಧ ಗಂಡು.
ಅವನ ಹಣೆಗೆ ತನ್ನ ನಡುಗುವ ತುಟಿಯೊತ್ತಿ ಮತ್ತೆ ಅವನನ್ನೇ ಕಣ್ತುಂಬಿಕೊಂಡು,ಬಾರದ ನಗುವ ಕರೆದು ಹೊದ್ದು .
ಎಲ್ಲವೂ ಅಸ್ತವ್ಯಸ್ತ.
ದೇವರೇ.
ಒಂದು ಬೆಳಗು.
ಒಂದೇ ಒಂದು ಬೆಳಗನ್ನು ಅವನ ಗೈರಿನಲಿ ಕಳೆಯುವುದು ಇಷ್ಟು ತ್ರಾಸವಾಗಿದೆಯೆಂದರೆ.
ಅಕಸ್ಮಾತ್… ಅಕಸ್ಮಾತ್…
ನಾಳೆ ಏನಾದರೂ…?
ಮುಂದೆ ಮೂಡಬಹುದಾದ ಮಾತಿಗೆ ಎದೆನಡುಗಿ ಕಣ್ಣು ಕತ್ತಲಿಟ್ಟಂತಾಗಿ..ಛೆ..
ಕೆಟ್ಟದ್ದನ್ನು ಯೋಚಿಸಿದ್ದಕ್ಕೆ ‘ಬಿಡ್ತು’
ಹೇಳಿ.
ಇಷ್ಟದೈವವನ್ನು ನೆನೆದು ಮೊಬೈಲ್ ಓಪನ್ ಮಾಡಿದ್ರೆ ಹತ್ತೂವರೆಯಲ್ಲಿ ಆನ್ಲೈನ್ಗೆ ಬಂದುಹೋಗಿದ್ದಾನೆ.
ಅಂದರೆ..
ನನ್ನ ಕಾತರಕ್ಕೆ ನಿರ್ಲಕ್ಷ್ಯ ದ ಮೂಲಕ ಉತ್ತರಿಸಿ ಬೋರಾಯ್ತು ಇದೆಲ್ಲಾ ಅಂತ ಹೇಳ್ತಿದ್ದಾನಾ..?
…
ಹನ್ನೆರಡರ ಸುಮಾರಿಗೆ’ಮಾರ್ನಿಂಗ್ಸ್ ಮುದ್ದು..ಆಫೀಸಲಿ ಬ್ಯುಸಿ..ಸಾರಿ”
ಎನ್ನುವ ಮೆಸೇಜಿದೆ.
‘ಬೇಸರ ಆಯ್ತಾ..?ಆಫೀಸಿಗೆ ಬಂದ್ಯಾ…
ಲವ್ ಯೂ ಮುದ್ದು…’
ಯಾವುದೂ ಇಲ್ಲ.
ಬಾಸ್ ಕರೀತಿದಾರೆ.
ಅಟಂಡರ್ ಬಂದು ಹೇಳಿದ.
ಯಾಂತ್ರಿಕವಾಗಿ ಹೋಗಿ ನಿಂತೆ.
ಏನು ಹೇಳಿದರೋ ಕೇಳಿದರೋ ತಿಳಿಯಲಿಲ್ಲ.
ಮತ್ತೆ ಕುರ್ಚಿಗೆ ಹತ್ತಿಕೊಂಡು ಲ್ಯಾಪ್‌ಟಾಪ್ ಓಪನ್ ಮಾಡಿದ್ರೆ.
ಸ್ಕ್ರೀನ್ ಮಸುಕುಮಸುಕು.
ಒಮ್ಮೆ ಒರೆಸಬೇಕೆನಿಸಿತಾದರೂ ಮಸುಕಿರುವುದು ತನ್ನ ನೋಟದಲ್ಲಿ.
ಪ್ರೇಮ ಕನ್ನಡಕದ ಪವರ್ ಕಡಿಮೆಯಾಗಿದೆ.
ಕಡಿಮೆಯಾಯಿತೇ.?ಮೊನ್ನೆ ಮೊನ್ನೆ ತಾನೇ ಕೊಂಡ ಹಾಗಿದೆ.
ಇನ್ನು ಎಲ್ಲವೂ ಮಸುಕೇ.
ದೇವರೇ..ಇದೇನಾಗ್ತಿದೆ ನನಗೆ.
ಯಾಕಿಷ್ಟು ಹಚ್ಚಿಕೊಂಡ್ಬಿಟ್ಟೆ ಇವನನ್ನ.
ಹೃದಯ ಹೆಣಭಾರ.
ಕೈಕಾಲು ಸೋಲು…
ಹುಚ್ಚಿಯಂತೆ ಮತ್ತೆ ಮೊಬೈಲ್ ತೆಗೆದುನೋಡಿದರೆ
ಆನ್ಲೈನಿಗೆ ಬಂದರೂ, ಆಗಷ್ಟೇ ಲಾಸ್ಟ್ ಸೀನ್ ಇದ್ದರೂ…
…
‘ಒಂದು ಸಿನೆಮಾಗೆ ಬಂದಿದ್ದೆ.
ರಿವ್ಯೂ ಬರೆಯೋಕಿತ್ತು..’
ನಾಲ್ಕೂವರೆಗೆ ಮತ್ತೊಂದು ಮೆಸೇಜ್.
ಇಷ್ಟೇ.
ಮೊದಲಾದರೆ
‘ಚಿನ್ನಾ…ಸಿನೆಮಾಗೆ ಹೋಗೊಣ್ವಾ..ನೀ ಸಿನೆಮಾ ನೋಡು.ನಾ ನಿನ್ನ ನೋಡ್ತೀನಿ’ ಅನ್ನುತ್ತಿದ್ದವ.
ಸುತ್ತೆಲ್ಲಾ ಅನಾಥಳಂತೆ ಕಣ್ಣು ಹಾಯಿಸಿದೆ.
ಅವನ ಪ್ರೀತಿ ಇಲ್ಲದೆ ಎಲ್ಲಾ,ಎಲ್ಲಾವೂ ಸ್ವರೂಪ ಕಳೆದುಕೊಳ್ಳುತ್ತಿರುವಂತೆ ಅನಿಸ್ತಿದೆ.
ನನ್ನೊಳಗೆ ಅವನಿಲ್ಲದೆ ಹೋದರೆ ನನ್ನ ಪಾಲಿಗೆ ಎಲ್ಲವೂ ಅಪೂರ್ಣವೇ.
‘ಇವಳೊಂದು ಬೋರಿಂಗ್ ಕ್ಯಾರೆಕ್ಟರ್.!’
‘ಇಷ್ಟೊತ್ತಿಗೇ
ಮುದ್ದು ಹೇಳಬೇಕು’
‘ಸಂಜೆ ಮೆಟ್ರೋ ಹತ್ತುವಾಗ ಜೊತೆಗಿನ ಚಂದದ ಚಿಕ್ಕಪ್ರಾಯದ ಹುಡುಗಿಯ ಬಿಸುಪಿಗೆ ತೆರೆದು ಕೊಳ್ಳುವ ಬದಲು ಇವಳದ್ದೇ ಧ್ವನಿ ಕೇಳಬೇಕು….!!!’
‘ಸಾಕೆನಿಸ್ತಿದೆ ಅಂತ ನನಗೂ ಸ್ಪಷ್ಟವಾಗ್ತಿದೆ.’
ಅಂತೆಲ್ಲಾ ಅಂದುಕೊಳ್ತಿರಬಹುದಾ ಅವನು.?
ಹಾಗೆಂದುಕೊಂಡಿದ್ದರೆ..?
ಈಗಾಗಲೇ.?
ನಾನೇನು ಮಾಡಬಹುದು.?
ಹೇಗೆ…?
ಸಹಜವೇ ತೊರೆದ ನಂತರದ ನನ್ನ ಬದುಕು..?
ಕೊನೆ ಪಕ್ಷ.. ಉಸಿರಾಡಬಲ್ಲೆನೇ..?
…
‘ಬೇಬಿ.. ಒಂದು ಮಾತು ಸ್ಪಷ್ಟವಾಗಿ ಹೇಳು….
ನನ್ನಿಂದ ನಿನ್ನ ದಿನಚರಿಗೆ ತೊಂದರೆಯಾಗ್ತಿದೆಯಾ..?
ಸಂಬಂಧ ಕಿರಿಕಿರಿಯೆನಿಸ್ತಿದೆಯಾ.?
ಇದೆಲ್ಲಾ ತಲೆಬಿಸಿ ಎನಿಸಿತಾ..?
ದಯವಿಟ್ಟು ಹೇಳು..’
ಬ್ಲೂ ಟಿಕ್ ಬಂದು ಮುಕ್ಕಾಲು ಗಂಟೆಯಾದರೂ ಉತ್ತರವಿಲ್ಲ..
ಯಾಕೋ ಎಲ್ಲವೂ ಮುಗಿದಂತೆನಿಸಿತು.
‘ನೇರವಾಗಿ ಹೇಳಿದರೆ ಅವಳು ತಡೆದುಕೊಳ್ಳಬಹುದೇ…’
ಅಂತಲೂ ಅವನು ಯೋಚಿಸುವ ಸಾಧ್ಯತೆ ಇದೆ…
ನಲ್ವತ್ತಾರನೇ ನಿಮಿಷಕ್ಕೆ ಇನ್ನೇನು ಹೋಗಿ ಬಂತು ಪ್ರಾಣ ಎನ್ನುವಾಗ ಅವನ ಸಂದೇಶಕ್ಕಾಗಿಯೇ ಇಟ್ಟಿದ್ದ ಸ್ಪೆಷಲ್ ಬೀಪ್ ಸೌಂಡ್ ಹೊಡೆದುಕೊಳ್ತು.
ನಡುಗುವ ಕೈಗಳಿಂದ ಮೊಬೈಲ್ ಓಪನ್ ಮಾಡಿದರೆ…!
‘ಹೌದು……ನಿಜ….
ಸ್ವಲ್ಪ ಹಾಗನಿಸ್ತಿದೆ…ಇತ್ತೀಚಿಗೆ… ಎಲ್ಲಾ ಕಿರಿಕಿರಿ…!!!’
ಕಾಯ್ದವಳ ಎದೆ ಮೇಲೆ ಕೂತದ್ದು ಕಾದ ಬಾಣಲೆ..
ಓದುವ ಮೊದಲೇ ಕಣ್ಣು ಬವಳಿ ಬಂದು,
ಜಗತ್ತು ಸುತ್ತಲಾರಂಬಿಸಿ,
ಕೈಯಲ್ಲಿದ್ದ ಮೊಬೈಲ್ ಹಾಗೇ ಉರುಳಿ.
ಪಾದದಿಂದ ತಣ್ಣಗಿನ ಅಲೆಯೊಂದು ಘಳಿಗೆಯೊಳಗೆ ನೆತ್ತಿ ತಲುಪಿ…
“ನನ್ನ ಮುದ್ದು ಗಿಣಿಯೇ…
ನನ್ನ ಅನುಮಾನದ ಖನಿಯೇ..
ನನ್ನ ಒಲವಿನ ಗಣಿಯೇ…
ನನ್ನ ಬದುಕಿನ ಬನಿಯೇ..
ಗೊತ್ತಿರಲಿ ನಿನಗೆ…
ಈ ಬಗೆಯ ಕಿರಿಕಿರಿಯನ್ನು ದಿನದಲ್ಲಿ ನಾಲ್ಕಾರು ಬಾರಿ ಅನುಭವಿಸದೇ ಹೋದರೆ…
ಅಂದೆಲ್ಲಾ ನನ್ನ ಪಾಲಿಗೆ ಖಾಲಿ ಖಾಲಿ….!!!”
ಪಕ್ಕಕ್ಕೆರಡು ಮುತ್ತು,ಮೂರು ಕಡುಗೆಂಪಿನ ಗುಲಾಬಿ, ನಾಲ್ಕು ಅದೇ ಬಣ್ಣದ ಹೃದಯ ಇಟ್ಟು ಕಳಿಸಿದವನ ಮೆಸೇಜ್ ಮುಂದೆಂದೂ ಬ್ಲೂಟಿಕ್ ಬರಲೇ ಇಲ್ಲ..
…..
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ