- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
ಒಂದಾನೊಂದು ಸುಂದರ ಸಂಜೆ, ಪಡುವಣದ ನೀಲ್ಗಗನ ಆಗೆಲ್ಲ ಕೆಂಬಣ್ಣದ ಗಣಿ, ಎಲ್ಲ ಖಗಸಾಮ್ರಾಜ್ಯವೂ ಆ’ಣ’ದ ಬಣ್ಣವನ್ನೆಲ್ಲ ಕೈಗಡವಾಗಿ ತಂದು ತಮತಮಗೆ ಬೇಕಾದ ಪರಿಯಲ್ಲಿ ಪ್ರಯೋಜಿಸುತ್ತಿದ್ದವು, ಆ ದಿನದ ರವಿ ಆಗಲೇ ಮುದುಕರ ವಾರಿಗೆಯವನಾಗಿದ್ದ, ನಿಶೆಯ ಗಾಢಕೃಷ್ಣವರ್ಣಕ್ಕೆ ಆಗಿನ್ನೂ ತೀರ ಶೈಶವದ ಸ್ಥಿತಿ. ಒಂದು ಆಮ್ರವೃಕ್ಷದಡಿಯಲ್ಲಿ ನಾಲ್ಕಾರು ಉತ್ಸಿತ ಶಿಷ್ಯರು ಒಬ್ಬ ನುರಿತ ಗುರುವಿನ ಉಪನಿಷತ್ತಿನಲ್ಲಿ ವ್ಯಾಕರಣಾಭ್ಯಾಸ ಮಾಡುತ್ತಿದ್ದರು, ಅಂದಿನ ಪಾಠ “ಅಲಂಕಾರ” ಗಳ ಬಗೆಗಿತ್ತು. ಎಲ್ಲ ಶಿಷ್ಯರು ಹಲಗೆ-ಬಳಪದ ಜೊತೆ ಅಲಂಕಾರಿಕ ಪದ ಹಾಡುತ್ತಿದ್ದರೆ, ಅಲ್ಲೊಬ್ಬ ಶಿಷ್ಯ ಸ್ಫಟಿಕದಂತಿದ್ದ, ಅವನು ಆಗಲೇ ಪಡುವಣದ ಕೆಂಬಣ್ಣದಲ್ಲಿ ತಾನೇತಾನಾಗಿದ್ದ. ಎಲ್ಲರೂ ಪದ್ಯ ಬರೆದಿದ್ದರು, ಆದರೆ ಅವ ಪದ್ಯವೇ ಆಗಿದ್ದ, ಅಷ್ಟು ತನ್ಮಯತೆ ಅವನಲ್ಲಿ, ಸೇರುವುದರಲ್ಲಿ, ಸೆರೆಯಾಗುವುದರಲ್ಲಿ, ಸೂರೆಯಾಗುವುದರಲ್ಲಿ.
ಅಂದಿನ ರವಿಯ ಮುಳುಗುವಿಕೆಯೊಂದಿಗೆ ಪಾಠವೂ ಮುಗಿದಿತ್ತು, ಸಮೀರನ ಸುಯ್ಯುವಿಕೆಯೊಂದಿಗೆ ಶಿಷ್ಯರೆಲ್ಲ ತಮ್ಮ ತಮ್ಮ ಮನೆ ಸೇರಿದರು. ಆ ಸ್ಫಟಿಕದಂತಿರುವ ಹುಡುಗ “ವೀರ” ಮನೆಯೊಳಗಿನ ಮಾಡಿನಲ್ಲಿ ತನ್ನ ಹಲಗೆ-ಬಳಪವನ್ನಿಟ್ಟು ಎಂದಿನಂತೆ ತನ್ನ ಗೆಳೆಯರೊಡನೆ ಸ್ವಚ್ಛಂದವಾಗಿ ಆಡಲು ಬಯಲಾಗುವ ಸಮಯಕ್ಕೆ ಸರಿಯಾಗಿ ರಾಜಾಸ್ಥಾನದಲ್ಲಿ ಕಾರಣಿಕ ಕೆಲಸ ಮುಗಿಸಿ ತನ್ನ ತಂದೆ ಮನೆಯ ಸೋಪಾನಗಳೇರಿ ಒಳಬಂದರು.
ವೀರನ ತಾಯಿ ಜಠರಯಜ್ಞಕ್ಕೆ ಅಣಿಗೊಳಿಸುವುದಕ್ಕಾಗಿ ಅಗ್ನಿದೇವನಿಗೆ ಆಹ್ವಾನವನ್ನೀಯುತ್ತಿದ್ದರೆ, ತಂದೆ ಸಂಧ್ಯಾವಂದನಾದಿಗಳನ್ನು ಪೂರಯಿಸಿ ಒಂದು ಚಿಕ್ಕ ಹಣತೆ ಹೊತ್ತಿಸಿ ರೂಢಿಯಂತೆ ಒಂದ್ಹೊತ್ತು ಹೊತ್ತಿಗೆಯನ್ನ ಓದಲು ಚಪಗಾಲನ್ನು ಹಾಕಿ ಕುಳಿತರು.ಭೂಮಿಯ ಮೇಲೆ ದೀಪದ ಬೆಳಕಿಗಾಗ ಹಗಲು, ಹಗಲೆಲ್ಲ ಹೊಯ್ದಾಡುವ ರವಿಗೆ ರಾತ್ರಿಯ ಮೆದುದಿಗಿಲು.
ಆಟವಾಡಿ, ದಣಿದು ವೀರ ತನಗಿಂತ ಮೊದಲೇ ಬಯಲಾಟದಲ್ಲಿ ತೊಡಗಿದ್ದ ತನ್ನ ತಮ್ಮಂದಿರೊಡಗೂಡಿ ಕತ್ತಲಾಗುವ ಮುನ್ನ ಮನೆಸೇರಿ, ಕೈಕಾಲು ಮುಖ ತೊಳೆದು ಬಂದರು, ಅಷ್ಟರಲ್ಲಿ ಬಾಣಸದಲ್ಲಿ ಊಟವೂ ತಯಾರಾಗಿತ್ತು. ಎಲ್ಲರೂ ಒಟ್ಟಾಗಿ ಕುಳಿತು ರಾತ್ರಿಯ ಊಟವನ್ನು ಮಾಡಿ, ಅಳಿದುಳಿದ ಕಾರ್ಯಗಳನ್ನು ಮುಗಿಸಿ, ನೆಲಕ್ಕೆ ಬೆನ್ನು ಹಚ್ಚಿ, ಮಲಗುವ ಮುನ್ನ ಆ ಮನೆಯಲ್ಲೊಂದು ರೂಢಿ ಮನೆಮಾಡಿತ್ತು – ತಂದೆ ಮಕ್ಕಳಿಗೆಲ್ಲ ಮಹಾಭಾರತದಲ್ಲಿನ ಉಪಕಥೆಗಳನ್ನು ಹೇಳಿ, ಅದರ ನೀತಿಯನ್ನು, ಆಗಿನ ಕಾಲದ ಜನಪದ ವ್ಯವಸ್ಥೆಯನ್ನು ಅವಗತ ಮಾಡಲು ಮರೆಯುತ್ತಿರಲಿಲ್ಲ. ದಿನಾ ರಾತ್ರಿ ಎಲ್ಲರ ಕನಸಲ್ಲಿ ಅವರವರ ನೆಚ್ಚಿನ ಪಾತ್ರಗಳ ಕನಸಿನ ಚಿತ್ರಣ, ಹುಡುಗ ವೀರನ ಕನಸಲ್ಲಿ ಯಾವಾಗಲೂ ಕೃಷ್ಣನ ಪಾತ್ರಣ.
ಸಾಮಾನ್ಯರಿಗೆ ಸರಾಗವಾಗಿ ಎಟುಕದ ವೇದಗಳನ್ನೆಲ್ಲ ಕನ್ನಡೀಕರಿಸಿ, ಸಮಾಜಕ್ಕೆ ಅದರರ್ಥವನ್ನ ನಿರ್ವಚನಗೊಳಿಸಿದ ನಂತರ, ಶರಣರೂ ರಾಜಕೀಯ ಕುತಂತ್ರಗಳಿಗೆ ಕುಳಿಹೋಗಿ ಕಲ್ಯಾಣದಲ್ಲಿ ಕ್ರಾಂತಿಯಾಗಿ, ಶಿವಶರಣರೆಲ್ಲ ಚದುರಿದ್ದರು, ಸಾಧುಗಳಾದ ಅವರು ವನವಾಸಿಯಾಗಿದ್ದರು. ಅರ್ಜಿತ ಜ್ಞಾನಾನುಭವದ ಉಳಿವಿಗಾಗಿ ಹಲವರು ಉಳವಿಯ ಘನಾರಣ್ಯ ಸೇರಿದರೆ ಉಳಿದವರು ಅಳತೆಗೆ ಅಳಗೊಡದ ಅಡವಿಗಳಲ್ಲಿ ಶಿವೈಕ್ಯರಾದರು. ಸಮಾಜದಲ್ಲೆಲ್ಲ ಜಾತ್ಯತೀತತೆಯ ಹರಿಕಾರ ಶಿವಶರಣ ಬಸವರ, ಅಲ್ಲಮರ, ಅಕ್ಕಮಾದಿಗಳ ವಿಮಲ ಜ್ಞಾನವೆಲ್ಲ ಪಸರಿಸುತ್ತಿರುವ ಸಮಯ, ಕವಿ ಹರಿಹರಾದಿಯಾಗಿ ಆ ಜ್ಞಾನದ ಪಸರಿಸುವಿಕೆಗೆ ಕೆಲವರು ಕ್ರಿಯಾವರ್ಧಕರಾದ ಸಮಯ, ವಿಜಯನಗರ ಸಾಮ್ರಾಜ್ಯದ ಪ್ರಜಾಸೇವಕ ಪ್ರೌಢದೇವರಾಯರಿಗೆ ವೀರಪರಾಕು ಹೇಳುವ ವಂದಿಮಾಗಧರೆಲ್ಲ ಆಗಿನ್ನೂ ಬಾಲ್ಯಾವಸ್ಥೆಯಲ್ಲಿದ್ದ ಸಮಯ.
ವೀರ ಆಗ ೮-೯ ವರ್ಷದ ಹುಡುಗ, ಗುರುಕುಲದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ, ಅವನಿಗೆ ಸಂಸ್ಕೃತ, ಕನ್ನಡ, ಮರಾಠಿ ಭಾಷೆಗಳಲ್ಲಿ ಎಲ್ಲಿಲ್ಲದ ಆಸಕ್ತಿ, ಆ ಭಾಷೆಗಳನ್ನು ಅವನಿಗೆ ಆಳವಾಗಿ ಅಧ್ಯಯನ ಮಾಡಿಸುವುದರಲ್ಲಿ ಆತನ ಗುರುಗಳಿಗೂ ವಿಶೇಷವಾದ ಪ್ರೀತ್ಯುತ್ಸಾಹ, ಆಚಾರ್ಯ ದ್ರೋಣರಿಗೆ ಅರ್ಜುನನಂತಿದ್ದ. ಅರ್ಜುನ ಧನುರ್ಧಾರಿ, ವೀರ ಪದಾಧಿಕಾರಿ. ಚಿಕ್ಕ ವಯಸ್ಸಿನಲ್ಲಿಯೇ ಭಾಷೆ, ವ್ಯಾಕರಣ ಹಾಗೂ ಪದ ಭಂಡಾರದ ಮೇಲೆ ಅಷ್ಟು ಪ್ರಭುತ್ವ ಸಾಧಿಸಿದ್ದ. ವೀರ ತೀರ ಸೂಕ್ಷ್ಮಮತಿಯಾಗಿದ್ದ. ದಿನವೆಲ್ಲ ಗುರುಕುಲದಲ್ಲಿ ಗುರು ತಿಳಿಹೇಳುವ ಪಾಠ ಹಾಗೂ ರಾತ್ರಿ ಮನೆಯಲ್ಲಿ ಪಿತರು ಹೇಳಿತಿಳಿಸುವ ಮಹಾಭಾರತದ ಕಥಾಪಾಠಗಳನ್ನು ಸಮಯ ಸಾಧಿಸಿ ಮನನ ಮಾಡಿಕೊಳ್ಳುತ್ತಿದ್ದ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ಸತ್ಯಾಸತ್ಯತೆಗಳ ಬಗ್ಗೆ ಅವಲೋಕಿಸಿ, ತಿಳಿದವರಲ್ಲಿ, ಪಂಡಿತರಲ್ಲಿ ತನ್ನ ಸಂಶಯಗಳನ್ನು ಆಗಾಗ ಕೇಳಿ-ತಿಳಿದು ಪರಿಹರಿಸಿಕೊಳ್ಳುತ್ತಿದ್ದ.
ಪ್ರತಿವರ್ಷ ಚೈತ್ರಮಾಸದಲ್ಲಿ ಆ ಊರಲ್ಲಿ ಪುರಾಣಿಕರಿಂದ ಪುರಾಣ/ಇತಿಹಾಸ ಶ್ರವಣಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ವೇದವ್ಯಾಸರ ವಿರಚಿತ “ಜಯ ಸಂಹಿತೆ”, ವೈಶಂಪಾಯನರಿಂದ ಜನಮೇಯಜಯ ರಾಜರಿಗೆ ಹೇಳಿದ ಐತಿಹಾಸಿಕ ಕಥೆಯ ಪ್ರವಚನವೆಂದು ಊರಿನ ಹಿರಿತಲೆಗಳು ಆ ವರ್ಷ ಗೊತ್ತುಮಾಡಿದ್ದರು. ಒಂದಿಷ್ಟು ದಿನಗಳು ಆ ಊರಲ್ಲಿ ಮಹಾಭಾರತದ ಪರ್ವಕಾಲ, ಪ್ರತಿವರ್ಷದಂತೆ ಊರನಾಗರಿಕರೆಲ್ಲ ಆಸಕ್ತಿಯಿಂದ ಆ ಶ್ರವಣಕಾರ್ಯಕ್ರಮಕ್ಕಾಗಿ ಎದರು ನೋಡುತ್ತಿದ್ದರು.
ಮಹಾಭಾರತ ಕಥಾಶ್ರವಣಕ್ಕೀಗ ಆ ಊರಲ್ಲಿ ವಸಂತ ಕಾಲ, ಮಾವಿನ ಮರಗಳ ರೆಂಬೆಕೊಂಬೆಯ ತುದಿಗಳಲ್ಲಿ ಆಗಲೇ ಪುಟ್ಟ ಪುಟ್ಟ ಮಾವಿನಕಾಯಿಯ ಮರಿಗಳು ತಮ್ಮ ಶೈಶವಾವಸ್ಥೆಯನ್ನು ಉಲ್ಲಾಸದಿಂದ ಕಳೆಯುತ್ತಿದ್ದವು. ಹೂವಿನಗಿಡಗಳಲ್ಲಿ ಹೂಗಳೆಲ್ಲ ತಮತಮಗೆ ಇಷ್ಟವಾದ ಬಣ್ಣಗಳನ್ನು ತಯಾರಿಸುವುದರಲ್ಲಿ ನಿರತರಾಗಿದ್ದವು, ಭೃಂಗಗಳಿಗಂತೂ ಅದು ಹಬ್ಬದ ಪರ್ವಕಾಲ. ಭಾರತದ ದಿಗಂತದಲ್ಲಿ ಹಳೆಯ ಸಂವತ್ಸರದ ಮುದಿತ, ಹೊಸ ಸಂವತ್ಸರದ ಉದಿತ.
ಗೊತ್ತು ಮಾಡಿದ ಒಂದು ಸುಂದರ ಸಂಜೆ, ಆಹಾರವನ್ನರಸಿ ಗೂಡಿನಿಂದ ಹೊರಬಿದ್ದ ಪಕ್ಷಿಗಳೆಲ್ಲ ಗೂಡಿಗೆ ಮರಳುತ್ತಿದ್ದವು, ಪುರಾಣಿಕರು ಸಂಧೆಯ ಆಹ್ನೀಕಗಳನ್ನೆಲ್ಲ ಮುಗಿಸಿ, ಉಚಿತಾಸನದಲ್ಲಿ ಕುಳಿತಿದ್ದರು, ಮಗ್ಗುಲಲ್ಲೇ ವಾದ್ಯವೃಂದ ತಮ್ಮ ತಮ್ಮ ವಾದನಗಳನ್ನು (ತಬಲ – ಪೇಟಿ) ತಮಗೆ ಅನುಸರಿಸುವಂತೆ ಅಳವಡಿಕೆಯ ಆಟವಾಡುತ್ತಿದ್ದರು. ಆಸಕ್ತ ಪುರಜನರು ಬಹುತರ ಅಲ್ಲಿ ಆಗಲೇ ಹಾಸಿದ ಬೃಹತ್ ತಾಡಪತ್ರಿಯ ಮೇಲೆ ನೆರೆದಿದ್ದರು, ಅಳಿದುಳಿದವರು ಉಳಿದ ಕೆಲಸ ಮುಗಿಸಿ ಗಡಿಬಿಡಿಯಿಂದ ಬಂದು ಕುಳಿತು ಕೊರಳ ಮೇಲೆ ಒದಗಿದ – ಒಸರಿದ ಬೆವರನ್ನು ನಿವಾರಿಸುವುದರಲ್ಲಿದ್ದರು. ವೀರನಿಗೆ ಮಹಾಭಾರತದಲ್ಲಿ ಎಲ್ಲಿಲ್ಲದ ಆಸಕ್ತಿಯಿರುವುದರಿಂದ ಅವನು ತನ್ನ ಗೆಳೆಯರೊಡಗೂಡಿ ಬಂದು ಕುತೂಹಲದಿಂದ ಕಾಯುತ್ತಿದ್ದ. ಮಂಗಳಾರತಿಯಿಂದ ಆ ಕಾರ್ಯಕ್ರಮ ಶುಭಾರಂಭವಾಯಿತು, ಆದಿಪರ್ವ. ಪುರಾಣಿಕರು ಮನದಲ್ಲೇ ಇಷ್ಟದೇವರನ್ನು ನೆನೆದು, ಬಾದರಾಯಣರಿಗೆ ನಮಿಸಿ, ಚಂದ್ರವಂಶವೃಕ್ಷದ ಕಿರುಪರಿಚಯ ಮಾಡಲು ಮೊದಲಾದರು. ಚಂದ್ರ – ಬುಧ – ಪುರೂರವ – ಆಯು – ನಹುಷ – ಯಯಾತಿ — ದುಶ್ಯಂತ – ಭರತ – ಸುಹೋತ್ರ – ಹಸ್ತಿ – ಸುವರ್ಣ – ಕುರು — ಪ್ರತೀಪ – ಶಂತನು…
ಪುರಾಣಿಕರು ಗಮಕ ಶೈಲಿಯಲ್ಲಿ ಪದ್ಯಗಳನ್ನು ವಾಚಿಸಿ ಮಧ್ಯೆ ಪದ್ಯದ ಅರ್ಥವನ್ನು ರಸವತ್ತಾಗಿ ನಿರ್ವಚನವನ್ನು ಮಾಡುತ್ತಿದ್ದರು. ಮಹಾಭಾರತ ಕಥಾಶ್ರವಣ ಕಾರ್ಯಕ್ರಮ ಅನುಸ್ಯೂತವಾಗಿ ನಡೆಯುತ್ತಿತ್ತು. ವೀರ ಒಂದು ದಿನವೂ ತಪ್ಪದೇ ಆಸಕ್ತಿಯಿಂದ ಬಂದು ಕುಳಿತು ಕೇಳಿ, ಮನೆಗೆ ಹೋಗಿ ಕೇಳಿದ್ದನ್ನೆಲ್ಲ ತನ್ನ ತಾಯಿಗೂ, ತಮ್ಮಂದಿರಿಗೂ ಹೇಳುತ್ತಿದ್ದ. ಒಂದೊಂದು ಪರ್ವ ಮುಗಿದಾಗಲೂ, ಪುರಾಣಿಕರ ಪ್ರಸಿದ್ಧಿ ಅಕ್ಕಪಕ್ಕದ ಊರುಗಳಿಗೆ ಹಬ್ಬಿ, ಹೆಚ್ಚು ಹೆಚ್ಚು ಆಸಕ್ತ ಪುರಜನರು ಬಂದು ಜಮಾವಣೆಯಾಗಹತ್ತಿದರು. ಗದಾ ಪರ್ವದ ಕೊನೆಯ ಪದ್ಯಗಳನ್ನು ಪುರಾಣಿಕರು ವಾಚನ-ನಿರ್ವಚನ ಮಾಡಿ ಅಂದಿನ ಮಂಗಳಾರತಿಯೊಂದಿಗೆ ಕಾರ್ಯಕ್ರಮದ ಉಪಸಂಹಾರವಾದ ನಂತರ, ತಮಗೆ ಗೊತ್ತಾದ ವಿಶ್ರಾಂತಿ ಧಾಮಕ್ಕೆ ಬಂದರು. ತಮ್ಮ ಅಂಗವಸ್ತ್ರಗಳನ್ನು ಬದಲಿಸಿ, ಕೈಕಾಲುಮುಖ ತೊಳೆದು, ಪ್ರಸಾದ ಸ್ವೀಕರಿಸಿ, ವಿಶ್ರಾಂತಿಗೆಂದು ಹಾಸಿನ ಮೇಲೆ ಬಂದು ಮಲಗಲು ಅವರಿಗೆ ಲಘುಜ್ವರದ ಅನುಭವವಾಯಿತು. ಪುರಾಣಿಕರು ಹಾಗೇ ನಿದ್ರೆ ಹೋದರು, ಜ್ವರ ಉಲ್ಬಣಗೊಂಡು ತೀರ ಅಸಹನೀಯವಾಯಿತು.
ಮರುದಿನವೂ ಜ್ವರ ಶಮನವಾಗುವ ಸೂಚನೆಯೇ ಇಲ್ಲ, ಪುರಾಣಿಕರನ್ನು ನಗರದ ಆಸ್ಪತ್ರೆಗೆ ಕರೆದೊಯ್ದರು. ಕಥಾಶ್ರವಣ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆಯೆಂದು ಊರಲ್ಲೆಲ್ಲ ಡಂಗುರ ಸಾರಲಾಯಿತು. ಸುದ್ದಿ ಕೇಳಿದ ಪುರಜನರೆಲ್ಲ ಬೇಸರಗೊಂಡು ತಮ್ಮ ತಮ್ಮ ದಿನಚರಿಯಲ್ಲಿ ಮುಳುಗಿದರು. ವೀರನೂ ಹೀಗಾಯ್ತೆಂದು ಕೇಳಿ ತಿಳಿದು ತುಂಬ ಬೇಸರಗೊಂಡ. ಮಹಾಭಾರತವು ಆ ಊರಿನ ಜನಗಳ ಲೆಕ್ಕದಲ್ಲಿ ಗದಾಪರ್ವಕ್ಕೆ ಅಂತ್ಯವಾಯಿತು.
-0-0-0-
ಹಲವು ವಸಂತಗಳು ಕಳೆದವು, ಹಲವು ಜೀವದ ಜೀವನಗಳು ಸವೆದವು. ವೀರ ನೆಟ್ಟ ಸಸಿಗಳೆಲ್ಲ ಗಿಡಮರಗಳಾಗಿ ದಾರಿಹೋಕರಿಗೆ ನೆರಳನ್ನು ನೀಡುತ್ತಿದ್ದವು. ವೀರ ಸಂಸ್ಕೃತ ಹಾಗೂ ಕನ್ನಡ ಪಂಡಿತನಾಗಿ ಸ್ನಾತಕೋತ್ತರದ ಜೀವನ ನಡೆಸುತ್ತಿದ್ದ, ಜೀವಿಕೆಗಾಗಿ ಒಂದು ಕೆಲಸ. ಒಂದು ಸುದಿನ ವೀರ ಹೀಗೇ ವಾಯುವಿಹಾರಗೈಯ್ಯುತ್ತಿದ್ದಾಗ ಆತನ ಮನದಲ್ಲಿ ಸಾಮಾನ್ಯರಿಗೆ ಅಸಹಜವಾದ ವೇದಗಳ ಒಳಾರ್ಥವನ್ನು ಇತಿಹಾಸ ರೂಪದಲ್ಲಿ ವ್ಯಾಸವಿರಚಿತ ಸಂಸ್ಕೃತದ ಮಹಾಭಾರತವನ್ನು ಕನ್ನಡವಾಗಿಸಬೇಕೆಂದು ಸ್ಫುರಣೆಯಾಯಿತು. ತತ್ಸಂಬಂಧವಾಗಿ ತಾ ಮತ್ತೊಮ್ಮೆ ಆಲೋಚಿಸಿ, ತನ್ನ ಗೆಳೆಯರೊಂದಿಗೆ ಸಮಾಲೋಚಿಸಿ, ಆದಷ್ಟು ಬೇಗ ಅದಕ್ಕೆ ಪೂರಕವಾಗಿ ಕಾರ್ಯನ್ಮುಖವಾಗಬೇಕೆಂದು ಮನದಲ್ಲೇ ಸಂಕಲ್ಪಸಿ, ಒಂದು ದಿನ ಹಾಗೂ ಸ್ಥಳವನ್ನು ಗೊತ್ತುಮಾಡಿ, ಅದಕ್ಕಾಗಿ ಮಾನಸಿಕವಾಗಿ ಅಣಿಗೊಳ್ಳುತ್ತಿದ್ದ.
ಗೊತ್ತುಮಾಡಿದ ಆ ಹೊತ್ತು ಬಂದೇ ಬಿಟ್ಟಿತು. ಬರೆವಣಿಗೆಗೆ ಬಳಕೆಯಾಗುವ, ಬೆಳಕಾಗುವ ಸಾಮಗ್ರಿಗಳನ್ನೆಲ್ಲ ಚೀಲದಲ್ಲಿ ತುಂಬಿಕೊಂಡು ಬ್ರಾಹ್ಮೀ ಮಹೂರ್ತದಲ್ಲಿ ನಿತ್ಯಕರ್ಮಗಳನ್ನೆಲ್ಲ ಮುಗಿಸಿ, ತನಗಿಷ್ಟವಾದ ದೇವಾಲಯದಲ್ಲಿ ಬಂದು ಕುಳಿತು, ಕೊನೆಘಳಿಗೆಯಲ್ಲಿ ಮನಸ್ಸನ್ನು ಹದಗೊಳಿಸಲು ಮೊದಲುಮಾಡಿದ್ದ. ವೀರನ ಮನದ ಮೇಲೆ ಮಹಾಭಾರತದಲ್ಲಿನ ಶ್ರೀಕೃಷ್ಣನ ಪಾತ್ರವ್ಯಕ್ತಿತ್ವ ತುಂಬಾ ಪ್ರಭಾವ ಬೀರಿತ್ತು, ಶ್ರೀಕೃಷ್ಣನ ಬಗೆಗೆ ವಿಶೇಷವಾದ ಪ್ರೀತ್ಯುತ್ಸಾಹವಿತ್ತು. ಎಂದೇ, ಒಂದು ಶುಭಮಹೂರ್ತದಲ್ಲಿ ಲೇಖನಿ, ಗರಿಗಳನ್ನು ಚೀಲದಿಂದ ಹೊರತೆಗೆದು ತೊಡೆಯ ಮೇಲಿಟ್ಟುಕೊಂಡು, ವೀರ ಕಣ್ಮುಚ್ಚಿ ಮನದಲ್ಲೇ ಮೊದಲು ಶಿವಪ್ರಿಯನಿಗೆ, ಶಿವನಿಗೆ, ಶಿವಪುತ್ರನಿಗೆ ಹಾಗು ಶಾರದೆಗೆ ಶಿರಸಾವಹಿಸಿ ನಮಿಸಿ, ಮಹಾಭಾರತ ಕರ್ತೃವಾದ ಭಗವಾನ್ ಬಾದರಾಯಣರಿಗೂ ಹಣೆಮಣಿಸಿ ಬರೆಯಲು ಮೊದಲಾದ.
ವೀರನಿಗೆ ತನ್ನ ಪಾಂಡಿತ್ಯ, ವ್ಯಾಕರಣ ಶಾಸ್ತ್ರದ, ಪದಭಂಡಾರದ ಮೇಲೆ ಎಲ್ಲಿಲ್ಲದ ಆತ್ಮವಿಶ್ವಾಸ. ಎಷ್ಟೋ ಸಂಸ್ಕೃತ-ಕನ್ನಡ ಮಹಾಕೃತಿಗಳನ್ನು ಅಧ್ಯಯನ ಮಾಡಿದ್ದರೂ, ವ್ಯಾಸರು ಪ್ರಚುರಪಡಿಸಿದ ಕಾವ್ಯಲಕ್ಷಣಗಳನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಂಡು ತಾನೊಂದು ಹೊಸರೀತಿಯಲ್ಲೇ ಕಾವ್ಯರಚನೆ ಮಾಡಬೇಕೆನ್ನುವ ಅತೀವ ಹಂಬಲ ಅವನಿಗೆ. ತನ್ನ ಕಾವ್ಯಕೃತಿಯನ್ನು ಉತ್ಕೃಷ್ಟವಾಗಿಸಲು ಬೇಕಾಗುವ ಕಸರತ್ತುಗಳನ್ನು ಅವ ಮಾಡಲು ಅನುಗೊಂಡಿದ್ದ. ಭಾಮಿನಿಷಟ್ಪದಿ ಸ್ನಾನ ಮಡಿ ಮಡಿಯುಟ್ಟು ಬಂದು ಆಗಲೇ ವೀರನಂಗುಲಿಯ ಕಂಠದಲ್ಲಿನ ಲೇಖನಿಯ ತುದಿಯಲ್ಲಿ ವೀರಾಸನ ಹಾಕಿ ಕುಳಿತಿತ್ತು.
ವೀರ ಕೃಷ್ಣನ ವಿನಮ್ರಭಕ್ತನಾದ್ದರಿಂದ ಅವನ ಸ್ತುತಿಯಿಂದಲೇ ಕಾವ್ಯರಚನೆಯನ್ನು ಮೊದಲು ಮಾಡಿದ, ವೀರ ಶ್ರೀಕೃಷ್ಣನನ್ನು ಪರಿಚಯಿಸುವ ಪರಿಯೇ ಅನನ್ಯವಾದುದು – ವೇದಪುರುಷನಾದ ಬ್ರಹ್ಮನ ಸುತನಾದ ಕಶ್ಯಪನ ಸುತನಾದ ವಾಮನನ ಸೋದರನಾದ ಇಂದ್ರನ ಹೆಮ್ಮಗನಾದ ಅರ್ಜುನನ ಮಗನಾದ ಅಭಿಮನ್ಯುವಿನ ಹೆಂಡತಿಯ ಮಾತುಳನಾದ ಕೀಚಕನ ಅಳಿಸಿದ ಅತುಳಬಲನಾದ ಭೀಮನ ಅಣ್ಣನಾದ ಧರ್ಮರಾಯನ ಅವ್ವೆಯಾದ ಕುಂತಿಯ ನಾದಿನಿಯಾದ ದೇವಕಿಯ ಜಠರದಲಿ ಜನಿಸಿದ ಅನಾದಿಮೂರುತಿ ಶ್ರೀಕೃಷ್ಣ. ಅನುಸ್ಯೂತವಾಗಿ ವೀರಕವಿಯ ಕಾವ್ಯಕೌಶಲ ಮುಂದುವರೆಯುತ್ತಲೇ ಇತ್ತು. ಒಂದಾದಮೇಲೊಂದು ಪದ್ಯ ಬರೆಯುತ್ತಲಿದ್ದ, ಅವನು ಬರೆದದ್ದನ್ನು ಅಳಿಸಿ, ತಿದ್ದಿ ಮತ್ತೆ ಬರೆದವನಲ್ಲ, ಒಂದು ಸಲ ಗರಿಗಳಲ್ಲಿ ಅವನ ಅನುಪಮ ಆಲೋಚನೆಗಳು ಅನುಗೊಂಡರೆ ಮುಗಿಯಿತು ಅವು ನಿಜಕ್ಕೂ ಅ-ಕ್ಷರಗಳೇ. ಆ ಅಕ್ಷರಗಳು ಮಗದೊಮ್ಮೆ ತಿದ್ದಿಸಿಕೊಂಡ ಉದಾಹರಣೆಯೇ ಇಲ್ಲ.
ಪುಂಖಾನುಪುಂಖವಾದ ಪದ್ಯಗಳು, ಒಂದಾದಮೇಲೊಂದು ಪರ್ವಗಳು ಬಂದು ವೀರಕವಿಯ ಗರಿಗಳಲ್ಲಿ ಬಂದು ಉಚಿತ ಸ್ಥಾನಪಡೆದುಕೊಂಡು ಕುಳಿತುಕೊಳ್ಳುತ್ತಿದ್ದವು. ಬರೆಯಿಸಿಕೊಂಡ ಭಾಮಿನಿ ಷಟ್ಪದಿಗೆ ದಣಿವಾದರೂ, ವೀರನಿಗೆ ಹಾಗೂ ಅವನ ಅಲಂಕಾರಿಕ ಕುಶಲತೆಗೆ ದಣಿವೆಯ ಪರಿವೆಯೇ ಇಲ್ಲ, ಬರೆದಷ್ಟು ಮನಸ್ಸು ಉಲ್ಲಸಿತವಾಗುತ್ತಿತ್ತು, ಉತ್ಸಿತವಾಗುತ್ತಿತ್ತು. ವೀರ ತನ್ನ ಸೂಕ್ಷಮತಿಯಿಂದ ಅರಿತ ಜೀವನಾನುಭವವನ್ನೆಲ್ಲ ಕಾವ್ಯರೂಪದಲ್ಲಿ ಭಾವಧಾರೆಯೆರೆಯುತ್ತಿದ್ದ, ದ್ವಾಪರಯುಗಕ್ಕೆ ಧಾವಿಸಿ ತಾನೇ ಕಂಡೆನೆಂಬಂತೆ ಬರೆಯುತ್ತಿದ್ದ. ಯಶೋಧರೆ ಕೃಷ್ಣನ ತೊಟ್ಟಿಲನ್ನು ತೂಗುತ್ತಿದ್ದಾಗ ತೊಟ್ಟಿಲಿನ ಪಕ್ಕದಲ್ಲಿ ನಿಂತು ಮಂದಸ್ವರದಲ್ಲಿ ತಾನೂ ಲಾಲಿ ಹಾಡಿಬಂದಿದ್ದ.
ದ್ವಾಪರದಲ್ಲಿ ವ್ಯಾಸರ ಸಹಾಯಕ್ಕೆ ಗಣೇಶನಿದ್ದ, ಕಲಿಯುಗದಲ್ಲಿ ಕಲಿಕವಿಯ ಸಹಾಯಕ್ಕೆ ಭಾಮಿನಿ-ರೂಪಕಗಳಿದ್ದವು. ಎಲ್ಲ ಕಾರ್ಯಕ್ಕೂ ಒಂದು ಕಾರ್ಯಕಾರಣವಿದ್ದಹಾಗೆ ಉಪಸಂಹಾರವೂ ಇರುವುದು, ಇರಲೇಬೇಕು. ಕವಿ ಮಹಾಭಾರತ ಕಾವ್ಯರಚನೆಯ ಕಾರ್ಯದಲ್ಲಿ ಮಗ್ನನಾಗಿದ್ದರೂ ವಾಲ್ಮೀಕಿ ಮಹರ್ಷಿಗಳು ರಾಮನ ಪಟ್ಟಾಭಿಷೇಕದೊಂದಿಗೆ ರಾಮಾಯಣದ ಕಥೆಯನ್ನು ಪರಿಸಮಾಪ್ತಿಗೊಳಿಸಿದ ಪರಿಯೇ ಕವಿವೀರ ಯುಧಿಷ್ಠಿರನ ಪಟ್ಟಾಭಿಷೇಕದೊಂದಿಗೆ ಭಾರತದ ಕಥೆಯನ್ನು ಉಪಸಂಹರಿಸಿದ.
ವ್ಯಾಸರ ಮೂಲ ಜಯಸಂಹಿತೆಯನ್ನು ಕನ್ನಡದಲ್ಲಿ ಭಾವಾನುವಾದ ಮಾಡಿ ವೀರ ‘ಕುಮಾರವ್ಯಾಸ’ ನೆಂದು ಪ್ರಖ್ಯಾತನಾದ. ಕುಮಾರವ್ಯಾಸ ವಿರಚಿತ ದಶಪರ್ವದ ಕಾವ್ಯವು ಕುಮಾರವ್ಯಾಸ ಭಾರತ, ಕರ್ಣಾಟ ಭಾರತ ಕಥಾಮಂಜರಿ, ಗದುಗಿನ ಭಾರತ, ಕನ್ನಡ ಭಾರತವೆಂದು ಕನ್ನಡ ನಾಡಿನಲ್ಲಿ ಖ್ಯಾತನಾಮವಾಗಿದೆ.
ಇತಿಹಾಸಕ್ಕೆ ಐದನೆಯ ವೇದವೆಂದು ಹೆಗ್ಗಳಿಕೆಯುಂಟು, ಛಾಂದ್ಯೋಗ್ಯೋಪನಿಷತ್ತಿನಲ್ಲಿ ಒಂದು ಮಾತಿದೆ – “ಇತಿಹಾಸ ಪುರಾಣಂ ಪಂಚಮಂ” ಎಂದು. “ಭಾರತಃ ಪಂಚಮೋ ವೇದಃ” ಎಂದೂ ಕರೆಯಲಾಗಿದೆ. ಇತಿಹಾಸ ಪುರಾಣಗಳಿಗೆ ವೇದಗಳಿಗಿರುವಷ್ಟೇ ಮಹತ್ವವಿದೆ. ಚತುರ್ವೇದಗಳ ಸಾರವೆಲ್ಲ ವ್ಯಾಸರು ಸಾಮಾನ್ಯರಿಗೂ ಅವಗತವಾಗುವಂತೆ ಮಹಾಭಾರತದಲ್ಲಿ ದಾಖಲಿಸಿದ್ದಾರೆ. ಇತಿಹಾಸವೆಂದರೆ ಆಗಿದ್ದನ್ನು ಆದಹಾಗೆಯೇ ಸ್ವಲ್ಪವೂ ಅದಲುಬದಲು ಮಾಡದೆ ಸಾಹಿತ್ಯಿಕ ಶೈಲಿಯಲ್ಲಿ ಬರೆದಿಡುವುದು. ವ್ಯಾಸರು ದ್ವಾಪರದಲ್ಲಿ ಮಾಡಿದ ಪುರುಷಪ್ರಯತ್ನವನ್ನು ಕುಮಾರವ್ಯಾಸನು ಕಲಿಯುಗದಲ್ಲಿ ಗೈದಿದ್ದಾನೆ. ಕುಮಾರವ್ಯಾಸನ ದರ್ಶನದ ಕಾಣ್ಕೆ, ಮಾತಿನ ಮಾಣ್ಕೆ, ಭಾಷೆಯ ಪೂಣ್ಕೆ ಎಲ್ಲವೂ ಅಪರೂಪದ ರೂಪಕ ಅದಕ್ಕೆಂದೆ ಅವನನ್ನು “ರೂಪಕ ಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಯುತ್ತಾರೆ. ಕುಮಾರವ್ಯಾಸನ ಕಾವ್ಯವು ರಸಮಯವಾಗಿ “ರಸೋ ವೈ ಸಃ” ಎಂಬ ಮಾತಿಗೆ ಒಂದು ಆದರ್ಶ ದೃಷ್ಟಾಂತ.
“ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!“
ಎಂದಿರುವ ಕುವೆಂಪು ಅವರ “ಕುಮಾರವ್ಯಾಸ ಭಾರತ” ದರ್ಶನವನ್ನು ಇಲ್ಲಿ ನೆನೆಯಲೇಬೇಕು.
—@–@@@–@—-
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ