ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾಯದ ಗಾಯ : ಭೂತದ ಬೆನ್ನು ಹತ್ತಿ

ಸಿ. ಎಸ್. ಭೀಮರಾಯ

ಮಾಯದ ಗಾಯ : ಭೂತದ ಬೆನ್ನು ಹತ್ತಿ……..
ಮಾಯದ ಗಾಯ
ಲೇ: ಡಾ. ರಂಗರಾಜ ವನದುರ್ಗ
ಪುಟ:60, ಬೆಲೆ:50/-
ಪ್ರಕಾಶನ: ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು

ಡಾ. ರಂಗರಾಜ ವನದುರ್ಗ ದಲಿತ-ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಬೆಳೆದು ಬಂದ ಪ್ರಮುಖ ಲೇಖಕ ಮತ್ತು ಸಂಸ್ಕøತಿ ಚಿಂತಕರು. ಅವರು ಕನ್ನಡ ಕಾದಂಬರಿ, ವಿಮರ್ಶೆ, ವಿಚಾರ ಪ್ರಬಂಧ, ಸಂಶೋಧನೆ, ಸಂಪಾದನೆ ಮೊದಲಾದ ಕ್ಷೇತ್ರಗಳಲ್ಲಿ ಕಳೆದ ಮೂರು ದಶಕಗಳಿಂದ ಕೈಯಾಡಿಸುತ್ತ ಬಂದಿದ್ದಾರೆ.

ಡಾ. ರಂಗರಾಜ ವನದುರ್ಗ

ಪ್ರಸ್ತುತ ‘ಮಾಯದ ಗಾಯ’ ಡಾ. ರಂಗರಾಜ ವನದುರ್ಗ ಅವರ ಪ್ರಥಮ ಕವನಸಂಕಲನ. ಈ ಕವನಸಂಕಲನದಲ್ಲಿ ಒಟ್ಟು ಇಪ್ಪತ್ತೈದು ಕವಿತೆಗಳಿವೆ. ಇಲ್ಲಿನ ಇಪ್ಪತ್ತೈದು ಕವಿತೆಗಳಲ್ಲಿ ನಾಲ್ಕೈದನ್ನು ಬಿಟ್ಟರೆ ಉಳಿದವೆಲ್ಲ ಶೋಷಿತ ಜೀವಗಳಿಗೆ ಸಂಬಂಧಿಸಿದವೇ ಆಗಿವೆ. ಈ ಕೃತಿಯಲ್ಲಿ ಅವರ ಶಕ್ತಿ ಮತ್ತು ಮಿತಿಗಳೆರಡೂ ಸ್ಪಷ್ಟವಾಗಿ ಕಾಣುತ್ತವೆ. ಇದು ರಂಗರಾಜರ ಮೊದಲ ಕವನಸಂಕಲನವಾದರೂ ಕಾವ್ಯದ ನಡಿಗೆಯನ್ನು ಗಮನಿಸಿದರೆ ಕಾವ್ಯ ಕ್ಷೇತ್ರಕ್ಕೆ ಹೊಸಬರು ಅನಿಸುವುದಿಲ್ಲ. ಬದುಕನ್ನು ಗ್ರಹಿಸುವ ನೋಟದಲ್ಲಿ ಪ್ರಬುದ್ಧತೆ ಕಾಣುತ್ತದೆ. ಈ ಕವಿತೆಗಳ ಜಗತ್ತು ಯಾದಗಿರಿ ಜಿಲ್ಲೆಯ ಶಹಾಪುರದಿಂದ, ವಿಜಯಪುರ, ಕಲಬುರ್ಗಿ, ಧಾರವಾಡ, ಬಳ್ಳಾರಿ, ಶಿವಮೊಗ್ಗ ಮತ್ತು ಬೆಳಗಾವಿಯವರೆಗೆ ವ್ಯಾಪಿಸಿದೆ. ಅಂದರೆ ರಂಗರಾಜ ವನದುರ್ಗ ಅವರು ತಮ್ಮ ಬಾಲ್ಯದ ನೆನಪುಗಳನ್ನು, ವರ್ತಮಾನದ ಜೀವನದ ಅನುಭವ-ಅವಲೋಕನಗಳನ್ನೂ ಕಾವ್ಯವಾಗಿಸುತ್ತ, ಆ ಪ್ರಕ್ರಿಯೆಯಲ್ಲಿಯೇ ಪಲ್ಲಟಗೊಳ್ಳುತ್ತಿರುವ ಜೀವನ ವಿನ್ಯಾಸಗಳನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಈ ಕವಿತೆಗಳು ಕವಿಯ ವೈಯಕ್ತಿಕ ಕಾಣ್ಕೆಗಳನ್ನು ಮತ್ತು ಸಮಕಾಲೀನ ಜೀವನದ ಸಂಕೀರ್ಣ ರೂಪಕಗಳನ್ನೂ ಏಕಕಾಲದಲ್ಲಿ ಒಳಗೊಂಡು ನಮ್ಮ ಸಂವೇದನೆಗಳನ್ನು ಇನ್ನಷ್ಟು ಸೂಕ್ಷ್ಮಗೊಳಿಸುವ ಅನುಭವವನ್ನು ನೀಡುವಂತಿವೆ. ರಂಗರಾಜ ವನದುರ್ಗರ ಕವಿತೆಗಳ ಮುಖ್ಯ ಸ್ಥಾಯಿ ವಿಷಾದವಾಗಿರುವುದರಿಂದ ಅನೇಕ ಕವಿತೆಗಳು ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ.

ರಂಗರಾಜ ವನದುರ್ಗರ ಕಾವ್ಯ ಒಂದು ಚಿಂತನ ಪರಂಪರೆಯಲ್ಲಿ, ಒಂದು ಸಾಹಿತ್ಯ ಪರಂಪರೆಯಲ್ಲಿ ಮೂಡಿ ಬಂದಿದೆ. ಇದರ ಹಿಂದೆ ವಚನ ಸಾಹಿತ್ಯವಿದೆ, ಜನಪದ ಸಾಹಿತ್ಯವಿದೆ. ಕುವೆಂಪು, ಬೇಂದ್ರೆಯವರಿದ್ದಾರೆ. ಸಮಾನತೆಯ, ವೈಚಾರಿಕತೆಯ ಮತ್ತು ಮಾನವೀಯ ಸಮಾಜವೊಂದು ರೂಪಗೊಳ್ಳಬೇಕೆಂಬ ಹಂಬಲ ರಂಗರಾಜ ವನದುರ್ಗ ಅವರ ಕಾವ್ಯಭೂಮಿಕೆಯನ್ನು ರೂಪಿಸಿದೆ.
ರಂಗರಾಜರ ಕವಿತೆಗಳು ಅಸ್ವಸ್ಥ ಕವಿತೆಗಳಾಗಿವೆ. ಸಾಮಾಜಿಕ ಅಸಮಾನತೆಯನ್ನು ನೋಡಿ ರಂಗರಾಜ ಅಸ್ವಸ್ಥಗೊಳ್ಳುತ್ತಾರೆ. ಅದನ್ನೇ ಅವರು ತಮ್ಮ ಕವಿತೆಯಲ್ಲಿ ಹೇಳುತ್ತಾರೆ. ಅವರ ಎಲ್ಲ ಕವಿತೆಗಳಲ್ಲಿ ವಿದ್ರೋಹಕ್ಕಿಂತ ಹೆಚ್ಚು ವೇದನೆಯೇ ಸಹಜವಾಗಿ ಕಾಣಿಸುತ್ತದೆ.
ನರಿಮಾರಿ ನೋಡಿರುವ
ನಗರದ ಜನವೆಲ್ಲ
ತೋಳದ ಬಾಯಿಗೆ ಕುರಿಯಾದವೊ
ಗುಳೆಯೆದ್ದು ಹೊರಟಿರುವ
ಜೋಪಡಿ ಜೀವಗಳು
ಕತ್ತಾಲ ಮನೆಯಲ್ಲಿ ಕೆಂಪಾದವೊ ||

(ಕೆಂಪಾದವೊ….)
ಹೋರಾಟ ಶೋಷಿತ ಜೀವನದ ಇನ್ನೊಂದು ಅವಶ್ಯಕವಾದ ಕ್ರಿಯೆ. ರಂಗರಾಜ ವನದುರ್ಗರು ಕ್ರಾಂತಿಗೆ ತಯಾರಾಗಿದ್ದಾರೆ. ನಮ್ಮ ಚರಿತ್ರೆಯ ಕರಾಳ ಮುಖ ಕೆದುಕಿ ತೋರಿಸಲು ಕವಿ ಪ್ರಯತ್ನಿಸಿದ್ದಾರೆ. ಆದರೆ ವರ್ತಮಾನ ಗತಕ್ಕಿಂತಲೂ ಭೀಕರವಾಗಿ ನಮ್ಮೆದುರು ಕುಣಿಯುತ್ತಿದೆ.
ಹುಟ್ಟಿ ಬರುವೆವು ಮತ್ತೆ
ಹೊಲದ ಬದುವಿನೊಳಗೆ
ಒಡೆಯರ ಪಹಣಿ ಪತ್ರ ಹರಿದು
ಜೀತಗಾರರ ಹಾಯ ಗುರುತು ಹಿಡಿದು
||
(ಹುಟ್ಟಿ ಬರುವೆವು)
ವನದುರ್ಗರ ಕವಿತೆಗಳಲ್ಲಿ ವಾಸ್ತವತೆ ಇದೆ. ನೋವನ್ನು ಅನುಭವಿಸುವ ರಂಗರಾಜರ ಮನಸ್ಸು ಕನಸನ್ನು ಕಾಣುತ್ತದೆ. ಬದುಕಿನ ಸಂಕಟ, ನೋವು, ಅವಮಾನ, ಅಂತಂತ್ರಸ್ಥಿತಿಯನ್ನು ಅನುಭವಿಸಿಯೂ ತಮ್ಮೊಳಗಿನ ಭರವಸೆಯನ್ನು ಕಳೆದುಕೊಳ್ಳದ ಸಂಯಮದ ಕನಸ್ಸು ಇಲ್ಲಿದೆ.

ನಾಡಿನಲ್ಲಿರುವ ಅಸಮಾನತೆಯನ್ನು, ಅದರೊಂದಿಗೆ ಹೆಣೆದುಕೊಂಡಿರುವ ಬದುಕಿನ ವೈರುಧ್ಯಗಳನ್ನು ಕಂಡಿರುವುದು ಇಲ್ಲಿನ ರಚನೆಗಳಿಗೆ ಮುಖ್ಯವೆನಿಸಿದೆ. ದಲಿತರ ಜೀವನ ಅದೆಂತಹ ಜೀವನ? ಇಡೀ ಸಮಾಜವೇ ಅವರ ವೈರಿಯಾಗಿದೆ. ಅದು ಅವರನ್ನು ಬದುಕಿಸಲು ಅವಕಾಶ ನೀಡುತ್ತಿಲ್ಲ. ದಲಿತರ ಬದುಕನ್ನು ಸಮಾಜ ಎಲ್ಲ ರೀತಿಯಿಂದಲೂ ಮುರಿದು ಹಾಕಿದೆ.
ದಕ್ಕಬೇಕಿತ್ತು ಚೋಮನ ಭೂಮಿ
ಪಶ್ಚಿಮ ಘಟ್ಟದೊಳಗೆ
ಸಿಗಬೇಕಿತ್ತು ಸಾಕವ್ವನ ಕೋಳಿ
ಮೈಸೂರು ಮಾನಗರದೊಳಗೆ ||

(ನಮಸ್ಕಾರ)
ವ್ಯವಸ್ಥೆಯ ಬಗ್ಗೆ ವಿಪರೀತವಾದ ಅಸಹನೆಯನ್ನು ಈ ಕವಿತೆ ಕಟ್ಟಿಕೊಟ್ಟಿದೆ. ನಮ್ಮ ಕಾಲದ ಚರಿತ್ರೆಯನ್ನು ವಿವಿಧ ರೂಪಕಗಳ ಮೂಲಕ ಅತ್ಯಂತ ಗಂಭೀರವಾದ ಮತ್ತು ವಿಷಾದ ಮೂಲವಾದ ಚಿತ್ತಸ್ಥಿತಿಯಲ್ಲಿ ಗ್ರಹಿಸಿ ನಿರೂಪಿಸುವ ವನದುರ್ಗರ ಈ ಪ್ರಯತ್ನ ಮೆಚ್ಚುವಂಥದ್ದು. ವನದುರ್ಗರ ಕಾವ್ಯದಲ್ಲಿ ಮಾತನಾಡುವುದು ಒಬ್ಬ ವ್ಯಕ್ತಿಯಲ್ಲ, ಒಂದು ಸಮುದಾಯ. ಅದು ನೋವು-ನಲಿವಿಗೆ ಒಳಗಾದ ಅಂಚಿನ ಸಮುದಾಯವೆಂದು ಗುರುತಿಸಬಹುದು.
ಪ್ರೀತಿ ಮತ್ತು ಕ್ರಾಂತಿ ಬೇರೆ ಬೇರೆ ಅಲ್ಲ. ಪ್ರೀತಿ ಸಮಾನತೆಯ ಮೇಲೆ ನಿಂತದ್ದು; ಕ್ರಾಂತಿಯ ಆಶಯವೂ ಈ ಸಮಾನತೆಯನ್ನು ಹಂಬಲಿಸಿದ್ದು. ಆದರೆ ಶೋಷಣೆಯನ್ನು ವಿರೋಧಿಸಿದ್ದು. ಜಾತಿಪದ್ಧತಿ, ಲಿಂಗ ತಾರತಮ್ಯ, ಊಳಿಗಮಾನ್ಯ ಪದ್ಧತಿಗಳು ರೂಪಿಸಿದ ಕ್ರೂರ ವ್ಯವಸ್ಥೆಯ ಕೆಳಸ್ತರದಿಂದ ಬಂದಿರುವ ವನದುರ್ಗ, ಈ ವ್ಯವಸ್ಥೆಯ ಕರಾಳ ಮುಖಗಳನ್ನು ಕಂಡು ರೊಚ್ಚಿಗೇಳುವುದು ಅಸಹಜವೇನಲ್ಲ.
ಕತ್ತಿ ಕುಡುಗೋಲು
ಬಿಲ್ಲು ಬಾಣ ಬಂದೂಕು
ತೂರಿ ಬರುವ ತಲವಾರಗಳು
ನನ್ನ ಎದೆಗೂಡು ಕತ್ತರಿಸಲಿ
ಸುರಿವ ನೆತ್ತರಲಿ ನಿನ್ನ ಹೆಸರು ಬರೆಯುವೆ ||

(ಕೊನೆಯುಸಿರು)
ವನದುರ್ಗರ ಕವಿತೆಗಳಲ್ಲಿ ಪ್ರೀತಿಯ ಛಾಯೆಯೂ ಇದೆ. ಮೇಲ್ನೋಟಕ್ಕೆ ಅದು ಸರಳ ಅನಿಸಿದರೂ ಆಳದಲ್ಲಿ ಸ್ವೋಪಜ್ಞವಾದದ್ದು. ಇಡೀ ಸಮಾಜವನ್ನು ತನ್ನ ಬಾಹುಗಳಲ್ಲಿ ತಬ್ಬಿ ಮುನ್ನಡೆಸಿಕೊಂಡು ಹೋಗುವ ಅಗಾಧ ಪ್ರೀತಿಯೂ ರಂಗರಾಜ ವನದುರ್ಗರಲ್ಲಿದೆ. ಅದೇ ಈಗ ಎಲ್ಲರ ಜೀವರಕ್ಷೆ.

ರಂಗರಾಜರ ಕವಿತೆಗಳಲ್ಲಿ ಕಾವ್ಯದ ಸಾಧನ ಸಂಪತ್ತು ಮತ್ತು ಪರಿಕರಗಳು ಆದ ಪ್ರತಿಮೆ, ಸಂಕೇತ, ರೂಪಕಗಳು, ಜೀವಪರವಾದ ಧ್ವನಿ ವಿಶೇಷಗಳು ಹೇರಳವಾಗಿ ನಮಗೆ ಎದುರಾಗುತ್ತವೆ. ಚರಿತ್ರೆ, ಸೂರ್ಯ, ಭೂಮಿ, ಆಕಾಶಸತ್ತ್ವಗಳು, ಮನುಷ್ಯ ಸಂಬಂಧಗಳು, ಸಾಮಾಜಿಕ ಕಾಳಜಿಗಳು, ಪ್ರತಿಮೆ-ಪ್ರತೀಕಗಳು ಮೆರವಣಿಗೆಯೋಪಾದಿಯಲ್ಲಿ ಬರುತ್ತವೆ. ಭಾಷೆಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವ ಪರಿಯಲ್ಲಿ ಮತ್ತು ಲಯವಿನ್ಯಾಸದಲ್ಲಿ ಹೊಸತನ ಕಂಡುಬರುತ್ತದೆ. ಹೊಸ ಲಯವಿನ್ಯಾಸದ ಒಂದು ಮಾದರಿಯಾಗಿ ‘ನಾ ಯಾರ ಹಕ್ಕಿ’ ಕವಿತೆಯನ್ನು ನೋಡಬಹುದು.
ಭೂಮಿಯ ಬನದಾಗ| ಯವ್ವ
ಕಾಡಿನ ವನದಾಗ
ನಾ ಯಾರ ಹೂವ್ವ
ನೀನ ಹೇಳವ್ವ || ಗೆಜ್ಜೆ||

(ನಾ ಯಾರ ಹಕ್ಕಿ)
ಹೀಗೆ ಜಾನಪದ ಸಂವೇದನೆಯೊಂದನ್ನು ಕವಿ ಹೊಸ ಅರ್ಥದ ಸಾಧನವಾಗಿ ಬಳಸಿಕೊಂಡಿರುವ ರೀತಿ, ಲಯವಿನ್ಯಾಸ ಮೆಚ್ಚುಗೆಯಾಗುತ್ತದೆ. ಜಾನಪದ ಅರ್ಥದೊಂದಿಗೆ ‘ತವರೂರಿಗೆ’ ಇರುವ ಸಂಪರ್ಕ ಸಾಧನದ ಅರ್ಥವೂ ಸೇರಿ ಕವಿತೆ ಶ್ಲೇಷೆಯಲ್ಲಿ, ಪ್ರಕೃತಿ ಮತ್ತು ನೆಲದ ಬದುಕನ್ನು ಕೂಡಿಸುವ ಲಯದಲ್ಲಿ ಒಂದು ವಿಶಿಷ್ಟ ಅನುಭವವಾಗುತ್ತದೆ.

ಕೆಂಡದುಂಡೆಗಳೆಲ್ಲ
ಹಣ್ಣು ಹಂಪಲಾಗಿ
ಹೊಟ್ಟೆ ತುಂಬಲಿ ಹಸಿದ ಹಲವು ದಿನಕೆ
ಕಾಲಾಕಾಲಗಳೆಲ್ಲ
ಕರುಳ ಕಾಲುವೆಯಾಗಿ
ಹರಿದು ಸಾಗಲಿ ಕಡಲ ಒಡಲ ಅರಿಕೆ ||

(ಒಡಲ ಅರಿಕೆ)
ವನದುರ್ಗರ ಕಾವ್ಯ, ರೀತಿ ಪ್ರಧಾನವಾಗಿದೆ. ಅವರ ಕಾವ್ಯದಲ್ಲಿ ಅಂಗರ್ತತ ಲಯ ಇರುವುದರಿಂದ, ಕವಿತೆ ಓದುತ್ತ ಹೋದಂತೆ ಅವುಗಳ ಅರ್ಥವೂ ವಿಶಾಲವಾಗುತ್ತ ಹೋಗುತ್ತದೆ. ದುಃಖ, ಅವಮಾನ, ಅನ್ಯಾಯ ಇವುಗಳ ಚಿತ್ರಣ ಮಾಡುವುದಕ್ಕಿಂತ ಅವರ ಕಾವ್ಯ ಭವಿಷ್ಯತ್ತಿನ ಮೇಲೆ ಹೆಚ್ಚು ವಿಶ್ವಾಸವನ್ನಿರಿಸಿಕೊಂಡಿದ್ದು ಕಂಡುಬರುತ್ತದೆ.

ಸಂಕಲನದ ‘ಕೆಂಪಾದವೊ’, ‘ಸೂತಚರಿತ’, ‘ಹುಟ್ಟಿ ಬರುವೆವು’, ‘ಬರೆಯುತ್ತೇನೆ’, ‘ನಮಸ್ಕಾರ’, ‘ಕೊನೆಯುಸಿರು’, ‘ನಾ ಯಾರ ಹಕ್ಕಿ’ ಕವಿತೆಗಳಲ್ಲಿ ಸ್ಫುಟವಾಗುವ ವನದುರ್ಗರ ಪ್ರತಿಮಾ ನಿರ್ಮಾಣ ಸಾಮಥ್ರ್ಯ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಪ್ರಾಮಾಣಿಕತೆ, ಎಚ್ಚರಿಕೆಯಿಂದ ಮೈಗೂಡಿಸಿಕೊಂಡಿರುವ ಭಾಷಾಪ್ರಯೋಗದ ಹದ,ಬಿಗಿ-ಇತ್ಯಾದಿಗಳಿಂದ ಅವರ ಕಾವ್ಯಶಕ್ತಿಯ ಬಗೆಗೆ ಸಾಕಷ್ಟು ಭರವಸೆ ಹುಟ್ಟುತ್ತದೆ. ಕಾವ್ಯಬಂಧ ಸಡಿಲಾಗಿರುವ ಅನೇಕ ರಚನೆಗಳು ಈ ಸಂಕಲನದಲ್ಲಿವೆ. ರಂಗರಾಜ ವನದುರ್ಗರಿಗೆ ಮೂಲದ್ರವ್ಯ ಬೇಕಾದಷ್ಟಿದೆ. ಆದ್ದರಿಂದ ಅದನ್ನು ಸರಿಯಾಗಿ ಬಳಸಿಕೊಳ್ಳುವ ದಿಕ್ಕಿನಲ್ಲಿ ಅವರು ಯೋಚಿಸಬೇಕು. ಕನ್ನಡ ಸಾಹಿತ್ಯ ಪರಂಪರೆಯ ಹಲವು ಹಂತದ ಅನುರಣನಗಳು, ವನದುರ್ಗರ ಅಭಿವ್ಯಕ್ತಿಯೊಳಗೆ ಕೇಳಿಸುತ್ತವೆಯಾದರೂ, ಅಬ್ಬರವಿಲ್ಲದ ಒಂದು ಹಂತದಲ್ಲಿ ರೂಪುಗೊಂಡ ಈ ಕವಿತೆಗಳ ರಚನಾಕ್ರಮ ಮತ್ತು ಅವುಗಳ ಭಾಷೆಗೆ ಇರುವ ಹೊಸತನ ಮತ್ತು ಉದ್ದಕ್ಕೂ ಮಿಡಿಯುವ ಜನಪರ ಕಾಳಜಿಗಳು ಹಾಗೂ ವರ್ತಮಾನದ ವಾಸ್ತವಗಳಿಗೆ ಮುಖಾಮುಖಿಯಾಗುತ್ತಲೇ ಅವುಗಳನ್ನು ದಾಟುವ, ಪರ್ಯಾಯಗಳನ್ನು ಚಿಂತಿಸುವ ಕ್ರಮ ವನದುರ್ಗರ ಕಾವ್ಯ ಸಾಮಥ್ರ್ಯದ ವಿಶೇಷತೆಗಳಾಗಿವೆ.