ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬಾದೇವಿಯ ಮಡಿಲು-ಮುಂಬಯಿ

ಶೈಲಜಾ ಹೆಗಡೆ
ಇತ್ತೀಚಿನ ಬರಹಗಳು: ಶೈಲಜಾ ಹೆಗಡೆ (ಎಲ್ಲವನ್ನು ಓದಿ)

“ ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸೈ ನಮೋ ನಮಃ||”

ಮಾಯಾ ನಗರಿ. ವಾಣಿಜ್ಯ ನಗರಿ. ಯಾಂತ್ರಿಕ ನಗರಿ. ಭಾರತದ ಹೆಬ್ಬಾಗಿಲು. ಮೆಟ್ರೊ ಪೊಲಿಟನ್ ಸಿಟಿ ಮೊದಲಾದವು ಮುಂಬಯಿಯ ನಾಮವಿಶೇಷಗಳು. ಇವು ಮುಂಬಯಿ ನಗರದ ಹಿರಿಮೆಯನ್ನು ವೈಭವೀಕರಿಸಿವೆ. ಮಿನಿ ಭಾರತವೆಂದೂ ಈ ನಗರಿಯನ್ನು ಗುರುತಿಸಲಾಗುತ್ತದೆ. ಭಾರತದ ಪ್ರಮುಖ ನಗರಗಳಲ್ಲೊಂದಾದ ಇದು ತನ್ನ ವೈವಿಧ್ಯಮಯ ಸಂಸ್ಕøತಿಯಿಂದ ಶ್ರೇಷ್ಠ ನಗರಿಯೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಬಹುಭಾಷಿಕರ, ಬಹುಸಂಸ್ಕೄತಿಯ ಜನಾಂಗದಿಂದ ಕೂಡಿದ ಮುಂಬಯಿ ರೋಚಕವಾದ ಇತಿಹಾಸವನ್ನು ಹೊಂದಿದೆ.
ಸಪ್ತದ್ವೀಪಗಳಿಂದ ಕೂಡಿದ ಈ ನಾಡಿನ ಮೂಲ ನಿವಾಸಿಗಳು ಮೀನುಗಾರರು. ಇವರ ಅಧಿದೈವ ಮುಂಬಾದೇವಿ. ಆಕೆಯ ಕೃಪಾಕಟಾಕ್ಷವನ್ನು ಹೊಂದಿದ ನಾಡು ಮುಂಬಯಿ ಎಂದು ಪ್ರಸಿದ್ಧವಾಯಿತು. ಹದಿನೇಳನೆಯ ಶತಮಾನದಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡ ಮುಂಬಯಿಯನ್ನು ಬ್ರಿಟಿಷರು ಬೊಂಬೆ ಎಂದು ಹೆಸರಿಸಿದರು. ಇದು ಅವರ ಮುಖ್ಯ ವ್ಯಾಪಾರಿ ಕೇಂದ್ರವಾಯಿತು. ಪುನಃ ಇದು ಮುಂಬಯಿ ಆದದ್ದು, 1986ರಲ್ಲಿ. ಅರಬ್ಬೀ ಸಮುದ್ರದ ಮೇಲೆ ನಿಂತಿರುವ ಸುಂದರ ನಗರ ಮುಂಬಯಿ, ಕ್ರಿ.ಶ ಮೂರನೆಯ ಶತಮಾನದಲ್ಲಿ ಮೌರ್ಯರ ಶಾಸನದ ಅಡಿಯಲ್ಲಿತ್ತು ಎಂದು ಹೇಳಲಾಗಿದೆ. 1348ರಲ್ಲಿ ಹಿಂದೂ ಸಮ್ರಾಟರ ಅಧಿಕಾರದಲ್ಲಿದ್ದು, 1534ರಲ್ಲಿ ಪೋರ್ಚುಗೀಸ್, 1625ರಲ್ಲಿ ಡಚ್ಚರ ಆಡಳಿತಕ್ಕೆ ಇದು ಒಳಪಟ್ಟಿತು. 1661ರಲ್ಲಿ ಚಾಲ್ರ್ಸ್ ದ್ವಿತೀಯ ಅವನು ಮುಂಬಯಿಯನ್ನು ಹತ್ತು ಪೌಂಡ್ ಚಿನ್ನಕ್ಕೆ ಬಳುವಳಿಯಾಗಿ ಪಡೆದುಕೊಂಡು, 1668ರಲ್ಲಿ ವ್ಯಾಪಾರಕ್ಕೆಂದು ಬಂದ ಈಸ್ಟ್ ಇಂಡಿಯಾ ಕಂಪನಿಗೆ ಉಚಿತವಾಗಿ ಕೊಟ್ಟನು. ಸ್ವಾತಂತ್ರ್ಯಾನಂತರ 1960ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ವಿಭಜನೆಯಾಗಿ, ಸಪ್ತದ್ವೀಪವು ಒಂದು ಮಹಾದ್ವೀಪವಾಗಿ ಪರಿಣಮಿಸಿತು. ಮುಂಬಯಿ ಮಹಾರಾಷ್ಟ್ರದ ರಾಜಧಾನಿಯಾಯಿತು. 1853ರಲ್ಲಿಯೇ ಮುಂಬೈ ನಗರದಿಂದ ಮೊದಲ ರೇಲ್ವೆ ಸಂಪರ್ಕ ಪ್ರಾರಂಭವಾಯಿತು. ಇಲ್ಲಿಯ ಇಂದಿನ ಜನಸಂಖ್ಯೆ 1.84 ಕೋಟಿಗಿಂತ ಅಧಿಕ.
ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿನಿಧಿಸುವ ಎಲಿಫಂಟಾ ಕೇವ್, ಜವಾಹರ್ ಆರ್ಟ್ ಗ್ಯಾಲರಿ, ಛತ್ರಪತಿ ಶಿವಾಜಿ ಟರ್ಮಿನಸ್ ಅಲ್ಲದೆ, ಪ್ರವಾಸಿ ಸ್ಥಳಗಳಾದ ಬಾಂದ್ರಾ ವರ್ಲಿ ಸೀಲಿಂಕ್, ಗೇಟ್ ವೇ ಆಫ್ ಇಂಡಿಯಾ, ತಾಜಮಹಲ್ ಪೆಲೇಸ್ ಹೊಟೆಲ್, ಬಿಲ್ಡಿಂಗ್ ಎಟ್ ನರಿಮನ್ ಪಾಯಿಂಟ್, ಸೌತ್ ಬೊವೇಸ್ ಸ್ಕೈಲೈನ್, ತಾರಾಪೊರಾವಾಲಾ ವಿಕ್ಟೋರಿಯಾ, ಹುತಾತ್ಮ ಚೌಕ್, ಕಮಲಾ ನೆಹರೂ ಚೌಕ್, ಹಾಜೀ ಅಲೀ ದರ್ಗಾ, ನೆಹರು ಪ್ಲೆನೆಟೋರಿಯಮ್, ಸಂಜಯಗಾಂಧಿ ನ್ಯಾಷನಲ್ ಪಾರ್ಕ್ ಮೊದಲಾದವುಗಳು ಪ್ರವಾಸಿಗರನ್ನೂ ವಿದೇಶೀಯರನ್ನೂ ನಗರದೆಡೆ ಆಕರ್ಷಿಸುವಂತೆ ಮಾಡಿವೆ.

mumbai - collage.. | Dream city, City, Mumbai metro

ಪಶ್ಚಿಮ ರೇಲ್ವೆ ಹಾಗೂ ಮಧ್ಯ ರೇಲ್ವೆ ನಗರದ ಜೀವನಾಡಿ ಎನಿಸಿವೆ.

ಹೆಚ್ಚಿನ ಜನರು ತಮ್ಮ ದಿನ ನಿತ್ಯದ ಉದ್ಯೋಗಕ್ಕಾಗಿ ರೇಲ್ವೆ ಪ್ರಯಾಣವನ್ನು ಅವಲಂಬಿಸಿರುತ್ತಾರೆ. ಪ್ರತಿದಿನ ನೂರಾರು ಕಿಲೋಮೀಟರ್ ದೂರದವರೆಗೆ ಪ್ರಯಾಣಿಸುವ ಕಿಕ್ಕಿರಿದ ರೇಲ್ವೆ ಪ್ರಯಾಣಿಕರನ್ನು ನೋಡುವುದು ಕಣ್ಣಿಗೆ ಹಬ್ಬವೆನಿಸುತ್ತದೆ. ನಗರದ ಜನರಿಗೆ ಇದೊಂದು ಸಹಜ ಕ್ರಿಯೆ. ಪ್ರಯಾಣಿಸುತ್ತಲೇ ಅಧ್ಯಯನ ಮಾಡುವವರು, ಭಜನೆ ಮಾಡುವವರು, ವಸ್ತುಗಳನ್ನು ಮಾರಾಟ ಮಾಡುವವರು, ತರಕಾರಿಗಳನ್ನು ಕತ್ತರಿಸಿ ಸಿದ್ಧಗೊಳಿಸುವವರು, ಓದುತ್ತಿರುವ ಪರೀಕ್ಷಾರ್ಥಿಗಳು, ಹೊತ್ತು ತಂದ ಬುತ್ತಿ ತಿನ್ನುವವರು ಎಲ್ಲವೂ ನಿತ್ಯದ ದಿನಚರಿಗಳು. ಸಹಪ್ರಯಾಣಿಕರೆಲ್ಲರೂ ಸಮಾನ ಶ್ರಮಿಗಳು, ಭೇದವರಿಯದವರು, ಸಮಾನ ಗುಣಧರ್ಮಿಗಳು. ಬಹುಭಾಷಿಕ, ಬಹುಸಂಸ್ಕøತಿಯ ಜನರು, ಆದರೆ ವಿವಿಧತೆಯಲ್ಲಿ ಏಕತೆ ಉಳ್ಳವರು. ಸಹಕಾರ, ಸೌಹಾರ್ದ ಇವರ ಜೀವನ ಮಂತ್ರ. ಇಲ್ಲಿಯ ಒಂದನ್ನೊಂದು ಹಿಂಬಾಲಿಸಿ ಸಾಗುವ ಬಸ್ಸುಗಳು, ಮಾರ್ಕೆಟ್‍ಗಳು, ಸಿನಿಮಾ ಮಂದಿರಗಳು, ರೇಲ್ವೆ ಹಾಗೂ ಬಸ್ ಸ್ಥಾನಕಗಳು ಸದಾ ಜನಜಂಗುಳಿಯಿಂದ ಕೂಡಿರುತ್ತವೆ. ಹಾಗಾಗಿ, ಮುಂಬಯಿ ನಿದ್ರಿಸದ ನಗರಿ ಎಂಬ ಖ್ಯಾತಿಯನ್ನೂ ಗಳಿಸಿದೆ. ಎತ್ತರವಾದ ಗಗನಚುಂಬಿ ಕಟ್ಟಡಗಳು ಹಾಗೂ ಹರುಕು ಮುರುಕಾದ ಜೋಪಡಾಗಳು ಮುಂಬಯಿ ನಗರ ಜೀವನದ ಎರಡು ಮುಖ್ಯ ವಾಹಿನಿಗಳು. ಎರಡೂ ಗುಂಪಿನ ಜನರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂಬಯಿ ನಗರಿ ಹೇರಳವಾದ ಅವಕಾಶವನ್ನು ಕಲ್ಪಿಸಿದೆ. ಏಷ್ಯಾದ ಅತಿದೊಡ್ಡ ಸ್ಲಮ್ ದಾರಾವಿ, ಹಲವಾರು ನಿರ್ಗತಿಕ ಕುಟುಂಬಗಳಿಗೆ ಆಶ್ರಯ ನೀಡಿದೆ.

Mumba Aai Mumba Devi Temple Mumbai | Sacred art, Hindu art, Art


ಸರ್ವಭಾಷಾಮಯೀ ಸರಸ್ವತಿ ಎಂಬಂತೆ, ಮುಂಬಯಿಯಲ್ಲಿ ವಾಸಿಸುವ ಎಲ್ಲ ಭಾಷೆಗಳ ಜನರೂ ಸಮಾನತೆಯಿಂದ ವರ್ತಿಸುತ್ತಾರೆ. ಯಾವುದೇ ಹೊಸ ಭಾಷೆಯನ್ನು ಕಲಿಯಲು ಮುಂಬಯಿ ನಗರದಲ್ಲಿರುವಷ್ಟು ಅನುಕೂಲತೆ ಬೇರೊಂದೆಡೆ ಇಲ್ಲ ಎಂದರೆ ಅತಿಶಯೋಕ್ತಿ ಎನಿಸಲಾರದು. ಇಂಗ್ಲೀಷ್, ಹಿಂದಿ, ಮರಾಠಿ, ಕನ್ನಡ, ತೆಲುಗು, ತಮಿಳು, ಗುಜರಾತಿ, ತುಳು ಹೀಗೆ ಹಲವು ಭಾಷೆಗಳನ್ನಾಡುವ ಜನರು ಇಲ್ಲಿ ಸಿಗುತ್ತಾರೆ. ಇಲ್ಲಿಯ ಭಾಷೆ ಭಾಷೆಗಳ ನಡುವಿನ ಸಾಹಿತ್ಯಕ ಸಂಬಂಧವೂ ಗಾಢವಾಗಿದೆ. ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಮುಂಬಯಿ ವಿಶ್ವ ವಿದ್ಯಾಲಯ ಪ್ರಮುಖವಾದುದು. ಅನೇಕ ಭಾಷೆಗಳ ಸಾಹಿತ್ಯಕ ಅಧ್ಯಯನಕ್ಕೆ ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಹೇರಳ ಅವಕಾಶಗಳಿವೆ. ಭಾಷೆ ಭಾಷೆಗಳ ನಡುವಿನ ಪರಸ್ಪರ ಕೊಡು-ಕೊಳ್ಳುವಿಕೆ ಧನಾತ್ಮಕವಾಗಿದೆ. ಸುನಾಮಿ, ಬಾಂಬ್ ಸ್ಫೋಟ ಮೊದಲಾದ ವಿಷಮ ಪರಿಸ್ಥಿತಿಗಳು ಎದುರಾದಾಗ, ಮುಂಬಯಿ ಅವುಗಳನ್ನು ಎದುರಿಸುವ ರೀತಿ ವಿಸ್ಮಯಕಾರಿ. ಕಡಿಮೆ ಸಮಯದಲ್ಲಿ ನಗರಿ ತನ್ನ ಪೂರ್ವದ ಸ್ಥಿತಿಗೆ ಬರುವದು ಇಲ್ಲಿಯ ವಿಶಿಷ್ಟತೆ. ಎಲ್ಲವನ್ನೂ ಮರೆತು ಜನರು ತಮ್ಮ ಕರ್ತವ್ಯ ಪಾಲನೆಯತ್ತ ಸಾಗುತ್ತಾರೆ.‘ಮಾನವ ಜಾತಿ ತಾನೊಂದೆ ವಲಂ’ ಎಂಬ ಕವಿ ಆದಿಪಂಪನ ನುಡಿಯಂತೆ, ಜಾತಿ-ಮತ-ಪಂಥಗಳನ್ನು ಮೀರಿ ಮಾನವೀಯತೆಯನ್ನು ಮೆರೆಯುತ್ತಾರೆ. ಹಬ್ಬ ಹರಿದಿನಗಳಲ್ಲಿ ಜನರು ಒಂದಾಗಿ ನಲಿಯುತ್ತಾರೆ. ಗಣೇಶ ಚತುರ್ಥಿ, ಈದ್, ರಮಜಾನ್, ಕ್ರಿಸ್‍ಮಸ್, ದೀಪಾವಳಿ ಮೊದಲಾದ ಉತ್ಸವಗಳು ಸಾಮೂಹಿಕವಾಗಿ ಸಂಭ್ರಮದಿಂದ ನಡೆಯುತ್ತವೆ. ಒಮ್ಮೆ ಮುಂಬಯಿ ನಗರ ಜೀವನದ ಆಕರ್ಷಣೆಗೆ ಒಳಗಾದ ವ್ಯಕ್ತಿ ಈ ನಗರವನ್ನು ತೊರೆಯಲು ಇಷ್ಟಪಡಲಾರ. ಅನೇಕ ದೊಡ್ಡ ದೊಡ್ಡ ಕೈಗಾರಿಕೆಗಳ, ಹಲವು ಮಿನಿ ಕೈಗಾರಿಕೆಗಳ ತವರೂರಾದ ಮುಂಬಯಿಗೆ ಉದ್ಯೋಗಸ್ಥರಾಗಿ ಬರುವವರು ಅಸಂಖ್ಯಾತ. ಹಾಗಾಗಿ, ಮುಂಬಾದೇವಿಯ ಮಡಿಲು ಎಂದೂ ಬರಿದಾಗದು. ಸರ್ವರಿಗೂ ಅವಳ ಅಕ್ಷಯ ಕೃಪಾ ಕಟಾಕ್ಷ ಸದಾ ಲಭಿಸಲಿ.