ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುನ್ನೆಲೆಯ ಕೊರೊನಾ ವಾರಿಯರ್ಸ್ ಪೋಲಿಸರಿಗೆ ಧನ್ಯವಾದಗಳು

ಪೊಲೀಸ್ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮುನ್ನೆಲೆಯ ಕೊರೊನಾ ವಾರಿಯರ್ಸ್ ಪೋಲಿಸರಿಗೆ ಧನ್ಯವಾದಗಳು.
ಸುಮಾ ವೀಣಾ

ಮುನ್ನೆಲೆಯ ಕೊರೊನಾ ವಾರಿಯರ್ಸ್ ಪೋಲಿಸರಿಗೆ ಧನ್ಯವಾದಗಳು. ‘ಪೋಲಿಸ್ ಹುತಾತ್ಮ’ರ ದಿನದ ಈ ಸಂದರ್ಭದಲ್ಲಿ ಪೋಲಿಸರನ್ನು ಅವರ ಕರ್ತವ್ಯವನ್ನು ನೆನಪಿಸಿಕೊಳ್ಳುವ ಚಿಕ್ಕಪ್ರಯತ್ನ“ಮನೆಗೆದ್ದು ಮಾರುಗೆಲ್ಲು” ಅನ್ನುತ್ತಾರೆ. ಅದರೆ ಮನೆಯನ್ನು ಬಿಟ್ಟು ಸಮಾಜದ ಬಗ್ಗೆ ಯೋಚನೆ ಮಾಡುವವರು ಪೋಲಿಸಿನವರು. ನಮ್ಮ ರಾಷ್ಟ್ರೀಯ ಲಾಂಛನದ ಕಣ್ಣಿಗೆ ಕಾಣಿಸದ ನಾಲ್ಕನೆಯ ಸಿಂಹಕ್ಕೆ ಪೋಲೀಸರನ್ನು ಹೋಲಿಸುತ್ತಾರೆ.

1959 ಅಕ್ಟೋಬರ್ 21 ರಂದು ಚೀನಾ ಗಡಿಭಾಗದ ಹಾಟ್ ಸ್ಟ್ರಿಗ್ ಪೋಸ್ಟ್ ಹತ್ತಿರ ಸಿಆರ್ಪಿಎಫ್ ಡಿವೈಸ್ಪಿ ಕರಣ್ ಸಿಂಗ್ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಯವರು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಸೈನಿಕರಿಂದ ಏಕಾಏಕಿ ದಾಳಿಯಾಗುತ್ತದೆ. ಆ ಹೋರಾಟದಲ್ಲಿ ಪ್ರಾಣ ತೆತ್ತ ಹತ್ತು ಭಾರತೀಯ ಪೋಲೀಸ್ ಯೋಧರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 21ರಂದು ದೇಶವ್ಯಾಪಿ ಹುತಾತ್ಮರ ದಿನವನ್ನು ಆಚರಣೆ ಮಾಡಲಾಗುತ್ತದೆ.

ಮನರಂಜನೆಯ ಉದ್ದೇಶದಿಂದ ಸಿನೆಮಾ, ಧಾರಾವಾಹಿಗಳಲ್ಲಿ ತೋರಿಸಿದಂತೆ ನೈಜವಾಗಿ ಪೋಲಿಸರು ಇರಲಾರರು! ಸೌಜನ್ಯಶೀಲರಾಗಿರುತ್ತಾರೆ . ಜನಸ್ನೇಹಿ ಪೋಲಿಸರಾಗಿರುತ್ತಾರೆ. ಈ ಪರಿಭಾಷೆ ಈಗ ಅತ್ಯಂತ ಪ್ರಸ್ತುತ ಅನ್ನಿಸುತ್ತದೆ. ಪೋಲಿಸರು ವಸ್ತುತಃ ಒತ್ತಡದ ಜೀವನವನ್ನು ನಿರ್ವಹಿಸುವವರು. ಇಲ್ಲಿಯೂ ಸಂವೇದನೆಗಳಿವೆ,ತಲ್ಲಣಗಳಿವೆ. ವೃತ್ತಿ ಮತ್ತು ಕುಟುಂಬ ಎರಡರಲ್ಲಿ ಇವರುಗಳು ನಿರಂತರ ಸಂಘರ್ಷವನ್ನು ಎದುರಿಸುತ್ತಿರುತ್ತಾರೆ. ಕರ್ತವ್ಯ ಹಾಗು ಜವಾಬ್ದಾರಿಗಳ ನಡುವಿನ ಸೂಕ್ಷ್ಮ ಮರೆಯಾಗಿ ಎದುರಾದ ತಲ್ಲಣಗಳಲ್ಲಿ ಭಾವೋದ್ವೇಗದಲ್ಲಿ ಇವರು ಇರಬೇಕಾಗುತ್ತದೆ.

ಕೊರೊನಾ ಜಗತ್ತಿಗೆ ಕಾಲಿರಿಸಿದಾಗಿನಿಂದ ಪೋಲಿಸರ ಕರ್ತವ್ಯಸ ಸ್ವರೂಪವೆ ಬದಲಾಗಿ ಹೋಗಿದೆ. ಕಾನೂನು ಪರಿಭಾಷೆಗಳನ್ನು ಉಪಯೋಗಿಸುವುದಕ್ಕೂ ಮೊದಲು ಮಾಸ್ಕ್, ಸ್ಯಾನಿಟೈಜರ್ ಮೊದಲಾದ ಪದಗಳನ್ನು ಬಳಸಬೇಕಿದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮೊದಲಿಗೆ ಹೆಚ್ಚು ಸೋಂಕು ಪೋಲೀಸಿನವರಲ್ಲಿಯೇ ಕಂಡು ಬಂದು ಸಮಾಜದ ಅವಜ್ಞೆಗೆ ಗುರಿಯಾದವರು ಇವರುಗಳೆ.ಅದರಲ್ಲಿಯೂ ಸುಶಿಕ್ಷಿತ ಸಮಾಜವೆ ಇವರನ್ನು ನಿರ್ಲಕ್ಷ ಮಾಡಿದ ಉದಾಹರಣೆಗಳಿವೆ.

ಸೋಂಕು ಇವರುಗಳಲ್ಲಿ ಹೆಚ್ಚಾದಂತೆ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪೋಲಿಸರ ಉದಾಹರಣೆಗಳು ನಮ್ಮಲ್ಲಿವೆ. ಇಂಥ ಸಂದಿಗ್ಧತೆಯಲ್ಲಿ ಪೋಲೀಸ್ ಇಲಾಖೆ ತನ್ನ ಸಿಬ್ಬಂದಿವರ್ಗಕ್ಕೆ ತೋರಿದ ಅಸ್ಥೆ ಜನಮನ್ನಣೆಗೆ ಪಾತ್ರವಾಗಿದೆ.

ಕೊರೊನಾ ಸಂದರ್ಭದಲ್ಲಿ ಮುನ್ನೆಲೆಯಲ್ಲಿ ನಿರಂತರ ಕರ್ತವ್ಯ ನಿರ್ವಹಿಸುತ್ತಿರುವವರು, ನಿರಾಶ್ರಿತರನ್ನು , ಕಾರ್ಮಿಕರನ್ನು ಸೂಕ್ತ ಸ್ಥಳಾಂತರ ಮಾಡುವಲ್ಲಿ ಅವರ ಅನ್ನಾಹಾರಾದಿಗಳಿಂದ, ಪ್ರಯಾಣದವರೆಗೆ ಜವಾಬ್ದಾರಿ ತೆಗೆದುಕೊಂಡವರು ಪೋಲಿಸಿನವರೆ. ಲಾಕ್ಡೌನ್ ಆಯಿತು, ಕಾರ್ಮಿಕರ ವಲಸೆ ಆಯಿತು, ಉದ್ಯಮಗಳು ನೆಲಕಚ್ಚಿದವು , ತಮ್ಮ ನೆಲವನ್ನು ಬಿಟ್ಟು ನಗರವಾಸಿಗಳಾದವರು ಮತ್ತೆ ತಮ್ಮೂರುಗಳಿಗೆ ಹಿಂದಿರುಗಿದರು ಈ ಸಂದರ್ಭದಲ್ಲಿ ಅಪರಾಧ ಪ್ರಕರಣಗಳು ಕೊಲೆ, ದರೋಡೆ, ಜೂಜು ಮುಂತಾದವುಗಳು ಹೆಚ್ಚಾಗುತ್ತಿವೆ ಜೊತೆಗೆ ಸೈಬರ್ ಕ್ರೈಂಗಳು ಕೂಡ ಇವುಗಳು ಪೋಲೀಸರ ಒತ್ತಡವನ್ನು ಹೆಚ್ಚಿಸಿವೆ ಎನ್ನಬಹುದು.

ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸಬೇಕು ಎಂದು ನಾಗರಿಕ ಸಮಾಜ ಯೋಚಿಸಿದರೆ ಹಬ್ಬಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೇಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು? ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು? ಎಂಬುದಾಗಿ ಯೋಚಿಸುವವರು ಪೋಲಿಸ್ ಇಲಾಖೆಯವರು. ನಾಗರಿಕ ಸಮಾಜ ಸುಖನಿದ್ರೆ,ಸವಿನಿದ್ರೆಯಲ್ಲಿ ಇರುವಾಗ ತಲೆಕೆಡಿಸಿಕೊಂಡು ಗಸ್ತು ತಿರುಗುವ ಪೋಲಿಸ್ ಸಮುದಾಯಕ್ಕೆ ನಾಗರಿಕರ ಪ್ರೀತಿ ಪೂರ್ವಕಗೌರವ ಸಲ್ಲಲೇಬೇಕು.ಅದರಲ್ಲೂ ಅನ್ನ, ಅಕ್ಷರ, ಆಶ್ರಯ ನೀಡಿರುವ ನನ್ನಂಥವರಿಗೆ ಇಲಾಖೆ ಅಭಿವಂದ್ಯವೇ ಹೌದು!