ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೃಗಗಳ ನಡುವೆ

ಎಂ.ಜಿ. ಶುಭ ಮಂಗಳ
ಇತ್ತೀಚಿನ ಬರಹಗಳು: ಎಂ.ಜಿ. ಶುಭ ಮಂಗಳ (ಎಲ್ಲವನ್ನು ಓದಿ)

“ರಾಮಜನ್ಮ ಭೂಮಿ-ಬಾಬ್ರಿ ಮಸೀದಿ” ವಿಷಯ ಹೇಗೆ ಹೇಳಬೇಕೋ ಯೋಚಿಸುತ್ತಿದ್ದಾನೆ ರವೀಂದ್ರ. ಈ ವಿಷಯದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ. ಯಾರು ಹೇಗೆ ಸ್ಪಂದಿಸುವರೋ ಹೇಳುವುದು ಕಷ್ಟ. ಯಾವುದಕ್ಕೂ ಕಾಂತಮ್ಮನ ಜಾತಿ, ಧರ್ಮ ತಿಳಿದುಕೊಂಡರೆ, ಅದಕ್ಕೆ ಅನುಗುಣವಾಗಿ ಹೇಳಬಹುದು ಎಂದು ಯೋಚಿಸಿದ ರವೀಂದ್ರ. “

“ಮೃಗಗಳ ನಡುವೆ” ಕಥೆಯಿಂದ

ಗೋಡೆ ಮೇಲಿದ್ದ ಮ್ಯೂಸಿಕಲ್ ಕ್ಲಾಕ್‍ನಿಂದ ಸಣ್ಣಗೆ ಸಂಗೀತ ಕೇಳಿಸಿತು. ಅದುವರೆಗೂ ನಿಶ್ಯಬ್ದವಾಗಿ ಫೈಲ್ ನೋಡುವುದರಲ್ಲಿ ಮಗ್ನನಾಗಿದ್ದ ರವೀಂದ್ರ ಗಡಿಯಾರದತ್ತ ನೋಡಿದ, ಸಂಜೆ ಐದು ಗಂಟೆ. ಬೆಳಗಿನಿಂದ ಅವಿಶ್ರಾಂತವಾಗಿ ಕಚೇರಿ ಕೆಲಸದಲ್ಲಿ ತೊಡಗಿದ್ದ ರವೀಂದ್ರ ಊಟ ಕೂಡ ಮಾಡಿರಲಿಲ್ಲ. ಈಗ ತಾಳ್ಮೆಗೆಟ್ಟು ಫೈಲ್‍ಗಳನ್ನು ಜೋಡಿಸಿ, ಬೈಕ್ ಸ್ಟಾರ್ಟ್ ಮಾಡಿ ಮನೆಗೆ ಹೊರಟ. ಅರ್ಧ ಗಂಟೆಯಲ್ಲಿ ಟ್ರಾಫಿಕ್ ಜಯಿಸಿ ಮನೆಗೆ ತಲುಪಿದ. ಹತ್ತು ಕಿಲೋಮೀಟರ್ ಕೂಡ ಆಗದ ಆಫೀಸಿಗೆ ಹೋಗಿಬರಲು ಒಂದು ಗಂಟೆ ಹಿಡಿಯುತ್ತದೆ! ಸ್ನಾನ ಮುಗಿಸಿ ನ್ಯೂಸ್ ಪೇಪರ್ ಓದುತ್ತ ಅಷ್ಟು ಹೊತ್ತಿಗಾಗಲೇ ಬರಬೇಕಿದ್ದ ಅಡುಗೆಯ ಕಾಂತಮ್ಮನಿಗಾಗಿ ಕಾಯುತ್ತ ಕುಳಿತ. ಹೊಟ್ಟೆ ಚುರುಗುಟ್ಟುತ್ತಿದೆ. ಐದು ನಿಮಿಷ ನ್ಯೂಸ್ ಪೇಪರ್ ತಿರುವಿ ಹಾಕಿ, ರಸ್ತೆಯತ್ತ ನೋಡಿದ.
ಸ್ವಲ್ಪ ದೂರದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತ ಬರುತ್ತಿದ್ದ ಕಾಂತಮ್ಮನನ್ನು ಕಂಡು ರವೀಂದ್ರನಿಗೆ ಸಮಾಧಾನವಾಯಿತು. ಮೊಣಕಾಲು ನೋವಿಗೆ ಆಪರೇಷನ್ ಮಾಡಿಸಿಕೊಳ್ಳುವಂತೆ ಎಷ್ಟು ಬಾರಿ ಹೇಳಿದರೂ “ಇಬ್ಬರೂ ಮಂಚ ಇಡಿದ್ರೆ ನನಗ್ಯಾರು ಮಾಡ್ತಾರೆ ಸಾಮೀ, ಮಂಚದಲ್ಲಿಯೇ ಮಲಗಿರೋ ನನ್ನ ರಂಗಯ್ಯನ್ನ ಯಾರ್ ನೋಡ್ಕೊಂತಾರೆ?” ಎನ್ನುತ್ತಾಳೆ. ಒಂದು ಕಾಲದಲ್ಲಿ ಚೆನ್ನಾಗಿ ಬದುಕಿದ್ದ ಕುಟುಂಬ, ಅವಳ ಗಂಡ ರಂಗಯ್ಯ ಹೈದರಾಬಾದ್ ಆಲ್ವಿನ್ ಕಂಪನಿಯಲ್ಲಿ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ. ಐವತ್ತು ವರ್ಷಕ್ಕೇ ಪಕ್ಷವಾತ ಬಡಿದು ಮೂಲೆ ಹಿಡಿದಿದ್ದಾನೆ. ಚಿಕಿತ್ಸೆಗಾಗಿ ಕಂಪೆನಿ ನೀಡಿದ ಹಣವನ್ನು ಮಗ ವ್ಯಾಪಾರದ ಮೇಲೆ ಸುರಿದು ಹೆತ್ತವರಿಗೆ ಬರಿಗೈ ಮಾಡಿದ. ವ್ಯಾಪಾರ ಕೈ ಹಿಡಿಯಲಿಲ್ಲ. ಸಾಲ ನೀಡಿದವರ ಒತ್ತಡ ತಾಳಲಾರದೆ ಮಗ ಬೊಂಬಾಯಿ ಸೇರಿದ. ಕೆಲಸಕ್ಕೆ ಸೇರಿ ಅಲ್ಲಿಯ ಹುಡುಗಿಯನ್ನು ಮದುವೆಯಾದ. ಆಸರೆಯಾಗುತ್ತಾನೆಂದುಕೊಂಡಿದ್ದ ಮಗ, ಯಾರಿಗೂ ತಿಳಿಯದಂತೆ ಕಳ್ಳನಂತೆ ಹಬ್ಬಹರಿದಿನಗಳಿಗೆ ಮಾತ್ರ ಬಂದುಹೋಗುತ್ತಿದ್ದ. ಕ್ರಮೇಣ ಹೆಂಡತಿಯ ಮಾತಿಗೆ ಕಟ್ಟುಬಿದ್ದು ಬರುವುದನ್ನು ಪೂರ್ತಿ ನಿಲ್ಲಿಸಿದ. ಅದುವರೆಗೂ ಹೊರಗೆ ಕಾಲಿಡದ ಕಾಂತಮ್ಮ, ಕುಟುಂಬದ ಹೊಣೆ ತನ್ನ ಮೇಲೆ ಹೊತ್ತು, ಹತ್ತಾರು ಮನೆಗಳಲ್ಲಿ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದಾಳೆ.
“ಷಮಿಸಿ ಸಾಮೀ.. ಇವತ್ತು ತುಂಬಾ ಒತ್ತಾಯ್ತು” ಕಾಂತಮ್ಮ ಹೇಳಿದಾಗ ಯೋಚನೆಯಲ್ಲಿ ಮುಳುಗಿದ್ದ ರವೀಂದ್ರ ತಕ್ಷಣ ಅವಳತ್ತ ನೋಡಿ, “ಅದೇ.. ಇನ್ನೂ ಯಾಕೆ ಬರಲಿಲ್ಲ ಅಂತ ನೋಡುತ್ತಿದ್ದೆ, ರಂಗಯ್ಯ ಚೆನ್ನಾಗಿದ್ದಾನಾ?”
“ಊಂ, ನಮ್ಮ ರಂಗಯ್ಯ ಅಂಬಲಿ ಬೇಕೂಂದ, ಕಾಯಿಸೋದು ತಡ ಆಯ್ತು.”
“ತುಂಬಾ ಹಸಿವಾಗುತ್ತಿದೆ, ಬೇಗ ಉಪ್ಪಿಟ್ಟು ಮಾಡಿಬಿಡು?”
ಹದಿನೈದು ನಿಮಿಷದಲ್ಲಿ ಬಿಸಿ ಬಿಸಿ ಉಪ್ಪಿಟ್ಟು ಕೊಟ್ಟಳು ಕಾಂತಮ್ಮ, “ನೀನೂ ತಗೋ, ಬೆಳಗ್ಗೆಯಿಂದ ಏನಾದರೂ ತಿಂದಿದ್ದೀಯೋ, ಇಲ್ಲವೋ! ನಿನ್ನ ಗಂಡನಿಗೆ ಕೊಡುವಾಗ ಇರುವ ಶ್ರದ್ಧೆ ನೀನು ತಿನ್ನುವಾಗ ಇರುವುದಿಲ್ಲ ನಿನಗೆ!” ಪ್ಲೇಟ್ ತೆಗೆದುಕೊಳ್ಳುತ್ತ ಹೇಳಿದ ರವೀಂದ್ರ. ರಂಗಯ್ಯನಿಗೆ ಇಟ್ಟುಕೊಂಡು ತಾನು ಸ್ವಲ್ಪ ಉಪ್ಪಿಟ್ಟು ತಿಂದ ಶಾಸ್ತ್ರ ಮುಗಿಸಿದಳು.
“ಆ ಸ್ವಲ್ಪ ತಿಂದರೆಷ್ಟು, ಬಿಟ್ಟರೆಷ್ಟು ಹೊಟ್ಟೆ ತುಂಬಾ ತಿನ್ನಬಾರದಾ, ಅಡುಗೆ ಆದ ಮೇಲೆ ರಂಗಯ್ಯನಿಗೆ ತೆಗೆದುಕೊಂಡು ಹೋಗುವಿಯಂತೆ” ಹೇಳಿದ ರವೀಂದ್ರ.
“ಅಂಗಲ್ಲ ಸಾಮಿ, ರಂಗಯ್ಯನಿಗೆ ಉಪ್ಪಿಟ್ಟು ಶ್ಯಾನೆ ಇಷ್ಟ. ಅವನು ಚೆನ್ನಾಗಿದ್ದಾಗ ನನ್ನನ್ನು ಬಿಟ್ಟು ಎಲ್ಲೂ ತಿಂತಾ ಇರ್ಲಿಲ್ಲ, ಒಂದ್ ವ್ಯಾಳೆ ತಿಂದರೂ ನನಗೂ ತಂದ್ಕೊಡ್ತಾಯಿದ್ದ. ನನ್ನನ್ನು ಕೆಲಸಕ್ಕೆ ಕಳಿಸಿದ್ದೇ ಇಲ್ಲ, ನಾನೆಂದರೆ ತುಂಬಾ ಪಿರೀತಿ. ಆ ಮುಂಡೇದು ಪಕ್ಷವಾತ ಬಂದು ನನ್ನ ಜೀವನ ಇಂಗಾಯ್ತು” ಎಂದು ಬೇಸರದಿಂದ ಹೇಳಿದಳು. ಆದರೆ ತನ್ನ ದುಃಖವನ್ನು ಹೆಚ್ಚಿಗೆ ತೋರ್ಪಡಿಸಿಕೊಳ್ಳಲಿಚ್ಛಿಸದ ಕಾಂತಮ್ಮ ತಕ್ಷಣವೇ “ಔದು ಸಾಮಿ, ಆ ಅಯೋಧೇಲಿ ಏನೋ ಗಲಾಟೆ ಆಯ್ತಿದೆಯಂತಲ್ಲಾ? ಅದ್ಯಾಕಂತೆ?” ಕೇಳಿದಳು.
“ನಿನಗ್ಯಾರು ಹೇಳಿದರು?” ಕೇಳಿದ ರವೀಂದ್ರ.
“ನಿನ್ನೆ ಕಿಷ್ಣಾರಾವು ಸಾಮಿ ಮನೆಗೆ ಓಗಿದ್ದಾಗ ಅವರ ಮನೆಯಲ್ಲಿ ಎಲ್ಲರೂ ಇದೇ ಇಚಾರ ಮಾತಾಡ್ತಿದ್ರು. ಅವರ ಮಗ ಕೂಡ ಅಯೋಧೆಗೆ ಅದೇನೋ ಸೇವೆ ಅಂತ ಓಗಿದ್ದಾನಂತೆ. ಅಲ್ಲಿ ಪರಿಸ್ಥಿತಿ ಎಂಗಿದೆಯೋ ಅಂತ ಎಲ್ಲರಿಗೂ ಭಯ” ಬಹಳ ಆತಂಕದಿಂದ ಹೇಳಿದಳು.
“ಕರಸೇವೆ ಇರಬೇಕು” ಎಂದೆ, ಕೂಡಲೇ “ಊಂ..ಊಂ ಅದೇಯ” ಹೇಳಿದಳು.
“ರಾಮಜನ್ಮ ಭೂಮಿ-ಬಾಬ್ರಿ ಮಸೀದಿ” ವಿಷಯ ಹೇಗೆ ಹೇಳಬೇಕೋ ಯೋಚಿಸುತ್ತಿದ್ದಾನೆ ರವೀಂದ್ರ. ಈ ವಿಷಯದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ. ಯಾರು ಹೇಗೆ ಸ್ಪಂದಿಸುವರೋ ಹೇಳುವುದು ಕಷ್ಟ. ಯಾವುದಕ್ಕೂ ಕಾಂತಮ್ಮನ ಜಾತಿ, ಧರ್ಮ ತಿಳಿದುಕೊಂಡರೆ, ಅದಕ್ಕೆ ಅನುಗುಣವಾಗಿ ಹೇಳಬಹುದು ಎಂದು ಯೋಚಿಸಿದ ರವೀಂದ್ರ. ನಾಲ್ಕೈದು ವರ್ಷದಿಂದ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವಳ ಜಾತಿ, ಧರ್ಮ ಗೊತ್ತಿಲ್ಲ ಹಾಗೂ ತಿಳಿದುಕೊಳ್ಳುವ ಅಗತ್ಯವೂ ಬರಲಿಲ್ಲ. ಪ್ರತಿ ಭಾನುವಾರ ರವೀಂದ್ರನಂತೆ ಜೀಸಸ್ ಪ್ರಾರ್ಥನೆ ಮಾಡುತ್ತಾಳೆ. ಅಂದ ಮಾತ್ರಕ್ಕೆ ಅವಳನ್ನು ಕ್ರಿಶ್ಚಿಯನ್ ಎನ್ನಲಾಗದು. ಏಕೆಂದರೆ ಕಾಂತಮ್ಮ ಎದುರು ಮನೆಯ ಗೋಪಾಲರಾವ್ ಮನೆಯವರೊಂದಿಗೆ ದೇವಸ್ಥಾನಕ್ಕೆ ಹೋಗುತ್ತಾಳೆ. ಪ್ರತಿ ಮುಸ್ಲಿಂ ಹಬ್ಬವನ್ನು ಖಾನ್ ಕುಟುಂಬದೊಂದಿಗೆ ಆಚರಿಸುತ್ತಾಳೆ. ಈಗ ನಿಜಕ್ಕೂ ರವೀಂದ್ರನಿಗೆ ಕಾಂತಮ್ಮನ ಜಾತಿ, ಧರ್ಮ ತಿಳಿದುಕೊಳ್ಳುವ ಕುತೂಹಲ, ಆದರೆ ಕೇಳಲು ಮುಜುಗರ. ಕಾಂತಮ್ಮನ ಜಾತಿ ತಿಳಿದುಕೊಳ್ಳುವುದು ಈಗ ರವೀಂದ್ರನಿಗೆ ಯಕ್ಷಪ್ರಶ್ನೆಯಾಗಿದೆ.
“ಕಾಂತಮ್ಮಾ.. ನಿನಗೆ ಯಾವ ದೇವರೆಂದರೆ ಇಷ್ಟ?”
“ನನ್ನ ಇಚಾರ ಬಿಡಿ ಸಾಮಿ, ನನಗೆ ಈಗ ನೀವೇ ದ್ಯಾವ್ರು. ಆ ಖಾನ್, ಗೋಪಾಲ್ ಸಾಮ್ಯೋರು, ನೀವು ನನ್ನ ಕಷ್ಟಸುಖ ನೋಡಿಕೊಳ್ಳದಿದ್ದರೆ.. ಈಗ ನನ್ನ ಪರಿಸ್ಥಿತಿ ಎಂಗಿರ್ತಾ ಇತ್ತು! ನನ್ನ ಜಾತಿ, ಧರ್ಮ ಯಾವತ್ತೋ ಮರೆತೋದೆ! ಅದು ಯಾವತ್ತೂ ನಮಗೆ ಒಂದಿಷ್ಟು ತಿಂಡಿ ಕೊಟ್ಟಿಲ್ಲ. ನನ್ನ ಗಂಡನಿಗೆ ಪಕ್ಷವಾತ ಬಂದು ಮಂಚ ಇಡಿದಾಗ ನನ್ನ ಜಾತಿಯೋರು ಬಂದು ಅಯ್ಯೋ ಪಾಪ ಅಂದರೇ ವರ್ತು ಯಾರೂ ಕೈ ಇಡೀಲಿಲ್ಲ. ಮಗ ಒಮ್ಮೆ ಬಂದು ನೋಡಿ ಓದವ್ನು, ಅವನ ಹೆಂಡತಿ ಗಲಾಟೆ ಮಾಡ್ತಾಳೇಂತ ಇದುವರೆಗೂ ಈ ಕಡೆ ತಿರುಗಿ ನೋಡಿಲ್ಲ.
ಯಾವ ಕೆಲಸ ಗೊತ್ತಿರದ ನನಗೆ ಆಗ ಏನು ಮಾಡಬೇಕೂಂತ ತೋಚಲಿಲ್ಲ. ನಮ್ಮ ಎದುರು ಮನೇ ಖಾನ್ ಸಾಬ್ ನಮ್ಮಿಬ್ಬರಿಗೂ ತಿಂಡಿ ಕೊಡ್ರಾಯಿದ್ರು. ಎಷ್ಟು ದಿನ ಅಂಗೆ ಕೊಟ್ಟಾರೆಂದು ನಾನು ಅವರ ಮನೆಯಲ್ಲಿ ಏನಾರ ಕೆಲಸ ಮಾಡ್ತೀನಿ ಅಂದೆ, ಬೇಡ ಅಂದ್ಬುಟ್ರು. ಅಂಗಾದರೆ ನೀವು ಕೊಡುವ ತಿಂಡಿ ತಗೋಳಕ್ಕಿಲ್ಲ ಅಂದೆ! ಆಗ ಸರಿ ಬಟ್ಟೆ ಒಗಿ ಅಂದ್ರು, ಅದು ಮಾತ್ರ ನಮ್ಮ ಜಾತ್ಯವ್ರಿಗೆ ಸರಿಹೋಗ್ಲಿಲ್ವಂತೆ. ಸಾಬರ ಮನೇಲಿ ಕೆಲಸ ಮಾಡ್ತೀಯಾ? ನಿನ್ನನ್ನ ಧರ್ಮದಿಂದ ಕಿತ್ತಾಕ್ತೀವಿ ಅಂದ್ರು. ಅಗತ್ಯ ಇದ್ದಾಗ ಒಂದಿಷ್ಟು ಕೂಳು ನೀರು ಕೊಡದವ್ರು, ಅವರ ಧರ್ಮ! ನಂಗ್ಯಾಕೆ? ಆಗಿನಿಂದ ಯಾರಾದರೂ ನಿಮ್ಮದು ಯಾವ ಜಾತಿ ಅಂದರೆ ನಾವು ಸಾಬರು, ತೆಲುಗಿನೋರು, ಕಿಶ್ಚಾನರಲ್ಲ, ನಾವು ಬಡವರು ಎನ್ನುತ್ತೇನೆ”.
“ಅಷ್ಟಕ್ಕೂ.. ಯಾವ ಜಾತಿ, ಧರ್ಮ ಯಾಕೆ ಸಾಮಿ? ಕಷ್ಟ ಬಂದಾಗ ಆ ಜಾತಿ ದ್ಯಾವ್ರನ್ನ‘ದ್ಯಾವ್ರೇ ನೀನೇ ರಕ್ಷಿಸಬೇಕು’ ಎಂದು ಕೈ ಮುಗಿಯಕ್ಕೇ ಅಲ್ವಾ? ಚೆನ್ನಾಗಿರೋವಾಗ ಎಷ್ಟು ಜನಕ್ಕೆ ದ್ಯಾವ್ರು ಗ್ಯಾಪ್ನ ಬರ್ತಾನೆ? ನನಗೆ ದ್ಯಾವ್ರಂತೋರು ನೀವೇ ಇದ್ದೀರಲ್ವಾ! ಇನ್ನು ಬ್ಯಾರೆ ದ್ಯಾವ್ರು ಯಾಕೆ?” ಸಮಾಜವನ್ನೇ ಪ್ರಶ್ನಿಸುವಂತಹ ಕಾಂತಮ್ಮನ ಮಾತು ರವೀಂದ್ರನಿಗೆ ‘ಜೀವನ ತತ್ವ’ದಂತೆ ಭಾಸವಾಯಿತು.

ಎಷ್ಟು ಒಳ್ಳೆಯ ಮಾತು. ನಮ್ಮ ಸಮಾಜದಲ್ಲಿ ಇಂತಹ ಎಷ್ಟೋ ಬಡವರಿದ್ದಾರೆ. ಹಸಿದ ಹೊಟ್ಟೆಗಿಷ್ಟು ಗಂಜಿ ಕೊಡದ ಜಾತಿಯೇಕೆ? ಧರ್ಮವೇಕೆ? ಹೌದಲ್ಲವಾ ಎಂದುಕೊಂಡು ರವೀಂದ್ರ “ಅಯ್ಯೋ.. ನಾನು ನಿನ್ನ ಪ್ರಶ್ನೆಗೆ ಉತ್ತರ ಹೇಳಲಿಲ್ಲ ಅಲ್ಲವಾ, ಕೇಳು. ಅಯೋಧ್ಯೆಯಲ್ಲಿ ಈಗ ಇರುವ ಮಸೀದಿ ಸ್ಥಳ ರಾಮನಿಗೆ ಸಂಬಂಧಪಟ್ಟಿದ್ದಂತೆ, ಅದಕ್ಕೇ ಅಲ್ಲಿ ಮಸೀದಿ ಕೆಡವಿ ದೇವಸ್ಥಾನ ಕಟ್ಟಲು ಈ ಕರ ಸೇವಕರು ಹೊರಟಿದ್ದಾರೆ. ಹಿಂದೂ ಮುಸ್ಲಿಮರ ನಡುವೆ ಹೆಚ್ಚು ಗಲಾಟೆಯಾಗುವಂತಿದೆ” ತನಗೆ ತಿಳಿದಿದ್ದನ್ನು ಹೇಳಿದ ರವೀಂದ್ರ. ಶ್ರದ್ಧೆಯಿಂದ ಕೇಳಿದರೂ ಅದೇನೆಂದು ಅರ್ಥವಾಗದೆ “ನಾನು ಓಗಿಬರ್ತೀನಿ ಸಾಮಿ.. ತುಂಬಾ ಒತ್ತಾಯ್ತು!” ಎಂದು ಹೇಳಿ ಹೊರಟಳು ಕಾಂತಮ್ಮ. ಕಾಂತಮ್ಮನ ಜಾತಿ ತಿಳಿದುಕೊಳ್ಳುವ ತನ್ನ ಪ್ರಯತ್ನಕ್ಕೆ ತನಗೇ ತಾನೇ ನಾಚಿಕೆಪಟ್ಟ ರವೀಂದ್ರ.


ಡಿಸೆಂಬರ್ 7, 1992: ಎಂದಿನಂತೆ ಟೀ ಕುಡಿಯುತ್ತ ನ್ಯೂಸ್ ಪೇಪರ್ ತೆಗೆದು ನೋಡಿದ. ದಪ್ಪ ಅಕ್ಷರಗಳಲ್ಲಿ “ಬಾಬ್ರಿ ಮಸೀದಿ ನೆಲಸಮ, ದೇಶದೆಲ್ಲೆಡೆ ರೆಡ್ ಅಲರ್ಟ್” ತನ್ನ ಕಣ್ಣನ್ನು ತಾನೇ ನಂಬದಾದ. ರೇಡಿಯೋ ಆನ್ ಮಾಡಿದರೆ ದೇಶವಿಡೀ ಕಫ್ರ್ಯೂ, ಕಂಡಲ್ಲಿ ಗುಂಡು. ಎದೆ ವೇಗವಾಗಿ ಬಡಿದುಕೊಳ್ಳುತ್ತಿದೆ. ಒಂದು ರಾತ್ರಿಯಲ್ಲೇ ದೇಶದೆಲ್ಲೆಡೆ ನೂರಾರು ಮಂದಿ ಹತ್ಯೆ. ಜಾತಿಗಲಭೆಗಳನ್ನೇ ತಮ್ಮ ಅಸ್ತ್ರಗಳಾಗಿ ಮಾಡಿಕೊಂಡಿರುವ ರಾಜಕೀಯ ನಾಯಕರು, ಈಗ ಎಬ್ಬಿಸಿರುವ ಗಲಭೆ ಯಾರನ್ನು ಉದ್ಧರಿಸುವುದಕ್ಕೆ? ಯಾರ ಜೀವನಕ್ಕೆ ಬೆಂಕಿಯಿಡುವುದಕ್ಕೆ? ಯಾರ ಪ್ರಾಣದೊಂದಿಗೆ ಆಟವಾಡುವುದಕ್ಕಾಗಿ? ಅವನ ಮನಸ್ಸಿಗೆ ಕೇಡಿನ ಶಂಕೆ ಕಾಡುತ್ತಿದೆ. ಹೊರಗೆ ಕರ್ಪ್ಯು. ಅಭ್ಯಾಸವಿಲ್ಲದೆ ಅಡುಗೆ ಮಾಡುವಾಗ ಮೈ, ಕೈ ಸುಟ್ಟುಕೊಂಡು ಹೇಗೋ ಹಸಿವು ನೀಗಿಸಿಕೊಂಡ.
ಎರಡು ದಿನಗಳ ನಂತರ: ರೇಡಿಯೋದಲ್ಲಿ ಕಫ್ರ್ಯೂ ಸಡಿಲಿಸಿದ ವಾರ್ತೆ. ಅದು ಕೇವಲ ಮಕ್ಕಳು ಹಾಗೂ ಮಹಿಳೆಯರಿಗೆ ಮಾತ್ರ. ಸ್ವಲ್ಪ ಸ್ವಲ್ಪ ಗಲಭೆ ಕಡಿಮೆಯಾಗುತ್ತಿದೆಯೆಂಬುವುದರ ಸಾಕ್ಷಿಗಾಗಿ ಈ ಕಫ್ರ್ಯೂ ಸಡಿಲಿಕೆ. ಏನೋ ಸದ್ದಾದಂತಾಗಿ ಬಾಗಿಲತ್ತ ನೋಡಿದರೆ ಕಾಂತಮ್ಮ!
“ಹೊರಗೆ ಅಷ್ಟು ಗಲಾಟೆಯಾಗುತ್ತಿದ್ದರೆ ಈಗ ನೀನು ಬರದಿದ್ದರೆ ಏನಾಗುತ್ತಿತ್ತು? ನಿನ್ನನ್ನು ಬಾ ಅಂದವರ್ಯಾರು? ಹೋಗು.. ಹೊರಟುಹೋಗು! ಮೊದಲೇ ಕಾಲ ಸರಿಯಿಲ್ಲ, ಯಾರನ್ನೂ ನಂಬುವಂತಿಲ್ಲ. ಯಾವಾಗ ಏನಾಗುತ್ತದೋ ಗೊತ್ತಾಗುವುದಿಲ್ಲ. ಈ ಎರಡು ಮೂರು ದಿನ ನಾನೇ ಏನೋ ಒಂದು ಬೇಯಿಸಿಕೊಂಡು ತಿನ್ನುತ್ತೇನೆ, ಮೊದಲು ನೀನು ಹೋಗು” ಆತಂಕದಿಂದ ಹೇಳಿದ ರವೀಂದ್ರ.
“ಅಯ್ಯೋ ಸಾಮೀ, ಎರಡು ದಿನದಿಂದ ಏನು ತಿಂದಿರೋ, ಇಲ್ಲವೋ! ಎಂಗಾಗಿದೀರ ನೋಡಿ. ಅಷ್ಟಕ್ಕೂ ಇಲ್ಲಿ ಎಲ್ಲರೂ ನನಗೆ ಗೊತ್ತಿರುವವರೇ ಅಲ್ವಾ? ನನ್ನ ಏನ್ ಮಾಡ್ತಾರೆ?” ಎನ್ನುತ್ತ ರವೀಂದ್ರನ ಮಾತಿಗೆ ಕಿವಿಗೊಡದೆ ಅಡುಗೆ ಶುರುಮಾಡಿದಳು ಕಾಂತಮ್ಮ.
“ಎಲ್ಲರೂ ನನಗೆ ತಿಳಿದಿರುವವರೇ” ನನಗೇಕೋ ಈ ಮಾತಿಗೆ ಹೊಸ ಅರ್ಥ ಕೇಳಿಸುತ್ತಿದೆ. ನಿನ್ನೆಯವರೆಗೂ ಅಣ್ಣತಮ್ಮಂದಿರಂತಿದ್ದವರು, ಜಾತಿ ಧರ್ಮದ ಹೆಸರಿನಲ್ಲಿ ರಾತ್ರಿ ಬೆಳಗಾಗುವವೇಳೆಗೆ ಚದುರಿಹೋದುದು, ಒಬ್ಬರಿಗೊಬ್ಬರು ಕತ್ತಿ ಇರಿದುಕೊಳ್ಳುವುದು ಪತ್ರಿಕೆಯ ತುಂಬಾ ಅದೇ ಸುದ್ದಿ.
ಅರ್ಧ ಗಂಟೆಯಲ್ಲಿ ಅಡುಗೆ ಮಾಡಿಮುಗಿಸಿದಳು ಕಾಂತಮ್ಮ. ಎರಡು ದಿನದಿಂದ ನಾಲಿಗೆ ಕೆಟ್ಟಿದ್ದರಿಂದ ರುಚಿಯಾಗಿದ್ದ ಅಡುಗೆಯನ್ನು ಬಾಯಿ ಚಪ್ಪರಿಸಿ ತಿನ್ನತೊಡಗಿದ. ಗಂಡನಿಗೆ ಸ್ವಲ್ಪ ಅಡುಗೆ ತೆಗೆದುಕೊಂಡು “ಸಾಮೀ ಆ ಖಾನ್ ಸಾಮ್ಯಾರ ಮನೆಗೆ ಓಗ್ಬೇಕು, ಲೇಟಾಗದೆ ನಾನು ಓಗ್ಬರ್ತೀನಿ” ಎಂದು ಹೊರಟಳು.
ಊಟ ಮುಗಿಸಿ ನಿದ್ದೆಯಿಂದೆದ್ದು ರೇಡೀಯೋದಲ್ಲಿ ಸಂಗೀತ ಕೇಳುತ್ತಿದ್ದ ರವೀಂದ್ರ.

ಇದ್ದಕ್ಕಿದ್ದಂತೆ ಯಾರೋ ಜೋರಾಗಿ ಕಿರುಚಿದ್ದು ಬೀದಿಯಿಡೀ ಪ್ರತಿಧ್ವನಿಸಿ ಎಲ್ಲರೂ ಬೆಚ್ಚಿಬಿದ್ದು ನಿಧಾನವಾಗಿ ಕಿಟಕಿ ತೆಗೆದು ನೋಡಿದರು. ಆ ದೃಶ್ಯ ಎಲ್ಲರನ್ನು ನಿಶ್ಚೇತನಗೊಳಿಸಿತು. ಇದುವರೆಗೂ ಮನೆಯೊಳಗೇ ಇದ್ದವರು, ಮೂವರಿಗಿಂತಲೂ ಹೆಚ್ಚು ಜನ ಒಂದೆಡೆ ಸೇರಬಾರದೆಂಬ ಕಫ್ರ್ಯೂ ನಿಯಮ ಮೀರಿ ತಮ್ಮ ಭದ್ರತೆಯನ್ನು ಲೆಕ್ಕಿಸದೆ ಒಬ್ಬೊಬ್ಬರೇ ಹೊರಗೆ ಬರತೊಡಗಿದರು. ಈಗ ಸ್ವಲ್ಪ ಹೊತ್ತಿಗೆ ಮುಂಚೆ ತನ್ನ ಮನೆಯಿಂದ ಹೊರಟ ಕಾಂತಮ್ಮ ಈಗ ರಕ್ತದ ಮಡುವಿನಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿರುವುದನ್ನು ಕಂಡು ರವೀಂದ್ರ ಕಣ್ಣೀರು ಸುರಿಸುತ್ತಿದ್ದಾನೆ.
“ಅಯ್ಯೋ ಪಾಪ ಇಂತಹ ಒಳ್ಳೆಯವಳಿಗೆ ಚುಚ್ಚಲು ಮನಸ್ಸು ಹೇಗೆ ಬಂತೋ ಕಟುಕರಿಗೆ, ಅವರ ಕೈ ಬೀಳ, ಅವರ ಬಾಯಿಗೆ ಮಣ್ಣು ಬೀಳಾ” ಬೈಗುಳದ ಅಷ್ಟೋತ್ತರ ಶುರು ಮಾಡಿದಳು ಕೃಷ್ಣಾರಾವ್ ಹೆಂಡತಿ.
ನಿಧಾನವಾಗಿ ಅಲ್ಲಿಗೆ ಬಂದ ಅವರ ಮನೇ ತೋಟದ ಮಾಲಿ “ಅಮ್ಮಾವ್ರೆ ಖಾನ್ ಸಾಹೇಬ್ರ ಮನೆಯಿಂದ ಆಯಮ್ಮ ಕಾಂತಮ್ಮ ಬರೋದನ್ನ ನಾನು ನೋಡಿದೆ. ಅಷ್ಟೊತ್ತಿಗೆ ಆ ಪುಂಡರ ಗುಂಪು ಆಯಮ್ಮನ ನೋಡಿ “ದೇಖ್ ರೇ ಕೋಯೀ ಆರಹೇ, ರೆಡಿ..” ಅಂತ ಮಾತಾಡ್ಕೋತಾ ಇದ್ರು, ಆಯಮ್ಮ ದೂರದಲ್ಲಿದ್ಲು ಕೂಗಿ ಹೇಳೋಣ ಅಂದ್ರೆ ಎಲ್ಲಿ ಅಟ್ಟಿಸಿಕೊಂಡು ಬರ್ತಾರೋ ಅಂತ ಹೆದರಿ ಇಲ್ಲೇ ಬಚ್ಚಿಟ್ಕೊಂಡಿದ್ದೆ. ಆಯಮ್ಮ ಅವರ ಮಾತು ಕೇಳಿಸಿದರೂ ಅವರು ತನನ್ನೇನು ಮಾಡುತ್ತಾರೆ ಅಂತ ಧೈರ್ಯವಾಗಿ ಹೋದ್ಲು. ಅವರ ಗುಂಪಿನಲ್ಲಿ ಯಾರೋ ಒಬ್ಬ “ಅರೇ.. ಓ ಔರತ್ ಹೈ ರೇ..” ಸ್ವಲ್ಪ ಸಹಾನುಭೂತಿಯಿಂದ ಹೇಳಿದ.
“ತೋ ಕ್ಯಾ.. ಓ ಔರತ್ ಹುಯೇ ತೋ ಖ್ಯಾ?, ಹಿಂದೂ ಹುಯೇ ತೋ ಖ್ಯಾ? ಮುಸಲ್ಮಾನ್ ಹುಯೇ ತೋ ಕ್ಯಾ? ಹಮ್ ಕು ತೋ ಕೌಂಟ್ ಹೋನಾ, ಪೈಸಾ ಹೋನಾ..” ಎಂದದ್ದೇ ಎಲ್ಲರೂ ಕತ್ತಿ ತೆಗೆದು ನಿರ್ದಾಕ್ಷಿಣ್ಯವಾಗಿ ಕಾಂತಮ್ಮನ ಮೈಗೆಲ್ಲಾ ತಿವಿದು ಓಡಿದರು ಎಂದು ನಡುಗುತ್ತ ಹೇಳಿದ.

“ಅವರೇನಾದರೂ ನನಗೆ ಕಾಣಿಸಿದ್ದರೆ ಅಲ್ಲೇ ಮುಗಿಸಿಬಿಡುತ್ತಿದ್ದೆ ಬದ್ಮಾಷ್ ನನ್ ಮಕ್ಳನ್ನ, ನಮ್ಮ ಬೀದಿಗೆ ಬರಕ್ಕೆ ಎಷ್ಟು ಧೈರ್ಯ ಇರಬೇಕು ಅವರಿಗೆ” ಕೋಪದಿಂದ ಹಲ್ಲು ಕಚ್ಚಿದ ಖಾನ್.
ಕಾಂತಮ್ಮನಿಗೆ ಅದಾಗಲೇ ರಕ್ತ ಹರಿದು ಪ್ರಜ್ಞೆ ತಪ್ಪಿತ್ತು. ಉಸಿರಾಟ ಪರೀಕ್ಷಿಸಿದ ರವೀಂದ್ರ ಇನ್ನೂ ಬದುಕಿದ್ದಾಳೆಂದು ತಿಳಿದು ತಡಮಾಡದೆ ಆಟೋ ತಂದು, ಅಲ್ಲಿದ್ದವರೆಲ್ಲರ ಸಹಾಯದಿಂದ ನರ್ಸಿಂಗ್ ಹೋಂಗೆ ಸೇರಿಸಿದ. ಪರೀಕ್ಷಿಸಿದ ವೈದ್ಯರು ಕೂಡಲೇ ರಕ್ತ ನೀಡಬೇಕೆಂದು ಹೇಳಿದರು. ಅಲ್ಲಿದ್ದವರೆಲ್ಲ ತಾವು ಕೊಡುತ್ತೇವೆಂದರು, ಖಾನ್ ರಕ್ತ ಅವಳಿಗೆ ಹೊಂದಿ ರಕ್ತ ನೀಡಿ ಕೂಡಲೇ ಕಾಂತಮ್ಮನಿಗೆ ಶಸ್ತ್ರಚಿಕಿತ್ಸೆ ಮಾಡಿ ಇಪ್ಪತ್ನಾಲ್ಕು ಗಂಟೆವರೆಗೂ ತೀವ್ರ ನಿಗಾ ಘಟಕದಲ್ಲಿಟ್ಟರು.

ಕಾಂತಮ್ಮನನ್ನು ನೋಡಿಕೊಳ್ಳುವ ಕೆಲಸ ರವೀಂದ್ರ ವಹಿಸಿಕೊಂಡರೆ, ಅವಳ ಗಂಡ ರಂಗಯ್ಯನ ಜವಾಬ್ದಾರಿ ಖಾನ್ ಕುಟುಂಬ ತೆಗೆದುಕೊಂಡಿತು. “ನಿಮ್ಮ ಉಪ್ಪು ತಿನ್ನುತ್ತಿದ್ದೇನೆ, ನಿಮ್ಮ ಕ್ಷೇಮ ಕೋರುವುದಕ್ಕಿಂತ ನನಗೆ ಇನ್ನೇನಿದೆ ಹೇಳಿ?” ಎಂದು ಕಫ್ರ್ಯೂ ಕೂಡ ಲೆಕ್ಕಿಸದೆ ತನಗೆ ಅನ್ನ ನೀಡುತ್ತಿರುವ ಮನೆಗಳಿಗೆ ಸೇವೆ ಸಲ್ಲಿಸಲು ಬಂದ ಕಾಂತಮ್ಮನನ್ನು ತದೇಕವಾಗಿ ನೋಡಿದ ರವೀಂದ್ರ. ಅವನಿಗೆ ತನ್ನ ಸುತ್ತಲೂ ತಿರುಗುತ್ತಿರುವ ಎಲ್ಲರೂ ತಿಳಿದವರೇ ಅಲ್ಲವಾ? ನನ್ನನ್ನೇನು ಮಾಡುತ್ತಾರೆ? ಎಂದು ಕಾಂತಮ್ಮ ಹೇಳಿದ ಮಾತು ನೆನಪಾಯಿತು. ತನ್ನ ಸುತ್ತಲೂ ಮನುಷ್ಯರ ರೂಪದಲ್ಲಿ ತಿರುಗುತ್ತಿರುವ ಮೃಗಗಳಿರುತ್ತವೆಂದು ಅರಿಯದೆ ಹೋದ ಕಾಂತಮ್ಮನ ಸ್ಥಿತಿ ಕಂಡು ಮರುಗಿದ. ಬೇರೊಬ್ಬರ ಸ್ವಾರ್ಥ ಸಾಧನೆಗೆ ಅಮಾಯಕರು ಈ ದಾರುಣ ಮಾರಣ ಹೋಮಕ್ಕೆ ಸಮಿತ್ತುಗಳಾಗದೆ ತಪ್ಪುವುದಿಲ್ಲವಾ? ಈ ರಾಜಕೀಯ ಘೋರಗಳಿಗೆ ಅಂತ್ಯವಿಲ್ಲವಾ? ಎಂದು ಗಂಭೀರವಾಗಿ ಯೋಚಿಸುತ್ತಿದ್ದ.

“ಅಮ್ಮಾ..” ಎಂಬ ಕಾಂತಮ್ಮನ ನರಳಿಕೆ ಶಬ್ದ ಕೇಳಿ ತಕ್ಷಣ ಖುಷಿಯಿಂದ “ಡಾಕ್ಟರ್.. ಡಾಕ್ಟರ್..” ಎಂದು ಓಡಿ ಹೋಗಿ ಡಾಕ್ಟರನ್ನು ಕರೆತಂದ. “ಇನ್ನೇನೂ ಭಯವಿಲ್ಲ” ಎಂದು ಡಾಕ್ಟರ್ ಹೇಳಿದ್ದೇ ರವೀಂದ್ರ ಸಂತೋಷದಿಂದ ಕಾಂತಮ್ಮನನ್ನು ನೋಡಿದ. ಕಾಂತಮ್ಮನ ಕಣ್ಣಲ್ಲಿ ನೀರು.. “ನನ್ನ ರಂಗಯ್ಯ ಎಂಗಿದಾನೋ” ಎಂದು ಕನವರಿಸುತ್ತಿದ್ದಾಳೆ. ರವೀಂದ್ರನಿಗೀಗ ಪತಿಗಾಗಿ ಯಮಧರ್ಮನನ್ನು ಎದುರಿಸಿದ ಸಾವಿತ್ರಿಯಂತೆ ಕಂಡಳು ಕಾಂತಮ್ಮ!