- ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು - ಅಕ್ಟೋಬರ್ 27, 2024
- ಶೂಟಿಂಗ್ ಅನ್ಯಾಯ - ಏಪ್ರಿಲ್ 5, 2024
- ವಾಷಿಂಗ್ಟನ್ ಮೆಮೋರಿಯಲ್ ಮುಂದೆ - ಜುಲೈ 20, 2022
ನನ್ನ ಸಹಪಾಠಿಗಳು, ಗೆಳೆಯರ ಯೌವ್ವನದ ಬಹುಪಾಲು ದಿನಗಳು ಕಳೆದು ಹೋದದ್ದು ಸಿನೆಮಾ ಗೀಳಿನಲ್ಲಿ. ಈ ಗೀಳು ಸಿನೆಮಾಗಳನ್ನು ನೋಡುವುದಕ್ಕೆ, ನೋಡಿದ ಸಿನೆಮಾವನ್ನು ಮತ್ತೆ ಮತ್ತೆ ನೋಡುವುದಕ್ಕೆ, ಚಿತ್ರದ ಸಂಭಾಷಣೆಗಳನ್ನು ಉರು ಹೊಡಿಯುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸಿನೆಮಾದ ಬಗ್ಗೆ ಬಂದ ಬರವಣಿಗೆಯನ್ನೆಲ್ಲ ಒಂದಕ್ಷರವೂ ಬಿಡದೆ ಗಮನಿಸುವುದು, ನಟ-ನಟಿಯರ ಜೀವನದ ವಿವರಗಳನ್ನು ಸಂಗ್ರಹಿಸಿ ಮತ್ತೆ ಮತ್ತೆ ಚರ್ಚಿಸಿ ಚಪ್ಪರಿಸುವುದು, ಆ ನಟರ ಪರ, ಈ ನಟಿಯ ಪರ ಅಂತ ನಮ್ಮ ನಮ್ಮಲ್ಲೇ ಗುಂಪುಗಳಾಗಿ ಜಗಳ ಕಾಯುವುದು, ಥಿಯೇಟರ್ ಮಾಲೀಕರು, ನಿರ್ದೇಶಕರ ಬಗ್ಗೆಯೇ ಯೋಚಿಸುತ್ತಾ ಅವರಿಗೆ ಶುಭವಾಗಲಿ ಎಂದು ಪ್ರಾರ್ಥಿಸುವುದು, ನಾವು ಓದಿದ ಕತೆ ಕಾದಂಬರಿಗಳು ಚೆನ್ನಾಗಿದೆ ಎನಿಸಿದಾಗ ಬೆಂಗಳೂರಿಗೋ, ಮದ್ರಾಸಿಗೋ ತಪ್ಪು ತಪ್ಪು ವಿಳಾಸಕ್ಕೆ ಕಾಗದ ಬರೆದು ಉತ್ತರ ಬಂದಿಲ್ಲವೆಂದು ಪರಿತಪಿಸುವುದು, ನೆಚ್ಚಿನ ನಟರ ಚಿತ್ರ ಬಿಡುಗಡೆಯಾದ ದಿವಸ ಬೆಳಿಗ್ಗೆ ಸ್ನಾನ ಮುಗಿಸಿ, ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಚಿತ್ರ ನೂರು ದಿನ ಓಡಲಿ ಎಂದು ಹರಕೆ ಕಟ್ಟಿಕೊಳ್ಳುವುದು, ದೊಡ್ಡ ದೊಡ್ಡ ಸ್ಟಾರ್ ಮಾಡಿಕೊಂಡು ಮೆರವಣಿಗೆಯಲ್ಲಿ ಹೋಗಿ ಸಿಹಿ ಬೂಂದಿ ಹಂಚುವುದು, ನಮ್ಮ ಜಿಲ್ಲೆಯಲ್ಲೋ ಅಕ್ಕಪಕ್ಕದಲ್ಲೋ ಚಿತ್ರೀಕರಣ ನಡೆಯುತ್ತದೆ ಎಂದು ಗೊತ್ತಾದರೆ ಸಾಕು, ಸ್ಕೂಲು, ಅಂಗಡಿ, ಕೆಲಸ ಎಲ್ಲ ಬಿಟ್ಟು ಅಲ್ಲಿಗೆ ಹೋಗಿ ಇದ್ದುಬಿಡುವುದು, ಇಷ್ಟರಲ್ಲೇ ಕಾಲ ಕಳೆದುಹೋಯಿತು ಎಂದು ಹೇಳುವುದಿಲ್ಲ. ಯಾವುದಕ್ಕೂ ನಮಗೆ ಸಮಯ ಸಾಕಾಗುತ್ತಿರಲಿಲ್ಲವೆಂದೇ ಹೇಳಬಹುದು.
ಕರೀಘಟ್ಟದ ಬಳಿ ಇರುವ ಸಾಹುಕಾರ್ ಲಿಂಗಪ್ಪನವರ ದೊಡ್ಡ ದ್ರಾಕ್ಷಿ ಫಾರಂನಲ್ಲಿ-ಬಂಗಲೆಯಲ್ಲಿ ಒಂದು ಚಿತ್ರದ ಶೂಟಿಂಗ್ ಇದೆ, ಅದೂ ಹತ್ತೇ ದಿನದಲ್ಲಿ ಇಡೀ ಚಿತ್ರದ ಶೂಟಿಂಗ್ ಮುಗಿದು ಹೋಗುತ್ತದೆ ಅಂತ ಗೊತ್ತಾದಾಗ ನಮಗೆ ಇನ್ನಿಲ್ಲದಷ್ಟು ಸಂತೋಷ, ನಾನಾ ರೀತಿಯ ಕನಸುಗಳು. ಕಾಲೇಜಿಗೆ ಚಕ್ಕರ್ ಹೊಡೆದು, ಹೋಗುತ್ತಿದ್ದ ಕೆಲಸಗಳಿಗೆ ರಜಾ ಹಾಕಿ, ಪೆಟ್ಟಿ ಅಂಗಡಿಗಳನ್ನು ತಾತ್ಕಾಲಿಕವಾಗಿ ಇನ್ನೊಬ್ಬರಿಗೆ ಒಪ್ಪಿಸಿ ಹೊರಟು ನಿಂತೆವು. ಪ್ರಸಿದ್ಧ ನಟಿ ರಾಧಾರಮಣಿ ಹತ್ತು ದಿನದ ಶೂಟಿಂಗ್ ಉದ್ದಕ್ಕೂ ಕರೀಘಟ್ಟದಲ್ಲೇ ಫಾರಂನಲ್ಲಿ ತಂಗುತ್ತಾರೆ, ಶೂಟಿಂಗ್ ಮಧ್ಯೆ ಬಿಡುವ ಮಾಡಿಕೊಂಡು ಸುತ್ತಮುತ್ತಲ ದೇವಸ್ಥಾನಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುತ್ತಾರೆ, ಸಮಯ ಸಿಕ್ಕಿದಾಗಲೆಲ್ಲ ಅಭಿಮಾನಿಗಳನ್ನು ಭೇಟಿ ಮಾಡಿ ಹಸ್ತಾಕ್ಷರ ನೀಡುತ್ತಾರೆ, ಅದೃಷ್ಟವಿದ್ದರೆ ಫೋಟೋ ಕೂಡ ತೆಗೆಸಿಕೊಳ್ಳಬಹುದಲ್ಲಾ ಎಂದು ತಿಳಿದಾಗ ಸ್ವರ್ಗವೇ ನಮ್ಮ ಮನೆ ಬಾಗಿಲಿಗೆ ಬಂದ ಹಾಗಾಯಿತು.
ನಮ್ಮಲ್ಲಿ ಕೆಲವರಿಗೆ ರಾಧಾರಮಣಿಯ ಸೊಂಪಾದ ನವಿರು ಕೂದಲು ಇಷ್ಟ. ಇನ್ನು ಕೆಲವರಿಗೆ ಇಷ್ಟು ಸೊಂಪಾದ ಕೂದಲಿಗೆ ಒಂದೇ ಒಂದು ಗುಲಾಬಿ ಹೂವು ಮುಡಿದರೂ ಶೋಭಾಯಮಾನವಾಗಿ ಕಾಣುವ ರೀತಿ. ಮತ್ತೆ ಕೆಲವರಿಗೆ ಅವರ ನೀಳ ಕತ್ತನ್ನು ಕೊಂಕಿಸುವ ರೀತಿ. ಒಂದಿಷ್ಟು ಜನರಿಗೆ ಎಲ್ಲ ಚಿತ್ರಗಳಲ್ಲೂ ಮಧ್ಯಂತರ ಆದ ತಕ್ಷಣ ಅವರು ತೊಡುವ ಪಾಶ್ಚಾತ್ಯ ಉಡುಗೆ. ಎಲ್ಲರಿಗೂ ಅವರು ಸಂಭಾಷಣೆ ಹೇಳುವ style, ಅದಕ್ಕೆ ತಕ್ಕಂತೆ ಭಾವವನ್ನು ಮಿಂಚಿಸುವ ಕಣ್ಣುಗಳು. ಹೀಗೆ ನಮ್ಮ ಮೆಚ್ಚಿನ ಕೆಲವು ನಟರ ಜೊತೆ ರಾಧಾರಮಣಿ ನಟಿಸಿಲ್ಲವೆಂಬ ಕೊರಗು ಇದ್ದರೂ, ನಮ್ಮ ಜಿಲ್ಲೆಗೇ ಬಂದು ಹತ್ತು ದಿನ ಶೂಟಿಂಗ್‌ಗೆ ತಂಗಿರುತ್ತಾರೆಂಬುದರ ಮುಂದೆ ನಮ್ಮ ಅಸಮಾಧಾನ ಅಷ್ಟೊಂದು ಮುಖ್ಯ ಎಂದು ನಮಗೇ ಅನಿಸಲಿಲ್ಲ.
*****
ರಾಧಾರಮಣಿ ಬಂದರು, ಶೂಟಿಂಗ್ ಕೂಡ ಒಂದೆರಡು ದಿನ ನಡೆಯಿತು. ಮೂರನೇ ದಿನ ಮಧ್ಯಾಹ್ನ ನಟಿಯವರೇ ಮುನಿಸಿಕೊಂಡು, ಬೆಂಗಳೂರಿಗೆ ಅವರ ಖರ್ಚಿನಲ್ಲೇ ಟ್ಯಾಕ್ಸಿ ಮಾಡಿಕೊಂಡು ಹೊರಟುಹೋದರು ಎಂದು ತಿಳಿದಾಗ ನಮಗೆಲ್ಲ ಗಾಬರಿಯಾಯಿತು.
ಸಾಹುಕಾರ್ ಲಿಂಗಪ್ಪನವರ ಪಾಲಹಳ್ಳಿಯ ದಾಯಾದಿಗಳ ಮಗಳಾದ ಸುಕನ್ಯಾ ಮಂದಗೆರೆಯವರು. ಬೆಂಗಳೂರು ವಿಶ್ವವಿದ್ಯಾಲಯದ ಮನಃಶ್ಯಾಸ್ತ್ರ ವಿಭಾಗದಲ್ಲಿ ಅಧ್ಯಾಪಕಿಯಾಗಿದ್ದು, ಅವರೇ ನಟಿಗೆ ಕಾಗದ ಬರೆದಿದ್ದು, ಎಲ್ಲರಿಗೂ ಅದರ ಪ್ರತಿಗಳನ್ನು ಹಂಚುತ್ತಿದ್ದರು.
*****
“ಕನ್ನಡ ಸಿನೆಮಾ ಲೋಕದ ಬುದ್ಧಿಜೀವಿ ನಟಿಯಾದ ರಾಧಾರಮಣಿಯವರ ಗಮನಕ್ಕೆ ನಮ್ಮ ಸೀಮೆಯ ನತದೃಷ್ಟ ಹೆಣ್ಣುಮಕ್ಕಳ ಪರವಾಗಿ ಕೆಲವು ಸಂಗತಿಗಳನ್ನು ನಿವೇದಿಸಿಕೊಳ್ಳುತ್ತೇವೆ.. ಶೂಟಿಂಗ್ ಆಗುತ್ತಿರುವ ಚಿತ್ರವು ಚೆಲುವಾಂಬರವರ ಜನಪ್ರಿಯ ಕಾದಂಬರಿ ಆಧಾರಿತ ಎಂದು ನನಗೆ ಗೊತ್ತಿದೆ. ಮಲಮಕ್ಕಳ ಶೋಷಣೆ, ಮಲತಾಯಿಯ ದರ್ಪ, ಈ ದರ್ಪಕ್ಕೆ ನೀರೆರೆಯುವ ದುರ್ಬಲ ಮನಸ್ಸಿನ ಕಾಮುಕ ಗಂಡಸರು – ಈ ಸುಳಿಯಿಂದ ಒಬ್ಬ ಧೀರ ಹುಡುಗಿ ಹೇಗೆ ಹೊರಬಂದಳು ಎಂಬುದೇ ಕಾದಂಬರಿಯ ಕತೆಯ ಸಾರಾಂಶ. ಕಥಾವಸ್ತು, ನಿರೂಪಣೆ ಚೆನ್ನಾಗಿದೆ. ಸ್ವಲ್ಪ ಆದರ್ಶಮಯತೆ ಜಾಸ್ತಿ ನಾಯಕಿಯ ಪಾತ್ರ ಚಿತ್ರಣದಲ್ಲಿ ಅನಿಸಿತು. ಇರಲಿ, ಇಂತಹ ಧೀರ ಹುಡುಗಿಯ ಪಾತ್ರಗಳನ್ನು ಆದರ್ಶಮಯವಾಗಿಯೇ ಚಿತ್ರಿಸಬೇಕು ಅನಿಸಿತು. ಇಂತಹ ಪಾತ್ರಗಳನ್ನು ಆದರ್ಶಮಯವಾಗಿ ಚಿತ್ರಿಸಬೇಕೇ ಹೊರತು ವ್ಯಾವಹಾರಿಕವಾಗಿ, ವಾಸ್ತವವಾಗಿ ಚಿತ್ರಿಸಬಾರದು.
ಪ್ರಶ್ನೆ ಇದಲ್ಲ ಮೇಡಂ! ನಮ್ಮ ಬಂಧುಗಳೇ ಆದ ಲಿಂಗಪ್ಪನವರಿಗೆ ನಾಲ್ಕಾರು ಮದುವೆ ಆಗಿದೆ. ಈಗ ತಾನೇ ಅರವತ್ತು ದಾಟಿದೆ. ಎರಡು ವರ್ಷಗಳ ಹಿಂದೆ ಅವರಿಗಿಂತ ಇಪ್ಪತ್ತು ವರ್ಷ ಚಿಕ್ಕವಳಾಗಿರುವ ಒಬ್ಬ ಹುಡುಗಿಯನ್ನು ಮದುವೆ ಮಾಡಿಕೊಂಡರು. ಮೊದಲನೇ ಹೆಂಡತಿಯ ಮಗಳು ಸುಶೀಲಾ ಎರಡನೇ ಹೆಂಡತಿಯ ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಳು. ಆದರೆ ಇದೇ ಎರಡನೇ ಹೆಂಡತಿ ಇಬ್ಬರು ಮಕ್ಕಳನ್ನು ಹೆತ್ತ ನಂತರ ಗಡಿಭಾಗದಿಂದ ರಜೆಗೆ ಬಂದಿದ್ದ ಸತೀಶನೆಂಬ ಸೈನಿಕನ ಜೊತೆ ಓಡಿಹೋದಳು. ಆಮೇಲೆ ಇನ್ನೊಂದು ಮದುವೆಯಾದಾಗ ಅವಳು ಎರಡನೇ ಹೆರಿಗೆಯ ಸಮಯದಲ್ಲಿ ರಕ್ತಸ್ರಾವವಾಗಿ ಸತ್ತು ಹೋದಳು. ಈಗ ಮನೆ ತುಂಬಾ ಹೆಣ್ಣು ಮಕ್ಕಳು. ಸಾಹುಕಾರರಿಗೆ ಯಾವುದೂ ಬೇಡ. ಎಲ್ಲವನ್ನೂ ಹೊಸ ಮಹಾರಾಣಿಗೇ ಬಿಟ್ಟುಬಿಟ್ಟಿದ್ದಾರೆ. ಮಕ್ಕಳು ತುಂಬಾ ತತ್ತರಿಸುತ್ತಿವೆ.
ಹೀಗೆ ಮದುವೆ-ಮಕ್ಕಳ ಆಟ ಆಡುವುದರಲ್ಲಿ ಲಿಂಗಪ್ಪನವರು ಒಬ್ಬರೇ ಅಲ್ಲ. ನಮ್ಮ ಫಿರ್ಕಾದಲ್ಲೇ, ನಮ್ಮ ಪೈಕಿಯಲ್ಲೇ, ಬೇಕಾದಷ್ಟು ಜನ ದುಂಡ ದುಂಡಾಗಿ ಮದುವೆ ಆಗಿದ್ದಾರೆ, ಆಗುತ್ತಲೇ ಇದ್ದಾರೆ. ಲಿಂಗಪ್ಪನವರದು ಸ್ವಲ್ಪ ವಿಪರೀತವಾಯಿತು. ಅವರವರ ಭಾಗ್ಯ. ಅವರ ಮಕ್ಕಳ ದುರಾದೃಷ್ಟ.
ಆದರೆ ಸಂವೇದನಾಶೀಲ ನಟಿಯಾದ ನೀವು ಇಂಥವರ ಮಾಲೀಕತ್ವದಲ್ಲಿರುವ ಫಾರಂನಲ್ಲಿ, ಇಂತಹ ಕಥಾವಸ್ತು ಹೊಂದಿದ ಚಲನಚಿತ್ರಕ್ಕೆ ಶೂಟಿಂಗ್‌ಗೆ ಒಪ್ಪಬಹುದೇ? ಕಥಾವಸ್ತುವಿಗೆ, ಕಥಾ ವಾತಾವರಣಕ್ಕೆ ನಮ್ಮ ಬಯಲು ಸೀಮೆಯ ನಮ್ಮ ಸಾಹುಕಾರರ ಫಾರಂ ಒಗ್ಗಬಹುದು, ಎಲ್ಲ ದೃಷ್ಟಿಯಿಂದಲೂ ಸೂಕ್ತವೂ ಆಗಿರಬಹುದು. ಅಷ್ಟು ಮಾತ್ರ ಸೂಕ್ತವಾದರೆ ಸಾಕೇ? ನಿಮ್ಮ ಬಗ್ಗೆ ಜನ ಏನೆಂದುಕೊಳ್ಳುತ್ತಾರೆ? ನಿಮ್ಮ ಒಳ ಮನಸ್ಸು ಏನೆಂದುಕೊಳ್ಳುತ್ತೆ? ಈ ಕರಪತ್ರ ಬಂದ ಮೇಲೂ ನೀವು ಶೂಟಿಂಗ್‌ನಲ್ಲಿದ್ದು ಅನ್ಯಾಯ ಮಾಡಿದರೆ, ನಾನು, ನನ್ನಂಥವರು ಅಲ್ಲಿಗೇ ಬಂದು ಪ್ರತಿಭಟನೆ ಮಾಡುತ್ತೇವೆ, ಉರುಳು ಸೇವೆ ಮಾಡುತ್ತೇವೆ.”
*****
ಎರಡು ಮೂರು ದಿನದ ನಂತರ ಶೂಟಿಂಗ್ ನಿಂತೇ ಹೋಯಿತು. ನಮಗೆಲ್ಲ ಒಂದು ರೀತಿಯ ತಹತಹ. ಮನೆ ಕೆಲಸ, ಅಂಗಡಿ ವ್ಯಾಪಾರ ಎಲ್ಲ ಬಿಟ್ಟು ಶೂಟಿಂಗ್ ನೋಡೋಣ, ರಾಧಾರಮಣಿಯನ್ನು ಭೇಟಿಯಾಗೋಣ ಅಂತ ಬಂದರೆ, ಇದೊಳ್ಳೆ ತರಲೆ ಆಯಿತಲ್ಲ ಎಂಬ ಚಡಪಡಿಕೆ.
ಮತ್ತೆ ಮೂರು ದಿನದ ನಂತರ ಶೂಟಿಂಗ್ ಶುರುವಾಯಿತು. ಪೋಲೀಸ್ ಬಂದೋಬಸಿನಲ್ಲಿ ರಾಧಾರಮಣಿ ಶೂಟಿಂಗ್‌ಗೆ ಹಿಂತಿರುಗಿದಾಗ ಅವರ ಮುಖ ದಪ್ಪಗಾಗಿತ್ತು. ಮೂಗು ಸೊಟ್ಟಗಾಗಿತ್ತು. ಕಣ್ಣ ಕೂಡ ಕೊಂಚ ಬಾಡಿತ್ತು. ರಾಧಾರಮಣಿಯ ಒಂದು ಹೇಳಿಕೆ ಸ್ಥಳೀಯ ಪತ್ರಿಕೆಗಳಲ್ಲೂ, ಬೆಂಗಳೂರು ಪತ್ರಿಕೆಯಲ್ಲೂ ಬಂತು.
“ನನಗೆ ಕಥಾವಸ್ತು ಗೊತ್ತಿತ್ತೇ ಹೊರತು, ಶೂಟಿಂಗ್ ಮಾಡುವ ಸ್ಥಳದ ಹಿನ್ನೆಲೆ ಗೊತ್ತಿರಲಿಲ್ಲ. ಹಾಗಾಗಿ ಶೂಟಿಂಗ್‌ಗೆ ಒಪ್ಪಿದೆ. ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಇದನ್ನೆಲ್ಲ ತಿಳಿಸಬೇಕೆಂಬ ನಿಯಮವೂ ಇಲ್ಲ. ಈಗಾಗಲೇ ನಾನು ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ಮುಂಗಡ ಹಣ ಪಡೆದಿದ್ದೇನೆ. ಈಗ ಚಿತ್ರೀಕರಣ ಮುಂದುವರೆಸುವುದು ವ್ಯವಹಾರದ ಅನಿವಾರ್ಯತೆ.
ಸುಕನ್ಯಾ ಮಂದಗೆರೆಯವರು. ಎತ್ತಿದ ನೈತಿಕ ಸೂಕ್ಷ್ಮ ಸರಿಯಾದದ್ದೇ. ಅದನ್ನು ನಾನು ಗೌರವಿಸುತ್ತೇನೆ. ಸಾಧ್ಯವಾದರೆ ಲಿಂಗಪ್ಪನವರ ಎಲ್ಲ ಹೆಣ್ಣು ಮಕ್ಕಳನ್ನು ಒಮ್ಮೆ ಭೇಟಿ ಮಾಡಿ ಮಾತನಾಡಿಸಲು ಪ್ರಯತ್ನಿಸುತ್ತೇನೆ. ಅದಕ್ಕೆ ವ್ಯವಸ್ಥೆ ಮಾಡುವುದಾಗಿ ನಮ್ಮ ಮಹಿಳಾ ಎಸ್‌ಪಿ ಶಾಂತಾ ಮಜುಮ್‌ದಾರ್ ಹೇಳಿದ್ದಾರೆ. ಈ ವಿಚಾರವು ಸೂಕ್ತವಾಗಿ ಬಗೆಹರಿದು, ಶೂಟಿಂಗ್ ಮುಂದುವರೆಯಲು, ಶಾಂತಾ ಮಜುಮ್‌ದಾರ್ ತೋರಿದ ದೂರದೃಷ್ಟಿ, ಜನ ಕೌಶಲ್ಯ, ಅಪೂರ್ವವಾದದ್ದು. ಅವರಿಗೆ ಕೃತಜ್ಞತೆಗಳು.”
*****
ನಂತರ ನಾಲ್ಕಾರು ದಿನ ಶೂಟಿಂಗ್ ಮುಂದುವರೆಯಿತು. ಫಾರಂ ಒಳಗಡೆ ಏನೇನಾಯಿತು, ಆಗಲಿಲ್ಲ ಅನ್ನುವುದರ ಬಗ್ಗೆ ನಾನಾ ರೀತಿಯ ಊಹಾಪೋಹ, ಚರ್ಚೆ. ತೀರಾ ರಾಧಾರಮಣಿಯವರನ್ನಾಗಲೀ, ನಾಯಕ ರಾಜೇಶ್ ಕುಮಾರರನ್ನಾಗಲೀ ಭೇಟಿ ಮಾಡಲು ನಮಗೆ ಸಾಧ್ಯವಾಗದೇ ಹೋದರೂ, ಕ್ಯಾಮರಾಮನ್, ಸೌಂಡ್ ಎಂಜಿನಿಯರ್, ಅಸಿಸ್ಟೆಂಟ್‌ಗಳನ್ನು ಭೇಟಿ ಮಾಡಿ ಹಸ್ತಾಕ್ಷರ ಪಡೆದೆವು.
ಕೊನೆ ದಿನದ ಶೂಟಿಂಗ್‌ನ ಕೊನೆಯ ದೃಶ್ಯವೆಂದರೆ, ನಾಯಕಿ,ಮಲತಾಯಿ, ಮುದಿ ತಂದೆ, ಇವರನ್ನೆಲ್ಲ ಧಿಕ್ಕರಿಸಿ, ಕಷ್ಟಪಟ್ಟು correspondance courseನಲ್ಲಿ ಡಿಗ್ರಿ ಮಾಡಲು ಹೋಗುವುದು. ಡಿಗ್ರಿ ಪಾಠ ಮಾಡಲು ಬರುತ್ತಿದ್ದ ಮಧುಸೂಧನ ಎಂಬುವವರನ್ನೇ ಪ್ರೀತಿಸಿ, ಪಟ್ಟು ಹಿಡಿದು ಮದುವೆಯಾಗಿ ಧಾರೆಯ ವೇಶಭೂಷಣದಲ್ಲೇ ಗಂಡನ ಸಮೇತ ಮಳ್ಳೂರಿನ ಅಪ್ರಮೇಯ ದೇವಸ್ಥಾನಕ್ಕೆ ಬಂದು ತಮಗೆ ಗಂಡು ಮಗು ಆಗಬೇಕೆಂದು ಪ್ರಾರ್ಥಿಸುವುದು. ಇದು ನಮಗೆ ಮೊದಲೇ ಗೊತ್ತಾದ್ದರಿಂದ ನಾವೇ ಮುಂಚೆಯೇ ಮಳ್ಳೂರಿಗೆ ಹೋಗಿ ದೇವಸ್ಥಾನದ ಅರ್ಚಕರು, ಪಾರುಪತ್ತೇಗಾರರನ್ನು ಒಳಗೆ ಹಾಕಿಕೊಂಡು, ಗರ್ಭಗುಡಿಯ ಸಮೀಪದಲ್ಲೇ ರಾಧಾರಮಣಿ-ರಾಜೇಶರ ಜೋಡಿಯನ್ನು ನೋಡಿ ಕಣ್ಣು ತುಂಬಿಕೊಂಡು ಸಂತೋಷದಿಂದ ಕಣ್ಣೀರು ಹಾಕಿದೆವು. ರಾಧಾರಮಣಿಯವರು ಲಿಂಗಪ್ಪನವರ ಅಷ್ಟೊಂದು ಹೆಣ್ಣು ಮಕ್ಕಳಿಗೆಂದು ಬೇರೆ ಬೇರೆ ಅಡಕೆ ಪಟ್ಟಿಯಲ್ಲಿ ಪ್ರಸಾದವನ್ನು ಪಾರ್ಸೆಲ್ ಮಾಡಿಸಿಕೊಂಡರು.
ಮುಂದೆ ಆ ಚಿತ್ರಕ್ಕೆ ರಜತ ಪ್ರಶಸ್ತಿ ಬಂತು. ಕಾದಂಬರಿ ಕೂಡ ಬೇರೆ ಭಾಷೆಗಳಿಗೆ ಅನುವಾದವಾಯಿತು. ಸಿನೆಮಾ ಗೀಳಿನಲ್ಲಿದ್ದ ನಾನು ಉತ್ತಮ ಮೇಷ್ಟರುಗಳ ಮಾರ್ಗದರ್ಶನದಿಂದ ಓದು-ಬರಹದ ಹಾದಿಗೆ ಬಿದ್ದು, ಪರೀಕ್ಷೆಗಳನ್ನು ಪಾಸ್ ಮಾಡಿಕೊಂಡು, ಕೆಲಸ ಪಡೆದು, ಮದುವೇನೂ ಆಗಿ, ಮಧ್ಯವಯಸ್ಸಿಗೆ ಬರುವ ಹೊತ್ತಿಗೆ ಸಮಾಜದಲ್ಲಿ ಒಂದು ಸೂಕ್ತ ನೆಲೆ ಕಂಡುಕೊಂಡು ಫೇಸ್‌ಬುಕ್, ವಾಚಕರ ವಾಣಿಗಳಲ್ಲೆಲ್ಲ ಆಗಾಗ್ಗೆ ಅದೂ ಇದೂ ಬರೆಯುತ್ತಾ ಪ್ರಗತಿಪರ ಬುದ್ಧಿಜೀವಿ ಎಂದು ಕೂಡ ಗುರುತಿಸಲ್ಪಟ್ಟೆ.
ಮೊನ್ನೆ ಸ್ಮಿತಾ ಪಾಟೀಲ್‌ರ ಸ್ಮರಣೆಯ ಚಿತ್ರೋತ್ಸವಕ್ಕೆ ಹೋಗಿದ್ದಾಗ ಇದೆಲ್ಲ ನೆನಪಿಗೆ ಬಂದು ಸ್ವಲ್ಪ ನಾಚಿಕೆ ಆಯಿತು. ಈಗ ಕೊನೇ ಪಕ್ಷ ಲಿಂಗಪ್ಪನವರ ಅಷ್ಟೊಂದು ಹೆಣ್ಣು ಮಕ್ಕಳಿಗೆ ಮುಂದೆ ಜೀವನದಲ್ಲೆ ಏನೇನಾಯಿತು ಎಂಬುದರ ಬಗ್ಗೆ ವಿವರಗಳನ್ನು ಸಂಗ್ರಹಿಸಬೇಕು, ಹಾಗೆ ಸಂಗ್ರಹಿಸಿದ ವಿವರಗಳನ್ನು ಹಿಡಿದು ಒಂದು ಕಾದಂಬರಿಯನ್ನೋ ಜೀವನಚಿತ್ರಗಳನ್ನೋ ಬರೆದು, ಪ್ರಕಟವಾದ ಮೇಲೆ ಈಗ ನಟನೆಯಿಂದ ನಿವೃತ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿರುವ ರಾಧಾರಮಣಿಯವರಿಗೂ ಒಂದು ಗೌರವ ಪ್ರತಿಯನ್ನು ಕಳಿಸಬೇಕು.
ರಾಧಾರಮಣಿಯವರು ಕೂಡ ಈಗ ಒಂಟಿ. ಅವರಿಗೂ ಬೇರೆ ಬೇರೆ ಕಾರಣಗಳಿಗಾಗಿ ಮದುವೆ ಆಗಲಿಲ್ಲವಷ್ಟೇ.
*****
(ಸ್ಮಶಾನದ ಚಿಕ್ಕಪ್ಪನ ಮನೆ ಮತ್ತು ಇತರ ಸಣ್ಣ ಸಣ್ಣ ಕತೆಗಳ ಸಂಗ್ರಹದಿಂದ)
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಕಾಸಿಲ್ ಆಫ್ ಆಲ್ಬಕರ್ಕೀ
ತ್ರಿಶೂಲ