- ಪಂಪಾ ಕ್ಷೇತ್ರದ ಇತಿಹಾಸ ಗಮನ – ೬ - ನವೆಂಬರ್ 19, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ - ನವೆಂಬರ್ 1, 2022
- ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ - ಅಕ್ಟೋಬರ್ 28, 2022
ಒಂದಾನೊಂದು ದಿನ ಬೆಳ್ಳಂಬೆಳಿಗ್ಗೆ ಸೂರ್ಯಾಷ್ಟಕದೊಂದಿಗೆ ಸೂರ್ಯನ ಕಿರಣಗಳಿಂದುಸುರಿದ ಜೀವಸತ್ವದಿಂದ ಜೀವ-ಸ್ನಾನ ಮಾಡಿ, ನೀರನ್ನು ಮೈಯ್ಯಮೇಲೆ ಹುಯ್ದುಕೊಂಡು, ಚರ್ಮಕ್ಕೆ ಹದಮಾಡಿದ ನೂಲಿನಿಂದ ಮೈಯನ್ನು ಮರೆಮಾಚಿ, ತೆರೆದ ಭ್ರೂಮಧ್ಯೆಯಲ್ಲಿ ಮೆದುತಿಲಕವನಿಟ್ಟು, ಮನೆಯಿಂದ ಆರ್.ಟಿ. ನಗರ ಬಸ್ಸಿನ ನಿಲ್ದಾಣದ ಕಡೆ ಕಿವಿಗಳಲ್ಲಿ ಇಯರ್ಫೋನ್ ತುರುಕಿಕೊಂಡು FM Radio 91.1 ಅಲ್ಲಿ ನನ್ನ ನೆಚ್ಚಿನ RJ ಪ್ರ ದೀ ಪನ ಪಟಪಟ ಮಾತಿನೊಂದಿಗೆ ಹಾಡುಗಳನ್ನು ಕೇಳುತ್ತಾ ಹೊರಟಿದ್ದೆ.
R. T. ನಗರ ಬಸ್ಟ್ಯಾಂಡಿನ ಮುಖ್ಯರಸ್ತೆಯಲ್ಲೇ ಪೂರ್ವಾಭಿಮುಖವಾಗಿ ಒಂದು ಮನೆ, ನಾ ಹೊರಡುವ ಸಮಯಕ್ಕನುಗುಣವಾಗಿ ಆ ಮನೆಯಿಂದ ಒಂದು ಹಿರಿಯಜೀವ ಒಂದು ತುಂಬಿದ ಚೀಲವನ್ನು ಹೆಗಲಿಗೆ ಹೇರಿಕೊಂಡು ಗೇಟನ್ನು ತೆರೆದು ಹೊರಬರುತ್ತಿತ್ತು. ಚೀಲದ ತುಂಬ ತುಂಬಿರುವುದು ಏನೋ ಒಂದಷ್ಟು ಸಾಮಾನುಗಳನ್ನಲ್ಲ, ಅವನು ಸಾಮಾನ್ಯನಾಗಿರಲಿಲ್ಲ, ಅವನು ಅದರಲ್ಲಿ ತುಂಬಿದ್ದುದು ಕಾರುಣ್ಯಭರಿತ ಪ್ರೇಮವಾಗಿತ್ತು, ಚೀಲ ತುಂಬಿದ್ದರೂ ಅದು ತಲೆಯ ಮೇಲೆ ಒಂದೆಳೆ ಕೂದಲಿನಷ್ಟೇ ಹಗುರವೆಂದು ಭಾಸವಾಗುವಂತಿತ್ತು.
ಆ ಹಿರಿಯ ಜೀವ ಗೇಟನ್ನು ತೆರೆದು ಹೊರಬರುತ್ತಿದ್ದರೆ, ರಸ್ತೆಬದಿಯಲ್ಲಿ ನೇಸರ ತನ್ನ ಕಿರಣಗಳಿಂದ ಧಾರೆಯೆರೆಯುತ್ತಿದ್ದರೂ ತುಸುವೂ ಮಿಸುಕಾಡದ ಹಲವು ಸುಂದ ಬಂಧುಗಳು ಆ ಗೇಟಿನ ಸದ್ದಿಗೆ ಹಾಗೂ ಅವನ ಪ್ರೇಮದ ಹುದ್ದೆಗೆ ಥಟ್ಟನೆ ಸ್ಪಂದಿಸಿ ಎಚ್ಚೆತ್ತುಕೊಳ್ಳುತ್ತಿದ್ದವು. ಬಂಧುಗಳು – ಶ್ವಾನಸಮೂಹ. ಅವನ ವಿಶ್ವಾಸಿಗಳು. ಜಗಕೆ ಸೂರ್ಯ ಹೇಗೋ ! ಶ್ವಾನವೃಂದಕ್ಕೆ ಆ ಹಿರಿಯನೇ ಅನ್ನದಾತ, ಜೀವದಾತ – ಜೀವದ ತಾತ.
ಮನೆಯಿಂದ ಹೊರಬಂದ ತಾತ ಪ್ರೀತಿಯಿಂದ ತನಗಾಗಿ ಬಹುಕಾಂಕ್ಷೆಯಿಂದ ಪ್ರತೀಕ್ಷಿಸುತ್ತಿದ್ದ ಶ್ವಾನಗಳಿಗೆಲ್ಲ ಪ್ರತ್ಯೇಕವಾಗಿ ಎಳ್ಳಷ್ಟೂ ಸೊಕ್ಕೇ ಅಂಟದ, ಸುಕ್ಕುಗಟ್ಟಿದ ಕೈಗಳಿಂದ ಒಂದೊಂದೇ ಬಿಸ್ಕೆಟ್ ಪೊಟ್ಟಣದ ಬಾಯಿತೆರೆದು ಬಿಸ್ಕೆಟುಗಳನ್ನು ಶ್ವಾನಗಳ ಮುಂದೆ ಹರಡುವುದ ಕಂಡಾಗ ಕಾಮಧೇನು ತನ್ನ ಮೊಲೆಯಲ್ಲಿ ಒಂದು ತೊಟ್ಟೂ ಹಾಲು ಉಳಿಸದೆ ನಂದಿನಿಗೆ ಉಣಿಸಿ ತಣಿಸುವ ದೃಶ್ಯವೇ ಕಂಡಂತಾಗುತ್ತಿತ್ತು.
ಒಂದೊಂದು ಜಾಗೆಯಲ್ಲಿ ಒಂದೆರಡರಂತೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ಶ್ವಾನಗಳು ಕುಳಿತಿರುತ್ತಿದ್ದವು ಇವನ ಬರುವನ್ನೇ ಕಾಯುತ್ತಾ. ಆ ಶ್ವಾನಗಳಿಗೆಲ್ಲ ಎಡೆಬಿಡದೆ ಸಂಚರಿಸುವ ವಾಹನಗಳ ಕಿರಿಕಿರಿ ಶಬ್ದಕ್ಕಿಂತ, ತಾತನ ಕೈಯ ಎದೆಯಿಂದ ಹೊರಹೊಮ್ಮುವ ಚರ್ರಕ್-ಪರ್ರಕ್ ಎಂದು ಕಿರಿಚುವ ಬಿಸ್ಕೆಟ್ ಪೊಟ್ಟಣದ ಸದ್ದೇ ಹೆಚ್ಚು ಪರಿಚಿತ. ಪ್ರತ್ಯೇಕ ಶ್ವಾನಕ್ಕೂ ಪರ್ಯಾಪ್ತವಾಗುವಷ್ಟು ಬಿಸ್ಕೆಟ್ ಅವುಗಳ ಮುಂದೆ ಹರಡಿ ತಾತ ಮುಂದಡಿಯಿಡುತ್ತಿದ್ದ, ನನ್ನ ಕಿವಿಯಲ್ಲಿ FMನಲ್ಲಿ ಕೇಳಿಬರುವ ಹಾಡಿನ ಲಯಕ್ಕೆ ಸರಿಹೊಂದುವಂತೆ ನಿಧಾನಕ್ಕೆ ನನಗೆ ಮಾತ್ರ ಕೇಳುವಂತೆ ನಾ ಶಿಳ್ಳೆ ಹೊಡೆಯುತ್ತಾ ಆ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದೆ.
ಆ ಮುಖ್ಯ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ನಿಂತು ತಾತನ ಬರುವಿಗಾಗಿ ಕಾಯುತ್ತಿರುವ ಶ್ವಾನಗಳು, ತಾತ ಒಂದೊಂದಾಗಿ ಒಂದೊಂದಾಗಿ ತನ್ನ ಚೀಲದಿಂದ ವಿಧವಿಧವಾದ ಬಿಸ್ಕೆಟ್ ಪೊಟ್ಟಣಗಳನ್ನು ಹೊರತೆಗೆಯುತ್ತಿದ್ದರೆ ಚೀಲ ಖಾಲಿಯಾಗುವ ಬದಲು ತುಂಬುತ್ತಲೇ ಇತ್ತು, ಪೊಟ್ಟಣಗಳು ಹೊರಗೆ, ಶ್ವಾನಗಳಿಗೆ ಮತ್ತೊಂದು ದಿನ ಉಣಬಡಿಸಿದ ಆತನ ಧನ್ಯತಾ ಭಾವಗಳು ಚೀಲದೊಳಗೆ. ಇದರಲ್ಲೂ ಏನೂ ಅತಿಶಯತೆ ಇಲ್ಲ. ಚೀಲ ನಿಜವಾಗಿಯೂ ತುಂಬಿ ತುಳುಕಿದ್ದುದು ಎಂಥವನಿಗೂ ಎದ್ದು ಕಾಣುತ್ತಿತ್ತು. ತಾತನಷ್ಟೇ ಧನ್ಯತೆಗಳೊಂದಿಗೆ ಆ ಶ್ವಾನಗಳೂ ಪರಸ್ಪರ ಕಿತ್ತಾಡದೆ ಶಾಂತ ರೀತಿಯಿಂದಲೇ ವರ್ತಿಸುತ್ತಿದ್ದವು, ನಾಲ್ಕಾರು ಬಿಸ್ಕೆಟ್ಗಳನ್ನು ತಿಂದಮೇಲೆ ಯಾವುದೇ ಶ್ವಾನ ಮತ್ತೆ ತನಗೆ ಇನ್ನೊಂದು ಬೇಕು ಎಂದು ಮತ್ತೊಂದರ ಬಳಿ ಹೋಗಿ ಕಿತ್ತಾಡಿದ್ದು, ಅಂಗಲಾಚಿದ್ದು ಅಥವಾ ತಾತನಿಗೇ ಬೆನ್ನು ಬಿದ್ದು ತನಗೆ ಇನ್ನೊಂದು ಬೇಕೆಂದು ಕೇಳಿದ್ದನ್ನು ನಾ ಯಾವತ್ತೂ ನೋಡಿಲ್ಲ, ಅವೆಲ್ಲ ಮಿತ ಆಹಾರದಲ್ಲಿ ಸಂತೃಪ್ತವಾಗೇ ಇರುತ್ತಿದ್ದುದು ಭಾಷ್ಪಭರಿತ ಆ ಶ್ವಾನಗಳ ಕಣ್ಣಾಲಿಗಳೇ ಹೇಳುತ್ತಿದ್ದವು. ಇದು ಪವಾಡವಲ್ಲದೇ ಮತ್ತೇನು !!?
ಚೀಲದಲ್ಲಿರುವ ಪೊಟ್ಟಣಗಳೆಲ್ಲ ಹೊರಬಂದಮೇಲೆಯೆ ತಾತ ಮತ್ತೆ ಮನೆಯೊಳಗೆ ಹೋಗುತ್ತಿದ್ದ. ಇಷ್ಟೆಲ್ಲ ದಿನದ ಪ್ರಥಮಾರ್ಧದಲ್ಲಿ ಅರ್ಧ ಗಂಟೆಗೂ ಮೀರಿ ನಡೆಯುತ್ತಿತ್ತು. ತಾತ ತುಂಬಾ ನಿಧಾನ ಆದರೆ ಅವನ ಪ್ರೇಮ ಅಗಾಧ. ತಾತ ತಾನು ನಡೆದು ಬರುತ್ತಿದ್ದರೆ ಅ-ದೃಷ್ಟ ಪ್ರೇಮವೆಲ್ಲ ಮೂರ್ತಿವೆತ್ತಂತೆ ಕಾಣುತ್ತಿತ್ತು, ಇದು ಉಷಯೋಕ್ತಿ, ಅತಿಶಯವೆನ್ನುವುದು ಏನೂ ಇಲ್ಲ. ನನ್ನ ನೀರಸ ಕಣ್ಣುಗಳಿಗೇ ಅವ ಹಾಗೆ ಕಂಡನೆಂದರೆ, ಶ್ವಾನಗಳ ದೃಷ್ಟಿಯಲ್ಲಿ ಅವ ಹೇಗೆ ಕಂಡಿರಬೇಡ ?.
ಇದು ಶ್ವಾನಸಮೂಹ, ತಾತ ಹಾಗೂ ನನ್ನಂತೆ ದಿನಂಪ್ರತಿ ಕೆಲಸಕ್ಕೆ ತೆರಳುವ ಅಸಂಖ್ಯ R. T. ನಗರ ನಿವಾಸಿಗಳ ದಿನಚರಿಯಾಗಿತ್ತು. ಒಬ್ಬೊಬ್ಬರಿಗೆ ಒಂದೊಂದು ಕಾರ್ಯನಿಮಿತ್ತತೆ. ನಮಗೆ ಅರ್ಥ-ಮರ್ಮ, ತಾತನಿಗೆ ನಿಸ್ವಾರ್ಥ-ಧರ್ಮ, ಶ್ವಾನಗಳಿಗೆ ಸಾರ್ಥ-ಕರ್ಮ. ಇಂಥವೇ ನಿಯಮಿತವಾಗಿ, ನಿಗದಿತವಾಗಿ ನಡೆಯುವ ಕೆಲವು ದಿನಚರಿಗಳು ಜೀವನವನ್ನು ಆಪ್ಯಾಯಮಾನಗೊಳಿಸುವವು.
ಕೆಲವಾರು ತಿಂಗಳುಗಳ ನಂತರ ಒಂದು ದಿನ ಎಂದಿನಂತೆ ನಾನು ನನ್ನ ನಿತ್ಯಾಹ್ನಿಕಗಳನ್ನೆಲ್ಲ ಪೂರೈಸಿ ಕೆಲಸದ ನಿಮಿತ್ತವೆಂದು ಬೆಳಿಗ್ಗೆ ಅದೇ ಬಸ್ಟ್ಯಾಂಡಿನ ಕಡೆಗೆ ನಡೆದು ಹೋಗುತ್ತಿದ್ದೆ, ಬಲ ಕಿಸೆಯಲ್ಲಿ ಅದೇ ಫೋನು, ಕಿವಿಯಲ್ಲಿ ಅದೇ FMಅಲ್ಲಿ ಪ್ರಸಾರವಾಗುತ್ತಿರುವ ಹಾಡು, ಬಾಯಲ್ಲಿ ಲಯಬದ್ಧವಾದ ಕ್ಷೀಣಸ್ವರದ ಶಿಳ್ಳೆ, ಚರ್ಮದಲ್ಲಿ ಹಿತವಾದ ಬೆಳಗಿನ ಮೃದುಲ ಮಾರುತದ ಸ್ಪಂದನ, ಕಣ್ಣು ಮಾತ್ರ ಒಂದು ಹಿಂದೆಂದೂ ಕಂಡಿರದ ಘಟನೆಗೆ ಸಾಕ್ಷಿಯಾಗುತ್ತಿತ್ತು, ಮನಸ್ಸು ಕಣ್ಣಿನ ಹಿಂದೆ ಹರಿದಾಡುತ್ತಿತ್ತು.
ಅದೇ ಆ ಬಡಾವಣೆಯಲ್ಲಿನ ತಾತನ ಮನೆ, ಮನೆಯ ಮುಂದೆ ಶ್ವಾನವೃಂದದ ಜಮಾವಣೆ. ಆ ಕ್ಷಣಕ್ಕೆ ಏನೊಂದೂ ಅರ್ಥವಾಗಲಿಲ್ಲ, ಬಸ್ಸಿನ ಸಮಯವಾಗಿದ್ದರಿಂದ ಯಥಾಪ್ರಕಾರ ಮಹಾನಗರಗಳಲ್ಲಿ ಭವಿಸುವ ಧಾವಂತದಲ್ಲಿದ್ದೆ. ಕಚೇರಿಯಲ್ಲಿನ ಕೆಲಸದ ಜಂಜಾಟಗಳಲ್ಲಿ ಅದರ ಬಗ್ಗೆ ಮರೆತೇ ಬಿಟ್ಟೆ. ಮತ್ತೆ ಸಂಜೆ ಮನೆಗೆ ಬಂದೆ.
ಮರುದಿನ ಬೆಳಿಗ್ಗೆ ಮತ್ತೆ ಅದೇ ದೃಶ್ಯದ ಪುನರಾವರ್ತನೆ. ತಾತನ ಮನೆ, ಮನೆಯ ಮುಂದೆ ಶ್ವಾನಸಮೂಹ. ತಾತ ಮಾತ್ರ ಅದೃಶ್ಯ. ಹತ್ತಿರ ಹೋಗಿ ನೋಡಿದರೆ ಶ್ವಾನಗಳ ಕಣ್ಣಲ್ಲಿನ ನೀರು ಕುತ್ತಿಗೆಯವರೆಗೂ ಇಳಿದಿದೆ. ಮತ್ತದೇ ಧಾವಂತದಲ್ಲಿದ್ದೆ, ಅಲ್ಲಿಂದ ದೇಹ ಮುಂದಕ್ಕೆ ನಡೆದರೂ ಮನಸು ಅಲ್ಲೇ ನಿಂತು ಯೋಚಿಸತೊಡಗಿತು. ಮನದಲ್ಲಿ ನಾನಾ ರೀತಿಯ ವಿಚಾರಗಳು, ತಾತ ಹಾಗೂ ಶ್ವಾನಗಳ ದಿನಚರಿ ಪರಿಚಿತವಾದಷ್ಟೇ ಅಪರಿಚಿತವಾಗಿತ್ತು ತಾತನ ಹೆಸರು. ಯಾವತ್ತೂ ನಮ್ಮ ಮಧ್ಯೆ ಮಾತೇ ಆಗಿರಲಿಲ್ಲ, ಹೆಸರಿನ ಸುಳಿವೂ ಇರಲಿಲ್ಲ. ನಾಲ್ಕಾರು ದಿನಗಳಾದ ಮೇಲೆ ನಾನೇ ಬೇಗ ತಯಾರಾಗಿ ಬಂದು ಮನಮುಟ್ಟಿದ ಆ ತಾತನ ಮನೆಯ ತಲೆಬಾಗಿಲನ್ನು ಮೊದಲ ಬಾರಿ ಮುಟ್ಟಿ, ತಟ್ಟಿದೆ. ನಾಲ್ಕಾರು ಆವರ್ತನೆಗಳ ನಂತರ ಬಾಗಿಲು ತೆರೆದ ಒಬ್ಬ ಸಹೃದಯರು ತಾವು ಯಾರು ? ಎಂದಾಗ, ನನ್ನ ಅಸ್ತಿತ್ತ್ವದ ಮೂಲಸ್ಥಾನಕ್ಕೆ ಒಮ್ಮೆ ಭೇಟಿಯಿತ್ತು ಕ್ಷಣಾರ್ಧದಲ್ಲಿ ಮರಳಿದೆ. ಆದರೆ ಆ ತಾತ ಮಾತ್ರ ಪುನಃ ಮರಳಲು ಸಾಧ್ಯವಿರದ ಇರುವ ಜಾಗಕ್ಕೆ ತೆರಳಿದ್ದ.
ಮನೆಯಿಂದ ಭಾರವಾದ ಮನಸ್ಸಿನಿಂದ ಹೊರಬರುವಷ್ಟರಲ್ಲಿ ಶ್ವಾನಸಮೂಹದ ಜಮಾವಣೆಯನ್ನು ನೋಡಿದ ನನ್ನ ಕಣ್ಣುಗಳ ಕಟ್ಟೆ ಒಡೆದಿತ್ತು. ಒಂದೆರಡು ಕ್ಷಣ ಶ್ವಾನಗಳನ್ನೆಲ್ಲ ಅನಾಥವಾಗಿ ಬಿಟ್ಟು ಹೋದ ತಾತನಿಗೆ ಸಿಟ್ಟಿನಿಂದ ಒಂದು ಮಾತನ್ನಂದು ಮತ್ತೆ ಅಷ್ಟೂ ದಿನ ಹಾಲುಣಿಸಿದ ಆ ಶ್ವಾನಗಳ ತಾಯಿಗೆ ಅನಂತ ನಮಸ್ಕಾರಗಳನ್ನರ್ಪಿಸಿದೆ. ಜೀವನದಲ್ಲಿ ದಿನದ ಮೊದಲಾರ್ಧದಲ್ಲೇ ಮೊದಲ ಬಾರಿ ದಿನವೆಲ್ಲ ಬೆಳಗುವ ಸೂರ್ಯ ಅಸ್ತಂಗತನಾದ ಅನುಭವ.
ಶ್ವಾನಗಳ ದಿನಚರಿಯನ್ನು ನೋಡಿ ಪ್ರಾಣಾಯಾಮ ಮಾಡಿದ ನಂತರದ ಉಸಿರಿನ ಸಮಸ್ಥಿತಿಯನ್ನೇ ಹೊಂದುತ್ತಿದ್ದ ನನಗೆ ಅಂದಿನಿಂದ ಶ್ವಾನವೃಂದವನ್ನು ನೋಡಿದಾಗಲೆಲ್ಲ ಉಸಿರು ಉದ್ವೇಗಗೊಳ್ಳಲು ಮೊದಲಾಯ್ತು.
ತಾತ ಬಯಲಾಗಿದ್ದ, ನಮ್ಮ ಶ್ವಾಸದ ದಿನಚರಿ ಬದಲಾಗಿತ್ತು.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..