- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
ಇವತ್ತು ಭಾರತ ರತ್ನ ಪಂಡಿತ್ ಭೀಮಸೇನ ಜೋಷಿಯವರ ಜನ್ಮದಿನ, ಹಾಗೆ ಅವರ ಜನ್ಮ ಶತಮಾನೋತ್ಸದ ಆರಂಭ ಕೂಡ ಹೌದು.
(ಜನನ ಫೆಬ್ರವರಿ ೪, ೧೯೨೨)
ಸವಾಯಿ ಗಂಧರ್ವರಿಂದ ಸಂಗೀತ ಕಲಿತ ಜೋಷಿಯವರು ಷಡ್ಜದ ಪ್ರಯೋಗದಲ್ಲಿ ಗುರುಗಳಗಿಂತ ಭಿನ್ನತೆ ಸಾಧಿಸಿ ಸ್ವಂತಿಕೆಯನ್ನು ಸಿದ್ದಿಸಿಕೊಂಡರು. ಕಿರಾನಾ ಘರಾಣೆಗೂ ಹೊಸತನ ನೀಡಿ ಅದರ ನವ ನಿರ್ಮಾಪಕರು ಅನ್ನಿಸಿಕೊಂಡರು. ತಾನ್ ಪ್ರಿಯರಾದ ಜೋಷಿಯವರ ಸಂಗೀತ ಕಛೇರಿಗಳ ವೈಶಿಷ್ಟ್ಯವೇ ಅದರ ವೈವಿಧ್ಯತೆ.. ಯಮನ್ ಕಲ್ಯಾಣ್ನಿಂದ ಆರಂಭವಾಗುತ್ತಿದ್ದ ಅವರ ಕಛೇರಿಗಳಲ್ಲಿ ಸಮಿಶ್ರ ರಾಗಗಳಿಗೇ ಮಹತ್ವ. ಪುರಿಯಾ ಕಲ್ಯಾಣಿ, ಪುರಿಯಾ ಧನುಶ್ರೀ ಮೊದಲಾದ ರಾಗಗಳನ್ನು ಅವರು ಪ್ರಯೋಗ ಮಾಡುವ ಕ್ರಮವೇ ವಿಭಿನ್ನ. ಅದರಂತೆ ತೋಡಿ, ಮಾಲ್ ಕೌಸ್, ದರ್ಬಾರಿ ಅಂತಹ ರಾಗಗಳು ಅವರ ಕಂಠದಲ್ಲಿ ಹೊಸ ಹುಟ್ಟನ್ನು ಪಡೆಯುತ್ತಿದ್ದವು. ಮಿಯನ್-ಕಿ-ಮಲ್ಹಾರ್ ಹಾಡುವಾಗ ‘ಧೂಮ್’ ಪದಲ್ಲಿ ಸಾಕ್ಷತ್ ಮಳೆಯ ಅನುಭವವನ್ನೇ ಅವರು ನೀಡುತ್ತಿದ್ದರು.
‘ಬಸಂತ್ ಬಹಾರ್’ ಚಿತ್ರದಲ್ಲಿ ಸೋಲುವ ಗವಾಯಿ ಪಾತ್ರದಲ್ಲಿ ಭೀಮಸೇನ ಜೋಷಿಯವರು ಹಾಡಬೇಕು. ನಾಯಕ ಭರತ್ ಭೂಷಣ್ಗೆ ಧ್ವನಿಯಾಗಿ ಗೆಲ್ಲುವ ಗಾಯನ ಮನ್ನಾಡೆಯವರು ಹಾಡಬೇಕು. ವಿಷಯ ತಿಳಿದ ಮನ್ನಾಡೆ ಬಿಲ್ಕುಲ್ ಒಪ್ಪಲಿಲ್ಲ. ಭೀಮಸೇನ ಜೋಷಿಯವರಂತಹ ಮಹಾನ್ ಗಾಯಕನ ಎದುರು ಸಿನಿಮಾಕ್ಕಾದರೂ ಗೆಲ್ಲುವಂತೆ ಹಾಡುವುದು ಸಾಧ್ಯವೇ ಇಲ್ಲ ಎಂದವರು ಯಾರ ಕೈಗೂ ಸಿಕ್ಕದೆ ಮಾಯವಾಗಿ ಬಿಟ್ಟರು. ಅವರನ್ನು ಪತ್ತೆ ಹೆಚ್ಚಿ ಒಪ್ಪಿಸಿದವರು ಸ್ವತ: ಭೀಮಸೇನ ಜೋಷಿಯವರೇ ‘ಸಂಗೀತದಲ್ಲಿ ಗೆಲ್ಲೋಕೆ ದೊಡ್ಡ ಪ್ರತಿಭೆ ಬೇಡ, ಆದರೆ ಸೋಲಕ್ಕೆ ದೊಡ್ಡ ಪ್ರತಿಭೆ ಬೇಕು, ಏಕೆಂದರೆ ಸಂಗೀತ ಸಿಕ್ಕೋದು ಸೋತವರಿಗೇ ಹೊರತು ಗೆದ್ದವರಿಗಲ್ಲ’ ಎಂಬ ಅವರ ಮಾತನ್ನು ಮನ್ನಾಡೆ ಸದಾ ಸ್ಮರಿಸುತ್ತಿದ್ದರು. ‘ಸಂಧ್ಯಾರಾಗ’ ಸಿನಿಮಾದಲ್ಲಿ ‘ನಂಬಿದೆ ನಿನ್ನ ನಾದ ದೇವತೆಯೇ’ ಹಾಡನ್ನು ಆಗಲೇ ಬಾಲಮುರಳಿ ಕೃಷ್ಣ ಹಾಡಿ ಬಿಟ್ಟಿದ್ದರು. ಅದೇ ಹಾಡನ್ನು ಭೀಮಸೇನ ಜೋಷಿಯವರ ಬಳಿ ಹಾಡಿಸಬೇಕು ಅನ್ನೋದು ಜಿ.ಕೆ.ವೆಂಕಟೇಶ್ ಅವರ ಆಸೆ. ಜೋಷಿಯವರ ಸುಲಭಕ್ಕೆ ಒಪ್ಪಲಿಲ್ಲ. ಕೊನೆಗೆ ಜಿ.ಕೆ.ವೆಂಕಟೇಶ್ ತಾವೇ ಟ್ರ್ಯಾಕ್ ಹಾಡಿ ತೋರಿಸಿದರು. ಅದರ ಸ್ವರೂಪ ನೋಡಿ ಜೋಷಿಯವರಿಗೆ ಸಂಪೂರ್ಣ ತೃಪ್ತಿಯಾಯಿತು. ‘ಎಷ್ಟು ಒಳ್ಳೆಯ ಕಂಪೋಸಿಷನ್ ನಿಮ್ಮ ಗುರುಗಳು ಯಾರು’ ಎಂದರು. ವೆಂಕಟೇಶ್. ಇಲ್ಲೇ ಇದ್ದಾರೆ ಅಮೇಲೆ ಪರಿಚಯ ಮಾಡಿ ಕೊಡ್ತೀನಿ’ ಎಂದು ರೆಕಾರ್ಡಿಂಗ್ ಮುಗಿಸಿದರು. ನಂತರ ಒಳ ಕೋಣೆಗೆ ಕರೆದು ಕೊಂಡು ಹೋಗಿ ಇವರೇ ನಮ್ಮ ಗುರುಗಳು ಎಂದರು. ಅಲ್ಲಿ ಕಂಡಿದ್ದೇನು? ಒಂದು ಟೇಬಲ್ ಮೇಲೆ ಭೀಮ ಸೇನ ಜೋಷಿಯವರ ಎಲ್ಲಾ ಗ್ರಾಮಾಪೋನ್ ಪ್ಲೇಟ್ಗಳನ್ನು ಜೋಡಿಸಿ ಇಡಲಾಗಿತ್ತು. ಜಿ.ಕೆ.ವೆಂಕಟೇಶ್ ಜೋಷಿಯವರ ಗಾಯನದ ಸೂಕ್ಷ್ಮಗಳನ್ನೆಲ್ಲಾ ಅಭ್ಯಾಸ ಮಾಡಿ ಅವರಿಗೆ ಹೊಂದುವಂತೆ ಕಂಪೋಸಿಷನ್ ಸಿದ್ದಗೊಳಿಸಿದ್ದರು. ಆಗ ಜೋಷಿಯವರಿಗೆ ಆದ ಆನಂದಕ್ಕೆ ಪಾರವೇ ಇಲ್ಲ. ಅಂದಿನಿಂದ ಅವರು ಜಿ.ಕೆ.ವೆಂಕಟೇಶ್ ಯಾವಾಗ ಕರೆದರೂ ಬಂದು ಹಾಡುತ್ತಿದ್ದರು. ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಸಿನಿಮಾಕ್ಕೆ ವೆಂಕಟೇಶ್ ಹೀಗೆ ಕರೆಸಿ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಕೀರ್ತನೆ ಹಾಡಿಸಿದರು. ರೆಕಾರ್ಡಿಂಗ್ನಲ್ಲಿ ನಿರ್ದೇಶಕ ಶಂಕರ್ ನಾಗ್ ಕೂಡ ಇದ್ದರು. ಅವರ ಕಣ್ಣಿನಲ್ಲಿ ಕಂಡೂ ಕಾಣದಂತೆ ಕಣ್ಣೀರು. ಅದನ್ನು ಭೀಮಸೇನ ಜೋಷಿಯವರು ಗಮನಿಸಿಯೇ ಬಿಟ್ಟರು. ಅಷ್ಟೇ ಅಲ್ಲ ಕೇಳಿಯೂ ಬಿಟ್ಟರು. ಶಂಕರ್ ಅಂಜುತ್ತಲೇ ಹೇಳಿದರು ‘ನಮ್ಮ ತಾಯಿ ಆನಂದಿ ಬಾಯಿ ಅವರಿಗೆ ನಿಮ್ಮ ಹಾಡು ಎಂದರೆ ಪಂಚ ಪ್ರಾಣ. ಆದರೆ ಅವರಿಗೆ ಪಾರ್ಶ್ವವಾಯು ಇಲ್ಲಿಗೆ ಬರೋಕೆ ಆಗಲಿಲ್ಲ’ ಈ ಮಾತನ್ನು ಕೇಳಿದ ಕೂಡಲೇ ಭೀಮಸೇನ ಜೋಷಿಯವರು ‘ನಡಿಯಿರಿ ನಿಮ್ಮ ಮನೆಗೆ ಹೋಗೋಣ’ ಎಂದರು. ಆನಂದಿ ಬಾಯಿ ಅವರ ಬಳಿಯೇ ಕುಳಿತು ಅವರಿಗೆ ಪ್ರಿಯವಾಗಿದ್ದ ‘ಕಾಯ ಬೇಕಲೋ ರಂಗ’ ಹಾಡಿದರು.
ಭೀಮಸೇನ ಜೋಷಿಯವರು ಅತ್ಯುತ್ತಮ ಕಾರು ಚಾಲಕರು ಕೂಡ ಹೌದು. ರಾಗದ ಒಳ ಹೊರಗನ್ನು ಬಲ್ಲಂತೆ ಕಾರಿನ ಒಳ ಹೊರಗನ್ನೂ ಬಲ್ಲವರು. ಮುಂಬೈನಲ್ಲಿ ಒಮ್ಮೆ ಕಛೇರಿ ಮುಗಿಸಿ ದೆಹಲಿಗೆ ಕಾರಿನಲ್ಲಿಯೇ ಸಹ ಕಲಾವಿದರೊಂದಿಗೆ ಹೊರಟರು. ಅವರೇ ಚಾಲಕರು. ಮಧ್ಯ ಪ್ರದೇಶದ ದಟ್ಟಾರಣ್ಯದಲ್ಲಿ ದರೋಡೆಕೋರರ ತಂಡ ಅಡ್ಡಗಟ್ಟಿತು. ಸುಲಿಗೆ ಮಾಡಲು ಸಿದ್ದವಾಯಿತು. ಕಾರಿನಲ್ಲಿ ತಂಬೂರಿ ಕಂಡು ‘ಯಾರಿವರು ’ ಎಂಬ ಪ್ರಶ್ನೆ ಎದುರಾಯಿತು. ಸಹ ಕಲಾವಿದರು ಅಂಜುತ್ತಲೇ ಭೀಮಸೇನ ಜೋಷಿಯವರ ಹೆಸರನ್ನು ಹೇಳಿದರು. ಕೂಡಲೇ ಪವಾಡ ಜರುಗಿತು. ದರೋಡೆಕೋರರ ನಾಯಕ ಪಂಡಿತ್ಜೀಯವರ ಕಾಲಿಗೆ ನಮಸ್ಕರಿಸಿ ‘ಪಂಡಿತ್ ಜೀ.. ನಾನು ಮೂವತ್ತು ವರ್ಷದ ಹಿಂದೆ ಶಾಲೆಯಲ್ಲಿ ಇದ್ದಾಗ ನಿಮ್ಮ ಭಜನ್ ಕೇಳಿದ್ದೆ. ಅದು ಇಂದಿಗೂ ನನ್ನ ಮನಸ್ಸಿನಲ್ಲಿ ಇದೆ. ಮುಂದೆ ನಿಮ್ಮ ಕಛೇರಿ ಕೇಳಲು ಟಿಕೇಟ್ ತೆಗೆದುಕೊಳ್ಳುವಷ್ಟು ಶಕ್ತಿ ಇರಲಿಲ್ಲ. ಹೊಟ್ಟೆ ಪಾಡಿಗೆ ದರೋಡೆಕೋರನಾದ ನಂತರ ಹಣ ಇದೆ. ಆದರೆ ಟಿಕೇಟ್ ತೆಗೆದು ಕೊಳ್ಳಲಾರೆ. ಏಕೆಂದರೆ ನಾನು ಪೋಲೀಸರಿಗೆ ಅಷ್ಟೊಂದು ಪ್ರಿಯವಾದವನು. ನೀವು ನನ್ನ ಎಷ್ಟೋ ಜನ್ಮದ ಹಿಂದಿನ ಪುಣ್ಯ ಫಲಿಸಿ ಸಿಕ್ಕಿದ್ದೀರಿ. ಆ ಭಜನ್ ಹಾಡಿ ನನ್ನ ಜೀವನನ್ನು ಸಾರ್ಥಕಗೊಳಿಸಿ’ ಎಂದು ಕೇಳಿಕೊಂಡ. ಪಂಡಿತ್ ಭೀಮಸೇನ ಜೋಷಿಯವರು ಹಾಡಿದರು. ಸಂಗೀತ ಅಲ್ಲಿ ಗೆದ್ದಿತ್ತು.
ಇಂತಹ ಸಂಗೀತದ ದೊಡ್ಡ ಪರಂಪರೆ ಕಟ್ಟಿದ ಸಾಧಕರ ಜನ್ಮ ಶತಮಾನೋತ್ಸವ ಕೂಡ ಸಾರ್ಥಕವಾಗಿ ನಡೆಯಬೇಕು.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..