ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ

ಸಿ. ಎಸ್. ಭೀಮರಾಯ

ಹೋರಾಟದ ಬೆನ್ನೇರಿ…….
ಸರಕಾರ ರೊಕ್ಕ ಮುದ್ರಿಸಬಹುದು
ತುಂಡು ರೊಟ್ಟೆಯನ್ನಲ್ಲ

ಲೇ: ಅಲ್ಲಾಗಿರಿರಾಜ್ ಕನಕಗಿರಿ
ಪುಟ: 70, ಬೆಲೆ:50/-
ಪ್ರಕಾಶನ: ಸಮೀರ್ ಪ್ರಕಾಶನ, ಕನಕಗಿರಿ

ಅಲ್ಲಾಗಿರಿರಾಜ್ ಕನಕಗಿರಿ ನಮ್ಮ ನಡುವಿನ ಸ್ಟಾರ್ ಕವಿ. ಕಾಲೇಜು ದಿನಗಳಿಂದಲೇ ಅಲ್ಲಾಗಿರಿರಾಜ್ ಕನಕಗಿರಿ ರೈತ ಹೋರಾಟ ಮತ್ತು ಸಾಮಾಜಿಕ ಚಳುವಳಿಯಲ್ಲಿ ಭಾಗಿಯಾಗುತ್ತ ಬಂದಿದ್ದಾರೆ. ನಾಡಿನ ಅನೇಕ ಜನಪರ-ಜೀವಪರ ಹೋರಾಟಗಳಲ್ಲಿ ಭಾಗವಹಿಸುತ್ತ ಬಂದಿರುವ ಅವರು ವರ್ತಮಾನದ ಬದುಕನ್ನು ಅದರ ಸಂಭಾವ್ಯ ವೈರುಧ್ಯಗಳಲ್ಲಿ ಗ್ರಹಿಸುವ, ಅಭಿವ್ಯಕ್ತಿಸುವ ಗಂಭೀರತೆಯನ್ನು ಪಡೆದವರು. ಅಲ್ಲಾಗಿರಿರಾಜ್ ಕನಕಗಿರಿ ‘ನೂರ್ ಗಜಲ್’, ‘ಸುರೂರ್ ಗಜಲ್’, ‘ಆಜಾದಿ ಗಜಲ್’, ‘ಸಾಕಿ ಗಜಲ್’, ‘ಸಂದಲ್ ಗಜಲ್’, ‘ಫಕೀರ್ ಗಜಲ್’ ಸಂಕಲನಗಳ ಮೂಲಕ ಗಜಲ್ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಅಲ್ಲಾಗಿರಿರಾಜ್ ಕನಕಗಿರಿ-ಖ್ಯಾತ ಕವಿ,ಲೇಖಕ ಹಾಗೂ ಗಝಲ್ ಕಾರರು

ಪ್ರಸ್ತುತ ‘ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟೆಯನ್ನಲ್ಲ’ ಅಲ್ಲಾಗಿರಿರಾಜ್ ಕನಕಗಿರಿಯವರ ಐದನೆಯ ಕವನಸಂಕಲನ. ಈ ಸಂಕಲನದಲ್ಲಿ ಐವತ್ತೇಳು ಕವಿತೆಗಳಿವೆ. ಈ ಕವಿತೆಗಳಲ್ಲಿ ಫ್ರೆಶ್ ಎನ್ನಿಸುವಂಥ ಗುಣವಿದೆ. ಕೆಲವೇ ದಿನಗಳಲ್ಲಿ ಈ ಕೃತಿ ಮೂರು ಬಾರಿ ಮುದ್ರಣ ಕಂಡಿದೆ. ಇಲ್ಲಿನ ಅನೇಕ ಕವಿತೆಗಳ ಪ್ರಧಾನ ಚಿಂತನೆ ಸಾಮಾಜಿಕ, ಧಾರ್ಮಿಕ,ರಾಜಕೀಯ ವೈರುಧ್ಯಗಳ ದಾಖಲೆಗೆ ಸಂಬಂಧಿಸಿದೆ. ಈಗ ದೇಶದ ರೈತ ಹೋರಾಟ, ಕೂಲಿಕಾರ್ಮಿಕರ ಚಳುವಳಿಗಳಲ್ಲಿ ಅಲ್ಲಾಗಿರಿರಾಜ್ ಕನಕಗಿರಿಯವರ ಹಾಡುಗಳೇ ಸ್ವಾಗತಗೀತೆಗಳಾಗಿ ಕೇಳುತ್ತಿರುವುದು ಅವರ ಕಾವ್ಯ ಅದೆಷ್ಟು ಜನರನ್ನು ಮುಟ್ಟಿದೆಯೆನ್ನುವುದಕ್ಕೆ ಸಾಕ್ಷಿಯಾಗಿದೆ. ಅವರ ಕಾವ್ಯಕ್ಕೆ ತನ್ನದೇ ಆದ ದೇಸೀಯತೆ ಇದೆ. ರೈತರಿಗೆ, ಕೂಲಿಕಾರ್ಮಿಕರಿಗೆ ಬಂಡೇಳುವ, ಸಿಟ್ಟಿಗೇಳುವ ಹಕ್ಕನ್ನು ಕನಕಗಿರಿಯವರ ಕಾವ್ಯ ಒದಗಿಸಿಕೊಟ್ಟಿರುವುದು ಗಮನಾರ್ಹ.

ಅಲ್ಲಾಗಿರಿರಾಜ್ ಕನಕಗಿರಿ ಉಪಯೋಗಿಸುವ ಪ್ರತಿಮೆ-ಪ್ರತೀಕಗಳಲ್ಲಿ ಹೊಸತನವಿದೆ, ಅವರ ಕಾವ್ಯದ ಎಲ್ಲ ಪ್ರತಿಮೆಗಳು ವರ್ತಮಾನದ ಅಂಶಗಳಾಗಿವೆ; ಚರಿತ್ರೆಗೆ ಸಂಬಂಧಿಯಾಗಿವೆ. ಕನಕಗಿರಿಯವರ ಕಾವ್ಯದ ಕ್ರಾಂತಿಗೆ ಒಂದು ನಿರ್ದಿಷ್ಟವಾದ ಗುರಿ ಇದೆ. ಅವರ ಕಾವ್ಯ ವರ್ತಮಾನದ ಬದುಕಿನ ಕೈಗನ್ನಡಿಯಾಗಿದೆ, ಶೋಷಿತ ಸಮುದಾಯದ ಭಾಷೆಯಾಗಿ ರೂಪಿತಗೊಂಡಿದೆ. ಅವರ ಕವಿತೆಗಳಲ್ಲಿ ವಾಸ್ತವತೆ ಇದೆ. ನೋವನ್ನು ಅನುಭವಿಸುವ ಕನಕಗಿರಿಯವರ ಮನಸ್ಸು ಕನಸನ್ನು ಕಾಣುತ್ತದೆ. ಆದ್ದರಿಂದಲೇ ಕನ್ನಡ ಸಾಹಿತ್ಯಲೋಕ ಅಲ್ಲಾಗಿರಿರಾಜ್ ಕನಕಗಿರಿಯವರ ಕಾವ್ಯಕ್ಕಾಗಿ ನಿರೀಕ್ಷೆಯಿಂದ ಕಾಯುತ್ತಿದೆ.

ಭ್ರಷ್ಟ ಪ್ರಭುತ್ವವನ್ನು ಪ್ರಶ್ನಿಸುವ ಕಾವ್ಯ ನಿರ್ಮಾಣವಾಗಬೇಕು, ಕಾವ್ಯದಿಂದ ದೇಶ ಕಟ್ಟುವ ಹೊಸ ವಿನ್ಯಾಸ ರೂಪಗೊಳ್ಳಬೇಕು. ಕಾವ್ಯವು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಲೇ ಇರುತ್ತದೆ. ಏಕೆಂದರೆ, ಅದರ ಜೀವಾಳವೇ ಮಾನವೀಯ ಅಂಶ. ಆದ್ದರಿಂದ ಕವಿ ವರ್ತಮಾನದ ಬದುಕಿನೊಡನೆ ಮುಖಾಮುಖಿಯಾಗಬೇಕು; ಅವನು ಯಾವಾಗಲೂ ಸತ್ಯವನ್ನೇ ಹೇಳಬೇಕು, ಗಟ್ಟಿಯಾದುದನ್ನೇ ಬರೆಯಬೇಕು. ಇಲ್ಲವಾದರೆ ಅವನು ಕವಿಯೇ ಆಗಲಾರ. ಪಂಪನಿಂದ ಚಂಪಾವರೆಗೆ ವಿಶ್ವದಾದ್ಯಂತ ಕವಿಗಳು ವರ್ತಮಾನಕ್ಕೆ ಸ್ಪಂದಿಸಿದ್ದಾರೆ; ವಿಶ್ವರಾಜಕಾರಣ, ಪ್ರಾಕೃತಿಕ ವಿಕೋಪ, ಭ್ರಷ್ಟಾಚಾರ, ಅಸಮಾನತೆ, ಕೋಮುವಾದ, ಜನವಿರೋಧಿ ಸಂಗತಿಗಳಿಗೆ ಕವಿ ಪ್ರತಿಭಟನೆ ನೀಡುತ್ತಾನೆ. ಪ್ರತಿಭಟನೆ, ಸ್ಪಂದನೆ, ಪ್ರತಿಕ್ರಿಯೆ, ಸಹಾನುಭೂತಿ, ಸಂಪ್ರೀತಿಗಳೆಲ್ಲ ಅಲ್ಲಾಗಿರಿರಾಜ್ ಅವರ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿವೆ.

ವಿವಾದಿತ ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ದೆಹಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆ ನೂರು ದಿನಗಳನ್ನು ದಾಟಿ ಮುಂದುವರೆದಿದೆ. ಇದು ಬಹು ದೀರ್ಘ ಹೋರಾಟವಾಗಿದೆ. ಈಗ ದೇಶದಲ್ಲಿ ಸಾಮಾಜಿಕ, ಧಾರ್ಮಿಕ,ಆರ್ಥಿಕ ಅಸಮಾನತೆಗಳು ತೀವ್ರವಾಗಿ ಬೆಳೆಯುತ್ತಿವೆ. ವರ್ತಮಾನದ ರಾಜಕಾರಣ ತನ್ನ ಮೈ ಮನಸ್ಸುಗಳಲ್ಲಿ ಅಸೂಯೆ ತುಂಬಿಕೊಂಡಿದೆ. ಹಣ, ಹುಸಿ ಭರವಸೆ, ಭ್ರಮೆ, ವಂಚನೆ, ಜಾತಿ ರಾಜಕಾರಣದ ಹೊಳೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳು ಕಣ್ಮರೆಯಾಗುತ್ತಿವೆ. ಸಿಂಹಾಸನ ಏರಿದವರೆಲ್ಲ ಕಳ್ಳರಾಗಿದ್ದಾರೆ. ಪ್ರಜೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಗೆ ರೈತರ, ಕೂಲಿಕಾರ್ಮಿಕರ, ಬಡವರ, ಮಧ್ಯಮವರ್ಗದವರ ನೋವು, ಸಂಕಟಗಳು ಕಾಣಿಸುವುದಿಲ್ಲ. ಈಗ ರೈತರು ಸರಕಾರದ ವಿರುದ್ಧ ಬಂಡೆದ್ದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೇ ಅಲ್ಲಾಗಿರಿರಾಜ್ ಕನಕಗಿರಿ ಹಾಡುತ್ತಾರೆ;

ನೀವು ಅಶ್ರುವಾಯು ಸಿಡಿಸಿ
ಕಣ್ಣು ಕತ್ತಲು ಮಾಡಬಹುದು ನಮ್ಮ ಕನಸುಗಳ ಮೇಲೆ.
ನಾವು ಮಂಜುಕವಿದ ವಾತಾವರಣವೆಂದು ಭಾವಿಸುತ್ತೇವೆ
ಏಕೆಂದರೆ ಪ್ರಕೃತಿ ಎಂದೂ ನಮ್ಮ ವೈರಿಯಲ್ಲ.

(ನೀವು ಎದೆಗೆ ಗುಂಡು ಹೊಡೆದರೆ)

ಇಲ್ಲಿಯ ಧ್ವನಿ ಕಾವ್ಯದ ಹರಳಾಗಿದೆ. ಇಲ್ಲಿ ಬರುವ ರೂಪಕಗಳು ಕವಿತೆಯ ಮಹತ್ವವನ್ನು ಹೆಚ್ಚಿಸಿವೆ. ಇದು ರೈತರಲ್ಲಿ ಹುದುಗಿರುವ ಅದಮ್ಯ ಶಕ್ತಿಯನ್ನು ಜಾಗ್ರತಗೊಳಿಸುವ ಹಾಗೂ ಪ್ರತಿಭಟನೆಯ ಅಗತ್ಯವನ್ನು ಪ್ರತಿಪಾಧಿಸುವ ಕವಿತೆ. ಕವಿತೆಯಲ್ಲಿ ವ್ಯಕ್ತವಾಗುವ ನೈತಿಕ ಆಕ್ರೋಶವು ರೈತ ವಿರೋಧಿ ವ್ಯವಸ್ಥೆಗೆ ವಾರ್ನಿಂಗ್ ಕೊಡುತ್ತಿರುವ ದಾಟಿಯಲ್ಲಿ ಬರೆಯಲ್ಪಟ್ಟಿದೆ. ಇದು ಶತ್ರುವಿನಲ್ಲಿ ಅಧೀರತೆಯನ್ನು ಹುಟ್ಟಿಸುವಂತೆ ರೈತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಅದ್ಭುತವಾಗಿ ಮಾಡಿದೆ. ‘ನೀವು ಎದೆಗೆ ಗುಂಡು ಹೊಡೆದರೆ’ ಕವಿತೆ ಅಲ್ಲಾಗಿರಿರಾಜ್ ಕನಕಗಿರಿಯವರನ್ನು ಸಮಕಾಲೀನ ಕವಿಗಳಲ್ಲಿ ಭಿನ್ನವಾಗಿಸಿಬಿಟ್ಟಿದೆ. ಈ ಕವಿತೆ ರಾಜ್ಯ-ರಾಷ್ಟ್ರಮಟ್ಟದಲ್ಲಿ ಹೆಚ್ಚು ಚರ್ಚೆಗೊಳಗಾಗಿದೆ. ರೈತರ ಬೇಡಿಕೆಗಳು ಮತ್ತು ಕನಸುಗಳು ಹೋರಾಟವಾಗಿ ರೂಪಗೊಳ್ಳಲು ಬಿಡದ ವಿಜೃಂಭಿತ ಪ್ರಭುತ್ವದ ಹಿಂಸಾಚಾರದ ಸ್ವರೂಪವನ್ನು ಈ ಕವಿತೆ ವರ್ಣಿಸುತ್ತದೆ. ರೈತರ ರೊಚ್ಚು ಧಿಕ್ಕಾರವಾಗಿ ಉಕ್ಕಿ, ಹೋರಾಡುವ ಸಿದ್ಧತೆಗಳು ನಡೆದರೂ ಹೋರಾಟಗಾರರಿಗೆ ಪ್ರಭುತ್ವ ಅಶ್ರುವಾಯು ಸಿಡಿಸಿ ರಾಕ್ಷಸನಗು ನಗುತ್ತದೆ. ರೈತರ ಮೈಮನಗಳ ಮೇಲೆ ಬರೆ ಎಳೆಯುವ ಪ್ರಭುತ್ವದ ಕ್ರೂರತೃಪ್ತಿಯ ನಿರೂಪಣೆ ಹಿಂಸಾಚಾರದ ಭೀಕರತೆಯನ್ನು ಕವಿತೆ ಕಣ್ಣಿಗೆ ಕಟ್ಟುತ್ತದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಸರ್ವಾಧಿಕಾರದ ದಬ್ಬಾಳಿಕೆಯನ್ನು, ಕ್ರೌರ್ಯಕ್ಕೆ ತುತ್ತಾದ ರೈತರ ಸಂಕಟಗಳನ್ನು, ಹಿಂಸಾಚಾರದ ವಿಶ್ವರೂಪವನ್ನು ಮನಕ್ಕೆ ಮುಟ್ಟಿಸುತ್ತದೆ.

ಧರ್ಮಗಳು ಮತ್ತು ಜಾತಿ ವ್ಯವಸ್ಥೆ ಕನಕಗಿರಿಯವರನ್ನು ಗಾಢವಾಗಿ ಕಾಡುತ್ತಿರುವ ಸಮಸ್ಯೆಯೆಂಬುದನ್ನು ಸಂಕಲನದಲ್ಲಿ ಆ ವಿಷಯ ಕುರಿತ ಹೆಚ್ಚಿನ ಕವಿತೆಗಳೇ ಸಾಕ್ಷಿ ನುಡಿಯುತ್ತಿವೆ. ಈ ದೇಶದಲ್ಲಿ ಕೆಲವು ಮೂರ್ಖರು ರಕ್ತಪಾತದ ನಡುವೆ ಧರ್ಮ ಬೆಳೆಸಲು, ಮಂದಿರ-ಚರ್ಚ್-ಮಸೀದಿಗಳನ್ನು ಕಟ್ಟಲು ಹೊರಟಿದ್ದಾರೆ.

ಗೋಡೆ ಎತ್ತರವಾಗುತ್ತಿದೆ ನಿನ್ನ ನನ್ನ ನಡುವೆ
ಧರ್ಮದ ವಿಷ ಗಾಳಿ ಕುಡಿದು
ಬೀದಿ ಬೀದಿಯಲ್ಲಿ ದ್ವೇಷದ ಬೆಂಕಿ ಕಂಡು
ಕೆಂಪು ಗುಲಾಬಿ ಬಣ್ಣ ಕಕ್ಕುತ್ತಿದೆ ವಿಷ ಗಾಳಿ ಕುಡಿದು.

(ವಿಷ ಗಾಳಿ ಕುಡಿದು)

ಇಂದು ಮಂದಿರ, ಮಸೀದಿಗಳ ಮುಂದೆ ಧರ್ಮದ ಹೆಸರಿನಲ್ಲಿ ರಕ್ತ ಹರಿಯುತ್ತಿದೆ, ಅನೇಕ ಜೀವಗಳು ಬಲಿಯಾಗುತ್ತಿವೆ. ಮಂದಿರ-ಮಸೀದಿಗಳಿಗೆ ಕರುಳಿಲ್ಲ, ಮನುಷ್ಯನ ಮನಸಿಲ್ಲ. ಮಂದಿರ-ಮಸೀದಿಗಳು ಅಳಿಯಲಿ, ಮನುಷ್ಯತ್ವ ಉಳಿಯಲಿ, ಭಾರತ ಬೆಳೆಯಲಿ.

ಕನಕಗಿರಿಯವರ ‘ಕೇರಿ ಹುಡುಗ’ ಕವಿತೆ ತೆಲಗು ಭಾಷೆಯ ಚಲ್ಲಪಲ್ಲಿ ಸ್ವರೂಪಾ ರಾಣಿಯರ ‘ನೀರು’ ಕವಿತೆಯನ್ನು ನೆನಪಿಸುತ್ತದೆ. ‘ನೀರು’ ನಮ್ಮ ಸಮಾಜದಲ್ಲಿನ ಅಸ್ಪøಶ್ಯರ ದುಃಸ್ಥಿತಿಯನ್ನು ತೋರಿಸುವ ಒಂದು ರೂಪಕವಾಗಿದೆ. ಕೆರೆ, ಕಾಲುವೆ ಮತ್ತು ಬಾವಿಗಳಲ್ಲಿರುವ ನೀರನ್ನು ಮುಟ್ಟಲು ದಲಿತರಿಗೆ ಅವಕಾಶವಿಲ್ಲದಿರುವುದು ವಿಚಿತ್ರ ಸಂಗತಿ.

ಸಂಜೆ ಒಂದು ದನಿ ಡಂಗೂರ ಸಾರುತ್ತಿತ್ತು
“ಕೇರಿ ಹುಡುಗ ಊರ ಗುಡಿಯ ಮುಂದೆ
ಸತ್ತ ಕಾರಣಕ್ಕೆ ಊರಿನ ಜನ ಮನೆಗೊಂದು,
ತುಂಬಿದ ಕೊಡಪಾನ ನೀರು ತಂದು ಗುಡಿ
ಮಡಿ ಮಾಡಬೇಕೆಂದು” ಜನ ಜಾತ್ರೆಯಾಯಿತು.

(ಕೇರಿ ಹುಡುಗ)

ದಲಿತ ಸಮುದಾಯವು ಅನುಭವಿಸುತ್ತಿರುವ ಅತ್ಯಂತ ದಾರುಣವಾದ ಪರಿಸ್ಥಿತಿಯನ್ನು ಓದುಗರ ಮನಸ್ಸು ಕರಗುವಂತೆ ಈ ಕವಿತೆಯಲ್ಲಿ ಕನಕಗಿರಿಯವರು ಚಿತ್ರಿಸಿದ್ದಾರೆ. ಭೂಮಂಡಲದ ಮೇಲಿನ ಎಲ್ಲ ಜೀವಿಗಳ ಉಳಿವಿಗೆ ಅತ್ಯಾವಶ್ಯಕವಾಗಿ ಬೇಕಿರುವುದು ನೀರು. ಆದರೆ ಶತಶತಮಾನಗಳಿಂದ ನಮ್ಮ ದೇಶದಲ್ಲಿ ಮೇಲ್ವರ್ಗದ ಜನರು ದಲಿತ ಸಮುದಾಯಕ್ಕೆ ನೀರನ್ನು ಕೊಡದೆ ಅವರನ್ನು ಶೋಷಿಸುತ್ತಾ ಬಂದಿದ್ದಾರೆ. ಈ ದೇಶದಲ್ಲಿ ಅನ್ನ ಮತ್ತು ನೀರಿಗೆ ಜಾತಿ-ಧರ್ಮಗಳ ಲೇಪನ ಹಚ್ಚುವುದು ಬಹಳ ಹಿಂದಿನಿಂದಲೇ ಬಂದಿದೆ. ಈಗ ಅದು ರೂಪಾಂತರಗೊಳ್ಳುತ್ತಿದೆ.

ಇಂದಿನ ವಿದ್ಯಮಾನಗಳಿಗೆ ತೀವ್ರವಾಗಿ ಸ್ಪಂದಿಸುವ ಕವಿಗೆ ಭೂತ-ವರ್ತಮಾನಗಳ ಲಾಳಿಯ ಅರಿವಿದೆ; ಎಚ್ಚರಿಕೆಯೂ ಇದೆ. ಕನಕಗಿರಿಯವರ ಕವಿತೆಯ ಯಶಸ್ಸಿರುವುದು ಕಠೋರ ವಾಸ್ತವ ಮತ್ತು ಶೋಷಣೆಗಳನ್ನು ಹೇಳಲು ಅವರು ತೋರುತ್ತಿರುವ ಸಂಯಮದಲ್ಲಿ.

ಈಗ ಊರ ತುಂಬ ಬರಗಾಲದ ಮಾತು
ಬಣ್ಣದ ಜಮಖಾನದಲ್ಲಿ ನಾಳೆಯ ಬದುಕಿದೆ
ಮಗ್ಗ ಮಗ್ಗಲು ಬದಲಿಸಿದರೆ ಮುಗಿಯಿತು
ಅದರ ಹಗ್ಗ ನನ್ನ ಅವ್ವನ ಕೊರಳು ಸುತ್ತಿಕೊಳ್ಳುತ್ತದೆ
ಹಸಿವಿನಾಟ ಬಡತನದ ರೂಪ ಬಲ್ಲವರಾರು?

(ನೇಕಾರನ ಮನೆಯ ಹಾಡು)

ಎನ್ನುವ ಸಾಲುಗಳಲ್ಲಿ ಬಡತನದ ದಾರುಣ ಕತೆಯಿದೆ. ಕವಿತೆಯ ವ್ಯಂಗ್ಯ ಯಶಸ್ವಿಯಾಗಿದೆ. ಅಲ್ಲಾಗಿರಿರಾಜ್ ಕನಕಗಿರಿಯವರ ಕಾವ್ಯದಲ್ಲಿ ಸಿಟ್ಟಿದೆ, ವ್ಯಗ್ರತೆ ಇದೆ. ಆದರೆ ಆ ಸಿಟ್ಟು, ವ್ಯಗ್ರತೆಗಳ ಹಿಂದೆ ಮಾನವೀಯತೆ ಅಂತರಜಲದಂತೆ ಪ್ರವಹಿಸುತ್ತಿದೆ. ಆರಂಭದಲ್ಲಿ ಗುರುತಿಸಿರುವಂತೆ ಅಲ್ಲಾಗಿರಿರಾಜ್ ಕನಕಗಿರಿ ವರ್ತಮಾನದ ಕವಿ. ಕನಕಗಿರಿಯವರ ಕವಿತೆಗಳಲ್ಲಿ ಹೋರಾಟದ ತೀವ್ರ ಸ್ವರೂಪವಿದೆ. ಜಗತ್ತಿನ ಎಲ್ಲ ಹೋರಾಟಗಳ ಬಗ್ಗೆಯೂ ಕವಿಗೆ ಆದರವಿದೆ.

ಈ ಸಂಕಲನದ ‘ನೀವು ಎದೆಗೆ ಗುಂಡು ಹೊಡೆದರೆ’, ‘ಕಥೆ ಕಟ್ಟಬೇಡಿ’, ‘ಅಲ್ಲಿ ವರ್ಣ-ಇಲ್ಲಿ ಧರ್ಮ’, ‘ವಿಷ ಗಾಳಿ ಕುಡಿದು’, ‘ಅಮ್ಮ ಹೆಣ್ಣು ಹಡೆಯಬೇಡ’, ‘ಒಂದು ಬಹಿರಂಗ ಪತ್ರ’, ‘ಕೇರಿ ಹುಡುಗ’, ‘ಬಯಲ ಹಕ್ಕಿಯ ಎದೆಯ ಹಾಡು’, ‘ನೇಕಾರನ ಮನೆಯ ಹಾಡು,’ ‘ತಲ್ವಾರ್ ಗಳು ಹಸಿದಿವೆ’-ಮೊದಲಾದ ಕವಿತೆಗಳಲ್ಲಿ ಸಮಾಜದ ವಿಷಮತೆಯೇ ಸ್ಥಾಯಿಯಾಗಿದೆ. ಉಳಿದ ಕೆಲವು ಕವಿತೆಗಳಲ್ಲಿ ವಾಚ್ಯ ಅತಿಯಾಗಿದ್ದರೂ ಅನುಭವದ ಕಾವು ದಟ್ಟವಾಗಿದೆ. ಅಲ್ಲದೆ ವ್ಯಂಗ್ಯವು ಪ್ರಧಾನವಾಗಿದೆ. ಭೂಮಾಲೀಕರ ಶೋಷಣೆ, ರಾಜಕಾರಣಿಗಳ ಶೋಷಣೆ, ಅಧಿಕಾರಶಾಹಿಯ ಶೋಷಣೆ –ಇತ್ಯಾದಿಗಳನ್ನು ಬಹಿರಂಗಗೊಳಿಸಿದ ‘ನೀವು ಎದೆಗೆ ಗುಂಡು ಹೊಡೆದರೆ’ ಕವನಸಂಕಲನ ಈ ದೃಷ್ಟಿಯಿಂದ ಒಂದು ಚಾರಿತ್ರಿಕ ದಾಖಲೆಯೇ ಆಗುತ್ತದೆ. ನ್ಯಾಯ ಪಡೆದುಕೊಳ್ಳುವ ಹುಮ್ಮಸ್ಸನ್ನು ಈ ಸಂಕಲನದ ಅನೇಕ ಕವಿತೆಗಳು ಪ್ರಚೋಧಿಸುತ್ತವೆ, ಹೋರಾಟದ ಕೆಚ್ಚನ್ನು ತುಂಬುತ್ತವೆ. ಭ್ರಷ್ಟ ಪ್ರಭುತ್ವದೆದುರು ಎದೆ ಸೆಟೆಸಿ ನಿಲ್ಲುವ ಹೋರಾಟದ ಹಾಡುಗಳನ್ನು ಕೊಟ್ಟ ಅಲ್ಲಾಗಿರಿರಾಜ್ ಕನಕಗಿರಿ, ಶೋಷಿತ ಸ್ಥಿತಿಯ ಇತರ ಸೂಕ್ಷ್ಮಗಳ ಶೋಧನೆಗೆ ತೊಡಗಿದರೆ ಮತ್ತಷ್ಟು ಮಹತ್ವದ ಕಾವ್ಯ ಕೊಡಬಹುದು.

ಸಿ. ಎಸ್. ಭೀಮರಾಯ (ಸಿಎಸ್ಬಿ), ವಿಮರ್ಶಕ ಹಾಗೂ ಲೇಖಕರು