- ಪಾತ್ರದೊಳಗಿನ ಕಲೆಗಳು - ಅಕ್ಟೋಬರ್ 28, 2024
- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
ಇರುವೆ ನಡಿಗೆ -12
“ಅನೂ! ಮಳೆಹನಿಗಳ ಜತೆಗೆ ಆಡಿ ಬೋರ್ ಆಯ್ತಾ?. ಹೊಸ್ತಿಲಲ್ಲಿ ಕುಳಿತು, ಮಾಡಿನಿಂದ ತೊಟ್ಟಿಕ್ಕುವ ಮಳೆಹನಿಗಳನ್ನು ನೋಡುತ್ತಾ ಏನೋ ಗಾಢಾಲೋಚನೆಯಲ್ಲಿರುವಂತಿದೆ!”
” ಮಾಮಾ!. ಈ ಮಳೆ ಆರಂಭದಲ್ಲಿ ಸಂಭ್ರಮ.. ಮತ್ತೆ ಏಕತಾನತೆ.. ಕಳೆದ ಒಂದು ವಾರದಿಂದ ಸೂರ್ಯನ ಕಿರಣಗಳು ಮೋಡ ದಾಟಿ ಬರ್ತಾನೇ ಇಲ್ಲ. ನೋಡು ದಿನವಿಡೀ ಅರೆಬರೆ ಕತ್ತಲೆ..”
” ಒಹ್, ಹೌದು ಪುಟ್ಟೂ!. ಬೆಳಕು ನಮ್ಮ ಮನಸ್ಸನ್ನು ಪ್ರಚೋದಿಸುವ, ಉತ್ಕರ್ಷಿಸುವ ಚೇತನಧಾರೆ. ಒಳ್ಳೆಯ ವಿಷಯ ಎತ್ತಿದೆ ನೋಡು. ಬೆಳಕು ಎಂದಾಗ ಅದೇನು ಎಂಬ ಕುತೂಹಲ ನಿನಗಿಲ್ಲವೇ?.”
” ಮಾಮಾ, ಈವತ್ತು ಹಾಗಿದ್ರೆ ಬೆಳಕಿನ ಕತೆ ಹೇಳು. ಅಮ್ಮ ಹುರಿದ ಹಲಸಿನ ಕಾಯಿ ಹಪ್ಪಳ ಇದೆ, ತರುವೆ. ಕುರು ಕುರು ತಿಂತಾ ನಂಗೆ ವಿವರಿಸು”
” ಹಾಂ! ತಿಂಡಿಪೋತಿ ಸೊಸೆ ನೀನು. ಬೇಗ ತಾ..
ಪುಟ್ಟೂ, ಈ ಐಸಾಕ್ ನ್ಯೂಟನ್ ಇದ್ದಾನಲ್ವಾ, ಅವನಿಗೂ ಬೆಳಕಿನ ಬಗ್ಗೆ ಅಗಾಧ ಕುತೂಹಲ ಇತ್ತು ನೋಡು. ಪಾಶ್ಚಾತ್ಯ ವಿಜ್ಞಾನದ ಪ್ರಕಾರ ಬೆಳಕಿನ ಮೊದಲ ಸಿದ್ಧಾಂತ ರೂಪಿಸಿದವನು ಐಸಾಕ್ ನ್ಯೂಟನ್. ನೀನು ನೋಡಿರಬಹುದು, ಹೊಗೆ ತುಂಬಿದ ಕೋಣೆಯಲ್ಲಿ, ಒಂದು ಟಾರ್ಚ್ ಲೈಟ್ ಆನ್ ಮಾಡಿದರೆ ಅದರಿಂದ ಹೊರಡುವ ಬೆಳಕು ಹೇಗೆ ಚಲಿಸುತ್ತೆ ಅಂತ “
“ಹೌದು ಮಾಮಾ, ಟಾರ್ಚ್ ನಿಂದ ಹೊರಟ ಬೆಳಕು ಒಂದು ಪುಂಜವಾಗಿ ನೇರವಾಗಿ ಚಲಿಸುವುದನ್ನು ನಾನು ನೋಡಿರುವೆ.”
” ಹೌದು..ಅದು ಬೆಳಕಿನ ಮೊದಲ ಸ್ವಭಾವ. ಅದು ಸರಳರೇಖೆಯಲ್ಲಿ ಅಂದರೆ ಸ್ಟ್ರೈಟ್ ಲೈನ್ ನಲ್ಲಿ ಚಲಿಸುತ್ತೆ. ಅದೇ ರೂಮ್ ನಲ್ಲಿ, ಒಂದು ಕನ್ನಡಿ ಇದೆ ಅಂತಿಟ್ಕೋ. ಈಗ ಟಾರ್ಚ್ ಅನ್ನು ಕನ್ನಡಿಯತ್ತ ಮುಖ ಮಾಡಿ ಆನ್ ಮಾಡಿದರೆ?”
” ಮಾಮಾ!, ಅದೂ ನಾನು ಮಾಡಿ ನೋಡಿರುವೆ. ಕನ್ನಡಿಗೆ ಬಿದ್ದ ಬೆಳಕು ಪ್ರತಿಫಲಿಸಿ ವಾಪಸ್ಸು ಬರುತ್ತೆ!”
” ಸರಿಯಾಗಿ ಹೇಳಿದೆ ಅನು!. ಅದು ನ್ಯೂಟನ್ ನ ಸಮಯದಲ್ಲಿ ಅನುಭವಕ್ಕೆ ಬಂದ ಬೆಳಕಿನ ಎರಡನೇ ಸ್ವಭಾವ. ಸಹಜವಾಗಿಯೇ ನ್ಯೂಟನ್‌ಗೆ ಇದೊಂದು ರೀತಿಯ ಕಣಗಳ ಪ್ರವಾಹ ಅಂತ ಅನಿಸಿತು. ಆ ಕಣಗಳಿಗೆ ಆತ ಕಾರ್ಪೆಸ್‌ಕ್ಯೂಲ್ ಅಂತ ಹೆಸರಿಟ್ಟ. ಹಾಗೆಯೇ ಈ ಕಣಗಳು ನೇರವಾಗಿ ಸಂಚರಿಸುವುದನ್ನು ವಿವರಿಸಲು ಸಾಧ್ಯವಾಯಿತು.
ಗೋಡೆಗೆಸೆದ ರಬ್ಬರ್ ಚೆಂಡು ಗೋಡೆಗೆ ಹೊಡೆದು ಹಿಂತಿರುಗಿ ಬರುವಂತೆಯೇ, ಈ ಕಣಗಳೂ ವಾಪಸ್ ಬರುತ್ತವೆ, ಅದೇ ಪ್ರತಿಫಲನ ಅಂತ ನ್ಯೂಟನ್ ವಿವರಿಸಿದ.”
” ಮಾಮಾ, ಈಗಲೂ ಬೆಳಕು ನ್ಯೂಟನ್ ಸಿದ್ಧಾಂತವನ್ನು ಫಾಲೋ ಮಾಡುತ್ತಾ?”
” ಅನು ಪುಟ್ಟೂ, ಗಮನವಿಟ್ಟು ಕೇಳು! ಬೆಳಕು ಯಾವುದೇ ಸಿದ್ಧಾಂತವನ್ನು ಫಾಲೋ ಮಾಡಿ ಚಲಿಸುವುದಲ್ಲ!. ಅದು ಅದರಷ್ಟಕ್ಕೇ ಚಲಿಸುವುದು. ಸಿದ್ಧಾಂತ, ಬೆಳಕಿನ ಸ್ವಭಾವವನ್ನು ಅರ್ಥ ಮಾಡಿಕೊಳ್ಳಲು ಮನುಷ್ಯ ರೂಪಿಸಿದ ಸೂತ್ರ ಅಷ್ಟೇ.
ನ್ಯೂಟನ್ ಈ ಥಿಯರಿಯ ಪ್ರತಿಪಾದನೆ ಮಾಡುವಾಗ ಬೆಳಕಿನ ಇನ್ನೊಂದು ಸ್ವಭಾವ ಬೆಳಕಿಗೆ ಬಂತು ನೋಡು. ಅದೇ ಇಂಟರ್‍ಫಿಯರೆನ್ಸ್.
ಪುಟ್ಟೂ, ನೀನು ಸಮುದ್ರದ ಅಲೆಯನ್ನು ಗಮನಿಸಿರುವೆಯಾ?.. “
” ಹೌದು ಮಾಮಾ, ತೀರದಿಂದ ಒಂದಷ್ಟು ದೂರದಿಂದ ಅಲೆ ಎದ್ದು ಬರುತ್ತೆ. ಹಾಗೆ ಬಂದು ದಡಕ್ಕೆ ಅಪ್ಪಳಿಸಿ ವಾಪಸ್ ಹೋಗುತ್ತೆ..”
” ಹ್ಞಾ!, ಈಗ ಯೋಚಿಸು. ಎರಡು ಅಲೆಗಳಿವೆ ಅಂತಿಟ್ಟುಕೋ. ಒಂದು ಸಮುದ್ರದ ದೂರದಿಂದ ತೀರದತ್ತ ಬರುವ ಅಲೆ. ಇನ್ನೊಂದು ಸ್ವಲ್ಪ ಮೊದಲೇ ತೀರಕ್ಕಪ್ಪಳಿಸಿ ವಾಪಸ್ ಹೋಗುವ ಅಲೆ. ಇವೆರಡೂ ಸಂಧಿಸಿದಾಗ ಏನಾಗುತ್ತೆ?”
” ಎರಡೂ ಅಲೆಗಳು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಇರುವುದರಿಂದ ಸಂದಿಸಿದ ಕೂಡಲೇ ತಮ್ಮ ತಮ್ಮ ಅಲೆಗಳೆತ್ತರ ಕಳೆದುಕೊಳ್ಳುತ್ತವೆ ಮಾಮಾ”
” ಹೌದು, ಇದಕ್ಕೆ ಡಿಸ್ಟ್ರಕ್ಟಿವ್ ಇಂಟರ್‍ಫಿಯರೆನ್ಸ್ ಅನ್ನೋದು. ಎರಡೂ ಅಲೆಗಳು ವಿರೋಧಿಸಿ ಪರಸ್ಪರರನ್ನು ನಾಶ ಮಾಡುವುದರಿಂದ ಇದಕ್ಕೆ ಆ ಹೆಸರು.
ಈಗ ಎರಡು ಅಲೆಗಳು ಸಮುದ್ರದ ದೂರದಿಂದ, ತೀರದತ್ತ ಜತೆಜತೆಗೇ ಬಂದರೆ?”.
” ನಾನು ನೋಡಿರುವೆ ಮಾದೇವ ಮಾಮ!. ಎರಡು ಅಲೆಗಳು ಪರಸ್ಪರ ಕೂಡಿದಾಗ, ದೊಡ್ಡ ಎತ್ತರದ ಅಲೆಯಾಗಿ ಮಾರ್ಪಾಡು ಆಗಿ ದಡವನ್ನು ಅಪ್ಪಳಿಸುತ್ತೆ. ಅದರ ಎತ್ತರ, ಅದರ ಶಕ್ತಿ ನೋಡಿದರೆ ಭಯವಾಗುತ್ತೆ.”
ಹ್ಞಾ, ಎರಡು ಅಲೆಗಳು ಜತೆ ಜತೆಗೇ ಒಂದೇ ದಿಕ್ಕಿನಿಂದ ಬಂದು ಒಂದಾದಾಗ, ಒಂದು ದೊಡ್ಡ ಅಲೆ ಉತ್ಪನ್ನ ಆಗುತ್ತೆ ಅಲ್ವಾ. ಅದಕ್ಕೆ ಕನ್ಸ್ಟ್ರಕ್ಟಿವ್ ಇಂಟರ್‍ಫಿಯರೆನ್ಸ್ ಅನ್ತಾರೆ.
ಬೆಳಕು ಕೂಡಾ ಇದೇ ಸ್ವಭಾವವನ್ನು ಹೊಂದಿದೆ.
ನ್ಯೂಟನ್ ನ ಕಣ ಸಿದ್ಧಾಂತ ಬೆಳಕಿನ ಈ ಸ್ವಭಾವವನ್ನು ವಿವರಿಸಲು ಅಸಮರ್ಥವಾಗುತ್ತೆ.”
” ಮಾಮಾ, ಸಮುದ್ರದ ಅಲೆಗಳು ಇಂಟರ್‍ಫಿಯರೆನ್ಸ್ ಆಗುವುದನ್ನು ವಿವರಿಸಿದೆ ಅಲ್ವಾ. ಬೆಳಕು ಕೂಡಾ ಹಾಗಿದ್ದರೆ ಅಲೆ ಅಲೆಯಾಗಿ ಚಲಿಸುತ್ತದೆಯಾ?’
” ಅನುಪುಟ್ಟು, ಜಾಣೆ ನೀನು. ಅದೇ ಅಲೆಸಿದ್ಧಾಂತ. ಹೈಜಿನ್ ನ ಅಲೆ ಸಿದ್ಧಾಂತ.
ಆ ಹೊತ್ತಿಗೆ ಕ್ರಿಸ್ಟಿಯಾನ್ ಹೈಜಿನ್ ಎಂಬ ವಿಜ್ಞಾನಿ ಈ ಹೊಸ ಸಿದ್ಧಾಂತ ಪ್ರತಿಪಾದಿಸಿದ. ಆ ಮೂಲಕ ಬೆಳಕಿನ ಇಂಟರ್‍ಫಿಯರೆನ್ಸ್ ಸ್ವಭಾವವನ್ನು ವಿವರಿಸಲು ಶಕ್ತನಾದ.
ಆದರೆ, ಹೈಜಿನ್ ನ ಅಲೆ ಸಿದ್ಧಾಂತದಲ್ಲಿ ಆತ ಬೆಳಕಿನ ಅಲೆ ಒಂದು ಮೆಕ್ಯಾನಿಕಲ್ ಅಲೆ, (ಸಮುದ್ರದ, ನೀರಿನ ಅಲೆಯಂತೆ). ಆ ಅಲೆ ಪ್ರವಹಿಸಲು ಮೀಡಿಯಂ ಬೇಕು. ಆ ಮೀಡಿಯಂ ಗೆ ದ್ರವ್ಯರಾಶಿ (Mass) ಬೇಕು.
ಇಲ್ಲಿ ಒಂದು ಅನೂಹ್ಯ ಪ್ರಶ್ನೆ ಬಂತು. ಸೂರ್ಯ, ಅಥವಾ ಇನ್ನಿತರ ನಕ್ಷತ್ರ ಗಳಿಂದ ಬೆಳಕು ಭೂಮಿಗೆ ಹರಿದು ಬರುತ್ತಲ್ವಾ. ಆದರೆ ಬಾಹ್ಯಾಕಾಶದಲ್ಲಿ ದ್ರವ್ಯರಾಶಿ ಇಲ್ಲ. ಅದು ನಿರ್ವಾತಪ್ರದೇಶ. ಹಾಗಿದ್ದರೆ ಈ ಹೈಜಿನ್ ನ ಅಲೆಗಳು ಬಾಹ್ಯಾಕಾಶ ದಲ್ಲಿ ಪ್ರವಹಿಸುವ ಬಗೆಯೇನು?..
ಹಾಗಾಗಿ ಹೈಜಿನ್, ಬಾಹ್ಯಾಕಾಶದಲ್ಲಿ ಈಥರ್ ಎಂಬ ಮೀಡಿಯಂ ಇದೆ, ಆದರೆ ಅದರ ದ್ರವ್ಯರಾಶಿ ಶೂನ್ಯಕ್ಕೆ ಸಮ ಎಂಬ ಅಸಂಫ್ಷನ್ ಮಾಡಿದ!”
” ಮಾಮಾ, ಹೈಜಿನ್ ನ ಥಿಯರಿ ಯನ್ನು ನ್ಯೂಟನ್ ಒಪ್ಪಿದನೇ?”
” ಇಲ್ಲ ಪುಟ್ಟು. ನ್ಯೂಟನ್ ಆ ಹೊತ್ತಿಗೆ ಅತ್ಯಂತ ಹೆಸರಾಂತ ವಿಜ್ಞಾನಿಯಾಗಿದ್ದ. ಹಾಗಾಗಿ ಹೈಜಿನ್ ನ ಸಿದ್ಧಾಂತವನ್ನು ಜಗತ್ತು ಬೇಗನೇ ಒಪ್ಪಲಿಲ್ಲ. ಅದಲ್ಲದೆ, ಹೈಜಿನ್ ಪ್ರಪೋಸ್ ಮಾಡಿದ ಈಥರ್ ಎಂಬ ಮಾಧ್ಯಮದ ಅಸ್ತಿತ್ವಕ್ಕೆ ಯಾವುದೇ ಪುರಾವೆ ಇರಲಿಲ್ಲ.
ಮುಂದೆ ಮ್ಯಾಕ್ಸ್‌ವೆಲ್ ಎಂಬ ವಿಜ್ಞಾನಿ, ಹೈಜಿನ್ ನ ಸಿದ್ಧಾಂತವನ್ನು ವಿಸ್ತರಿಸಿ ಬೆಳಕು ಅಲೆ ಹೌದು. ಆದರೆ ಅದು ಮೆಕ್ಯಾನಿಕಲ್ ಅಲೆ ಅಲ್ಲ. ಅದು ವಿದ್ಯುತ್ಕಾಂತೀಯ ತರಂಗ (electromagnetic wave) ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ. ಈ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಕ್ಕೆ ಮಾಧ್ಯಮದ ಅಗತ್ಯವಿಲ್ಲವಾದದ್ದರಿಂದ, ಬಾಹ್ಯಾಕಾಶದಲ್ಲಿ ಬೆಳಕಿನ ಪ್ರಯಾಣವನ್ನು ವಿವರಿಸಲು ಈಥರ್ ಮಾಧ್ಯಮದ ಅಗತ್ಯ ಇರಲಿಲ್ಲ. ಇಂದಿಗೂ ಬೆಳಕನ್ನು ವಿದ್ಯುತ್ ಕಾಂತೀಯ ತರಂಗವಾಗಿ ಪರಿಗಣಿಸಲಾಗುತ್ತೆ.”
” ಅಂತೂ ಬೆಳಕಿನ ಬಗೆಗೆ ಕೊನೆಗೂ ಒಂದು ಸಿದ್ಧಾಂತ ಸಿದ್ಧವಾಯಿತು ಅಲ್ವಾ ಮಾಮಾ”
” ಅರೇ! ಪುಟ್ಟೂ, ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಫೋಟೋಇಲೆಕ್ಟ್ರಿಕ್ ಇಫೆಕ್ಟ್ ಎಂಬ ವಿದ್ಯಮಾನ ಬೆಳಕಿಗೆ ಬಂತು. ಕೆಲವು ವಸ್ತುಗಳ ಮೇಲೆ ನಿರ್ದಿಷ್ಟ ಫ್ರೀಕ್ವೆನ್ಸಿಯ ಬೆಳಕು ಚೆಲ್ಲಿದಾಗ ಅದರಿಂದ ಇಲೆಕ್ಟ್ರಾನ್ ಹೊರಜಿಗಿಯುತ್ತೆ. ಇದೇ ಫೋಟೊಇಲೆಕ್ಟ್ರಿಕ್ ಇಫೆಕ್ಟ್. ಇದನ್ನು ವಿವರಿಸಲು ವಿದ್ಯುತ್ ಕಾಂತೀಯ ತರಂಗದ ಸಿದ್ಧಾಂತಕ್ಕೆ ಸಾಧ್ಯವಾಗಲಿಲ್ಲ.
ಮಾಕ್ಸ್ ಪ್ಲಾಂಕ್, ಐನ್ಸ್ಟೈನ್, ಹೈಸನ್‍ಬರ್ಗ್, ಫರ್ಮಿ, ಡಿರಾಕ್ ಇತ್ಯಾದಿ ಮೇಧಾವಿ ವಿಜ್ಞಾನಿಗಳು ಹುಟ್ಟು ಹಾಕಿದ ಹೊಅಸಿದ್ಧಾಂತದ ಹೆಸರೇ ಕ್ವಾಂಟಮ್ ಸಿದ್ಧಾಂತ. ಅದರ ಬಗ್ಗೆ ಮುಂದಿನ ವಾರ ಮಾತಾಡುವ ಆಯ್ತಾ ಪುಟ್ಟು.”
” ಆಯ್ತು ಮಾಮಾ. ಹಾಗಿದ್ದರೆ ಸಿದ್ಧಾಂತಗಳು ಒಂದರ ನಂತರ ಒಂದು, ಬರುವಾಗ ಮೊದಲನೆಯ ಸಿದ್ಧಾಂತ ಸುಳ್ಳು ಅಂತಾನಾ ಮಾಮಾ?. ಜಗತ್ತನ್ನು ಅರ್ಥಮಾಡಿಕೊಳ್ಳಲು ಒಂದು ಪರ್ಮನೆಂಟ್ ಸಿದ್ಧಾಂತ ಇಲ್ಲ ಅನಿಸಿತು. ಅಲ್ವಾ ಮಾಮ”
” ಸರಿಯಾಗಿ ಹೇಳಿದೆ ಪುಟ್ಟು. ಇಲ್ಲಿ ಗಮನಿಸಬೇಕಾದ ವಿಷಯ, ಒಂದೊಂದು ವಿದ್ಯಮಾನಗಳಿಗೆ ಒಂದೊಂದು ಸಿದ್ಧಾಂತ. ಸಿದ್ಧಾಂತದ ಹಿಂದೆ ಅಸಂಪ್ಷನ್ ಗಳು, ಹೈಪಾಥಿಸಿಸ್ ಗಳು. ಜೀವಶಾಸ್ತ್ರ ದ ಸಿದ್ಧಾಂತ ಭೌತಶಾಸ್ತ್ರದ ಸಿದ್ಧಾಂತ ಹೀಗೆ ಪ್ರತಿಯೊಂದು ವಿಷಯಗಳಲ್ಲಿಯೂ ಅವುಗಳದ್ದೇ ಆದ ಥಿಯರಿಗಳು. ಒಂದನ್ನು ಉಪಯೋಗಿಸಿ ಇನ್ನೊಂದನ್ನು ವಿವರಿಸಲು ಸಾಧ್ಯವಿಲ್ಲ.
ಟು ಬಿ ಫ್ರ್ಯಾಂಕ್, ಪುಟ್ಟೂ, ನಾನಿದನ್ನೆಲ್ಲ ನಿಂಗೆ ವಿವರಿಸಲು ಕಾರಣವೇ ಅದು. ಹೊಸ ಹೊಸ ಸಿದ್ಧಾಂತಗಳು ಹೇಗೆ ಹುಟ್ಟುತ್ತವೆ. ಹಳೆಯ ಸಿದ್ಧಾಂತಗಳನ್ನು ಅಲ್ಲಗಳೆಯುವ ಹೊಸ ಸಿದ್ದಾಂತ ಮತ್ತೆ ಹಳೆಯದಾಗಿ ಇನ್ನೊಂದು ಹೊಸ ಸಿದ್ಧಾಂತದ ಕೊಡಲಿಯೇಟಿಗೆ ಜೀವ ತೊರೆಯುತ್ತೆ.
ಸಮಾಜ ಶಾಸ್ತ್ರದಲ್ಲಿ, ಜನಜೀವನದ ಇತರ ವಿಚಾರಪ್ರಪಂಚದಲ್ಲಿ ಆಕರ್ಷಕ ಸಿದ್ಧಾಂತಗಳಿಗೆ ಅಂಟಿಕೊಳ್ಳುವಾಗ ನಮ್ಮ ಮನಸ್ಸು, ತನ್ನ ಅನಂತ ಸಾಧ್ಯತೆಗಳನ್ನು ತೊರೆದು, ಸಿದ್ಧಾಂತದ ಕೋಣೆಯೊಳಗೆ ತನ್ನನ್ನು ತಾನೇ ಬಂದಿಯಾಗಿಸಿ ಬಿಡುತ್ತದೆ! ಅಲ್ವಾ ಮಗಳೇ?..
ಅದಿರಲಿ, ಇಪ್ಪತ್ತನೇ ಶತಮಾನದ ಆರಂಭದ ಮೂರು ದಶಕಗಳಲ್ಲಿ, ವಿಜ್ಞಾನಿಗಳ ಮೇಧೋಶಕ್ತಿ, ಕಲ್ಪನಾಶಕ್ತಿ ಮತ್ತು ತೆರೆದ ಮನಸ್ಸಿನಿಂದ ನಡೆಸಿದ ಟೀಮ್ ವರ್ಕ್ ನಿಂದ ಒಂದು ಹೊಸ ಸಿದ್ಧಾಂತ ರೂಪು ತಳೆಯಿತು. ಅದು ನಿಜ ಜೀವನದ ಕಲ್ಪನೆಗಳಿಂದ ಸಾಕಷ್ಟು ದೂರವಾದರೂ, ಜತೆಗೇ ಕಟ್ಟಿ ಬೆಳೆಸಿದ ಹೊಸ ಗಣಿತ ಸಾಧನಗಳಿಂದ, ಹಲವು ವಿದ್ಯಮಾನಗಳನ್ನು ವಿವರಿಸಲು ಶಕ್ತವಾಯಿತು. ಆ ಕ್ವಾಂಟಮ್ ಸಿದ್ಧಾಂತದ ವಾಸ್ತುವನ್ನು ಮುಂದಿನ ವಾರ ವಿವರಿಸುವ ಪ್ರಯತ್ನ ಮಾಡುವೆ.
ಆಯ್ತಾ ಬೆಣ್ಣೆ ಮುದ್ದೇ!!?”
” ಇದೆಂತ ಹೊಸ ಹೆಸರು ಮಾಮ!
ಬೆಣ್ಣೆ ಮುದ್ದೆ!! , ಸರಿ. ಮುಂದಿನ ವಾರ ಕ್ವಾಂಟಮ್ ಫಿಸಿಕ್ಸ್ ತಿಳಿಯಲು ಕಾಯುವೆ”
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..