ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಿ ವಿ ಕುಲಕರ್ಣಿ
ಇತ್ತೀಚಿನ ಬರಹಗಳು: ಜಿ ವಿ ಕುಲಕರ್ಣಿ (ಎಲ್ಲವನ್ನು ಓದಿ)

ಬಾಲಿವುಡ್‍ನ ಸುಪ್ರಸಿದ್ಧ ಕೇಶ ವಿನ್ಯಾಸಕ ಶಿವರಾಮ ಭಂಡಾರಿ ಅವರ ಜೀವನ ಗಾಥೆ
“ಸ್ಟೈಲಿಂಗ್ ಅಟ್ ದಿ ಟಾಪ್’’

ಪೀಠಿಕೆ:
ಶ್ರೀ ಶಿವರಾಮ ಭಂಡಾರಿ ಅವರಿಗೆ ಈಗ ಐವತ್ತೆಂಟರ ಪ್ರಾಯ. ಅವರು ಕೇಶವಿನ್ಯಾಸ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬೆರಗುಗೊಳಿಸುವಂಥಹದು. ಕಾರ್ಕಳದ ಅತ್ತೂರಿನ ಸಮೀಪದ ನಾಗೋಲಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ, ಬಡ ನಾಪಿತ(ಭಂಡಾರಿ)ಸಮಾಜಕ್ಕೆ ಸೇರಿದ, ವಾಮನಾಕಾರದ ಬಾಲಕರಾಗಿದ್ದರು. ಬಡತನ ಮತ್ತು ದುರ್ದೈವದ ಶಿಕಾರಿಯಾಗಿ ಬಾಲ್ಯ ಕಳೆದರು. 5ನೆಯ ತರಗತಿಯವರೆಗೆ ಮಾತ್ರ ಅಭ್ಯಾಸ ಮಾಡಿದ ಅವರು ಎಳಮೆಯಲ್ಲಿಯೇ ಕೇಶಕರ್ತನ ವೃತ್ತಿಯನ್ನು ಪ್ರಾರಂಭಿಸಿದರು. ಪ್ರತಿಭೆ, ಪರಿಶ್ರಮ, ಮಹತ್ವಾಕಾಂಕ್ಷೆಯ ಬೆಂಬಲದಿಂದ ತ್ರಿವಿಕ್ರಮನಾಗಿ ಬೆಳೆದರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದರು, ರೆಪಿಡೆಕ್ಸ್ ಓದಿ ಇಂಗಿಷ್‍ನಲ್ಲಿ ಮಾತಾಡಲು ಕಲಿತರು, ಹಲವಾರು ಭಾಷೆಗಳನ್ನು ( ತಮಿಳು, ಮಲಯಾಳಂ, ಹಿಂದಿ, ಮರಾಠಿ, ಅರೇಬಿಕ್) ಸುಲಲಿತವಾಗಿ ಮಾತಾಡಲು ಕಲಿತರು, ಬಾಲಿವುಡ್‍ನಲ್ಲಿಯೂ ಬಹುಬೇಡಿಕೆಯ ವ್ಯಕ್ತಿಯಾದರು, ವಿದೇಶಗಳಲ್ಲಿ ತರಬೇತಿ ಪಡೆದರು, ತನ್ನ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದ ಪ್ರಥಮ ಭಾರತೀಯನಾದರು.
ಜೀವನದ ಸಂಗ್ರಾಮದಲ್ಲಿ ಶಿವರಾಮ ಅವರಷ್ಟು ಕಷ್ಟ ಅನುಭವಿಸಿದವರು ವಿರಳ. ಕೇಶವಿನ್ಯಾಸಕರಾಗಿ, ಬೋಧಕರಾಗಿ, ಉದ್ಯಮಿಯಾಗಿ ಲಕ್ಷ್ಮಿಯನ್ನು ಒಲಿಸಿಕೊಂಡರೂ, ವೃದ್ಧಾಶ್ರಮಗಳಿಗೆ, ಬಡಮಕ್ಕಳಿಗೆ, ಧಾರ್ಮಿಕ ಸಂಘ-ಸಂಸ್ಥೆಗಳಿಗೆ ಉದಾರವಾಗಿ ದಾನ ನೀಡುತ್ತ ಬಂದಿದ್ದಾರೆ. ಉಪಕಾರ ಮಾಡಿದವರನ್ನು ಇವರು ಮರೆತಿಲ್ಲ, ಪೀಡೆ ಕೊಟ್ಟವರ ಬಗ್ಗೆ ಅವರಲ್ಲಿ ಇವರಿಗೆ ದ್ವೇಷವಿಲ್ಲ, ಅವರನ್ನೆಲ್ಲ ಕ್ಷಮಿಸಿದ್ದಾರೆ. ಅವಕಾಶ ದೊರೆಯದ, ನಿರುದ್ಯೋಗದಿಂದ ಬಳಲುವ, ತಮ್ಮ ದೈವ ಹಳಿಯುತ್ತ ಕಾಲಕಳೆಯುವ ಯುವಕರಿಗೆ ಅವರ ಜೀವನಗಾಥೆ ಸ್ಫೂರ್ತಿಯನ್ನು ನೀಡುವುದರಲ್ಲಿ ಸಂಶಯವಿಲ್ಲ.

ಶ್ರೀಮತಿ ಜಯಶ್ರೀ (ಲೆಂಗಡೆ) ಶೆಟ್ಟಿ ಅವರು ಶಿವರಾಮ ಭಂಡಾರಿಯವರ ಜೀವನಗಾಥೆಯನ್ನು, `Styling at the top’, ಮೊದಲು ಆಂಗ್ಲಭಾಷೆಯಲ್ಲಿ ಬರೆದರು. ಆ ಗ್ರಂಥ ಬಿಡುಗಡೆ ಹಿಂದಿ ಚಿತ್ರಪ್ರಪಂಚದಲ್ಲಿ ನಟಸಾರ್ವಭೌಮನೆಂದೇ ಪ್ರಸಿದ್ಧನಾದ ಅಮಿತಾಭ ಬಚ್ಚನ್ ಅವರ ಮನೆಯಲ್ಲಿ ನಡೆಯಿತು(5 ಸಪ್ಟೆಂಬರ್, 2019). ಅದರ ಕನ್ನಡ ಅನುವಾದವನ್ನು ಸಮರ್ಥವಾಗಿ ಡಾ|ಶಿವಾನಂದ ಬೇಕಲ್ ಅವರು ಮಾಡಿದ್ದಾರೆ. (ಸ್ಟೈಲಿಂಗ್ ಅಟ್ ದಿ ಟಾಪ್’, 2019, ಮಂಜುಳ ಪಬ್ಲಿಷೀಂಗ್ ಹೌಸ್, ಭೋಪಾಳ-462 003, ಬೆಲೆ ರೂ.499). ಕನ್ನಡ ಅನುವಾದದ ಬಿಡುಗಡೆಯನ್ನು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರು ಮಾಡಿದ್ದಾರೆ. ಇದರ ಮುಂಬೈ ಬಿಡುಗಡೆ ಕನ್ನಡ ಅಧ್ಯಯನ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ಕಲೀನಾ ಕ್ಯಾಂಪಸ್, ಸಂತಾಕ್ರುಜ್(ಪೂ) ದಲ್ಲಿ ವೈಭವಪೂರ್ಣವಾಗಿ ನಡೆಯಿತು. ಇದರ ಮರಾಠಿ ಅನುವಾದದ ಬಿಡುಗಡೆ ಮಹಾರಾಷ್ಟ್ರ ಸರಕಾರದ ಸಚಿವ ಶ್ರೀ ಆದಿತ್ಯ ಠಾಕರೆ ಅವರು ಮುಂಬೈಯಲ್ಲಿ ಮಾಡಿದರು. ಇದರ ಹಿಂದಿ ಹಾಗೂ ಗುಜರಾತಿ ಅನುವಾದಗಳು ಕೂಡ ಅನತಿಕಾಲದಲ್ಲಿ ಬೆಳಕಿಗೆ ಬರಲಿವೆ.


2001ರಲ್ಲಿ ಒಬ್ಬ ಗ್ರಾಹಕನ ಕೇಶವಿನ್ಯಾಸವನ್ನು ಶಿವರಾಮ ವಿಲಕ್ಷಣವಾಗಿ ಮಾಡಿದ್ದನ್ನು ಕಂಡು, ಅವರ ಪ್ರಥಮ ಸಂದರ್ಶನ ಬರೆಯಲು ಜಯಶ್ರೀ ಅವರನ್ನು ಭೇಟಿಮಾಡಿದರು. ಆ ಸಮಯದಲ್ಲಿ ದೇಶ ಅದೊಂದು ಯುದ್ಧಾಸ್ತ್ರದ ವಹಿವಾಟಿನಲ್ಲಿ ಓಲಾಡುತ್ತಿದ್ದಿತು. ಈ ಸ್ಕೂಪಿಗೆ ಕಾರಣವಾದ ಮಾಧ್ಯಮದ ಮನೆಯವರು ಹೊರಡಿಸಿದ ಚಿಹ್ನೆಯೊಂದನ್ನು ಶಿವರಾಮ ತಮ್ಮ ಗಿರಾಕಿಯ ತಲೆಯಲ್ಲಿ ಕೆತ್ತುವ ಸನ್ನಾಹ ಮಾಡಿದ್ದರು. ಈ ಸಾಹಸ ಕಾರ್ಯ ರೈಟರ್ ನ್ಯೂಸ್‍ವಯರ್ ಸಂಸ್ಥೆ ಸುದ್ದಿಯಾಗಿ ಪ್ರಕಟಿಸಿದಾಗ ಅದೊಂದು ಜಾಗತಿಕ ಮಟ್ಟದ ಪ್ರಚಾರ ಪಡೆಯಿತು. ಮಧ್ಯಪೂರ್ವ ದೇಶಗಳಲ್ಲಿನ ಗಿರಾಕಿಗಳು ಕೂಡ ಅವರನ್ನು ತುರ್ತಾಗಿ ಸಂಪರ್ಕಿಸಿದರು. ತದನಂತರ ಅವರ (ಕೇಶಕರ್ತನ) ವಿನ್ಯಾಸಗಳು, ಮುಖ್ಯವಾಗಿ ದೈನಂದಿನ ವಾರ್ತೆಗಳಿಗೆ ಸಂಬಂಧಿಸಿದ, ಕ್ರಿಕೆಟ್ ಮತ್ತು ಫುಟ್‍ಬಾಲ್ ಮ್ಯಾಚ್‍ಗಳಿಗೆ ಸಂಬಂಧಿಸಿದ, ಚುನಾವಣೆ ಮತ್ತು ಸಿನೇಮಾ ತಾರೆಯರ ಸುದ್ದಿಗಳಿಗೆ ಸಂಬಂಧಿಸಿದ, ಭಾವಚಿತ್ರಗಳು ಮತ್ತು ಸೌಂದರ್ಯ ಸ್ಪರ್ಧೆಗಳೂ ಸೇರಿದಂತೆ ಪ್ರಚಾರಗಿಟ್ಟಿಸತೊಡಗಿದವು. ಅವರ ಸಲೂನ್‍ಗಳ ಎದುರುಗಡೆಯ ಕ್ಯೂಗಳೇ ಅವರ ಪ್ರತಿಭೆಯನ್ನು ಕೊಂಡಾಡುವ ದ್ಯೋತಕಗಳಾಗಿದ್ದವು. ಗಿರಾಕಿಗಳು ಅವರಿಂದ ತರಾವರಿಯ ವಿಲಕ್ಷಣ ವಿನ್ಯಾಸಗಳನ್ನು ಮಾಡಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದರು. ಶಿವರಾಮ ಅವರ ಖ್ಯಾತಿ ಬೆಳೆಯಿತು. ಜಯಶ್ರೀಯವರು ಅವರ ಜೀವನ ಗಾಥೆ ಬರೆದರು.

ಜಯಶ್ರೀ (ಲೆಂಗಡೆ) ಶೆಟ್ಟಿ

ಜಯಶ್ರೀ ಅವರ ಕಿರುಪರಿಚಯ: ಜಯಶ್ರೀ ಅವರು ಮುದ್ರಣ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಓರ್ವ ಪತ್ರಕರ್ತೆಯಾಗಿದ್ದು, ಮುಂಬಯಿಯಲ್ಲಿ ನೆಲೆಸಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಿಂದ ಪ್ರಾರಂಭಿಸಿದ ಅವರು, ನ್ಯೂಸ್ ಟುಡೆ/ಇಟಿವಿ ನ್ಯೂಸ್ ಮತ್ತು ರೈಟರ್‍ಗಳಿಗೆ ದುಡಿದಿದ್ದಾರೆ. ವೃತ್ತಪತ್ರಿಕೆಗಳಿಗೂ, ನಿಯತಕಾಲಿಕಗಳಿಗೂ ವಾರ್ತಾಚಿತ್ರಗಳನ್ನು ಒದಗಿಸುತ್ತಾರೆ. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಅನುದಾನಿತ ಬೆಳಗಾವಿಯ ರಾಣಿ ಪಾರ್ವತೀದೇವಿ ಕಾಲೇಜಿನಿಂದ ಆರ್ಟ್ಸ್‍ನಲ್ಲಿ ಪದವಿಯನ್ನು ಪಡೆದಿದ್ದಾರೆ. ಮಹಾರಾಷ್ಟ್ರದ ಪೂನಾ ವಿಶ್ವವಿದ್ಯಾಲಯದಿಂದ ಕಮ್ಯುನಿಕೇಶನ ಮತ್ತು ಜರ್ನ್ಯಾಲಿಜಂದಲ್ಲಿ ಪದವಿಯನ್ನೂ ಪಡೆದಿದ್ದಾರೆ.

(1)

ವಿಧವೆಯ ಶಿಖೆ

ಹನ್ನೆರಡು ವರ್ಷ ಪ್ರಾಯದ ವಿಧವೆಯ ಕೇಶ ಮುಂಡನ ತಮ್ಮ ಮೊದಲ ನೌಕರಿಯಾಗಿತ್ತು ಎಂದು ಶಿವರಾಮ ಬಣ್ಣಿಸುತ್ತಾರೆ. (ಇವರು ಮೂರುವರೆ ವರ್ಷದ ಬಾಲಕನಾಗಿದ್ದಾಗ ತಂದೆ ಮೃತರಾಗಿದ್ದರು. ಚಿಕ್ಕಪ್ಪನ ಕೈಯಲ್ಲಿ ಕೆಲಸ ಕಲಿಯುತ್ತಿದ್ದರು. ಚಿಕ್ಕಪ್ಪ ಕೊಟ್ಟ ಮೊದಲ ಕೆಲಸ ಎಂದರೆ ವಿಧವೆಯ ಕೇಶ ಮುಂಡನ ಮಾಡುವ ಕಾರ್ಯ.) ಇವರು ಬ್ಲೇಡನ್ನು ( ಹಳೆಯ ಕಾಲದ ಹಜಾಮರ ಕತ್ತಿಯನ್ನು) ನಯವಾಗಿ ಮೃದುವಾಗಿ ಚರ್ಮದ ಮೇಲೆ ಆಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಚಿಕ್ಕಮಗಳೂರಿಂದ ನಾಲ್ಕು ಮೈಲಿನಷ್ಟು ದೂರ ಕ್ರಮಿಸಿದ್ದರು. ಕಾಫೀತೋಟದ ಕೊನೆಯ ಅಂಚಿಗೆ ತಲುಪಿದಾಗ ಒಂದು ಸಮತಟ್ಟಾದ ಪ್ರದೇಶ ಎದುರಾಯಿತು. ಮುಂದುವರಿದಂತೆ ದೂರದಲ್ಲಿ ಹಂಚುಹೊದಿಸಿದ ಬೃಹತ್ ಮನೆಯೊಂದು ಗೋಚರಿಸಿತು. ಅಲ್ಲಿ ಸ್ಮಶಾನ ಮೌನ ಆವರಿಸಿತ್ತು. ದೂರದ ಹೊಲದ ಕಡೆಯಿಂದ ಕಾಡು ನರಿಯೊಂದು ಗೂಳಿಟ್ಟ ಭಯಾನಕ ಸದ್ದು ಕೇಳಿಸಿತು. ಮರುಕ್ಷಣವೇ, ಅಪ್ಪಟ ಶ್ವೇತವಸನಧಾರಿ ಹುಡುಗಿಯೊಬ್ಬಳು ಮನೆಯಿಂದ ಹೊರಕ್ಕೆ ಸುಳಿದು ಇವರತ್ತ ನಡೆದು ಮೊದಲೇ ಸಜ್ಜುಗೊಳಿಸಿದ ಮಣೆಯ ಮೇಲೆ ಕುಳಿತಳು. ಆ ಸ್ಥಿತಿಯ ಬಗ್ಗೆ ಹೇಳುತ್ತಾರೆ:
ನನ್ನೆದುರು ತಲೆಬಾಗಿ ಕುಳಿತಲ್ಲಿಂದಲೇ ಮೆಲ್ಲನೆ ಬಿಕ್ಕುತ್ತಿರುವ ಸದ್ದು ಅವ್ಯಾಹತವಾಗಿ ಕೇಳಿಸತೊಡಗಿತು. ಬ್ಲೇಡನ್ನು ಓಡಿಸುವ ಮೊದಲು, ನನ್ನಲ್ಲಿ ಅನಿರ್ವಚನೀಯವಾದ ಭಾವನೆಯೊಂದು ಪುಟಿದೆದ್ದಿತು. ಆಕೆಯ ಕೂದಲ ರಾಶಿಯ ಮೇಲೆ ಬ್ಲೇಡನ್ನು( ಬಾಳು-ವಸ್ತ್ರ-ಹಳೆಯ ಕಾಲದ ಸಾಧನ) ಓಡಿಸಲು ನನಗೆ ಅತೀವ ಅಂಜಿಕೆಯಾಯಿತು. . . ಅದೊಂದು ಗೊಡ್ಡು ಸಂಪ್ರದಾಯದ ಕುರುಹಾಗಿ ಆಕೆ ಮುಂಡನ ಮಾಡಿಸಿಕೊಳ್ಳುತ್ತಿದ್ದಾಳೆ ಎಂದು ನನಗೆ ಮನವರಿಕೆಯಾಯಿತು. . . . . .ನನ್ನ ಬದುಕಿನಲ್ಲಿ ಪ್ರಥಮ ಬಾರಿಗೆ ಕ್ಷೌರಿಕನ ನೇರ ಬಾಳನ್ನು,ಆ ಹದಿಹರಯಕ್ಕೆ ಕಾಲಿಡುತ್ತಿರುವ ಹೆಣ್ಣಿನ ಹೆರಳ ರಾಶಿಯ ಮೇಲೆ ಬಳಸುತ್ತಿದ್ದೇನೆ ಎಂಬ ಅಳುಕು ನನ್ನಲ್ಲುಂಟಾಗಿ ತುಸು ವಿಚಲಿತನಾದೆ. ಯಾಕೆಂದರೆ ಅದು ನನ್ನ ವೃತ್ತಿ ಜೀವನದ ಮೊದಲ ಹೆಜ್ಜೆಯಾಗಿತ್ತು. . . ಆಗ ನಾನು ಕೂಡಾ ಬಹುಶಃ ಹನ್ನೆರಡು ವರ್ಷದವನಿರಬೇಕು. ಓರ್ವ ವೃತ್ತಿಪರನ ಕೈಲಿದ್ದ ಸಲಕರಣೆಯಂತೆ ಅತ್ಯಂತ ಚಾಣಕ್ಷತೆಯಿಂದ, ದೃಢತೆಯಿಂದ ನನ್ನ ಕೈಯಲಿದ್ದ ಬಾಳು ಕೆಲಸ ಮಾಡಿತು ಎನ್ನಬೇಕು. ಒಂದರ ಮೇಲೊಂದರಂತೆ ಕೂದಲ ರಾಶಿ ಗುಪ್ಪೆಗುಪ್ಪೆಯಾಗಿ ಆಕೆಯ ಮುಂದಲೆಯಿಂದ ಉರುಳತೊಡಗಿದ್ದು, ದಟ್ಟವಾಗಿ ಆಕೆಯ ಮಡಿಲನ್ನು ತುಂಬತೊಡಗಿತು. . . .ನನಗೆ ಆ ಕಾಯಕ ಒಂದು ಅಗ್ನಿಪರೀಕ್ಷೆಯಂತಿದ್ದರೂ, ನನ್ನ ಒಂದು ಕರ್ತವ್ಯವೆಂಬಂತೆ ಅದನ್ನು ನಾನು ನಿಭಾಯಿಸುತ್ತಿದ್ದೆ. ಕೆಲವೇ ನಿಮಿಷಗಳಲ್ಲಿ ಪೂರ್ತಿ ತಲೆಗೂದಲು ಗೀಸಿಕೊಂಡು ಆಕೆಯ ತಲೆ ಬಣಬಣವಾಗಿ ಬೋಳಾಗಿ ನಿಂತಿತ್ತು! . . . ಹಳ್ಳಿಗಾಡಿನ ಮನೆತನಗಳಲ್ಲಿ ಮನೆಮಾಡಿರುವ ಇಂತಹ ವಿಧವಾ ಸ್ತ್ರೀಯರ ಬದುಕು ಹೇಗೆ ಸುತ್ತಮುತ್ತಲಿನ ಹೆಂಗಳೆಯರ ಬಿರುಮಾತಿಗೆ ಗ್ರಾಸವಾಗಿ, ಅವರ ವಿಧವಾ ಬಾಳನ್ನು ಹೇಗೆ ನರಕ ಸದೃಶ ಮಾಡುತ್ತದೆ ಎನ್ನುವ ವಿಭ್ರಮೆ ನನ್ನನ್ನು ಸಾಕಷ್ಟು ಕಾಡಿತು. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬಗಳು, ಅವು ಜಾತಿ ವ್ಯವಸ್ಥೆಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಹೊಂದಿದ್ದರೂ, ಗಂಡನನ್ನು ಕಳೆದುಕೊಂಡಾಗ ಹೆಣ್ಣೊಬ್ಬಳನ್ನು ತಮ್ಮ ಹಳೆಯ ಗೊಡ್ಡು ಸಂಪ್ರದಾಯಕ್ಕೆ ಇಗ್ಗಿಸಿಬಿಡುತ್ತರೆ ಎಂಬುದು ದಿಗ್ಭ್ರಮೆ ಹುಟ್ಟಿಸುವಂತಿತ್ತು. ಆ ಯುವತಿ ಮುಂದೆ ಜಗತ್ತಿನಿಂದ ಪ್ರತ್ಯೇಕವಾಗಿ, ಒಂಟಿ ಜೀವನವನ್ನು ಸವೆಸುತ್ತ, ಹೇಗೆ ಭವದ ಆನಂದದಿಂದ ವಂಚಿತಳಾಗಿ ಕಳೆಯುವಳೋ ಎಂಬುದೇ ಸೋಜಿಗವಾಗಿತ್ತು. ಅಕೆ ಸಮಾಜದಿಂದ ಬಹಿಷ್ಕೃತೆಯಾಗಿರುತ್ತಿದ್ದಳು. ಕೇಶಮುಂಡನದ ಧಾರ್ಮಿಕ ಆಚರಣೆಯಾದ ಬಳಿಕ, ಅದೊಂದು ಸಾಂಪ್ರದಾಯಿಕ ಶುಚಿಗೊಳಿಸುವ ವಿಧಿವಿಧಾನ ನಡೆಯಿತು. ಆಕೆ ಸ್ವತಃ ಬಾವಿಯಿಂದ ನೀರನ್ನು ಸೇದಿ ಆ ತಣ್ಣಿರಿನಲ್ಲೇ ಸ್ನಾನವನ್ನು ಕೈಕೊಂಡು, ಒದ್ದೆ ಬಟ್ಟೆಯಲ್ಲೇ ಆಕೆ ಹಿತ್ತಲ ಬಾಗಿಲಿನಿಂದ ಮನೆಯನ್ನು ಪ್ರವೇಶಿಸಬೇಕಿತ್ತು. . . ಬದುಕು ಎಂದಿಗೂ ಒಂದೇ ರೀತಿಯಲ್ಲಿರುವುದಿಲ್ಲ. ಆಕೆ ಏಕಾಂತ ಜೀವನ ಸಾಗಿಸಬೇಕಿತ್ತು. ಪ್ರಾಯಶಃ ಅಧ್ಯಾತ್ಮಿಕ ಸಾಧನೆಗಳನ್ನು ನಿರ್ವಹಿಸುತ್ತ, ಜತೆಗೆ (ಇತರರ) ಮಕ್ಕಳನ್ನು ನಿಭಾಯಿಸುವ ಹೊಣೆಗಾರಿಕೆಯೂ ಆಕೆಗಿದ್ದಿರಬೇಕು. ವಿಪರ್ಯಾಸವೆಂಬಂತೆ, ಆಕೆಯ ಈ ಸಂತಾಪದ ಅವಸ್ಥೆಯಿಂದ ನಾನೊಂದು ಪಾಠವನ್ನು ಕಲಿತೆ. ನನ್ನ ಬದುಕಿಗೆ ಆಕೆಯನ್ನು ಹೊಂದಿಸಿ ತುಲನೆ ಮಾಡುತ್ತ, ನನ್ನಲ್ಲಿ ಅಪಾರವಾದ ಧೈರ್ಯ ಒಡಮೂಡುವಂತಾಯಿತು. ಆಕೆ ಅದೊಂದು ಸಾಂಪ್ರದಾಯಿಕ ವ್ಯವಸ್ಥೆಯೊಳಗೆ ಸಿಲುಕಿಕೊಂಡಿದ್ದಳು. ತನ್ನ ಬದುಕನ್ನು ಉತ್ತಮವಾಗಿ ಬದಲಾಯಿಸಿಕೊಳ್ಳುವ ಅವಕಾಶ ಆಕೆಗೆ ವಿರಳವಾಗಿತ್ತು. ಆಕೆ ಅಸಹಾಯಕಳಾಗಿದ್ದಳು, ಕರಾಳ ಭವಿಷ್ಯ ಆಕೆಯ ಮೋರೆಯಲ್ಲಿ ಬಿಂಬಿಸುವಂತಾಗಿತ್ತು. ನನ್ನ ಚಿಕ್ಕಪ್ಪ ಸೂರ್ಯೋದಯಕ್ಕಿಂತ ಮೊದಲು ಏಳುತ್ತಿರಲಿಲ್ಲವಾದ್ದರಿಂದ ಶೋಕಾಚರಣೆಯ ಮನೆತನಗಳಿಗೆ ವಿಧವಾ ಮುಂಡನಕ್ಕೆ ಯಾವತ್ತೂ ಹೋಗುತ್ತಿರಲಿಲ್ಲ. ನನ್ನ ಮೊದಲ ಗಿರಾಕಿಯಿಂದಯಿಂದಲೇ ನಾನು ಸಾಕಷ್ಟು ಕಲಿತುಕೊಂಡಿದ್ದೆ. ನಾನು ನಿಜಕ್ಕೂ ಆಕೆಗೆ ಅಭಾರಿಯಾಗಿದ್ದೇನೆ. ನನ್ನ ಬಿಡುವಿನ ಸಮಯದಲ್ಲೆಲ್ಲ, ಆಕೆಗೋಸ್ಕರ ನನ್ನ ಮೌನ ಪ್ರಾರ್ಥನೆಯನ್ನು ಹೃತ್ಪೂರ್ವಕ ಸಲ್ಲಿಸುತ್ತ ಬಂದಿದ್ದೇನೆ.’’

(2)

ಕರ್ತವ್ಯಬದ್ಧ ಮಗ ಅನಿಷ್ಟವನ್ನು ಗೆಲ್ಲುತ್ತಾನೆ

ಶಿವರಾಮ ಭಂಡಾರಿಯವರ ಚಿಕ್ಕಪ್ಪ ಗೋವಿಂದ ಅವರ ಪ್ರಕಾರ ಇವರ ಜನ್ಮದಿನಾಂಕ 23 ಎಪ್ರಿಲ್ 1962. ಹಾಗೆ ಅವರು ತಮ್ಮ ಡೈರಿಯಲ್ಲಿ ಬರೆದದ್ದನ್ನು ಇವರಿಗೆ ತೋರಿಸಿದ್ದರು. ಇವರ ಹೆರಿಗೆ ತಾಯಿಯ ಮನೆಯಲ್ಲಿ ಆಗಬೇಕಿತ್ತು. ಅಜ್ಜಅಜ್ಜಿ ಮೃತರಾಗಿದ್ದರು. ತಾಯಿಯ ಹೆರಿಗೆ ಮಲಸೋದರಿ ಕಮಲಾ ಅವರ ಮನೆಯಲ್ಲಿ, ಕಾರ್ಕಳ ಅತ್ತೂರಿನ ಹತ್ತಿರದ ನಾಗೋಲಿ ಎಂಬ ಹಳ್ಳಿಯಲ್ಲಾಯಿತು. ಇವರ ಹೆರಿಗೆ ಮಾಡಿಸಿದ ಸೂಲಗಿತ್ತಿ `ಈ ಮಗುವಿಗೆ ಸಂಭ್ರಮದ ಭವಿಷ್ಯ ಕಾದಿದೆ’ ಎಂದಿದ್ದಳಂತ. ಕಾರಣ ಮಗುವಿನ ಹೊಕ್ಕಳ ಬಳ್ಳಿ ಹೆಗಲಿನಿಂದ ಸೊಂಟದ ವರೆಗೆ, ಬ್ರಾಹ್ಮಣರು ಧರಿಸುವ ಯಜ್ಞೋಪವೀತದಂತೆ ಸುತ್ತಿಕೊಂಡಿತ್ತಂತೆ. ಆ ಹಳ್ಳಿಯ ವೇಣುಗೋಪಾಲ ದೇವಸ್ಥಾನದ ಪುರೋಹಿತರು ಜನ್ಮ ನಕ್ಷತ್ರದ ಪ್ರಕಾರ `ಶ’ ಅಥವಾ `ರಾ’ದಿಂದ ಪ್ರರಂಭವಾಗುವ ಹೆಸರು ನಾಮಕರಣ ಮಾಡಲು ಹೇಳಿದರು. ಶಿವ ಅಥವಾ ರಾಮ. ಇವೆರಡೂ ಇರಲಿ ಎಂದು ತಾಯಿಯವರು ಶಿವರಾಮ ಎಂದು ಹೆಸರಿಟ್ಟರು. ಮನೆಯಲ್ಲಿ ಕಡು ಬಡತನ. ತಾಯಿ ಗುಲಾಬಿಯವರಿಗೆ ಒಟ್ಟು ಆರು ಮಂದಿ ಸೋದರ ಸೋದರಿಯರು. ಶಿವರಾಮ ಅವರ ತಂದೆ ಮುಂಬೈಯಲ್ಲಿ ಕುಲವ್ಯವಸಾಯದಲ್ಲಿದ್ದರು. ಅವರು ತೀರಿಕೊಂಡರು. ತಾಯಿ ಸಂಬಧಿಕರ ಒಂದು ಮನೆಯಿಂದ ಇನ್ನೊಂದು ಮನೆಗೆ ತಿರುಗಬೇಕಾಯಿತು. ಆನಂದ ಭಂಡಾರಿ ಎಂಬ ತಾಯಿಯ ಮಲಸೋದರ ಇವರನ್ನು ತಮ್ಮ ಪೂರ್ವಜರ ಮನೆಗೆ ಕರೆದೊಯ್ದರು. ಕಾರ್ಕಳದ ಸಮೀಪದ ಕಾಬೆಟ್ಟು ಹಳ್ಳಿಯ ಹೊಲಗಳ ಮಧ್ಯ ಇದ್ದ ಮೂವತ್ತು ಸದಸ್ಯರಿದ್ದ ರೈತ ಕುಟುಂಬದಲ್ಲಿ ವಾಸ. ಕಷ್ಟದ ಜೀವನ. ಅಲ್ಲಿಂದ ಸೋದರ ಮಾವ ಸಂಜೀವ ಭಂಡಾರಿಯ ಮನೆಗೆ ಹೋದರು. ತಾಯಿಯವರು ದೈನಂದಿನ ಖರ್ಚು ತೂಗಿಸಲು ಟೇಲರಿಂಗ ಕೆಲಸ ಮಾಡುತ್ತಿದ್ದರು. ಶಿವರಾಮ ಸೇಂಟ್ ಲಾರೆನ್ಸ್ ಶಾಲೆಗೆ ದಾಖಲಾದರು. ಶಾಲೆಯಲ್ಲಿ ಇವರು ಒಂದು ತುಳು ಹಾಡು ಹಾಡಿ ಶಿಕ್ಷಕರ ಮೆಚ್ಚುಗೆ ಪಡೆದರು. ಕೃತಕ ಮೀಸೆ, ಮುಂಡಾಸ ಧರಿಸಿ ಸ್ಟೇಜಿಗೆ ಬಂದು ಒಂದು ತುಳು ಹಾಡು ಹಾಡಿದರು.ಯಾನ್ ಬೊಂಬಾಯಿಗ್ ಪೋದ್ ಪತ್ತ್ ವರ್ಷ ಅಂಡ್. ಇತ್ತೆ ಊರುಗ್ ಪೋದು ಮದ್ಮೇ ಅವೋಡು. ಎನ್ನ ಕೈಟ್ ಉಪ್ಪುನ ಕಾಸ್ ಸಾವಿರ ರೂಪಾಯಿ.’’ ( ನಾನು ಬೊಂಬಾಯಿಗೆ ಹೋಗಿ ದಶಕವೇ ಕಳೆಯಿತು | ನಾನು ಈಗ ಊರಿಗೆ ಹೋಗಿ ಮದುವೆ ಆಗ್ಬೇಕು | ನನ್ನ ಕೈಲಿರುವ ನೋಟಿನ ಬೆಲೆ ಸಾವಿರ ಲೆಕ್ಕದ್ದು ). ಹಾಡುವಾಗ ಸಭೆಯ ಜನಸಾಗರ ನೋಡಿ ಕಂಪನ ಉಂಟಾಗಿತ್ತಂತೆ. ವೇದಿಕೆಯಿಂದ ಓಡಿದ್ದರಂತೆ. ಈ ಹಾಡಿನಂತೆ ತಮ್ಮ ಬದುಕಾಯ್ತು ಎಂದು ನೆನೆಯುತ್ತಾರೆ. ತಾವು ಮುಂಬೈ ಬಂದು ನೆಲೆಸಿದ ಮೇಲೆ ಮರಳಿ ಹಳ್ಳಿಗೆ ಬಂದು ತಮ್ಮ ಬಳಗದ ಹುಡಿಗೆಯನ್ನು ಮದುವೆಯಾದರಂತೆ.
2012ರಲ್ಲಿ(ತಾವು ತಮ್ಮ ಸಲೂನ್ ಉದ್ಯಮದಲ್ಲಿ ಯಶಸ್ವಿಯಾದಾಗ) ಸೇಂಟ್ ಲಾರೆನ್ಸ್ ಶಾಲೆಯವರು ಇವರನ್ನು ಸನ್ಮಾನಿಸಿದರಂತೆ. ಪ್ರಿನ್ಸಿಪಾಲ ಫಾದರ್ ಆರ್ಥರ್ ಪರೇರಾ ತಮ್ಮನ್ನು ಆದರ್ಶ ವ್ಯಕ್ತಿ, ಎಲ್ಲರಿಗೂ ಮಾರ್ಗದರ್ಶಿ, ಎಂದಿದ್ದರು. ಆರ್ಥಿಕ ಮುಗ್ಗಟ್ಟಿನಿಂದ, ಆ ಶಾಲೆಯನ್ನು ಬಿಡಬೇಕಾಯ್ತು. ಶಿಕ್ಷಣ ಐದನೆಯ ಕ್ಲಾಸಿಗೇ ಮುಕ್ತಾಯಗೊಂಡಿತ್ತು ಎನ್ನುತ್ತಾರೆ. ಎರಡು ವರ್ಷ ಸಂಜೀವ ಮಾಮಾನ ಮನೆಯಲಿದ್ದರು. ಮಾಮಾನ ಹೆಂಡತಿ ಜಾನಕಿಯೊಡನೆ ಮಾತಿನ ಚಕಮಕಿಯಲ್ಲಿ ಜೀವನ ದುಸ್ಸಹವಾಯಿತು. ಅವಳು ಇವರ ಪಾತ್ರೆಪರಡಿ ಮನೆಯಿಂದ ಹೊರಕ್ಕೆಸೆದಳು, ಅವರ ಮನೆ ಬಿಡಬೇಕಾಯ್ತು. ಹಿತ್ತಲಿನ ತೆಂಗಿನ ಮರದ ಬುಡದಲ್ಲಿ ಅಡುಗೆ ಮಾಡ್ಕೊಂಡು ಮೂರು ದಿನ ಕಳೆದರು. ಮೂರು ಕಲ್ಲುಗಳನ್ನು ಇಟ್ಟು ಆವರಣದಲ್ಲಿ ಸಿಕ್ಕ ಮರದ ಕೊಂಬೆಗಳನ್ನು ಬಳಸಿ ಬೆಂಕಿ ಮಾಡಿ ಅಡುಗೆ ಮಾಡಿದರು. ಎಲ್ಲೆಡೆ ಕತ್ತಲೆ ಆವರಿಸಿದಾಗ, ಬೆಳಕಿನ ಕಿರಣವೊಂದು ಕಾಣಿಸಿತು. ನೆರಮನೆಯ ಹೆಂಗಸು ಕರಿಮಿನಾಬಾಯಿ ಆಶ್ರಯ ಕೊಡಲು ಒಪ್ಪಿದಳು. ತನ್ನ ಮನೆಯ ಒಂದು ಭಾಗ ಬಾಡಿಗೆಗೆ ಕೊಟ್ಟಳು. ನಾಲ್ಕು ವರ್ಷ ಅಲ್ಲಿ ಇದ್ದರು. ತೋಟಕ್ಕೆ ನೀರು ಬಿಡುವುದು, ತೆಂಗಿನಕಾಯಿ ಕೀಳುವದು ಇವರ ಹೆಚ್ಚಿನ ಕೆಲಸವಾಯ್ತು. ಅತ್ತೂರು ಬಸ್ ಸ್ಟ್ಯಾಂಡಿನಿಂದ ಅವಳು ಕೊಂಡು ತಂದ ಅಕ್ಕಿಯ ಗಂಟು ಹೊತ್ತುತರವ ಕೆಲಸವೂ ಇವರಿಗೆ ಸೇರಿತ್ತು. (ತಂದೆ ತೀರಿದಾಗ ಇವರಿಗೆ ಮೂರುವರೆ ವರ್ಷ. ತಂಗಿಗೆ ಒಂದೂವರೆ ವರ್ಷ. ನಾಲ್ಕು ವರ್ಷದವಳಾದಾಗ ತಂಗಿಯೂ ತೀರಿದಳು) ತಾಯಿಗೆ ಮಗನನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಅವಳಿಗೆ ಸಹಾಯ ಮಾಡಲು ಶಾಲೆ ತೊರೆದರು. ತಾಯಿ ಸೆಕೆಂಡ್ ಹ್ಯಾಂಡ್ ಮೆಶೀನಿನಲ್ಲಿ ಬಟ್ಟೆ ಹೊಲಿಯುತ್ತಿದ್ದಳು. ಅವಳು ಸಂಪಾದಿಸಿದ ಹಣ ದೈನಂದಿನ ಖರ್ಚಿಗೆ ಸಾಕಾಗುತ್ತಿರಲಿಲ್ಲ. ವರ್ಷಕ್ಕೆ ಒಂದು ಸಲ ಯುಗಾದಿಗೆ ಒಂದು ಚೆಡ್ಡಿ ಕೊಳ್ಳುತ್ತಿದ್ದರಂತೆ. ತಾಯಿಗೆ ಅಸೌಖ್ಯ. ವೈದ್ಯರು ಆಕೆಯನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಚಿಕಿತ್ಸೆ ಉಚಿತವಾಗಿತ್ತು. ಆದರೆ ಆಸ್ಪತ್ರೆಯನ್ನು ಬಿಡುವಾಗ ಸಣ್ಣ ಮೊಬಲಗನ್ನು ಪಾವತಿಸಬೇಕಿತ್ತು. ಅಮ್ಮನನ್ನು ಮನೆಗೆ ಕರೆತರುವ ದಿನ. ಕಿಸೆಯಲ್ಲಿ ಚಿಕ್ಕಾಸೂ ಇರಲಿಲ್ಲ. ದಾರಿಯಲ್ಲಿ ನೋಡಿದರು, ಹತ್ತು ರೂಪಾಯಿ ನೋಟು ಬಿದ್ದಿತ್ತು. ತುಂಬ ಕೊಳೆಯಾದುದರಿಂದ ಅದು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆ ಹಣ ತುರ್ತು ಪರಿಸ್ಥಿತಿಗೆ ಪರಿಹಾರ ನೀಡಲಿತ್ತು. ಆ ನೋಟು ಸ್ಟೈಲೋ ಎಂಬ ಹೆಸರಿನ ಅಂಗಡಿಯ ಮುಂದೆ ಬಿದ್ದಿತ್ತು. ಕೆಲಹೊತ್ತು ಅಲ್ಲೇ ನಿಂತುಕೊಂಡರು. ಕಳೆದುಕೊಂಡವ ಹುಡುಕುತ್ತ ಬಂದಾನು ಎಂಬ ಶಂಕೆಯಿತ್ತು. ಯಾರೂ ಬರಲಿಲ್ಲ. ಈ ಘಟನೆಯನ್ನು ನೆನೆಯುತ್ತ ಬರೆಯುತ್ತಾರೆ:

ಕೆಲವು ಬಾಲ್ಯದ ಆಕರ್ಷಣೆಗಳು ಶಾಶ್ವತವಾಗಿರುತ್ತವೆ. ಈ ಹೆಸರಿನಿಂದ ಪ್ರೇರಿತನಾದ ನಾನು (ಅದೇ ಜಾಗದಲ್ಲಿ ನನಗೆ ಅದೃಷ್ಟ ಒಲಿದಿದ್ದರಿಂದಲೂ ಇರಬಹುದು) ನನ್ನ ಮೊತ್ತ ಮೊದಲ ಥಾಣೆಯಲ್ಲಿ ತೆರೆದ ಸಲೂನ್‍ಗೆ `ಶಿವಾಸ್ ಸ್ಟೈಲೋ’ ಎಂದೇ ಹೆಸರು ಕೊಟ್ಟಿದ್ದೆ.’’ ಆ ಹತ್ತು ರೂಪಾಯ ಬಹಳ ಸಹಾಯ ಒದಗಿಸಿತು. ಆಸ್ಪತ್ರೆಗೆ ಹಣ ಕೊಟ್ಟ ಮೇಲೆ ಉಳಿದ ಹಣದಲ್ಲಿ ಮನೆಗೆ ಅವಶ್ಯಕವಾದ ವಸ್ತು ಕೊಳ್ಳಲಾಯಿತು. ಒಂದು ಅಲ್ಯುಮಿನಿಯಂ ಕೊಡವನ್ನು, ಅದನ್ನು ಬಾವಿಗೆ ಇಳಿಬಿಡಲು ಒಂದು ಹಗ್ಗವನ್ನು ಕೊಂಡರು. ಮನೆಯಲ್ಲಿದ್ದ ಹಗ್ಗ ಸವೆದಿತ್ತು, ಹರಿಯಲು ಬಂದಿತ್ತು. ಮನೆಯ ಬಿಂದಿಗೆಯಲ್ಲಿ ಛಿದ್ರಗಳಿದ್ದು ಅರ್ಧನೀರು ಸೇದುವಾಗಲೇ ಸೋರುತ್ತಿತ್ತು, ಅದು ಕಾರಂಜಿಯಂತೆ ನೀರನ್ನು ಹೊರಚೆಲ್ಲುತ್ತಿತ್ತು. ಬಾವಿಯಲ್ಲಿ ಕೆಸರು ತುಂಬಿತ್ತು. ಕರಿಮಿನಾಬಾಯಿಯ ಆಜ್ಞೆಯಂತೆ ಕತ್ತಲೆಯಲ್ಲಿ ಬಾವಿಯನ್ನು ಇಳಿದು ಕೆಸರು ತೆಗೆಯಬೇಕಾಯಿತು. ಪ್ರತಿ ಮೆಟ್ಟಿಲು ಇಳಿದಾಗ ಮೃತ್ಯುವಿನ ಬಾಯಿಯೊಳಗೆ ಕಾಲಿಟ್ಟ ಅನುಭವಾಗುತ್ತಿತ್ತು.ಆ ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ದಾಟಿ ಬಾವಿಯ ತಳವನ್ನು ಸೇರುವ ವೇಳೆಗೆ ನಾನು ಸಾವಿರ ಸಲವಾದರೂ ಸಾವನ್ನು ಕಂಡಿದ್ದೆ. ಮಾಡು-ಇಲ್ಲವೇ-ಮಡಿ’ ಎನ್ನುವ ಸ್ಥಿತಿಯಲ್ಲಿದ್ದೆ ನಾನು.’’ ಎಂದು ಬರೆಯುತ್ತಾರೆ. ತಾಯಿ ಮನೆಯಲ್ಲಿರಲಿಲ್ಲ. ಆದ್ದರಿಂದ ಈ ಸಾಹಸಕ್ಕೆ ಇವರು ಮುಂದಾಗಿದ್ದರು. ನಂತರ ತಾಯಿ,ನಿನನ್ನು ಕಳೆದುಕೊಂಡಿದ್ದರೆ ನಾನು ಹೇಗಿರಬೇಕಿತ್ತು?’ ಎನ್ನುತ್ತ ಬಿಕ್ಕಿಬಿಕ್ಕಿ ಅತ್ತರು.

ಆಗ ಅವರಿನ್ನೂ ಸಲೂನ್ ಕೆಲಸ ಪ್ರಾರಂಭಿಸಿರಲಿಲ್ಲ. ಹಲವಾರು ಕೆಲಸಗಳಲ್ಲಿ ತೊಡಗಿದ್ದರು. ಸಗಣಿಯನ್ನು ಹೆಕ್ಕುವುದು, ದನಗಳಿಗೆ ಮೇವು ತಿನಿಸುವುದು, ಮಾರುಕಟ್ಟೆಯಲ್ಲಿ ಹಾಲು ಮಾರುವುದು, ಗದ್ದೆಯಲ್ಲಿ ಬೇಸಾಯ ಮಾಡುವುದು, ತರಕಾರಿ ಹಣ್ಣುಹಂಪಲ ಬೆಳೆದು ಮಾರಾಟ ಮಾಡುವ ಕಸುಬಿನಲ್ಲಿ ನಿಷ್ಣಾತರಾದರು.
ಇವರ ದೊಡ್ಡಮ್ಮನ ಮಗ ಕೃಷ್ಣ ಎಂಬವ ಏಕಮಾತ್ರ ಬಾಲ್ಯದ ಗೆಳೆಯನಾಗಿದ್ದನಂತೆ. ಅವನೊಂದಿಗೆ ಬೆಲ್ಲ ತುಂಬಿರುವ ಗಾಡಿ ತಳ್ಳಲು ಸಹಾಯ ಮಾಡುತ್ತಿದ್ದರಂತೆ. ಅದರಿಂದ ಲಾಭಗಳೂ ಇದ್ದವು. ಬೆಲ್ಲದ ಗಾಡಿಯವರು ಇವರಿಗೆ ಸವಿಯಲು ಬೆಲ್ಲ ಕೊಡುತ್ತಿದ್ದರು. ಗುಡಿಗಳಲ್ಲಿ ನಡೆಯುವ ಮದುವೆಯ ಊಟದಲ್ಲಿ ಭಾಗಿಯಾಗಿ ಗಂಡುಹೆಣ್ಣಿನವರ ಕಣ್ಣಿಗೆ ಬೀಳದಂತೆ ಪಾರಾಗುತ್ತಿದ್ದರು. ಯಕ್ಷಗಾನ ನೋಡಲು ಹೋಗುತ್ತಿದ್ದರು, ತಡವಾಗಿ ಹೋಗಿ ಡೇರೆಯ ಹಿಂಬಾಗದಿಂದ ನುಸುಳುತ್ತಿದ್ದರು. ಈ ಸಣ್ಣ ಸುಖಾನುಭೋಗಗಳು ಅವರ ಬಾಲ್ಯವನ್ನು ಸಹನೀಯಗೊಳಿಸಿದ್ದವಂತೆ.

(3)
ಬಾರ್ಬರ್‍ನಿಂದ ಮುಂಛೂಣಿಯ ಕೇಶವಿನ್ಯಾಸಕನಾಗಿ

ನನಗೆ ದುಡಿಮೆಯೇ ದೇವರು. ಅದು ಅಧ್ಯಾತ್ಮ; ನನ್ನ ನಂಬಿಕೆ ಮತ್ತು ನನ್ನ ಧರ್ಮ. . . ನನಗೆ ಯಾವ ವಿಧವಾದ ಕೆಲಸವನ್ನು ಮಾಡುವುದಕ್ಕು ಮುಜಗರ ಆಗುವುದಾಗಲೀ,ಅದರಲ್ಲಿ ಅನಾಸ್ಥೆಯೂ ಇರುವುದಿಲ್ಲ. . . ಒಬ್ಬ ಬಾರ್ಬರನಾಗಿ ನನ್ನ ಕುಶಲತೆಯನ್ನು ಸ್ವತಃ ಅಭ್ಯಾಸ ಮಾಡಿ ಕಲಿತುಕೊಂಡದ್ದು. ನಾನು ಈ ಕಲೆಗಾರಿಕೆಯನ್ನು ವಿದೇಶಕ್ಕೆ ತೆರಳಿ, ಜಗತ್ತಿತ ಅತ್ಯಂತ ಉತ್ತಮ ದರ್ಜೆಯ ಅಕಾಡೆಮಿಗಳಲ್ಲಿ ತರಬೇತಿ ಪಡೆದು ಕಲಿತುಕೊಂಡೆ. ಹಾಗಾಗಿ ನನಗೆ ಒಬ್ಬ ಸೃಜನಾತ್ಮಕ ಕಲಾಕಾರನಾಗಿ ಹೊರಹೊಮ್ಮಲು ಸಾಧ್ಯವಾಯಿತು.’’ ಇದೊಂದು ವಸ್ತುನಿಷ್ಠವಾದ ಕೆಲಸ. ಇದಕ್ಕೆ ಕೌಶಲ್ಯ ಕಲೆ ಮತ್ತು ಪ್ರತಿಭೆ ಬೇಕಾಗುತ್ತದೆ. . . ನಿಜಕ್ಕೂ ಹಲವು ಪೀಳಿಗೆಯಿಂದ ನಮ್ಮ ಭಂಡಾರಿ ಸಮಾಜ ಈ ವಿಧವಾದ ಕೆಲಸದೊಂದಿಗೆ ಜೋಡಿಸಲ್ಪಟ್ಟಿದೆ -ಕೂದಲಿನ ಕ್ಷೌರ ಮತ್ತು ಗಡ್ಡದ ಶೇವಿಂಗ್.’’
`ಸಾಂಪ್ರದಾಯಿಕವಾಗಿ, ಬಾರ್ಬರ್‍ಗಳು ಸಮಾಜದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದರು. ಅವರು ರಾಜರುಗಳ ಸಂದೇಶವಾಹಕರಾಗಿದ್ದರು. ಉತ್ತಮ ಸಂದೇಶವಾಹಕರಾಗಿದ್ದರಿಂದ ಘರ್ಷಣೆಗಳು ಸಂಭವಿಸಿದಾಗ ಅವನ್ನು ಸುಲಭವಾಗಿ ಪರಿಹರಿಸುತ್ತಿದ್ದರು. ಗಂಡು, ಹೆಣ್ಣಿನ ನಂಟನ್ನು ನಿಭಾಯಿಸುತ್ತಿದ್ದರು. ಅದಕ್ಕೂ ಮುಖ್ಯವಾಗಿ ಅವರು ಸಂಗೀತದ ಬ್ಯಾಂಡ್‍ಗಳಲ್ಲಿ ಸೊಗಸಾಗಿ ವಾದ್ಯಗಳನ್ನು ನುಡಿಸುವವರಾಗಿದ್ದರು. ಒಂದು ಕಾಲದಲ್ಲಿ, ಸಂಪ್ರದಾಯದಂತೆ, ಕ್ಷೌರ ಇಲ್ಲವೇ ಮುಖಮಾರ್ಜನ ಬೆಳಗಿನ ಹೊತ್ತು, ಆಂದರೆ ಕನಿಷ್ಠ ಬೆಳಗಿನ ಹನ್ನೊಂದು ಗಂಟೆಯ ಒಳಗೆ ಮಾಡುವ ಪರಿಪಾಠವಿತ್ತು. ಉಳಿದ ಸಮಯ ಅವರು ಮದುವೆಯಲ್ಲಿ ಬ್ಯಾಂಡ್ ಬಾರಿಸಿ ಒಳ್ಳೆಯ ಸಂಪಾದನೆ ಮಾಡುತ್ತಿದ್ದರು. ಅವರು ಪ್ರಖ್ಯಾತವಾದ ಶಹನಾಯಿ ಮತ್ತು ನಾದಸ್ವರಗಳಂತಹ ವಾದ್ಯಗಳನ್ನು ಬಾರಿಸುತ್ತಿದ್ದರು. ಪಲಿಮಾರಿನ ಒಬ್ಬ ನಿಕಟ ಸಂಬಂಧಿಯ ಅಂಗಡಿಯ ಮುಂದೆ ಒಂದು ಬೋರ್ಡ್ ಕಾಣಿಸುತ್ತದೆ,ಕೇಶವಿನ್ಯಾಸಕ ಮತ್ತು ಸ್ಯಾಕ್ಸೋಫೆÇೀನ್ ವಾದಕ.’ ಹಳೆಯ ಇತಿಹಾಸ ಪುಸ್ತಕಗಳಲ್ಲಿ, ಬಾರ್ಬರ್ ಕೆಲಸ ಮಾಡುವವರು, ಸಣ್ಣ ಮಟ್ಟಿನ ಶಸ್ತ್ರಚಿಕಿತ್ಸೆಯನ್ನು ಮತ್ತು ದಂತಚಿಕಿತ್ಸೆಯನ್ನು ಮಾಡುವುದನ್ನು ಕಾಣಬಹುದು.’’ಎಂದು ಬರೆಯುತ್ತಾರೆ.

(4)
ಪೀಡಕ ಚಿಕ್ಕಪ್ಪ

ಹೊಸತಾಗಿ ಏನಾದರೂ ಕಲಿಯಬೇಕೆಂಬ ಆಸೆಯಿಂದ ಪಲಿಮಾರಿನಲ್ಲಿರುವ ಸೈಕಲ್ ಶಾಪ್‍ನಲ್ಲಿ ಕೆಲಸಕ್ಕೆ ಸೇರುತ್ತಾರೆ. ಅದರ ಯಜಮಾನ ಇವರ ಸೋದರತ್ತೆಯ ಅಳಿಯ ಸೇಸು ಭಂಡಾರಿ. ಅವರ ಮನೆಯಲ್ಲಿಯೇ ವಾಸ್ತವ್ಯ. ಸೈಕಲ್ ರಿಪೇರಿ ಕಲಿಯುವುದು. ಅವರ ಹೆಂಡತಿಯ ಕೈತೋಟದಲ್ಲಿ ತರಕಾರಿ ಬೆಳೆಯುವುದರಲ್ಲಿ ಸಹಾಯಕನಾಗಿ ಕೆಲಸಮಾಡುವುದು.
ಇವರ ಚಿಕ್ಕಪ್ಪ ಗೋವಿಂದ ಭಂಡಾರಿ ಇವರ ಆಸ್ತಿಯ ಪಾಲನ್ನು ಕೊಡುವುದಾಗಿ ಹೇಳಿ, ವಂಶಪರಂಪರೆಯ ಕಸಬನ್ನು ಕಲಿಸುವುದಾಗಿ ಕರೆದುಕೊಂಡು ಹೋಗುತ್ತಾರೆ. ಅವರೊಂದಿಗೆ ಕಳೆದ ನಾಲ್ಕು ವರುಷಗಳು ಒಂದರ್ಥದಲ್ಲಿ ನರಕಯಾತನೆಯ ದಿನಗಳು. ಇವರ ಚಿಕ್ಕಪ್ಪನ ಮನೆ ಒಂದು ಪ್ರಶಸ್ತವಾದ ಗುಡ್ಡದ ಮೇಲೆ ಸ್ಥಿತವಾಗಿತ್ತು. ಅದು ಮೂರು ಹಂತಗಳಿರುವ ಒಂದು ಇಳಿಜಾರಿನ ಭಾಗವಾಗಿತ್ತು. ಗುಡ್ಡವನ್ನು ಏರುವುದಕ್ಕೆ ಮೆಟ್ಟಿಲುಗಳ ಮೊದಲ ಹಂತ, ನಂತರ ತೋಟದ ಹಂತ, ಆ ಮೇಲೆ ತುಸು ಮುಂದಕ್ಕೆ ಸಾಗಿದರೆ, ಗುಡ್ಡದ ತುತ್ತತುದಿಯಲ್ಲಿ ಮನೆ. . . ಸುಮಾರು ಎರಡು ಎಕ್ರೆಗಳಷ್ಟು ವಿಸ್ತಾರವಾಗಿದ್ದ ತನ್ನ ಜಾಗದಲ್ಲಿ ಚಿಕ್ಕಪ್ಪ, ಹೂಗಳನ್ನೂ, ಹಣ್ಣುಗಳನ್ನೂ. ತರಕಾರಿ, ಧಾನ್ಯಗಳನ್ನೂ ಬೆಳೆದು ಅವನ್ನು ತಮ್ಮ ಸಲೂನ್‍ನ ಮೆಟ್ಟಿಲ ಬಳಿಯಲ್ಲೇ ಇಟ್ಟು ಮಾರಾಟ ಮಾಡುತ್ತಿದ್ದರು. ತನ್ನ ನಾನಾ ರೀತಿಯ ವರಮಾನಕ್ಕೆ ಹೆಚ್ಚುವರಿಯಾಗಿ, ಮನೆಯ ಹಿಂಭಾಗ ಒಂದು ದನಗಳ ಹಟ್ಟಿ, ಮತ್ತೊಂದು ಕೋಳಿ ಕೊಟ್ಟಿಗೆಯನ್ನೂ ಕಟ್ಟಿಸಿದ್ದರು. ಅರ್ಧ ಡಜನ್ ದನಗಳಿಂದ ಬರುತ್ತಿದ ಹಾಲಿನಿಂದ ಅವರಿಗೆ ಸಾಕಷ್ಟು ಲಾಭ ಬರುತ್ತಿತ್ತು. ಚಿಕ್ಕಪ್ಪನ ಮನೆ ಸೇರಿದ ದಿನವೇ ಮನೆಯ ಪಕ್ಕದ ಬದಿಯಲ್ಲಿ ಟೊಮೆಟೋ ಗಿಡಗಳನ್ನು ನೆಡಲು ಶಿವರಾಮ ಸಹಾಯ ಮಾಡಿದರು. ಬೆಳೆಗೆ ತೊಂದರೆ ಕೊಡುವ ಪಕ್ಷಿಗಳನ್ನು ಓಡಿಸಿದರು. ಮನೆಯಲ್ಲಿ ಸಾಕಷ್ಟು ಕೆಲಸ ಬೀಳುತ್ತಿತ್ತು. ಚಿಕ್ಕಪ್ಪ ಸೈಕಲ್ ಶಾಪಿನ ಕೆಲಸ ಬಿಡಿಸಿ ಅವರನ್ನು ಇಲ್ಲಿ ಕರೆತಂದದ್ದರಲ್ಲಿ ಒಂದು ಉದ್ದೇಶವಿತ್ತು. ಅವರನ್ನು ಕೂಲಿಯಂತೆ ದುಡಿಸುವುದಾಗಿತ್ತು. ಇವರು ದಿನಬೆಳಗಾದರೆ ಮಣ್ಣಲ್ಲಿ ಮಣ್ಣಾಗಿ, ಕ್ರಿಮಿಕೀಟಗಳಿಂದ ಕಚ್ಚಿಸಿಕೊಂಡು ದುಡಿಯಲು ಸನ್ನದ್ಧನಾಗಿರಬೇಕಾಗಿತ್ತು.
ಮುಂಜಾನೆಯಿಂದ ಇವರು ಮಾಡಬೇಕಾದ ಕಲಸಗಳ ಪಟ್ಟಿಯನ್ನೇ ಚಿಕ್ಕಪ್ಪ ಸಿದ್ಧಪಡಿಸಿದ್ದರು. ಬೆಳಿಗ್ಗೆ 5-30ಕ್ಕೆ ಏಳಬೇಕು, 6ಗಂಟೆಗೆ ದನದ ಕೊಟ್ಟಿಗೆ ಸ್ವಚ್ಛಗೊಳಿಸಬೇಕು, ಗೊಬ್ಬರ ತಯಾರಿಸಲು ಸಗಣಿಯನ್ನು ಹೊಂಡಕ್ಕೆ ಹಾಕಬೇಕು, ಹಸುಗಳಿಗೆ ಬೇಕಾದ ಮೇವು ಮತ್ತು ನೀರು ಒದಗಿಸಬೇಕು, ನಂತರ ದನಗಳನ್ನು ಮೇಯಲು ಹಳ್ಳಿಯ ಹೊರವಲಯಕ್ಕೆ ಬಿಡಬೇಕು, ಹಾಲು ಹಿಂಡಿದ ಮೇಲೆ ಸುತ್ತುಮುತ್ತಲಿನ ಮನೆಗಳಿಗೆ ಬಟವಾಡೆ ಮಾಡಬೇಕು. ಅದಕ್ಕೆ ಆರು ಕಿಲೋಮೀಟರ್ ಸೈಕಲ್ ತುಳಿಯಬೇಕಾಗಿತ್ತು, ಸೈಕಲ್ ಹಿಂದೆ ಮುಂದೆ ಹಾಲಿನ ಕ್ಯಾನ್ ಹಾಕಬೇಕಿತ್ತು. ನಂತರದ ಕೆಲಸ ಎಂದರೆ ಚಿಕ್ಕಪ್ಪನು ಸಲೂನ್ ತಲುಪುವ ಮೊದಲು ಕಸಗೂಡಿಸಿ ಸ್ವಚ್ಛಗೊಳಿಸುವುದು. ಹಿಂದಿನ ರಾತ್ರಿ ಸ್ವಚ್ಛಗೊಳಿಸಿದ್ದರೆ ಇಡೀ ದಿನ ಗಿರಾಕಿಗಳಿಗೆ ಬೇಕಾದುದನ್ನು ತಂದುಕೊಡಬೇಕಾಗುತ್ತಿತ್ತು. ಜೊತೆಗೆ ಅಂಗಡಿಯ ಮುಂದೆ ತರಕಾರಿ ಮಾರುವುದು ಕೂಡ ಇತ್ತು. ಕೋಳಿಗಳದೇ ಒಂದು ಚಿಕ್ಕ ಪ್ರಪಂಚ. ಅಲ್ಲಿಯೂ ದುಡಿಯಬೇಕಾಗುತ್ತಿತ್ತು. ಈ ಕಾಯಕ ತಿಂಗಳು ತಿಂಗಳು ನಿರ್ವಿಘ್ನವಾಗಿ ಸಾಗಿದರೂ ಇವರ ಸೇವೆಗಾಗಿ ಚಿಕ್ಕಪ್ಪ ಬಿಡಿ ಕಾಸೂ ಕೊಡುತ್ತಿರಲಿಲ್ಲ. ಕ್ಷೌರವನ್ನು ಕಲಿಸುವ ಆಶ್ವಾಸನೆ ನೀಡಿದ್ದರೂ, ಕಲಿಸಲೇ ಇಲ್ಲ. ಆತ ಒಬ್ಬ ಕ್ರೂರ, ಒರಟಾದ, ಅಸಹ್ಯ ನಡವಳಿಕೆಯ ದುಡಿಸುವ ಧಣಿಯಾಗಿದ್ದ. ಕಾರಣವಿಲ್ಲದೇ ಬೊಬ್ಬೆ ಹಾಕುವುದು, ಚೀರುವುದು, ಕಲ್ಲೆಸೆದು ಬೆದರಿಸುವುದು ಅವನ ದಿನಚರಿ. ಒಬ್ಬ ಜೀತದಾಳಿನಂತೆ ದುಡಿಸಿಕೊಳ್ಳುತ್ತಿದ್ದ. ಚಿಕ್ಕಪ್ಪ ಶ್ರೀಮಂತರಾದರು, ಸಂಬಳದ ಮಾತು ದೂರ ಇರಲಿ ಒಂದು ಚಿಕ್ಕ ಕಾಣಿಕೆ ಕೂಡ ಕೊಡಲಿಲ್ಲ. ಇವರು ಅಲ್ಲಿ ಹೋದಾಗ ಖಾಕಿ ಚೆಡ್ಡಿ ಮತ್ತು ಒಂದು ಶರ್ಟ ಇತ್ತು. ಯುಗಾದಿಯ ಸಮಯದಲ್ಲಿ ಒಂದು ಜತೆ ಅಂಗಿ ಕೊಡಿಸುತ್ತಿದ್ದರು. ಕಾಲಕ್ರಮೇಣ ಚಿಕ್ಕಪ್ಪ ಮದ್ಯಪಾನಕ್ಕೆ ಶರಣಾದರು. ಮೊದಲು ಅಂಜಿ ಬಾಟ್ಲಿ ಅಂಗಡಿಯಲ್ಲಿ ಇಡುತ್ತಿದ್ದರು. ಚಿಕ್ಕಮ್ಮನ ಮುಂದೆ ಕುಡಿಯುತ್ತಿರಲಿಲ್ಲ. ನಂತರ ಮನೆಯಲ್ಲಿ ಕುಡಿಯಲು ಪ್ರಾರಂಭಿಸಿದರು. ಕನ್ನಡದಲ್ಲಿ ತುಳುವಿನಲ್ಲಿ ಬೈಗಳ ಸುರಿಮಳೆ. ನಿದ್ದೆಗೆ ಶರಣಾಗುವ ವರೆಗೆ ಬೈಗಳ ಜೊತೆಗೆ ಬಿದಿರಿನ ಸಲಾಕೆಯಿಂದ ಹೊಡೆಯುತ್ತಿದ್ದರು. ಕುಡಿತ ಹೆಚ್ಚಾಯಿತು. ಪತ್ನಿಯನ್ನೂ ಹೊಡೆಯತೊಡಗಿದರು. ಬಿದಿರಿನ ಏಟಿನ ಕಲೆಗಳು ಇವರ ಮೈತುಂಬ ಮೂಡಿದ್ದವು.
ತಮ್ಮ ಬಾಲ್ಯದ ಅತ್ಯಂತ ಭಯಾನಕ ದಿನಗಳ ಬಗ್ಗೆ ಬರೆಯುತ್ತಾರೆ. ಸಮೀಪದ ಶಾಲೆಯೊಂದರ ಅಧ್ಯಾಪಕರು ಸಲೂನಿನ ಪಕ್ಕದ ಮನೆಯಲ್ಲಿ ನೇಣುಬಿಗಿದುಕೊಂಡು ಸತ್ತಿದ್ದರು. ಅವರು ಒಂಟಿಯಾಗಿ ಇರುತಿದ್ದರು. ಹೆಂಡತಿ ಮಕ್ಕಳು ರಜಾಕಾಲದಲ್ಲಿ ಅವರಲ್ಲಿಗೆ ಬರುತ್ತಿದ್ದರು. ಅವರ ಪ್ರೇತವು ಬಾಲಕ ಶಿವರಾಮನ ಕತ್ತನ್ನು ಹಿಸುಕುತ್ತದೆ’ ಎಂದು ಚಿಕ್ಕಪ್ಪನ ಸ್ನೇಹಿತರು ಇವರನ್ನು ಹೆದರಿಸುತ್ತಿದ್ದರು. ಕೆಲರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅಗೋಚರ ಭಯದಿಂದ ಬದುಕು ಅಸುರಕ್ಷಿತ ಎನಿಸತೊಡಗಿತು. ಮಲಗಿದಾಗ ಇವರ ಚಾಪೆ ಹೊದಿಕೆಗಳೆಲ್ಲ ಒದ್ದೆಯಾಗುತ್ತಿದ್ದವು. ಅದು ನಾಚಿಕೆಯ ಸಂಗತಿಯಾಗಿತ್ತು, ಇವರ ನಿಯಂತ್ರಣ ಮೀರಿತ್ತು. ಈ ಸಮಸ್ಯೆ ಚಿಕ್ಕಪ್ಪನ ಬಳಿಯಲ್ಲಿದ್ದ ಕಾಲದಲ್ಲೆಲ್ಲ ಕಾಡಿಸಿತು. ಚಿಕ್ಕಮ್ಮ ಕೂಗುವ ಮೊದಲೇ ಹಾಸಿಗೆಯಿಂದ ಎದ್ದು, ಬದಿಯಲ್ಲಿ ಹರಿಯುವ ಹೊಳೆಗೆ ಹೋಗಿ ಚಾಪೆ ಹೊದಿಕೆ ಮತ್ತು ಚೆಡ್ಡಿ ಒಗೆದುಕೊಂಡು ಹೆಪ್ಪುಗಟ್ಟಿದ ನೀರಲ್ಲಿ ಸ್ನಾನ ತೀರಿಸಿ ಬರಬೇಕಾಗುತ್ತಿತ್ತು. ಚಿಕ್ಕಪ್ಪ ಕೊಟ್ಟ ಚಿತ್ರಹಿಂಸೆ ಅಷ್ಟಿಟ್ಟಲ್ಲ. ಅಲ್ಲಿಯದು ನರಕಯಾತನೆ. ಇವರ ಪ್ರಶ್ನಾತೀತ ಸಮಸ್ಯೆಗೆ, ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡುವುದಕ್ಕೆ, ಚಿಕ್ಕಪ್ಪ ಕೊಡುವ ಶಿಕ್ಷೆ ಉರಿಯುವ ಬೆಂಕಿಯಲ್ಲಿ ಕಬ್ಬಿಣದ ಸಲಾಕೆಯನ್ನು ಕಾಯಿಸು ಇವರ ಕುಂಡೆಗೆ ಬರೆಕೊಡುವುದು. ಆದರೂ ಪ್ರತಿ ರಾತ್ರಿ ಇವರ ಚೆಡ್ಡಿ ಒದ್ದೆಯಾಗುವುದು ತಪ್ಪಲಿಲ್ಲ. ಮನರಂಜನೆ ಇರಲಿಲ್ಲ. ಸಲೂನಿನ ಆವರಣದಲ್ಲಿ ಮಕ್ಕಳು ಆಡುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗುತ್ತಿದ್ದರು. ಚಿಕ್ಕಪ್ಪನ ಹದ್ದಿನ ದೃಷ್ಟಿಯನ್ನು ತಪ್ಪಿಸಿ ಸಲೂನಿನ ಗೋಡೆ ಮತ್ತು ಸೂರಿನ ನಡುವಿನ ಮಾಳವೊಂದರಲ್ಲಿ ತನ್ನ ಹಿಂದಿನ, ಅಂದರೆ ಸೈಕಲ್ ರಿಪೇರಿ ಸಂಪಾದನೆಯಲ್ಲಿ ಉಳಿಸಿದ ಹಣ ಬಚ್ಚಿಟ್ಟಿದ್ದರು. ಅದನ್ನೇ ಪ್ರಯಾಣಕ್ಕೆ ಬಳಸುತ್ತಿದ್ದರು. ಒಮ್ಮೆ ಬಹಳ ಹಸಿವೆಯಾದಾಗ, ಸಮೀಪದ ಹೊಟೆಲಿನಲ್ಲಿ ಉಪಹಾರ ಮಾಡಿದ್ದರು. ಹಣ ಕೊಟ್ಟು,ಚಿಕ್ಕಪ್ಪನಿಗೆ ಹೇಳಬೇಡಿ’ ಎಂದಿದ್ದರೂ ಹೊಟೇಲ್ ಮಾಲೀಕ ಹೇಳಿದ್ದ. ಚಿಕ್ಕಪ್ಪ ಆ ಹಣ ಇವನೇ ಕದ್ದಿರಬೇಕೆಂದು ಭಾವಿಸಿದರು. ಅದು ಇವರೇ ಉಳಿಸಿದ ಹಣವಾಗಿತ್ತು. ಚಿಕ್ಕಪ್ಪನ ಕೋಪ ಮಿತಿ ಮೀರಿತ್ತು. ಇವರಿಗೆ ಉದ್ದವಾದ ಕೂದಲಿತ್ತು. ಹಣೆಯ ಮೇಲೆ ಬೀಳುತ್ತಿತ್ತು. ನಿನ್ನಪ್ಪ ಸತ್ತಾಗ ತಲೆ ಬೋಳಿಸಿಕೊಂಡಿದ್ದೆಯಾ? ಈಗ ನಾನು ಬೋಳಿಸುತ್ತೇನೆ’ ಎಂದು ಬೆದರಿಸುತ್ತಿದ್ದರು. ಆ ಮಾತು ಪುನಃಪುನಃ ಹೇಳಿದಾಗ ಇವರು ಸಿಟ್ಟಿಗೆದ್ದು, ರಸ್ತೆಯ ಬದಿಯಲ್ಲಿ ಹರಿಯುತ್ತಿದ್ದ ನದಿಯಲ್ಲಿ ತಲೆ ಒದ್ದೆಮಾಡಿಕೊಂಡು ಬಂದರು,ನನ್ನ ತಂದೆಯ ಮರಣದ ನಂತರ ಮುಂಡನ ಮಾಡಿಸಿಕೊಂಡ ನೆನಪು ನನಗಿಲ್ಲ. ನೀವೀಗ ಅದನ್ನು ನೆರವೇರಿಸಬಹುದು.’ ಎಂದಾಗ, ರೊಚ್ಚಿಗೆದ್ದು ಚಿಕ್ಕಪ್ಪ ಬೆತ್ತದಿಂದ ಹೊಡೆದರು.
ಒಮ್ಮೆ ಕಟ್ಟಿಗೆ ಕಡಿಯುವಾಗ ಚಿಕ್ಕಪ್ಪನ ಕೊಡಲಿ ತಪ್ಪಿ ಅವರ ಕಾಲಮೇಲೆ ಬಿತ್ತು. ಮೊಣಕಾಲಿನಿಂದ ರಕ್ತ ಹರಿಯಿತು. ನಡೆಯಲಾಗದೇ ನೆಲದ ಮೇಲೆ ಬಿದ್ದರು. ಮುರಿದ ಕಾಲಿನಿಂದ ಚಿಕ್ಕಪ್ಪ ಮಾನವೀಯ ಗುಣವನ್ನು ಪಡೆಯಬಹುದೆಂದು ಇವರು ಭಾವಿಸಿದರು. ಆರು ತಿಂಗಳ ನಂತರ ಗಾಯ ಮಾಯಿತು, ಯಥಾಸ್ಥಿತಿಗೆ ಬಂದರು. ಮೊದಲಿನಂತೆ ರಾಕ್ಷಸೀಪ್ರವೃತ್ತಿ ತೋರತೊಡಗಿದರು. ಅತಿಥಿಗಳ ಸಮ್ಮಖದಲ್ಲಿ ಹೀನಾಯ ಶಬ್ದಗಳನ್ನು ಬಳಸಿ ಬೈಯ್ಯುತ್ತಿದ್ದರು. ಅವರ ಚಿಕ್ಕಮ್ಮನೂ ರಾಕ್ಷಸವೃತ್ತಿಯಲ್ಲಿ ಕಡಿಮೆ ಇರಲಿಲ್ಲ. ಒಮ್ಮೆ ಕೂಗಿದೊಡನೆ ಯೇ ಬರಲಿಲ್ಲ ಎಂದು ಚಿಕ್ಕಮ್ಮ ಕೋಪಗೊಂಡರು. ಅವರು ನೀಡಿದ ಶಿಕ್ಷೆ ಯಾವುದು ಗೊತ್ತೇ? ಕೆಂಪು ಮೆಣಸಿನ ಪುಡಿಯನ್ನು ಕಣ್ಣು, ಮೂಗು, ಕಿವಿಗಳಲ್ಲಿ ತುಂಬಿದರು. ಇಷ್ಟಕ್ಕೆ ತೃಪ್ತರಾಗದೆ ಗುಹ್ಯಭಾಗಕ್ಕೂ ಮೆತ್ತಿದರು. ಮುಂದೆ, ಚಿಕ್ಕಮ್ಮನ ನಡತೆ ಬದಲಾಯಿತು. ಚಿಕ್ಕಪ್ಪ ಕುಡಿತದ ನಶೆಯಲ್ಲಿ ಅವಳನ್ನು ಯದ್ವಾತದ್ವಾ ಹಿಂಸಿಸಲು ಪ್ರಾರಂಭಿದ್ದ. ನಂತರ ಇವರನ್ನು ಗಂಡ ಬೈದಾಗ ಇವರ ಪರವಾಗಿ ವಕಾಲತ್ತು ವಹಿಸಿ ಮಾತಾಡತೊಡಗಿದಳು. ಚಿಕ್ಕಪ್ಪ ಕುಡಿದುಬಿದ್ದಾಗ ಸಲೂಲಿನ ಸಮಸ್ತ ಉಸ್ತುವಾರಿ ಇವರ ಮೇಲೆ ಬಿತ್ತು. ತಾವೇ ಕೆಲಸ ಕಲಿತುಕೊಂಡರು. ಗ್ರಾಹಕರ ಮನೆಗಳಿಗೆ ಭೇಟಿ ಇತ್ತು ಕ್ಷೌರವನ್ನೋ, ಶೇವಿಂಗನ್ನೋ ಕೈಕೊಳ್ಳತೊಡಗಿದರು. ಚಿಕ್ಕಪ್ಪ ಮನೆಯಲ್ಲೇ ಹೆಚ್ಚುಕಾಲ ಕಳೆಯುತ್ತಿದ್ದ, ಆದರೂ ದೌರ್ಜನ್ಯ ಕಡಿಮೆಯಾಗಲಿಲ್ಲ. ತಾವು ಅತ್ತೂರಿಗೆ ಮರಳಬೇಕು, ತಾಯಿಯ ಜತೆಗೆ ಕರಿಮಿನಾಬಾಯಿಯ ಬಾಡಿಗೆ ಮನೆಯಲ್ಲಿದ್ದುಕೊಂಡೇ, ರಸ್ತೆಯ ಬದಿಯಲ್ಲಿ ಒಂದು ಪುಟ್ಟ ತೆಂಗಿನ ಸೋಗೆಗಳ ಅಂಗಡಿಯಿಟ್ಟು ಕ್ಷೌರದ ಧಂದೆ ಶುರುಮಾಡಲು ಬಗೆದರು. ಅದಕ್ಕಾಗಿ ಆರ್ಥಿಕವಾಗಿ ಸಶಕ್ತನಾಗಬೇಕೆಂಬ ಒತ್ತಡ ಕಾಡುತ್ತಿತ್ತು. ಚಿಕ್ಕಪ್ಪನ ಜೀತದ ಆಳಾಗಿ ದುಡಿಯುವ ಜೀವನಕ್ಕೆ ಕೊನೆ ಹಾಡಬೇಕೆಂದರು. ಗಣೇಶನ ಹಬ್ಬದ ನಿಮಿತ್ತ ಅಮ್ಮನ ಕಡೆ ಹೋಗುವ ನೆಪದಲ್ಲಿ ಚಿಕ್ಕಪ್ಪನ ಮನೆಯಿಂದ ಊರಿಗೆ ಪಲಾಯನ ಮಾಡಬೇಕೆಂದರು. ತಾನು ಬಿಟ್ಟುಹೋಗುವ ವಿಷಯ ಚಿಕ್ಕಮ್ಮನಿಗೆ ತಿಳಿಸಿದರು. ಆ ರಾತ್ರಿ ಚಿಕ್ಕಪ್ಪನಲ್ಲಿ ಒಂದು ಮಾತೂ ಆಡದೇ ಮನೆಬಿಟ್ಟರು. ಸಲೂನಿನಲ್ಲಿ ಅಡಗಿಸಿಟ್ಟ ಸ್ವಲ್ಪ ಹಣವನ್ನು ತೆಗೆದುಕೊಂಡರು. ಚಿಕ್ಕಪ್ಪ ಮತ್ತೆ ಬಂದು ತನ್ನ ಜೊತೆಗೆ ಬರಲು ಪುಸಲಾಯಿಸಿದರು. ಇಷ್ಟು ಹಿಂಸೆ ಕೊಟ್ಟವರ ಬಳಿಗೆ ಮತ್ತೆ ಮರಳುವುದು ಅಸಾಧ್ಯವಾಗಿತ್ತು. ಹಿಂದೆ ನೀಡಿದ ಭರವಸೆಯಂತೆ ಚಿಕ್ಕಪ್ಪ ಪೂರ್ವಾರ್ಜಿತ ಆಸ್ತಿಯಲ್ಲಿ ಪಾಲು ನೀಡಲಿಲ್ಲ. ಒಂದು ವಾರ ತಾಯಿಯ ಜೊತೆಗಿದ್ದು ನಂತರ ಮುಂಬಯಿಗೆ ಪಯಣ ಬೆಳಸಿದರು. ’’
( ಶಿವರಾಮ ಭಂಡಾರಿ ತಮ್ಮ ವಯಸ್ಸಿನ 12 ರಿಂದ 16 ವರ್ಷ ಚಿಕ್ಕಪ್ಪನ ಮನೆಯಲ್ಲಿದ್ದರು. ಅವರ ಮೊದಲ ಅನುಭವ 12 ವರ್ಷದ ವಿಧವೆಯ ಮುಂಡನ ಮಾಡಿದ್ದು ಚಿಕ್ಕಪ್ಪನ ಕೃಪೆಯಿಂದ!)

2014ರಲ್ಲಿ ಚಿಕ್ಕಪ್ಪ ತೀರಿಕೊಂಡರು. ಆಗ ಅವರಿಗೆ 78 ವಯಸ್ಸಾಗಿತ್ತು. ಶ್ವಾಸಕೋಶದ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. 2013ರಲ್ಲಿ ಮುಂಬಯಿಯಲ್ಲಿ ಶಿವರಾಮ ಅವರ ಪ್ರಥಮ ಸಲೂನಿನ ಸ್ಥಾಪನೆಯ ಬೆಳ್ಳಿಹಬ್ಬಕ್ಕೆ ಬರುವ ಮನಸ್ಸು ಚಿಕ್ಕಪ್ಪಗಿತ್ತು. ತಾನೇ ಇವರ ಗುರು ಎಂದು ಹೇಳಿ ಒಂದು ಗ್ರೂಪ್ ಫೋಟೊ ತೆಗೆಸಿಕೊಳ್ಳುವ ಇಚ್ಛೆ ಇತ್ತಂತೆ. 2010ರಲ್ಲಿ ಮುಂಬೈಗೆ ಬಂದಿದ್ದರು. ಇವರ ಅಪಾರ್ಟ್‍ಮೆಂಟಿಗೆ ಭೇಟಿ ನೀಡಿದ್ದರು. ಆಗ ಇವರ ಪತ್ನಿ ಅನುಶ್ರೀ ಸೀಮಂತ ನಡೆದಿತ್ತು. ಅವಳ ಗರ್ಭದಲ್ಲಿ ಮಗ ರೋಹಿಲ್ ಬೆಳೆಯುತ್ತಿದ್ದ. ಚಿಕ್ಕಪ್ಪ ಮರಣ ಶೈಯ್ಯಲ್ಲಿದ್ದಾಗ ಕೂಡ ಅವರಲ್ಲಿ ಪಶ್ಚಾತ್ತಾಪದ ಭಾವನೆ ಇರಲಿಲ್ಲ. ಶಿವರಾಮರ ಯಶಸ್ಸಿನ ಸುದ್ದಿ ವಾರ್ತಾಪತ್ರಿಕೆಗಳಲ್ಲಿ ಓದಿ, ಟೆಲಿವಿಜನ್‍ದಲ್ಲಿ ನೋಡಿ, ಅಭಿಮಾನ ವ್ಯಕ್ತಪಡಿಸಿದ್ದರಂತೆ. ರೋಗಗ್ರಸ್ತ ಸ್ಥಿತಿಯಲ್ಲೂ ತನ್ನ ಬಡಾಯಿಯ ಮಾತು ಬಿಟ್ಟಿರಲಿಲ್ಲ. ಇವರ ಎಲ್ಲ ಯಶಸ್ಸಿಗೂ ತಾವೇ ಕಾರಣ ಎಂದು ಕೊಚ್ಚಿಕೊಳ್ಳುತ್ತಿದ್ದರಂತೆ. ಶಿವರಾಮ ಬರೆಯುತ್ತಾರೆ, ನಾನು ನನ್ನ ಚಿಕ್ಕಪ್ಪ ಅಥವಾ ಚಿಕ್ಕಮ್ಮನ ಬಗೆಗೆ ಕೋಪದಿಂದಿಲ್ಲ. ಅವರ ಬಗ್ಗೆ ಯಾವ ಸೇಡಿನ ಭಾವನೆಯೂ ಇಲ್ಲ. ಈ ಮೊದಲಿನ ಹಂತ ನನ್ನ ಬದುಕಿನಲ್ಲಿ ಬಾರದೇ ಹೋಗಿದ್ದರೆ ಪ್ರಾಯಶಃ ನನ್ನ ಜೀವನಪ್ರೀತಿಯ ಕರೆ ಎಂದಿಗೂ ಬದಿರುತ್ತಿರಲಿಲ್ಲವೇನೋ. ಹೆಚ್ಚುಕಡಿಮೆ ಆ ನಾಲ್ಕು ವರ್ಷಗಳ ಎಲೆಮಡಲಿನ ನನ್ನ ವಾಸ್ತವ್ಯ ನನಗೊಂದು ಭವಿಷ್ಯವನ್ನು ರೂಪಿಸಲು ಸಹಾಯಕವಾಯಿತು. ಅವರು ನನಗೆ ಒಬ್ಬ ಕೇಶವಿನ್ಯಾಸಕಾರನ ಜಗತ್ತಿಗೆ ಸಾಗುವ ಹಾದಿಯನ್ನು ತೋರಿಸಿಕೊಟ್ಟರೇನೋ. ನಾನು ಬರೀ ಕೃತಜ್ಞನಿರಬೇಕಷ್ಟೆ.

(5)

ಶ್ರೀಮಂತ, ಬಡವ ಮತ್ತು `ಸೆಲೂನ್’

ಎಲೆಮಡಲಿನ ಚಿಕ್ಕಪ್ಪನ ಮನೆಯ ಎದುರಿನ ರಮಣೀಯ ವಾತಾವರಣದ ಪೀಡೆಯ ಒಳಗೆ ನಾನು ಬಂಧಿಯಾಗಿದ್ದರೂ, ಅಲ್ಲಿಂದ ಕೆಲವು ಕಿಲೋಮೀಟರ್ ದೂರದ ದುರ್ಗದಬೆಟ್ಟಿನಲ್ಲಿ ಒಂದು ಬಳುಕಿದ ರಸ್ತೆಯ ಬದಿಯಲ್ಲಿ ಇದ್ದ ಚಿಕ್ಕಪ್ಪನ ಸಲೂನ್ ನನಗೆ ಬೇರೆಯ ಪ್ರಪಂಚವಾಗಿತ್ತು. . . ಉಷ್ಣವಲಯದ ಕಾಡಿನ ನಡುವೆ, ಹಿನ್ನೆಲೆಯಲ್ಲಿ ಅಡ್ಡಾದಿಡ್ಡಿ ಗುಡ್ಡಗಳ ಸಾಲುಗಳು, ಜುಳುಜುಳು ಹರಿಯುವ ತೊರೆಗಳು ಅವುಗಳ ನಡುವಿನ ನೆಲಹಾಸು ಹಾಸಿದಂತೆ ತೋರುವ ಚಹಾ ತೋಟ ಮತ್ತು ಕಾಫಿ ಎಸ್ಟೇಟ್‍ಗಳ ಮಧ್ಯೆ ಒಂದೇ ಒಂದು ಕ್ಷೌರದ ಅಂಗಡಿ ಅಂದರೆ ಅದು ಚಿಕ್ಕಪ್ಪನದು. ಏಕಸ್ವರೂಪದಲ್ಲಿ, ಶ್ರೀಮಂತರಿಗೆ, ಬಡವರಿಗೆ, ಅನುಕೂಲಸ್ಥರಿಗೆ, ಮತ್ತು ಕೆಳಗಿನ ಸ್ತರದವರಿಗೆ, ಎಲ್ಲರಿಗೂ ಎಲೆಮಡಲು ಮತ್ತು ಸರಹದ್ದಿನ ಹಳ್ಳಿಗಳಲ್ಲಿ ಇದ್ದದ್ದು ಇದೊಂದೇ ಸಲೂನ್. ಅಂಗಡಿಯ ಎದುರು ಅದರ ಹೆಸರನ್ನು ನಮೂದಿಸುವ ಯಾವುದೇ ಫಲಕ ಇರಲಿಲ್ಲ. ನಾನೊಬ್ಬ ತರಬೇತಿಗಿದ್ದವ, ಕೆಲಸಗಾರ ಸೇವಕ . . ಅಂಗಡಿಯ ಒಡೆಯರಾಗಿದ್ದ ನನ್ನ ಚಿಕ್ಕಪ್ಪನಿಗೆ, ಚುಟಿಕಾಗಿ ಹೇಳುವುದಾದರೆ, ನಾನು ಅವರ ಬಂಟನಾಗಿದ್ದೆ. ನನು ಇಲ್ಲಿಯೇ ಐದುಬೆರಳಿನ ಬ್ಲೇಡ್(Five-finger blade)ನ್ನು ಉಪಯೋಗಿಸಲು ಕಲಿತದ್ದು ಅದೊಂದು ಅಪರೂಪದ ಸಾಧನವಾಗಿದ್ದು, ಈವೊತ್ತಿನ ದಿವಸಗಳಲ್ಲಿ ಬಾರ್ಬರನ್ ಸಾಮಗ್ರಿಗಳ ಪೆಟ್ಟಿಗೆಯಲ್ಲಿ ಕಾಣಸಿಗಲಾರದು. ಈ ಸಲಕರಣೆ `ಸೀಸರ್‍ಸ್ ಕಟ್’ಗೆ ಹೇಳಿಮಾಡಿಸಿದಂತಿತ್ತು. ರೈಟರ್‍ಗಳು (ಚಹಾ ತೋಟಗಳಲ್ಲಿ ಮತ್ತು ಕಾಫಿ ಎಸ್ಟೇಟ್‍ಗಳಲ್ಲಿ ಕರಣಿಕರಾಗಿ ದುಡಿಯುವವರು) ಸೌಜನ್ಯದ ಮಂದಿಯಾಗಿದ್ದು, ಸ್ಟಾರ್ಚ ಹಾಕಿದ ಚೆಡ್ಡಿಗಳನ್ನೂ, ಒಂದೂ ಕಲೆಯಿಲ್ಲದ, ಶುಭ್ರವಾದ ಬಿಳಿ ಷರಟನ್ನೂ ಹಾಕಿಕೊಂಡು ಹಣೆಯನ್ನು ಬಹುತೇಕ ಮುಚ್ಚುವ ಬೌಲರ್ ಹ್ಯಾಟ್‍ನ್ನು ತೊಟ್ಟುಕೊಳ್ಳುತ್ತಿದ್ದರು. ಪೋಲಿಸ್ ಅಧಿಕಾರಿಗಳಂತೆ ಕೈಯ್ಯಲ್ಲೊಂದು ಕೋಲನ್ನು ಆಡಿಸುತ್ತ, ಬರುತ್ತಿರುವ ಅವರ ಭಂಗಿ ಹಳ್ಳಿಯ ಜನರಲ್ಲಿ ಅಚ್ಚರಿ ಮತ್ತು ಪ್ರಶಂಸೆಯನ್ನು ಮೂಡಿಸುತ್ತಿತ್ತು. . . ನಾನು ಫೈ-ಫಿಂಗರ್ ಬ್ಲೇಡನ್ನು ಬಳಸಿದ್ದು ಅಂತಹ ಓರ್ವ ರೈಟರ್‍ನ ತಲೆಯ ಮೇಲೆ.’’
ಸಲೂನಿಗೆ ಬರುವ ವಿವಿಧ ಗಿರಾಕಿಗಳ ಬಗ್ಗೆ, ಅವರ ಅಪೇಕ್ಷೆಗಳ ಬಗ್ಗೆ ಬರೆಯುತ್ತಾರೆ. ಬ್ಯಾರಿಗಳು, ದೇವಸ್ಥಾನದ ಪುರೋಹಿತರು, ಚಿಕ್ಕಪ್ಪನಿಗೆ ಮದ್ಯ ಸರಬರಾಜು ಮಾಡುವ ಕುಳಗಳ ಬಗ್ಗೆ ಬರೆಯುತ್ತಾರೆ. ಕಂಕುಳಲ್ಲಿಯ ದುರ್ವಾಸನೆ ಬರುವ ಕೂದಲು ಶೇವ್ ಮಾಡುವದನ್ನು ವೃತ್ತಿಪರ ಕಂಟಕವೆಂದು ಕರೆಯುತ್ತಾರೆ. ಶ್ರೀಮಂತರು, ವ್ಯಾಪಾರಸ್ಥರು, ಹಳ್ಳಿಯ ಮುಖ್ಯಸ್ಥರು ಸಲೂನಿಗೆ ಕಾಲಿಡುವುದನ್ನು ಅವಮರ್ಯಾದೆ ಎಂದು ಪರಿಗಣಿಸುತ್ತಿದ್ದರು. ಅವರ ಮನೆಗಳಿಗೇ ಹೋಗಿ ಶೇವ್ ಮಾಡುವ ಪರಿಕ್ರಮ, ಅಲ್ಲಿಯ ಅನುಭವದ ಬಗ್ಗೆ ಬರೆಯುತ್ತಾರೆ. ಶ್ರೀಮಂತರು ತಮ್ಮದೇ ಆದ ರೀತಿಯಲ್ಲಿ ಪ್ರಪಂಚದ ಇತರರೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಎಲ್ಲಾ ಅನುಕೂಲಸ್ಥರು ತಮ್ಮ ವರಸೆಗೆ ಅನುಗುಣವಾಗಿಯೇ ಇವರನ್ನು ಕರೆಯುತ್ತಿದ್ದರು. ಒಂದು ಅಂಬೆಸಡರ್ ಕಾರು ಅಥವಾ ಜೀಪನ್ನು ನಮ್ಮ ಮನೆಗೆ ಕಳಿಸುತ್ತಿದ್ದರು, ಕೆಲಸವಾದ ಬಳಿಕ ಮತ್ತೆ ತಿರುಗಿ ಕಳುಹಿಸಿಕೊಡುತ್ತಿದ್ದರು. ಯಾಕೆಂದರೆ ಅವರ ಮನೆಗಳು ಮೈಲುಗಟ್ಟಲೆ ದೂರದಲ್ಲಿ ಇರುತ್ತಿದ್ದವು. ವೈಶಿಷ್ಟ್ಯವೆಂದರೆ ಇವರಿಗೆ ಕೊಡಬೇಕಾದ ಹಣವನ್ನು ವಾರ್ಷಿಕವಾಗಿ ಪಾವತಿ ಮಾಡುತ್ತಿದ್ದರು. ಅದು ಹಣದ ರೂಪದಲ್ಲಿ ಅಲ್ಲ. ಅಕ್ಕಿ ದವಸ ಧಾನ್ಯ ಮುಡಿಯ ರೂಪದಲ್ಲಿ (ಸುಮಾರು ಮೂವತ್ತೆಂಟು ಕಿಲೋ ಅಕ್ಕಿಯನ್ನು ಮೂಟೆಯಲ್ಲಿ ಕೊಡುತ್ತಿದ್ದರು.)
ಗಿರಾಕಿಗಳು ಕೇಶಕರ್ತನ ಆದ ಮೇಲೆ ಸ್ನಾನ ಮಾಡದೆ ಮನೆಯನ್ನು ಪ್ರವೇಶಿಸುತ್ತಿರಲಿಲ್ಲ. “ಈ ಒಂದು ಸಂದರ್ಭದಲ್ಲಿ ತಾವು ಅಸ್ಪೃಶ್ಯರೆನಿಸಿಕೊಳ್ಳುವುದು ವಾಡಿಕೆ. ಬಾರ್ಬರ್ ಕುಟುಂಬದಲ್ಲಿ ಜನಿಸಿದ ನನಗೆ, ನನ್ನ ಕೀಳು ಸಾಮಾಜಿಕ ಸ್ತರವನ್ನು ಇದು ಜ್ಞಾಪಿಸುವಂತೆ ಮಾಡುತ್ತಿತ್ತು. ಭಾವನಾತ್ಮಕವಾಗಿ ವಿಷಾದವನ್ನುಂಟು ಮಾಡುತ್ತಿತ್ತು. ಬಾರ್ಬರನ ಅಂಗಡಿಗೆ ಹೋಗುವುದೂ, ಶ್ಮಶಾನದಲ್ಲಿ ಹೆಣವನ್ನು ಸುಟ್ಟು ಬರುವುದೂ, ಸಮಾನವಾಗಿ ನೋಡುವುದನ್ನು ಕಂಡು ನಾನು ಅಚ್ಚರಿಪಡುತ್ತಿದ್ದೆ. ಶ್ಮಶಾನದಿಂದ ಹಿಂದಿರುಗಿದ ಬಳಿಕ ಜನರು ತಮ್ಮ ಕೆಲಸಗಳಿಗೆ ತೆರಳುವ ಮುನ್ನ ಸ್ನಾನ ಮಾಡುವುದು ಪದ್ಧತಿ. ಮನೆಯನ್ನು ಪ್ರವೇಶಿಸಬೇಕಾದರೆ ಶುದ್ಧಮಾಡಿಕೊಳ್ಳುವುದು ಅನಿವಾರ್ಯವೇ? ಈ ವಿಚಾರ ನನಗೆ ಬಹಳಷ್ಟು ಸಮಸ್ಯೆಯನ್ನೊಗಿಸುತ್ತಿತ್ತು. ಅವರು ನನ್ನನ್ನು ತಮ್ಮ ಶ್ರೀಮಂತ ವಾಹನದಲ್ಲಿ ಮನೆಗೆ ಹಿದಿರುಗಿಸುವ ಸಂದರ್ಭದಲ್ಲಿ.’’
ಸಸ್ಯಶಾಮಲೆಯ ಮಧ್ಯದಲ್ಲಿ ಇವರ ಚಿಕ್ಕಪ್ಪನ ಸಲೂನ್ ಒಂದು ವಿಶ್ವದಂತೆ ಇತ್ತಂತೆ. ಶೇವಿಂಗ್ ಕ್ರೀಮ್ ಅ ಕಾಲದಲ್ಲಿ ವಿಲಾಸೀ ವಸ್ತುವಾಗಿತ್ತಂತೆ. ನಿಯತಕಾಲಿಕಗಳಿಂದ ಆರಿಸಿ, ಹರಿದುಕೊಳ್ಳಲಾದ, ನಾನಾ ಬಗೆಯ ಚಿತ್ರಗಳು ಸಲೂನಿನ ಗೋಡೆಯ ಮೇಲಿರುತ್ತಿದ್ದವು. ಕನ್ನಡ ಚಿತ್ರಗಳ ಅಭಿನೇತ್ರಿಗಳ ಚಿತ್ರ, ಕ್ರಿಕೆಟ್ ಆಟಗಾರರ ಚಿತ್ರ (ಅಂದಿನ ಕ್ರಿಕೆಟ್ ಪಟುಗಳಲ್ಲಿ ಗುಂಡಪ್ಪ ವಿಶ್ವನಾಥ, ಚಂದ್ರಶೇಖರ್, ಪ್ರಸನ್ನ, ಬ್ರಿಜೇಶ್ ಪಟೇಲ್ ಮತ್ತು ರೋಜರ್ ಬಿನ್ನಿಯವರ ಚಿತ್ರ ಪಮುಖವಾಗಿದ್ದವು. ಪ್ರತಿ ಟೆಸ್ಟ್ ಮ್ಯಾಚನ್ನು ರೇಡಿಯೋದಲ್ಲಿ ಕೇಳುವುದು ಗಮ್ಮತ್ತಾಗಿತ್ತು. ಪ್ರತಿ ಬೌಂಡರಿ ಮತ್ತು ಸಿಕ್ಸರ್‍ಗೆ ಚೆಪ್ಪಳೆ ತಟ್ಟುವುದು. ಟ್ರಾನ್ಸಿಸ್ಟ್ರರ್‍ನಲ್ಲಿ ವಾರ್ತೆ ಹಾಡುಗಳು ಮನರಂಜನೆಯನ್ನು, ಮನೆಗಳಿಗೆ, ಅಂಗಡಿಗಳಿಗೆ ತರುತ್ತಿದ್ದವು. ಆ ಕಾಲದಲ್ಲಿ ಅತ್ಯಂತ ಪ್ರಸಿದ್ಧತಾರೆ ಎಂದರೆ ತಮಿಳು ಸಿನೇಮಾದ ಎಂ.ಜಿ.ರಾಮಚಂದ್ರನ್. ಅವರ ಪೂರ್ಣ ಪ್ರಮಾಣದ ಫೆÇೀಟೋ ಇವರ ಅಂಗಡಿಯ ಪ್ರವೇಶದ್ವಾರವನ್ನು ಅಲಂಕರಿಸಿತ್ತಂತೆ. ಕಾಫೀ ಎಸ್ಟೇಟಿನಲ್ಲಿ ಕೆಲಸ ಮಾಡುವ ಕೆಲಸಗಾರರೇ ಇವರ ಬಹು ದೊಡ್ಡ ಗಿರಾಕಿಯಾಗಿದ್ದರಂತೆ. ದುರ್ನಾತ ಬೀರುವ ಅಲೆಮಾರಿ ಜನರ ಬಗ್ಗೆ ಬರೆಯುತ್ತಾರೆ. ಕೂದಲಲ್ಲಿ ಹಳೆಯನಾಣ್ಯಗಳನ್ನು ಕಟ್ಟಿ ಗಲ್ಲದ ಕೆಳಭಾಗದ ವರೆಗೆ ಜೋತಾಡುವಂತೆ ಇಳಿಬಿಡುತ್ತಿದ್ದರಂತೆ.

(6)

ಮುಂಬಯಿ ನಾಯಿಗಳು, ಮಿನುಗುವ ಬೆಳಕುಗಳು ಹಾಗೂ ಗಗನಚುಂಬಿ ಕಟ್ಟಡಗಳು

ಮುಂಬಯಿಗೆ ಬರುವಾಗ, ಬಸ್ಸಿನಲ್ಲಿ ಶಾಂತನಿದ್ದೆಯಿಂದ ಎಚ್ಚತ್ತು, ಕಿಟಿಕಿಯ ಹೊರಗೆ ನಗರದ ದೃಶ್ಯಗಳನ್ನು ನೋಡುತ್ತಿದ್ದರು. ಕನಸಿನ ನಗರಕ್ಕೆ ಬರುತ್ತಿದ್ದರು. ಉತ್ಸುಕರೂ, ಸಂತುಷ್ಟರೂ ಆಗಿದ್ದರು. ಬಂಧನದಿಂದ ಮುಕ್ತವಾದ ಅನಿಸಿಕೆ. ಚಿಕ್ಕಪ್ಪನ ಪೀಡೆಯಿಂದ ದೂರ ಸರಿಯುತ್ತಿರುವ ಆನಂದ. ಹೊಸ ಚೆಡ್ಡಿ ಶರ್ಟ್ ಧರಿಸಿದ್ದರು. ಸಲೂನ್-ಮಾಡಿನಲ್ಲಿ ಸಂಗ್ರಹಿ ಇಟ್ಟಿದ್ದ ಸ್ವಲ್ಪ ಹಣವಿತ್ತು. 35 ರೂಪಾಯಿ ಕೊಟ್ಟು ಬಸ್‍ನಿಂದ ಪ್ರಯಾಣ ಮಾಡಿದ್ದರು. ಬದಿಯಲ್ಲಿ ಕುಳಿತ ಹಿರಿಯರೊಬ್ಬರು, ಇದು ಮೊದಲ ಪ್ರಯಾಣವೇ?’ ಎಂದು ಕೇಳಿದರು. “ಮುಂಬಯಿ ಎರಡು ವರ್ಗಗಳಲ್ಲಿ ಮೇಲ್ಪಂಕ್ತಿಯಲ್ಲಿವೆ. ಅಲ್ಲಿ ನರಕವೂ ಇದೆ, ಸ್ವರ್ಗವೂ ಇದೆ. ಎನ್ನುತ್ತ ಯೋಚನಾಮಗ್ನರಾಗಿ ವಿವರಿಸಿದರು.ಒಂದು ದಿನ ನೀನು ಕೋಟ್ಯಧಿಪತಿಯೂ ಆಗಬಹುದು, ಮರುದಿನವೇ ಒಬ್ಬ ದಿವಾಳಿಯೂ ಆಗಬಹುದು’ . . . ಅವರು ಮುಂದುವರಿಸಿದರು.’’ ಇವರು ಶ್ರದ್ಧೆಯಿಂದ ಕೇಳುತ್ತಿದ್ದರು. ಅವರು ಅನೇಕ ವಿಷಯ ಮುಂಬಯಿಯ ಬಗ್ಗೆ ಹೇಳುತ್ತಿದ್ದರು. ವಿವಿಧ ಸಮುದಾಯದ ಬಗ್ಗೆ, ಅನುಕೂಲಸ್ಥರಾದ ಗುಜರಾತಿಗಳ ಬಗ್ಗೆ, ಮಾರವಾಡಿಗಳ ಬಗ್ಗೆ ಹೇಳಿದರು. ಇಲ್ಲಿಯದು ಹೋರಾಟದ ಬದುಕು. ಇಲ್ಲಿ ನಗರವನ್ನು ಮುಂಬಾದೇವಿ ರಕ್ಷಿಸುತ್ತಾಳೆ’ ಎಂದರು. ಅನೇಕ ಬುದ್ಧಿಯ ಮಾತುಗಳನ್ನು ಹೇಳಿದರು.ಗುಂಪುಗಳು ಸೇರುವ ಕಡೆಗೆ ಹೋಗಬೇಡ. ಜನಜಂಗುಳಿಯಿಂದ ದೂರ ಇರು. ಬೀದಿ ಜಗಳ ಕಂಡರೆ ನೀನು ಅದರಲ್ಲಿ ಸೇರಿಕೊಳ್ಳಬೇಡ. ಉಳಿತಾಯ ಮಾಡು. ಖರ್ಚು ಮಾಡಬೇಡ’. ಇವರು ಎಚ್ಚರದಿಂದ ಎಲ್ಲ ಉಪದೇಶ ಕೇಳಿದರು. ಮುಂಬಯಿಯಲ್ಲಿ ನಾಯಿಗಳಿವೆ?’ ಎಂದು ಅವರನ್ನು ಪ್ರಶ್ನಿಸಿದರು. ಇದಕ್ಕೆ ಕಾರಣ ಅವರು ಹಳ್ಳಿಯಲ್ಲಿ ಅನೇಕ ಸಲ ನಾಯಿಗಳಿಂದ ಕಚ್ಚಿಸಿಕೊಂಡಿದ್ದರು. ಪೇಟೆ ಆಸ್ಪತ್ರೆಯಲ್ಲಿ ಹೊಟ್ಟೆಗೆ ಕೊಡುವ ಇಂಜೆಕ್ಶನ್ ನೋವನ್ನು ಮರೆತಿರಲಿಲ್ಲ. ಹೀಗೆ ನೆನೆಪಿನ ಯಾತ್ರೆಯಲ್ಲಿ ಭೂತಕಾಲದಿಂದ ವರ್ತಮಾನಕ್ಕೆ ಬರುತ್ತಾರೆ, ತತ್ವಜ್ಞಾನಿಯಂತೆ ಚಿಂತನೆಯಲ್ಲಿ ತೊಡಗುತ್ತಾರೆ. ಒಂದು ತುಣುಕು ಹೀಗಿದೆ: “ಈಗ ನಾನು ಮುಂಬಯಿಯ ಹೊರವಲಯದ ಓಷಿವಾರ ಕಟ್ಟಡದ ಮೂವತ್ತಾರನೇ ಅಂತಸ್ತಿನಲ್ಲಿ ವಾಸ್ತವ್ಯಕ್ಕಿದ್ದೇನೆ. ರಾತ್ರಿಯ ಹೊತ್ತು ನಾನು ಹಾಸಿಗೆಯಲ್ಲಿ ಮಲಗಿರುವ ಸಮಯ ಕಿಟಿಕಿಯಿಂದ ನನಗೆ ನಗರದ ಗಗನಚುಂಬಿ ಕಟ್ಟಡಗಳಿಂದ ಅಸಂಖ್ಯಾತ ಬೆಳಕಿನ ಕಿಂಡಿಗಳು ಕಂಡುಬರುತ್ತವೆ, ಕೆಲವು ವೈಭಹವೋಪೇತ ಅಪಾರ್ಟಮೆಂಟ್‍ಗಳಿಂದಲೂ, ಇನ್ನು ಕೆಲವು ಅಷ್ಟು ಅನುಕೂಲ ಸ್ಥಿತಿಯಲ್ಲಿ ಇಲ್ಲದವರ ಮನೆಗಳಿಂದ ಬಂದವು ಆಗಿರುತ್ತವೆ. ದೂರದಲ್ಲಿ ಎಲ್ಲಾ ಬೆಳಕೂ ಒಂದೇ ತೆರನಾಗಿ ಕಾಣಿಸುತ್ತವೆ. ಬದುಕಿ ಉಳಿಯುವುದೇ ಎಲ್ಲರ ಹೋರಾಟವಾಗಿರುತ್ತದೆ. ನಮ್ಮ ನಮ್ಮ ಕನಸುಗಳು ಮತ್ತು ಗುರಿಗಳು ಮಾತ್ರ ಬೇರೆಯಾಗಿರುತ್ತವೆ.’’ ಮುಂಬಯಿಯಲ್ಲಿ ಕೆಲಸ ಸಿಗುವುದು ಅಷ್ಟೇನು ಸುಲಭದ ಮಾತಾಗಿರಲಿಲ್ಲ. ಭಾಂಡುಪ್‍ನಲ್ಲಿ ವಿಠಲ ಎಂಬವರಲ್ಲಿ ಇಳಿದುಕೊಂಡಿದ್ದರು. ಸಲೂನ್ ಉದ್ಯಮದಲ್ಲಿ ಮುಂದೆ ಬಂದ ಸಂಬಂಧಿಗಳ ಬಗ್ಗೆ ಅವನು ಹೇಳುತ್ತಿದ್ದ. ಇವರಿಗೆ ಬ್ಲೋ-ಡ್ರೈಯರ್‍ನ್ನು ಉಪಯೋಗಿಸಲು ಬರುತ್ತಿರಲಿಲ್ಲ. ಮುಂಬಯಿ ದೊಡ್ಡ ನಗರ, ಇಲ್ಲಿ ಹೇಗೆ ಮುನ್ನಡೆವುದು ಎಂಬ ಚಿಂತೆ ಆವರಿಸಿತ್ತು.ಅಜೆಂತಾ’ ಎಂಬ ಸಣ್ಣ ಸಲೂನಿನಲ್ಲಿ ಇವರಿಗೆ ಕೆಲಸ ದೊರೆಯಿತು. ಅದರ ಒಡೆಯ ವಿಠಲನ ಚಿಕ್ಕಪ್ಪನ ಮಗ ಆನಂದ ಭಂಡಾರಿ ಎಂಬವ. ಆ ಅಂಗಡಿ ಭಾಂಡುಪ್ ಪಶ್ಚಿಮದ ಖಿಂಡಿಪಾಡಾ ಎಂಬ ಅಪಾಯಕಾರಿ ಜಾಗೆಯಲ್ಲಿತ್ತು. ಅಲ್ಲಿ ಕಾನೂನಿಗೆ ವಿರುದ್ಧವಾದ ಚಟವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಒಮ್ಮೆ ಅಲ್ಲಿಯ ಒಬ್ಬ ಗಿರಾಕಿಯೊಬ್ಬ ಆತುರದಲ್ಲಿದ್ದ. ಒಂದು ಗ್ಯಾಜೆಟ್ ಬಳಸಲು ಹೇಳಿದ. ಇವರಿಗೆ ಅದು ಗೊತ್ತಿರಲಿಲ್ಲ. ಆನಂದ ಸಲೂನಿನಲ್ಲಿರಲಿಲ್ಲ. ಕೊನೆಗೆ ಗಿರಾಕಿ0iÉುೀ ಇವರಿಗೆ ಅದನ್ನು ಬಳಸಲು ಕಲಿಸಿದ. ಇಲೆಕ್ಟ್ರಾನಿಕ್ ಡ್ರೈಯರ್ ಪ್ರಥಮ ಬಾರಿ ಕೈಯ್ಯಲ್ಲಿ ಹಿಡಿದಿದ್ದರು. ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಆನಂದ ಇವರನ್ನು ಮುಂಬೈ ಲೋಕಲ್ ಗಾಡಿಗಳಲ್ಲಿ ಅಡ್ಡಾಡಿಸಿದ. ಅವನು ಕರುಣಾಪೂರ್ಣನೂ ಹೃದಯವಂತನೂ ಆಗಿದ್ದ. ಒಂದು ದಿನ ಕತ್ತಲು ಕವಿದ ಬಾರ್‍ಗೆ ಕರಕೊಂಡು ಹೋಗಿ ಮೊತ್ತಮೊದಲು ಬಿಯರ್ ರುಚಿ ನೋಡುವಂತೆ ಮಾಡಿದ್ದ. ತಿಂಗಳಿಗೆ 45 ರೂಪಾಯಿ ಸಂಬಳ. ರಾತ್ರಿ ಮಲಗಲು ಸಲೂನಿನಲ್ಲೆ ಅನುಕೂಲ ಮಾಡಿದ. ಗಿರಾಕಿಗಳಿದ ಟಿಪ್ಸ್ ಸಂಗ್ರಹಿಸಿ ಕೊಂಚ ಹಣ ಕೂಡಿಟ್ಟರು. ಆನಂದ ಇವರನ್ನು ಭಾಂಡುಪ್‍ನಲ್ಲಿದ್ದ ಆತನ ಕಿರಿಯ ತಮ್ಮ ರಘುವಿನ ಸಲೂನಿಗೆ ಬದಲಾಯಿಸಿದನು. ಅಲ್ಲಿ 60 ರೂಪಾಯಿ ಸಂಬಳ. ರಘು ತನ್ನ ಅಣ್ಣ ಆನಂದನಷ್ಟು ದೊಡ್ಡ ಹೃದಯದವನಾಗಿರಲಿಲ್ಲ. ಮಳೆಗಾಲದಲ್ಲಿ ಸಲೂನಿನಲ್ಲಿ ಮಲಗ ಬಹುದೇ?’ ಎಂದು ಕೇಳಿದರೆ ಬೆದರಿಸುತ್ತ ಕೇಳಿದ್ದ,ಇಲೆಕ್ಟ್ರಿಕ್ ಬಿಲ್ ಯಾರು ಕೊಡುತ್ತಾರೆ?’ ಅಂತ.

ಒಂದೂವರೆ ವರ್ಷ ಅಲ್ಲಿ ಕೆಲಸ ಮಾಡಿದ ಬಳಿಕ ರಘು ಸಲೂನಿನ ಎಲ್ಲ ಜವಾಬ್ದಾರಿ ವಹಿಸಿ ಅಲ್ಪ ಸಮಯ ಸೌದಿ ಅರೇಬಿಯಾಕ್ಕೆ ಹೋಗಿದ್ದ. ಅಲ್ಲಿ ಇದ್ದಷ್ಟು ಕಾಲ ಬದುಕಿನ ಕಷ್ಟದ ದಿನ ಕಂಡರು. ಸಮೀಪದಲ್ಲಿ ಕೊಳೆಗೇರಿ ಇತ್ತು. ಅದು ಕೊಲೆಗಡುಕರ, ಕಿಸೆಗಳ್ಳರ ಆಧೀನದಲ್ಲಿತ್ತು. ರಹಸ್ಯ ಗುಹೆಯಲ್ಲಿ ಶರಾಬು ತಯಾರಿಸುತ್ತಿದ್ದರು. ಕೊಲೆಗಡುಕರು ಹರಿತವಾದ ಆಯುಧ ಇಟ್ಟುಕೊಂಡೆ ಓಡಾಡೂತ್ತಿದ್ದರು. ಇವರಿಗೂ ರಘುವಿನ ಹೆಂಡತಿಗೂ ಪರಸ್ಪರ ತಪ್ಪು ತಿಳುವಳಿಕೆಯ ನಿಮಿತ್ತ ಕೆಲಸ ಬಿಡಬೇಕಾಯ್ತು. ಕಾರ್ಕಳದ ಅಮ್ಮನ ಮನೆಗೆ ವಾಪಸ್ ಹೋದರು.
ಒಂದು ವಾರರಲ್ಲಿ ಇನ್ನೊಬ್ಬ ಚಿಕ್ಕಪ್ಪನ ಮಗನ ಶಾಪ್‍ನಲ್ಲಿ ಕೆಲಸ ಮಾಡಲು ಕರೆ ಬಂತು, ಮುಂಬೈಗೆ ಹಿಂದಿರುಗಿದರು. ಈ ಸಲದ ಪ್ರವಾಸದಲ್ಲಿ ಸಾವನ್ನಪ್ಪಿದ ಅನುಭವಾಯ್ತು. ಇವರಿದ್ದ ಬಸ್ಸಿಗೆ ಅಪಘಾತವಾಯ್ತು. ಇವರ ಹಿಂದಿನ ಸೀಟಿನಲ್ಲಿ ಕುಳಿತ ಮಹಿಳೆ ಸಾವನ್ನಪ್ಪಿದಳು. ಡ್ರೈವರ್ ಸೀಟಿನ ಮಗ್ಗುಲಿನ ಗಾಜಿನ ಕಿಟಿಕೆಯ ಮುಖಾಂತರ ಮಣ್ಣು ಮತ್ತು ಕೆಸರು ಮೆತ್ತಿಕೊಂಡೇ ಹೊರಗಡೆ ಜಿಗಿದರು. ಹ್ಯಾಂಡಲ್ ಮುರಿದದ್ದರಿಂದ ಅವರ ಕೆಂಪು ಸೂಟ್‍ಕೇಸ್ ಸುಲಭವಾಗಿ ಸಿಕ್ಕಿತು. ಇವರು ಗುಡ್ಡವನ್ನು ಹತ್ತಿದರು, ಮುಂಬೈಗೆ ಹೋಗುವ ಇನ್ನೊಂದು ಬಸ್ ಹಿಡಿದರು. ರಮಾಬಾಯಿ ನಗರದ ಘಾಟಕೋಪರ್ ಈಸ್ಟ್‍ನಲ್ಲಿ ಹೊಸ ವಾಸ್ತವ್ಯ. ನೂರಾರು ಸವಿರಾರು ತಗಡಿನ ಹಾಳೆಗಳ ಕೆಳಗೆ, ತೆರೆದ ಚರಂಡಿಯ ಮತ್ತು ಕಸಕಡ್ಡಿಗಳ ದಿನ್ನೆಗಳ ಸಹವಾಸಿಯಾಗಿರುವ ಮಂದಿಯ ಜತೆಗೆ, ಅವರೂ ಒಬ್ಬರಾಗಿಹೋದರು. ಎರಡು ಜೋಪಡಿಗಳ ನಡುವೆ ಇದ್ದ ಆ ತಗಡಿನ ಜೋಪಡಿ, ವಿಠಲನ ಚಿಕ್ಕಪ್ಪನ ಮಗ ಆನಂದ ಭಂಡಾರಿಗೆ ಸೇರಿದ್ದು. ಅವನ ಜೊತೆ ಪತ್ನಿ ರುಕ್ಮಿಣಿ ವಾಸಕ್ಕಿದ್ದಳು. ರಮಾಬಾಯಿ ಕೊಳಗೇರಿಯ ವಿಶೇಷವೆಂದರೆ ಅಲ್ಲಿ ಏನು ನಡೆದರೂ ಮತ್ತೊಬ್ಬರಿಗೆ ತಿಳಿಯುತ್ತಿತ್ತು. ಜನರು ಬೊಬ್ಬಿಡುವ, ನೆರೆಯವರು ಕೂಗುವ, ಬೆಳಿಗ್ಗೆ ಎದ್ದೊಡನೆ0iÉುೀ ಮುನಸಿಪಲ್ ನಲ್ಲಿ-ನೀರಿನ ಕಡೆಯಲ್ಲಿ ಜಗಳದ ಸದ್ದು ಅವ್ಯಾಹತವಾಗಿ ಕೇಳುತ್ತಿತ್ತು. ಅಲ್ಲಿಯ ನಿವಾಸಿಗಳೆಲ್ಲ ಸ್ನಾನಕ್ಕೆ, ಕುಡಿಯುವುದಕ್ಕೆ ಈ ನೀರನ್ನೇ ಅವಲಂಬಿಸಿದ್ದರು. ಅದೊಂದು ವಿಚಿತ್ರ ಜಾಗ. ತೆರೆದ ಜಾಗದಲ್ಲಿ ಸ್ನಾನ, ಮಿಂದ ನೀರು, ತೆರೆದ ಚರಂಡಿ ಮತ್ತು ಕೊಳೆಯುವ ಕಸಕಡ್ಡಿಗಳ ದಿಣ್ಣೆಯ ಸಂದಿಯಲ್ಲಿ ಹರಿಯುತ್ತಿತ್ತು. ಅಸಹ್ಯಕರ ದುರ್ನಾತಕ್ಕೆ ಇನ್ನೊಂದು ಕಾರಣ ಕಳ್ಳಭಟ್ಟಿಯ ಘಟಕ ಹಿಂದೆಯೇ ಇತ್ತು. ಕೆಲವೇ ದಿನಗಳಲ್ಲಿ ಇನ್ನೊಂದು ನೌಕರಿಯ ಕರೆ ಬಂತು. ಅದು ಧಾರಾವಿಯಲ್ಲಿತ್ತು. ಅದನ್ನಿವರು ನಿರಾಕರಿಸಿದ ಕಾರಣ ದನಗಳನ್ನು ಕಡಿಯುವ ಅಂಗಡಿ ಸಲೂನಿನ ಮುಂದೆ ಇತ್ತು. ಕೆಂಪು ಮಾಂಸದ ತುಂಡು ವಾಕರಿಕೆ ತರುವಂತಿತ್ತು. ಹದಿನಾಲ್ಕು ದಿನಗಳ ತರುವಾಯ ಘಾಟಕೂಪರ್ ಗಾಂಧಿ ಮಾರ್ಕೆಟ್ ನಲ್ಲಿ ಇದ್ದ ಅಲಂಕಾರ್’ ಎಂಬ ಸಲೂನಿಗೆ ಇವರನ್ನು ಶಿಫಾರಸು ಮಾಡಲಾಯಿತು. ಈ ನೌಕರಿಯ ಅನುಕೂಲವೆಂದರೆ ಸಲೂನಿನಲ್ಲಿಯೇ ನಿದ್ದೆ ಮಾಡಬಹುದಾಗಿತ್ತು. ಕೆಲವು ತಿಂಗಳ ಕಾಲ ಇವರಿಗೆ ಎರಡು ಕೆಲಸ. ಹಗಲು ಸಲೂನಿನಲ್ಲಿ, ರಾತ್ರಿ ರಸ್ತೆಯ ಬದಿಯಲ್ಲಿ ಲೆಮನೇಡ್ ಮಾರುವ ಕೆಲಸ. ಈ ಕೆಲಸ ದೊಡ್ಡಮ್ಮನ ಮಗ ಕೃಷ್ಣ ಜೊತೆಗೆ. ಸಂಪಾದಿಸಿದ ಹಣದಲ್ಲಿ ಹೆಚ್ಚುವರಿ ಉಳಿತಾಯ ಮಾಡುತ್ತಿದ್ದರು. ರಘು ಸೌದಿಯಿಂದ ಮರಳಿ ಬಂದಾಗ ಮತ್ತೆ ತನ್ನ ಸಲೂನಿಗೆ ಕರೆದುತಂದ. ರಘುವಿನಲ್ಲಿ ಇವರಿಗೆ ಗೌರವವಿತ್ತು. ಆದರೆ ಅವನ ಪತ್ನಿ ಅಸಾಧ್ಯ ಹೆಣ್ಣು. ಜೀವನದ ಪ್ರತಿಯೊಂದು ಘಟನೆ ಅವರಿಗೊಂದು ಪಾಠವಾಗಿತ್ತು. ವಿವಿಧ ಗ್ರಾಹಕರ ಸಂಪರ್ಕದಿಂದ ಹಲವು ಭಾಷೆ ಕರಗತ ಮಾಡಿಕೊಳ್ಳುವ ಅವಕಾಶವಿತ್ತು. ತಮಿಳು, ಮಲಯಾಳಂ ಕೊಂಕಣಿ ಭಾಷೆಗಳ ಶೈಲಿ ಕರಗತವಾಯ್ತು. ಮಂಗಳೂರಿನ ಬ್ಯಾರಿ ಭಾಷೆ ಕರತಲಾಮಲಕವಾಗಿತ್ತು. ಮಂಗಳೂರು ಸುತ್ತಲಿನ ಮುಸ್ಲಿಂ ಧರ್ಮದವರು ಆಡುವ ಭಾಷೆ ಅದಾಗಿತ್ತು. ಐದನೆಯ ತರಗತಿಯ ವರೆಗೆ ಓದಿದ್ದರಿಂದ ಓದಲು ಬರೆಯಲು ಕನ್ನಡ ಬರುತ್ತಿತ್ತು. ಸ್ಥಳೀಯರು ಆಡುವ ಹಿಂದಿ, ಮರಾಠಿ, ಗುಜರಾತಿ ಕಲಿತರು.ರ್ಯಾಪಿಡೆಕ್ಸ್’ ಓದಿ ಕನ್ನಡ ಶಬ್ದ ಇಂಗ್ಲೀಷಿಗೆ ಅನುವಾದಿಸಲು ಕಲಿತರು. ಮಹಾರಾಷ್ಟ್ರ ಟೈಮ್ಸ್ ಓದತೊಡಗಿದರು. ಸಲೂನಿನ ಹಿಂದೆ ಇದ್ದ ಕೋಣೆಯಲ್ಲಿ ರಘುವಿನ ಹೆಂಡತಿ ಚಂದ್ರಾವತಿ ಇವರಿಗೆ ಅಡುಗೆ ಮಾಡುತ್ತಿದ್ದಳು. ಅವಳ ನಕಾರಾತ್ಮಕ ನಿಲುವಿನಿಂದ ಮಾತಿನ ಚಕಮಕಿ ಆಗುತ್ತಿತ್ತು. ಅವರ ಒಳಜಗಳ ರಘು ಪರಿಹರಿಸುತ್ತಿದ್ದ.

ಇವರ ತಾಯಿಯ ಇಚ್ಛೆಯ ಪ್ರಕಾರ ಮಧ್ಯಪ್ರಾಚ್ಯ ದೇಶಗಳಿಗೆ ಹೋಗಬೇಕೆಂದು ಬಯಸಿದರು. ನೆರೆಯಲ್ಲಿದ್ದ ಟ್ರ್ಯಾವಲ್ ಏಜಂಟ್ ಇವರ ಗಿರಾಕಿಯಾಗಿದ್ದ. ವೀಸಾ ಕೊಡಿಸಿ ಕಂಪನಿಯೊಂದಕ್ಕೆ ಸಂದರ್ಶನದ ಅನುವು ಮಾಡಿಕೊಡಲು ರೂ.14,000 ಫೀಜು ಪಡೆದ. ಸಂದರ್ಶನದಲ್ಲಿ ಕ್ಷೌರ ಮತ್ತು ಶೇವಿಂಗ್ಸ್ ಅನುಭವ ಮತ್ತು ಇಂಗ್ಲಿಷ್ ಭಾಷೆಯ ಜ್ಞಾನದ ಬಗ್ಗೆ ಕೇಳಿದರು. ಇವರ ಬಾಸ್‍ಗೂ ಇಂಗ್ಲಿಷ್ ಓದಲು, ಬರೆಯಲು ಬರುತ್ತಿರಲಿಲ್ಲವೆಂದು ಸಂದರ್ಶಕ ಹೇಳಿದಾಗ ಇವರಿಗಾದ ಸಂತೋಷಕ್ಕೆ ಪಾರವಿರಲಿಲ್ಲ. ಇವರ ಬಾಸ್ ಬಲ್ಲ ದೋಹಾ-ಕರ್ತಾರ್ ಉಪಭಾಷೆಯ ಶೈಲಿಯ ಅರೇಬಿಕ್ ಕಲಿಯಲು ಮನಸ್ಸು ಮಾಡಿದರು. ಇವರ ಉಳಿತಾಯ ರೂ.7000 ಇತ್ತು. ಉಳಿದ ಹಣ ಸಹಾಯ ಮಾಡಲು ರಘು ಹಿಂದೇಟು ಹಾಕಿದ. ಬೇರೆ ದಾರಿ ಕಾಣದೆ ರಸ್ತೆಯ ಬದಿಯಲ್ಲಿದ್ದ ಆಭರಣ ವ್ಯಾಪಾರಿಯಲ್ಲಿ ತಮ್ಮ ಚಿನ್ನದ ಸರ ಹಾಗೂ ಎರಡು ಉಂಗುರಗಳನ್ನು ಅಡವಿಡಲು ಹೊರಟರು. ಅವನೂ ಇವರ ಗಿರಾಕಿಯಾಗಿದ್ದ. ಕೆಲಸ ಸುಲಭವಾಯ್ತು. ಖತಾರ್‍ನಲ್ಲಿ ಒಳ್ಳೆಯ ಸಂಪಾದನೆಯಾದರೆ ಮರಳಿ ಬಂದು ಸ್ವಂತದ ಅಂಗಡಿ ತೆರೆಯಬೇಕು ಎಂದುಕೊಂಡರು. ರಘುನ ಬಳಿಯಲ್ಲಿ ಹಣವಿತ್ತು. ಆದ್ರೂ ಯಾಕೆ ಕೊಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಾಗ, ಅವನು ಉತ್ತರಿಸಿದ್ದ. `ನಾನು ನಿನಗೆ ಯಾಕೆ ಹಣ ಕೊಡಲಿಲ್ಲ ಗೊತ್ತೇ? ನೀನು ನನ್ನ ಬಲಗೈ ಇದ್ದ ಹಾಗೆ. ಬಲಗೈ ಕಳೆದುಕೊಂಡರೆ ಏನಾಗಬಹುದು ಹೇಳು?’
ರಘು ಇವರನ್ನು ಕತಾರ್‍ಗೆ ಬೀಳ್ಕೊಡಲು ಏರ್‍ಪೆಪೋರ್ಟಿಗೆ ಬಂದಿದ್ದ. ಅದು 1984. ಬೀಳ್ಕೊಟ್ಟ ಸಂಕೇತವಾಗಿ ವಿಠಲ್ ಇವರಿಗೆ ನಸುಹಳದಿ ಬಣ್ಣದ ಡೈಲಿನ, ಚಿನ್ನದ ಬಣ್ಣದ ಸ್ಟ್ರ್ಯಾಪ್‍ನ ಒಂದು ವಾಚ್ ಉಡುಗೊರೆಯಾಗಿ ಕೊಟ್ಟ. ಅದು ಅನನ್ಯ ವಸ್ತುವೆಂದು ಮುದಗೊಂಡರು.

(7)

ಗಲ್ಫ್‍ನಲ್ಲಿ ಸಂಪಾದಿಸಿದ ಅನುಭವದ ಸೊತ್ತು

ಮಂಗಳೂರು ಮತ್ತು ಸುತ್ತಮುತ್ತಲಿನ ಪಟ್ಟಣ ಮತ್ತು ಹಳ್ಳಿಗಳಲ್ಲಿ ಜನರಿಗೆ ಗಲ್ಫ್‍ನಲ್ಲಿ ಉದ್ಯೋಗವೆಂದರೆ ಚಿನ್ನದ ಗಡಿಗೆ ಸಿಕ್ಕಂತೆ’ ಎಂಬದು ಗಾದೆ ಮಾತಿನಂತಿತ್ತು. ಅಮ್ಮನಿಗೆ ಸಹಜವಾಗಿ ಸಂತೋಷವಾಗಿತ್ತು. “ಕತಾರ್ ನನ್ನ ವೃತ್ತಿ ಜೀವನದಲ್ಲಿ ಒಂದು ತಿರವು ಎಂದೇ ಹೇಳಬಹುದು. ಆ ಅವಧಿ ಸುಮಾರು ನಾಲ್ಕು ವರ್ಷ, ಅಕ್ಟೋಬರ್ 1984ರಿಂದ ಅಗಸ್ಟ್ 1988ರ ತನಕ, ನನಗೆ ಆರ್ಥಿಕವಾಗಿ ಸುಭದ್ರನಾಗಲು ಸಾಧ್ಯವಾಯಿತು. ಎಲ್ಲಕ್ಕೂ ಮುಖ್ಯವಾಗಿ, ನಾನು ಓರ್ವ ಬಾರ್ಬರನಾಗಿ ನನ್ನ ಕೌಶಲ್ಯಗಳಲ್ಲಿ ಅಪಾರ ಅನುಭವಗಳನ್ನು ಪಡೆದೆ. ಒಂದು ಫೋನ್ ಕರೆ ಎಂದರೆ ತುಟ್ಟಿ ಎನ್ನುವ ದೃಷ್ಟಿಯಿಂದ ನನ್ನಮ್ಮನಿಗೆ ಪತ್ರಬರೆಯುವ ಕ್ರಮವನ್ನೇ ಅನುಸರಿಸಿದೆ. . . ತಿಂಗಳ ಕೊನೆಯಲ್ಲಿ, ನನ್ನ ಸಂಪಾದನೆಯನ್ನು ಊರಿನ ಕ್ಯಾನರಾ ಬ್ಯಾಂಕಿನ ಅನಿವಾಸಿ ಭಾರತೀಯ (ಎನ್‍ಆರ್‍ಐ) ಖಾತೆಯಲ್ಲಿ ಜಮಾ ಮಾಡುತ್ತಿದ್ದೆ, ಅಮ್ಮ ಆ ಖಾತೆ ನಿರ್ವಹಿಸುತ್ತಿದ್ದಳು.’’ ದೋಹಾದ ಜೀವನದ ಬಗ್ಗೆ ಬರೆಯುತ್ತಾರೆ. ಅಲ್ಲಿ ಪ್ರಾರಂಭಿಕ ದಿನಗಳು ಹೀನಾಯವಾಗಿದ್ದವು. ಅಲ್ಲಿ ಒಂಭತ್ತು ಜನ ನೌಕರರು ಇಕ್ಕಟ್ಟಾದ ವಸತಿಯಲ್ಲಿ ಇರಬೇಕಾಗಿತ್ತು. ಹಿಂದುಗಡೆ ಸ್ನಾನದ ಗೃಹ ಮತ್ತು ಶೌಚಾಲಯ ಇದ್ದವು. ಸರದಿಯ ಪ್ರಕಾರ ಅಲ್ಲಿ ಹೋಗಬೇಕಾಗಿತ್ತು. ಇವರನ್ನು ಗುತ್ತಿಗೆ ಪಡೆದ ಕಂಪೆನಿ ಇವರಿಗೆ ಮೊದಲು ಸ್ಪೋರ್ಟ್ಸ್ ಕ್ಲಬ್‍ನಲ್ಲಿ ಕೆಲಸ ಕೊಟ್ಟರು. ನಂತರ ಕಟ್ಟಡ ನಿರ್ಮಾಣದ ಜಾಗೆಗೆ ಬದಲಾಯಿಸಿದರು. ರಬ್ಬರ್ ಬೂಟ್ಸ್ ಧರಿಸಿಕೊಂಡು, ಕೈಗಳಿಗೆ ಗ್ಲೌಜ ತೊಟ್ಟು ಪೇಂಟಿಂಗ್ ಮಾಡುವುದು, ಜೊತೆಗೆ ಕಟ್ಟಡದ ನಿರ್ಮಾಣದಲ್ಲಿ ಇಟ್ಟಿಗೆ ಸಾಗಿಸುವ ಕೆಲಸ ಮಾಡಬೇಕಾಗುತ್ತಿತ್ತು. ಸುಮಾರು ಎಂಟು ತಿಂಗಳ ಕಾಲ ಹೆಲ್ಪರ್-ಸಹಾಯಕನಾಗಿ ಕೆಲಸ ಮಾಡಿದರು. ಇಟ್ಟಿಗೆ ಭಾರವಾಗಿದ್ದು, ಇವರು ಎಳೆಯರಾಗಿದ್ದರಿಂದ ಹೊರುವುದು ಕಷ್ಟವಾಗುತ್ತಿತ್ತು. ಬೇರೆ ಸುಲಭದ ಕೆಲಸ ಕೊಡಲು ಮೇಲ್ವಿಚಾರಕರಿಗೆ ವಿನಂತಿಸಲು ಹಿರಿಯ ಕೆಲಸಗಾರರು ಸಲಹೆ ನೀಡಿದರು. ಅದೊಂದು ದೂರು ನೀಡಿದ ಹಾಗಾಗಬಹುದೆಂಬ ಅಳಕು ಇವರಲ್ಲಿತ್ತು. ಅವರ ಆದಾಯ ಉತ್ತಮವಾಗಿತ್ತು (ರೂ.3000), ಮೇಲ್ವಿಚಾರಕರು ತಪ್ಪು ತಿಳಿದು ಭಾರತಕ್ಕೆ ವಾಪಸ್ ಕಳಿಸಿಯಾರೆಂಬ ಭಯವೂ ಇತ್ತು. ಹಾಗಾದರೆ ಇವರ ಗಲ್ಫ್ ಕನಸು ಭಂಗಗೊಂಡು ತಾಯಿ ಕಂಗಾಲಗುತ್ತಾರೆ ಎಂಬ ಆತಂಕವೂ ಇತ್ತು. ಮುಂದಿನ ತಿಂಗಳು ಒಂದು ಕತ್ತರಿ, ಬಾಚಣಿಕೆ, ಶೇವಿಂಗ್ ಕತ್ತಿಯನ್ನು ಕೊಂಡುತಂದರು. ವಾರಾಂತ್ಯದಲ್ಲಿ ಕಟ್ಟಡದ ಕೆಲಸಗಾರರಿಗೆ ಕ್ಷೌರದ ಮತ್ತು ಶೇವಿಂಗ್‍ನ ಸೇವೆ ಸಲ್ಲಿಸುವ ಉದ್ದೇಶ ಅವರದಾಗಿತ್ತು. ಪ್ರತಿ ಶುಕ್ರವಾರ ರಜಾದಿನ. ಗಿರಾಕಿಗಳಿಗೆ ಕೂತುಕೊಳ್ಳಲು ಒಂದು ಪ್ಲ್ಯಾಸ್ಟಿಕ್ ಸ್ಟೂಲು ತಂದರು. ರೂಮು ಕಾಂಪ್ಲೆಕ್ಸ್ ಹೊಲಸಾಗದಂತೆ ಪ್ಲ್ಯಾಸ್ಟಿಕ್ ಚೀಲದಲ್ಲಿ ಕೂದಲು ತುಂಬಿ ತಮ್ಮ ರೂಮಿಗೆ ಒಯ್ದು, ನಂತರ ಕಚಡಾ ಡಬ್ಬಿಗೆ ವರ್ಗಾಯಿಸುತ್ತಿದ್ದರು. ಸ್ಪೋರ್ಟ್ಸ್ ಕ್ಲಬ್ ಆರಂಭವಾದೊಡನೆ ವಾಪಸ್ ಕರೆಸಿ ಇವರಿಗೆ ಟೆಲಿಫೋನ ಅಪರೇಟರ್ ಕೆಲಸ ಕೊಡಲಾಯ್ತು. ಅರೇಬಿಕ್ ಭಾಷೆಯ ಸ್ವಲ್ಪ ಜ್ಞಾನದಿಂದಾಗಿ ಸಂಬಂಧಪಟ್ಟ ಸದಸ್ಯರಿಗೆ ಫೋನ್ ಕಾಲ್ ವರ್ಗಾಯಿಸಲು ಬರುತ್ತಿತ್ತು. ಮುಂಬೈಯಲ್ಲಿದ್ದಾಗ ರ್ಯಾಪಿಡೆಕ್ಸ್ ಓದಿ ಸ್ವಲ್ಪ್ ಇಂಗ್ಲಿಷ ಮಾತಾಡಲು ಕಲಿತಿದ್ದರು. ಆ ಕ್ಲಬ್‍ನಲ್ಲಿ ಒಳಾಂಗಣ ಹೊರಾಂಗಣ ಕ್ರೀಡೆ ನಡೆಯುತ್ತಿತ್ತು. ವಾಲಿಬಾಲ್, ಫುಟ್‍ಬಾಲ್, ಹಾಕಿ, ಟೇಬಲ್‍ಟೇನಿಸ್, ಲಾನ್‍ಟೇನಿಸ್ ಮತ್ತು ಸ್ಕ್ವಾಶ್ ಆಡಲು ಕ್ರೀಡಾಪಟುಗಳು ಬರುತ್ತಿದ್ದರು. ಆಟ ನೋಡುವ, ಅವರನ್ನು ವೈಯಕ್ತಿಕವಾಗಿ ಭೇಟಿಮಾಡುವ ಅವಕಾಶ ದೊರೆಯುತ್ತಿತ್ತು. ಕೆಲಸದ ಸಮಯದ ನಂತರ ಇವರಿಗೆ ಆಡಲು ಬಿಡುತ್ತಿದ್ದರು. ಎಲ್ಲ ಆಟಗಳಲ್ಲಿ ಇವರಿಗೆ ಆಸಕ್ತಿ ಇತ್ತು, ಆದರೂ ಫುಟ್‍ಬಾಲ್ ಇವರ ಅಚ್ಚುಮೆಚ್ಚಿನ ಆಟವಾಗಿತ್ತು. ಕ್ಲಬ್‍ನ ಮ್ಯಾನೇಜರ್, ಆತಿಫ್ ರಿಜ್ ಎಂಬವ, ಸಂಭಾವಿತ ಮನುಷ್ಯನಾಗಿದ್ದ. ವಿಶಾಲವಾದ ಕ್ಲಬ್ ಅತಿಥಿ ಗೃಹದಲ್ಲಿ, ದೊಡ್ಡ ಕನ್ನಡಿಗಳನ್ನು ಲಗತ್ತಿಸಿ, ಸುಖಾಸನಗಳನ್ನು ಹೊಂದಿಸಿ, ಇವರಿಗಾಗಿ ತಾತ್ಕಾಲಿ ಸಲೂನ್ ನಿರ್ಮಿಸಿಕೊಟ್ಟನು. ಅವನು ಇವರನ್ನು ಕ್ಷೌರದ ಇಂಜಿನಿಯರ್’ ಎಂದು ಸಂಬೋಧಿಸುತ್ತಿದ್ದನು, ಆಗಂತುಕರಿಗೆ ಕ್ಷೌರ ಮಾಡಿಸಿಕೊಳ್ಳಲು ಪ್ರೇರೇಪಿಸುತ್ತಿದ್ದನು. ಅವನು ತಮ್ಮ ಬಂಗಲೆಗೂ ಕರೆದೊಯ್ದು ಕುಟುಂಬದ ಸದಸ್ಯರ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಟ್ಟನು. ಅವನ ಬಗ್ಗೆ ಬರೆಯುತ್ತಾರೆ: ಆತನಿಗೆ ನನ್ನಲ್ಲಿನ ಯಾವ ಗುಣ ಹೆಚ್ಚು ಖುಶಿಕೊಟ್ಟದ್ದು ಅಂದರೆ, ನಾನು ಯಾವುದೇ ಕೆಲಸವನ್ನು ಕೈಕೊಂಡರೂ, ಅದನ್ನು ಸಮರ್ಪಣಾ ಭಾವದಿಂದ, ಅದು ಮುಗಿಯುವ ವರೆಗೆ ನಿರ್ವಹಿಸುತ್ತೇನೆ ಎಂಬುದು. ಫೋನ್ ಆಪರೇಶನ್, ಬಾರ್ಬರ್ ಕೆಲಸಗಳಿಗೆ ಹೊರತಾಗಿ, ಪೂರ್ತಿ ಕ್ಲಬ್‍ನ ಪರಿಸರವನ್ನು ಶುಚಿ ಮಾಡುವ ಕೆಲಸವನ್ನು ನನಗೆ ಒಪ್ಪಿಸಿದ. ಆತನ ಎಲ್ಲಾ ಆದೇಶಗಳನ್ನು ನಾನು ಮನಸಾರೆ ನಿರ್ವಹಿಸಿದೆ.’’ ಸಮಯ ಕಳೆದಹಾಗೆ ಇವರ ಸಲೂನಿಗೆ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು. ಎರಡು ಸ್ಥಳಗಳಲ್ಲಿ ಇವರು ಕೆಸಮಾಡುತ್ತಿದ್ದರು. ಕಟ್ಟಡ ನಿರ್ಮಾಣದ ಜಾಗೆ, ಪ್ರತಿ ಶುಕ್ರವಾರ ಸಮುದ್ರ ತೀರ. ಕಟ್ಟಡದಲ್ಲಿ ಇವರ ಮಿತ್ರ ಅಚ್ಯುತ ಆಚಾರಿ ಮರದ ಕೆಲಸ ಮಾಡುತ್ತಿದ್ದ. ಅವನ ಕೆಲಸಗಾರರೆಲ್ಲ ಕ್ಷೌರಕ್ಕಾಗಿ ಕ್ಯೂನಲ್ಲಿ ನಿಲ್ಲುತ್ತಿದ್ದರು. ನಂತರ ಕ್ರೀಡಾಪಟುಗಳು, ಕೋಚ್ ಗಳು ಇವರ ಗಿರಾಕಿಗಳಾದರು. ಅಲ್ಲಿಯ ಜನರಲ್ಲದೆ (ಸ್ಥಳೀಯರಲ್ಲದೆ) ವಿವಿಧ ದೇಶಗಳಿಗೆ ಸಂಬಂಧಿಸಿದವರಾಗಿದ್ದರು. (ಯುರೋಪಿಯನ್, ಬ್ರ್ರೆಜಿಲಿಯನ್, ಟ್ಯುನೀಶಿಯನ್, ಟರ್ಕಿಶ್, ಇರಾನಿಯನ್, ಈಜಿಪ್ಶಿಯನ್, ಫಿಲಿಪೈನ್, ಕೋರಿಯನ್, ಪಾಕಿಸ್ತಾನಿ, ಬಂಗ್ಲಾದೇಶೀ, ಶ್ರೀಲಂಕನ್ ಮತ್ತು ಇಂಡಿಯನ್). ದೊಡ್ಡ, ಸಣ್ಣ, ನೇರ, ದಪ್ಪಾದ, ಗುಂಗುರು, ಬಿರುಸಾದ, ನಯವಾದ, ಸಿಲ್ಕಿನಂತಿರುವ, ಸ್ಪೈಕಿ, ವೇವೀ, ರಿಂಗ್ ಹಾಗೂ ಕೆಲವೊಮ್ಮೆ ಇವೆಲ್ಲವುಗಳ ಮಿಶ್ರಣದ ವೈವಿಧ್ಯಮಯ ಕೂದಲುಗಳು ಕತ್ತರಿಗೂ ವಿನ್ಯಾಸಕ್ಕೂ ಬರುತ್ತಿದ್ದವು. ವಿವಿಧ ಬಣ್ಣಗಳ ಸಹಜ ಕೂದಲುಗಳನ್ನೂ- ಕಪ್ಪು, ಕೆಂಚು, ಬೂದು ಮತ್ತು ಕೆಂಗೂದಲುಗಳನ್ನು ನಿರ್ವಹಿಸುವ ಅನುಭವ, ಅದೂ ಅಷ್ಟೊಂದು ವೈವಿಧ್ಯಮಯ ರಚನೆಯ ಕೂದಲುಗಳು ಒಂದೇ ಜಾಗದಲ್ಲಿ ಸಿಗುವುದು ನನಗೆ ಶ್ರೀಮಂತ ಹಾಗೂ ಅಮೂಲ್ಯವಾದ ಅನುಭವವನ್ನು ನೀಡಿತು.’’ ಎನ್ನುತ್ತಾರೆ. “ಕ್ಲಬ್‍ಗೆ ಬರುತ್ತಿದ್ದ ಕ್ರೀಡಾಪಟುಗಳು ಕ್ಷೌರ ಮುಂತಾದುದ್ದಕ್ಕೆ ಮುಂಚಿತವಾಗಿ ತಮ್ಮ ಸಮಯವನ್ನು ನಿಗದಿಪಡಿಸಿಕೊಳ್ಳುತ್ತಿದ್ದರು. ಮತ್ತು ತಾವು ತಂಗಿರುವ ಫೈವ್ ಸ್ಟಾರ್ ಹೋಟೆಲ್‍ನ ಸಲೂನ್‍ಗಳಿಗಿಂತ ತಮ್ಮ ರೂಮುಗಳಲ್ಲೆ ಅದನ್ನು ಮಾಡಿಸಿಕೊಳ್ಳಲು ಇಷ್ಟಪಡುತ್ತಿದ್ದರು. ನನ್ನ ಕೆಲಸವನ್ನು ಕಂಡು ಇಷ್ಟಪಟ್ಟರೆ, ಅವರು ಟಿ-sಶರ್ಟ, ವಾಚ್, ಸನ್‍ಗ್ಲಾಸ್ ಮತ್ತು ಟ್ರ್ಯಾಕ್‍ಪ್ಯಾಂಟ್‍ಗಳನ್ನು ಉಡುಗೊರೆಯಗಿ ನೀಡುತ್ತಿದ್ದರು. ನನ್ನ ಕಪಾಟು ಇಂತಹ ವಸ್ತುಗಳಿಂದ ತುಂಬಿ ಅದೊಂದು ಅಂಗಡಿಯ ಥರ ಬಟ್ಟೆ ಮತ್ತಿತರ ಅಂತಾರಾಷ್ಟ್ರೀಯ ಬ್ರ್ಯಾಂಡ್‍ನ ಸಾಮಗ್ರಿಗಳ ರಾಶಿಯಾಗಿರುತ್ತಿತ್ತು.’’
ದೋಹಾದಲ್ಲಿಯ ಆಹಾರದ ಬಗ್ಗೆ ಬರೆಯುತ್ತ ತಾಯಿಯನ್ನು ನೆನೆಯುತ್ತಾರೆ. ಅವಳಿಗೆ ಈ ವೈವಿಧ್ಯಮಯ ಶ್ರೀಮಂತ ಅವಕಾಶ ತಪ್ಪಿತಲ್ಲ ಎದು ಮರುಗುತ್ತಾರೆ. ಹೆಸರಾಂತ ಖಲೀಫಾ ಕುಟುಂಬದ ಅರಮನೆಗೆ ಭೇಟಿ ನೀಡಿದ ಅವಿಸ್ಮರಣೀಯ ಅನುಭವದ ಬಗ್ಗೆ ಬರೆಯುತ್ತಾರೆ. ಅವರ ವಿಲಾಸೀ ಜೀವನ ಕಂಡಾಗ ತಮ್ಮ ಕಣ್ಣುಗಳನ್ನು ತಾವೇ ನಂಬದಾದರು. ಎತ್ತರದ ಛಾವಣಿ, ವೈಭವೋಪೇತ ಷ್ಯಾಂಡಿಲಿಯರ್, ಅಲಂಕೃತ ದೀಪಗಳು, ಶ್ರೀಮಂತ ಒರಗುದಿಂಬುಗಳು, ದುಬಾರಿಯ ಪರದೆಗಳು, ಮತ್ತು ಮೃದುವಾದ ಕಾಲುಹಾಸುಗಳು. ಇವರು ಕಾಲಿಟ್ಟಾಗ ನಾಲ್ಕು ಇಂಚಿನಷ್ಟು ಕೆಳಗೆ ಇಳಿಯುತ್ತಿತ್ತು. ಅದೊಂದು ಭ್ರಮಾಲೋಕವಾಗಿತ್ತು.

(8)

ವೃತ್ತಿಪರನಾಗಿ ಕಲಿಕೆ

ಮುಂಬಯಿಯ ಬ್ರಿಟಿಶ್ ಹೈಕಮೀಶನರ್ ಕಚೇರಿಗೆ ವೀಸಾ ಪಡೆಯಲು ಹೋಗುತ್ತಾರೆ. ಇವರಿಗೆ ಸರಿಯಾಗಿ ಇಂಗ್ಲಿಷಿನಲ್ಲಿ ಉತ್ತರಿಸಲು ಬರುತ್ತಿರಲಿಲ್ಲ. ಅವರು ಕೇಳಿದ್ದು ಅವರಿಗೆ ಅರ್ಥವಾಗಲಿಲ್ಲ. ಇವರು ಸಿದ್ಧ ಪಡಿಸಿದ ಉತ್ತರ ಕೊಡುತ್ತಿದ್ದರು, ಅದು ಅವರಿಗೆ ತಿಳಿಯುತ್ತಿರಲಿಲ್ಲ. 1998ರಲ್ಲಿ ಮುಂಬಯಿಯ ವರ್ಲ್ಡ ಟ್ರೇಡ್ ಸೆಂಟರ್‍ನಲ್ಲಿ ಜರುಗಿದ ಸಲೂನ್ ಇಂಟರ್ ನ್ಯಾಶನಲ್ ಮತ್ತು ವರ್ಲ್ಡ್ ಪೀಸ್ ಅವಾರ್ಡ್‍ನವರು ಆಯೋಜಿಸಿದ, ವೈಲ್ಡ್ ಅಂಡ್ ವ್ಯಾಕಿ ಹೇರ್‍ಶೋ’ ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನ ದೊರೆತಿತ್ತು. ಒಬ್ಬ ಮಾಡೆಲ್‍ನ ತಲೆಯ ಹಿಂದುಗಡೆ ಶಾಂತಿಯ ಸಂಕೇತವನ್ನು ನಿರ್ಮಿಸಿ ಅದಕ್ಕೆ ಬಣ್ಣಕೊಟ್ಟಿದ್ದರು. ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಚೇರ್‍ಮನ್ ಕ್ರಿಸ್ಟೊಫರ್ ಮಾನ್ನ್-ಫೆಲೊಶಿಪ್ ಆಫ್ ಬ್ರಿಟಿಷ್ ಹೇರ್ ಕಟ್ಟಿಂಗ್ ಅಂಡ್ ಕಮೀಷನರ್-ಸಲೂನ್ ಇಂಟರ್ ನ್ಯಾಶನಲ್, ನಿಜಕ್ಕೂ ಇವರ ಕೃತಿಯನ್ನು ಮೆಚ್ಚಿದ್ದರು. ಲಂಡನ್‍ನ ವಿದಾಲ್ ಸಸ್ಸೂನ್ ಅಕಾಡೆಮಿಯಲ್ಲಿ ವಿಸ್ತೃತ ಶಿಕ್ಷಣ ತರಬೇತಿ ಪಡೆಯಲು ಸೂಚಿಸಿದ್ದರು. (ವಿವರಗಳಿಗೆ ತಮ್ಮನ್ನು ಸಂಪರ್ಕಿಸಲು ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದರು.) ಇವರು ವೀಸಾ ಅಧಿಕಾರಿಯ ಮುಂದೆ ಇಂಗ್ಲಡಿನಲ್ಲಿ ಶೈಕ್ಷಣಿಕ ತರಬೇತಿಯ ಪ್ರವೇಶಪತ್ರವನ್ನು, ತಮಗೆ ದೊರೆತ ಬಹುಮಾನ ಪ್ರಶಸ್ತಿಯ ವಿವರಗಳನ್ನು ಒಳಗೊಂಡ ಪೇಪರ ಕಟ್ಟಿಂಗ್ ತೋರಿಸಿದರು. ನಂತರ ಇವರ ಸೃಜನಾತ್ಮಕ ರಚನೆಗಳ ಫೋಟೊಗಳನ್ನು ಅಧಿಕಾರಿಗೆ ತೋರಿಸಿದರು.ಉದಾಹರಣೆಗೆ ಒಬ್ಬ ಗಿರಾಕಿಯ ಕೂದಲಿನಲ್ಲಿ,ಬಜ್ ಎಫೆಕ್ಟ್’ನಲ್ಲಿ ಫುಟ್‍ಬಾಲ್ ಮೈದಾನ ನಿರ್ಮಿಸಿ ಅಲ್ಲಿ ಆಟಗಾರರನ್ನು ಸೃಷ್ಟಿಸಿದ್ದರು. ಇನ್ನೊಬ್ಬರ ತಲೆಯಮೇಲೆ ಬಾಸ್ಕೆಟ್‍ಬಾಲ್ ಕೋರ್ಟ್ ನಿರ್ಮಿಸಿದ್ದರು. ಇನ್ನೋರ್ವ ವ್ಯಕ್ತಿಯ ತಲೆಯ ಹಿಂಭಾಗದಲ್ಲಿ, ಕುಪ್ರಸಿದ್ಧ ಅರಣ್ಯಚೋರ ವೀರಪ್ಪನ್‍ನ ಹ್ಯಾಂಡಲ್ ಬಾರ್ ಮೀಸೆಯನ್ನು ತಯಾರಿಸಿದ್ದರು. ತಮಗೆ ಪ್ರಶಸ್ತಿಯನ್ನು ತಂದುಕೊಟ್ಟ ಶಾಂತಿಯ ಚಿಹ್ನೆಯ ಫೊಟೊ ತೋರಿಸಿದರು. ಅಧಿಕಾರಿಗಳು ಮಂದಸ್ಮಿತರಾಗಿ ನಕ್ಕರು. ವೀಸಾ ನೀಡಿದರು. ವರ್ಲ್ಡ್ ಪೀಸ್ ಅವಾರ್ಡ್ ಇವರ ಭಾಗ್ಯದ ಬಾಗಿಲನ್ನು ತೆರೆಯಿತು.
ಅದೇ ವರ್ಷ ಶಿವರಾಮ ಭಂಡಾರಿ ಅವರಿಗೆ ಒಂದು ವಾರದ ಅವಧಿಯ ಇನ್ನೊಂದು ಶೈಕ್ಷಣಿಕ ತರಬೇತಿಯನ್ನು ಲಂಡನ್ ಮಾರ್ಬಲ್ ಆರ್ಚನಲ್ಲಿರುವ ಪ್ರೀಮಿಯರ್ ಅಕಾಡೆಮಿಯಲ್ಲಿ ದೊರೆಯಿತು. ಉತ್ಸುಕತೆಯ ಜೊತೆಗೆ ಉದ್ವಿಗ್ನತೆಯೂ ಇತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಕೇಶ ವಿನ್ಯಾಸ ಹಾಗೂ ನೂತನ ಶೈಲಿ ಕಲಿಯುವ ಅವಕಾಶ ದೊರೆತಿತ್ತು. ಅಕಾಡೆಮಿಯಲ್ಲಿ ಇತ್ತೀಚಿನ ಫ್ಯಾಶನ್ ಬ್ರೋಷರ್‍ಗಳನ್ನು ಮತ್ತು ಮ್ಯಾಗಜಿನ್‍ಗಳನ್ನು ತಿರುವಿಹಾಕಲು ಅವಕಾಶ ದೊರೆಯಿತು. ಇವರೆಂದೂ ನೋಡಿರದ, ವೈವಿಧ್ಯಮಯ ವಿನ್ಯಾಸಗಳ ವ್ಯಾಪ್ತಿಯ ಹರಹಿನಲ್ಲಿ ಒಬ್ಬೊಬ್ಬ ರೂಪದರ್ಶಿ ರ್ಯಾಂಪ್‍ನ ಮೇಲೆ ನಡೆದು ಬಂದಾಗ ಇವರು ಮೂಕವಿಸ್ಮಿತರಾಗುತ್ತಿದ್ದರು.
ವಾರದಾದ್ಯಂತ ನಡೆದ ತರಬೇತಿಯಲ್ಲಿ ಇವರು ಹಲವು ತಂತ್ರಗಳನ್ನು ಮತ್ತು ಶೈಲಿಗಳಲ್ಲಿಯ ಸೂಕ್ಷ್ಮ ಪ್ರಕಾರಗಳನ್ನು ಕಲಿತರು. ಹೆಚ್ಚುಶಕ್ತಿಯ ಹೇರ್ ಡ್ರೈಯರ್, ವಿವಿಧ ಬಗೆಯ ಬಾಚಣಿಕೆ, ಕತ್ತರಿ, ಬ್ರಶ್, ಹೈಲೈಟ್‍ಗಳು ಮತ್ತು ಬಣ್ಣ ನೀಡುವ ಕಲೆಗಾರಿಕೆಯನ್ನು ಕಲಿತರು. ಕೂದಲಿಗೆ ಶಾಂಪೂ ಮತ್ತು ಕಂಡಿಶನರ್ ಹಾಕಿ ಹಿಂದಲೆ ವಾಶ್‍ಮಾಡುವುದನ್ನು ಕಲಿತರು. ಅಕೆಡೆಮಿಅಯ ಸಮವಸ್ತ್ರ(ಒಂದು ಕಪ್ಪು ಓವರ್ ಕೋಟ್) ಇವರಿಗೆ ಒಂದು ಬಗೆಯ ಹೆಮ್ಮೆ ಹಾಗೂ ಗರವ ನೀಡುವಂತಿತ್ತು. ಇವರ ಬಹು ದೊಡ್ಡ ನ್ಯೂನತೆ ಎಂದರೆ ಇವರ ಇಂಗ್ಲಿಷ್. ಬೋರ್ಡಿನ ಮೇಲೆ ಬರೆದದ್ದನ್ನು ತಿಳಿಯುವುದು ಕಷ್ಟವಾಗುತ್ತಿತ್ತು. ಆದರೂ ಸಾಹಸ ಮಾಡುತ್ತಿದ್ದರು, ಪದೇಪದೇ ಪ್ರಶ್ನೆ ಕೇಳುತ್ತಿದ್ದರು, ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಶಿಕ್ಷಕರೂ ಇವರಿಗಾಗಿ ನಿಧನವಾಗಿ ವಿವರಿಸುತ್ತಿದ್ದರು.
ಮರಳಿ ಬರುವಾಗ ದುಬೈಯಲ್ಲಿ ಎರಡು ದಿನ ಇದ್ದು ಕೆಲವು ಸಲಕರಣೆಗಳನ್ನು ಕೊಂಡರು. ಒಂದು ಅಧಿಕೃತ ಅಕಾಡೆಮಿಯಿಂದ ಒಂದು ಅರ್ಹತಾಪತ್ರ ಪಡೆದ ಹೆಮ್ಮೆ ಇವರದಾಗಿತ್ತು. ತಮ್ಮ ಶಿಕ್ಷಣದ ಬಗ್ಗೆ ಕೊನೆಗೆ ಹೇಳುತ್ತಾರೆ: `ನಾನು ಪ್ರಾಮಾಣಿಕವಾಗಿ ಹೇಳುವುದಾದರೆ, ಕೂದಲ ಸಂರಕ್ಷಣೆ, ಕೂದಲ ಕ್ಷೌರ, ಶೈಲಿ ಹಾಗೂ ಫ್ಯಾಷನ್‍ಗಳಲ್ಲಿ ನನ್ನ ಮಾತೃ ಸಂಸ್ಥೆ,ವಿದಾಲ್ ಸಸ್ಸೂನ್ ಅಕಾಡೆಮಿ’ ಕಲಿಸಿದ ವೈಖರಿಯನ್ನೇ ಅನುಸರಿಸುತ್ತ ಬಂದಿದ್ದೇನೆ.’’ಎಂದು.

(9)

ಶ್ರೇಯೋಭಿಲಾಷಿಗಳು- ಭಾವನಾತ್ಮಕ ಸಂಬಂಧಗಳ ಕೊಂಡಿ

ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ ಠಾಕ್ರೆ ಅವರನ್ನು ಒಂದು ಫಿಲ್ಮ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಂಡರು. ಅವರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಅವರ ಹಿಂದೆ ಸದಾ ಕ್ರಿಯಾಶೀಲರಾಗಿದ್ದ ಬಾಡಿಗಾರ್ಡರ ಪಡೆ ಇತ್ತು. ಅವರದು ಮಂದಹಾಸ ಆದರೂ ಸುತ್ತಲೂ ಭಯದ ವಾತಾವರಣ. ಶಿವರಾಮ ಅವರಿಗೆ ಸುಪ್ರಸಿದ್ಧ ವ್ಯಕ್ತಿಗಳ ಕೇಶ ವಿನ್ಯಾಸ ಮಾಡುವುದರಲ್ಲಿ ವಿಶೇಷ ಆಸಕ್ತಿ. ಯಾರನ್ನೇ ಕಂಡರು ಅವರ ಕೂದಲಿನ ಕಡೆಗೆ ಇವರ ದೃಷ್ಟಿ. ಅವರನ್ನು ಹೇಗೆ ಹೆಚ್ಚು ಸುಂದರ ಮಾಡಬಹುದು ಎಂಬ ವಿಚಾರದಲ್ಲಿ ಇವರು ಮಗ್ನ. ಇವರು ಬಾಳಾ ಸಹೇಬರನ್ನು ಕಂಡಾಗ ಅವರ ಗಡ್ಡ ಮತ್ತು ಕೂದಲನ್ನು ಹೇಗೆ ತಮ್ಮ ಶೈಲಿಗೆ ಅಳವಡಿಸಬಹುದು ಎಂಬ ಯೋಚನೆಯಲ್ಲಿದ್ದರು.

ಹಲವು ವರ್ಷಗಳ ನಂತರ, ಒಂದು ಪ್ರಶಸ್ತ ದಿನ, ಅವರಿಗೆ ಬಾಳಸಾಹೇಬರ ಕಡೆಯಿಂದ ಕರೆ ಬಂತು. ಅವರ ಕ್ಷೌರ ಮಾಡಬೇಕು, ಮಾಮೂಲಿ ಕ್ಷೌರಿಕ ರಜೆಯಮೇಲೆ ಹೋಗಿದ್ದಾನೆ’ಎಂಬ ಸಂದೇಶ. ಇವರಿಗೆ ತಮ್ಮ ಕಿವಿಗಳನ್ನು ನಂಬಲಾಗಲಿಲ್ಲ. ಬಾಳಾಸಾಹೇಬರ ಗಡ್ಡವನ್ನು ಮಾಡಲು ಇವರಿಗೆ ಕರೆ ಬಂದಿತ್ತು. ಪ್ರಥಮ ಭೇಟಿಯಲ್ಲಿ ಅವರು ಬಹಳ ಪ್ರಶ್ನೆ ಕೇಳಿದರು.ನಿನ್ನ ಹೆಸರೇನು? ಎಲ್ಲಿಂದ ಬರುತ್ತೀ? ಮುಂಬೈಯಲ್ಲಿ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತೀ? ಮರಾಠಿ ಬರುತ್ತದೆಯೇ? ಅರ್ಥಮಾಡಿಕೊಳ್ಳಲು ಮಾತ್ರವೋ ಅಥವಾ ಮಾತಾಡಲೂ ಬರುತ್ತದೆಯೇ?’ ಶಿವರಾಮ ಭಾಂಡುಪ್‍ನಲ್ಲಿ ಕೆಲಸಮಾಡುವಾಗ ಮರಾಠಿ ಕಲಿತಿದ್ದರು. ಅವರ ಸಂಭಾಷಣೆ ಮರಾಠಿಯಲ್ಲಿಯೇ ನಡೆಯಿತು. ಬಾಳಾಸಾಹೇಬರದು ವಾಚಾಳಿ ಸ್ವಭಾವ. ಇವರು ತಲೆ ಅಲ್ಲಾಡಿಸುತ್ತ ಕೇಳುತ್ತಿದ್ದರು. ಗಡ್ಡ ಮಾಡಿಸಿಕೊಳ್ಳುವಾಗಲೂ ಮಾತು. ನಡುವೆ ಪ್ರಶ್ನೆ. ಮರಾಠಿಲ್ಲಿ ಉತ್ತರ ನಿರೀಕ್ಷಿಸುತ್ತಿದ್ದರು. ಕೆಲಸ ಮುಗಿದಾಗ ಕನ್ನಡಿಯಲ್ಲಿ ಮುಖ ನೋಡಿಕೊಂಡು, ಛಾನ್’ ಎಂದರು. ಇವರು ಭರವಸೆಯಿಂದ ಕತ್ತರಿ ಹಿಡಿಯುವುದನ್ನು ಮೆಚ್ಚಿದರು. (ಅವರ ಮೊದಲಿನ ಬಾರ್ಬರ್ ತಾನೊಬ್ಬ ಪುರಸ್ಕೃತ ಹೇರ್ ಡ್ರೆಸರ್ ಎಂದು ಹೇಳಿಕೊಳ್ಳೂತ್ತಿದ್ದ. ಅವನ ಕೈ ನಡುಗುತ್ತಿದ್ದವು ಎಂದು ಹೇಳಿದರು) “ ಅವರ ಗಡ್ಡಕ್ಕೆ ನಾನು ಯಾವಾಗಲೂ ಒಂದು ಅಂಡಾಕರದ ವಿನ್ಯಾಸ ನೀಡುತ್ತಿದ್ದೆ. ಅದು ಅವರ ವ್ಯಕ್ತಿತ್ವಕ್ಕೆ ಸರಿಹೊಂದುತ್ತಿತ್ತು. ಅವರ ತಲೆಗೂದಲಿಗೆ ಸಂಬಂಧಿಸಿದಂತೆ, ಅದಕ್ಕೆ ಆಗಿಂದಾಗ್ಯೆ ತುಸು ಕತ್ತರಿಯ ಪ್ರಯೋಗ ಬೇಕಾಗುತ್ತಿತ್ತು.’’ ಎನ್ನುತ್ತಾರೆ. ಅವರು ಮಾತಾಡುವಾಗ ಶಿವಾ’ ಎನ್ನುತ್ತ , ಮಧ್ಯೆ ಮಧ್ಯೆ ಶಿವಾ’ ಎನ್ನುತ್ತ, ಕೊನೆಗೆ ಶಿವಾ’ ಎಂದೇ ಮಾತು ಮುಗಿಸುತ್ತಿದ್ದರು. ಊರು ಬಿಡುವ ಪ್ರಸಂಗ ಬಂದರೆ ತಮ್ಮ ಕಾರ್ಯದರ್ಶಿಗೆ ಫೋನ್ ಮಾಡಿ ತಿಳಿಸಬೇಕೆಂದಿದ್ದರು. ಇವರು ಮುಂಬೈಯಿಂದ ಹೊರಗೆ ಪಯಣಿಸುವ ಮೊದಲು ಮಾತೋಶ್ರೀ’ಗೆ (ಬಾಳಾಸಾಹೇಬರ ಮನೆಗೆ) ಫೋನ್ ಮಾಡುತ್ತಿದ್ದರು. ಸೇವಾ ಸಮಯವನ್ನು ಖಚಿತ ಪಡಿಸುತ್ತಿದ್ದರು. ಅವರು ಜೀವಿಸಿದಷ್ಟು ಕಾಲ ಈ ವಿಧಾನ ಮುಂದುವರಿದಿತ್ತು. ಬಾಳಾಸಾಹಬ್ ರ ಮತ್ತು ಶಿವರಾಮ ಅವರ ಸ್ನೇಹ ಘನಿಷ್ಠವಾಗಿತ್ತು. ಇವರು ಬಾಳಾಸಾಹೇಬರನ್ನು ಭೇಟಿಮಾಡಿದಾಗ ಅವರ ಪಾದಮುಟ್ಟಿ ನಮಸ್ಕರಿಸುತ್ತಿದ್ದರು. ಅವರು ಪ್ರೀತಿಯಿಂದ ಇವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಿದ್ದರು.

“ಓರ್ವ ಕೇಶವಿನ್ಯಾಸಕನಾಗಿ ನನ್ನ ಒಂದು ಸಂದರ್ಶನವನ್ನುಸಾಮನಾ’ದಲ್ಲಿ ಪ್ರಕಟಿಸಿದ್ದರು. (ಸಾಮನಾ’ ಮರಾಠಿ ವಾರ ಪತ್ರಿಕೆ,ಶಿವಸೇನೆ’ಯ ಮುಖಪತ್ರಿಕೆ.) ಅದು ಪ್ರಕಟವಾಗಿದ್ದ ಆ ದಿನ ಬೆಳಿಗ್ಗೆ ಸುಮಾರು 9-15ರ ಹೊತ್ತಿಗೆ ಅವರು ನನಗೆ ಕರೆ ಮಾಡಿ: ಸಾಮನಾ’ದಲ್ಲಿ ನಿಮ್ಮ ಸಂದರ್ಶನ ಬಂದಿದೆ. ನೋಡಿದ್ದೀರಾ?’ ಎಂದು ಕೇಳಿದರು. ಅಷ್ಟು ದೊಡ್ಡ ವ್ಯಕ್ತಿಯೊಬ್ಬರು ನನಗೆ ವೈಯ್ಯಕ್ತಿಕವಾಗಿ ಫೋನ್ ಮಾಡಿ, ತಮ್ಮ ಪತ್ರಿಕೆಯಲ್ಲಿ ಬಂದ ಒಂದು ಸಣ್ಣ ಪ್ರಕಟಣೇಯನ್ನು ತಿಳಿಸಬೇಕಾದರೆ, ನಾನು ನಿಜಕ್ಕೂ ವಿನೀತನಾದೆ. ಅವರು ತಮ ಮಗ ಉದ್ಧವ ಮತ್ತು ಮೊಮ್ಮಕ್ಕಳು ಆದಿತ್ಯ ಹಾಗೂ ತೇಜಸ್‍ರನ್ನು ನನ್ನಿಂದ ಕ್ಷೌರ ಮಾಡಿಸಿಕೊಳ್ಳಲು ನಿರ್ದೇಶಿಸುತ್ತಿದ್ದರು. ಅವರ ಮರಣಾನಂತರ ನನ್ನೊಬ್ಬ ಕುಟುಂಬದ ಸದಸ್ಯರನ್ನು ಕಳ್ಕೊಂಡ ಭಾವನೆ ನನ್ನಲ್ಲುಂಟಾಯಿತು. ನಾನು ನಿಜಕ್ಕೂ ಅವರನ್ನು ಕಳೆದುಕೊಂಡಿದ್ದೇನೆ. ಇಂದು ಕೂಡಾ ನಾನು ಮಾತೋಶ್ರೀಗೆ ಭೇಟಿ ನೀಡಿದಾಗೆಲ್ಲ, ಅವರ ಸಾನಿಧ್ಯವನ್ನು ನಾನು ಸ್ಪಷ್ಟವಾಗಿ ಗುರುತಿಸುತ್ತೇನೆ. ’’ ಎಂದು ಭಾವುಕವಾಗಿ ಸ್ಮರಿಸುತ್ತಾರೆ ಶಿವರಾಮ. ಉದ್ಧವ ಠಾಕ್ರೆ(ಈಗಿನ ಮಹಾರಾಷ್ಟ್ರದ ಮುಖ್ಯಮಂತ್ರಿ) ಅವರಿಗೆ ತಂದೆ ಬಾಳಾಸಾಹೇಬರ ಬಗ್ಗೆ ಅಪಾರ ಪ್ರೀತಿ. ಅವರು ದಯಾಪರರಾಗಿರುವಂತೆ ಮಿತಹಾಷಿ. ಕ್ಷೌರದ ವಿಚಾರದಲ್ಲಿ ಸಾದಾ ಶೈಲಿ ಬಯಸುತ್ತಾರೆ. ಕೂದಲು ಕಪ್ಪು ಮಾಡಬೇಕೇ? ಎಂದರೆ.ಸಹಜವಾಗಿಯೇ ಇರಲಿ ಎನ್ನುತ್ತಾರೆ. ಹಿರಿಯ ಮಗನಿಗೆ (ಈಗ ಸಚಿವ ಕೂಡ) ಕಾಪೆರ್ರೇಟ್ ಕಟ್ ಸೇರುತ್ತದೆ, ಕಿರಿಯ ಮಗ ಫ್ಯಾಷನ್ ಇಷ್ಟಪಡುತ್ತಾನೆ.
ಮಧೂರ್ ಭಂಡಾರಕರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕರು. ಅವರ ಚಾಂದನೀ ಬಾರ್’ ಸಿನೇಮಾ ಹಸರು ಗಳಿಸಿದಾಗ ಒಂದು ದಿನ ಅವರು ಶಿವಾಸ್ ಲೋಖಂಡವಾಲ ಸಲೂನಿಗೆ ಭೇಟಿಕೊಟ್ಟರು. ನಂತರ ಅವರ ಶಿವರಾಮ ಅವರ ಪರಮ ಮಿತ್ರರಾದರು. ಅವರ ಒಡನಾಟದ ಬಗ್ಗೆ ಬರೆಯುತ್ತಾರೆ. ಅವರು ತಮ್ಮ ಹಿರೋಯಿನ್’ ಫಿಲ್ಮಿನಲ್ಲಿ ಶಿವಾಸ್ ಅಕಾಡೆಮಿಯ ಒಂದು ಸಣ್ಣ ದೃಶ್ಯವನ್ನು ಸೇರ್ಪಡಿಸಿದ್ದರು. ಒಂದೆರಡು ಚಿತ್ರಗಳಲ್ಲಿ ಇವರಿಗೆ ಚಿಕ್ಕ ಪಾತ್ರಗಳನ್ನೂ ಕೊಟ್ಟು ತಮ್ಮ ಸ್ನೇಹ ವರ್ಧಿಸಿದರು.
ಮಹೇಶ ಶೆಟ್ಟಿ, ಎಂ.ಟಿ. ಎಜ್ಯುಕೇರ್‍ದ ಚೇರ್ಮನ್ ಮತ್ತು ಮ್ಯಾನೇಜಿಂಗ ಡೈರೆಕ್ಟರ್ ಅವರ ಒಡನಾಟದ ಬಗ್ಗೆ ಬರೆಯುತ್ತಾರೆ. ಮೇಗ್ನಾ ಪಬ್ಲಿಕೇಶನ್ಸ್ ನ ನಿರ್ದೇಶಕ ಅಶೋಕ ಧಮನಕರ ಅವರ ಸ್ನೇಹದ ಬಗ್ಗೆ ಬರೆಯುತ್ತಾರೆ. ಅವರು ಸ್ಟಾರ್ ಡಸ್ಟ್‍ನ ವಾರ್ಷಿಕ ಸಮಾರಂಭಗಳಿಗೆ ಶಿವರಾಮರನ್ನು ಆಮಂತ್ರಿಸುತ್ತಾರೆ, ಇವರ ಪ್ರತಿ ಹೊಸ್ ಅಂಗಡಿಯ ಉದ್ಘಾಟನೆಗೆ ತಪ್ಪದೇ ಹಾಜರ್ ಇರುತ್ತಾರೆ. ಮಾಡೆಲ್ ಕೋ-ಆಪರೇಟಿವ್ ಬ್ಯಾಂಕಿನ ವೈಸ್-ಚೇರ್‍ಮನ್ ವಿಲಿಯಂ ಸಿಕ್ವೇರಾ 1993ರಲ್ಲಿ ಮುಳುಂದ ಸಲೂನಿಗೆ ಬಂದಿದ್ದರು. ತುಳುವಿನಲ್ಲಿ ಮಾತಾಡಿದರು. ಬರಿ ಗಿರಾಕಿಯಾಗಿ ಉಳಿಯದೇ ಸ್ನೇಹಿತರಾದರು. ಲೋಖಂಡವಾಲದಲ್ಲಿ ಶಿವಾಸ್’ ಸರಣಿಯ ಮೂರನೆಯ ಸಲೂನ್ ಸ್ಥಾಪಿಸುವಾಗ ಬಹುದೊಡ್ಡ ಸಾಲವನ್ನು ಪಡೆಯಲು ಸಹಾಯ ಮಾಡಿದರು ಎಂದು ನೆನೆಯುತ್ತಾರೆ.ಉದ್ಯಮಿ ವಿನೋದ ಚೋಪ್ರಾ ಒಮ್ಮೆ ಕ್ಷೌರಕ್ಕಾಗಿ ಬಂದವರು ಗೆಳೆಯರಾದರು. ಕಾನೂನು ಸಲಹೆ ನೀಡಿದರು. ಕಷ್ಟದ ದಿನಗಳಲ್ಲಿ ಹತ್ತಿರ ಬಂದು ಸಹಾಕಾರ ನೀಡಿದರು’ ಎನ್ನುತ್ತಾರೆ. ಇವರ ಮೊದಲ ಹೆಂಡತಿ ಕ್ಯಾನ್ಸರ್ ಪೀಡಿತೆಯಾಗಿ ಅಸು ನೀಗಿದಾಗ ಅವಳ ಚಿತಾಭಸ್ಮ ಬನಾರಸಿಗೆ ಕೊಂಡೊಯ್ಯುವಾಗ ಅವರು ಜೊತೆಗೆ ಬಂದರು, `ನನ್ನ ಬದುಕಿನಲ್ಲಿ ಅವರದ್ದು ಒಂದು ಮಹಾಶಕ್ತಿಯ ಸ್ರೋತ’ ಎಂದು ಶಿವರಾಮ ಸ್ಮರಿಸುತ್ತಾರೆ.

10

ಶಿವನ ಕೈಗಳಲ್ಲಿನ ಮಾಂತ್ರಿಕತೆ: ಪೋಷಕ ಮಂದಿಯ ಮಾತುಗಳು

ಸತೀಶ ಶಹಾ, ಉದ್ಯಮಿ, ಕಂಪಾಲಾ, ಉಗಾಂಡಾ, ಹೇಳುತ್ತಾರೆ: ಶಿವಾ ಅವರ ಬೆರಳುಗಳಲ್ಲಿ ಅದೇನೋ ಮಾಂತ್ರಿಕ ಶಕ್ತಿಯಿದೆ. . . . ಅವರು ಆತ್ಮಾರ್ಪಣಾ ಭಾವದಿಂದ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ನಾನು ಅನೇಕ ಕೇಶವಿನ್ಯಾಸಕರಿಂದ ಕೇಶಶೈಲಿಯನ್ನು ಮಾಡಿಸಿಕೊಂಡಿದ್ದೇನೆ- ನೀವು ನಿಮ್ಮ ತಲೆಯನ್ನು ಯಾವುದೇ ಕ್ಷೌರಿಕನ ಕೈಗೆ ನೀಡಿದಾಗ, ಬಹಳ ಆತಂಕಿತರಾಗಿರುತ್ತೀರಿ. ಆದರೆ ಶಿವಾ ಅದಕ್ಕೆ ಅಪವಾದ. ಅವರ ಬೆರಳುಗಳು ಒಂದು ಗರಿಯ ತುಪ್ಪಳದಂತೆ ಮೃದುವಾಗಿರುತ್ತದೆ. ಅವರು ನಿಮ್ಮ ಕೂದಲನ್ನು ಹಿಡಿದು ಕತ್ತರಿಸುವಾಗ ನಿಮಗೆ ಆಹ್ಲಾದಕರ ಅನುಭವವಲ್ಲದೆ ಬೇರೇನೂ ಆಗುವುದಿಲ್ಲ. ನಾನು ಭಾರತಕ್ಕೆ ಬಂದಾಗಲೆಲ್ಲ ಅವರಿಂದಲೇ ಕೇಶವಿನ್ಯಾಸ ಮಾಡಿಸಿಕೊಳ್ಳುತ್ತೇನೆ.’’ ರೋಶಿನಿ ಕೋಟಾರಿ, ಮೀಡಿಯಾ ಮರ್ಕೆಟಿಂಗ್ ವೃತ್ತಿಪರರು, ಮುಂಬಯಿ, ಹೇಳುತ್ತಾರೆ:ಅಂದು ನಾನು ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಾಗ, ಸುಮಾರು 15 ವರ್ಷಗಳಿಗೆ ಮುಂಚೆ. ನಾನು ಅವರ ಮುಲುಂದ್, ಲೋಖಂಡವಾಲಾ ಮತ್ತು ಜುಹುವಿನಲ್ಲಿರುವ ಸಲೂನ್‍ಗಳಿಗೆ ಭೇಟಿಕೊಡುತ್ತಲೇ ಇರುತ್ತೇನೆ. ನಾನು ಕೂದಲನ್ನು ಕತ್ತರಿಸಿಕೊಳ್ಳಲು ಶಿವಾ ಅವರಲ್ಲಿಗೆ ಹೋಗುವಾಗ, ಇಂತಹದ್ದೇ ಶೈಲಿ ಅಂತ ನಾನೆಂದೂ ಹೇಳುವುದಿಲ್ಲ. ಅಥವಾ ಅವರು ಯಾವುದೇ ಚಿತ್ರವನ್ನು ತೋರಿಸುತ್ತಾ ಹೀಗಾಗಬಹುದೇ?’ ಎಂದು ಕೇಳುವುದಿಲ್ಲ. ನನ್ನ ವ್ಯಕ್ತಿತ್ವಕ್ಕೆ ಯಾವುದು ಸರಿಹೊಂದುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತು, ಮತ್ತು ನನ್ನ ಅಲೆಯೋಪಾದಿ ಕೂದಲ ರಚನೆಗೆ ಯಾವ ಬಗೆಯ ಮೋಡಿ ಮಾಡಬೇಕೆಂದು ಅವರು ಬಲ್ಲರು. . . . ನನ್ನ ಪರಿವಾರದ ಸದಸ್ಯರೆಲ್ಲ- ನನ್ನ ಗಂಡ, ಸಹೋದರ ಮತ್ತು ಅಮೇರಿಕಾದಲ್ಲಿರುವ ಸಹೋದರಿ- ಎಲ್ಲರೂ ಶಿವಾ ಅವರಲ್ಲೇ ಕೇಶವಿನ್ಯಾಸ ಮಾಡಿಸಿಕೊಳ್ಳುತ್ತಾರೆ. . . .ನಾನು ಯಾವಗಲೂ ಅವಸರದಲ್ಲಿರುವಾಕೆ, ಹಾಗಾಗಿ ನನ್ನ ಹೆರಳಿನ ಮೇಲೆ ನನಗೆ ಸಾಕಷ್ಟು ಸಮಯ ಉಪಯೋಗಿಸಲಿಕ್ಕೆ ಬಾರದು. ನನ್ನ ಕೂದಲನ್ನು ನಾನು ಬಾಚಿವುದು ಕಡಿಮೆಯೇ, ಯಾವಗಲಾದರೊಮ್ಮೆ ಕುದಲ ಎಳೆಗಳನ್ನು ಬೆರಳೋಡಿಸಿ ಕೂದಲ ಸಿಕ್ಕುಗಳನ್ನು ಬಿಡಿಸಿಕೊಳ್ಳುವುದು. ಶಿವಾ ಅವರಿಗೆ ಗೊತ್ತು ನನಗೆ ಹೆರಳಿನ ಕಡೆಗೆ ಧ್ಯಾನ ನೀಡುವುದಕ್ಕೆ ಸಮಯವಿಲ್ಲ ಅಂತ. ಹಾಗಾಗಿ ಅವರು ನನಗೆ ಸುಲಭಸಾಧ್ಯವಾದ ರೀತಿಯ ವಿನ್ಯಾಸವನ್ನು ಕೊಟ್ಟು ಅಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ.’’ ಹಲವಾರು ವಿವಿಧ ಕ್ಷೇತ್ರದ ಜನರು ಶಿವಾ ಅವರ ಕೈಚಳಕವನ್ನು ಕೊಂಡಾಡಿದ್ದಾರೆ, ಸಾಮ್ನಾ ಮರಾಠಿ ಪತ್ರಿಕೆ ಬರೆದಿತ್ತು,ಶಿವಾ ಅವರ ಕತ್ತರಿ ಮಾತಾಡುತ್ತದೆ’ ಎಂದು.

(11)

ತಾಯು- ಸರಳತೆಯ ಸಾಕಾರಮೂರ್ತಿ

ದೇವರು ಎಲ್ಲಾ ಕಡೆಯಲ್ಲಿಯೂ ಇರುವುದಕ್ಕಾಗುವುದಿಲ್ಲ ಹಾಗಾಗಿ ಅವನು ತಾಯಂದಿರನ್ನು ಸೃಷ್ಟಿಸಿದ’’-ರುಡ್ಯಾಡ್ ಕ್ಲಿಪಿಂಗ್, (ಇಂಗ್ಲಿಷ್ ಲೇಖಕ ಮತ್ತು ಕವಿ) ಬಹಳ ಸುಂದರ ಹಾಗೂ ಸೂಕ್ತ ಅವತರಣಿಕೆಯಿಂದ ಪ್ರಾರಂಭಿಸಿ, ಶಿವರಾಮ ಅವರು ತಾಯಿಯ ಬಗ್ಗೆ ಬರೆಯುತ್ತಾರೆ. ಸೂಕ್ತ ಕನ್ನಡ ಗಾದೆಯನ್ನು ನೆನೆಯುತ್ತಾರೆ, `ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ದೇವರಿಲ್ಲ’.ನನ್ನ ತಂದೆಯನ್ನೂ, ಆಮೇಲೆ ಅದರ ಹಿಂದೆಯೇ ನನ್ನ ತಂಗಿಯನ್ನೂ ಕಳೆದುಕೊಂಡ ಬಳಿಕ, ನನಗೆ ಭರವಸೆಯನ್ನೂ ಒಡನಾಟವನ್ನೂ ನೀಡುತ್ತಿದ್ದವಳು ತಾಯಿಯೊಬ್ಬಳೇ. ಹಾಗೆಯೇ ನಾನು ಅವಳ ಬಲವೂ, ಏಕೈಕ ಆಧಾರವೂ ಆಗಿ ಹೋದೆ.’’ ಎನ್ನುತ್ತಾರೆ. ಅವರ ತಂದೆ ಮುಂಬೈಗೆ ಕೆಲಸದಮೇಲೆ ತೆರಳಿದ್ದರು. ಅಲ್ಲಿ ರೋಗಗ್ರಸ್ತರಾದರು. ಅಸು ನೀಗಿದರು. ತಾಯಿಗೆ ಎರಡು ಮಕ್ಕಳನ್ನು ಸಾಕುವ ಹೊಣೆಗಾರಿಕೆ ಬಂತು. ಬಡತನದ ಬೇಗೆಯಲ್ಲಿ ಬೆಂದ ಅವಳಿಗೆ ತನ್ನ ಮಗಳಿಗೆ ತಕ್ಕ ಔಷಧೋಪಚಾರ ಮಾಡಲಾಗಲಿಲ್ಲ, ಮಗಳನ್ನು ಕಳೆದುಕೊಂಡಳು. ಅವಳ ಆಶಾಕಿರಣವಾದ ಏಕೈಕ ಮಗನನ್ನು ಪಾಲಿಸಲು ವಿವಿಧ ಕೆಲಸ ಮಾಡಬೇಕಾಯ್ತು. ಕಟ್ಟಡ ಕೆಲಸದ ಕೂಲಿಯಾಳಾಗಿ, ಬಟ್ಟೆ ಹೊಲಿಯುವವಳಾಗಿ, ಪರಿವಾರದ ಅಡಿಗೆಯವಳಾಗಿ, ಹೊಲಗದ್ದೆಗಳಲ್ಲಿ ಕೆಲಸದವಳಾಗಿ ದುಡಿದಳು. ತಾವು ಜೀವನದಲ್ಲಿ ಸಾಧಿಸಿದ್ದೆಲ್ಲ ತಾಯಿಯ ಅಸ್ತಿತ್ವದ ಬೆಂಬಲ ಎನ್ನುತ್ತಾರೆ.
ಹದಿನೆಂಟು ವರ್ಷದವಳಿದ್ದಾಗ ಮದುವೆಯಾಗಿ ಬಂದ ಇವರ ಅಮ್ಮ ಒಂಟಿಯಾಗಿ ಮಾವನ ಮನೆಯಲ್ಲಿ ನಿಟ್ಟೆಯಲ್ಲಿದ್ದರು. ತಂದೆಯವರು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದರು. ಈ ಪುಸ್ತಕ ನಿಮಿತ್ತದಿಂದ ಹಳೆಯ ನೆನಪುಗಳೆಲ್ಲ ಮರುಕಳಿಸಿದವು ಎಂದು ಬರೆಯುತ್ತಾರೆ. ಮುಂಬೈಯಲ್ಲಿ ಅಮ್ಮನ ಪ್ರಾರಂಭಿಕ ಜೀವನ ಕಷ್ಟಮಯವಾಗಿತ್ತು. ತಂದೆ ರೋಗಪೀಡಿತರು. ಮನೆ ಮಾಲಾಡದ ಅಭಿವೃದ್ಧಿ ಕಾಣದ ಒಂದು ಚಾಳ್‍ನಲ್ಲಿ. ಸಾಮಾನ್ಯ ಕಟ್ಟಡ. ಹಲವಾರು ಕುಟುಂಬಗಳು ಬಾಡಿಗೆಯಿಂದ ಇದ್ದರು. ಒಂದೇ ಶೌಚಾಲಯ. ಇಲೆಕ್ಟ್ರಿಸಿಟಿ, ನೀರಿನ ವ್ಯವಸ್ಥೆ ಇರಲಿಲ್ಲ. ಮನೆಯಲ್ಲಿ ಎಣ್ಣೆದೀಪ. ಬೋರ್‍ವೆಲ್ ನೀರಿಗಾಗಿ ಕ್ಯೂ ಹಚ್ಚಬೇಕು. ತಂದೆ ಕೆಲಸಕ್ಕೆ ಹೋದಾಗ, ಪೇಟೆಗೆ ಸಾಮಾನು ತರಲು ಹೋದರೆ ತುಂಟ ಮಗನನ್ನು ನೀರು ತುಂಬಿದ ಡ್ರಮ್‍ಗೆ ಕಟ್ಟುತ್ತಿದ್ದರಂತೆ. ತಂದೆ ಗತಿಸಿದಾಗ ಮೂರು ವರ್ಷದ ಮಗನನ್ನು ಒಂದು ವರ್ಷದ ಮಗಳನ್ನು ಕರೆದುಕೊಂಡು ಹಳ್ಳಿಗೆ ಬಂದರು. ಕುಟುಂಬದ ಸದಸ್ಯರೆಲ್ಲ ಅವಳನ್ನು ಪರಿತ್ಯಜಿಸಿದರು. ತಂಗಿ ಬತ್ತಲೆಯಾಗಿದ್ದರೆ ಇವರಿಗೆ ತೊಡಲು ಒಂದು ಕೌಪೀನ! ಇವರ ಸ್ಥಿತಿ ಇವರ ಚಿಕ್ಕಪ್ಪ, ವಾವಂದಿರಿಗೆ ಅಸಹನೀಯವಾಗಿತ್ತು. ಮನೆಗೆ ಅತಿಥಿಗಳು ಬಂದಾಗ ಇವರನ್ನು ಅವಮಾನಿಸುವ ಅವಕಾಶ ಕಳೆದುಕೊಳ್ಳುತ್ತಿರಲಿಲ್ಲ. ಚಿಕ್ಕಾಸೂ ಕೊಡಲಿಲ್ಲ. ಬಟ್ಟೆಬರೆ ಕೊಡಲಿಲ್ಲ. ಚಿಕ್ಕಪ್ಪ ಗೋವಿಂದ ತಂದೆಯ ಹಕ್ಕಿನ ಆಸ್ತಿ ಕಬಳಿಸಿದ. ಇವರು ಮದುವೆಯ ನಂತರ ಏಳು ವರ್ಷಗಳ ನಂತರ ಹುಟ್ಟಿದರಂತೆ. ಆ ಅವಧಿಯಲ್ಲಿ ಇವರ ಅಮ್ಮನಿಗೆ ಬಂಜೆ ಎಂದು ಸಂಬಂಧಿಕರು ಹೀಯಾಳಿಸುತ್ತಿದ್ದರಂತೆ. ಇವರು ವಿದೇಶಕ್ಕೆ ಹೋಗಿ ಹಣ ಗಳಿಸಲಿ ಎಂಬುದು ಅಮ್ಮನ ಇಚ್ಛೆಯಾಗಿತ್ತು. ಇವರು ದೊಹಾಕ್ಕೆ ಹೋದ ಪ್ರಾರಂಭದಲ್ಲಿ, ಅವಳು ಮಗನನ್ನು ಕಳೆದುಕೊಂಡಳು, ಎಂದು ಹೇಳಿ ಭಯ ಹುಟ್ಟಿಸುತ್ತಿದ್ದರಂತೆ. ಸರಕಾರದ ಸಿಬ್ಬಂದಿಗಳಿಗೆ ಏನೇನೊ ಹೇಳಿ ಅಮ್ಮನಿಗೆ ರೇಶನ್‍ಕಾರ್ಡ್ ಸಿಗದಂತೆ ಮಾಡಿದರು. ಅಹಾರ ಪದಾರ್ಥ ಕಡಿಮೆ ಬೆಲೆಗೆ ಸಿಗದಂತೆ ಮಾಡಿದರು. ಎಷ್ಟೋ ಸಲ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಾಯಿಗೆ ಬರುತ್ತಿತ್ತು. ದೇವರ ಅನುಗ್ರಹದಿಂದ ಅವಳು ದುಸ್ಸಾಹಸದಲ್ಲಿ ಯಶಸ್ವಿಯಾಗಲಿಲ್ಲ. ಅಮ್ಮನಿಗೆ ತನ್ನ ತಂಗಿ ರತ್ನಳ ಬಗ್ಗೆ ಕೃತಜ್ಞತಾ ಭಾವವಿದೆ. 5 ರೂಪಾಯಿ ಕೊಟ್ಟು ಹೊಲಿಗೆಯ ಕ್ಲಾಸು ಸೇರಲು ಸಹಾಯ ಮಾಡಿದಳಂತೆ.
1989ರಲ್ಲಿ, ಥಾಣೆಯಲ್ಲಿ ಇವರ ಮೊದಲ ಸಲೂನ್ ಪ್ರಾರಂಭವಾದಾಗ ಅಮ್ಮ ಜೊತೆಗೆ ಇರಲು ಬಂದರು. ಇವರಲ್ಲಿ ಕೆಲಸಕ್ಕಿದ್ದವರೆಲ್ಲ ಇವರ ಹಳ್ಳಿಯ ಸಮೀಪದ ಮಂಗಳೂರಿನಿಂದ ಬಂದವರಾಗಿದ್ದರು. ಎಲ್ಲರಿಗೂ ಇವರ ಅಮ್ಮ ಅಡುಗೆ ಮಾಡುತ್ತಿದ್ದಳು. ಇವರ ಪ್ರಾಂತದ ವಿಶೇಷ ತಿಂಡಿ ತಯಾರಿಸುತ್ತಿದ್ದರು. ಇವರು ಸಣ್ಣವರಿದ್ದಾಗ ಅಮ್ಮ ತಯಾರಿಸುತ್ತಿದ್ದ ಬೇಳೆ ಸಾರು, ಅದಕ್ಕೆ ಒಣ ಮೇಣಸು, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ತಾಯಾರಿಸುತ್ತಿದ್ದರು. ಇವರಿಗೆ ಅದು ಬಹಳ ಇಷವಾಗುತ್ತಿತ್ತು. ಅಮ್ಮನಿಗೂ ವಿದೇಶಗಳನ್ನು ನೋಡುವ ಉತ್ಸುಕತೆ ಇತ್ತು. ಗಲ್ಫ್ ದೇಶ ಅವಳ ಮೇಲೆ ಅನನ್ಯ ಪರಿಣಾಮ ಬೀರಿತ್ತು. ಕುವೈತ್, ಆಫ್ರಿಕಾ, ಮತ್ತು ನೆದರ್ಲ್ಯಾಂಡ್‍ಗಳಿಗೆ ಅವಳು ಭೇಟಿ ನೀಡಿದ್ದಳು. ಇಂದು ಅದ್ಧೂರಿಯ ಸೌಕರ್ಯ ಹೊಂದಿದ ಮನೆಯಲ್ಲಿ, ಕುಟುಂಬ ಹಾಗೂ ಮೊಮ್ಮಕ್ಕಳ ಸಂತೋಷದೊಂದಿಗೆ ಅವರ ಜೊತೆ ಅಟವಾಡಿ ಸಮಯ ಕಳೆಯುತ್ತಾಳೆ. ಮೊಮ್ಮಕ್ಕಳಾದ ರೋಹಿಲ್ ಮತ್ತು ಆರಾಧ್ಯ ಅವರ ಜೊತೆ ಆಡುವುದೆಂದರೆ ಇವರ ಅಮ್ಮನಿಗೆ ಬಹಳ ಇಷ್ಟ.

(12)

ಪ್ರತಿಯೊಬ್ಬರ ಹೃದಯದಲ್ಲಿ ಜಾಗ ಗಿಟ್ಟಿಸಿದ ನಗುಮೊಗದ ಹುಡುಗಿ

ಇವರ ಮೊದಲನೆಯ ಹೆಂಡತಿ ದಿವಂಗತ ಹರಿಣಾಕ್ಷಿಯ ಚಿತಾಭಸ್ಮವನ್ನು ಬನಾರಸಿನ ಪವಿತ್ರ ಗಂಗಾನದಿಯಲ್ಲಿ ಸೇವಂತಿ ಹೂವಿನೊಂದಿಗೆ ತೇಲಿಬಿಟ್ಟ ದುರ್ಧರ ಘಟನೆಯಿಂದ ಪ್ರಾರಂಭಿಸಿ ತಮ್ಮ ಅತ್ಯಂತ ಪ್ರೀತಿಯ ಮಡದಿಯ ಬಗ್ಗೆ, ಅವಳ ಜೊತೆಗೆ ಕಳೆದ ದಿನಗಳ ಬಗ್ಗೆ, ಬರೆಯುತ್ತಾರೆ.
ಶಿವರಾಮ ಅವರ ಸ್ನೇಹಿತರಾದ ಕಿನ್ನಿಗೊಳಿಯ ಆನಂದ ಭಂಡಾರಿ ಮದುವೆ ಮುಂಜಿಗಳ ದಲ್ಲಾಳಿಯಾಗಿದ್ದರು. ಹರಿಣಾಕ್ಷಿ ಎಂಬ ಹುಡುಗಿಯ ಬಗ್ಗೆ ಹೇಳಿದರು. ದರೆಗುಡ್ಡೇ ಗ್ರಾಮದವಳು, ಆನಂದನ ಸಂಬಂಧಿಕ ಮನೆಯಲ್ಲಿ ಅಡುಗೆಯವಳಾಗಿ ಕೆಲಸಮಾಡುತ್ತಿದ್ದಾಳೆ’ ಎಂದು ಹೇಳಿದರು. “ನನಗೆ ಸರಳ ಮತ್ತು ಸಾದಾ ಹುಡುಗಿ ಬಾಳ ಸಂಗಾತಿಯಾಗಿ ಬೇಕಿತ್ತು. ನನ್ನ ಕಷ್ಟದ ದಿನಗಳ ಹಿನ್ನೆಲೆ ಅರಿತು ಚೆನ್ನಾಗಿ ಬಾಳುವವಳು ಬೇಕಿತ್ತು. ಅವಳ ಪ್ರಥಮ ಸಮಾಗಮಕ್ಕೆ ಕಾತರಗೊಂಡಿದ್ದೆ. ಸೋಮಶೇಖರ್ ಅವರ ಮನೆಗೆ ಹೋದೆವು. ನಾವು ಬರುವ ವಿಷಯ ಮುಂಚಿತವಾಗಿ ಹೇಳಿರಲಿಲ್ಲ. ಒಂದು ಉದ್ದನೆಯ ಹತ್ತಿಯ(ಕಾಟನ್) ಬಟ್ಟೆಯ ಉಡುಪು ತೊಟ್ಟಿದ್ದಳು. ಅದು ನೈಟಿಯೂ ಅಲ್ಲ, ಮ್ಯಾಕ್ಕ್ಸಿಯೂ ಅಲ್ಲ. ಭುಜದ ಭಾಗ ಹರಿದಿತ್ತು. ಜಡೆಹಾಕಿದ್ದಳು. ವಿನೀತಳಾಗಿ ಪೂರ್ವಗ್ರಹವಿಲ್ಲದವಳಂತೆ ಕಂಡಳು. (ನಮ್ಮ ಪ್ರಥಮ ಭೇಟಿಯಲ್ಲಿ ತೊಟ್ಟಿದ್ದ ಈ ಹರಿದ ಉಡುಪನ್ನು ಆಕೆ ಸೊಗಸಾಗಿ ಮಡಿಚಿ, ನಮ್ಮ ಕಪಾಟಿನಲ್ಲಿ ಕಾದಿಟ್ಟುಕೊಂಡಿದ್ದಳು, ಅವಳು ಕೊನೆಯ ಉಸಿರಿರುವ ತನಕ’ ಎಂದು ಬರೆಯುತ್ತಾರೆ).’’
ವಿವಾಹ ಪ್ರಸ್ತಾವ ಮಾಡಿದಾಗ ಅವಳ ಹೆತ್ತವರು ದರೆಗುಡ್ಡೆ ಗ್ರಾಮದಲ್ಲಿ ಒಂದು ಮುರುಕಲು ಮನೆಯಲ್ಲಿದ್ದಾರೆಂದು ತಿಳಿಯಿತು. ಮೂವರು ಮಕ್ಕಳಲ್ಲಿ ಹರಿಣಾಕ್ಷಿ ಎರಡನೆಯವಳು. ತಂದೆ ಕುಡುಕ, ರಸ್ತೆಯ ಬದಿಯಲ್ಲಿ ಒಂದು ಬಾರ್ಬರ್ ಶಾಪ್ ಇಟ್ಟುಕೊಂಡಿದ್ದ. ಅವಳ ಬಡತನದ ಹಿನ್ನೆಲೆ ಇವರನ್ನು ಇನ್ನಷ್ಟು ಸಮೀಪ ಒಯ್ಯಿತು. ನಿಶ್ಚಿತಾರ್ಥದ ವೇಳೆಗೆ ಇವರು ಅವಳಿಗೆ ಒಂದು ಸೀರೆಯನ್ನು, ಚಿನ್ನದ ಉಂಗುರವನ್ನೂ, ಮಲ್ಲಿಗೆ ಹೂವನ್ನು ಉಡುಗೊರೆಯಾಗಿ ನೀಡಿದರಂತೆ. ಇವರು ಫೆÇೀನಿನಲ್ಲಿ ಮಾತಾಡತೊಡಗಿದರು. ಅವಳ ಪಾಲಕರು ಕಚೇರಿಗೆ ಹೋದ ಮೇಲೆ ಮನಸಾರೆ ಮಾತಾಡುv್ತದ್ದರು. ಆ ದಿನಗಳಲ್ಲಿ ಲ್ಯಾಂಡ್ ಲೈನ್ ಫೆÇೀನಿಗಾಗಿ ದೊಡ್ಡ ವೇಟಿಂಗ್‍ಲಿಸ್ಟ್ ಇತ್ತು. ಇವರು ಭೂತ್‍ನಿಂದ ಮಾತಾಡುತ್ತಿದ್ದರು. ಇವರ ಮದುವೆ 1994ರಲ್ಲಿ ಆಯಿತು.
ಹರಿಣಾಕ್ಷಿಯ ಬಗ್ಗೆ ಬರೆಯುತ್ತಾರೆ, ಅವಳು ಏಳನೇ ತರಗತಿಯ ವರೆಗೆ, ತನ್ನ ಹಳ್ಳಿಯ ಶಾಲೆಯಲ್ಲಿ, ಓದಿದ್ದಳು. ನಂತರ ಶಾಲೆ ಬಿಟ್ಟಿದ್ದಳು. ನಾನು ಐದನೆಯ ಈಯತ್ತೆಯಲ್ಲೇ ಶಾಲೆ ಬಿಡಬೇಕಾಗಿ ಬಂದಿತ್ತು. ಕಲೆಯ ಬಗ್ಗೆ ಆಸಕ್ತಿ ಇದ್ದುದರಿಂದ ಅವಳು ಸ್ವಲ್ಪ ಸಮಯ ನಮ್ಮ ಥಾನೆಯ ಬ್ಯೂಟಿ ಪಾರ್ಲರ್‍ನಲ್ಲೂ ಅವಳು ದುಡಿಯುತ್ತಿದ್ದಳು. ಅವಳು ಒಳ್ಳೆಯ ಅಡಿಗೆ ಮಾಡುತ್ತಿದ್ದಳು ಸುಶ್ರಾವ್ಯವಾಗಿ ಭಜನೆಯ ಪದ್ಯಗಳನ್ನು ಹಾಡುತ್ತಿದ್ದಳು. ಮನೆಯ ಮುಂಬಾಗಿಲಿಗೆ ಯಾವಾಗಲೂ ರಂಗೋಲೆ ಹಾಕುತ್ತಿದ್ದಳು. ಕಾಟನ್ ಬಟ್ಟೆಯ ಸೀರೆಗಳಲ್ಲಿ ಅವಳು ಮೋಹಕವಾಗಿ ಕಾಣುತ್ತಿದ್ದಳು. ಒಂದು ನಂದಾದೀಪವನ್ನು ತುಳಸಿಕಟ್ಟೆಯ ಎದುರುಗಡೆ ಇಡುತ್ತಿದ್ದಳು. ಹರಿಣಾಕ್ಷಿ ಜನ್ಮದಿನಗಳನ್ನು ಮತ್ತು ವಾರ್ಷಿಕ ಸಮಾರಂಭಗಳನ್ನು ಆಚರಿಸುವಲ್ಲಿ ಉತ್ಸಾಹ ತೋರುತ್ತಿದ್ದಳು. . . . ನಮ್ಮ ಸಿಬ್ಬಂದಿಗಳು ಅವಳಿಗೆ ಗೌರವ ನೀಡುತ್ತಿದ್ದರು. . .ಅವಳು ಬಹಳ ಆತ್ಮೀಯ ಸ್ವಭಾವದ ಹುಡಿಗೆಯಾಗಿದ್ದು, ಜನರನ್ನು ಖುಶಿಪಡಿಸುವಲ್ಲಿ ಆನಂದವನ್ನು ಪಡೆಯುತ್ತಿದ್ದಳು. . .ನಮ್ಮ ವಿವಾಹದ ಎರಡು ವರ್ಷಗಳ ಬಳಿಕ, ಮುಲುಂದ್‍ನ ನಮ್ಮ ಅಂಗಡಿಯ ಪಕ್ಕದ ಅಂಗಡಿಯನ್ನು ಕೊಂಡು, ಅಲ್ಲಿ ಮಹಿಳೆಯರಿಗಾಗಿ0iÉುೀ ಪ್ರತ್ಯೇಕ ಪಾರ್ಲರ್‍ನ್ನು ಪ್ರಾರಂಭಿಸಿದೆವು. ಅವಳು ಕೆಲಸದಲ್ಲಿ ತೊಡಗಿದ ಕೆಲವೇ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. . . . ದಂಪತಿಗಳಾಗಿ ನಾವು ಒಬ್ಬರೊಬ್ಬರಿಗೆ ಹೇಳಿಮಾಡಿಸಿದಂತಿದ್ದೆವು.’’ ನಂತದ ದುಃಖದ ದಿನಗಳು ಪ್ರಾರಂಭವಾದವು. ಅವಳಿಗೆ ತಾಯಿಯಾಗಬೇಕೆಂಬ ಆಸೆಯಿತ್ತು. ನಿರಂತರ ಇಂಜೆಕ್ಶೆನ್ ನಿಂದ ಅನಾರೋಗ್ಯದಿಂದ ಬಳಲುವುದು ಪ್ರಾರಂಭವಾಯಿತು. ಅವಳಿಗೆ ಟಿ.ಬಿ.ಇದೆ ಎಂದು ತಪ್ಪು ತೀರ್ಮಾನವಾಗಿತ್ತು. ಒಂದೂವರೆ ವರ್ಷ ಕಾಲ ಟಿ.ಬಿ. ಮಾತ್ರೆ ಸೇವಿಸಿದಳು. ಮುಲುಂದದಲ್ಲಿ ಇನ್ನೊಬ್ಬ ಪ್ರಸೂತಿ ತಜ್ಞೆಗೆ ತೋರಿಸಿದಾಗ (ಡಾ| ಸಂಗೀತಾ ಶೆಟ್ಟಿ) ಟಿ.ಬಿ.ಇಲ್ಲ ಎಂದರು. ತಕ್ಷಣ ಔಷಧಿ ನಿಲ್ಲಿಸಲಾಯಿತು. ಅವಳ ಗರ್ಭಾಶಯದಲ್ಲಿ ಬಹಳಷ್ಟು ಫೈಬ್ರೋಯಿಡ್ಸ್ ಇವೆ ಎಂದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆಯಾಯಿತು. ಅವಳ ಸ್ಥಿತಿ ಇನ್ನೂ ಚಿಂತಾಜನಕವಾಯ್ತು. ಅವಳು ಸರ್ವಿಕಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ ಎಂದು ತಿಳಿದಾಗ ಶಿವರಾಮ ದಿಗ್ಭ್ರಾಂತರಾದರು. ಸೋರೇಕಾಯಿ ಜ್ಯೂಸ್ ಮತ್ತು ಮನೆಯ ಕಿಟಿಕಿಯ ಅಂಚಿನಲ್ಲಿ ಬೆಳೆಸಿದ ಗೋಧಿಯ ಹುಲ್ಲನ್ನು ತಿನ್ನಲು ಕೊಟ್ಟರು. ಅವಳ ಸ್ಥಿತಿಯ ಬಗ್ಗೆ ಗಟ್ಟಿ ಮನಸ್ಸುಮಾಡಿ ಅವಳ ತಂದೆಗೆ ತಿಳಿಸಿದರು. ಅವಳ ತಂದೆ ಮದ್ಯಪಾನಕ್ಕೆ ದಾಸರಾಗಿದ್ದವರು ಹರಿಣಾಕ್ಷಿಯ ಒತ್ತಡದಿಂದ ಸಂಪೂರ್ಣವಾಗಿ ಅದರಿಂದ ಮುಕ್ತರಾದರು. ನಾವು ಮದುವೆಯಾಗಿ ಐದು ವರ್ಷಾವಾಗಿದ್ದಾಗ, ಹರಿಣಾಕ್ಷಿ ಒಳ್ಳೆಯ ಆರೋಗ್ಯದಲ್ಲಿದ್ದಾಗ, ಒಂದು ಸಾಂಪ್ರದಾಯಿಕ ಕೋಲನ್ನು ಏರ್ಪಡಿಸಿ ತಂದೆಯ ಕುಡಿತವನ್ನು ಬಿಡಿಸಿದ್ದಳು. . . . ಹರಿಣಾಕ್ಷಿ ತನ್ನ ತಂದೆಯನ್ನು ದೈವದ ಎದುರಿಗೆ ಬರಮಾಡಿಕೊಂಡು ಇನ್ನು ಮೇಲೆ ಕುಡಿಯುವುದಿಲ್ಲವೆಂದು ಅವರಿಂದ ಭಾಷೆ ತೆಗೆದುಕೊಂಡಿದ್ದಳು. ಆ ದಿನದಿಂದ ತಂದೆ ಮದ್ಯಪಾನ ಮಾಡಿರಲಿಲ್ಲ. . . .ನಾನು ಕೂಡ ಮದ್ಯಪಾನವನ್ನು ಬಿಡಬೇಕಾಗಿ ಬಂತು, ಯಾಕೆಂದರೆ ಅದನ್ನು ಅವಳ ಕಾಯಿಲೆಯ ವ್ಯಸನದಿಂದ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವಳು ಭಾವಿಸಿದ್ದು. ವಿಸ್ಕಿಯನ್ನು ಕುಡಿಯುತ್ತ ನಾನು ನೋವನ್ನು ಮರೆಯಲು ಯತ್ನಿಸುತ್ತಿದ್ದೇನೆ ಎಂದು ಅವಳು ಭಾವಿಸಿದ್ದಳು.’’
ಮೂರನೆಯ ಶಸ್ತ್ರಚಿಕಿತ್ಸೆಯಾದ ಮೇಲೆ ಡಾಕ್ಟರರು, ಅವಳ ಆಸೆಗಳನ್ನು ಪೂರೈಸಿರಿ ಎಂದು ಹೇಳಿದರು. ವೈದ್ಯರ ಸಲಹೆ ಗಂಭೀರವಾಗಿ ತ್ರೆಗೆದುಕೊಂಡ ಶಿವರಾಮ ಹೆಂಡತಿಯನ್ನು ಪ್ರವಾಸೀ ತಂಡದೊಂದಿಗೆ ಸಿಂಗಾಪುರ್ ಮತ್ತು ಮಲೇಶಿಯಾಕ್ಕೆ ಕರೆದೊಯ್ದರು.. ಬದುಕಬೇಕೆಂಬ ಮಹದಾಸೆಯಲ್ಲಿ ರೋಗದ ವಿರುದ್ಧ ಹೋರಾಡುವ ಎದೆಗಾರಿಕೆ ಹರಿಣಿಯವರಲ್ಲಿತ್ತು. 2005ರಲ್ಲಿ ಕೇಶವಿನ್ಯಾಸದ ಮುಂದುವರಿದ ಶಿಕ್ಷಣ ತರಬೇತಿಗಾಗಿ ಲಂಡನ್‍ಗೆ ಹೋಗಲು ನಿರ್ಧರಿಸಿದರು. ಯುಕೆಯಲ್ಲಿ 55 ದಿನ ಇದ್ದರು. ಜೊತೆಗೆ ಹರಿಣಾಕ್ಷಿಯೂ ಹೋದಳು. ಇವರು ಪ್ರಸಿದ್ಧ ಬ್ಯೂಟಿ ಅಂಡ್ ಕೇರ್ ವಿಶೇಷಜ್ಞರಾದ ಟೋನ್ ಅಂಡ್ ಗೈ ಸಂಸ್ಥೆ ಸೇರಿದರೆ, ಹರಿಣಾಕ್ಷಿ ಇವರು ಹಿಂದೆ ತರಬೇತಿ ಮುಗಿಸಿದ್ದ ವಿದಾಲ್ ಸಸ್ಸೂನ್ ಅಕಾಡೆಮಿ ಸೇರಿದಳು. ಅಲ್ಲಿಯ ಮಿತ್ರರೊಂದಿಗೆ ಬೆರೆತುಕೊಂಡು ದಕ್ಷಿಣ ಭಾರತದ ಅಡುಗೆ ತಯಾರಿಸುತ್ತ ಇತರರೊಡನೆ ಮುದ ಹಂಚಿಕೊಂಡಳು. ಕೆಲವೇ ತಿಂಗಳ ಹಿಂದೆ ಅವಳಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು, ವೈದ್ಯರೆಲ್ಲ ಅವಳ ಬದುಕುವ ಆಸೆಯನ್ನು ಬಿಟ್ಟಿದ್ದಾರೆ ಎಂದು ಅವಳನ್ನು ಕಂಡವರಿಗೆ ತೋರುತ್ತಿರಲಿಲ್ಲ. ನಾಲ್ಕನೆಯ ಶಸ್ತ್ರ ಚಿಕಿತ್ಸೆಯೂ ಆಯಿತು. ನಾಸಿಕದಲ್ಲಿ ಆಯುರ್ವೇದ ಪಂಡಿತರೊಬ್ಬರು ಔಷಧಿ ಕೊಡುತ್ತಾರೆಂದು ತಿಳಿದಾಗ ಹಲವು ಸಲ ಅಲ್ಲಿ ಹೋಗಿ ಬಂದರು.
ಅವಳ ಕೊನೆಯ ಮೂರು ವರ್ಷಗಳಲ್ಲಿ, ದರೆಗುಡ್ಡೆಯಲ್ಲಿ ನಾವು ಕಟ್ಟಿಸುತ್ತಿದ್ದ ಅವಳ ಕನಸಿನ ಮನೆ ದುರ್ಗಾನಿಲಯದ ಕಡೆ ಜತನದಿಂದ ತನ್ನ ಸರ್ವಸ್ವವನ್ನು ಅರ್ಪಿಸುತ್ತ ಅದು ಪೂರ್ತಿಯಾಗುವಂತೆ ನೋಡಿಕೊಂಡಳು. ಅವಳ ಸಾನಿಧ್ಯ ಆ ಮನೆಯಲ್ಲಿ ಇಂದಿಗೂ ಸ್ಪಷ್ಟವಿದೆ.’’ ಎನ್ನುತ್ತಾರೆ ಆ ಮನೆಯಲ್ಲಿ ಹರಿಣಾಕ್ಷಯ ನಗುಮೊಗದ ಫೋಟೊ ಇಟ್ಟಿದ್ದಾರೆ. 10ನೇ ಮಾರ್ಚ 2008ರಂದು ಬೆಳಿಗ್ಗೆ ಸುಮಾರು 11ಗಂಟೆಯ ಹೊತ್ತಿಗೆ ಹರಿಣಾಕ್ಷಿ ಕೊನೆಯ ಉಸಿರೆಳೆದರು. ಅವರಿಗೆ ಆಗ ಮೂವತ್ತೈದು ವರ್ಷ ಪ್ರಯವಾಗಿತ್ತು. ಹರಿಣಾಕ್ಷಿಯ ಕೊನೆಯ ದಿನಗಳ ಬಗ್ಗೆ ವಿವರವಾಗಿ ಬರೆಯುತ್ತಾರೆ. ಕೊನೆಗೆ ಅವರು ಹೇಳುತ್ತಾರೆ:ಹಿಂದೂ ಸಂಪ್ರದಾಯದಲ್ಲಿ ಹೇಳುವಂತೆ, ಅವಳು ನನ್ನ ಸಂಪತ್ತಿನ ದೇವತೆ ಲಕ್ಷ್ಮಿಯಾಗಿದ್ದಳು. ನನ್ನ ಮನೆಗೆ ಅಡಿಯಿಟ್ಟು ನನಗೆ ಶ್ರೀಮಂತಿಕೆಯನ್ನು ನೀಡಿ ನನ್ನ ಬದುಕನ್ನು ಬದಲಾಯಿಸಿದ್ದಳು. ನನಗೆ ಅವಳ ನಗು ನೆನಪಿಗೆ ಬರುತ್ತಿತ್ತು. ಜೋರಾಗಿ ನಗುತ್ತಿದ್ದಳು, ಲೋಕವನ್ನೇ ಮರೆತು. ಅವಳು ಪೂರ್ತಿ ಜೀವನವನ್ನು ಅನುಭವಿಸಿದ್ದಳು. ಅವಳನ್ನು ಎಲ್ಲರೂ ತುಂಟಿ ಎಂದು ಚುಡಾಯಿಸುತ್ತಿದ್ದರು. ಅವಳ ಲವಲವಿಕೆ, ಅವಳ ಗುಣಾತ್ಮಕ ಧೋರಣೆ, ಮತ್ತು ಎಲ್ಲರ ಬಗೆಗೆ ಅವಳ ನಿಸ್ವಾರ್ಥ ಕಾಳಜಿ, ಹರಿಣಾಕ್ಷಿಯನ್ನು ಪ್ರತಿಯೊಬ್ಬರ ಹೃದಯದಲ್ಲಿ ಶಾಶ್ವತವಾಗಿ ನೆಲೆನಿಲ್ಲುವಂತೆ ಮಾಡಿತ್ತು.’’

(13)

ಪದವಿಗಳು, ಅರ್ಹತಾಪತ್ರಗಳು ಮತ್ತು ಪುರಸ್ಕಾರಗಳು

ಶಿವರಾಮ ಭಂಡಾರಿಯವರು ಇಂಗ್ಲಂಡಿನಲ್ಲಿ ವಿದಾಲ್ ಸಸ್ಸೂನ್ ಅಕೆಡೆಮಿಯಲ್ಲಿ ಡಿಪೆÇ್ಲಮಾ ಪಡೆದರು(1998), ಮುಂದುವರಿದ ತರಬೇತಿಯನ್ನು ಟೋನಿ ಅಂಡ್ ಗೈ ಎಜುಕೇಶನ್ ಅಕಾಡೆಮಿಯಲ್ಲಿ ಪಡೆದರು(2005).
ಅವರು ಮೂವತ್ತೆರಡು ಬಹುಮಾನ, ಅರ್ಹತಾ ಪತ್ರ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಹತ್ವದವೆಂದರೆ:
• ವೈಲ್ಡ್ ಅಂಡ್ ವಾಕಿ ಸ್ಪರ್ಧೆಯಲ್ಲಿ ಟ್ರೋಫಿ. (1998)
• ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಅರ್ಹತಾಪತ್ರ (2011)
• ಸಮಾಜ ರತ್ನ ಪ್ರಶಸ್ತಿ, ಸಲೂನ್ ಬ್ಯೂಟಿ ಪಾರ್ಲರ್ ಅಸೋಸಿಯೇಶನ್, ಮಹಾರಾಷ್ಟ್ರ(2013)
• ಯುರೋಪಿಯನ್ ಕಾಟಿನೆಂಟಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ(2015)
• ಮಿನಿಸ್ಟ್ರಿ ಆಫ್ ಮೈನಾರಿಟಿ ಅಫೇರ್ಸ್ ಫಾರ್ ದಿ ಮೈನಾರಿಟಿ ಕಮ್ಯುನಿಟೀಜ್, ಡಾ| ನಜ್ಮಾ ಹೆಪ್ತುಲ್ಲಾ ಅವರಿಂದ ಸನ್ಮಾನ( ಕೇಂದ್ರ ಸಚಿವೆ, ಭರತ ಸರಕಾರ) (2016)

(14)
ಯುವ ಕೇಶವಿನ್ಯಾಸಕಾರರಿಗೆ ಕಲಿಕಾ ಪಾಠ

2015ರಲ್ಲಿ ಭಾರತದ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ ಮತ್ತು ಮೌಲಾನಾ ಅಜಾದ್ ನ್ಯಾಶನಲ್ ಅಕಾಡೆಮಿ ಫಾರ್ ಸಿಲ್ಕ್ (MANAS) ಇದರ ಆಶ್ರಯದಲ್ಲಿ ನಡೆಯುವ ಎಂಟಿ ಎಜ್ಯುಕೇರ್ (MT Care) ಸಂಸ್ಥೆಯ ಸಹಯೋಗದಲ್ಲಿ ಶಿವರಾಮ ಭಂದಾರಿಯವರು ಆಯೋಜಿಸಿದ ಶಿಕ್ಷಣ ತರಬೇತಿಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಿಲಾಯಿತು. 2015 ಫೆಬ್ರುವರಿಯಲ್ಲಿ, ಮೊದಲ ಬ್ಯಾಚ್‍ನಲ್ಲಿ, 16 ರಿಂದ 20 ವಯಸ್ಸಿನ 150 ವಿದ್ಯಾರ್ಥಿಗಳು ತರಬೇತಿ ಪಡೆದರು. ಈ ತರಬೇತಿಯಲ್ಲಿ ಅನೇಕ ಹೆಣ್ಣುಮಕ್ಕಳೂ ಸೇರಿದ್ದರು.

(15)

ಒಬ್ಬ ಮಮತೆಯ ತಾಯಿ ಹಾಗೂ ಸಹನೆಯುಳ್ಳ ಮಡದಿ

ಹರಿಣಾಕ್ಷಿ ಗತಿಸಿದ ಬಳಿಕ ಶಿವರಾಮ ಅವರು ಮದುವೆಯಾಗುವುದಕ್ಕೆ ಬಯಸಿರಲಿಲ್ಲಾ. ಅರ್ಹ ಹುಡಿಗೆಯರ ಬಹಳಷ್ಟು ಫೆÇೀಟೋ ಇವರಿಗೆ ತೋರಿಸಿದದು, ಬೇಡವೆಂದಿದ್ದರು. ಹರಿಣಾಕ್ಷಿಯನ್ನು ಕಳೆದುಕೊಂಡ ಶೋಕ ಇವರನ್ನು ಆವರಿಸಿತ್ತು. ಬಿಡುವಿಲ್ಲದ ಕೆಲಸದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದರು. ಅನುಶ್ರೀಯ ನಂಟಸ್ತಿಕೆ ಇವರ ಚಿಕ್ಕಮ್ಮನ ಮಗ ಕೃಷ್ಣನ ಮೂಲಕ ಬಂತು. ಇವರ ತಾಯಿ ಮತ್ತು ಹರಿಣಾಕ್ಷಿಯ ತಾಯಿ ಇವರನ್ನು ಹಿಂದೂ ಸಂಪ್ರದಾಯದ ಇಕ್ಕಟ್ಟಿಗೆ ಸಿಲುಕಿಸಿದರು. ಕುಟುಂಬದಲ್ಲಿ ಸಾವು ಆದರೆ ಒಂದು ವರ್ಷದ ಒಳಗೆ ಮದುವೆಯ ಸಮಾರಂಭ ನಡೆಯಬೇಕು, ಇಲ್ಲವಾದರೆ ಮೂರು ವರ್ಷ ಕಾಯಬೇಕು. ಅಮ್ಮ ಮರುಮದುವೆಗೆ ಒತ್ತಾಯಿಸುತ್ತ ನಾನು ನಿನ್ನೊಡನೆ ಎಷ್ಟು ಸಮಯ ಇರುತ್ತೇನೆ ಹೇಳು?’ ಎಂದರು. ಕೊನೆಗೆ ಅನುಶ್ರೀಯನ್ನು ಭೇಟಿಯಾಗಲು ಸಮ್ಮತಿಸಿದರು. ಅವಳು ವಿನೀತ ಪರಿವಾರದಿಂದ ಬಂದವಳು ಮತ್ತು ಆ ಹಿನ್ನೆಲೆಯಿಂದ ಇವರ ಹೋರಾಟದ ಬದುಕನ್ನು ಅರ್ಥ ಮಾಡಿಕೊಳ್ಳುವಳೆಂಬ ಭಾವನೆ ಮೂಡಿತ್ತು. ಇವರಿಗೆ ಶ್ರೀಮಂತ ಕನ್ಯೆ ಬೇಕಾಗಿರಲಿಲ್ಲ. ಮೊದಲನೆಯ ಭೇಟಿಯಲ್ಲಿ ಅನುಶ್ರೀ ತನ್ನನ್ನೇಕೆ ಮದುವೆಯಾಗಬೇಕೆಂದಿರುವಿರಿ ಎಂದು ಕೇಳಿದಳು. (ಮೊದಲ ಹೆಂಡತಿ)ಹರಿಣಾಕ್ಷಿ ಸರಳ ಹುಡಿಗೆಯಾಗಿದ್ದಳು, ಮುಂಬಯಿಯ ಮನೆಯೊಂದರಲ್ಲಿ ಅಡುಗೆ ಮಾಡುತ್ತಿದ್ದಳು. ತಮಗೆ ಸರಳ ಹುಡುಗಿ ಇಷ್ಟ ಎಂದಿದ್ದರು. ತನ್ನನ್ನು ಎಲ್ಲರೂ ತಿರಸ್ಕರಿಸಿದಾಗ ಇವರೇಕೆ ಮೆಚ್ಚಿದರು ಎಂಬ ಪ್ರಶ್ನೆ ಕೇಳಿದಳು. ತಮ್ಮಿಬ್ಬರಲ್ಲಿರುವ ಸಮಾನ ಗುಣಗಳ ಬಗ್ಗೆ ಹೇಳಿದರಂತೆ. ಅವಳನ್ನು ಕೆಲಸಕ್ಕಿಟ್ಟುಕೊಂಡಿದ್ದ ಶ್ರೀಮತಿ ನಾಯಕ್ ಮತ್ತು ಅವಳ ಹೆತ್ತವರು ಇವರ ಬಗ್ಗೆ ಸಾಕಷ್ಟು ವಿಷಯ ಕಲೆಹಾಕಿದ್ದರು. ಹಿಂದಿಯ ಐಬಿಎನ್7 ನಲ್ಲಿ ಬರುತ್ತಿದ್ದ ಜಿಂದಗಿ ಲೈವ್’ ಹಿಂದಿ ಕಾರ್ಯಕ್ರಮದಲ್ಲಿ ಶಿವರಾಮ ಮತ್ತು ಅವರ ತಾಯಿಯ ಸಂದರ್ಶನ ಬಂದದ್ದನ್ನು ನೋಡಿದ್ದರು. ಅವರ ಸಾಧನೆಯನ್ನು ಅರಿತಿದ್ದರು. ಅನುಶ್ರೀ ಮತ್ತು ಶಿವರಾಮರ ಮದುವೆ 2009ರ ಫೆಬ್ರುವರಿ 27ರಂದು ಕಾರ್ಕಳದ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಾಯಿತು.
ಅನುಶ್ರೀ ಶಿವರಾಮರ ಬಾಳಿನಲ್ಲಿ ಒಂದಾದಳು. ಅವಳಿಗೆ ಶಾಪಿಂಗ ಬಹಳ ಇಷ್ಟ. ಭಾರತೀಯ, ಅಂತೆಯೇ ಪಾಶ್ಚಾತ್ಯ ಉಡುಪುಗಳು ಇಷ್ಟವೇ. ಚೆಡ್ಡಿಗಳು, ಜೀನ್ಸ್, ಟ್ರ್ಯಾಕ್ ಸೂಟುಗಳು ಹಾಗೆಯೇ ಆಧುನಿಕ ಟಾಪ್‍ಗಳು ಇಷ್ಟ. ಅತಿಥಿಗಳನ್ನು ಸಂಭಾಳಿಸುವುದರಲ್ಲಿ, ಸಾಮಾಜಿಕ ಜೀವನದಲ್ಲಿ ಬೆರೆಯುವಲ್ಲಿ, ಮೇಲುಗೈ ಸಾಧಿಸಿದ್ದಾಳೆ. ಮುದ್ದಾದ ಎರಡು ಮಕ್ಕಳನ್ನು, ಕೀರುತಿಗೊಬ್ಬ ಮಗನನ್ನು (ರೋಹಿಲ್), ಆರತಿಗೊಬ್ಬ ಮಗಳನ್ನು(ಆರಾಧ್ಯ), ಕೊಟ್ಟಿದ್ದಾಳೆ.
“ಮಕ್ಕಳು ಸ್ಕೂಲಿಗೆ ಹೋದಾಗ ಅನುಶ್ರೀ ಲೋಖಂಡವಾಲ ಇಲ್ಲವೇ ಜುಹುವಿನಲ್ಲಿರುವ ನಮ್ಮ ಸಲೂನ್‍ಗಳಿಗೆ ಭೇಟಿ ನೀಡುವುದಿದೆ. ಅವಳಿಗೆ ಔದ್ಯಮಿಕ ಚಾಕಚಕ್ಯತೆ ಮತ್ತು ನಿರ್ವಹಣಾ ಕ್ಷಮತೆ ಸಾಕಷ್ಟು ಇದೆ. ಅವಳು ಹಣಕಾಸಿನ ವ್ಯವಹಾರವನ್ನೂ ಚಾಲಾಕಿನಿಂದ ನಿರ್ವಹಿಸುತ್ತ, ಅತ್ಯಾಧುನಿಕ ವಿನ್ಯಾಸಗಳ ಪ್ರಜ್ಞೆಯೊಂದಿಗೆ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನೂ ಅಳೆಯಬಲ್ಲವಳಾಗಿದ್ದಾಳೆ.’’ ಎನ್ನುತ್ತಾರೆ.
ಉಪಸಂಹಾರ:
ಕೊನೆಯ ನಾಲ್ಕು ಅಧ್ಯಾಯಗಳಲ್ಲಿ, ಮಾಡೆಲ್‍ಗಳ ಬಗ್ಗೆ (ಬೆಳ್ಳಿಯಿಂದ ಹಸುರಿಗೆ, ಹಳದಿಗೆ, ಗುಲಾಬಿಗೆ . . . ಬಂಗಾರಕ್ಕೆ ಕಾಯುವಿಕೆ); ತಾವು ವಾಸಿಸಿದ ಮನೆಗಳ ಪರಿಸರದ ಬಗ್ಗೆ( ಮಿನುಗುವ ನಕ್ಷತ್ರಗಳಿಗೆ ಆಕಾಶಕ್ಕೆ ತಲುಪುವ ತವಕ); ಭಂಡಾರಿ ಸಮಾಜದ ಬಗ್ಗೆ (ಪರಂಪರಾಗತ ವೃತ್ತಿಯನ್ನು ಸಜೀವವಾಗಿಡಲು ಸಮಾಜದ ಹೆಣಗಾಟ) ಬರೆಯುತ್ತಾರೆ, ಕನಸಿನ ಮನೆ ಮತ್ತಿತರ ವಿಷಯಗಳ ಬಗ್ಗೆ (ಸ್ವಾದ, ನೋಟ, ನಾದ ಮತ್ತು ಕಂಪು) ಬರೆಯುತ್ತಾರೆ.
ಶಿವರಾಮ ಭಂಡಾರಿಯವರ ಜೀವನದಷ್ಟೇ ಈ ಪುಸ್ತಕವೂ ಅಪೂರ್ವವಾಗಿದೆ.