ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಣತೆ ಹಾಡು

ಸುಮಾ ವೀಣಾ

ನರಹಳ್ಳಿಯವರ ‘ಹಣತೆ ಹಾಡು’ ಇಂದಿನ ಓದಿನ ಅಗತ್ಯ.

‘ಹಣತೆಯ ಹಾಡು’ ಶ್ರೀಯುತ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಹತ್ವದ ಕೃತಿಯಾಗಿದೆ. “ಜಿ.ಎಸ್. ಶಿವರುದ್ರಪ್ಪನವರ ಸಮಸ್ತ ಸಾಹಿತ್ಯ ಶೋಧ” ಎಂಬ ಉಪ ಶೀರ್ಷಿಕೆಯಲ್ಲಿ ಈ ಕೃತಿ ಶಿವರುದ್ದಪ್ಪನವರ ಸಮಗ್ರ ಸಾಹಿತ್ಯವನ್ನು ಅರಿಯಲು ಬಂದಿರುವ ಪ್ರೌಢ ಕೃತಿಯಾಗಿದೆ . 250 ರೂಗಳ ಬೆಲೆಯುಳ್ಳ ಈ ಪುಸ್ತಕ 2020ರಲ್ಲಿ ಪ್ರಥಮ ಮರುಮುದ್ರಣ ಕಂಡಿರುವ ಈ ಕೃತಿಯನ್ನು ಅಭಿನವ ಪ್ರಕಾಶನದವರು ಪ್ರಕಟಿಸಿದರೆ ಮುಖಪುಟ ವಿನ್ಯಾಸವನ್ನು ಅರುಣ್ ಕುಮಾರ್ ಜಿ. ಅವರು ಮಾಡಿದ್ದರೆ ಪುಸ್ತಕ ವಿನ್ಯಾಸವನ್ನು ಬ್ರಾಹ್ಮೀ ಕ್ರಿಯೇಷನ್ ಬೆಂಗಳೂರು ಇವರು ಮಾಡಿದ್ದಾರೆ .

“ಹಣತೆಯ ಹಾಡು’ ಲೇಖಕರೂ ಶ್ರೀಯುತ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಜಿ.ಎಸ್.ಎಸ್. ಅವರನ್ನು ಸಮಗ್ರವಾಗಿ ಅಧ್ಯಯನ ಮಾಡಿರುವ ನರಹಳ್ಳಿಯವರು ಕೃತಿಯ ಪ್ರವೇಶ ಭಾಗದಿಂದ ಮೊದಲ್ಗೊಂಡು ಸಮಾರೋಪ, ಅನುಬಂಧ, ಪದಸೂಚಿ ಸಹಿತ 14 ಅಧ್ಯಾಯಗಳಲ್ಲಿ ಜಿ.ಎಸ್.ಎಸ್. ಅವರನ್ನು ಸಮಗ್ರವಾಗಿ ಓದುಗರಿಗೆ ಪರಿಚಯಿಸಿದ್ದಾರೆ.ವೈಯುಕ್ತವಾಗಿ, ಸಾಮಾಜಿಕವಾಗಿ ಮತ್ತು ವ್ಯಕ್ತಿತ್ವ ಈ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಜಿ.ಎಸ್. ಎಸ್. ಅವರನ್ನು ಪರಿಚಯಿಸುತ್ತ ಅವರದು ಸಮಚಿತ್ತದ ವ್ಯಕ್ತಿತ್ವದವರು ಎಂಬುದನ್ನು ಸಮದರ್ಶಿಸಿದ್ದಾರೆ. ‘‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯ ನರಿಯಲಾಗದು’’ ಎಂಬ ಅಲ್ಲಮನ ಮಾತುಗಳು ಜಿ.ಎಸ್. ಎಸ್. ಅವರಿಗೆ ತುಂಬಾ ಪ್ರಿಯವಾದುದು. ಪರಂಪರೆ ಮತ್ತು ಆಧುನಿಕತೆ ಇವರೆಡರ ಬಗೆಗೂ ಅವರಿಗೆ ಸಮಾನ ಪ್ರೀತಿ,ಗೌರವವಿತ್ತು ಎಂಬ ಅವರ ಭಾವನಾ ವಿಶೇಷತೆಯನ್ನೂ, ಅವರ ವ್ಯಕ್ತಿತ್ವದಲ್ಲಿ ಆದರ್ಶ ಮತ್ತು ಆಶಾವಾದಗಳನ್ನು ಕೃತಿಯ ಆರಂಭದಲ್ಲಿ ನರಹಳ್ಳಿಯವರು ಹೇಳುತ್ತಾರೆ.

ತಾಯ ಮುಖವನರಸಿದೆ” ಎಂಬ ಅಧ್ಯಾಯದ ಮೂಲಕ ಜಿ.ಎಸ್.ಎಸ್. ಅವರ ಬಾಲ್ಯದಲ್ಲಿ ಶಿವಮೊಗ್ಗ ರೈಲ್ವೆ ಸ್ಟೇಷನ್ ಬಳಿ ತುಂಗಾ ನದಿ ತೀರ ಮತ್ತು ಈಸೂರಿನಲ್ಲಿ ನಡೆದ ಎರಡು ಘಟನೆಗಳೊಂದಿಗೆ ‘ಹಣತೆಯ ಹಾಡು’ ಎಂಬ ಕೃತಿ ಅನಾವರಣಗೊಳ್ಳುತ್ತದೆ. ಎರಡೂ ಘಟನೆಗಳಲ್ಲೂ ಜಿ.ಎಸ್.ಎಸ್. ಅವರು ಪ್ರಾಣಾಪಾಯಕ್ಕೆ ಸಿಲುಕಿದ್ದಾಗ ಅವರನ್ನು ರಕ್ಷಿಸುವುದು ಅವರ ತಾಯಿ. ಮರುಹುಟ್ಟಿಗೆ ಮತ್ತೆ ಮತ್ತೆ ಕಾರಣವಾದ ಎರಡು ಪ್ರಸಂಗಳನ್ನು ಜಿ.ಎಸ್.ಎಸ್ ಅವರು ತಮ್ಮ ಭಾವ ಜಗತ್ತಿನಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸುವುದನ್ನು “ಕಂಡ ಕಂಡ ಹೆಣ್ಣು ಮೊಗದಿ ತಾಯಿ ಮುಖವನಿರಿಸಿದೆ” ಎಂಬ ಮಾತಿನ ಮೂಲಕ ಕೃತಿಕಾರರು ಉಲ್ಲೇಖಿಸುತ್ತಾರೆ. ‘ತೊರೆದು ಹೋದ’ ಈ ಪದ ಪೊರೆಯವ ಶಕ್ತಿ ತಾಯಿಯನ್ನು ನಿರಂತರ ಹುಡುಕುತ್ತಿದ್ದರು ಎನ್ನುವುದರ ಮೂಲಕ ಕವಿಗಳು ಅವರ ಮಾತ್ರ ಪ್ರೇಮವನ್ನು ಅರುಹಿದ್ದಾರೆ.

ಜಿ.ಎಸ್. ಎಸ್. ಅವರು ಕಾವ್ಯ ಬರೆಯಲು ವಿಷಯಕ್ಕೆ ಶೋಧನೆ ಮಾಡುತ್ತಿರಲಿಲ್ಲ ತಮ್ಮ ಸುತ್ತ ಮುತ್ತಲೂ ನಡೆಯುವ ವಿಚಾರಗಳನ್ನೆ ವಸ್ತವಾಗಿ ಆರಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ಇಲ್ಲಿದೆ. ಇನ್ನೂ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಢಿದ್ದರು ಎಂಬುದು ಪುಟ. ಸಂ 15ರಲ್ಲಿ ತಿಳಿಯುತ್ತದೆ. ರೇವಣ್ಣ ಎಂಬ ಗಣಿತಶಿಕ್ಷಕರಿಗಿದ್ದ ಓದಿನ ಆಸಕ್ತಿ ಹಾಗು ಅವರೋದಿದ ಕುವೆಂಪು ರವರ ‘ರಕ್ತಾಕ್ಷಿ’ ನಾಟಕ ಜಿ.ಎಸ್.ಎಸ್. ಅವರ ಮೇಲೆ ಪರಿಣಾಮ ಬೀರಿದ್ದನ್ನು ಅವರೇ ತಮ್ಮ ‘ಕಾವ್ಯಾಲಾಪ’ ಕೃತಿಯಲ್ಲಿ ನೆನಪಿಸಿಕೊಂಡಿರುವ ಎಲ್ಲಿಯೂ ಪ್ರಕಟವಾಗದ
ಇರುವೆಯೊಂದು ತನ್ನ ಮರಿಗೆ
ನೀರೊಳೀಜು ಕಲಿಸಲೆಂದು
ಹರಿವ ತೊರೆಯ ತಡಿಗೆ ಬಂದು
ನಿಂತುಕೊಂಡಿತು
ಎಂಬ ಪದ್ಯದ ಮೂಲಕ ಹೇಳಿಕೊಂಡಿರುವುದನ್ನು
ನರಹಳ್ಳಿಯವರು ಇಲ್ಲಿ ಉಲ್ಲೇಖ ಸ
ಹಿತ ಹೇಳಿದ್ದಾರೆ.

ಜಿ.ಎಸ್.ಎಸ್ ಅವರ ಮೊದಲ ಸಂಕಲನ ‘ಸಾಮಗಾನ’. ಈ ಸಂಕಲನದ “ಕಡಲಿನ ಕತ್ತಲ ಗವಿಯಲ್ಲಿ” ಕವಿತೆ ಥಾಮಸ್ ಗ್ರೇ ಅವರ ಕವಿತೆಯ ಭಾವವನ್ನು ಆಧರಿಸಿ ಬರೆದದ್ದು ಎಂಬ ಮಾಹಿತಿಯನ್ನು ಕೊಡುತ್ತಾ ಆ ಕಾಲದಲ್ಲಿ ಕುವೆಂಪು, ಕೆ.ಎಸ್ ನ ಮೊದಲಾದವರು ಇಂಗ್ಲೀಷಿನಲ್ಲಿ ಕವಿತೆ ಬರೆಯಲಾರಂಭಿಸಿದರು ಆದರೆ ಜಿ.ಎಸ್ ಅವರು ಇಂಗ್ಲೀಷನ್ನು ಕನ್ನಡದಲ್ಲಿ ಬರೆದರು ಎಂಬುದನ್ನು ಹೆಮ್ಮೆಯಿಂದ ಓದುಗರಿಗೆ ಕೃತಿಕಾರರು ಹೇಳಿದ್ದಾರೆ.

ಸಾಧಾರಣ ಓದುಗರಿಗೆ ಅಥವಾ ಭಾವಗೀತೆಯ ಕೇಳುಗರಿಗೆ “ಎದೆ ತುಂಬಿ ಹಾಡಿದೆನು” ಅಂದು ನಾನು ಎಂಬ ಗೀತೆ “ಪ್ರೇಮ ಗೀತೆಯೋ? ಭಗ್ನ ಪ್ರೇಮಿಯೊಬ್ಬನ ಭಾವನೆಯೋ?” ಅನ್ನಿಸುತ್ತದೆ ಆದರೆ ಆ ಕವಿತೆಯ ಹಿಂದೆ ಜಿ.ಎಸ್.ಎಸ್. ಅವರ ಗುರುಗಳಾದ ತ.ಸು. ಶಾಮರಾಯರು ಇದ್ದರು . ಚಾಮುಂಡಿ ಬೆಟ್ಟದ ತಪ್ಪಲಲ್ಲಿ ತಮ್ಮ ಗುರುಗಳಿಗೆ ಜಿ.ಎಸ್.ಎಸ್. ಅವರು ಸಮರ್ಪಿಸಿದ ಗೀತೆ ಇದು. ಶಿಷ್ಯನ ಕವಿತೆಯನ್ನು ಶಾಮರಾಯರು ಅರ್ಧನಿಮೀಲಿತ ಕಣ್ಣುಗಳಿಂದ ಕೇಳಿದ್ದು ಎಂದು ನರಹಳ್ಳಿಯವರು ಈ ಕೃತಿಯಲ್ಲಿ ಅಷ್ಟೇ ಸಾವಧಾನವಾಗಿ ಬರೆದಿರುವುದನ್ನು ಓದಿದಾಗ ರೋಮಾಂಚನವಾಗುತ್ತದೆ. ಪುರಾಣಕಾಲದಲ್ಲಿ ಗುರು ಶಿಷ್ಯರ ಸಂಬಂಧ ಗಾಢವಾಗಿತ್ತೆಂದು ಕೇಳಿದ್ದೆವು ಅದು ಇಪ್ಪತ್ತನೆಯ ಶತಮಾನದ ನಡುಭಾಗದಲ್ಲಿಯೂ ಇತ್ತು ಅದಕ್ಕೆ ಜಿ.ಎಸ್ ಅವರೇ ಸಾಕ್ಷಿ ಎಂಬುದನ್ನು ಕೇಳಿದಾಗಂತೂ ಗುರು ಶಿಷ್ಯ ಸಂಬಂಧದ ಬಗ್ಗೆ ಗೌರವ ಭಾವನೆ ಇಮ್ಮಡಿಸುತ್ತದೆ. “ ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ” ಎಂಬುದು ಗುರುವಿನಲ್ಲಿ ಜಿ.ಎಸ್ ಅವರು ಎಂಥ ಸಮರ್ಪಣಭಾವವನ್ನು ಹೊಂದಿದ್ದರು ಎಂಬುದನ್ನು ಅರ್ಥೈಸುತ್ತದೆ.

ಜಿ.ಎಸ್.ಎಸ್. ಅವರ ಅರಂಭದ ಕವಿತೆಗಳಲ್ಲಿ ‘ಸಾತ್ವಿಕ ಶಕ್ತಿಯ’ ಉದ್ದೀಪನೆ ಹಾಗು ‘ಪ್ರಕೃತಿ ಚೆಲುವಿನ ಆರಾಧನೆ’ಯ ಜೊತೆಗೆ ‘ಹಾರೈಕೆ’ ಇರುವುದನ್ನೂ, ಹಾರೈಕೆಗೆ ಕವಿ ಜಿ.ಎಸ್.ಎಸ್. ಅವರು ಅತೀಂದ್ರಿಯ ಶಕ್ತಿಯ ಕರುಣೆಯನ್ನು , ಅಮರ್ತ್ಯದ ಶಕ್ತಿಯೊಂದನ್ನು ಆಹ್ವಾನಿಸು ವ ಬಯಕೆಯನ್ನು “ಮರ್ತ್ಯದ ಮನೆಗೆ ಅಮರ್ತ್ಯದ ಹಾಲ್” ಎಂಬ ಪದ್ಯದಲ್ಲಿ ಗುರುತಿಸಿದ್ದಾರೆ. ಇಲ್ಲಿ ಜಿ.ಎಸ್. ರಾಮಕೃಷ್ಣ ಪರಮಹಂಸರ, ವಿವೇಕಾನಂದರ, ಕುವೆಂಪುರವರ ಪ್ರಭಾವಕ್ಕೆ ಒಳಗಾಗಿರುವುದನ್ನು ಅತ್ಯಂತ ಸೂಕ್ಷ್ಮಗಹ್ರಾಹಿಯಾಗಿ ಗ್ರಹಿಸಿ ನರಹಳ್ಳಿಯವರು ಓದುಗರಿಗೆ ತಿಳಿಸಿದ್ದಾರೆ. ‘ಪ್ರಕೃತಿ ಕವಿ’ ಕುವೆಂಪು ಅವರ ಪ್ರಭಾವಕ್ಕೆ ಒಳಗಾದ ಜಿ.ಎಸ್ ಅವರ ಕವಿತೆಯನ್ನೂ ಇಲ್ಲಿ ಗಮನಿಸಬಹುದು.
ಕಟ್ಟಿಗೆಯ ಮೇಲೆ ಕಟ್ಟಿಗೆಯನ್ನು ಇಟ್ಟರೆ ಅದು ಪೆಟ್ಟಿಗೆಯಾಗಲು ಸಾಧ್ಯವಿಲ್ಲ . ಸುಸಂಘಟಿತವಾದ ಭಾವಗಳಿಂದಲೇ ರಸದ ಪ್ರಾಪ್ತಿ’ ಎಂಬುದನ್ನು ‘ಹಣತೆಯ ಹಾಡು’ ಕೃತಿಯಲ್ಲಿ ಜಿ.ಎಸ್ ಅವರ ಸಮಗ್ರ ಕಾವ್ಯದ ಹಿನ್ನಲೆಯಲ್ಲಿಯೇ ಹೇಳಲಾಗಿದೆ. ಅಲ್ಲದೇ ಜಿ.ಎಸ್ ಅವರು ಒಬ್ಬಕ್ರಾಂತಿಕಾರಿಯೂ ಹೌದು! ಎಂಬುದನ್ನೂ ತೋರಿಸಿದ ಕವಿತೆ. ‘ಜಡೆ’. ಈ ಕವಿತೆಯಲ್ಲಿ
ಚೇಳ್ ಕೊಂಡಿಯಂಥ ಜಡೆ
ಮೋಟುಜಡೆ, ಚೋಟು ಜಡೆ”

ಚಿಕ್ಕವರ ಚಿನ್ನ ಜಡೆ ಎಂಬ ಸಾಲುಗಳನ್ನು ಉಲ್ಲೇಖಿಸಿ ಜಡೆಯೊಂದು ಸಾಮಾಜಿಕ ಬದುಕಿನ ಸ್ವರೂಪವನ್ನು , ದುರಂತವನ್ನು ಬಿಂಬಿಸುವ, ಕವಿಯ ಮೂಲಭಾವ ಇಲ್ಲಿ ವಿಸ್ತಾರವಾದ ಅರ್ಥಪ್ರಾಪ್ತಿಯನ್ನು ಪಡೆಯುವ ರೀತಿಯನ್ನು ಕೃತಿಕಾರರು ವಿಷದವಾಗಿ ಹೇಳಿದ್ದಾರೆ.
ಮಗುವನ್ನು ವ್ಯವಸ್ಥೆಯನ್ನು ವಿರೋಧಿಸುವ, ಅರ್ಥಪೂರ್ಣ ಬದಲಾವಣೆಯನ್ನು ತರುವ ಪ್ರಗತಿಪರ “ಕ್ರಾಂತಿಕಾರಿ” ಎಂದು ಭಾವಿಸಿರುವುದು ಶಿವರುದ್ರಪ್ಪನವರ ವಿಶೇಷವಾಗಿದೆ.

ಒಬ್ಬ ಕವಿ, ಕಲಾವಿದ ಯಾರೇ ಆಗಿರಬಹುದು ಆತನಿಗೆ ಸರಿಯಾದ ಮಾರ್ಗದರ್ಶಕರು ಬೇಕು. ತಪ್ಪು- ಒಪ್ಪುಗಳನ್ನು ಹೇಳಿ ಆ ವ್ಯಕ್ತಿಯನ್ನು ಉತ್ತಮವಾಗಿ ರೂಪಿಸುವ ಜವಾಬ್ದಾರಿ ಗುರುಗಳ ಮೇಲೆ ಇರುತ್ತದೆ ಅಂಥ ಗುರುತರ ಜವಾಬ್ದಾರಿಯನ್ನು ಜಿ.ಎಸ್.ಎಸ್. ಅವರ ಕವನ ಸಂಕಲನಗಳಿಗೆ ಮುನ್ನುಡಿ ಬರೆಯುವುದ ಮೂಲಕ ಕುವೆಂಪು ಹಾಗು ಪು.ತಿ.ನ ನಿಭಾಯಿಸಿದರು ಎಂಬುದನ್ನು ಕೃತಿಕಾರರು ಇಲ್ಲಿ ಹೇಳಿದ್ದಾರೆ.

ನವೋದಯ, ನವ್ಯ… ಹೀಗೆ ಎಲ್ಲಾ ಕಾಲಘಟ್ಟಗಳಲ್ಲೂ ಕ್ರಿಯಾಶೀಲರಾಗಿದ್ದ ಜಿ.ಎಸ್.ಎಸ್ ಅವರಿಗೆ ಅವರೆಡೂ ಮಾರ್ಗವನ್ನು ಬಿಟ್ಟು ಅದಕ್ಕಿಂತ ಭಿನ್ನವಾದ ಕಾವ್ಯ ಮಾರ್ಗ ಹೊಳೆದುದನ್ನು ಇಲ್ಲಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಬರುವ ಇತರ ಕವಿಗಳೆಂದರೆ ಕೆ.ಎಸ್ ನರಸಿಂಹಸ್ವಾಮಿ, ಪು.ತಿ.ನ. ಮತ್ತು ಚನ್ನವೀರಕಣವಿಯವರು. ಇವರುಗಳನ್ನು ವಿಮರ್ಶಕ ನರಹಳ್ಳಿಯವರು “ಹೊಸ ಕಾವ್ಯ ಮಾದರಿಯ ಪ್ರಮುಖ ಪಥಿಕರು” ಎಂದು ಬರೆದಿದ್ದಾರೆ. ಸ್ವಾತಂತ್ರ್ಯ ಪೂರ್ವ ಅನ್ನುವುದಕ್ಕಿಂತ ಸ್ವಾತಂತ್ರ್ಯಾನಂತರದ ನಿರಾಶಾಯದಾಯಕ ಬದುಕಿನ ಕರಿನೆರಳು ಕವಿಪ್ರಜ್ಞೆಯನ್ನು ಕಾಡಿ ಅದು ಇತರ ಅಪಸವ್ಯಗಳಿಗೆ ಎಡೆ ಮಾಡಿಕೊಡದೆ ಭವಿಷ್ಯದ ಬಗೆಗಿನ ಹೊಸ ಭರವಸೆಯ ಆಶಾವಾದವನ್ನು ಮೂಡಿಸಿತು ಎಂಬ ವಿವರಲ್ಲಿದೆ.

ಸಂಜೆ ಬಾನಿನ ತುಂಬ ಹಗಲ ನೆನಪಿನ ಚಿತ್ರ:
ಶಿವರುದ್ರಪ್ಪನವರು ಸಮಕಾಲೀನ ಸಾಹಿತ್ಯ ಪರಿಸರದಲ್ಲಿ ನಡೆಯುತ್ತಿದ್ದ ಬದಲಾವಣೆಗಳನ್ನು ಗಮನಿಸುತ್ತಿದ್ದರು. ಅದನ್ನು ಸಂಪೂರ್ಣ ತಮ್ಮ ಕಾವ್ಯಗಳಲ್ಲಿ ತರದೆ ತಾವೇ ಸ್ಥಾಪಿಸಿಕೊಂಡಿದ್ದ ಶೈಲಿಯಲ್ಲಿಯೇ ನಿರಂತರ ಬರೆದದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ‘ಮಬ್ಬಿನಿಂದ ಮಬ್ಬಿಗೆ’ ಕವಿತೆ ಯಲ್ಲಿ ಜಿ.ಎಸ್. ಅವರು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಏಳುಗಂಟೆಯವರೆಗಿನ ಅವಧಿಯಲ್ಲಿ, ದಿನಮಾನದ ಚಟುವಟಿಕೆಯಲ್ಲಿ ಮನುಷ್ಯನ ಇಡೀ ಬದುಕಿನ ಚಿತ್ರವನ್ನು ವಿವರಿಸಿರುವ ರೀತಿಯನ್ನು ನರಹಳ್ಳಿಯವರು ಸಮಗ್ರವಾಗಿ ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿ ಬರುವ ‘ಜೇನುಗೂಡಿನ’ ಪ್ರತಿಮೆ, ‘ಕದಡು ನೀರಿನ ಕೊಳದಿ ಮುಖದ ನೆರಳನು ನೋಡು ಕ್ರಾಪು ತಿದ್ದುವ ಚಾಳಿ’ ಸಾಲುಗಳನ್ನು ಹಿಂದೆ ಓದಿದಾಗ ಸಾಮಾನ್ಯ ಅನ್ನಿಸಿದ್ದುವು. ಆದರೆ ‘ಹಣತೆಯ ಹಾಡು’ ಕೃತಿಯಲ್ಲಿ ಇನ್ನೊಮ್ಮೆ ಓದಿದಾಗ ತಾರುಣ್ಯ ಜಗತ್ತನ್ನು ಇದಕ್ಕಿಂತ ಮೋಹಕವಾಗಿ ಕಟ್ಟಿಕೊಡಲು ಇನ್ಯಾರಿಂದ ಸಾಧ್ಯ ಅದು ಶಿವರುದ್ರಪ್ಪನವರಿಂದ ಮಾತ್ರ ಸಾಧ್ಯ!ಅದನ್ನು ಪುನಃದರ್ಶಿಸಿದ ಕೃತಿಕಾರರಿಂದ ಮಾತ್ರ ಸಾಧ್ಯ! ಅನ್ನಿಸುತ್ತದೆ. ಅದಕ್ಕೆ ಅಲ್ವೇ ಕವಿಗಿಂತ ವಿಮರ್ಶಕನ ಪ್ರತಿಭೆ ಸಾಹಿತ್ಯಕ್ಕೆ ಮಹತ್ವವನ್ನು ಒದಗಿಸುತ್ತದೆ !ಎನ್ನುವುದು. ಹಾಗೆ ಇಲ್ಲಿ ಬಂದಿರುವ ಗಡಿಯಾರ ಎಂಬ ಪ್ರತಿಮೆಯೂ ಕೂಡ.

ಹರಯದ ಉತ್ಸಾಹದ ಸಂಭ್ರಮದಲ್ಲಿ ಕಾಲ ಸರಿದದ್ದು ತಿಳಿಯುವುದೇ ಇಲ್ಲ ಗಡಿಯಾರ ಮುಂದೆ ಸರಿದರೂ ಯಾರೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ ಹಾಗಂತ ಗಡಿಯಾರವನ್ನೇ ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ. ಇದು ಮನುಷ್ಯಸಹಜ ಸ್ವಬಾವ ಇದನ್ನು ಪ್ರತಿನಿಧಿಸುವಂತೆ ಇರುವುದು ‘ಹಣತೆಯ ಹಾಡು’ ಕೃತಿಯ ಪುಟ ಸಂ. 44. ಬದುಕಿಗೊಂದು ನೆಲೆ ಬೇಕು , ನಂಬಿಕೆ ಬೇಕು ಆ ನಂಬಿಕೆಯಲ್ಲಿ ಸತ್ವವಿರಬೇಕು ಆಗ ಬದುಕು ಸಾರ್ಥಕವಾಗುತ್ತದೆ ಇದು ಶಿವರುದ್ರಪ್ಪನವರು ಬದುಕನ್ನು ಗ್ರಹಿಸಿದ ರೀತಿ ಎಂಬುದು ‘ ಸಂಜೆದಾರಿ’ ಕವಿತೆಯಲ್ಲಿ ವ್ಯಕ್ತವಾಗಿರುವುದನ್ನು ಆಳಕ್ಕಿಳಿದು ಇಲ್ಲಿ ವಿಶ್ಲೇಷಿಸಿದೆ.
ನಿಗಿನಿಗಿ ಉರಿವ ಕೆಂಡ;

ಈ ಅಧ್ಯಾಯದಲ್ಲಿ ನಮ್ಮ, ದಿನನಿತ್ಯದ ಬದುಕಿನಲ್ಲಿ “ ಕವಿತೆಯಿದೆ ಎಂದು ಗಾಂಧೀಜಿಯವರು ಹೇಳಿರುವುದನ್ನು ಶಿವರುದ್ರಪ್ಪನವರು ಹೇಗೆ ನಂಬಿದ್ದರು ಎಂಬ ವಿಚಾರವೂ ಉಲ್ಲೇಖವಾಗಿದೆ . ನೆರುಡಾನ ಹಾಗೆ ದೈನಿಕವನ್ನು ಕಾವ್ಯವಾಗಿಸಿದ ಶಿವರುದ್ರಪ್ಪನವರ ಕಾವ್ಯ ಮಾದರಿಗಳನ್ನು ಇಲ್ಲಿ ತೌಲನಿಕವಾಗಿ ಹೇಳಲಾಗಿದೆ.
ದಾರಿ ನೂರಾರಿವೆ ಬೆಳಕಿನರಮನೆಗೆ
ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ
ನನಗಿಲ್ಲ.ಎಂಬ ಸಾಲುಗಳನ್ನು ಕೃತಿಕಾರರು ಉಲ್ಲೇಖಿಸಿ ಜಿ.ಎಸ್. ಎಸ್. ಅವರ ಮೇಲೆ ಆದ ನವ್ಯದ ಪ್ರಭಾವವನ್ನೂ,ಕಾವ್ಯ ಶೈಲಿಯಲ್ಲಿರುವ ವಿಡಂಬನೆಯನ್ನೂ, ಸಹಜವಾಗಿಯೇ ಓದುಗರಿಗೆ ಪರಿಚಯಿಸಿದ್ದಾರೆ.

ದಟ್ಟ ಕತ್ತಲಿನ ಅಟ್ಟಹಾಸದ ನಡುವೆ…….. ಮುಂತಾಗಿ ಕವಿಯ ಸಾಲನ್ನು ಉಲ್ಲೇಖಿಸಿ ಎಂಥ ಕತ್ತಲೆಯಲ್ಲಿಯೂ ಹಣತೆ ಹಚ್ಚಿಯಾದರೂ ಕತ್ತಲೆಯನ್ನು ಎದುರಿಸುತ್ತೇನೆ ಎಂದು ಹೊರಟ ಜಿ.ಎಸ್.ಎಸ್ ಅವರ ದಿಟ್ಟತನವನ್ನು ಆಧುನಿಕರಿಗೆ ಅಷ್ಟೇ ನೆರವಾಗಿ ದಾಟಿಸಿರುವ ನರಹಳ್ಳಿಯವರಿಗೆ ಓದುಗರು ಕೃತಜ್ಞರಾಗಿರಬೇಕು ಅನ್ನಿಸುತ್ತದೆ. ಕವಿಗಳು ಇಲ್ಲಿ ಬರೆ ಉದಾಹರಣೆಯಾಗಿ ಪ್ರವಹಿಸಿಲ್ಲ. ಆಧುನಿಕ ಕತೆಗಾರರಲ್ಲಿ ಪ್ರಮುಖರಾಗಿರುವ ಅಬ್ದುಲ್ ರಶೀದ್ ಹೇಳುವ ಮಗುವನ್ನಪ್ಪಿಕೊಂಡು ಊರವರ ಶಿಕ್ಷೆಯಿಂದ ಪಾರಾಗುವ ಚಾಣಾಕ್ಷನ ತಂತ್ರಗಾರಿಕೆಯನ್ನು ಕುರಿತೂ ಮಾತನಾಡುತ್ತಾರೆ. ನಮ್ಮ ಸಮಾಜದ ಖಳನಾಯಕರೂ ಮೌಲ್ಯ ಎಂಬುದನ್ನು ಎದೆಗವುಚಿಕೊಂಡು ಶಿಕ್ಷೆಯಿಂದ ಪಾರಾಗುತ್ತಿರುವುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.
ಹಾಗೆ ಸಮಾಜವನ್ನು ವಿಡಂಬಿಸಿದ ಶ್ರೇಷ್ಟ ಕವಿತೆಗಳಲ್ಲಿ ‘ಭೀಮಾಲಾಪವೂ’ ಒಂದು ಸಾತ್ವಿಕ ಶಕ್ತಿಯ ಎದುರು ಎಂಥೆಂಥವೋ ಬಂದು ಕೆಡಿಸಿ ಹೊಲಸೆಬ್ಬಿಸುವುದನ್ನೂ, ತೋಳ್ಬಲ ಇದ್ದರೂ, ಮನೋಬಲ ಇದ್ದರೂ ವಿಷಮ ಸ್ಥಿತಿಯನ್ನು ದಾಟಲಾಗದ ಭೀಮನಂಥ ಅಜ್ಞಾತವಾಸಿಗಳು ಅದೆಷ್ಟೋ ಇದ್ದಾರೆ ಎಂದಿಲ್ಲಿ ಹೇಳಿರುವುದು ಇನ್ನಷ್ಟು ಚಿಂತನೆಗೆ ಈಡುಮಾಡುತ್ತದೆ. ಜೊತೆಗೆ ಇಂದಿನ ಅಪಸವ್ಯಗಳ ಬಗ್ಗೆ ಮತ್ತೆ ಇಣುಕಿ ನೋಡಿ ಅವಲೋಕನ ಮಾಡುವಂತೆ ಮಾಡುತ್ತದೆ. ನೈತಿಕತೆಗೆ ಕಟ್ಟು ಬಿದ್ದ ವ್ಯಕ್ತಿಗಳ ಸ್ಥಿತಿಯನ್ನು ಈ ಕವಿತೆ ಧ್ವನಿಸುತ್ತದೆ.

ಆಧುನಿಕ ಜಗತ್ತಿನಲ್ಲಿ ಮನುಷ್ಯ ಸೃಜನಶೀಲವಾಗಿರುವುದಕ್ಕಿಂತ ಕೃತಕವಾಗಿರುವುದೇ ಹೆಚ್ಚು ಎಂಬುದನ್ನು ಪುಟ. ಸಂ 65 ರಲ್ಲಿ ನರಹಳ್ಳಿಯವರು ಚಂದ ವಿಶ್ಲೇಷಿಸಿದ್ದಾರೆ…
ಕುಂಡದ ಗಿಡಕ್ಕೇನು ಗೊತ್ತುಂಟು
ತಾಯ್ನೆಲದ ಜಲದ ಜೀವಂತ ಪ್ರಜ್ಞೆ
ದಿನಕ್ಕೊಮ್ಮೆ ಕ್ರಮಬದ್ಧವಾಗಿ ಹನಿಸಿದ
ನಲ್ಲಿಯ ನೀರು”

ಎಂಬ ಸಾಲುಗಳ ಮೂಲಕ. ಜೊತೆಗೆ ಇಲ್ಲಿ ಆಧುನಿಕ ಬದುಕಿನ ಅಸಹಜ ಜೀವನ ಕ್ರಮ ಬಂಧ, ನಿರ್ಬಂಧಗಳು ಧ್ವನಿತವಾಗಿವೆ. ಅಸಹಜ ಬದುಕಿನ ರೂಪಾಂತರವೇ ನಗರಬದುಕು , ಯಾಂತ್ರಿಕ ಬದುಕು. ಇದನ್ನು ಯಾವುದೇ ಭಾವನೆಗಳಿಲ್ಲದೆ ನಿರ್ಭಾವವಾಗಿ ವ್ಯಾವಹಾರಿಕ ಅರ್ಜಿಯ ಧಾಟಿಯಲ್ಲಿ ಹೇಳುವ ಕವಿತೆ ‘ಮುಂಬೈ ಜಾತಕ’ ಈ ನಗರವಾಸಿಗಳ ಜಾತಕ ಕೇವಲ ಮುಂಬೈನಂಥ ನಗರಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಎಲ್ಲಾ ಬೃಹತ್ ದೇಶ, ವಿದೇಶಗಳ ಮಹಾನಗರಗಳ ಬದುಕಿಗೂ ಅನ್ವಯವಾಗುತ್ತದೆ ಎಂಬುದನ್ನು ಕೃತಿಕಾರರು ಮನದಟ್ಟು ಮಾಡಿದ್ದಾರೆ. “ಹಾಸುಗಂಬಿಯ ಹಾಗೆ ತತ್ತರಿಸುವುದು” ಎಂಬ ಸಾಲು ನಗರವಾಸಿಯ ದುರಂತ ಎಂಬ ಭಾವನೆಯನ್ನು ವಿಸ್ತರಿಸಿ ಹೇಳುತ್ತದೆ.ತೇನವಿನಾ ತೃಣಮಪಿನಚಲತಿ ಎಂಬಂತೆ “ಪ್ರೀತಿ ಇಲ್ಲದ ಮೇಲೆ” ಏನಿದೆ? ಏನೂ ಇಲ್ಲ. ಅದೇ ಹೆಸರಿನ ಶೀರ್ಷಿಕೆ ಗೀತೆಯ ದಾರಾವಾಹಿಯನ್ನು ನೋಡಿದ್ದು ನೆನಪಿದೆ. ಆದರೆ ಪ್ರೀತಿ ಎಂಬುದು ನಿತ್ಯ ಸಂಜೀವಿನಿಯಾಗಿ ಮಳೆಯಲ್ಲಿ, ಬೆಳೆಯಲ್ಲಿ, ಬದುಕಲ್ಲಿ, ಗಡಿಯಲ್ಲಿ ಇರಲೇಬೇಕು ಎಂಬುದನ್ನು ಮತ್ತೆ ಮತ್ತೆ ಅನುಸಂಧಾನಿಸಲು ಮತ್ತೆ ಮತ್ತೆ ಅವಕಾಶ ಸಿಗುವುದು ‘ಹಣತೆಯ ಹಾಡು’ ಕೃತಿಯನ್ನು ಓದಿದ ಮೇಲೆಯೇ.

ವಸಂತ ಮೂಡುವುದೆಂದಿಗೆ ಅಧ್ಯಾಯದಲ್ಲಿ ಆಧುನಿಕ ಮನುಷ್ಯ ಮಾಡಿದ್ದೆಲ್ಲವೂ ವ್ಯರ್ಥ. ದೇಶಾದ್ಯಂತ ನಾವು ಅಣೆಕಟ್ಟನ್ನು ನಿರ್ಮಾಣ ಮಾಡಿದ್ದೇವೆ ಸರಿ! ಆದರೆ ಬೆಳೆದೆದ್ದೇನನ್ನು? ಎಂಬ ಪ್ರಶ್ನೆ ಓದುಗರನ್ನು ಬಹುವಾಗಿ ಕಾಡುತ್ತದೆ . ಪ್ರಜೆಗಳ ಅಭಿವೃದ್ಧಿಯ ಹೆಸರಿನಲ್ಲಿ ದಿನೇ ದಿನೇ ಎತ್ತರಿಸಿಕೊಳ್ಳುತ್ತಿರುವವರು ಯಾರು? ಯಾರೆಲ್ಲ? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ಹಾಕಿಕೊಳ್ಳಬೇಕಾಗಿದೆ ಅಂಥ ಸವಾಲುಗಳ ಪಟ್ಟಿ ಈ ಕೃತಿಯೋದಿನಲ್ಲಿ ಓದುಗರಿಗೆ ಲಭ್ಯವಾಗುತ್ತದೆ. ಬರಗಾಲದ ಬೇಗುದಿಯಲ್ಲಿ ರೈತನಿದ್ದಾಗ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು ಹೇಳಿದ “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಗಳ ಚೆಲ್ಲಿ” ಎಂಬ ಸಾಲುಗಳು ಜಿ.ಎಸ್.ಎಸ್ ಅವರನ್ನು ಬಹುವಾಗಿ ಕಾಡಿರುವ ಕುರಿತು ಸಂಶೋಧನಾತ್ಮಕ ದೃಷ್ಟಿಯಲ್ಲಿಯೇ ಓದುಗರನ್ನು ನರಹಳ್ಳಿಯವರು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.
ಕನ್ನಡ ಪರಂಪರೆಯ ಚರಿತ್ರೆ;

ಯಾವುದೇ ಸೃಜನಶಿಲಸಾಹಿತಿ ಪರಂಪರೆಯ ಸಾಹಿತ್ಯವನ್ನು ಅದರ ಚರಿತ್ರೆಯನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುವ ಗುಣವನ್ನು ಹೊಂದಿರುತ್ತಾನೆ ಎಂಬುದಕ್ಕೆ ಜಿ.ಎಸ್.ಎಸ್ ಅವರ ಸಾಹಿತ್ಯವೇ ಸಾಕ್ಷಿಯಾಗಿದೆ ಅದನ್ನು ಸಾಹಿತ್ಯ ಚರಿತ್ರೆಯ ಕಾಲಾನುಕ್ರಮಣಿಕೆಯಲ್ಲಿಯೇ ಸಂಗ್ರಹಿಸಿ ನೀಡಿರುವುದು ಓದುಗರಿಗೆ ಇಲ್ಲಿ ಗ್ರಹಿಕೆಗೆ ಸುಲಭವಾಗಿದೆ. ವಚನಕಾರರ ಧೋರಣೆಗಳು, ಹರಿಹರನ ರಗಳೆಗಳು, ರತ್ನಾಕರವರ್ಣಿಯ ‘ಭರತೇಶ ವೈಭವ’, ಲಕ್ಷ್ಮೀಶನ ‘ಜೈಮಿನಿಭಾರತ’ದ ಪ್ರಸಂಗಗಳು, ಅಕ್ಷಯ ವಸ್ತ್ರದ ಪ್ರಸಂಗಗಳು ಇಲ್ಲಿ ಉಲ್ಲೇಖವಾಗಿವೆ. ಸಾಹಿತ್ಯದ ವಿದ್ಯಾರ್ಥಿಯೊಬ್ಬ ಉತ್ತಮ ವಿಮರ್ಶಕನಾಗಲು ಜಿ.ಎಸ್.ಎಸ್. ಅವರನ್ನು ಮಾದರಿಯಾಗಿಸಿಕೊಳ್ಳಬೇಕು ಎಂಬುದನ್ನು ನರಹಳ್ಳಿಯವರು ತೌಲನಿಕ ಅಧ್ಯಯನ, ಪರಂಪರೆಯ ಅರಿವು, ಅಭಿವ್ಯಕ್ತಿಯಲ್ಲಿ ಖಚಿತತೆ, ಫೂರ್ವಸಿದ್ಧತೆ, ಇತ್ಯಾದಿ ವಿಭಾಗಗಳಲ್ಲಿ ಚರ್ಚಿಸಿ ‘ಸತ್ಯಸಾಧಕ ಹರಿಶ್ಚಂದ್ರ” , ‘ಸಾಹಿತ್ಯ ಜೀವನದ ಗತಿಬಿಂಬ’ ಮುಂತಾದ ಲೇಖನಗಳ ಮಾಹಿತಿ ನೀಡಿರುವುದು ಉತ್ತಮವಾಗಿದೆ. ವಿಮರ್ಶೆಯ ಪೂರ್ವ ಪಶ್ಚಿಮ ಕೃತಿ , ಕುವೆಂಪುರವರ ರಾಮಾಯಣದರ್ಶನಂ ಅನ್ನು ಕೆ. ನರಸಿಂಹಮೂರ್ತಿಯವರು ಮಿಲ್ಟನ್ ಕೃತಿಯೊಂದಿಗೆ ಹೋಲಿಸಿ ಬರೆಯುವುದು ಅದಕ್ಕೆ “ಮಲೆಯನಾಡೆನಗೆ, ತಾಯಿಮನೆ, ಕಾಡು ದೇವರ ಬೀಡು……….” ಎಂದು ಉತ್ತರಿಸಿದ ನರಸಿಂಹಮೂರ್ತಿಯವರ ಧ್ಯೇಯ ವಿಮರ್ಶಕರಿಗೆ ಹೊಸ ತಿಳಿವನ್ನು ಕೊಡುತ್ತದೆ. ಲೋಹಿಯಾರವರು, ಅಡಿಗರು ಕೂಡ ಜಿ.ಎಸ್ ಅವರ ಭಾವದೀಪ್ತಿಯಲ್ಲಿದ್ದರು ಎಂಬುದನ್ನು ನರಹಳ್ಳಿಯವರು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಹೊಸ ಎಚ್ಚರ ಭರವಸೆಯ ಕನಸು ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂಬುದನ್ನು ಮತ್ತೆ ಮತ್ತೆ ನಿದರ್ಶನಗಳ ಮೂಲಕ ಹೇಳಿದವರು ಜಿ.ಎಸ್ ರವರು ಅದನ್ನು ನರಹಳ್ಳಿಯವರು ಈ ಕೃತಿಯಲ್ಲಿ ಔಚಿತ್ಯವರಿತು ಪುನರುಚ್ಛರಿಸಿದ್ದಾರೆ.

ಕನ್ನಡ ಮನೀಮಾಂಸೆಯ ಹುಡುಕಾಟದ ಹಾದಿಯಲಿ;
ಎಂಬ ಅಧ್ಯಾಯದಲ್ಲಿ ಜಿ.ಎಸ್.ಎಸ್. ಅವರ ಸಂಶೋಧನಾ ಗ್ರಂಥ ‘ಸೌಂದರ್ಯ ಸಮೀಕ್ಷೆ’, ಕಾವ್ಯಾರ್ಥ ಚಿಂತನ ಮೊದಲಾದವುಗಳ ಕುರಿತು ವಿವರವಾಗಿ ಚರ್ಚಿಸಿಲಾಗಿದೆ. ಸ್ಫೂರ್ತಿತತ್ವ, ಪ್ರತಿಭೆ, Genious, Intuition, Imagination ಮುಂತಾದ ಪದಗಳಿಗೆ ಇಲ್ಲಿ ಸರಿಯಾದ ವಿವರಣೆಯನ್ನು ನೀಡಲಾಗಿದೆ.,

ಶಾಸನಸಾಹಿತ್ತ್ಯ, ಕವಿರಾಜಮಾರ್ಗ, ದಂಡಿ, ವಾಮನ , ಪಂಒಪ, ವಚನಕಾರರು, ಹರಿಹರ, ರಾಘವಾಂಕ, ಕುಮಾರವ್ಯಾಸ, ದಾಸಸಾಹಿತ್ಯ, ಸರ್ವಜ್ಞ, ರತ್ನಾಕರವರ್ಣಿ, ಲಕ್ಷ್ಮೀಶ, ಬಿ.ಎಂ.ಶ್ರೀ, ಗೋವಿಂದಪೈ, ಕುವೆಂಪು, ಬೇಂದ್ರೆ,. ಮಾಸ್ತಿ, ಕೀರ್ತಿನಾಥ ಕುರ್ತಕೋಟಿ, ವೀಸಿ ಎಕ್ಕುಂಡಿ,ಅಡಿಗ, ಅರಿಸ್ಟಾಟಲ್ ಟಾಲಸ್ಟಾಯ್, ಶೇಕ್ಸ್ಪಿಯರ್, ಎಲಿಯಟ್, ನೆರೂಡ, ಹೀಗೆ ಸಾಹಿತ್ಯಪ್ರಮಥರ ಪರಂಪರೆಯನ್ನೇ ದರ್ಶಿಶಿಸಿರುವ ‘ಹಣತೆಯಹಾಡು’ ಕೃತಿ ನಿಜಅರ್ಥದಲ್ಲಿ ಅಧ್ಯಯನಶೀಲ ಮನಸ್ಸುಗಳಿಗೆ ಹಣತೆಯಂತೆಯೇ ಮಾರ್ಗದರ್ಶಕವಾಗಿದೆ. ‘ಹಣತೆಯ ಹಾಡು’ ಕೃತಿ ಜಿ.ಎಸ್.ಎಸ್. ಹಾಗು ನರಹಳ್ಳಿಯವರ ಪುಟ್ಟ ಸಂಭಾಷಣೆಯೊಂದಿಗೆ ಮುಕ್ತಾಯವಾಗುತ್ತದೆ. ಅವರುಗಳ ಸಂಭಾಷಣೆಯಂತೆ ‘ದೀಪದ ಹೆಜ್ಜೆ’, ‘ವ್ಯಕ್ತಮಧ್ಯೆ’ ಬೇಂದ್ರೆಯವರ ‘ಜೋಗಿ’, ಕುವೆಂಪುರವರ ‘ದೇವರು ರುಜು ಮಾಡಿದನು’ ಪುತಿನ ‘ಚಿಕುಹೂ’ ಜಿ.ಎಸ್.ಎಸ್ ಅವರ ಇಷ್ಟದ ಕವಿತೆಗಳಾಗಿ ಉಲ್ಲೇಖವಾಗಿವೆ. ಇಲ್ಲಿ ಕವಿಗೆ ಕವಿ ಮಣಿಯುತ್ತಾನೆ ಎಂಬ ಭಾವ ವ್ಯಕ್ತವಾಗಿದೆ. ರಾಜಕೀಯ ಸಂಬಂಧದ ಕುರಿತು ಕೇಳಿದಾಗ ಪಂಪನನ್ನೆ ಇಲ್ಲಿ ರಾಷ್ಟ್ರಕವಿಗಳು ಉದಾಹರಿಸಿದ್ದಾರೆ. ಅವರನ್ನು ಕಡೆಯವರೆಗೂ ಕಾಡಿದ್ದು ಮೌಲ್ಯಗಳ ಅಧಃಪತನ, ಇಂದಿನ ಯುವಕರಿಗೆ ನಾಯಕರಿಲ್ಲದೇ ಇರುವ ಕೊರಗು . ದೈಹಿಕವಾಗಿ ಅಗಲಿದ್ದರೂ ಸಾಹಿತ್ಯಿಕವಾಗಿ ಅಮರವಾಗಿರುವ ಬತ್ತದ ಚೈತನ್ಯ. ಜಿ.ಎಸ್.ಎಸ್. ಅವರ ಅಧ್ಯಯನ ‘ಹಣತೆಯ ಹಾಡು’ ಕೃತಿಯ ಮೂಲಕ ಸಾಹಿತ್ಯಾರ್ಥಿಗಳಿಗೆ ಆಗುತ್ತದೆ. ಇನ್ನೂ ಕಲಿಯುವ ದಾಹವಾವಿರ್ಭವಿಸಿದರೆ ಅದಕ್ಕೇ ಪೂರಕವಾಗಿರುವ ಪುಸ್ತಕಗಳ ಪಟ್ಟಿಯನ್ನು ನಾಲ್ಕುಪುಟಗಳಲ್ಲಿ ನರಹಳ್ಳಿಯವರು ನೀಡಿದ್ದಾರೆ ಓದುಗರು ಪ್ರಯೋಜನ ಪಡೆದುಕೊಳ್ಳಬಹುದು.

ಕಾವ್ಯಗಳನ್ನು, ಕವನ ಸಂಕಲನಗಳನ್ನು ಇರಿಸಿಕೊಂಡು ಜಿ.ಎಸ್ ಅವರ ಅಧ್ಯಯನ ಮಾಡುವುದಕ್ಕಿಂತ ‘ಹಣತೆಯ ಹಾಡು’ ಅಕ್ಷರಶಃ ಜಿ.ಎಸ್ .ಎಸ್ ಅವರನ್ನು ಅರಿಯಲು ಹಣತೆಯಂತೆ ಮಾರ್ಗದರ್ಶನ ಮಾಡುತ್ತದೆ. ಸಾಹಿತ್ಯಾರ್ಥಿಗಳಿಗೆ ಇಂಥ ಕೃತಿಗಳು ಅತೀ ಅವಶ್ಯಕ . ಈ ಕೊರತೆಯನ್ನು ಖ್ಯಾತ ವಿಮರ್ಶಕರಾದ ನರಹಳ್ಳಿಯವರು ಕುವೆಂಪು, ಕೆ.ಎಸ್.ನ ಮುಂತಾದ ಮಹನೀಯ ಕವಿಗಳ ಸಮಗ್ರ ಅಧ್ಯಯನ ಮಾಡಿ ಕೃತಿ ರೂಪದಲ್ಲಿನೀಡಿರುವುದು ಹೆಮ್ಮೆಯ ವಿಚಾರವಾಗಿದೆ.
ಜಿ.ಎಸ್. ಅವರ ಕಾವ್ಯದಲ್ಲಿ ಜೀವನದ ಎಲ್ಲಾ ಪ್ರಕಲ್ಪಗಳು, ಪರಿಪ್ರೇಕ್ಷಗಳು ಕಾವ್ಯಧಾರೆಯಾಗಿ ವಿಹರಿಸಿರುವಿದನ್ನು ನರಹಳ್ಳಿಯವರು ಅನನ್ಯವಾಗಿ ವಿವರಿಸಿದ್ದಾರೆ.
ಹಣತೆ ಹಚ್ಚುತ್ತೇನೆ ನಾನೂ
ಕತ್ತಲನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ:
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ..”

ಇದು ಜಿ.ಎಸ್.ಎಸ್ ಅವರು ವಾಸ್ತವ
ದ ತಳಹದಿಯ ಮೇಲೆ ಬರೆದಿರುವ ಸಾಲುಗಳು ವರ್ತಮಾನದ ಅನಪೇಕ್ಷಿತ ತಲ್ಲಣಗಳಿಗೆ ಅವರೆ ತೋರಿಸುತ್ತಿರುವ ಮಾರ್ಗದರ್ಶನ ಎಂಬ ಹಣತೆ . ನರಹಳ್ಳಿಯವರು ಕನ್ನಡ ವಿದ್ವತ್ ಪರಂಪರೆಯ ಭಾಗವಾದ ಕುರ್ತಕೋಟಿ ಮತ್ತು ಜಿ.ಎಸ್.ಎಸ್ ಅವರ ಮಾದರಿಯನ್ನು ಮುಂದುವರೆಸುತ್ತಿರುವ ಪ್ರಮುಖ ಧ್ವನಿ. ತತ್ಫಲವಾಗಿ ಜಿ.ಎಸ್.ಎಸ್. ಅವರ ಕುರಿತ ತಮ್ಮ ಅಧ್ಯಯನವನ್ನೇ ನರಹಳ್ಳಿಯವರು ಹಣತೆಯಹಾಡಾಗಿ ಅಕ್ಷರಗಳಲ್ಲಿ ಕಟ್ಟಿ ಕೊಟ್ಟಿರುವುದು ಕನ್ನಡ ಸಾರಸ್ವತ ಲೋಕದ ಗರಿಮೆಯೇ ಸರಿ!