- ಡಾ. ಅರವಿಂದ ಮಾಲಗತ್ತಿ ಬರೆದ ಹೊಸ ನಾಟಕದ ಕುರಿತು - ಅಕ್ಟೋಬರ್ 11, 2022
- ಸಾವಿತ್ರಿಬಾಯಿ ಫುಲೆ : ಕ್ರಾಂತಿಯ ದೀಪಮಾಲೆ - ಸೆಪ್ಟೆಂಬರ್ 8, 2022
- ಬರಗೂರರ ´ಪರಂಪರೆಯೊಂದಿಗೆ ಪಿಸುಮಾತು´ - ಆಗಸ್ಟ್ 23, 2022
ಹಾವಳಿ
ಲೇ: ಪ್ರೊ. ಮಲ್ಲಿಕಾರ್ಜುನ ಹಿರೇಮಠ
ಪುಟ: 430, ಬೆಲೆ: 400/-
ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ
ಪ್ರೊ. ಮಲ್ಲಿಕಾರ್ಜುನ ಹಿರೇಮಠ ನವ್ಯೋತ್ತರ ಕನ್ನಡದ ಪ್ರಮುಖ ಲೇಖಕರು. ಕಾವ್ಯ, ಸಣ್ಣಕಥೆ, ಕಾದಂಬರಿ, ಪ್ರವಾಸ ಕಥನ, ಲಲಿತ ಪ್ರಬಂಧ ಮತ್ತು ವಿಮರ್ಶೆ ಕ್ಷೇತ್ರಗಳಲ್ಲಿ ಮಲ್ಲಿಕಾರ್ಜುನ ಹಿರೇಮಠರ ಸಾಧನೆ ಗಮನಾರ್ಹವಾಗಿದೆ.
ಪ್ರಸ್ತುತ ‘ಹಾವಳಿ’ ಪ್ರೊ. ಮಲ್ಲಿಕಾರ್ಜುನ ಹಿರೇಮಠರ ಎರಡನೇ ಕಾದಂಬರಿ. ‘ಹವನ’ ಪ್ರಕಟವಾದ ಇಪ್ಪತ್ತು ವರ್ಷಗಳ ನಂತರ ಈ ಬೃಹತ್ ಕಾದಂಬರಿ ಪ್ರಕಟವಾಗಿದೆ. ‘ಹಾವಳಿ’ ‘ಹವನ’ಕ್ಕಿಂತ ಹೆಚ್ಚು ಕಲಾತ್ಮಕವಾಗಿ ಮೂಡಿಬಂದಿರುವ ಒಂದು ವಿಶಿಷ್ಟ ಕಾದಂಬರಿಯಾಗಿದೆ. ಆಧುನಿಕ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳು ಇಲ್ಲಿನ ಸ್ಥಾಯಿಭಾವ. ಈ ಕಾದಂಬರಿಯ ಕಾಲ ಕಳೆದ ಶತಮಾನದ ನಲವತ್ತು-ಐವತ್ತರ ದಶಕಗಳ ಅವಧಿ. ಇದು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಯುಗವನ್ನು ಚಿತ್ರಿಸುತ್ತದೆ. ಒಂದು ಮಹತ್ವದ ಯುಗದ ಪುನರ್ ಸೃಷ್ಟಿಯಾಗಿ ಮತ್ತು ಆಕರ್ಷಕವಾದ ನಿರೂಪಣೆಯಿಂದಾಗಿ ಇದೊಂದು ಗಮನಾರ್ಹ ಕಾದಂಬರಿ. ಎಪ್ಪತ್ತು ವರ್ಷಗಳ ಹಿಂದಿನ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯನ್ನು ಕುರಿತು ದಟ್ಟವಾದ ವಿವರಗಳಿಂದ ಮತ್ತು ಬದುಕಿನ ಸೂಕ್ಷ್ಮ ನಿರೀಕ್ಷಣೆಯಿಂದ ಈ ಕಾದಂಬರಿ ಕುತೂಹಲ ಹುಟ್ಟಿಸಿದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ನೈಜ ಚಿತ್ರಣಗಳನ್ನು ಕೊಡುವ ಈ ಕಾದಂಬರಿ ನಿಜಾಮನ ಮತ್ತು ರಜಾಕಾರರ ದುರಾಡಳಿತ ಹಾಗೂ ಹಿಂಸಾಚಾರಗಳ ಬಗ್ಗೆ ಹೆಚ್ಚಿನ ವಿವಿರಗಳನ್ನು ಕೊಡುತ್ತದೆ. ಐತಿಹಾಸಿಕ ಮತ್ತು ವಾಸ್ತವಿಕ ಘಟನೆಗಳನ್ನು ಕ್ರಮಕ್ರಮವಾಗಿ ಹಾಗೂ ವಿವರಣಾತ್ಮಕವಾಗಿ ಕಟ್ಟಿಕೊಡುವ ‘ಹಾವಳಿ’ ಕ್ರಿಯಾಪ್ರಧಾನ ಕಾದಂಬರಿ.
ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಚಾರಿತ್ರಿಕ ಅಂಶಗಳೊಡನೆ ಕಲ್ಪನೆಯನ್ನು ಬೆರೆಸಿಕೊಂಡು ರಚಿತವಾದ ಕೃತಿ ‘ಹಾವಳಿ’. ಈ ಕಾದಂಬರಿಯ ಐತಿಹಾಸಿಕ ಮತ್ತು ಕಾಲ್ಪನಿಕ ಈ ಎರಡೂ ಬಗೆಯ ಪಾತ್ರ ಚಿತ್ರಣದಲ್ಲಿ ಮಲ್ಲಿಕಾರ್ಜುನ ಹಿರೇಮಠರ ಪೂರ್ವನಿರ್ಧಾರಿತ ಕಲ್ಪನೆಯೇ ಕೆಲಸ ಮಾಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಕೊಪ್ಪಳ ಜಿಲ್ಲೆಯ ‘ಬಸಾಪುರ’ ಗ್ರಾಮ ಹಿರೇಮಠರ ವಿಶೇಷ ಸೃಷ್ಟಿ. ಅದೊಂದು ಕಾಲ್ಪನಿಕ ಗ್ರಾಮ. ಅದು ಓದುಗರ ಕಣ್ಣ ಮುಂದೆ ಹೇಗೆ ನಿರೂಪಿತವಾಗಿದೆ ಎಂದರೆ ಅದು ನಿಜವಾದ ಒಂದು ಊರು ಎಂದೇ ಅನ್ನಿಸಿಬಿಡುತ್ತದೆ. ಕೊಪ್ಪಳ, ರಾಯಚೂರು, ಗುಲಬರ್ಗಾ, ವಿಜಯಪುರ, ಗದಗ, ಬೀದರ ಮತ್ತು ಹೈದರಾಬಾದ್‍ವರೆಗೂ ಕಥೆ ವ್ಯಾಪಿಸಿಕೊಂಡಿದೆ. ಹಿರೇಮಠರು ತಮ್ಮ ಬದುಕಿನ ಹತ್ತಾರು ವರ್ಷಗಳನ್ನು ಕಳೆದ ತಮ್ಮ ಹಳ್ಳಿಯ ಅನುಭವವನ್ನು ಮೂಲ ದ್ರವ್ಯವಾಗಿಸಿಕೊಂಡು ಈ ಕಾದಂಬರಿಯನ್ನು ರಚಿಸಿದ್ದಾರೆ. ಅವರು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಶೋಧಗಳಿಗೆ ‘ಬಸಾಪುರ’ನ್ನು ಒಂದು ಆವರಣವನ್ನಾಗಿ ಕಲ್ಪಿಸಿಕೊಂಡಿದ್ದಾರೆ. ಕಾದಂಬರಿಯ ಘಟನಾವಳಿಗಳು ನಡೆಯುವ ‘ಬಸಾಪುರ’ದ ಹೆಸರು ಏನೇ ಇರಲಿ, ಅಲ್ಲಿನ ಪ್ರಾದೇಶಿಕ ವಿವರಗಳು ಮಲ್ಲಿಕಾರ್ಜುನ ಹಿರೇಮಠ ಹುಟ್ಟಿ ಬೆಳೆದ ಪರಿಸರಕ್ಕೆ ಸಂಬಂಧಿಸಿವೆ. ಕೆಲವು ಪಾತ್ರಗಳ ಹೆಸರು ಹಾಗೂ ಸ್ವಭಾವಗಳನ್ನು ಬದಲಾಯಿಸಿ, ಈ ಹಳ್ಳಿಯಿಂದಲೇ ಎತ್ತಿಕೊಂಡಿದ್ದು ಕಂಡುಬರುತ್ತದೆ. ಸಂಭಾಷಣೆಗಳಲ್ಲಿ ಅವರು ಬಳಸುವ ಭಾಷೆಯೂ ಅಲ್ಲಿಯದೇ. ಲೇಖಕರ ಬಾಲ್ಯದ ಜಗತ್ತು ಕೂಡ ಅದೇ ಆಗಿರುವುದರಿಂದಲೋ ಎನೋ ಅದೇ ಪರಿಸರದ ಕಿಂಡಿಯಿಂದ ಜಗತ್ತನ್ನು ನೋಡಲು ಅವರು ಪ್ರಯತ್ನಿಸಿದ್ದಾರೆ. ಈ ಕಾದಂಬರಿಯು ಕಾಲ ದೇಶಾತೀತವಾದ ಸತ್ಯದ ಹುಡುಕಾಟ ನಡೆಸುತ್ತದೆ. ದೇಶದ ಎಲ್ಲ ಊರುಗಳಲ್ಲಿ ಈಗಲೂ ನಡೆಯಬಹುದಾದ ಮತಾಂತರ, ಮೂಲಭೂತವಾದ, ಮತಾಂಧತೆ, ಕೋಮುವಾದ ಮತ್ತು ಕೋಮುಗಲಭೆಗಳು ಈ ಕಾದಂಬರಿಯಲ್ಲಿ ಕಂಡುಬರುತ್ತವೆ.
ಹೈದರಾಬಾದ್ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣ ಚಳವಳಿಗಳ ಇತಿಹಾಸ ವೀರ ಕಾವ್ಯದಂತಿದೆ. ನಿಜಾಮ ರಾಜ್ಯದ ಚರಿತ್ರೆ ಕ್ರಾಂತಿಕಾರಕ ಅಂಶಗಳಿಂದ ಕೂಡಿದೆ. ಸಾವಿರಾರು ದೇಶಭಕ್ತರ ತ್ಯಾಗ ಮತ್ತು ಬಲಿದಾನ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದಿಟ್ಟತನದ ಪರಿಣಾಮ ಈ ಭಾಗವು 1948, ಸೆಪ್ಟೆಂಬರ್ 17ರಂದು ಭಾರತದ ಒಕ್ಕೂಟಕ್ಕೆ ವಿಲೀನಗೊಂಡಿತು. ಇಡೀ ಭಾರತ ದೇಶ 1947, ಆಗಸ್ಟ್ 15ರಂದು ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿ ತೊಡಗಿದರೆ ಹೈದರಾಬಾದ್ ಕರ್ನಾಟಕ ಪ್ರದೇಶ ಮಾತ್ರ ನಿಜಾಮ ಸಂಸ್ಥಾನದ ಆಡಳಿತದಲ್ಲಿಯೇ ಮುಂದುವರೆದಿತ್ತು. ಬ್ರಿಟಿಷ್ ಇಂಡಿಯಾ ಮತ್ತು ಸಂಸ್ಥಾನಿಕ ಇಂಡಿಯಾ ಸ್ವತಂತ್ರವಾದರೂ ಹೈದರಾಬಾದ್ ಸಂಸ್ಥಾನದ ನಿಜಾಮ ಮಾತ್ರ ತಾನು 1947, ಆಗಸ್ಟ್ 15ರ ನಂತರವೂ ಭಾರತದ ಒಕ್ಕೂಟ ಸೇರಲು ಒಪ್ಪಲಿಲ್ಲ. ಆದರೆ ಅಂದಿನ ಕೇಂದ್ರ ಸರಕಾರದ ಗೃಹಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್‍ವರು 1948, ಸೆಪ್ಟೆಂಬರ್ 17ರೊಳಗೆ ನಿಜಾಮ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದರು. ಅಲ್ಲದೆ, 1948, ಸೆಪ್ಟೆಂಬರ್ 13ರಂದು ಜನರಲ್ ಚೌಧರಿ ನೇತೃತ್ವದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಆಗ ಅನಿವಾರ್ಯವಾಗಿ 1948, ಸೆಪ್ಟೆಂಬರ್ 17ರಂದು ನಿಜಾವi ತನ್ನ ಶರಣಾಗತಿ ಘೋಷಿಸಿದನು. ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿಕೊಳ್ಳುವ ಈ ಪ್ರದೇಶದ ಸಂಬಂಧಿತ ಅವಧಿ ಕ್ರಿ.ಶ. 1724ರಿಂದ 17ನೇ ಸೆಪ್ಟೆಂಬರ್ 1948ರವರೆಗೆ ಇದೆ. ಈ ಅವಧಿ ಸುಮಾರು 224 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿದೆ. ಏಳು ಜನ ಅಸಫೀಯಾ ವಂಶದ ರಾಜರು ಈ ಪ್ರದೇಶವನ್ನು ಆಳಿದರು.
ಸಾಹಿತ್ಯ ಇತಿಹಾಸವಲ್ಲ; ಆದರೆ ಸಾಹಿತ್ಯವನ್ನು ಬಿಟ್ಟು ಇತಿಹಾಸವಿಲ್ಲ. ‘ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ’ವೆಂಬ ಸಿದ್ಧಾಂತವನ್ನು ಒಪ್ಪಿಕೊಂಡರೆ ಅಲ್ಲಿ ಚರಿತ್ರೆ ಗೌಣವಾಗಿ ಕಲ್ಪನೆಗೆ ಹೆಚ್ಚು ಒತ್ತು ಸಹಜವಾಗಿ ಬೀಳುತ್ತದೆ. ‘ಕಲೆ ಜೀವನಕ್ಕಾಗಿ, ಸಾಹಿತ್ಯ ಸಮಾಜಕ್ಕಾಗಿ’ ಎಂಬುದು ಒಪ್ಪಿಕೊಂಡರೆ ಚರಿತ್ರೆಯನ್ನು ಮರೆಯುವಂತಿಲ್ಲ. ಮಾನವನ ಸಾಂಸ್ಕøತಿಕ ಇತಿಹಾಸವೇ ಸಾಹಿತ್ಯ. ಜನಪದ ಸಾಹಿತ್ಯ ಇದಕ್ಕೆ ಉತ್ತಮ ನಿದರ್ಶನ. ಒಂದು ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ನಾಶವಾಗಿ, ಇನ್ನೊಂದು ರೂಪ ತಳೆಯುವಾಗ ನಡೆಯುವ ಸಂಘರ್ಷ, ಹೋರಾಟ, ಬದಲಾವಣೆ ಮತ್ತು ಮೌಲ್ಯಗಳ ತಾಕಲಾಟಗಳು ಆ ಕಾಲದಲ್ಲಿ ರಚನೆಗೊಂಡ ಸಾಹಿತ್ಯದಲ್ಲಿ ದಾಖಲಾಗುತ್ತವೆ. ಒಂದು ಪ್ರದೇಶವನ್ನು ಪ್ರತಿನಿಧಿಸುವ ಮತ್ತು ಪ್ರಾದೇಶಿಕತೆಯನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದ ಸಾಹಿತ್ಯದಲ್ಲಿ ಚರಿತ್ರೆಯ ನೆಲೆಗಳನ್ನು ಗುರುತಿಸಬಹುದು. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಸುಬ್ಬಮ್ಮ ಹೆಗ್ಗಡತಿ’, ರಾವ್ ಬಹದ್ದೂರರ ‘ಗ್ರಾಮಾಯಣ’, ‘ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ಬಸವರಾಜ ಕಟ್ಟೀಮನಿಯವರ ‘ನರಗುಂದದ ಬಂಡಾಯ’ ಮತ್ತು ‘ಸ್ವಾತಂತ್ರ್ಯದೆಡೆಗೆ’, ಮಿರ್ಜಿ ಅಣ್ಣಾರಾಯರ ‘ನಿಸರ್ಗ’ ಕಾದಂಬರಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ಆ ಪ್ರದೇಶದ ಮತ್ತು ಅಲ್ಲಿನ ಸಮಾಜದ ಚರಿತ್ರೆಯನ್ನು ಸಮರ್ಥವಾಗಿ ಕಟ್ಟಿಕೊಡಬಹುದಾಗಿದೆ. ಈ ದೃಷ್ಟಿಯಿಂದ ಮಲ್ಲಿಕಾರ್ಜುನ ಹಿರೇಮಠರ ‘ಹಾವಳಿ’ ಕಾದಂಬರಿಯನ್ನು ಅಧ್ಯಯನಕ್ಕೆ ಒಳಪಡಿಸಿ ಹೈದರಾಬಾದ್ ಕರ್ನಾಟಕ ಪ್ರದೇಶದ ಚರಿತ್ರೆಯನ್ನು ಕಟ್ಟಿಕೊಡಬಹುದಾಗಿದೆ. ಈ ಕಾದಂಬರಿ ಹೈದರಾಬಾದ್ ಕರ್ನಾಟಕದ ಚರಿತ್ರೆಗೆ ಸಾಕಷ್ಟು ಪರಿಕರವನ್ನು ಒದಗಿಸುತ್ತದೆ.
ಆರಂಭದಲ್ಲೇ ಬರುವ ದ್ರೌಪದಿಯ ವಸ್ತ್ರಾಪಹರಣ ನಾಟಕ ಪ್ರಸಂಗ, ಬಸಾಪುರದ ಚರಿತ್ರೆ, ನಿಜಾಮರ ಆಡಳಿತ, ವರ್ತಮಾನ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಸೂಚಿಸುವ ಮಹತ್ವಾಕಾಂಕ್ಷೆ ಹಿರೇಮಠರದೆಂಬುದನ್ನು ಸೂಚಿಸುತ್ತದೆ. ಬಸಾಪುರ ಬರಿಯ ಕಲ್ಪಿತವಾದ ಊರು ಮಾತ್ರವಾಗದೆ ನಮ್ಮ ದೇಶದಲ್ಲಿನ ಯಾವುದೇ ಹಳ್ಳಿ, ನಮ್ಮ ಇಡೀ ದೇಶದ ವರ್ತಮಾನದ ಪರಿಶೀಲನೆಯಾಗಿ ಕಾಣುತ್ತದೆ. ಶಂಕರ, ಶೇಖರ, ರೆಹಮಾನ, ಕುಮಾರ, ಭೀಮಪ್ಪ ಮತ್ತು ಇತರ ಸಂಗಡಿಗರು ರಜಾಕಾರರ ರಾಕ್ಷಸೀ ಕೃತ್ಯಗಳನ್ನು ಹಾಗೂ ನಿಜಾಮನ ಕ್ರೂರ ಆಡಳಿತದ ವಿರುದ್ಧ ಹೋರಾಟ ಮಾಡುತ್ತಾರೆ. ಶಂಕರ, ಕುಮಾರ, ರೆಹಮಾನ, ಭೀಮಪ್ಪ, ವಸಂತ ಮತ್ತು ಶೇಖರರು ತಮ್ಮ ವಿಶಿಷ್ಟ ಗುಣಗಳಿಂದ ಓದುಗರ ಮನಸ್ಸಿನಲ್ಲಿ ನಿಲ್ಲುತ್ತಾರೆ. ಆದರೆ ನಬಿ ನವಕೋಮುವಾದಿಯಾಗಿ ಕಂಡುಬರುತ್ತಾನೆ. ಅವನು ನಿಜಾಮನ ಪರವಾಗಿ ಕಾರ್ಯನಿರ್ವಹಿಸುತ್ತಾನೆ.
ವಿರೂಪಾಕ್ಷಪ್ಪ ಮಾಸ್ತರ ಊರಲ್ಲಿ ನಾಟಕ ಆಡಿಸುವುದು, ಶಂಕರ ಮತ್ತು ಶೇಖರ ಗ್ರಾಮ ರಕ್ಷಕ ದಳ ಸಂಘಟಿಸುವುದು, ಪೊಲೀಸರು ರೈತರಿಂದ ಹಫ್ತೆ ಮತ್ತು ಲೇವಿ ವಸೂಲಿ ಮಾಡುವುದು, ಸ್ಟೇಟ್ ಕಾಂಗ್ರೆಸ್ಸಿನ ಮೊದಲ ಅಧಿವೇಶನ ಹೈದರಾಬಾದ್‍ನಲ್ಲಿ ಜರುಗುವುದು, ಶಂಕರ ಈ ಅಧಿವೇಶನಕ್ಕೆ ಹಾಜರಾಗುವುದು, ಕಾಸಿಂ ರಜವಿ ಜಿಹಾದ್‍ಗೆ ಕರೆ ಕೊಡುವುದು, ಹೈದರಾಬಾದನ್ನ ಸ್ವತಂತ್ರ ಮುಸ್ಲಿಂ ದೇಶವಾಗಿಸಬೇಕೆಂದು ರಜವಿ ಸಂಕಲ್ಪ ಮಾಡುವುದು, ಇಡೀ ಮುಸ್ಲಿಂ ಪ್ರಪಂಚಕ್ಕೆ ನಿಜಾಮ ತಾನೇ ದೊರೆ ಆಗಬೇಕೆಂಬ ಆಸೆ ವ್ಯಕ್ತಪಡಿಸುವುದು, ಬ್ರಿಟಿಷರಿಗೆ ಕಪ್ಪುಕಾಣಿಕೆ ಕೊಟ್ಟು ಆರಾಮವಾಗಿ ತನ್ನ ಸಂಪತ್ತನ್ನು ಕಣ್ತುಂಬ ನೋಡುವ ನಿಜಾಮನಿಗೆ ವಿಪರೀತ ಅಧಿಕಾರದ ವ್ಯಾಮೋಹವಿರುವುದು, ನಿಜಾಮನ ಆಡಳಿತದ ಫಲವಾಗಿ ಊಳಿಗಮಾನ್ಯ ವ್ಯವಸ್ಥೆ ಮುಂದುವರೆಯುವುದು, ಭಾರತ ದೇಶ ಸ್ವಾತಂತ್ರ್ಯ ಪಡೆಯುವುದು, ನಿಜಾಮನ ಆದೇಶವನ್ನು ಧಿಕ್ಕರಿಸಿ ಸ್ವಾತಂತ್ರ್ಯದ ಧ್ವಜವನ್ನು ಏರಿಸುವುದು, ನಬಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಸುತ್ತ ರಜಾಕಾರರ ಬೆಂಬಲ ಪಡೆಯುವುದು, ನಬಿ ದೇವಿಕಾಳೊಂದಿಗೆ ಸಂಬಂಧ ಬೆಳೆಸುವುದು, ದುರುಗ ಹಣದ ಆಸೆಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದು, ಕೀರ್ತನಕೇಸರಿ ಜಯರಾಮಾಚಾರ್ಯರ ಮಹಾಭಾರತ ಕುರಿತು ಕೀರ್ತನ ಕಾರ್ಯಕ್ರಮ ಹಮ್ಮಿಕೊಳ್ಳುವುದು, ನಬಿ ಬಸಾಪುರದಲ್ಲಿ ಕೋಮು ದ್ವೇಷ ಬೆಳೆಸುವುದು, ಕುಮಾರ ಮತ್ತು ರೆಹಮಾನ ಲಾವಣಿ ತರಬೇತಿ ಪಡೆಯುವುದು, ನಿಜಾಮ ತನ್ನ ಸಿಂಹಾಸನ ತ್ಯಜಿಸುವವರೆಗೆ ಶಂಕರ ಮತ್ತು ಅವನ ಸಂಗಡಿಗರು ಹೋರಾಟ ಮಾಡುವುದು, ಶಿಭಿರಾಧಿಪತಿಯಾದ ಶಿವಮೂರ್ತಿಸ್ವಾಮಿ ಹೋರಾಟದ ಉದ್ದೇಶ ಹಾಗೂ ಅದರ ರೂಪರೇಷೆಗಳನ್ನು ವಿವರಿಸುವುದು, ಮುಸ್ಲಿಂ ಸಂಘಟನೆಗಳು ಕಾಂಗ್ರೆಸ್ಸಿನ ಪ್ರತಿಭಟನೆಗೆ ಪ್ರತಿಯಾಗಿ ಹೋರಾಟ ಮಾಡುವುದು, ಚಳವಳಿಯ ಸಂದರ್ಭದಲ್ಲಿ ನಡೆಯುವ ವಸ್ತುಗಳ ಲೂಟಿ, ದೇಸಾಯಿ ತನ್ನ ಪತ್ನಿಯೊಂದಿಗೆ ಬಸಾಪುರ ತೊರೆದು ಗುಲಬರ್ಗಾಕ್ಕೆ ಬರುವುದು, ಶಂಕರ ಮತ್ತು ಶೇಖರರನ್ನು ಪೊಲೀಸರು ಬಂಧಿಸುವುದು, ಮಾಧವಿ ಬಸಾಪುರದಲ್ಲಿ ಧ್ವಜ ಏರಿಸುವುದು, ನಿಜಾಮ ಶರಣಾಗತನಾಗುವುದು, ಕುಮಾರ ಮತ್ತು ರೆಹಮಾನ ಇಬ್ಬರೂ ಕೊಪ್ಪಳಕ್ಕೆ ಹೋಗಿ ಗಾಂಧೀಜಿಯ ಚಿತಾಭಸ್ಮವನ್ನು ತರುವುದು, ಗಾಂಧಿ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸುವುದು -ಇತ್ಯಾದಿ ನೂರಾರು ವಿವರಗಳು ಜೀವಂತ ಮಿಡಿಯುತ್ತಿವೆಯೋ ಅನ್ನುವಂತೆ ಈ ಕಾದಂಬರಿಯಲ್ಲಿ ನಿರೂಪಣೆಗೊಂಡಿವೆ.
ಕಾಸಿಂ ರಜವಿ ಕಾನೂನು ಪದವೀಧರ. ಅವನು ಲಾತೂರನಲ್ಲಿ ಸಂಡೇಪ್ಲೀಡರ್ ಆಗಿದ್ದವನು ಹೈದರಾಬಾದಿಗೆ ಬಂದು ಇತ್ತೇಹಾದ ಸಂಸ್ಥೆಯ ಮುಖಂಡನಾಗುತ್ತಾನೆ. ಕಾಸಿಂ ರಜವಿ ಅಧಿಕಾರ ವಹಿಸಿಕೊಂಡು ಇತ್ತೇಹಾದವನ್ನು ಒಂದು ಭಯೋತ್ಪಾದಕ ಸಂಘಟನೆಯನ್ನಾಗಿ ರೂಪಿಸುತ್ತಾನೆ. ಈ ಸಂಸ್ಥೆಯ ಮೂಲ ಗುರಿ ಹೈದರಾಬಾದ್ ಸಂಸ್ಥಾನದ ಎಲ್ಲಾ ಮುಸಲ್ಮಾನರನ್ನು ಸಂಘಟಿಸಿ ನಿಜಾಮನನ್ನು ಬೆಂಬಲಿಸೋದು; ದೊಡ್ಡ ಪ್ರಮಾಣದಾಗ ಹಿಂದೂಗಳನ್ನು ಮತಾಂತರಿಸಿ ಮುಸಲ್ಮಾನರ ಸಂಖ್ಯೆಯನ್ನು ಹೆಚ್ಚಿಸುವುದಾಗಿರುತ್ತದೆ. ನಂತರ ಈ ಸಂಸ್ಥೆಯ ಮುಖ್ಯಸ್ಥನಾಗಿ ಬಹಾದ್ದೂರ ಯಾರ್ ಜಂಗ್ ಅಧಿಕಾರ ವಹಿಸಿಕೊಳ್ಳುತ್ತಾನೆ. ಅವನು ಈ ಸಂಸ್ಥೆಯನ್ನು ಒಂದು ಕೋಮುಶಕ್ತಿಯಾಗಿ ಬೆಳೆಸುತ್ತಾನೆ.
“ಅವ್ವಗ ಗಟ್ಟಿ ಹಚ್ಚಿ ಕೇಳಿಬಿಟ್ಟೆ….. ಆಕಿ ಕಣ್ಣೀರು ಸುರಿಸ್ತಾ ಎಲ್ಲಾ ಬಾಯಿಬಿಟ್ಟಳು…… ನಮ್ಮ ಮೈಯಾಗ ಮುಸ್ಲಿಂ ರಕ್ತ ಐತಿ ಅಂತ ನನ್ನ ಮ್ಯಾಲೆ ನನಗs ಸಿಟ್ಟು ಬರ್ತೈತಿ. ನಾನೊಬ್ಬ ಹಿಂದೂ ಅನ್ನೊ ಉಗ್ರ ಅಭಿಮಾನ ಇತ್ತು. ಬ್ಯಾರೆ ದೇಶದಿಂದ ಬಂದು ಈ ದೇಶ ಆಳಿ ಇಲ್ಲೇ ಠಾವು ಹಾಕಿದವರು ಈ ಮುಸ್ಲಿಮರು. ನಮ್ಮ ಗುಡಿಗುಂಡಾರಗಳನ್ನ ಧ್ವಂಸ ಮಾಡಿದವರು, ನಮ್ಮ ಸಂಪತ್ತನ್ನ ಲೂಟಿ ಮಾಡಿದವರು……… ಇವರು ವಲಸಿಗರು…….. ಇವರನ್ನ ಮೂಲ ನಲೆಗಳಿಗೆ ಓಡಿಸಬೇಕು……….. ಈಗ ನಿಜಾಮ ಮಾಡತಿರೋದು ಲೂಟೀನೇ…… ಹೀಗೆಲ್ಲ ಯೋಚಿಸ್ತಿದ್ದ ನಾನು ಈಗ ಮುಸ್ಲಿಮನ ಮಗನಾಗಿ ಬಿಟ್ಟೀನಲ್ಲ! ನಾನು ಝಳಪಿಸುವ ಕತ್ತಿಯೇ ಮೊಂಡ ಆಯ್ತು ಶಂಕ್ರಣ್ಣ….. ನನಗ ಎರಡು ರೀತಿಯ ಆಘಾತ ಈಗ…. ಒಂದು, ನಾನು ಮುಸ್ಲಿಮನ ಮಗ, ಇನ್ನೊಂದು, ಸೂಳೆಯ ಮಗ. ಇದನ್ನ ತಿಳಿದು ಎರಡೂ ಕಪಾಳ ಗೆಡ್ಡೆಗೆ ರಪ್ ಅಂತ ಬಾರಿಸಿದಂಗಾಗೇತಿ….” “ಅದನ್ನೆಲ್ಲ ತಲ್ಯಾಗಿಂದ ತಗದಹಾಕು. ಭ್ರಾಂತನಾಗಿ ತಲೆಯಲ್ಲಿ ಏನೇನೋ ತುಂಬಿಕೊಬ್ಯಾಡ. ಎಲ್ಲಾರ ರಕ್ತಾನೂ ಕೆಂಪಗ. ನಾವೆಲ್ಲರೂ ಮನುಷ್ಯಾರು ಅಷ್ಟs. ಮನುಷ್ಯ ಹ್ಯಾಗೆ ಹುಟ್ಟಿದ, ಎಲ್ಲಿ ಹುಟ್ಟಿದ ಮುಖ್ಯ ಆಗೋದಿಲ್ಲ. ನಮ್ಮ ಬದುಕಿನಿಂದ, ನಮ್ಮ ಕೆಲಸಗಳಿಂದ, ಧೋರಣೆಗಳಿಂದ ಮನುಷ್ಯರಾಗೋದು ಮುಖ್ಯ……” (ಪುಟ-63) ಎಂಬ ಶಂಕರನ ಮಾತು ಇಡೀ ಕಾದಂಬರಿಯ ಆಶಯವನ್ನು ವಿಸ್ತರಿಸುವ ಸೂಚನೆಯಂತಿದೆ.
“ನಾವು ಹೋರಾಟ ಮಾಡಬೇಕಾಗಿರೋದು ಮುಸ್ಲಿಂರ ವಿರುದ್ಧ ಅಲ್ಲ, ರಾಜಪ್ರಭುತ್ವದ ವಿರುದ್ಧ, ನಿಜಾಮನ ವಿರುದ್ಧ, ನಿರಂಕುಶ ಪ್ರಭುತ್ವದಿಂದ ಬಿಡುಗಡೆಯಾಗಿ ಪ್ರಜಾಪ್ರಭುತ್ವ ನೆಲೆಗೊಳಿಸುವುದಕ್ಕಾಗಿ, ಸ್ವರಾಜ್ಯಕ್ಕಾಗಿ, ಸಂಸ್ಥಾನಗಳಿಂದ ಮುಕ್ತವಾದ ಭಾರತಕ್ಕಾಗಿ. ಕೆರಳಿಸುವ ಯಾವ ಮತೀಯ ಭಾವನೆಗಳಿಗೂ ಕಿವಿಗೊಡಬ್ಯಾಡ, ಗಟ್ಟಿಯಾಗಿರು. ಅವ್ವನಿಗೂ ಹೇಳು. ಆಕಿ ಸಂಪ್ರದಾಯಕ್ಕ ಕಟ್ಟುಬಿದ್ದು ವೇಶ್ಯಾ ಆಗ್ಯಾಳ ಅಷ್ಟs. ನಿಧಾನವಾಗಿ ಆಕಿಗೆ ತಿಳಿವಳಿಕೆ ಕೊಡು…” (ಪುಟ-63) ಇಂಥ ನಿದರ್ಶನಗಳು ಬೇಕಾದಷ್ಟು ಸಿಗುತ್ತವೆ. ಕಾದಂಬರಿಯಲ್ಲಿ ಬಳಕೆಯಾಗಿರುವ ಪ್ರಾದೇಶಿಕ ಭಾಷೆಯೇ ಕೃತಿಯ ಶಕ್ತಿ, ಜೀವಾಳ ಮತ್ತು ವೈಶಿಷ್ಟ್ಯ ಅನ್ನಿಸಿಬಿಡುತ್ತದೆ.
ಕಾದಂಬರಿಯಲ್ಲಿ ಕಪ್ಪತ್ತಗುಡ್ಡದ ಮಹತ್ವದ ಕುರಿತು ಶಂಕರ ಮತ್ತು ಚಂದ್ರಶೇಖರ ನಡುವೆ ನಡೆಯುವ ಮಾತುಗಳನ್ನು ಗಮನಿಸಬೇಕು:
ಇನ್ನೊಂದು ದಿನ ಶಂಕರ ರಾತ್ರಿ ಊಟ ಮುಗಿಸಿ ತನ್ನ ತಾಟು ತೊಳೀತಿರುವಾಗ ಚಂದ್ರಶೇಖರ ಅನ್ನೋ ಶಿಬಿರಾರ್ಥಿ ತನ್ನ ತಾಟಿಗೆ ಮಣ್ಣು ಹಚ್ಚಿ ತೊಳೀತಾ ಇದ್ದ. “ಈ ಗುಡ್ಡದ ಮಣ್ಣಿನ ಬೆಲೆ ಅಷ್ಟಿಷ್ಟಿಲ್ಲ” ಅಂದ. ‘ಅಂದ್ರ?’…. ‘ತಡೀ ತಡೀ ಹೇಳ್ತೀನಿ’ ಅಂದ. ಶಂಕರ ತಾನು ತಾಟು ತೊಳಿಯೋದು ಮುಗಿದಿದ್ದರೂ ಅವನಿಗಾಗಿ ಕಾಯ್ತಾ ನಿಂತ. ಇಬ್ಬರೂ ತಮ್ಮ ತಾಟುಗಳನ್ನ ಅವುಗಳ ಜಾಗದಲ್ಲಿಟ್ಟು ಹೊಂಟಾಗ ಚಂದ್ರಶೇಖರ ಹೇಳಿದ: “ಬ್ಯಾರೆ ಬ್ಯಾರೆ ಆಯುರ್ವೇದ ಸಸ್ಯಗಳು, ಗಿಡಗಂಟಿಗಳು, ತುಂಬಿರುವ ಸಸ್ಯ ಸಂಪತ್ತಿಗೆ ಅಷ್ಟೇ ಅಲ್ಲ ಈ ಗುಡ್ಡದ ಪ್ರಸಿದ್ಧಿ. ಕಬ್ಬಿಣದ ಅದಿರಾದ ಹೆಮಟೈಟ್, ಸೈಡರೈಟ್, ಮೋನೈಟ್ ಅದಾವು ಇಲ್ಲಿ. ಮ್ಯಾಂಗನೀಸ್ ಕೂಡ ಹೇರಳ ಐತಿ…. ನಮ್ಮ ಹಿರೇರು ಒಂದು ಕಥಿ ಹೇಳ್ತಾರ ಕೇಳೀಯೇನು?… ಒಮ್ಮೆ ಲಕ್ಷ್ಮೀಗೂ ನಾಗಾರ್ಜುನರಿಗೂ ನಾ ಹೆಚ್ಚು ನಾ ಹೆಚ್ಚು ಅಂತ ಮೇಲಾಟ ನಡೀತಂತ. ನಾಗಾರ್ಜುನ ಕಪ್ಪತ್ತಗುಡ್ಡವನ್ನ ತನ್ನ ಮುಷ್ಠಿಯೊಳಗ ಹಿಡಿದು ಈ ಗುಡ್ಡ ಎಲ್ಲಾ ಬಂಗಾರ ಮಾಡ್ತೀನಿ ನೋಡು… ಆಗ ನಿನ್ನ ಕಿಮ್ಮತ್ತು ತಂತಾನೇ ಇಳಿತೈತಿ ಅಂದು ಮುಷ್ಠಿ ಬಿಗಿ ಮಾಡತೊಡಗಿದನಂತ. ಮುಷ್ಠಿ ಹಿಡಿದಿದ್ದು ತಪ್ಪಿದ್ರೇನಾತು, ಮುಷ್ಠಿ ಬಿಟ್ಟಾಗ ಕೆಳಗ ಬಿದ್ದವಲ್ಲಾ ಆ ಅವಶೇಷಗಳು…. ಇಲ್ಲಿ ಉಳಕೊಂಡವು. ಅವು ಇಲ್ಲಿ ಬಂಗಾರ ಮತ್ತು ಇತರ ಖನಿಜಗಳು ಆದವು. ಹೀಂಗ ಇದು ಸಂಪದ್ಭರಿತ ಗುಡ್ಡ….” ಹೌದಾ! … ಅಂತ ಆಶ್ಚರ್ಯ ವ್ಯಕ್ತಪಡಿಸ್ತಾ ನಾನಿಲ್ಲಿ ಮೊನ್ನೆ ಒಂದು ನವಿಲು ನೋಡಿದ್ನೆಪಾ. ಏನು ಚಂದ ತನ್ನ ಗರಿ ಬಿಚ್ಚಿತ್ತು” ಅಂತ ಶಂಕರ ಅಂದಾಗ “ಅಲ್ಲೋ ಒಂದು ನವಿಲ ಅಲ್ಲ, ಒಂದು ಸಾವಿರಕ್ಕಿಂತಲೂ ಹೆಚ್ಚು ನವಿಲು ಅದಾವು ಇಲ್ಲಿ, ನಮ್ಮ ಗದ್ದಲಕ್ಕ ಪಕ್ಷಿ, ಪ್ರಾಣಿಗಳು ದೂರ ಸರಕೊಂಡಾವು” ಅಂದ. ಅವ ತನ್ನ ಟೆಂಟಿಗೆ ಬರ್ತಾ ಯೋಚಿಸ್ತಾ ಬಂದು ಟಿಪ್ಪಣಿಸಿದ: ಕಪ್ಪತ್ತಗುಡ್ಡ ತಾನು ಎಷ್ಟು ಶ್ರೇಷ್ಠ, ಎಷ್ಟು ಉಪಯುಕ್ತ, ಎಷ್ಟು ದೊಡ್ಡದು, ಎಷ್ಟು ಘನತೆಯುಳ್ಳದ್ದು ಅಂತ ಎಲ್ಲೂ ಟಾಂ ಟಾಂ ಮಾಡುವದಿಲ್ಲ, ಇಲ್ಲಿ ಇದೆ ಅಷ್ಟೆ. ಕಾಣುವವರಿಗೆ ಇಲ್ಲಿಯ ಸಂಪತ್ತು, ಸೊಬಗು ಕಾಣಿಸ್ತಿದೆ, ಯಾವ ಬಾಜಾ ಭಜಂತ್ರಿ ಇರದೆ ಸುಮ್ಮನೆ ಇರುವದು ಅದರ ವಿಶಿಷ್ಟತೆ…. ಘನವಾದದ್ದು ಹೀಗೆ ಇರಬೇಕು…. ಹೀಗೆ ಬಾಳಬೆಕು…. ಘನಗಂಭೀರ ಮಹಾಘನಕ್ಕೆ ಘನವಾಗಿರೋದು ಅಂದ್ರೆ ಹೀಗೇ ಅಲ್ಲ? (ಪುಟ-263).
ಈ ಕಾದಂಬರಿಯ ಮುಖ್ಯ ಪಾತ್ರಗಳು ಎರಡು- ಶಂಕರ ಮತ್ತು ಶೇಖರ. ಇವರಿಬ್ಬರು ಕಾಲೇಜು ವಿದ್ಯಾರ್ಥಿಗಳು, ಮಧ್ಯಮ ವರ್ಗದ ಕುಟುಂಬದವರು. ಶಂಕರ ಮತ್ತು ಅವನ ಸ್ನೇಹಿತರು ಗಾಂಧೀಜಿಯ ಅಹಿಂಸಾ ಮಾರ್ಗವನ್ನು ಆರಿಸಿಕೊಂಡವರು. ಈ ಕಾದಂಬರಿಯಲ್ಲಿ ನೂರಾರು ಪಾತ್ರಗಳಿವೆ. ಹೋರಾಟಕ್ಕೆ ಮಹತ್ವದ ಚಾಲನೆ ಕೊಟ್ಟ ಹಲವಾರು ಪಾತ್ರಗಳು ಕಾದಂಬರಿಯ ಬೆಳವಣಿಗೆಯಲ್ಲಿ ಮುಖ್ಯವೆನಿಸುತ್ತವೆ. ಶಂಕರ, ಕುಮಾರ ಮತ್ತು ಶೇಖರರು ಹಲವಾರು ಹೋರಾಟಗಾರರನ್ನು ಸಂಘಟಿಸಿ ಊರೂರು ಅಲೆದಾಡುತ್ತ, ರಾಷ್ಟ್ರಪ್ರೇಮವನ್ನು ಉಕ್ಕಿಸುವ ಲಾವಣಿಗಳನ್ನು ಹಾಡುತ್ತ ಗ್ರಾಮೀಣ ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕೆಚ್ಚನ್ನು ಬಿತ್ತುತ್ತಾರೆ. ಈ ಹೋರಾಟದಲ್ಲಿ ಸಾವಿರಾರು ಪುರುಷರು ಮತ್ತು ಮಹಿಳೆಯರು ಭಾಗವಹಿಸುತ್ತಾರೆ. ನಿಜಾಮರ ಆಡಳಿತ ಕೊನೆಗೊಂಡು ಈ ಪ್ರದೇಶ ಸ್ವತಂತ್ರವಾಗಿ, ಸಮಾನತೆಯ ತತ್ವದ ಮೇಲೆ ಅದು ತನ್ನ ನೂತನ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕೆಂಬ ಲೇಖಕರ ಹಂಬಲ ಇಲ್ಲಿ ಸ್ಪಷ್ಟವಾಗುತ್ತದೆ. ಇಂಥ ಹಂಬಲ ರಾಷ್ಟ್ರೀಯತೆಯ ಸಮಗ್ರ ಪರಿಕಲ್ಪನೆಯಾಗಿ ‘ಹಾವಳಿ’ ಕಾದಂಬರಿಯನ್ನು ರೂಪಿಸಿದೆ. ಇದು ಹಿಂಸೆ-ಅಹಿಂಸೆ, ಜೀವನ-ಸಮಾಜ, ಮನುಷ್ಯ ಸಂಬಂಧಗಳು, ಧರ್ಮಗಳು, ರಾಷ್ಟ್ರಪ್ರೇಮ, ಸಾಮಾಜಿಕ-ರಾಜಕೀಯ ಬದಲಾವಣೆಗಳು, ಸ್ವಾತಂತ್ರ್ಯ ಪಡೆಯುವುದು, ಪ್ರಜಾಪ್ರಭುತ್ವ ಸ್ಥಾಪನೆಗಳ ಕುರಿತು ಗಂಭೀರವಾದ ಚರ್ಚೆಗೆ ಆಹ್ವಾನಿಸುತ್ತದೆ.
ಫ್ಯೂಡಲ್ ವ್ಯವಸ್ಥೆಯ ಪ್ರತಿನಿಧಿಯಾಗಿರುವ ಮಾಲಿಗೌಡ, ನಿಂಗನಗೌಡ, ಫಕೀರಗೌಡ, ಪೊಲೀಸಗೌಡ, ರಾಮಪ್ಪ ದೇಸಾಯಿ ಮತ್ತು ಕುಲಕರ್ಣಿಯವರು ನಿಜಾಮನ ಕೈಗೊಂಬೆಗಳಂತೆ ವರ್ತಿಸುವುದು ಕಂಡುಬರುತ್ತದೆ. ಶಂಕರ, ಗುರವ್ವ, ಶೇಖರ, ವಸಂತ, ಭೀಮಪ್ಪ, ಶಿವಲಿಂಗಪ್ಪ, ವಿರೂಪಾಕ್ಷಪ್ಪ ಮಾಸ್ತರ, ಕರಬಸಪ್ಪ, ಕುಮಾರ, ಉಮಾ, ಈರವ್ವ, ಸಂಗ, ಗಂಗಾ, ರೆಹಮಾನ-ಮೊದಲಾದವರ ಹೋರಾಟದ ಬದುಕಿನ ಕಥೆಯೇ ವಿಸ್ತಾರವಾಗಿ ನಿರೂಪಿತವಾಗಿದೆ. ಹಾಗೆ ನೋಡಿದರೆ ಆಯ್ದ ಪಾತ್ರಗಳ ಕಥೆಯನ್ನು ವಿಸ್ತಾರವಾಗಿ ಹೇಳುವುದೇ ಕಾದಂಬರಿ ಎಂಬ ಸರಳ ವ್ಯಾಖ್ಯಾನಕ್ಕೆ ಉತ್ತಮ ನಿದರ್ಶನ ಈ ಕೃತಿ. ಪಾತ್ರಗಳ ಬದುಕಿನ ಏರಿಳಿತಗಳನ್ನು ವ್ಯಾಖ್ಯಾನಿಸಲು, ಅರ್ಥೈಸಲು ಗೀ ಗೀ ಪದ, ವಚನ, ತತ್ವಪದ, ಲಾವಣಿ, ಗಜಲ್, ಶಾಯರಿ, ಜನಪದ ಕಥೆಗಳ ಸಮಾನಾಂತರ ನಿರೂಪಣೆಯೂ ಕುತೂಹಲ ಹುಟ್ಟಿಸುತ್ತದೆ. ನಿರೂಪಿಸುವಾಗಲೂ ಮಲ್ಲಿಕಾರ್ಜುನ ಹಿರೇಮಠರ ಭಾಷೆಗೆ ಎಷ್ಟೋ ಕಡೆ ಕಾವ್ಯದ ಲಯ ದೊರೆತಿರುವುದನ್ನು ಕಾಣಬಹುದು.
ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಮಾನವಧರ್ಮವನ್ನು ಪ್ರತಿಪಾದಿಸಿವೆ. ಬುದ್ಧ, ಮಹಾವೀರ, ಪೈಗಂಬರ್, ಬಸವಣ್ಣ, ಗಾಂಧೀಜಿ ಮತ್ತು ಅಂಬೇಡ್ಕರ್‍ರಂಥ ಮಹಾನ್ ವ್ಯಕ್ತಿಗಳು ಈ ವಿಚಾರವನ್ನು ಜನತೆಗೆ ಮುಟ್ಟಿಸಲು ಜೀವನದುದ್ದಕ್ಕೂ ಪ್ರಯತ್ನಿಸಿದ್ದಾರೆ. ಭಾರತ ಸ್ವಾತಂತ್ರ್ಯವಾದ 75 ವರ್ಷಗಳಲ್ಲಿ ಸಾವಿರಾರು ಕೋಮುಗಲಭೆಗಳು ಸಂಭವಿಸಿವೆ, ಲಕ್ಷಾಂತರ ನಿರಪರಾಧಿಗಳು ಜೀವ ಕಳೆದುಕೊಂಡಿದ್ದಾರೆ. ಬರಗಾಲ, ನಿರುದ್ಯೋಗ, ಬಡತನ, ಅನಕ್ಷರತೆ ಮತ್ತು ಭಯೋತ್ಪಾದನೆಗಳಿಂದ ತತ್ತರಿಸುವ ದೇಶದ ಜನತೆ ಕೋಮುಗಲಭೆ ಮತ್ತು ಭಯೋತ್ಪಾದನೆಗಳನ್ನೂ ಎದುರಿಸಬೇಕಾಗಿರುವುದು ಬಹು ದೊಡ್ಡ ದುರಂತವಾಗಿದೆ. ಇದು ರೆಕ್ಕೆಪುಕ್ಕ ಕಟ್ಟಿಕೊಂಡು ಮನುಕುಲದ ಅವನತಿಗೆ ಕಾರಣವಾಗುತ್ತಿದೆ. ಇಡೀ ದೇಶ ಒಂದು ಗೂಡಾಗಬೇಕೆನ್ನುವುದು ಋಗ್ವೇದದ ಕನಸು. ಬಡತನ, ಅನಕ್ಷರತೆ, ನಮ್ಮೊಳಗಿನ ಕ್ರೌರ್ಯದ ವಿರುದ್ಧ ಹೋರಾಡುವುದನ್ನು ಮಹಮ್ಮದ್ ಪೈಗಂಬರರು ‘ಜಿಹಾದ್’ ಎಂದು ಕರೆದರು. ಮಾನವರು ದೇಶ-ದೇಶಗಳ ವಿರುದ್ಧ, ಧರ್ಮ-ಧರ್ಮಗಳ ವಿರುದ್ಧ ಹಿಂಸಾಚಾರಗಳಲ್ಲಿ ತೊಡಗಿದಾಗ ಈ ಪೃಥ್ವಿ ಬದುಕಲು ಅಯೋಗ್ಯವಾಗುತ್ತದೆ ಎಂದರು ಗಾಂಧೀಜಿ. ವಿವಿಧ ಜನಾಂಗಗಳ ಮತ್ತು ವಿವಿಧ ದೇಶಗಳ ಜನರೆಲ್ಲ ತಮ್ಮ ಖಡ್ಗಗಳನ್ನು ಕರಗಿಸಿ ಕುಡುಗೋಲು ಮಾಡಿಕೊಳ್ಳಲಿ; ಒಂದು ದೇಶದವರು ಇನ್ನೊಂದು ದೇಶದವರ ಮೇಲೆ ಖಡ್ಗ ಎತ್ತದಿರಲಿ; ಅವರು ಯುದ್ಧ ಕಲಿಯಬೇಕಿಲ್ಲ ಎಂದಿದೆ ಬೈಬಲ್. ಅಂದರೆ ಯಾವ ಧರ್ಮವೂ, ಯಾವ ಮತಸ್ಥಾಪಕರೂ, ಯಾವ ಮಹನೀಯರೂ ಧರ್ಮದ ಹೆಸರಿನಲ್ಲಿ ಕ್ರೌರ್ಯ ಮತ್ತು ಹಿಂಸಾಚಾರಗಳನ್ನು ನಡೆಸಲು ಕರೆ ಕೊಟ್ಟಿಲ್ಲ. ಸದ್ಭಾವನೆಗಳನ್ನು ಜೀವನದಲ್ಲಿ ರೂಢಿಸಿಕೊಂಡು ಮಾನವ ಸಮಾಜವನ್ನು ಉಳಿಸಿ ಬೆಳೆಸಬೇಕೆನ್ನುವ ವಿಚಾರಕ್ಕೆ ಅವರು ಒತ್ತುಕೊಟ್ಟಿದ್ದಾರೆ. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದರಲ್ಲಿ, ವ್ಯಾಖ್ಯಾನಿಸುವುದರಲ್ಲಿ ಆಗಿರುವ ತಪ್ಪಿನಿಂದಾಗಿ, ಕೈವಾಡಗಳಿಂದಾಗಿ ಕೋಮುವಾದ ಮತ್ತು ಭಯೋತ್ಪಾದನೆಗಳಂತಹ ಜ್ವಲಂತ ಸಮಸ್ಯೆಗಳು ಹುಟ್ಟಿಕೊಂಡಿವೆ. ಕರ್ನಾಟಕದಲ್ಲಿ ಮಠ, ಮಂದಿರ, ಮಸೀದಿ ಮತ್ತು ದರ್ಗಾಗಳು ಭಾವೈಕ್ಯದ ಸಂದೇಶ ಸಾರುತ್ತಾ ಶತಮಾನಗಳಿಂದ ಅಸ್ತಿತ್ವದಲ್ಲಿವೆ. ಶರಣರು, ಸಂತರು, ದಾರ್ಶನಿಕರು, ಪಾದ್ರಿಗಳು, ಸೂಫಿಗಳು ಎಲ್ಲರನ್ನೊಳಗೊಂಡ ನಾಡಿದು. ಆದ್ದರಿಂದಲೇ ರಾಷ್ಟ್ರ ಕವಿ ಕುವೆಂಪು ಅವರು ಇದನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಇಂತಹ ಸೌಹಾರ್ದ, ಪ್ರೀತಿಯ ಕರ್ನಾಟಕ ಇನ್ನೊಬ್ಬರ ಸಾವನ್ನು ಸಂಭ್ರಮಿಸುವ, ಚಿಂತಕರನ್ನು ಹಾಡುಹಗಲೇ ಗುಂಡಿಕ್ಕಿ ಕೊಲ್ಲುವ ಫ್ಯಾಶಿಸ್ಟ್ ರಾಜ್ಯವಾಗಿ ಬದಲಾಗುತ್ತಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಕರ್ನಾಟಕದ ಸೌಹಾರ್ದ ಪರಂಪರೆಗೆ ಹನ್ನೆರಡನೇ ಶತಮಾನದ ವಚನ ಚಳವಳಿಯ ಕೊಡುಗೆ ಅಪಾರವಿದೆ. ಈಗ ಕರ್ನಾಟಕದಲ್ಲಿ ಕೋಮು ದ್ವೇಷದ ಬೀಜ ಬಿತ್ತುವ ಮಸಲತ್ತು ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ರಾಜ್ಯದ ಹಲವು ಕಡೆ ಮತಾಂತರ, ಗೋಹತ್ಯೆಗಳ ಸುಳ್ಳು ಕಥೆಗಳನ್ನು ಕಟ್ಟಿ ಸೌಹಾರ್ದದಿಂದ ಬದುಕುತ್ತಿರುವ ಜನಸಾಮಾನ್ಯರ ನಡುವೆ ವೈಷಮ್ಯದ ದಳ್ಳುರಿ ಎಬ್ಬಿಸುವ ಮಸಲತ್ತು ನಡೆದಿದೆ. ಶತಮಾನಗಳಿಂದ ಈ ನೆಲದಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಸಹೋದರ ಭಾವನೆಯಿಂದ ಬದುಕುತ್ತಾ ಬಂದಿದ್ದಾರೆ. ಭಾರತದ ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಸಮಾಜ ಸೇವಕರು ಮತ್ತು ಶಿಕ್ಷಕರು ಸರ್ವಧರ್ಮ ಸಮಭಾವವನ್ನು ತಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡಾಗ ಭಾರತ ದೇಶ ಈ ಸಮಸ್ಯೆಗಳಿಂದ ಪಾರಾಗಿ ಶಾಂತಿ, ಸಹನೆ, ಸಾಮರಸ್ಯ ಮತ್ತು ಸೌಹಾರ್ದತೆಗಳ ತಂಗಾಳಿ ಬೀಸಲು ಸಾಧ್ಯವಾಗುತ್ತದೆಯೆನ್ನುವುದು ಈ ಕಾದಂಬರಿಯ ಆಶಯವಾಗಿದೆ. ಶಂಕರ, ಶೇಖರ, ಕುಮಾರ, ವಸಂತ ಮತ್ತು ನಬಿಯರ ಮೂಲಕ ಕಾದಂಬರಿ ಮನುಷ್ಯ ಸಂಬಂಧಗಳ ಸತ್ಯವನ್ನು ಹೊಸ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಸತ್ಯಗಳನ್ನು ಬರೆಯುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸುತ್ತದೆ.
ಮಲ್ಲಿಕಾರ್ಜುನ ಹಿರೇಮಠರ ತಾತ್ವಿಕ ಚಿಂತನೆ, ವಸ್ತುವಿನ ಹರಹು, ಪಾತ್ರಸೃಷ್ಟಿ, ವಸ್ತುವಿಗೆ ತಕ್ಕ ಉತ್ಸಾಹದ ಭಾಷೆ, ಆಕರ್ಷಕ ಸನ್ನಿವೇಶಗಳ ನಿರ್ಮಾಣ, ಲವಲವಿಕೆಯ ನಿರೂಪಣೆ, ಸ್ವಾರಸ್ಯಕರ ಸಂಭಾಷಣೆಗಳಿಂದ ‘ಹಾವಳಿ’ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ. ಇದು ಗಂಭೀರವಾದದ್ದು, ಮನಸ್ಸನ್ನು ತಟ್ಟುವಂಥದ್ದು ಹಾಗೂ ಬಿಡದೆ ಓದಿಸಿಕೊಂಡು ಹೋಗುವಂಥದ್ದು. ಕಾದಂಬರಿಯ ಬಂಧ ಗಟ್ಟಿಯಾಗಿದೆ. ಐತಿಹಾಸಿಕ ಘಟನೆಗಳಲ್ಲಿರುವ ಸಂಘರ್ಷದ ಗಂಭೀರತೆ ಕಾದಂಬರಿಯಲ್ಲಿ ಯಥಾವತ್ತಾಗಿ ಚಿತ್ರಿತವಾಗಿದೆ. ವಸ್ತುವಿನ ವಾಸ್ತವತೆ ಮತ್ತು ಅದರ ಅಭಿವ್ಯಕ್ತಿ ತಂತ್ರದಲ್ಲಿನ ಸಹಜತೆಯ ದೃಷ್ಟಿಯಿಂದ ಕಾದಂಬರಿ ವಿಶೇಷವಾಗಿದೆ. ಈ ಕಾದಂಬರಿಯ ಒಂದು ವೈಶಿಷ್ಟ್ಯ ಎಂದರೆ ಅದು ಸೃಷ್ಟಿಸುವ ಜಗತ್ತಿನ ವೈಶಾಲ್ಯ ಮತ್ತು ಮಹತ್ವ. ಒಂದು ಪ್ರಾದೇಶಿಕ ಕಥನ ಎಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ ‘ಹಾವಳಿ’ ಅಂಥ ಅನೇಕ ಪ್ರದೇಶಗಳನ್ನು ಹಾಗೂ ಇಂಥದೇ ಕಥನಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ಗ್ರಾಮ ಭಾರತದ ಕಥನವೇ ಆಗಿದೆ. ಇದು ಹಿರೇಮಠರ ಕಥನ ಸಾಹಿತ್ಯದಲ್ಲಿ ಒಂದು ಮಟ್ಟದ ಬೆಳವಣಿಗೆಯನ್ನು ತೋರುವಂತೆ ಆಧುನಿಕ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆಯುತ್ತದೆ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ