ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೈದರಾಬಾದ್ ಪ್ರತಿಮೆಗಳುಳ್ಳ ಐದು ಕೆ.ವಿ.ತಿರುಮಲೇಶ್ ಕ್ಲಾಸಿಕ್ಸ್

ಸೀತಾಫಲ ಮಂಡಿ

ಹೊತ್ತು ಬೇಗನೆ ಮುಳುಗುವುದೆಂದರೆ
ಥಂಡಿ ಗಾಳಿ ಬೀಸುವುದೆಂದರೆ
ಸೀತಾಫಲ ಮಂಡಿಗೆ ಗಾಡಿಗಳು
ಬರತೊಡಗಿದವೆಂದೇ ಲೆಕ್ಕ

ಬರುತ್ತವೆ ಅವು ನಸುಕಿನಲ್ಲಿ
ಮುಂಜಾವದ ಮುಸುಕಿನಲ್ಲಿ
ಎಲ್ಲಿಂದಲೊ ಯಾರಿಗೆ ಗೊತ್ತು
ಎಲ್ಲರಿಗೂ ನಿದ್ದೆಯ ಮತ್ತು

ಎದ್ದು ನೋಡಿದರೆ ಮುಂದಿನ ಓಣಿ
ಗಾಡಿಗಳೆಲ್ಲ ಹೂಡಿವೆ ಠಿಕಾಣಿ
ಸೀತಾದೇವಿಯ ಕರುಣೆಯ ಫಲ
ಸೀತಾಫಲ ಎನ್ನುವ ಕಾಲ

ನವಂಬರ ಬಂತು ಡಿಸೆಂಬರ ಬಂತು
ಚಳಿ ಬಂತು ಚಳಿ ಹೋಯಿತು-ಎನ್ನುವಷ್ಟರಲಿ
ಸೀತಾಫಲ ಮಂಡಿಯೂ ಬರಿದು
ಗಾಡಿಗಳಿಲ್ಲ ಎತ್ತುಗಳಿಲ್ಲ
ಸಿಪ್ಪೆಯನುಳಿದರೆ ಇನ್ನೇನಿಲ್ಲಿ

ಇನ್ನು ಸೀತಾಫಲ ಮುಂದಿನ ವರ್ಷ-
ಅಷ್ಟರ ತನಕವು ಕಾಯಬೇಕು ಮನುಷ್ಯ
ಕಾಯುವುದಿಲ್ಲವೆ ಕಾಡಿನ ಮರ
ಸೀತಾಫಲ ಮಂಡಿಯಿಂದ
ಅದೆಷ್ಟೋ ದೂರ

ಹೈದರಾಬಾದಿಗೆ

ನಂತರ ಬಂದೆವು ನಾವು ಹೈದರಾಬಾದಿಗೆ
ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು
ರಾತ್ರಿ ಧಗೆ ಕಾರಲೆಂದು ಹಗಲೆಲ್ಲ
ಕಾದು ಕೆಂಪಾಗಿರುವ ಕಲ್ಲು ಬಂಡೆಗಳು
ಅವುಗಳ ಕೆಳಗೆ ಮಾತ್ರ ತುಸು ನೆಳಲು

ಕ್ಲಾಕ್ ಟವರಿನ ಕಾಗೆ
ನುಡಿಯಿತೊಂದು ಒಗಟು
ನೀರಿಲ್ಲದ ಸಮುದ್ರ
ಹಾಯಿಯಿಲ್ಲದ ದೋಣಿ
ಇಲ್ಲಿ ಹೊರಟವರು
ಎಲ್ಲಿ ಸೇರುವರು?

ಸೈಕಲಿನ ವ್ಯಕ್ತಿ
ಟಣಟಣನೆ ಬಡಿದ ಗಂಟೆ
ಕನಸು ಕಾಣುವುದಕ್ಕೆ ನಿಮಗೆ
ರಾತ್ರಿಯಿಲ್ಲವೆ ಎ೦ದು ಜರೆದ-
ರಾತ್ರಿ ನಾವು ನಿದ್ರಿಸಿರಲಿಲ್ಲ

ಸಾಲಾರ್ಜಂಗ್ ಮ್ಯೂಸಿಯಮಿನಿಂದ ಕೇಳಿಸುವ ಕೂಗು
ಯಕ್ಷಿಯದೊ, ದೆವ್ವದ್ದೊ, ಒಂಟಿಯಾಗಿರುವ
ಮರದ ಪ್ರತಿಮೆಯ ಭಯವೊ-ಇಲ್ಲ
ಕೇಳುವವರ ಮನಸ್ಸಿನೊಳಗಿನ ಲಯವೊ

ನಾವು ಇದೊಂದನ್ನೂ ನಂಬುವುದಿಲ್ಲ
ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತೇವೆ
ಏನು ಆಗದವರಂತಿದ್ದೇವೆ
ಕ್ಲಾಕ್‌ಟವರಿನ ಕಾಗೆಯನ್ನು ಕೂಡ
ಆಮೇಲೆ ಯಾರೂ ಕಂಡಿಲ್ಲ

ಹೈದರಾಬಾದಿನಲ್ಲಿ ಜೂನ್

ಹೈದರಾಬಾದಿನಲ್ಲಿ ಜೂನ್ ಎಂದೊಡನೆ
ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ
ತಂಪು ಪಾನೀಯಗಳ ಸುಖ
ಮಾತಾಡುವುದಕ್ಕೆ ನೋಡುವುದಕ್ಕೆ
ಅವರವರು ಬಯಸುವ ಮುಖ

ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ
ಆ ಗಾಳಿಯಲ್ಲೆಲ್ಲೋ ತೆರೆಗಳ ತೇವ
ಶಾಖದೊಂದಿಗೆ ಸಮ್ಮಿಳಿಸಿದ್ದು
ಎಷ್ಟೋ ಒಣ ಬಯಲುಗಳನ್ನೂ
ದಂಡೆಗಳನ್ನೂ ಹಾಯ್ದು

ನಾಳೆ ಬರುವುದು ಮಳೆ ಇಂದು ಬರದಿದ್ದರೆ
ಅಥವಾ ನಾಡಿದು, ಮುಂದಿನ ವಾರ
ಬಂದೇ ಬರುವುದಂತೂ ನಿಜ
ಆತನಕ ಹಿಂದಿನ ಪ್ರಣಯದ ನೆನಪು
ಮೂಡುವುದು ಸಹಜ

ಸಂಜೆಯ ದೀಪಗಳನ್ನು ತುಸು ತಡವಾಗಿ
ಹಚ್ಚಿದರೆ ಸಾಲದೆ? ಆಕಾಶದ ಬೆಳಕನ್ನು
ಓಡಿಸಬೇಕು ಯಾಕೆ?
ನಮ್ಮ ದೀಪಗಳು ನಾವೆ-ಪರಸ್ಪರ
ಬೆಳಗುವವರೆಗೆ

ಅಲ್ಲಿದೆ ಈ ಸಂಜೆಯ ವಿಜೃಂಭಣೆಯಲ್ಲಿ
ಎಷ್ಟೊಂದು ದಿವ್ಯ ಮನುಷ್ಯರ ಮುಖ!
ಅಹ! ಏನದು ಕೇಳಿಸಿದ ಸದ್ದು?
ಏನಿಲ್ಲ, ಕಿಟಕಿ ಗಾಜಿನ ಮೇಲೆ ಬಿದ್ದ
ಆಕಸ್ಮಿಕ ಹನಿಯದ್ದು


ಭಾಗ್ಯನಗರ

ಈ ಚೌಕಾಂಬದಲಿ ನಿಂತು ಕೇಳುವೆನು ನಾನು
ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ?
ಇಷ್ಟೆತ್ತರದಿಂದ ಕಾಣಿಸುವುದೇನು-ಜನರು
ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು
ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು
ಯಾರೋ ಆಡುತ್ತಿರುವ ಆಟಿಕೆಗಳಂತೆ
ಮನುಷ್ಯರ ಮಾತುಗಳು ಗೊಂದಲದಂತೆ

ಗಾರೆಯಲಿ ಬರೆದ ಈ ಹೆಸರುಗಳು
ಯಾರವೆಂದು ಹೇಳುವುದು ಹೇಗೆ ?
ಚರಿತ್ರೆಯಲ್ಲಿ ಬರೆದಂತೆ ಬರೆದಿದ್ದಾರೆ ಇಲ್ಲಿ
ಹೆಣ್ಣುಗಂಡುಗಳು ಪ್ರವಾಸಿಗಳು ಪ್ರಣಯಿಗಳು
ಈ ಸುತ್ತು ಮೆಟ್ಟಲುಗಳನೊಂದೊಂದೆ
ಏರಿ ಬಂದವರು ಕಿಂಡಿಗಳ ಬಳಿ ನಿಂತು
ಮೂಸಿ-ಗೊಲ್ಕೊಂಡ-ಫಲಕ್‌ನುಮಾದ
ಮೇಲಿಂದ ಬೀಸಿ ಬರುವ ಗಾಳಿಗೆ ತೆರೆದು
ಮಾಯಾ ಪಕ್ಷಿಗಳಂತೆ ಮಾಯವಾದವರು
ಏನ ಬಿಟ್ಟರು ಏನ ಕೊಂಡೊಯ್ದರು

ಮಾರ್ಗಗಳು ಹೊರಟು ಊರುಗಳ ಸೇರಿದುವು
ಮಿನಾರಗಳ ನೆರಳು ಬಿದ್ದು ಬೆಳೆದುವು
ಅವು ಕೋಟೆಕೊತ್ತಲಗಳ ರೂಪು ತಳೆದುವು
ಅದೊ ಬುರುಜು! ಅದೊ ಸೇನೆ! ಅದೊ
ತೋಫಖಾನೆ! ಅದೋ ಅಂತಃಪುರದಿ೦ದ
ಹೊರಟ ಮೇನೆ! ಜಾಗಟೆಯ ಧ್ವನಿಯೊ
ನಮಾಜಿನ ಕರೆಯೊ ಕಾಳಗದ ಕಹಳೆಯೊ
ಕಂಡರೂ ಕಾಣಿಸದು ಕೇಳಿದರೂ ಕೇಳಿಸದು
ಸಂಜೆಯ ಮಬ್ಬಿನಲಿ ನನ್ನ ಜತೆ ಯಾರಿಲ್ಲ
ನನ್ನ ಹೊರತು ಯಾರೂ ಇರದಲ್ಲಿ? ಆಹ್!

ಯಾರ ಭಾಗದ ಭಾಗ್ಯ! ಭಾಗ್ಯಮತಿಯೇ
ಇನ್ನೂ ಇಲ್ಲೇಕೆ ಕುಳಿತಿರುವೆ ನೀನು?
ನಾಟ್ಯ ಮುಗಿಯಿತು, ದರಬಾರು ಮುಗಿಯಿತು
ಸುಲ್ತಾನನೂ ಹೊರಟು ಹೋದನು ಅರಮನೆಗೆ
ನಗರದ ದೀಪಗಳು ಒಂದೊಂದೆ ಆರಿಹೋಗಿವೆ
ಕತ್ತಲು ಬಂದು ಮಿನಾರಗಳನ್ನು ಮುತ್ತಿವೆ
ತಿಂಗಳಿನ್ನೂ ಮೂಡಿರದ ಹೊತ್ತು ಹೊಳೆಯುವುದು
ಮಾತ್ರ ನನ್ನ ಮೂಗಿನ ನತ್ತು ಬೆಳ್ಳಿ ನಕ್ಷತ್ರ –
ದಂತೆ ನರ್ತಿಸಿ ಆಯಾಸಗೊಂಡವಳೆ ನನ್ನ
ಕಲ್ಪನೆಯಲ್ಲಿ ಬಂದು ಇಡಿಯಾಗಿ ನಿಲ್ಲು
ನಿನ್ನ ಪ್ರೀತಿಯ ಬೆಳಕ ಚೆಲ್ಲು
ನಿನ್ನ ಹೆಸರನೆ ಹೊತ್ತ ನಗರದ ಮೇಲೆ


ತಾರನಾಕದ ಚೌಕ

ತಾರನಾಕದ ಚೌಕದಲಿ ನಿಂತು
ತಾರೆಗಳನೆಣಿಸಲಾರೆವು ನಾವು
ಒಂದೆಡೆ ಮೌಲಾ‌ಆಲಿ ಬೆಟ್ಟ
ಇನ್ನೊಂದೆಡೆ ಯಾದ್ಗಿರಿ ಗುಟ್ಟ
ಇವುಗಳ ನಡುವೆ ಆರಿಸಬೇಕೆಂದರೆ
ಅದು ನಿಜಕ್ಕೂ ಕಷ್ಟ

ಬನ್ನಿ, ಕುಳಿತು ಕುಡಿಯುತ್ತ
ಮಿರ್ಚಿಭಜಿ ಕಡಿಯುತ್ತ
ಸಮಸ್ಯೆಯ ಬಿಡಿಸಿ
ಇದು ಇನ್ನೊಂದು ರೀತಿ
ಎಂದು ಕರೆಯುತ್ತದೆ ಕಳ್ಳಿನಂಗಡಿ

ಇಲ್ಲಿ ಹಾಡುಹಗಲೇ ಇರುಳು
ತಾರೆಗಳ ಬದಲು ಮಿಣುಕುವ
ಕ್ಷೀಣಕಾ೦ತಿಯ ಬಲ್ಬುಗಳು
ಎಣಿಸುವುದಕ್ಕೆ ಸುಲಭ

ಅದರೇಕೆ ಕಣ್ಣಿನಲಿ ಈ ಒಸರು?
ಇದರ ಕಾರಣ ಮೆಣಸಿನ ಖಾರವೊ?
ಅಥವ ಇನ್ನೂ ಮಾತಿಗೆ ಬರದ
ನಮ್ಮ ಅಂತಿಮ ನಿರ್ಧಾರವೊ?


ಚಿತ್ರ ಕೃಪೆ: ಜಯ ಸಾಲಿಯಾನ, ಮುಂಬಯಿ