ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉಚಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ – ಒಂದು ವರದಿ

ಬೆಂಗಳೂರು: ವೈಟ್‍ಫೀಲ್ಡ್ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ 30 ದಿನಗಳಲ್ಲಿ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಕಲಿಸುವ ಉಚಿತ ಬೇಸಿಗೆ ಶಿಬಿರ ಮುಕ್ತಾಯಗೊಂಡಿದೆ. ಮುಕ್ತಾಯ ಸಮಾರಂಭವನ್ನು ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಪ್ರೊ. ಎನ್. ಸುಶೀಲ ಉದ್ಘಾಟಿಸಿದರು. ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಲೇಖಕಿ ಡಾ. ಸುಷ್ಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಾಹಿತಿ ಡಾ. ಜಯಶ್ರೀ ಸಿ. ಕಂಬಾರ್, ಲೇಖಕಿ ಮತ್ತು ಅನುವಾದಕಿ ಮಾಯಾ ಬಿ. ನಾಯರ್, ಸಿದ್ಧ ಸಮಾಧಿ ಯೋಗ ಶಿಕ್ಷಕ ಶಿವಾನಂದಪ್ಪ ಬಳ್ಳಾರಿ, ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಆರ್. ಶ್ರೀನಿವಾಸ್, ಪ್ರವಾಸಿ ಮಲಯಾಳಿ ಸಂಘ ವೈಟ್‍ಫೀಲ್ಡ್‍ನ ಅಧ್ಯಕ್ಷ ವಿ. ರಮೇಶ್ ಕುಮಾರ್, ವಿ. ಎಸ್ ರಾಕೇಶ್ ಸಹ ಮಾತನಾಡಿದರು.
​ಒಂದು ತಿಂಗಳ ಕಾಲ ನಡೆದ ಶಿಬಿರದಲ್ಲಿ ಮಕ್ಕಳು, ಹಿರಿಯರು ಸೇರಿದಂತೆ ಸುಮಾರು 150 ಮಂದಿ ಪಾಲ್ಗೊಂಡಿದ್ದರು. ಕೆಲಸಕ್ಕೆ ಹೋಗುವವರ ಅನುಕೂಲಕ್ಕಾಗಿ ಭಾನುವಾರವೂ ಕನ್ನಡ ತರಗತಿಗಳನ್ನು ನಡೆಸಲಾಗುತ್ತಿತ್ತು.


ಮಲಯಾಳಿಯಾದ ಡಾ. ಸುಷ್ಮಾಶಂಕರ್ ಅವರು ಕಳೆದ 15 ವರ್ಷಗಳಿಂದ ಉಚಿತ ಬೇಸಿಗೆ ಶಿಬಿರ ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಒಂದು ತಿಂಗಳೊಳಗಡೆ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಕಲಿಸುವುದೇ ಈ ಶಿಬಿರದ ಗುರಿ. ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಮಾರಂಭದಲ್ಲಿ ಡಾ. ಸುಷ್ಮಾಶಂಕರ್ ನೇತೃತ್ವದ ‘ತೊದಲ್ನುಡಿ ಚಿಣ್ಣರಿಗೊಂದು ನಲ್ನುಡಿ’ಯೆಂಬ ಮಕ್ಕಳ ಸಾಹಿತ್ಯ ಮಾಸಪತ್ರಿಕೆಯ ಒಂಬತ್ತನೇ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಆಂಗ್ಲಮಯ ಜಗತ್ತಿನಲ್ಲಿ, ಶಾಲಾ ಮಕ್ಕಳಲ್ಲಿ ಮಾತೃಭಾಷೆಯ ಮಹತ್ವ ಹಾಗೂ ಸಾಹಿತ್ಯಾಸಕ್ತಿ ಮೂಡಿಸುವುದು ಈ ಮಾಸಿಕದ ಲಕ್ಷ್ಯ. ಸಂಪೂರ್ಣವಾಗಿ ಒಂದರಿಂದ ಹತ್ತನೇ ತರತಗತಿಯವರೆಗು ಇರುವ ಮಕ್ಕಳ ಬರಹಗಳಿಂದ ತಯಾರಾಗುವ ಈ ಮಾಸಿಕದಲ್ಲಿ ಯಾವುದೇ ಜಾಹೀರಾತುಗಳಿಗೂ ಸಹ ಅವಕಾಶವಿಲ್ಲ.

ಪ್ರತಿವರ್ಷವು ನೀಡುತ್ತಿರುವ ಬಾಲಸಾಹಿತಿ ಪುರುಸ್ಕಾರಕ್ಕೆ (5001/-) ಈ ವರ್ಷ ಯಾರೂ ಅರ್ಹರಾಗಿಲ್ಲ. ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯ ಕಾರಣ ಶಾಲೆಗಳು ಮುಚ್ಚಿದ್ದರಿಂದ, ಆನ್‍ಲೈನ್ ತರಗತಿಗಳಿಗಾಗಿ ಸುಲಭವಾಗಿ ಮೊಬೈಲುಗಳನ್ನು ಪಡೆದ ವಿದ್ಯಾರ್ಥಿಗಳು ಅದರ ದುರುಪಯೋಗದಲ್ಲಿ ಸಿಲುಕಿಕೊಂಡಿದ್ದಾರೆ. ಓದುವಿಕೆ ಬರೆಯುವಿಕೆ ಹಾಗೂ ಸಂಸ್ಕೃತಿ ಯಿಂದಲೇ ದೂರವಾಗಿದ್ದಾರೆ ಎಂದು ಡಾ. ಸುಷ್ಮಾಶಂಕರ್‍ ಬೇಸರ ವ್ಯಕ್ತಪಡಿಸಿದರು.