ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಳೆಬಿಲ್ಲಿನ ಹುಡುಗಿಯರು ಮತ್ತು ಇನ್ನೊಂದು ಕವಿತೆ

ರಾಜಹಂಸ
ಇತ್ತೀಚಿನ ಬರಹಗಳು: ರಾಜಹಂಸ (ಎಲ್ಲವನ್ನು ಓದಿ)

ಮುಖಪುಸ್ತಕದ ಅಂಗಳದೊಳಗೆ
ಹುಡುಗಿಯರು ಹಾಕುವ ಕಸಕ್ಕೆ ಕೊಡುವಷ್ಟು ಬೆಲೆ
ಹುಡುಗರು ಹಾಕೋ ಬಂಗಾರಕ್ಕೂ ಕೊಡಲಾಗುವುದಿಲ್ಲ
ಇದು ಗಂಡು ಜಾತಿಯ ಅಸಹಜ ನಿಯಮವೇನಲ್ಲ

ಅವಸರವಾದ ತುಂಬಿಕೊಂಡಿರುತ್ತಾರೆ ಹುಡುಗರು
ಆದರೆ ಹುಡುಗಿಯರ ಜಾಯಮಾನವೇ ಬೇರೆ ಗುರು
ಅವಕಾಶವಾದಕ್ಕೆ ಬೆಲೆ ಕೊಡುತ್ತಾರಂತೆ ಅವರು
ಬುದ್ದಿವಾದ ಹೇಳುವುದಕ್ಕೂ
ಕೇಳುವುದಕ್ಕೂ ಇದು ಸೂಕ್ತ ಸಮಯವಲ್ಲ

ಹುಡುಗಿಯರಿಗೆ ಹೊಗಳಿಕೆಯ
ಹೂ ಕಡಲಿನಲಿ ತೇಲುವಂತೆ ಮಾಡುವುದೇ
ಹುಡುಗರ ಸರ್ವಶ್ರೇಷ್ಟ ಕಾಯಕ
ಹುಡುಗಿಯರು ತಮ್ಮ ಹಸ್ತ ರೇಖೆಗಳಲ್ಲೇ
ಹುಡುಗರನ್ನು ಜೋಲಿ ಹೊಡಿಸುವ
ಅಮೋಘ ಪ್ರತಿಭೆಯ ಜಾಣೆಯರು
ಆದರೆ ಆ ಮಾಯಾ ಕನ್ನಡಿಗೆ ಕಲ್ಲು
ಹೊಡೆದು ಪುಡಿ ಪುಡಿ ಮಾಡುವವರು ಯಾರು?
ಕುತೂಹಲ ಬಿಂದುವಿನ ಮೊಟ್ಟೆ
ಒಡೆದು ಭ್ರಮೆಗೆ ತೆರೆ ಎಳೆಯುವವರು ಯಾರು?

ಒಡೆಯಲಾಗದ ಒಗಟುಗಳಿಗೆ ಗಂಟುಕಟ್ಟಿ
ಸಮುದ್ರಕ್ಕೆ ಎಸೆಯಲು ಆಗುವುದಿಲ್ಲ
ಬಿಸಿರಕ್ತದ ಜ್ವಾಲೆಯೊಳಗೆ ಸಿಲುಕಿದರೂ
ಅವು ಸುಟ್ಟು ಬೂದಿಯೂ ಆಗುವುದಿಲ್ಲ

ಹುಡುಗಿಯರು ಮಳೆಬಿಲ್ಲು!
ಹುಡುಗರು ಸಿಡಿಲಿನ ಹಾಗೆ
ಮಿಂಚಿ ಕ್ಷಣಾರ್ಧದಲಿ ಮಾಯವಾಗಲು
ಜನ್ಮ ನೀಡುವ ಮೋಡಗಳ ಅಳಲು
ಹರಿದು ಹೋಗುವಂತೆ ಕಾರ‍್ಮುಗಿಲು
ಒಂದೇ ಸಮನೆ ಕಣ್ಣೀರು
ಸುರಿಸುವರು ಪರಸ್ಪರ ಅಪ್ಪಿಕೊಂಡು
ಬಿಸಿಲ ಯಮನಿಗೆ ಬಲಿಯಾಗುವರು

ಎಲ್ಲಬಲ್ಲ ಚಂಚಲ ಮನಸ್ಸಿನ ನಾವು
ಹುಡುಗಿ ಕೊಟ್ಟರೆ ನೀರು ಏನು
ವಿಷ ಬೇಕಾದರೂ ಕುಡಿಯುವೆವು
ಆದರೆ ಹುಡುಗ ಕೊಟ್ಟರೆ
ಅಮೃತವೂ ಕುಡಿಯುವುದಿಲ್ಲ

-೧-
ಮಣ್ಣಿನ ಖಾಯಂ ಹಾಸಿಗೆಯಲಿ ಮಲಗಿ
ಚಿರನಿದ್ರೆಗೆ ಜಾರುತ್ತಾರೆ
ಸವಿಗನಸಿನ ಗೂಡಿನಲಿ ಹಕ್ಕಿಯೊಂದಿಗೆ
ಸಪ್ತಪದಿ ತುಳಿದುಬಿಟ್ಟರೆ

ಬೇಕಾದರೆ
ನಿಶ್ಚಿಂತೆಯಲಿ ಕಾಜಿನ ಗೋಲಿ ಆಡುವ
ಎಳೆ ವಯಸ್ಸಿನ ಆ ಮಗುವಿಗೆ ಕೇಳು
ಎದೆ ಒಡೆದು ಚೂರಾಗುತ್ತದೆ
ಜೀವಭಯದಿಂದ ಅದರುತ್ತದೆ

ಅವಸಾನದ ಬಿಂದುವಿನಲಿ ಮೆರವಣಿಗೆ
ಹೊರಟಿದೆ ಬ್ರಹ್ಮಾಂಡ ತೂಕದ ಸಮಸ್ಯೆ
ಇರುಳ ಮಡಿಲಿನಲಿ ಮಲಗಿ
ನಿದ್ರಾಕಾಶವ ಸೇರಿದರೆ ಸಾಕು
ನನ್ನ ಎರಡು ನೇತ್ರಗಳ ತುಂಬ
ಅಸಂಖ್ಯ ಸ್ವಪ್ನ ತಾರೆಗಳ ಬಿಂಬ

-೨-
ಗಟ್ಟಿಯಾಗಿ ಹಿಡಿದುಕೊಂಡಿದೆ ಕಿರುಬೆರಳು
ಯಾವುದೋ ಸೌರವ್ಯೂಹದಿಂದ ಬಂದ
ಚೆಲುವು ಪ್ರತಿಫಲಿಸುವ ಅಪರೂಪದ ಹಕ್ಕಿ
ಚಂದಿರನಂತೆ ಹಾಲುಬಣ್ಣದ ಬಟ್ಟೆ ಧರಿಸಿ
ಬೆಳದಿಂಗಳ ನಗು ಬೀರುವ ನನಗೆ
ಅವಳು ಹಸಿರು ಸೀರೆಯುಟ್ಟ ಭೂಮಿ

ಅಗ್ನಿ ಸಾಕ್ಷಿಯಾಗಿ ಸೂರ್ಯನಿಗೆ
ಸುತ್ತು ಹಾಕಿ ದಾಂಪತ್ಯಕ್ಕೆ ಹೆಜ್ಜೆ
ಇಡುವ ತರಾತುರಿಯಲ್ಲಿರುವಾಗಲೇ…
ತೆರೆಯಿತು ಕಂಗಳ ಬಾಗಿಲು
ಕಾರ್ಗತ್ತಲು ತುಂಬಿದ ಕಡಲು
ಮನದ ಒಳಗೂ ಹೊರಗೂ

-೩-
ಬೆನ್ನ ಮೂಳೆ ಮುರಿದ ಹಾಗೆ
ಎದೆಯಲಿ ಭಾರಿ ನೋವು ಇನ್ನೇನು ಸಾವು
ಆದರೆ ಸಂವತ್ಸರಗಳು ಕ್ಷಣಗಳಂತೆ
ಉರುಳುತ್ತಿದ್ದರೂ ದೂರವೇ ಸಾಗುತ್ತಿದೆ
ದೂರವೆಂದರೂ ದೂರವೇನಿಲ್ಲ
ಅನುಕ್ಷಣ ಬೆನ್ನ ಹಿಂದೆಯೇ!