ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಚುವರ್ ಬುಡಕಟ್ಟಿನ

ಈಕ್ವೇಡಾರ್ ದೇಶದ ಅಚುವರ್ ಬುಡಕಟ್ಟಿನ ಬಗ್ಗೆ ವಿಶ್ವಾಸ್ ಭಾರದ್ವಾಜ್ ಬರೆದ ಆಸಕ್ತಿಪೂರ್ಣ ಲೇಖನ....
ವಿಶ್ವಾಸ್ ಭಾರದ್ವಾಜ್
ಇತ್ತೀಚಿನ ಬರಹಗಳು: ವಿಶ್ವಾಸ್ ಭಾರದ್ವಾಜ್ (ಎಲ್ಲವನ್ನು ಓದಿ)

ಮರಗಳು ನಮ್ಮ ಅಜ್ಜಂದಿರು, ಪೂರ್ವಜರು ಎಂದು ಭಾವಿಸುವ ಈಕ್ವೇಡಾರ್ ದೇಶದ ಅಚುವರ್ ಬುಡಕಟ್ಟಿನ ಜನರು ಪ್ರಕೃತಿ ಪ್ರೇಮಿಗಳಿಗೆಲ್ಲಾ ಆದರ್ಶವಾಗಬೇಕು.

ವಿಶ್ವಾಸ್ ಭಾರದ್ವಾಜ್

ಸಾವಿರಾರು ವರ್ಷಗಳಿಂದ ಅಮೇಜಾನ್ ಮಳೆಕಾಡುಗಳನ್ನೇ ತಮ್ಮ ನೆಲೆಯಾಗಿಸಿಕೊಂಡು ಆಧುನಿಕತೆಯ ಸೋಂಕಿಲ್ಲದೇ ಕಾಡಿನ ನೆರಳಲ್ಲಿ ತಾಳೆ ಮರದವ್ವನ ಸಂಸ್ಕಂತಿಯನ್ನು ಪೋಷಿಸಿಕೊಂಡು ಬಂದ ವಿಶಿಷ್ಟ, ವಿಭಿನ್ನ ಮತ್ತು ವಿಸ್ಮಯಕಾರಿ ಬುಡಕಟ್ಟು ಜನಾಂಗ ಅಚುವರ್ ಇಂಡಿಯನ್ಸ್. ಸದ್ಯ ಈಕ್ವೇಡಾರ್ ಮತ್ತು ಪೆರುವಿನ ಗಡಿಭಾಗದಲ್ಲಿರುವ ಅಮೇಜಾನ್ ಕಾಡಿನಲ್ಲಿ ವಾಸವಿರುವ ಈ ಬುಡಕಟ್ಟು ಮಂದಿಯ ಒಟ್ಟು ಜನಸಂಖ್ಯೆ ಕೇವಲ 18500. ಇದರಲ್ಲಿ 15000ದಷ್ಟು ಜನ ಈಕ್ವೇಡಾರ್‍ನಲ್ಲಿ, 3500ರಷ್ಟು ಮಂದಿ ಪೆರುವಿನಲ್ಲಿ ಮತ್ತು 1500ರಷ್ಟು ಸಮೂಹ ಸ್ಪೇನ್‍ನ ಕಾಡುಗಳಲ್ಲಿ ಬದುಕುತ್ತಿದ್ದಾರೆ. ಇವರಲ್ಲೂ ಶಾಮಾನಿಸಂ ಮತ್ತು ಅನಿಮಿಸಂ ಎಂಬೆರಡು ಜಾತಿಗಳಿವೆ, ಉಪವರ್ಗಗಳೂ ಇವೆ. ಹೊರಜಗತ್ತಿನ ಸಂಪರ್ಕವೇ ಇಲ್ಲದೇ ಬದುಕುತ್ತಿರುವ ಈ ಜಿವಾರೋನ್ ಜನಾಂಗದ ಕಟ್ಟಕಡೆಯ ಸಂತತಿಯನ್ನು ನಾಶ ಮಾಡುತ್ತಿರುವುದು ಜಗತ್ತನ್ನೇ ನಾಶ ಮಾಡುತ್ತಿರುವ ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆ. ಇಂತದ್ದೊಂದು ಸಮೂಹವನ್ನು ಉಳಿಸಿಕೊಳ್ಳುವತ್ತ ವಂಶಾವಳಿ ಅಧ್ಯಯನಕಾರರು ಹರಸಾಹಸ ಪಡುತ್ತಿದ್ದಾರೆ.

ಅಚುವರ್ ಬುಡಕಟ್ಟಿನ ಒಬ್ಬ ಯುವ ಬೇಟೆಗಾರ

ಅಚುವರ್ ಇಂಡಿಯನ್ಸ್ ಟ್ರೈಬ್ ಸಮುದಾಯ ತಲೆತಲೆಮಾರುಗಳಿಂದ ನುರಿತ ಬೇಟೆಗಾರರಾಗಿ, ಮೀನುಗಾರರಾಗಿ ಬದುಕು ಕಟ್ಟಿಕೊಂಡವರು. ಈಗಲೂ ಎಳೆಯ ಮಕ್ಕಳನ್ನು ಕಂಕುಳಿಗೆ ಕಟ್ಟಿಕೊಂಡು ಅಮೇಜಾನ್ ಕಾಡಿನ ಮಧ್ಯಭಾಗದ ಸಿಹಿನೀರಿನ ಹೊಳೆ ಸರೋವರಗಳಲ್ಲಿ ದೋಣಿ ನಡೆಸುತ್ತಾ ಮತ್ಸ್ಯ ಭೇಟೆಯಾಡುವ ಅಚುವರ್ ಮಹಿಳೆಯರಿದ್ದಾರೆ. ಆದರೆ ತಮ್ಮ ಇಡೀ ಸಂಕುಲವನ್ನು ಪ್ರಕೃತಿಯೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡವರು; ತಮ್ಮನ್ನು ತಾವು ಅರಣ್ಯ ಕಟ್ಟಾ ಸಂರಕ್ಷಕರು ಎಂದು ಕರೆದುಕೊಳ್ಳುವ ಈ ಸಮುದಾಯದ ಪವಿತ್ರ ಸಂಸ್ಕಂತಿ; ಪ್ರಕೃತಿ ಆರಾಧನೆ ಮತ್ತು ಅದಮ್ಯ ನಂಬಿಕೆ; ಮರಗಳು ತಮ್ಮ ಪೂರ್ವಿಕರು ಎನ್ನುವುದು. ಅಚುವರ್ ಎಂದರೆ ‘ಅಗ್ವಾಜೆ ಪಾಮ್ ಪೀಪಲ್’ ಅಂದರೆ ಒಂದು ಜಾತಿಯ ತಾಳೆ ಮರದ ಜನ ಎಂದರ್ಥ.
ಈ ಅಚುವರ್ ಇಂಡಿಯನ್ಸ್ ವಂಶವೃಕ್ಷವನ್ನು ಸರಿಯಾಗಿ ಗಮನಿಸಿದಾಗ ಕಂಡು ಬರುವ ಕಹಿ ಸತ್ಯವೆಂದರೆ, ಕಾಲಕಾಲಕ್ಕೆ ಹಂತಹಂತವಾಗಿ ಇವರ ಜನಸಂಖ್ಯೆ ಕುಂಠಿತಗೊಳ್ಳಲು ಪ್ರಮುಖ ಕಾರಣ ಮಾನವ ನಿರ್ಮಿತ ಪ್ರಕೃತಿನಾಶ ಮತ್ತು ಆಧುನಿಕತೆಯ ಭರಾಟೆ.

ಯಾವ ತಂತ್ರಜ್ಞಾನ ಅಭಿವೃದ್ಧಿ ಈ ಅಚುವರ್ ಜನಾಂಗದ ನಾಶಕ್ಕೆ ಕಾರಣವಾಗಿತ್ತೋ ಅದೇ ತಂತ್ರಜ್ಞಾನದ ಸಹಾಯದಿಂದ ಅಚುವರ್ ವಂಶಾವಳಿ ಮತ್ತು ಇತಿಹಾಸ, ಅವರ ಮೂಲಭೂತ ನಂಬಿಕೆ ಮತ್ತು ಸಂಸ್ಕಂತಿಯನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಜಾಗತಿಕ ವಂಶಾವಳಿ ಅಧ್ಯಯನದ ವೆಬ್‍ಸೈಟ್ ಮೈ ಹೆರಿಟೇಜ್ ತಂಡದ ಸದಸ್ಯರು ಶತಾಯಗತಾಯ ಈ ಬುಡಕಟ್ಟು ಸಮೂಹವನ್ನು ಅವರ ಮೂಲ ಆಚರಣೆಗಳ ಸಹಿತ ಉಳಿಸಲು ಪಣ ತೊಟ್ಟಿದೆ. ಆದರೆ ಈ ಸಣ್ಣ ಜನಾಂಗದ ಪ್ರಕೃತಿ ಬಗೆಗಿನ ಕಳಕಳಿಯನ್ನು ಆಲಿಸಿದರೆ, ಇವರ ನಿಸರ್ಗ ಪ್ರೇಮ ಅದೆಷ್ಟು ಆಳ ಎನ್ನುವುದು ಅರಿವಾಗುತ್ತದೆ. ಯುಂಕರ್ ಎಂಬ ಹೆಸರಿನ ಅಚುವರ್ ಇಂಡಿಯನ್ ಬುಡಕಟ್ಟು ಗುಂಪಿನ ನಾಯಕನೊಬ್ಬ ಮಾತಾನಾಡುತ್ತಾ ಹೇಳುತ್ತಾನೆ,

“ಪ್ರಕೃತಿ ನಮ್ಮ ದೇವತೆ, ಮರಗಳು ನಮ್ಮ ಪೂರ್ವಿಕರು. ಈ ಮರಗಳೊಂದಿಗೆ ನಾವು ನಿತ್ಯ ಮಾತಾಡುತ್ತೇವೆ. ಹೀಗೆ ಆಧುನಿಕತೆಯ ಹೆಸರಿನಲ್ಲಿ ಆಗುತ್ತಿರುವ ಅರಣ್ಯ ನಾಶವನ್ನು ನೋಡನೋಡುತ್ತಲೇ ನಾವು ನಿತ್ಯವೂ ಹತಾಶೆಯಿಂದ ಕೊರಗಿ ಸಾಯುತ್ತಿದ್ದೇವೆ. ಜಗತ್ತು ಬದಲಾಗುತ್ತಿದೆ ನಿಜ, ಆದರೆ ನಾವೆಂದಿಗೂ ಬದಲಾಗುವುದಿಲ್ಲ. ನಮ್ಮ ವಸಾಹತುಗಳನ್ನು ರಕ್ಷಿಸಿಕೊಳ್ಳುವುದು, ನಮ್ಮ ಪರಿಸರವನ್ನು ಕಾಪಾಡುವುದು ಮತ್ತು ಮುಂದಿನ ಪೀಳಿಗೆಗೆ ಇದನ್ನು ಕೊಂಡೊಯ್ಯುವುದಷ್ಟೇ ನಮ್ಮ ಮೊದಲ ಮತ್ತು ಅಂತಿಮ ಗುರಿ. ಈ ಸಮುದಾಯದ ನಾಯಕನಾಗಿ ನಾನಿಂದು ಜಾಗತಿಕವಾಗಿ ಧ್ವನಿ ಎತ್ತದೇ ಇದ್ದರೆ, ನಮ್ಮ ಸಮುದಾಯದ ಆಸೆ ಭರವಸೆಗಳೇ ಕಮರಿಹೋಗುತ್ತದೆ. ನಮ್ಮ ಪರಂಪರೆಗಳ ಉಳಿವಿಗಾಗಿ ಮತ್ತು ನಮ್ಮ ಜನರಲ್ಲಿ ಸಕಾರಾತ್ಮಕ ನಂಬಿಕೆ ವೃದ್ಧಿಸಲು ನಾನಿಂದು ಅನಿವಾರ್ಯವಾಗಿ ಮುಖ್ಯವಾಹಿನಿಗೆ ಬರಬೇಕಾಗಿದೆ.”

ಹೀಗೆಂದು ಅಂತರಾಷ್ಟ್ರೀಯ ಸಮುದಾಯದ ಮುಂದೆ ಕೈಮುಗಿದು ಬೇಡುವ ಆ ಅನಕ್ಷರಸ್ಥ ಬುಡಕಟ್ಟು ನಾಯಕ ಜಗತ್ತಿನ ಪ್ರಕೃತಿ ಪ್ರೇಮಿಗಳ ಮನಸ್ಸು ಗೆದ್ದಿದ್ದಾನೆ.

Image may contain: 1 person, outdoor

ಅಚುವರ್ ಇಂಡಿಯನ್ಸ್ ಸಮುದಾಯದ ಇನ್ನೊಂದು ಉಪವರ್ಗ ವಾಯುಸೆಂಟ್ಸಾ ನಾಯಕ ಯಾಂಪಿಯಾ ಸಂಟಿ, “ಮೈ ಹೆರಿಟೇಜ್ ಯೋಜನೆಯ ಬಗ್ಗೆ ತಾನು ನಂಬಿಕೆ ಹೊಂದಿದ್ದು, ನಮ್ಮ ಸಮುದಾಯ ಇನ್ನೂ ಹಲವು ಶತಮಾನ ಬಾಳಿ ಬದುಕಬೇಕಿದೆ. ತನ್ಮೂಲಕ ವೃಕ್ಷ ರಕ್ಷಣೆಯ ದಿವ್ಯ ಸಂದೇಶವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಯುವಕರನ್ನು ಮುಖ್ಯವಾಹಿನಿಯತ್ತ ಕರೆತರಲು ನಾನು ಸಿದ್ಧ” ಎಂದಿದ್ದಾನೆ.

ಜಿವಾರೂನ್ ಭಾಷೆಯಾದ ಅಚುವರ್-ಶಿವಿಯರ್ ಭಾಷೆಯಲ್ಲಿ ಸಂವಹಿಸುವ ಈ ಸಮುದಾಯದ ಬಗ್ಗೆ ಮೊದಲು ಯುರೋಪಿಯನ್ ದಾಖಲೆಗಳಲ್ಲಿ ನಮೂದಾಗಿದ್ದು 1548ರಲ್ಲೇ ಆದರೂ 20ನೇ ಶತಮಾನದ ಪೂರ್ವಾರ್ಧದವರೆಗೆ ಇವರು ಅಜ್ಞಾತವಾಗೇ ಇದ್ದರು. ಜಗತ್ತನ್ನೇ ಪರ್ಯಟನೆ ಮಾಡಿದ್ದ ಕ್ರಿಶ್ಚಿಯನ್ ಮಿಶನರಿಗಳೂ 1940-50ರ ತನಕ ಇವರನ್ನು ಗುರುತಿಸಿರಲಿಲ್ಲ. ಕ್ರಿಶ್ಚಿಯನ್ ಮಿಷನರಿಗಳ ಬಂದ ನಂತರ ಅಚುವರ್ ಸಮುದಾಯ ತಾಳೆ ಮರ ಮತ್ತು ಹುಲ್ಲು ಬಳಸಿ ಗುಡಿಸಲು ಕಟ್ಟಿಕೊಂಡು ಸಣ್ಣ ಸಣ್ಣ ಹಳ್ಳಿಗಳನ್ನು ನಿರ್ಮಿಸಿಕೊಂಡು ಬದುಕುತ್ತಿದೆಯಂತೆ. ಈಗೀಗ ಅವರಿಗೆ ಆಧುನಿಕ ಉಡುಗೆ ತೊಡುಗೆಗಳೂ ಲಭ್ಯವಿದೆಯಾದರೂ, ತಮ್ಮನ್ನು ತಾವು ನಾಗರೀಕ ಪ್ರಪಂಚದ ಮುಂಚೂಣಿಗೆ ಬರಲು ಅಚುವರ್ ಇಂಡಿಯನ್ ಟ್ರೈಬ್ಸ್ ಇಂದಿಗೂ ಸಿದ್ಧರಿಲ್ಲ.

1964ರಲ್ಲಿ ತಾಳೆ ಎಣ್ಣೆ ಉತ್ಪಾದಿಸುವ ಕಂಪೆನಿಗಳು ಅಮೇಜಾನ್ ಮಳೆಕಾಡಿನೊಳಗೆ ಕಾಲಿಟ್ಟವು. ಅಂದಿನಿಂದಲೇ ಅಚುವರ್ ಬುಡಕಟ್ಟು ಜನಾಂಗದ ನೆಮ್ಮದಿಯ ದಿನಗಳು ಮುಗಿಯತೊಡಗಿದವು. ಜೊತೆಗೆ ಕೆಲವು ತೈಲೋತ್ಪಾದನ ಕಂಪೆನಿಗಳು ಭೂಮಿಯನ್ನು ತೋಡತೊಡಗಿದವಲ್ಲ, ಆಗ ನಡೆದ ಅವ್ಯಾಹತ ಅರಣ್ಯ ನಾಶವೂ ಈ ಸಮುದಾಯದ ನಿದ್ದೆ ಕೆಡಿಸಿತು. ವಸಾಹತು ನಾಶ, ಪೈಪ್ ಲೈನ್ ಅಳವಡಿಕೆ, ಪರಿಸರ ಮಾಲಿನ್ಯ, ರೋಗಗಳು ಮತ್ತು ಇವರ ಮೇಲೆ ನಡೆದ ದಾರುಣ ಹಿಂಸಾಚಾರದಿಂದ, ಹೊರಗಿನ ಜನರೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ ಅಚುವರ್ ಜನಾಂಗ ನಾಶವಾಗುವತ್ತ ಸಾಗಿತು.

2019ರಲ್ಲಿ ತೈಲ ಸಬ್ಸಿಡಿಗೆ ಆಗ್ರಹಿಸಿ ಈಕ್ವೇಡಾರ್ ಪ್ರತಿಭಟನೆಯಲ್ಲಿ ಮುಖ್ಯ ಭೂಮಿಕೆ ವಹಿಸಿದ ಜೈಮೇ ವರ್ಗಾಸ್ ಈ ಅಚುವರ್ ಸಮುದಾಯಕ್ಕೆ ಸೇರಿದವನು.

ವಿ.ಸೂ: ಮೈ ಹೆರಿಟೇಜ್ ಎಂಬ ಅಮೇರಿಕನ್ ಮೂಲದ ವೆಬ್ ಸೈಟ್ ನಮೀಬಿಯಾದ ಹಿಂಬಾ ಬುಡಕಟ್ಟು ಜನಾಂಗ, ಪಪುವಾ ನ್ಯೂಜಿನಿಯ 5 ವಿಭಿನ್ನ ಬುಡಕಟ್ಟು ಸಮೂಹ ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳ ವಂಶಾವಳಿ ಮತ್ತು ಇತಿಹಾಸ ಜೊತೆಗೆ ಸಂಸ್ಕೃತಿ ಹಾಗೂ ಜೀವನ ಪದ್ಧತಿಯ ಅಧ್ಯಯನ ನಡೆಸುತ್ತಿದೆ.

ಆಕರಗಳು: ದಿ ಗಾರ್ಡಿಯನ್ ಪತ್ರಿಕೆ, ವಿಕಿಪೀಡಿಯಾ, ಪಂಚಮಾಮಾ.ಆರ್ಗ್, ಮೈ ಹೆರಿಟೇಜ್