- ಅನಾದ - ಫೆಬ್ರುವರಿ 18, 2023
- ಗಾಳಿಗೆ ತೊಟ್ಟಿಲ ಕಟ್ಟಿ - ಆಗಸ್ಟ್ 22, 2021
- ಬಾಬಾಸಾಹೇಬರೆಡೆಗೆ - ಆಗಸ್ಟ್ 22, 2021
ಮಾಯಾಪಂಜರ: ನಗರ ಸಂವೇದನೆಯ ಕಥೆಗಳು. ಲೇ: ಡಾ.ಪ್ರಸನ್ನ ಸಂತೇಕಡೂರು. ಪ್ರಕಾಶನ: ಮಲೆನಾಡು ಪ್ರಕಾಶನ,ಚಿಕ್ಕಮಂಗಳೂರು
ಡಾ. ಪ್ರಸನ್ನ ಸಂತೇಕಡೂರು ಹೊಸ ತಲೆಮಾರಿನ ಸೂಕ್ಷ್ಮ ಸಂವೇದನೆಯ ಪ್ರಮುಖ ಲೇಖಕ. ಅವರು ಕಳೆದ ಹತ್ತು ವರ್ಷಗಳವರೆಗೆ ಅಮೆರಿಕಾದಲ್ಲಿ ಸಂಶೋಧಕರಾಗಿದ್ದು, ಈಗ ಭಾರತಕ್ಕೆ ಹಿಂದುರುಗಿ ಕರ್ನಾಟಕದ ಮೈಸೂರಿನಲ್ಲಿ ವಿಜ್ಞಾನ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕವಯಸ್ಸಿನಂದಲೇ ಕನ್ನಡ-ಇಂಗ್ಲಿಷ್ ಸಾಹಿತ್ಯ ಓದುವ ಅಭ್ಯಾಸವಿದ್ದರೂ ಪ್ರಸನ್ನರು ಬರವಣಿಗೆಗೆ ಸ್ವಲ್ಪ ತಡವಾಗಿಯೇ ತೊಡಗಿಕೊಂಡಿದ್ದು ಕಂಡುಬರುತ್ತದೆ.
ಪ್ರಸ್ತುತ ‘ಮಾಯಾಪಂಜರ’ ಡಾ. ಪ್ರಸನ್ನ ಸಂತೇಕಡೂರು ಅವರ ಪ್ರಥಮ ಕಥಾಸಂಕಲನ. ಈ ಸಂಕಲನದಲ್ಲಿ ಹದಿಮೂರು ಕಥೆಗಳಿವೆ. ಈ ಕಥಾಸಂಕಲನ ಹಲವು ಕಾರಣಗಳಿಂದ ಓದುಗರಿಗೆ ಕುತೂಹಲವನ್ನುಂಟು ಮಾಡುತ್ತದೆ. ಸಂಕಲನದಲ್ಲಿನ ಬಹುತೇಕ ಕಥೆಗಳ ಭೂಮಿಕೆ ಭಾರತ-ಅಮೆರಿಕಾ. ಈ ಸಂಕಲನದ ಕೆಲವು ಕಥೆಗಳನ್ನು ಓದಿದಾಗ ಮಾನಸಿಕವಾಗಿ ಅಮೆರಿಕಾ ಪ್ರವಾಸ ಮಾಡಿದ ಅನುಭವವಾಗುತ್ತದೆ. ಇತ್ತೀಚೆಗೆ ಅಧಿಕವಾಗಿ ಸೃಷ್ಟಿಯಾಗುತ್ತಿರುವ ಕಥೆಗಳ ನಡುವೆ ಡಾ. ಪ್ರಸನ್ನ ಸಂತೇಕಡೂರು ಅವರ ಕಥೆಗಳು ಕುತೂಹಲಕಾರಿಯಾಗಿವೆ. ಈಗಾಗಲೇ ಪತ್ರಿಕೆಗಳಲ್ಲಿ ತಮ್ಮ ಕಥೆಗಳನ್ನು ಪ್ರಕಟಿಸಿರುವ ಪ್ರಸನ್ನರು, ‘ಮಾಯಾಪಂಜರ’ ಸಂಕಲನದ ಕಥೆಗಳಲ್ಲಿ ಭಾರತದ ನಗರಗಳ ಮಧ್ಯಮ ವರ್ಗದವರ ಜೀವನ ಮತ್ತು ಅಮೆರಿಕಾದ ಬದುಕಿನ ಏಕಾಕಿತನ, ಪಶ್ಚಾತ್ತಾಪ, ಅನಾಥಪ್ರಜ್ಞೆ, ತವಕ, ತಲ್ಲಣ, ದುಃಖ, ದುಮ್ಮಾನ, ಹತಾಶೆಗಳನ್ನು ಚಿತ್ರಿಸಿದ್ದಾರೆ. ಜೀವನದಲ್ಲಿ ಪ್ರಸನ್ನರು ಕಂಡ ಕೆಲವು ಘಟನೆಗಳು, ಪಡೆದ ಅನುಭವಗಳು ಈ ಕಥೆಗಳಿಗೆ ಪ್ರೇರಣೆ ನೀಡಿವೆ.
ಪ್ರಸನ್ನರ ಈ ಕಥಾಸಂಕಲನದಲ್ಲಿ ಅವರ ಜೀವನಾನುಭವ ವಿಸ್ತಾರ ತನ್ನೆಲ್ಲಾ ವೈವಿಧ್ಯದೊಂದಿಗೆ ಕಥಾ ರೂಪಗಳಲ್ಲಿ ಬಿಚ್ಚಿಕೊಂಡಿದೆ. ಮಲೆನಾಡಿನ ಭಾಗದಲ್ಲಿ ಕಳೆದ ಲೇಖಕರ ಬಾಲ್ಯ, ದುಡಿಮೆಯನ್ನು ಅರಸಿ ದೇಶ ಬಿಟ್ಟು ಹೊರಟವರ ಬವಣೆ, ಡಾಲರ್ ಗಳಿಕೆಯ ಆಕರ್ಷಣೆಗೆ ಅಮೆರಿಕದ ಬದುಕನ್ನು ಅಪ್ಪಿಕೊಂಡವರ ತಳಮಳ ಮೊದಲಾದ ಸಂಗತಿಗಳು ಇಲ್ಲಿ ಕಥೆಗಳ ಸ್ವರೂಪ ಪಡೆದಿವೆ. ವಿದೇಶಿ ನೆಲದಲ್ಲಿ ನೆಲೆಸಿದವರು ಭಾರತವನ್ನು ಬಿಟ್ಟು ಹೋಗಿರುವ ಹಳಹಳಿಕೆಯೇನೂ ಇಲ್ಲಿನ ಕಥೆಗಳಲ್ಲಿ ಕಾಣುವುದಿಲ್ಲ. ಒಂದೆರಡು ಕಥೆಗಳಲ್ಲಿ ಅಂತಹ ವಸ್ತುವಿದ್ದರೂ ವರ್ತಮಾನದ ಬದುಕಿಗೆ ಪೂರಕವಾಗಿಯೇ ಅವುಗಳ ನಿರ್ವಹಣೆ ಇದೆ. ಸಂಕಲನದ ಕೆಲವು ಕಥೆಗಳಲ್ಲಿ ಭೂತ-ವರ್ತಮಾನಗಳು ಬೆಳೆದುಕೊಂಡಿವೆ. ಕನ್ನಡ ಕಥಾಲೋಕದ ಎಲ್ಲ ಪರಂಪರೆಗಳ ಪರಿಚಯವಿರುವ ಈ ಲೇಖಕರ ಪ್ರಯೋಗಶೀಲತೆ ಮೆಚ್ಚುವಂಥದ್ದು. ಪ್ರಸನ್ನರ ಕಥೆಗಳಲ್ಲಿ ಹೊರ ಜಗತ್ತನ್ನು ಪಾತ್ರಗಳ ಮನಸ್ಸಿನಿಂದ ನೋಡುವ ಪ್ರಯತ್ನವಿದೆ. ವಸ್ತುವೊಂದನ್ನು ಆಯ್ಕೆಮಾಡಿದ ಮೇಲೆ ಅದರ ಸುತ್ತಲೇ ಘಟನೆಗಳು ನಡೆಯುವಂತೆ, ನಿದರ್ಿಷ್ಟ ಗುರಿಯನ್ನು ತಲುಪುವಂತೆ ಎಚ್ಚರಿಕೆಯ ಬರವಣಿಗೆ ಇಲ್ಲಿನ ಹದಿಮೂರು ಕಥೆಗಳಲ್ಲಿ ಕಾಣುತ್ತದೆ.
‘ಒಲವೇ ಜೀವನ ಸಾಕ್ಷತ್ಕಾರ’ ಮನುಷ್ಯ ಸಂಬಂಧದ ಸ್ವರೂಪವನ್ನು ಶೋಧಿಸುವ ಒಂದು ಮನೋಜ್ಞ ಕಥೆಯಾಗಿದೆ. ಭ್ರಮೆ, ವರ್ತಮಾನದ ನಡುವೆ ತುಯ್ಯವ ಕಥೆಯಲ್ಲಿ ಜೀವಗಳ ಸಹಜ ಸಂಬಂಧ ಬೆಳೆಯುತ್ತ ಹೋಗುತ್ತದೆ. ಸತ್ತ ಹೆಂಡತಿಯ ನೆನಪಿನಲ್ಲೇ ಬದುಕುತ್ತಿರುವ ಸಾಂಟಿಯಾಗೊ ಓದುಗರ ಮನದೊಳಗೆ ಬಹುಕಾಲ ಉಳಿಯುವಂತಹ ಪಾತ್ರ. ವ್ಯಕ್ತಿಯ ಅಂತರಂಗದ ದುಃಖ, ದುಮ್ಮಾನ, ಆಶೆ, ನಿರೀಕ್ಷೆಗಳನ್ನು ವಿಷಾದದ ಬಾಂಡಲಿಯಲ್ಲಿ ಅದ್ದಿ ತೆಗೆದಂತಿರುವ ಈ ಕಥೆ ಪ್ರಸನ್ನರ ಕಥನ ಪ್ರತಿಭೆಯನ್ನು ಅದ್ಭುತವಾಗಿ ಪರಿಚಯಿಸುತ್ತದೆ.
ಈ ಸಂಕಲನದ ಹೆಸರೇ ಕುತೂಹಲಕರವಾಗಿದೆ. ಈ ಹೆಸರಿನ ಕಥೆ ಒಂದು ರೀತಿಯಲ್ಲಿ ಫ್ಯಾಂಟಸಿ ಕಥೆಯಾಗಿ, ವಾಸ್ತವ-ಕನಸಿನ ನಡುವಿನ ಕಥೆಯಾಗಿ ಕಾಣುತ್ತದೆ. ‘ಮಾಯಾಪಂಜರ’ ಹಳಸಲು ದಾಂಪತದ್ಯ ಕಥೆ. ಸಂಸಾರದ ಸುಖ ವಿಷಮಿಸಲಿಕ್ಕೆ ಆಧುನಿಕ ಜಗತ್ತಿನ ಮುಕ್ತ ಜೀವನಶೈಲಿಯೇ ಮುಖ್ಯ ಕಾರಣವೆನ್ನುವುದನ್ನು ಕಥಾನಾಯಕ ವಿಕ್ರಮ್ ಮತ್ತು ನಾಯಕಿ ದೀಪಾ ಅವರ ಜೀವನವೇ ಉತ್ತಮ ನಿದರ್ಶನ. ಆಧುನಿಕ ಜಗತ್ತಿನ ಸಂಕೀರ್ಣತೆಯ ವಿರಾಟ್ ಸ್ವರೂಪ ಈ ಕಥೆಯಲ್ಲಿ ಢಾಳಾಗಿ ಚಿತ್ರಿತವಾಗಿದೆ. ಕೊಂಚ ಭಾವುಕತೆಯ ಅಂಚಿಗೆ ಸರಿದ ಕಥೆ, ಸುಂದರ ನೇಯ್ಗೆಯ ಜೀವಂತಿಕೆಯಿಂದ ನಳನಳಿಸುತ್ತದೆ. ಸ್ತ್ರೀ -ಪುರುಷರ ಕಾಮತೃಪ್ತಿಯ ಮಟ್ಟಕ್ಕೇ ಕುಟುಂಬ ಸೀಮಿತವಾದರೆ ಗಂಡ-ಹೆಂಡತಿಯರಲ್ಲಿ ಪ್ರೀತಿ ವಿರಸವಾಗಿ ಪರಿವರ್ತನೆಗೊಳ್ಳುತ್ತದೆ. ಗಂಡ-ಹೆಂಡತಿಯ ನಡುವೆ ಹುಟ್ಟುವ ಸಂಶಯ ಬದುಕಲ್ಲಿ ಕತ್ತಲೆ ಕವಿಸುತ್ತದೆ. ಕಾಲದ ಹೊಳೆಯಲ್ಲಿ ದಾಂಪತ್ಯದ ಪರಿಕಲ್ಪನೆ ಬದಲಾಗುತ್ತಾ ಬಂದಿರಬಹುದಾದ ಸಾಧ್ಯತೆಯನ್ನು ಪರಿಶೀಲಿಸುವ ಈ ಕಥೆ, ಹಲವು ವಿವರಗಳ ಜೋಡಣೆಯನ್ನು ಆಧರಿಸಿದೆ. ಕಥೆಯ ಕೊನೆಯಲ್ಲಿ ದೀಪಾಳ ಬದುಕಿನ ರಹಸ್ಯವೊಂದರ ಸ್ಫೋಟ ಇಡೀ ಕಥನವನ್ನು ಹೊಸ ನಿಟ್ಟಿನಲ್ಲಿ ನೋಡಲು ಒತ್ತಾಯಿಸುತ್ತದೆ. ಮನುಷ್ಯ ಸಂಬಂಧಗಳ ಪೊಳ್ಳು ಮತ್ತು ಗಟ್ಟಿತನದ ಬಗ್ಗೆ ಓದುಗರನ್ನು ಯೋಚನೆಗೆ ಹಚ್ಚುವ ಉದ್ದೇಶ ಕಥೆಯಲ್ಲಿದೆ.
‘ಅಸ್ತಿಪಂಜರದ ಬಾಲಕ’ ವಿಂಬಲ್ಡನ್ ಚಾಂಪಿಯನ್ ಗೆದ್ದ ಮೊದಲ ಅಮೆರಿಕಾದ ಕಪ್ಪು ಹುಡುಗ ಆರ್ಥರ್ ಆಶ್ನ ಆತ್ಮಚರಿತ್ರೆಯುಳ್ಳ ಕಥೆ. ಕಥೆಗಾರನ ಕನಸಿನಲ್ಲಿ ಕಾಣಿಸಿಕೊಳ್ಳುವ ಹುಡುಗನೊಬ್ಬ ತನ್ನ ಕಥೆಯನ್ನು ನಿವೇದಿಸಿಕೊಳ್ಳುವ ಮೂಲಕ ಆರ್ಥರ್ ಆಶ್ನ ಬಾಲ್ಯವನ್ನು ಹೆಣೆಯುವ ತಂತ್ರ ಈ ಕಥೆಗೆ ಸಹಜವಾಗಿ ದೊರಕಿದೆ. ಕಥೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಘಟನೆಯಿಂದ ಘಟನೆಗೆ ಕಥೆ ಮುಂದುವರೆದಂತೆ ಕಥೆ ಆಳವಾಗುತ್ತಾ, ಸಂಕೀರ್ಣವಾಗುತ್ತಾ, ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ.
‘ಅತಿಮಾನವನ ವಿಕಾಸ ಮತ್ತು ಅವನತಿ’ ವೈಜ್ಞಾನಿಕ ಪರಿವೇಶದ ಕುತೂಹಲವನ್ನುಂಟುಮಾಡುವ ಕಥೆ. 2100 ಇಸವಿಯಲ್ಲಿ ನಡೆಯುವ ಈ ಕಥೆ ಭವಿಷ್ಯತ್ತಿನ ಕರಾಳ ಮುಖಗಳ ಚಿತ್ರಣವನ್ನು ನೀಡುತ್ತದೆ. ಭವಿಷ್ಯದ ಬದುಕು ಭಯಾನಕವಾದ ವಿರೋಧಾಭಾಸಗಳಿಂದ, ತದ್ವಿರುದ್ಧಗಳಿಂದ ತುಂಬುವುದರ ಸತ್ಯವನ್ನು ಇಲ್ಲಿ ಮನಗಾಣಿಸಲು ಕಥೆಗಾರರು ಪ್ರಯತ್ನಿಸಿದ್ದಾರೆ. ಭಾಷೆಯ ಮೇಲೆ ಇರುವ ಪ್ರಸನ್ನರ ಹೊಸ ಮುದ್ರೆ ಹಾಗೂ ಜವಾಬ್ದಾರಿತನವಾದ ಎಚ್ಚೆತ್ತ ಮನಸ್ಸು ಇಲ್ಲಿ ವ್ಯಕ್ತವಾಗುತ್ತದೆ. ಕಥೆಗಾರ ಕೇವಲ ಘಟನೆಗಳನ್ನು ಚಿತ್ರಿಸುವುದರಲ್ಲಿ ಮಾತ್ರ ತೊಡಗದೆ ಅವುಗಳಿಗೆ ವೈಜ್ಞಾನಿಕವಾದ ಮತ್ತು ಕಲಾತ್ಮಕವಾದ ಮೆರಗನ್ನು ಕೊಡುವುದರಲ್ಲಿ ತೊಡಗಿದ್ದು ಕಂಡುಬರುತ್ತದೆ.
ಆಧುನಿಕ ನಾಗರಿಕತೆಯ ಆಕ್ರಮಣದಿಂದ ಉಂಟಾಗುವ ಅವಾಂತರ ‘ಸುಡುಗಾಡು’ ಕಥೆಯಲ್ಲಿದೆ. ಈ ಕಥೆ ನಮ್ಮ ನಾಡಿನಲ್ಲಿಯೇ ನಡೆಯುತ್ತದೆ. ತಂತ್ರಜ್ಞಾನ ನಿರ್ಮಿಸಿರುವ ಸಾಧ್ಯತೆಗಳನ್ನು ಒಳಗೊಂಡಿರುವ ಮತ್ತು ಮನುಷ್ಯ ಸ್ವಭಾವದ ವಿಶ್ಲೇಷಣೆಯಂತೆ ಕಾಣುವ ಅಪರೂಪದ ಕಥೆ ‘ಸುಡುಗಾಡು’. ವರ್ತಮಾನದಲ್ಲಿ ಹಿಂದೂ-ಮುಸ್ಲಿಂ ಸಖ್ಯ ಹೇಗೆ ಹಾಳಾಗುತ್ತಿದೆ ಎಂಬುದನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ಬದುಕಿನ ಕೆಲವು ಕಟು ವಾಸ್ತವಗಳು ದೇಶಾತೀತ ಮತ್ತು ಕಾಲಾತೀತ. ಯಾವುದೇ ಸಮಾಜವಾಗಲಿ, ಎಂತಹುದೇ ಸಂಸ್ಕೃತಿಯಾಗಲಿ ಮನುಷ್ಯರ ನಡುವಿನ ಸಂಬಂಧ, ಅದು ಗಟ್ಟಿಗೊಳ್ಳುವ ಪರಿ ಅಥವಾ ವಿಷಮಿಸುವ ಬಗೆಯ ಮೇಲೆ ವ್ಯಕ್ತಿಯೊಬ್ಬನ ಬದುಕಿನ ‘ಸೊಬಗು’ ಅಥವಾ ‘ವಿಮುಖತೆ’ ನಿಂತಿರುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಆದ್ದರಿಂದ ಈ ಕಥೆ ನಮ್ಮೊಳಗಿನ ಮನುಷ್ಯನನ್ನು ಹುಡುಕಲು ಪ್ರೇರೇಪಿಸುತ್ತದೆ. ಅವಂತಿಯಲ್ಲಿ ನಡೆಯುವ ಎಲ್ಲಾ ದುರಂತ ಘಟನೆಗಳಿಗೆ ವಿಚಿತ್ರವಾದ ಸಂಬಂಧಗಳು ಬೆಳೆದು ನಿಗೂಢವಾಗಿ ಮನುಷ್ಯ ಮತ್ತು ಪರಿಸರದ ವಿಷಮತೆಗೆ ಕಾರಣವಾಗುವ ಸಾಮಾಜಿಕ ಸನ್ನಿವೇಶ ಯಥಾವತ್ತಾಗಿ ಚಿತ್ರಿತವಾಗಿದೆ.
‘ವಂಶವಾಹಿನಿ’ ಕಥೆ ಈ ಸಂಕಲನದ ವಿಶಿಷ್ಟ ವಿನೂತನ ವಿಷಯದೊಂದಿಗೆ ಇದು ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ವಿಜ್ಞಾನದ ವಿವರಗಳ ಸುತ್ತ ಕಥೆಯು ಬೆಳೆಯುತ್ತಾ, ಗೂಢವಾಗುತ್ತ ಸಾಗುತ್ತದೆ. ಪ್ರಸನ್ನ ಅವರಲ್ಲಿ ವೈಜ್ಞಾನಿಕ ದೃಷ್ಟಿಕೋನ ಹೊಸ ಆಯಾಮಗಳನ್ನು ರೂಢಿಸಿಕೊಂಡಿರುವುದಕ್ಕೆ ಈ ಕಥೆಯ ಸ್ಪಷ್ಟ ಸೂಚನೆಯಾಗಿದ್ದು, ಅವರ ಅತ್ಯಂತ ಮಹತ್ವದ ಕಥೆಗಳಲ್ಲೊಂದಾಗಿದೆ. ಈ ಕಥೆಯ ವೈಶಿಷ್ಟ್ಯ ಮತ್ತು ತುಡಿತ ಸಮಕಾಲೀನ ಸಮಾಜ ಹಾಗೂ ಸಾಹಿತ್ಯದಲ್ಲಿಯೇ ಅನನ್ಯವಾದುದು. ಭಾರತ-ಅಮೆರಿಕದ ನಗರಗಳ ಬದಲಾಗುತ್ತಿರುವ ಯಾಂತ್ರಿಕೃತ ಬದುಕನ್ನು ಕಥೆಗಾರರು ಮಾಮರ್ಿಕವಾಗಿ ಚಿತ್ರಿಸುತ್ತಾರೆ.
ಬದುಕಿನ ವಾಸ್ತವ ಮತ್ತು ಅವಾಸ್ತವ ಮುಖಗಳನ್ನು ‘ಐಕ್ಯ’ ಕಥೆ ಸಹಜವೆಂಬಂತೆ ಚಿತ್ರಿಸುತ್ತದೆ. ಈ ಕಥೆಯ ಉದ್ದೇಶ ರುದ್ರಕನ್ನಿಕಾಳ ವ್ಯಕ್ತಿತ್ವದ ರಹಸ್ಯವನ್ನು ಶೋಧಿಸುವುದು. ರುದ್ರಕನ್ನಿಕಾಳ ಶ್ರಮಪೂರ್ಣ ಸಾಧನೆಯನ್ನು ಪರಿಣಾಮಕಾರಿಯಾಗಿ ಕಥೆ ನಿರೂಪಿಸುತ್ತದೆ. ಬದುಕಿನ ಕುರಿತಾದ ತಾತ್ವಿಕ ಹೊಳಹನ್ನು ಹೊಂದಿದ ‘ಐಕ್ಯ’ ಕಥೆ ನಿರ್ವಹಣೆಯಲ್ಲಿ ಕಥೆಗಾರರ ಅಚ್ಚುಕಟ್ಟುತನವಿದೆ.
‘ಎತ್ತಣ ಮಾಮರ ಎತ್ತಣ ಕೋಗಿಲೆ’ ಕಥೆಯ ವಸ್ತು ಸಣ್ಣಕಥೆಯ ಹರವಿಗೆ ವಿಸ್ತಾರವಾದುದು ಎನಿಸುತ್ತದೆ. ಕಥೆಯಲ್ಲಿ ಪ್ರೊಫೆಸರ್ ವೆಂಕಟೇಶ್ನನ್ನು ಪ್ರೀತಿಸುವ ಪರಿಣೀತಾಳನ್ನು ವಿಚಾರಿಸುವ ಶಾಮಲಾರ ಆತ್ಮಕಥೆ ಸುರಳಿ ಸುರಳಿಯಾಗಿ ಬಿಚ್ಚಿಕೊಳ್ಳುತ್ತದೆ. ಈ ಕಥೆಯಲ್ಲಿ ಹಕ್ಕಿಯ ಧ್ವನಿ ನೆನಪಿನ ಸುರುಳಿ ಬಿಚ್ಚಿಕೊಳ್ಳುವುದಕ್ಕೆ ಸಂಕೇತವಾಗಿ ಬರುತ್ತದೆ.
‘ಮಹಾನವಮಿ’ ಕಥೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಏಂಜಲೀನಾಳ ದುರಂತ ಚಿತ್ರಣವನ್ನು ನೀಡುತ್ತದೆ. ಈ ಕಥೆಯಲ್ಲಿನ ತಂತ್ರ ವಿಶಿಷ್ಟವಾದುದು. ಏಂಜಲೀನಾ ತನ್ನ ಜೀವನವನ್ನು ಸಂಭ್ರಮಿಸುತ್ತಿದ್ದಳು ಜೊತೆಗೆ ಸಾವನ್ನ ಕೂಡ ಒಂದು ಹಬ್ಬ ಎಂದು ನಂಬಿದ್ದಳು ಎಂಬ ಡಾ. ಮಂಜುನಾಥ್ರ ಮಾತು ಜೀವನ್ಮುಖಿ ಚಿಂತನೆ ಬಗೆಗಿನ ಧ್ವನಿಯಾಗಿದೆ. ಈ ಕಥೆ ತನ್ನ ಕಥಾತಂತ್ರದ ಕೌಶಲದಿಂದ ಮತ್ತು ತೋರುವ ಜೀವನಾಸಕ್ತಿಯಿಂದ ಮುಖ್ಯವಾದದ್ದಾಗುತ್ತದೆ.
ಈ ಸಂಕಲನದ ‘ಸ್ಟ್ಯಾಟ್ಯೂ ಆಫ್ ಲಿಬರ್ಟಿ’, ‘ವ್ಯಂಗ್ಯ’ ಮತ್ತು ‘ಎಬೋಲಾ’ ಕಥೆಗಳು ತೆಳುವಾದ, ಸಡಿಲ ಮತ್ತು ಒಂದೇ ಬಗೆಯ ಸಮೀಕರಣದ ನಿರೂಪಣೆಗಳನ್ನು ಒಳಗೊಂಡಿರುವುದರಿಂದ ಓದುಗರನ್ನು ಆಕಷರ್ಿಸುವುದಿಲ್ಲ. ಓದುಗರನ್ನು ಮುಟ್ಟುವ ಹಂಬಲದಲ್ಲಿಯೋ ಏನೋ ಪ್ರಸನ್ನರು ನಿರ್ಮಿಸಿಕೊಳ್ಳುವ ತಿರುವುಗಳು ಎಷ್ಟೋ ಸಂದರ್ಭಗಳಲ್ಲಿ ತರ್ಕದಾಚೆ ನಿಲ್ಲುತ್ತವೆ. ಈ ಕಥೆಗಳಲ್ಲಿ ಯಾವ ಪಾತ್ರಗಳೂ ಸ್ವಯಂಪೂರ್ಣವಾಗುವುದಿಲ್ಲ. ಸಮಕಾಲೀನ ಸ್ಪಂದನಗಳಿಂದ ಆಕರ್ಷಿಸಿದರೂ, ಸಾವಯವ ಶಿಲ್ಪವಾಗಿಸುವ ಕೌಶಲದ ಕೊರತೆ ಸಂಕಲನದ ಕೆಲವು ಕಥೆಗಳಲ್ಲಿ ಕಾಣುತ್ತದೆ. ಸಂಕಲನದ ಒಂದೆರಡು ಕಥೆಗಳನ್ನು ಬಿಟ್ಟರೆ ಉಳಿದ ಎಲ್ಲ ಕಥೆಗಳಲ್ಲಿಯೂ ನಗರ ಜೀವನದ ದಟ್ಟವಾದ ಅನುಭವದ ಕಲಾತ್ಮಕವಾದ ಅಭಿವ್ಯಕ್ತಿ ಇದೆ.
ವಿಜ್ಞಾನವಿರಲಿ, ತಂತ್ರಜ್ಞಾನವಿರಲಿ, ಸಾಮಾಜಿಕವಿರಲಿ, ಮಾನವಿಕವಿರಲಿ ಪ್ರಸನ್ನರಿಗೆ ವ್ಯವಸ್ಥೆಯ ಇಲ್ಲವೇ ವ್ಯಕ್ತಿತ್ವದ ಒಳ ವಿಕಾರ ಮುಖಗಳನ್ನು ಅನಾವರಣಗೊಳಿಸುಲ್ಲಿ ಹೆಚ್ಚು ಆಸಕ್ತಿ ಇದೆ. ಆ ಒಳಗನ್ನು ಕಥೆಯಾಗಿಸುವಲ್ಲಿ ಕಂಡುಕೊಂಡಿರುವ ಸರಳ ವಿಧಾನಗಳು ಅವರನ್ನು ನಿಯಂತ್ರಿಸಿವೆ. ಆದ್ದರಿಂದ ಇದು ಹಸಿ ಹಸಿಯಾದ ನಿರೂಪಣೆಗೆ ಕಾರಣವಾಗಿದೆ. ‘ಒಲವೇ ಜೀವನ ಸಾಕ್ಷತ್ಕಾರ’, ‘ಮಾಯಾಪಂಜರ’, ‘ಆಸ್ತಿಪಂಜರದ ಬಾಲಕ’, ‘ವಂಶವಾಹಿನಿ’, ‘ಸುಡುಗಾಡು’, ‘ಮಾಯಾಜಿಂಕೆ’ ಮೊದಲಾದ ಕಥೆಗಳು ಪ್ರಸನ್ನ ಸಂತೇಕಡೂರು ಅವರ ಕಥೆಕಟ್ಟುವ ಕುಶಲತೆಯನ್ನು, ಬರವಣಿಗೆಯ ಕಸುಬುದಾರಿಕೆಯನ್ನು ತೋರುತ್ತವೆ. ಇಂತಹ ಕಥೆಗಳಿಂದಾಗಿ ಪ್ರಸನ್ನ ಅವರ ಮುಂದಿನ ಕಥೆಗಳನ್ನು ಗಮನಿಸಬಹುದು.
ಲೇಖಕರು ನಿರುದ್ವಿಗ್ನವಾಗಿ ಹರಿಯುವ ಮೆಲುದನಿಯ ಗದ್ಯದ ಸೊಗಸು ಕೂಡ ಇಲ್ಲಿದೆ. ಭಾಷೆಯಲ್ಲಿ ಅಬ್ಬರವಿಲ್ಲ. ಆದರೆ ಪಾತ್ರಗಳ ಮನಸ್ಸಿನಲ್ಲಿ ನಡೆಯುವುದನ್ನು ನಮ್ಮ ಅನುಭವಕ್ಕೆ ಭಾಷೆ ತಂದುಕೊಡುತ್ತದೆ. ಕಥಾವಸ್ತು, ಪರಿಸರ, ಪಾತ್ರಚಿತ್ರಣ, ಬಳಸುವ ಭಾಷೆ-ಇತ್ಯಾದಿ ಅಂಶಗಳನ್ನು ಗಮನಿಸಿದಾಗ ಪ್ರಸನ್ನರ ಕಲ್ಪನೆ ನಮಗೆ ಬಾರದಿರದು. ಈ ಸಂಕಲನದ ಕೆಲವು ಕಥೆಗಳಲ್ಲಿ ಅಡಕಗೊಂಡ ಸಾಂಕೇತಿಕತೆ ಹಾಗೂ ಹಿತಮಿತವಾದ ಭಾಷಾಶೈಲಿಯಲ್ಲಿ ಪ್ರಸನ್ನರ ಪ್ರತ್ಯೇಕತೆ ಒಡೆದು ಕಾಣುವಂತಿದೆ. ಕಥೆ ಹೇಳುವಿಕೆ ಮತ್ತು ನೇರ ನಿರೂಪಣೆ ಈ ಸಂಕಲನದ ಕಥೆಗಳ ವಿಶಿಷ್ಟ ತಂತ್ರವಾಗಿದೆ. ವಚನ, ಆಧುನಿಕ ಮತ್ತು ಪ್ರಾಚೀನ ಕಾಲದ ಕವಿಸೂಕ್ತಿ, ಪ್ರತಿಮೆಗಳ ಬಳಕೆಗಳಿಂದ ಕೂಡಿದ ಪ್ರಸನ್ನ ಸಂತೇಕಡೂರು ಅವರ ಬರವಣಿಗೆ ಹೊಸ ಭರವಸೆಯನ್ನು ಹುಟ್ಟಿಸುತ್ತದೆ.
ಮಾಯಾಪಂಜರ
ಲೇ: ಪ್ರಸನ್ನ ಸಂತೇಕಡೂರು
ಪುಟ: 172, ಬೆಲೆ:130/-
ಪ್ರಕಾಶನ: ಮಲೆನಾಡು ಪ್ರಕಾಶನ,ಚಿಕ್ಕಮಂಗಳೂರು
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ