- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಹೆಸರಿಗೂ ಉಳಿದಿಲ್ಲ ಹಸಿರು
ಬಗೆದು ಬೇರುಸಹಿತ ಬಸಿರು
ಕಿತ್ತಿ ಹಾಕಿದೆ ಸಸಿ ಗಿಡ ಮರಗಳ
ಎಲ್ಲೆ ಇಲ್ಲದ ಹಲ್ಲೆ ಮಾಡಿ ಎಲ್ಲ
ಬಲ್ಲೆನೆಂಬ ನಾಟಕವಾಡಿದಿ
ಹೂಬೆಹೂ(ಥೇಟ್)
ಹೂವುಗಳ ಸಿಂಗರಿಸಿ
ಒಂದೆರಡು ತೊಟ್ಟಿ
ಸಸಿಗಳ ನೆಟ್ಟಿ
ಬಾಲ್ಕನಿಯಲಿ ಇಟ್ಟು ಬೀಗಿದಿ
ಪರಿಸರದ ಪ್ರೇಮವನು ಸಾರಿದಿ
ಅಟ್ಟದ ಮೇಲಿಂದ
ಕಾನನಗಳ ನುಂಗಿ ನೀರು ಕುಡಿದಿ
ಬಾನಿಗೂ ಹಾಕಿದಿ ತೂತು
ಕೆಂಗಣ್ಣಿನಿಂದ ಉರಿದ ರವಿ
ತತ್ತರಿಸಿತು ಬುವಿ
ಮೇಲೆ ಹೋದ ಆವಿಗೆ
ಕಾಯುತಿದೆ ಬಾಯಾರಿದ ಇಳೆ
ಮತ್ತೆ ಆಗುವದೆ ಮಳೆ
ಹರಿಯುವದೆ ಹೊಳೆ?
ಮುನಿದು ಆರ್ಭಟಿಸುವದೆ ಮುಗಿಲು
ಹರಿಸುವದೆ ಹುಚ್ಚು ಹೊನಲು
ಕೊಚ್ಚಿ ಹೋಗುವದೆ ಎಲ್ಲ
ಉತ್ತರ ಯಕ್ಷ ಪ್ರಶ್ನೆಗಳಿಗಿಲ್ಲ
ಎತ್ತರದ ಮಾತುಗಳ ಕತ್ತರಿಸಿ
ಮೌನದಲಿ ಬಿತ್ತಬೇಕಿದೆ
ಪರಿಸರದ ಒಲವಿನ ಬೀಜ
ನಿರ್ವ್ಯಾಜ ಮಮತೆ ನೀಡಿದ ಮಾತೆ
ಮಡಿಲಲ್ಲಿ ಹಚ್ಚಿದ ಕಿಚ್ಚನ್ನು ಆರಿಸಿ
ಹಸಿರ ತೊಡಿಸಿ ಅಬ್ಬೆಗೆ
ಸಂಭ್ರಮಿಸಬೇಕಿದೆ!
ಮರಗಳ ಚಾಮರ ಬೀಸಿ
ಕಟ್ಟಿದ ಅವಳುಸಿರ
ಚೇತನಕೆ ನೀಡಿ ಉಛ್ವಾಸ ನಿಶ್ವಾಸ
ಪ್ರತಿಯೊಂದು ನರನಾಡಿಗಳಲ್ಲಿ
ಮೀಂಟಿ ಹೊಸ ರಾಗ
ಸಂಗೀತಕೆ ಶೃತಿ ಹಿಡಿಯಬೇಕಿದೆ!
ನಾಲಿಗೆ ತುದಿಯಿಂದ ಬರುವ ಮಾತನು
ಅಂತರಾಳಕೆ ತಳ್ಳಿ
ಮೌನದಲಿ ತುಂಬಿ ಚೈತನ್ಯ
ಕೃತಿಯ ರೂಪ ಕೊಟ್ಟು ತಂತ್ರವನ್ನ
ಮಂತ್ರವಾಗಿಸಬೇಕಿದೆ!
ಹಾಲೂಡಿಸಿದ ಎದೆಯಲ್ಲಿ
ಮುದ ಮೂಡಲಿ ಮತ್ತೆ
ಹೆತ್ತವರ ಕಂದರಿಗೆಲ್ಲ ನೀನೆ ಹೊತ್ತಮ್ಮ
ನಿನ್ನ ಹೊರತು ನಮಗೆ ಯಾರಮ್ಮ
ನಿನ್ನ ಕ್ಷೀರಾಮೃತವನುಂಡು ನಲಿಯಲು ಕಾದಿವೆ
ಅವೆಷ್ಟೋ ಕಂದಮ್ಮಗಳು
ಎಲ್ಲ ನಾನೇ ಹೀರಿ
ಹಿಗ್ಗುವೆನೆಂಬ ಸ್ವಾರ್ಥ ಸಲ್ಲ
ಹೊಲ್ಲ ಮನುಜನೆ ಇನ್ನಾದರೂ ಎಚ್ಚೆತ್ತುಕೋ
ನಂದು ನಂದು ಎಂಬ
ಸ್ವಾರ್ಥದಲಿ ಮಾಡದಿರು
ನಂದನವ ಮಸಣ!
** ** **
ವರ್ಷಕ್ಕೊಮ್ಮೆ ಬರುವಂತೆ ಈ ವರ್ಷವೂ ಬಂದಿದೆ
‘ಪರ್ಯಾವರಣ ದಿನ’.
ಮತ್ತೆ ಅದರ ಬಗ್ಗೆ ಸಂದೇಶಗಳನ್ನು ಸಾರುವ ಜಾಹೀರಾತು ಫಲಕಗಳು, ಮಾಧ್ಯಮಗಳಲ್ಲಿ ಅದರ ಕುರಿತಾಗಿ ಚರ್ಚೆಗಳು ಇತ್ಯಾದಿ ಭರಾಟೆಯಿಂದ ಸಾಗಲು ಚಾಲನೆ ನೀಡಿದೆ ಈ ‘ ವಿಶೇಷ’ ದಿನ.
ಈ ಸಂಭ್ರಮ ಜರುಗಬಾರದೆಂದು ನನ್ನ ಅಭಿಮತವಲ್ಲ. ಅದರಿಂದ ಪರಿಸರದ ಬಗ್ಗೆ ಸಾಕಷ್ಟು ಜಾಗರೂಕತೆ ಹುಟ್ಟುವದೇನೋ ದಿಟ. ಆದರೆ, ಅದು ಕಾರ್ಯಾಚರಣಕ್ಕೆ ತಿರುಗಿ ಅನುಷ್ಠಾನದ ಹಂತವನ್ನು ತಲುಪಬೇಕೆಂಬುದೇ ನಮ್ಮೆಲ್ಲರ ಹಂಬಲ.
ನಾನು ಈ ಮೊದಲು ಬರೆದ ಕೆಲವು ಅಂಕಣಗಳಲ್ಲಿ ಬಿಶ್ನೋಯಿ ಜನಾಂಗದವರ ಪರಿಸರದ ಮೇಲಿನ ಪ್ರೇಮದ ಕುರಿತಾಗಿ ಉಲ್ಲೇಖ ಮಾಡಿದ್ದೆ. ಪರಿಸರದ ಉಳಿವಿಗಾಗಿ ಇನ್ನೂ ಅನೇಕ ಮಹನೀಯರು , ಸುಂದರಲಾಲ ಬಹುಗುಣ ಅವರಲ್ಲಿ ಪ್ರಮುಖರು ಈ ನಿಟ್ಟಿನಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಮೇ ೨೧ ರಂದು ನಮ್ಮನ್ನು ಅಗಲಿದ ಶ್ರೀಯುತ ಸುಂದರ ಲಾಲ್ ಬಹುಗುಣ ಅವರಿಗೆ ಈ ಅಂಕಣ ಅರ್ಪಿತ. ಅವರ ಚಿಪ್ಕೋ ಚಳವಳಿ ಹೊಸ ಸಂಚಲನವನ್ನು ಹುಟ್ಟುಹಾಕಿ ಗಿಡ- ಮರಗಳ ಸಂರಕ್ಷಣೆಯ ವಿಷಯವಾಗಿ ಜನರಲ್ಲಿ ಜಾಗರೂಕತೆಯನ್ನು ಮೂಡಿಸಿತು. ಅವರಿಂದ ಪ್ರೇರಿತರಾಗಿ ನಾವು ಅವರು ತೋರಿದ ದಾರಿಯಲ್ಲಿ ಮುನ್ನಡೆಯಬೇಕಿದೆ.
ಪರಿಸರದ ದಿನದಂದು ನಮ್ಮ ಚರ್ಚಾ ವೇದಿಕೆಯಲ್ಲಿ ರಮೇಶ್ ಬಾಬು ಅವರು ಹಂಚಿಕೊಂಡ ‘ಕ್ಷಮೆ ಇರಲಿ’ ಎಂಬ ಕವನ ನನ್ನನ್ನು ಬಹಳ ತಟ್ಟಿತು. ಪ್ರಸಕ್ತ ಸನ್ನಿವೇಶದಲ್ಲಿ ಕ್ಷಮೆ ಕೋರಬೇಕಾದದ್ದು ಮನುಷ್ಯ. ಮನುಷ್ಯನೇ ಇಂದಿನ ಪರಿಸರದ ಅವನತಿಗೆ ಕಾರಣ; ‘ ಈ ಪೃಥ್ವಿ ನನ್ನ ಸ್ವತ್ತು, ಇದು ಇರುವದು ನನ್ನ ಉಪಭೋಗಕ್ಕಾಗಿ’ ಎಂಬ ಧಿಮಾಕಿನಿಂದ ಮೆರೆಯುವ ಮಾನವನ ಹಿಂದೆ ಅವನ ಲೋಭ-ಲಾಲಸೆಗಳೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಇದರ ನೇಪಥ್ಯದಲ್ಲಿ ಪರಿಸರದ ವಿನಾಶಕ್ಕೆ ಕಾರಣ ನಾವು ಮನುಜರು. ಈ ದುಃಸ್ಥಿತಿಗಾಗಿ ಕಾರಣರಾದ ನಾವು ಪಶ್ಚಾತ್ತಾಪದಿಂದ ಮರುಗಿ ಕ್ಷಮೆ ಕೋರಬೇಕು. ಆದರೆ, ಕೋಗಿಲೆ ಕ್ಷಮೆ ಯಾಚಿಸುತ್ತಿದೆ. ಗಿಡ ಮರಗಳನ್ನು ಕಡಿಯದಿರಿ ಎಂದು ಗೋಗರೆಯುತ್ತದೆ. ಎಂತಹ ವಿಪರ್ಯಾಸ! ಹಸಿರಿಲ್ಲದೆ ನನ್ನ ಕುಹೂ ಕುಹೂ ಗಾನ ಹೇಗೆ ಹೊರಡಬಲ್ಲದು ಎಂದು ಅತಿ ದೀನವಾಗಿ ಅಹವಾಲು ಮಾಡುತ್ತಿರುವ ಕೋಗಿಲೆ ಬರೀ ತನ್ನ ಬಗ್ಗೆ ಹೇಳುತ್ತಿಲ್ಲ, ಎಷ್ಟೋ ಜೀವರಾಶಿಗಳು ಅಳಿವಿನಂಚಿನಲ್ಲಿ ಇರುವ ಗಂಭೀರವಾದ ಸ್ಥಿತಿಯ ಕುರಿತು ನಮಗೆ ಮುನ್ನೆಚ್ಚರಿಕೆ ಕೊಡುತ್ತಿದೆ. ಹಸಿರಿನ ನಿರ್ನಾಮವಾಗಿ ಮರುಭೂಮಿಯಾಗಿ ಮಾರ್ಪಾಡಾದ ಪರಿಸರದಲ್ಲಿ ಎಲ್ಲಾದರೂ ಹಸಿರು ಕಂಡರೆ ತಿಳಿಸಿ ಎಂದು ಕಳಕಳಿಯಿಂದ ಕೋರುವ ನತದೃಷ್ಟ ಪಕ್ಷಿ ತನಗೊಂದು ನೆಲೆಗಾಗಿ ಪರದಾಡುತ್ತಿದೆ. ಅದರ ಕಾಳಜಿ, ಅದರ ಬಿಕ್ಕಳಿಕೆಗಳು, ಅಳಲು ಬರೀ ತನಗಾಗಿ ಅಲ್ಲ, ಹಸಿರು ಅಳಿಯುತಿದೆ, ಅದನ್ನು ಉಳಿಸದಿದ್ದರೆ ಯಾರಿಗೂ ಕ್ಷೇಮವಲ್ಲ ಎಂಬ ಮಾತನ್ನು ಕೋಗಿಲೆಯ ಮೂಲಕ ಪ್ರಕಟ ಮಾಡಿದ್ದಾರೆ ಕವಿ.
ಇದೇ ರೀತಿಯ ಭಾವವನ್ನು ಬಿಂಬಿಸುವ ಶಾಯರಿಯನ್ನು ಹೈದರಾಬಾದಿನ ಉರ್ದು ಕವಿ ಕಂವಲ್ ಪರ್ಶಾದ್ ಕಂವಲ್ ಅವರ ಮುಖದಿಂದ ಕೇಳಿದ್ದೆ. ಆಗ ನಾನು ಬಹಳ ಚಿಕ್ಕವನಾದ್ದರಿಂದ ಆ ಶೇರ್( ಶಾಯರಿಯ ಸಾಲುಗಳು) ಸರಿಯಾಗಿ ನೆನಪಿಲ್ಲ ; ಹೆಚ್ಚು ಕಮ್ಮಿ ಅದು ಈ ರೀತಿಯಾಗಿತ್ತು –
‘ಹರ್ ರಂಗ್ ಬದಲತಿ ಇಸ್ ಮಾಹೌಲ್ ಮೇ
ಅಥವಾ ದುನಿಯಾ ಮೇ
ಕ್ಯಾ ಕಹೆ ಗುಲ್ ಫಿರ್ ಖಿಲೇ ನ ಖಿಲೆ
ಕ್ಯಾ ಕರೇ ಗುಲೋಂ ಕಿ ಬಾತ್ ಕಂವಲ್ ಬಾತ್ ರ್ತೆ ಜುಬಾನ್ ಜಲ್ತಿ ಹೈ’
ಅದರ ಸ್ಥೂಲ ಕನ್ನಡ ಅನುವಾದ
‘ಬದಲಾಗುತ್ತಿರುವ ಸನ್ನಿವೇಶಗಳ ನೇಪಥ್ಯದಲ್ಲಿ ಕುಸುಮಗಳು ಮತ್ತೆ ಅರಳಬಹುದೆಂಬುದು ಹೇಳಲಾಗುವದೇ? ಕುಸುಮಗಳ ಬಗ್ಗೆ ಏನು ಉಲಿಯಲಿ ಕಂವಲ್( ಕವಿಯ ಹೆಸರು- ತನಗೆ ತಾನು ಕವಿ ಕೇಳಿಕೊಳ್ಳುತ್ತಿರುವದು, ಈ ರೀತಿಯ ಅಂಕಿತ ನಾಮ, ಇದನ್ನು ಉರ್ದು ಬಾಷೆಯಲ್ಲಿ ತಖಲ್ಲುಸ್ ಎನ್ನುತ್ತಾರೆ. ಇದು ಉರ್ದು ಶಾಯರಿಯ ಪರಂಪರೆ) ಮಾತನಾಡಿದರೆ ಉರಿಯುತಿದೆ ನಾಲಿಗೆ’
ಎಂದು ಇದರ ಹತ್ತಿರವಾದ ಭಾವಾನುವಾದ. ನಾನು ಈ ಪರಿಸರದ ವಿನಾಶದ ಸಂದರ್ಭಕ್ಕೆ ಇದನ್ನು ತಾಳೆ ಹಾಕಿ ಪ್ರಸ್ತುತ ಪಡೆಸಿರುವೆ.
ಶೀಘ್ರಗತಿಯಲ್ಲಿ ಹಸಿರು ಮಾಯವಾಗುತ್ತಿರುವ ವಿದ್ಯಮಾನವನ್ನು ನೋಡುತ್ತಿದ್ದರೆ ಮತ್ತೆ ಹೂವುಗಳು ಅರಳಿಯಾವೋ ಇಲ್ಲವೋ ಎಂಬ ಆತಂಕ ಮನದಲ್ಲಿ ಉದ್ಭವಿಸುವದು ಸಹಜವಲ್ಲವೆ.
ನಾನು ಹಿಂದಿನ ಅಂಕಣ ವೊಂದರಲ್ಲಿ ಅರಣ್ಯಗಳು ನಾಶವಾಗುತ್ತಿರುವ ವಿಷಯವನ್ನು ಪ್ರಸ್ತಾಪಿಸುತ್ತ, ನಾನು ಚಿಕ್ಕವನಿದ್ದಾಗ ಶಾಲೆಯ ವತಿಯಿಂದ ಅನಂತಗಿರಿಗೆ ( ಹೈದರಾಬಾದಿಗೆ ಸುಮಾರು ೭೦ ಕಿಮಿ ದೂರ, ವಿಕಾರಾಬಾದಿನ ಹತ್ತಿರ) ಪ್ರವಾಸ ಹೋಗಿದ್ದ ಸಂಗತಿಯನ್ನು ತಮ್ಮ ಮುಂದೆ ಹಂಚಿಕೊಳ್ಳುತ್ತಾ ಅಲ್ಲಿ ದಟ್ಟವಾಗಿದ್ದ ಕಾನನದಲ್ಲಿ ನಾವು ಕೆಲವು ವಿದ್ಯಾರ್ಥಿಗಳು ಕಳೆದು ಹೋಗಿ ಆಮೇಲೆ ನಮ್ಮ ಗುರುಗಳು ನಮ್ಮನ್ನು ಹುಡುಕಿಕೊಂಡು ಬಂದು ರಕ್ಷಿಸಿದ ಘಟನೆಯನ್ನು ವಿಸ್ತಾರವಾಗಿ ದಾಖಲಿಸಿದ್ದೆ. ಅದೇ ಕೆಲವು ವರ್ಷಗಳ ನಂತರ ಅನಂತಗಿರಿಗೆ ಮತ್ತೆ ಹೋದಾಗ ಅರಣ್ಯಗಳು ನಾಶವಾಗಿದ್ದನ್ನು, ಬೆಟ್ಟಗಳು ಬೋಳಾಗಿದ್ದನ್ನು ನೋಡಿದಾಗ ನನ್ನ ಮನದಲ್ಲಿ ಆದ ಕಳವಳವನ್ನು ವ್ಯಕ್ತಪಡೆಸಿದ್ದೆ.
ಈಗ ನಾನು ಅರಣ್ಯದ ಬಗ್ಗೆ ಮಾತನಾಡುವದಿಲ್ಲ. ನಮ್ಮೆಲ್ಲರ ನೆಚ್ಚಿನ ಶಹರು ಹೈದರಾಬಾದು ಗಿಡಗಂಟಿಗಳಿಂದ ತುಂಬಿತ್ತು, ಎಷ್ಟು ಸಸ್ಯಶ್ಯಾಮಲವಾಗಿತ್ತು ನಮ್ಮ ನಗರ ಎಂಬುದರ ಬಗ್ಗೆ ನಿಮ್ಮೊಡನೆ ಕೆಲವು ಸಂಗತಿಗಳನ್ನು ಮನ ಬಿಚ್ಚಿ ಹೇಳಿಕೊಳ್ಳಬೇಕೆನ್ನುವ ಇಚ್ಛೆ ಪ್ರಬಲವಾಗಿದೆ.
ಹೈದರಾಬಾದು ನಗರ ಗಿಡಮರಗಳ ಊರೆಂದೇ ಪ್ರಸಿದ್ಧವಾಗಿತ್ತು ಎಂದರೆ ನೀವು ನಂಬುವಿರಾ? ಈಗಿನ ಶಹರನ್ನು ನೋಡಿದಾಗ ಅಂದಿನ ಶಹರಿನ ಚಿತ್ರವನ್ನು ಊಹಿಸಲೂ ಸಾಧ್ಯವಿಲ್ಲ. ಕಾಲಕ್ರಮೇಣ ಶಹರಿನಲ್ಲಿ ಬದಲಾವಣೆಗಳಾಗುವದು ಸರ್ವೇ ಸಾಮಾನ್ಯವಾದ ಸಂಗತಿ. ಅದರೆ ಶಹರಿನ ಎರಡೂ ಚಹರೆಗಳನ್ನು ಕಂಡ ನನಗೆ, ಮತ್ತು ನಮ್ಮಲ್ಲಿಯ ಎಷ್ಟೋ ಜನರಿಗೆ ಒಂದು ನಿರ್ದಿಷ್ಟ ಯೋಜನೆಯಿಲ್ಲದೆ ಶಹರು ಅಡ್ಡಾದಿಡ್ಡಿಯಾಗಿ ಬೆಳೆದು ನಿಂತು ಇದರ ಅಕರಾಳ-ವಿಕರಾಳ ಸ್ವರೂಪವನ್ನು ನೋಡಿ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಗಿಡ ಮರಗಳನ್ನು ಕಡಿದು ಅವುಗಳಿರುವ ಸ್ಥಳಗಳಲ್ಲಿ ಎತ್ತರದ ಕಟ್ಟಡಗಳು ನಿರ್ಮಾಣಗೊಂಡಿವೆ. ಪ್ರತಿ ಮನೆಯ ಮುಂದೆ ಹಸಿರು ಇರುತ್ತಿತ್ತು. ರಸ್ತೆಗಳ ಇಕ್ಕೆಲದಲ್ಲಿ ಎತ್ತರದ ಮರಗಳಿದ್ದು ( ಕಾಚಿಗುಡ ನಿಲ್ದಾಣಕ್ಕೆ ಹೋಗುವ ರಸ್ತೆ) ಬೇಸಿಗೆಯ ಬೇಗೆಯೂ ಗೊತ್ತಾಗದಂತೆ ಅವುಗಳ ನೆರಳಿನಲ್ಲಿ ನಾವು ವಿಹಾರ ಮಡಿದ್ದನ್ನು ನೆನಪಿಸಿಕೊಂಡಾಗ ಅದು ನಿಜವೋ ಕನಸೋ ಎಂಬ ಭ್ರಮೆ ಉಂಟಾಗುತ್ತದೆ. ನಾನು ಇರುತ್ತಿದ್ದ ಮನೆಯ ಅಂಗಳದಲ್ಲಿ, ಬೇವಿನ ಮರ, ಬಾತು ಕೋಳಿಯನ್ನು ಹೋಲುವ ಹೂವುಗಳನ್ನು ಬಿಡುವ ಚಿಕ್ಕ ವೃಕ್ಷಗಳು ( ಮತ್ತೆ ಅಂಥವು ನೋಡಲು ದೊರೆತೇ ಇಲ್ಲ), ನಿಂಬೆ ಗಿಡ, ಬಳುವಲ ಕಾಯಿ ಗಿಡ- ಹಿಂದಿಯಲ್ಲಿ ಅದನ್ನು ಕವೀಠ ಎನ್ನುತ್ತಾರೆ, ಹೀಗೆ ತರಹೇವಾರಿ ಗಿಡ-ಮರ- ಸಸಿಗಳಿಂದ ನಿಬಿಡವಾಗಿತ್ತು ನಮ್ಮ ವಠಾರ. ನಮ್ಮ ಮನೆಗಳು ಪರ್ಣಕುಟೀರದಂತಿದ್ದವು.
ಉಸ್ಮಾನ್ ಸಾಗರ್ – ಗಂಡೀಪೇಟ್ ಕೆರೆಯ ಸಿಹಿನೀರು ಶಹರಿಗೆಲ್ಲಾ ಪೂರೈಕೆ ಆಗುತ್ತತ್ತು. ೮೦ ರ ದಶಕದಲ್ಲಿಯೂ ಭೂಗರ್ಭದ ನೀರಿಗಾಗಿ ಬೋರ್ ವೆಲ್ ಬಾವಿಗಳನ್ನು ತೋಡಿರದೆ ಕೆರೆ ನೀರನ್ನೇ ಆಶ್ರಿಯಿಸುತ್ತದ್ದ ಸುದಿನಗಳು ಅವು. ಬರ ಬರುತ್ತಾ ಶಹರು ಬೆಳೆದು ಕೆರೆಗಳ ಜಲಾನಯನದಲ್ಲೂ ಕಟ್ಟಡಗಳು ಎದ್ದು ಕೆರೆಗಳು ಬತ್ತಿ ಹೋದದ್ದು ಬಹಳ ನೋವನ್ನುಂಟು ಮಾಡಿದರೂ ಇದು ಕಟು ಸತ್ಯ. ಇಂತಹ ನಿಬಿಡವಾದ ಹಸಿರಿನ ನಡುವೆ ಬಣ್ಣ ಬಣ್ಣದ ಪಾತರಗಿತ್ತಿ-ಚಿಟ್ಟೆ, ವಿವಿಧ ಪ್ರಜಾತಿಯ ಪಕ್ಷಿಗಳು ನೋಡಲು ಸಿಕ್ಕು ಮನಸ್ಸಿಗೆ ಮುದ ನೀಡುತ್ತಿದ್ದವು. ಕಂಬಳಿ ಹುಳ ಚಿಟ್ಟೆಯಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆಯನ್ನು ಕಣ್ಣಾರೆ ಕಂಡು ಆನಂದಿಸಿದ್ದು ಆ ದಿನಗಳಲ್ಲಿಯೇ. ಯಾವುದೇ ಯುರೋಪ್ ರಾಷ್ಟ್ರಕ್ಕೂ ಕಡಿಮೆ ಇರಲಿಲ್ಲ ಇದರ ಸೌಂದರ್ಯ ಸಿರಿ. ಬೇಸಿಗೆಯ ದಿನಗಳಲ್ಲಿ ಮನೆಯ ಮುಂದಿನ ಜಗುಲಿಯ ಮೇಲೆ ಅಥವಾ ಅಂಗಳದಲ್ಲಿ ಹಾಯಾಗಿ ಪವಡಿಸಿ ಚುಕ್ಕೆಗಳ ಜೊತೆ ಹರಟುವ ದಿನಗಳನ್ನು ನೆನೆದರೆ, ‘ ಹೀಗೂ ಒಂದು ಸಮಯವಿತ್ತೆ’ ಎಂದು ಅನಿಸಿದೆ ಇರುವುದಿಲ್ಲ. ಹೈದರಾಬಾದ್ ನ ಚಳಿಗಾಲ ಬಹಳ ಹಿತಕರವಾಗಿದ್ದು ನಮ್ಮ ದೇಶದ ರಾಷ್ಟ್ರಪತಿಗಳು ತಮ್ಮ southern sojourn – ದಕ್ಷಿಣ ಭಾರತದ ಬಿಡಾರವನ್ನು ಹೈದರಾಬಾದಿನಲ್ಲಿ ಹೂಡಿ ಕೆಲವು ದಿನಗಳ ಸಮಯ ತಂಗುತ್ತಿದ್ದರು.
ಬರ ಬರುತ್ತಾ ಮನ ಬಂದಂತೆ ಭೂಮಿಯನ್ನು ಬಗೆದು ಸೀಳಿ ಅಂತರ್ಜಲವನ್ನು ಹೀರಿ ನಮ್ಮ ಉಪಭೋಗಕ್ಕಾಗಿ ಎಗ್ಗಿಲ್ಲದೆ, ಹಿಂದೆ ಮುಂದೆ ನೋಡದೆ, ನಮ್ಮದೇ ಸೊತ್ತು, ಇದರ ಮೇಲೆ ನಮ್ಮದೇ ಸಾರ್ವಭೌಮತ್ವ ಎಂಬ ಧೋರಣೆಯಿಂದ ಬಳಸುತ್ತಿರುವದನ್ನು ಕಂಡಾಗ ಗಾಬರಿಯಾಗುತ್ತದೆ. ಎಲ್ಲ ಸಂಪನ್ಮೂಲಗಳನ್ನು ನಾವೇ ಉಪಯೋಗಿಸಿ ಮುಂಬರುವ ತಲೆಮಾರುಗಳಿಗೆ ಏನಾದರೂ ಉಳಿದೀತೆ ಎಂಬ ಚಿಂತೆ ಕಾಡುತ್ತದೆ. ಇದು ನನ್ನ ವೈಯಕ್ತಿಕ ಮರುಕಳಿಕೆ ( ನಾಸ್ಟಾಲ್ಜಿಯಾ) ಹಳಹಳಿಕೆ ಎಂದು ಸರ್ವಥಾ ಭಾವಿಸಬೇಡಿ. ಇದರ ಹಿಂದೆ ನಾನು ಕಂಡಂತೆ ಪರಿಸರದಲ್ಲಾದ ಬದಲಾವಣೆಗಳನ್ನು ದಾಖಲಿಸುತ್ತ ಅದನ್ನು ಸರಿಪಡಿಸಲು ನಾವು ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆಯನ್ನು ಹುಟ್ಟುಹಾಕಲು ಈ ಚಿತ್ರಗಳನ್ನು ನಿಮ್ಮ ಮುಂದೆ ಇಡುತ್ತಿರುವೆ.
ಅಭಿವೃದ್ಧಿಯ ಪಯಣದಲ್ಲಿ ಬದಲಾವಣೆಗಳು ಬರುವದು ಸಹಜ ಮತ್ತು ಬರಬೇಕಾದ್ದೇ. ಆದರೆ, ಸಂಪನ್ಮೂಲಗಳ ದುಂದು ಬಳಕೆಯಾಗಿ ನಾವೇ ಎಲ್ಲವನ್ನು ಕಬಳಿಸಿ ಭೂಮಿಯನ್ನು ಬರಡಾಗಿಸಬಾರದು. ಈ ಗುರುತರವಾದ ಹೊಣೆ ನಮ್ಮೆಲ್ಲರ ಮೇಲೂ ಇದೆ. ನನ್ನ ಬಾಲ್ಯವನ್ನು ಹೈದರಾಬಾದಿನಲ್ಲಿ ಕಳೆದ ಕಾರಣ ನಾನು ಭಾಗ್ಯನಗರದಲ್ಲಾದ ಏರು ಪೇರುಗಳನ್ನು ಪರಿಸರದ ಸಂರಕ್ಷಣೆಗೆ ತಾಳೆ ಹಾಕಿ ಹಲವು ವಿಷಯಗಳನ್ನು ನಿಮ್ಮ ಜೊತೆಗೆ ಹಂಚಿಕೊಂಡಿದ್ದೇನೆ. ದೇಶದ ಉಳಿದ ನಗರಗಳ, ಊರುಗಳ, ಪ್ರಾಂತಗಳ ಕತೆ ಇದಕ್ಕಿಂತ ಭಿನ್ನವಾಗಿರಲಾರದು. ಬೆಂಗಳೂರು –ಮೈಸೂರುಗಳ ಬಗ್ಗೆಯೂ ಇದೇ ರೀತಿಯ ಭಾವನೆಯನ್ನು ಅಲ್ಲಿ ಮೊದಲಿನಿಂದಲೂ ವಾಸಿಸಿರುವ ಜನರು ತಳೆದಿರಬಹುದು.
ಪರಿಸರವೆಂದರೆ ಬರೀ ಊರ ಹೊರಗೆ ಇರುವ ಕಾನನವಲ್ಲ, ನಮ್ಮ ನಡುವೆ ಇರುವ ಹಸಿರು, ಅದರಿಂದ ಬೀಸಿದ ಗಾಳಿ ನಮ್ಮ ಉಚ್ಛ್ವಾಸ ನಿಶ್ವಾಸಗಳನು ತುಂಬಿ ನಮ್ಮನ್ನು ಚೇತೋಹಾರಿಯನ್ನಾಗಿ ಮಾಡುವ ಜೀವನದಾಯಿ ಸೆಲೆಗಳು; ನಮ್ಮ ಮನೆಯಂಗಳದಲ್ಲಿ ಬೆಳೆದ ಗಿಡ- ಮರಗಳು ನಮ್ಮ ಕುಟುಂಬದ ಅವಿಭಾಜ್ಯ ಅಂಗ. ಇಂತಹ ಅದಮ್ಯವಾದ ಭಾವನೆಯಿಂದ ಜನ್ಯವಾದ ಈ ಮನದಾಳದ ಮಾತನ್ನು ನಿಮ್ಮ ಮುಂದೆ ಇಟ್ಟು ನನ್ನ ಮನವನ್ನು ನಿಮ್ಮೆದುರಿಗೆ ತೆರೆಯುತ್ತಿದ್ದೇನೆ.
ಈ ಮೊದಲೇ ಪರಿಸರದ ಬಗ್ಗೆ ಬರೆದು ಆಗಿದೆ, ಆದರೆ ಇದರ ಮಹತ್ವವನ್ನು ಭಿನ್ನ ದೃಷ್ಟಿಕೋಣದಿಂದ ವೀಕ್ಷಿಸಿ ಅದರಿಂದ ಮೂಡಿದ ಚಿತ್ರಗಳನ್ನು ನಿಮ್ಮ ದೃಷ್ಟಿಗೂ ತರಬೇಕೆಂಬುವ ಹಂಬಲದಿಂದ ಪ್ರೇರಿತವಾಗಿ ಸಾಕಾರಗೊಂಡದ್ದನ್ನು ನಿಮ್ಮ ಅವಗಾಹನೆಗೆ ತಂದಿದ್ದೇನೆ. ಪುನರಾವರ್ತನೆ ಎಂದು ಅನಿಸಿದರೂ ಎನೂ ಅಡ್ಡಿಯಿಲ್ಲಾ, ಎಟ್ ದ್ ಕಾಸ್ಟ್ ಆಫ್ ರಿಪಿಟೇಶನ್ ಪರ್ಯಾವರಣದ ವಿಷಯವನ್ನು ಮತ್ತೆ ಚರ್ಚಿಸಿರುವೆ. ನಮ್ಮ ಗುಂಪಿನ ಸದಸ್ಯರು ಪರಿಸರದ ಮೇಲಿನ ಅತೀವ ಒಲವಿನಿಂದ ರಚಿಸಿದ ಕವನಗಳಲ್ಲಿ ಇದೇ ರೀತಿಯ ಕಳಕಳಿ -ಕಾಳಜಿಗಳ ಧ್ವನಿ ಎದ್ದು ಕಾಣುತ್ತದೆ. ಸಂವೇದನಾ ಶೀಲ ಸಹೃದಯಿಗಳ ಮನಸು ಪರಿಸರಕ್ಕಾಗಿ ಮಿಡಿಯುವದನ್ನು ನೋಡಿ ಪ್ರೋತ್ಸಾಹಗೊಂಡು ಮತ್ತೆ ಪರಿಸರದ ಮೇಲೆ ಫೋಕಸ್ ಬೀರುವ ಒಲವಿನ ಈ ಅಂಕಣ.
‘ತಾಯಿ ಮಡಿಲಲ್ಲಿ ಮಗುವಿಗೆ ಹಾಲೂಡಿಸುತ್ತಿದ್ದಾಳೆ, ಮಗು ತಾಯಿಯ ಎದೆಗೆ ಅವುಚಿಕೊಂಡು ಸ್ತನ ಪಾನ ಮಾಡುತ್ತಿದೆ. ತಾಯಿಯ ಮೊಲೆಯ ಮೇಲೆ ಭೂಮಂಡಲದ ( ಗ್ಲೋಬ್)ಚಿತ್ರವಿದೆ. ಚಿತ್ರ ಮಿತ್ರ ಎಂಬ ಕಲಾವಿದರು ತಮ್ಮ ಈ ಪೇಂಟಿಂಗ್ ಅನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡದ್ದನ್ನು ಗೆಳೆಯ ಮಹಾದೇವ ಅವರು ನನಗೆ ಇಂದು ಮುಂಜಾನೆ ಫಾರ್ವರ್ಡ್ ಮಾಡಿದ್ದರು. ಈ ಚಿತ್ರದ ಶೀರ್ಷಿಕೆ ‘ ಅಮೃತಸ್ತನ್ಯ’ ಎಂದಿತ್ತು. ನಿರ್ವ್ಯಾಜವಾಗಿ ಮಮತೆಯಿಂದ ನಮಗೆ ಪೋಷಣೆ ನೀಡುತ್ತಿರುವ ತಾಯಿಗೆ ಕ್ಯಾನ್ಸರ್ ಪರಿಣಮಿಸದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲೆ ಇದೆ. ನಮ್ಮ ರೀತಿ- ನೀತಿಗಳನ್ನು ತಿದ್ದಿಕೊಂಡು ಅವಳನ್ನು ಸುರಕ್ಷಿತವಾಗಿ ಇಡೋಣ ಎಂಬ ಸೂಕ್ತ ಅಡಿ ಟಿಪ್ಪಣೆಯೊಂದಿಗೆ ಚಿತ್ರವನ್ನು ಬಿತ್ತರಿಸಲಾಗಿತ್ತು. ಚಿತ್ರ ನನ್ನ ಮನಸ್ಸನನ್ನು ಬಹಳವಾಗಿ ಕಲುಕಿತು. ಎಷ್ಟೋ ಶಬ್ದಗಳು ಹಿಡಿಯಲಾರದ ಭಾವನೆಗಳನ್ನು, ಭೂಮಿ ತಾಯಿಯ ಅಳಲನ್ನು, ಪರಿಸರದ ಬಗ್ಗೆ ಇರುವ ಪ್ರೇಮವನ್ನು ಏಕಕಾಲಕ್ಕೆ ಈ ಚಿತ್ರ ಬಿಂಬಿಸಿದ ಪರಿಮಾಣವನ್ನು ಅಳೆಯುವದು ನನ್ನ ಅಳವಲ್ಲ.
ಸದ್ಯಕ್ಕೆ ನನ್ನ ಮಾತುಗಳನ್ನು ಇಲ್ಲಿ ನಿಲ್ಲಿಸುತ್ತೇನೆ. ಇನ್ನು ಏನಿದ್ದರೂ ಧೃಡ ಸಂಕಲ್ಪದಿಂದ ಕಾರ್ಯೋನಮುಖರಾಗಿ ನಮ್ಮ ಕೈಲಾದದ್ದನ್ನು ಪ್ರಕೃತಿಯ ರಕ್ಷಣೆಗಾಗಿ ಯೋಗದಾನ ಮಾಡುವದೇ ನಾವು ಪರಿಸರದ ಕುರಿತು ತೋರಬೇಕಾಗಿರುವ ಒಲವು.
ವಂದನೆಗಳು..
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ