- ನಗಿ, ಕಳವೆಯ ನಾಟಿ - ಸೆಪ್ಟೆಂಬರ್ 8, 2022
- ಸಂಜೆಯ ಮಳೆ - ಜುಲೈ 17, 2021
- ಆಷಾಢದ ಗಾಳಿ ?️ (ಸಾನೆಟ್) - ಜುಲೈ 15, 2020
ಪುಸ್ತಕ: 🔰
ಸಂಜೆಯ ಮಳೆ (ಲಲಿತ ಪ್ರಬಂಧ) 💦
ಲೇಖಕಿ: ಶ್ರೀಮತಿ ಟಿ.ಎಸ್. ಶ್ರವಣಕುಮಾರಿ
ಬ್ಯಾಂಕ್ ಉದ್ಯೋಗಿಯಾಗಿದ್ದು ನಿವೃತ್ತಿಯ ನಂತರವೇ ಸಾಹಿತ್ಯ ರಚನೆಯಲ್ಲಿ ತೀವ್ರವಾಗಿ ತೊಡಗಿಕೊಂಡ ಶ್ರೀಮತಿ ಟಿ.ಎಸ್. ಶ್ರವಣಕುಮಾರಿಯವರು ಕಳೆದ ಎರಡೇ ವರ್ಷಗಳಲ್ಲಿ ತಮ್ಮ ಮೂರನೇ ಕೃತಿಯನ್ನು ಹೊರತಂದಿರುವುದು ಸಂತೋಷದ ಹಾಗೂ ಅಚ್ಚರಿಯ ಸಂಗತಿ. ಕಳೆದ ವರ್ಷ (2020) ಇವರ ಕಥಾ ಸಂಕಲನಕ್ಕೆ ‘ಮೈತ್ರಿ ಸಂಭ್ರಮ 2020’ರ ಪ್ರಶಸ್ತಿ ನೀಡಿ ‘ಅಸ್ಪಷ್ಟ ತಲ್ಲಣಗಳು’ ಎಂಬ ಪುಸ್ತಕವನ್ನೂ ಇದೀಗ ‘ಸಂಜೆಯ ಮಳೆ’ಯನ್ನೂ ಪ್ರಕಾಶಿಸಿ ಹೊಸ ಲೇಖಕಿಯನ್ನು ಗುರುತಿಸಿ ಉತ್ತೇಜಿಸಿರುವ ಮೈತ್ರಿ ಪ್ರಕಾಶನದ ಕಾರ್ಯವೂ ಶ್ಲಾಘನೀಯವೇ.
ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿಗೆ ವಿಶಿಷ್ಟ ಸ್ಥಾನವಿದೆ. 1938ರಲ್ಲಿ ಪಡುಕೋಣೆ ರಮಾನಂದರಾಯರ ‘ಹುಚ್ಚು ಬೆಳದಿಂಗಳಿನ ಹೂಬಾಣಗಳು’ ಕನ್ನಡದ ಮೊದಲ ಪ್ರಕಟಿತ ಲಲಿತ ಪ್ರಬಂಧ ಸಂಕಲನವೆನ್ನಲಾಗಿದ್ದು ಎ.ಎನ್. ಮೂರ್ತಿರಾವ್, ನಾಡಿಗೇರ ಕೃಷ್ಣರಾವ್, ನಾ. ಕಸ್ತೂರಿ, ಗೊರೂರು ರಾಮಸ್ವಾಮಿ ಐಯಂಗಾರ್, ಬಿ.ಆರ್. ವಾಡಪ್ಪಿ, ರಾ. ಕುಲಕರ್ಣಿ ಮೊದಲಾದವರಿಂದ ಸಮೃದ್ಧವಾದ ಈ ಸಾಹಿತ್ಯ ಪ್ರಕಾರ ಇಂದಿಗೂ ಜನಪ್ರಿಯವಾಗುತ್ತಲೇ ಸಾಗಿದೆ. ಪ್ರಸ್ತುತ ಸಂಕಲನದಲ್ಲಿನ ‘ಕೈತುತ್ತು’, ‘ಅಕ್ಕಿರೊಟ್ಟಿ’ ಲೇಖನಗಳು ಉತ್ತಮ ಲಲಿತ ಪ್ರಬಂಧಗಳಿಗೆ ಯುಕ್ತ ಉದಾಹರಣೆಗಳಾಗಬಲ್ಲವು. ಬ್ಯಾಂಕಿಂಗ್ ವಲಯದ ಬರಹಗಾರರೇ ಬಹುಸಂಖ್ಯಾತರಾಗಿದ್ದ ‘ಸಾಹಿತ್ಯ ದಾಸೋಹ’ವೆಂಬ ವೇದಿಕೆಯಲ್ಲಿ ಈ ಹಿಂದೆ ಇವರು ಓದಿದ್ದ ‘ಕೈತುತ್ತು’ ಕೇಳಿ ಆ ರಚನೆಯ ಸೊಗಸಿಗೆ ಮಾರುಹೋಗಿದ್ದೆ. ಈ ಸಂಕಲನ ಕೈಗೆತ್ತಿಕೊಂಡು ಮೊದಲು ಓದಿದ್ದು ಅದನ್ನೇ! ಪ್ರಬಂಧದ ಈ ಕೆಲವು ಸಾಲುಗಳನ್ನು ಆಸ್ವಾದಿಸಿ:
“ಕೈತುತ್ತಿಗೆ ತನ್ನದೇ ಆದ ಕೆಲವು ಅಲಿಖಿತ ನಿಯಮಗಳಿವೆ. ಈ ಸಮಾರಂಭಕ್ಕೆ ರಾತ್ರಿಯೇ ಪ್ರಶಸ್ತ ಸಮಯ. ಹಗಲಿನ ಹೊತ್ತಿನ ಕೈತುತ್ತು ಅಷ್ಟಾಗಿ ಶೋಭಿಸುವುದಿಲ್ಲ. ಬಿಸಿ ಬಿಸಿ ಅಡುಗೆ, ಆತುರದ ಊಟ ಕೈತುತ್ತಿಗೆ ಹೇಳಿಸಿದ್ದೇ ಅಲ್ಲ. ….. …”
ಅನ್ನದ ಅಗುಳು ಬಿಸಿಬಿಸಿಯಾಗದೆ ಹುಳಿಯೊಂದಿಗೆ ಬೆರೆಯುವಂತಿರಬೇಕು. ಸಣ್ಣ ಮೂತಿಯ ತಪ್ಪಲೆಯಾಗಲೀ ದೊಡ್ಡ ಹರಿವಾಣ, ಪರಾತವಾಗಲೀ ಇಲ್ಲಿ ಸಲ್ಲುವ ಪಾತ್ರಗಳಲ್ಲ. ಧಾರಾಳವಾಗಿ ಕೈ ಆಡಿಸಬಹುದಾದ ಅಳತೆಯ, ಸಾಕಷ್ಟು ಹಿಡಿಸುವ ಮಧ್ಯಮ ಎತ್ತರದ ಡಬರಿಗಳು ಸೂಕ್ತ… “
ಇಲ್ಲಿರುವುದು ಸರಳವೆನಿಸಿದರೂ ಎಷ್ಟು ನಿಖರವಾದ ಬರವಣಿಗೆ!
ಅನೇಕರಿಗೆ ಸಾಮಾನ್ಯವೆನಿಸಬಹುದಾದ ‘ಅಕ್ಕಿ ರೊಟ್ಟಿ’ ಎಂಬ ಖಾದ್ಯವಂತೂ ಇಲ್ಲಿ ಈ ಲೇಖಕಿಯು ತನಗೆ ನೀಡಿರುವ ಮಹತ್ವವ್ನನು ಕಂಡು ಹೆಮ್ಮೆಯಿಂದ ಬೀಗುವಂತಾಗುವುದು ನಿಶ್ಚಿತ:
“ಅಕ್ಕಿ ರೊಟ್ಟಿಗೆ ತನ್ನದೇ ಆದ ಪಾವಿತ್ರ್ಯತೆಯಿದೆ. ಎಲ್ಲ ಕಡೆಯೂ ಬೇಕಾಬಿಟ್ಟಿ ಸಿಗುವಂಥದಲ್ಲ. ಅದನ್ನು ಮಾಡಲು ಬರಿಯ ಪಾಕಶಾಸ್ತ್ರ ಪ್ರಾವೀಣ್ಯ ಇದ್ದರೆ ಸಾಲದು. ಹಿಟ್ಟು ಕಲಸುವಾಗ ಸ್ವಲ್ಪ ಪ್ರೀತಿ, ಅಕ್ಕರೆ, ಮಮತೆ ಇವನ್ನೂ ಇತರ ಸಾಮಗ್ರಿಗಳೊಡನೆ ಸಮಪ್ರಮಾಣದಲ್ಲಿ ಬೆರೆಸಬೇಕು. ಅಂದರೆ ಮಾತ್ರ ಹದವಾದ ರೊಟ್ಟಿ ತಟ್ಟಲು ಸಾಧ್ಯ….”
“ಆಗ ಒಡೆದ ಹಾಲುಗಾಯಿಯ ತುರಿ, ಸಣ್ಣಗೆ ಕೊಚ್ಚಿದ ಈರುಳ್ಳಿ, ಮನೆಯ ಹಿತ್ತಲಲ್ಲಿ ಬೆಳೆದ ಆಗತಾನೆ ಕಿತ್ತು ತಂದ ಕೊತ್ತಂಬರಿ ಸೊಪ್ಪು, ಗಮ್ಮೆನಿಸುವಷ್ಟು ಜೀರಿಗೆ, ಹದವಾಗಿ ಹಾಕಿದ ಉಪ್ಪು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಕಲಸಿ ಎಣ್ಣೆ ಸವರಿದ ಬಾಣಲೆಯಲ್ಲಿ ತೆಳ್ಳಗೆ ತಟ್ಟಿ, ಬಿಸಿಯಾದ, ಗರಿಯಾದ ರೊಟ್ಟಿಯನ್ನು ತಟ್ಟೆಗೆ ಹಾಕಿ ಪ್ರೀತಿಯಿಂದ ‘ಇನ್ನೊಂದು ಸ್ವಲ್ಪ ಹಾಕಿಸಿಕೋ’ ಎಂದು ಉಪಚರಿಸುತ್ತಿದ್ದರೆ ಆ ಸ್ವರ್ಗೀಯ ಅನುಭವವೇ ಬೇರೆ. ….”
-ಮನಸ್ಸಿನ ಲಹರಿಯನ್ನು ಅಕ್ಷರರೂಪಕ್ಕೆ ಇಳಿಸಿ ಭಾವಲೋಕವೊಂದನ್ನೇ ಸೃಷ್ಟಿಸುವ ಇಂಥ ಸಾಲುಗಳು ಯಾರಿಗೆ ಪ್ರಿಯವಾಗುವುದಿಲ್ಲ?
ಬಾಲ್ಯದ ನೆನಪುಗಳೇ ‘ಸಂಜೆಯ ಮಳೆ’ಯ ಜೀವಾಳ. ಅಜ್ಜಿ-ತಾತಂದಿರ ಅಕ್ಕರೆ, ಆಗಿನ ದಸರಾ, ದೀಪಾವಳಿ, ಸಂಕ್ರಾಂತಿ, ಶಿವರಾತ್ರಗಳ ಆಚರಣೆಗಳು, ಬಾಲ್ಯದ ಆಟ-ಆಲೋಚನೆಗಳು ಓದುಗರನ್ನು ಹಳೆಯ ದಿನಗಳಿಗೇ ಒಯ್ದುಬಿಡುತ್ತವೆ. ರಿಸೆಪ್ಷನ್ ಎಂಬ ಪ್ರಹಸನ, ಸೂತಕ ಪುರಾಣ, ಚೋರ ಪುರಾಣ – ಈ ಬರಹಗಳು ಸಾಧಾರಣವೆನ್ನಿಸಬಹುದಾದರೂ ‘ಹೂವಿನ ಭಾಷೆ’, ‘ಬೀದಿಯ ಪ್ರಪಂಚ’, ‘ಎಲೆಗಳ ಬಲೆಯಲ್ಲಿ’ – ಈ ಲೇಖಕಿಯ ಓದಿನ ವಿಸ್ತಾರ, ಜೀವನಾನುಭವ ಹಾಗೂ ಚಿಂತನೆಯ ಪ್ರೌಢಿಮೆಯನ್ನು ತೋರಿಯಾವು. ‘ಸಲಾಮನ ಗಾಡಿಯೂ.. ಸಂಕ್ರಾಂತಿ ಹಬ್ಬವೂ’ ಎಳ್ಳಿನ ಹಬ್ಬದ ನೆನಪುಗಳ ಸುರುಳಿ ಬಿಚ್ಚಿರುವ ಪ್ರಬಂಧ. ಇಲ್ಲಿಯ ‘ಸಲಾಮನ ಗಾಡಿ’ ಅಂದಿದ್ದ ಭಾವೈಕ್ಯದ ದ್ಯೋತಕವಾಗಿ ಉಳಿಯುತ್ತದೆ. ತಮ್ಮ ನಿತ್ಯದ ಅನುಭವಗಳನ್ನು ವಿಸ್ತೃತ, ಲಾಲಿತ್ಯಮಯ ನಿರೂಪಣೆಯಿಂದ ಕತೆಯಾಗಿಸುವ, ಲಲಿತಪ್ರಬಂಧವಾಗಿಸುವ ಕಲೆ ಶ್ರವಣಕುಮಾರಿಯವರಿಗೆ ಕರಗತವಾಗಿದೆ.
ಲೇಖಕಿ ಶ್ರೀಮತಿ ಜಯಶ್ರೀ ಕಾಸರವಳ್ಳಿಯವರ ಆತ್ಮೀಯ ಮುನ್ನುಡಿ ಮತ್ತು ಶ್ರೀ ಶಶಿಧರ ಹಾಲಾಡಿಯವರ ಬೆನ್ನುಡಿಗಳು ಕೃತಿಯ ಓದಿಗೆ ಪೂರಕವಾಗಿವೆ.
ಇಂಥ ಇನ್ನಷ್ಟು ರಚನೆಗಳನ್ನು ಎದುರು ನೋಡುತ್ತಾ ಲೇಖಕಿ ಶ್ರವಣಕುಮಾರಿಯವರಿಗೆ ಶುಭ ಹಾರೈಸೋಣ..!
ಸಂಜೆಯ ಮಳೆ
ಶ್ರೀಮತಿ ಟಿ.ಎಸ್. ಶ್ರವಣಕುಮಾರಿ_
ಮೈತ್ರಿ ಪ್ರಕಾಶನ (2021)
ಪುಟ 110 (ಅಷ್ಟದಳ ಡೆಮಿ), ಬೆಲೆ: ರೂ.120/-
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ