ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಮಿತಾ ಭಾಗ್ವತ್
ಇತ್ತೀಚಿನ ಬರಹಗಳು: ಅಮಿತಾ ಭಾಗ್ವತ್ (ಎಲ್ಲವನ್ನು ಓದಿ)

ಅರ್ಧ ಚಪ್ಪಲಿನೊಳಗೆ ಹೊಕ್ಕ ಅವಳು ಕಾಲ್ಗಳು ಪುನಃ ಹಿಂದಕ್ಕೆ ಬಂದವು. ಒಳಗೆ ಹೋಗಿ ಬೇರೆ ಸೀರೆ ಉಟ್ಟುಕೊಂಡು ಬಂದ ಅಲ್ಕಾ ದಾರಿಯ ಮೇಲೆ ಸುಧೀರ್‍ನನ್ನು ಕೇಳಿದ್ದಳು. ಸುಧೀ ನಾನು ಹಳದಿ ಸೀರೆಯನ್ನುಟ್ಟುಕೊಂಡರೆ ಇನ್ನಷ್ಟು ಕಪ್ಪಗೆ ಕಾಣುತ್ತೇನಾ”. ಸುಧೀರನಿಗೆ ಹೌದೆನ್ನಬೇಕೆನಿಸಿದರೂ ಅವಳಿಗೆ ಬೇಜಾರು ಏಕೆ ಮಾಡಬೇಕು ಎನಿಸಿ ಸುಮ್ಮನಾದ.

ಅಮಿತಾ ಭಾಗ್ವತ್ ಅವರ ಕಥೆ ‘ಹಳದಿ ಸೀರೆ’ ಯಿಂದ

ಆಫೀಸಿಗೆ ಹೊರಡಲು ತಯಾರಾಗುತ್ತಾ ಸುಧೀರ್ ಟೈ ಬಿಗಿದುಕೊಳ್ಳುತ್ತಿದ್ದ. ಚಾಕಲೇಟ್ ಬಣ್ಣದ ಸಣ್ಣ ಚಕ್ಸ್‍ಗಳಿರುವ ಫುಲ್ ಶರ್ಟ್ ಮೇಲೆ ಅಲ್ಕಾ ತೆಗೆದಿಟ್ಟ, ಕಾಫಿ ಬಣ್ಣದ ಟೈ ಸೊಗಸಾಗಿ ಕಾಣುತ್ತಿತ್ತು. ಆಫೀಸಿಗೆ ಹೊರಡುವ ಹೊತ್ತಿನಲ್ಲಿ ಸುಧೀರನಿಗೆ ಬಿಸಿ ಬಿಸಿ ಕಾಫಿ ಬೇಕು. ಪೂರ್ಣ ಕಪ್ ತಂದಿಟ್ಟರೋ ಕುಡಿಯಲು ಪುರುಸೊತ್ತು ಇಲ್ಲದೇ ಅರ್ಧಕಪ್ ಕುಡಿಯುತ್ತಾನೆ. ಹಾಗಂತ ಅಲ್ಕಾ ಅರ್ಧ ಕಪ್ ಕಾಫಿ ತಂದಿಟ್ಟರೇ ಅವನು ಕಾಲು ಕಪ್ ಕುಡಿದು ತಳ ಉಳಿಸುತ್ತಾನೆ. ಆ ಸಮಯದಲ್ಲಿ ಮಾತ್ರ ಅಲ್ಕಾಳ ಏರಿದ ಹುಬ್ಬನ್ನು ಅವನು ಪರಿಗಣಿಸುವುದೇ ಇಲ್ಲ.

ಸುಧೀ ಇವತ್ತು ನಿನಗೆ ಪೂರ್ಣಕಪ್ ಕಾಫಿ. ಏಕೆಂದರೆ ಡ್ರೈವರ್ ಬರಲಿಲ್ಲ. ನೀನೇ ಡ್ರೈವ್ ಮಾಡಬೇಕು. ದಾರಿಯಲ್ಲಿ ಪಿರಿ ಪಿರಿ ಮಾಡಲು ಜೊತೆಗೆ ನಾನೂ ಇಲ್ಲ” ಅಲ್ಕಾ ಹೇಳುತ್ತಲೇ ಇದ್ದಳು. ಕಾಫಿ ಕುಡಿದು ಕಾರಿನ ಚಾವಿ ತೆಗೆದುಕೊಂಡು, ಲಿಫ್ಟ್‍ಗೆ ಕಾಯದೇ ಕೆಳಗಿಳಿಯುವಾಗ ಸುಧೀರನಿಗೆ ಸಿಳ್ಳು ಹಾಕಬೇಕೆನಿಸುತ್ತಿತ್ತು. ಡ್ರೈವ್ ಮಾಡಲು ಸ್ವಲ್ಪವೂ ಬೇಸರವೆನಿಸುತ್ತಿರಲಿಲ್ಲ. ಏಕೆಂದರೆ ಕಳೆದ ತಿಂಗಳಷ್ಟೇ ತೆಗೆದುಕೊಂಡಿರುವ ಮರ್ಸಿಡರ್ಸ್ ಕಾರಿನ ಹೊಳಪು ಇನ್ನೂ ಮಾಸಿರಲಿಲ್ಲ. ಯಾರೂ ಕದಿಯಲಾರದ ಕಪ್ಪು ಬೆಡಗು. ಸುಧೀರ ಊರಿನಿಂದ ಮುಂಬಯಿಗೆ ಬಂದಾಗಿನಿಂದಲೂ ದಾದರ್‍ನ ಭವಾನಿ ಶಂಕರ ಮಾರ್ಗದಲ್ಲಿಯೇ ಅವನ ನಿವಾಸ. ವೆಂಕಟೇಶ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಪ್ರಾರಂಭವಾದ ಆ ಮುಂಬಯಿಯ ರಸ್ತೆ. ವೆಂಕಟೇಶ್ ಕೋ.ಆಪರೇಟಿವ್ ಸೊಸೈಟಿಯ ಹೊರಗಿನ ಅದೇ ಟೀ ಸ್ಟಾಲ್. ಒಂದು ಕೈಯಲ್ಲಿ ಲೋಟ ಹಿಡಿದು ಇನ್ನೊಂದು ಕೈಯಲ್ಲಿ ದೊಡ್ಡ ಪಾತ್ರೆಯಲ್ಲಿ ಒತ್ತಿ ಹಿಡಿದು ಚಹಾದಲ್ಲಿ ನೊರೆಯುಕ್ಕಿಸುವ ಕರಾಮತ್ತನ್ನು ಮುಂದುವರಿಸಿಕೊಂಡು ಹೋಗುವ ಅದೇ ಭಯ್ಯಾ. ಮುಂಬಯಿಗೆ ಬಂದ ಹೊಸತರಲ್ಲಿ ಕೆಲವು ಬಾರಿ ಅವನ ಕೈಯಲ್ಲಿ ಚಹಾ ಕುಡಿದ ಕಂಪು ಇನ್ನೂ ತಾಜಾ ಅನಿಸುತ್ತಿದ್ದರೂ ಸುಧೀರನಿಗೆ ಅವನ ಹೆಸರು ಗೊತ್ತಿಲ್ಲ. ಸ್ವಲ್ಪವೇ ದೂರದಲ್ಲಿದ್ದ ಜೋಪಡಿಗಳು ಇನ್ನೂ ಸ್ವಲ್ಪ ಎತ್ತರಕ್ಕೆ ಬೆಳೆದಂತಿವೆ. ಅಷ್ಟೇ ವೆಂಕಟೇಶ ಕೋ.ಆಪರೇಟಿವ್ ಸೊಸೈಟಿಯ ಎದುರಿಗಿದ್ದ ಚಾಳ್ ಮನೆಗಳು ಮಾಯವಾಗಿ ಆ ಜಾಗದಲ್ಲಿ 12 ಮಹಡಿಯ `ಕುಬೇರಾ’ ಟವರ್ ಎದ್ದು ನಿಂತಿದೆ. ಎರಡು ಮನೆಗಳನ್ನು ಕೂಡಿಸಿದ, ಹೊರಗಿನ ಗಾಳಿಗೆ ಮೈಯೊಡ್ಡಿದ ವಿಶಾಲವಾದ ಟೆರೇಸ್ ಹೊಂದಿದ ಫ್ಲಾಟ್ ಸುಧೀರನದು.ಬೆಳಿಗ್ಗೆ ಎದ್ದು ಪ್ರೀತಿಯಿಂದ ಬೆಳೆಸಿದ ಗಿಡಗಳಿಗೆ ಅಲ್ಕಾ ನೀರು ಹಾಕಿದರೆ ಅವಳು ಎಲೆಗಳ ಮೇಲೆ ಸಿಂಪಡಿಸಿದ ನೀರು ತೊಟ್ಟಿಕ್ಕುವುದನ್ನು ನೋಡುವುದು ಸುಧೀರನಿಗೆ ತುಂಬಾ ಅಕ್ಕರೆಯ ಕಾಯಕ.

ಬಿಲ್ಡಿಂಗ್‍ನಲ್ಲಿ ಗ್ರೌಂಡ್ ಫ್ಲೋರ್ ನಷ್ಟೆ ಅಲ್ಲ ಮೊದಲಿನ ಮಾಳಿಗೆಯಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇದೆ. ಎರಡನೇ ಹಾಗೂ ಮೂರನೆ ಮಳಿಗೆಗಳಲ್ಲಿ ಮೊದಲಿದ್ದ ಚಾಳ್ ಮನೆಯವರಿಗೆ ವಸತಿಯನ್ನು ಕೊಡಲಾಗಿತ್ತು. ಹೆಸರು ದೊಡ್ಡದಾದ `ಕುಬೇರ’ ಟವರ್ಸ್ ಎಂದಿದ್ದರೂ ಕೂಡಾ ಮೊಟ್ಟ ಮೊದಲನೇಯದಾಗಿ ಆ ಕಂಪೌಂಡನ್ನು ಹೊಕ್ಕ ಮರ್ಸಿಡರ್ಸ್ ‘ಕಾರು ಸುಧೀರನದೇ ಆಗಿತ್ತು. ಈ ಪರಿಸರ ಅಷ್ಟೇನೂ ಪೋಷ್’ ಆಗಿಲ್ಲ ಅಂತ ಸುಧೀರನಿಗೆ ಅನಿಸುವುದುಂಟು. ಆದರೂ ಅವನಿಗೆ ದೂರ ಹೋಗುವಂತಿಲ್ಲ. ಏಕೆಂದರೆ ಅಲ್ಕಾಳ ತಂದೆ ತಾಯಿಯರು ಎದುರುಗಿನ ವೆಂಕಟೇಶ ಸೊಸೈಟಿಯಲ್ಲಿಯೇ ಇರುತ್ತಾರೆ. ಅಲ್ಕಾ ಹಿರಿಯ ಮಗಳು. ಅವಳೇ ಅವರನ್ನು ನೋಡಿಕೊಳ್ಳಬೇಕು. ಅಲಕಾ ಯಾವಾಗಲೂ ತನ್ನ ತಂಗಿ ಶಲಕಾಳ ಬಗ್ಗೆ ಹೇಳುತ್ತಿದ್ದಳು.ಶಲಕಾ ಹೆಸರಿನಂತೆಯೇ ನೋಡಲೂ ಕೂಡಾ ಹೂವಿನಂತಹವಳು. ಅಪ್ಪ ಯಾವಾಗಲೂ ಅವಳನ್ನು ಹೂವಿನಂತಹ ಮಗಳೇ ಎಂದೇ ಕರೆಯುತ್ತಿದ್ದರು. ಜತೆಯಲ್ಲಿ ಮುಳ್ಳಿನಂತಿರುವ ನಾನೇ ಈಗವರನ್ನು ನೋಡಿಕೊಳ್ಳಬೇಕು”. ಆದರೂ ಎಂದಿಗೂ ಕೂಡಾ ಅಲ್ಕಾ ತನ್ನ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಹಿಂಜರಿದವಳಲ್ಲ.


ಏಕೋ ಟ್ರಾಫಿಕ್ ಜಾಮ್ ದಿನಕ್ಕಿಂತಲೂ ಹೆಚ್ಚಾಗಿಯೇ ಅನಿಸುತ್ತಿತ್ತು. ಸಿಗ್ನಲ್‍ಗಳಿಂದ ತಪ್ಪಿಸಿಕೊಳ್ಳುವ ಆಸೆಯಿಂದ ಪಕ್ಕದ ಗಲ್ಲಿಯಲ್ಲಿ ಕಾರನ್ನು ಹೊಕ್ಕಿಸಿದ. ಎದುರಿಗೆ ಉಳ್ಳಾಗಡ್ಡೆ, ಬಟಾಟೆಯನ್ನು ತುಂಬಿಕೊಂಡಿರುವ ಕೈಗಾಡಿಯವನು ಬರುತ್ತಿದ್ದುದನ್ನು ನೋಡಿ ಬದಿಗೆ ಕಾರನ್ನು ತೆಗೆದುಕೊಳ್ಳುತ್ತಿರುವಾಗಲೇ ಫುಟ್ಪಾತ್‍ನ ಮೇಲೆ ನಡೆಯುತ್ತಿರುವ ಮುದುಕ ರಸ್ತೆಯ ಮೇಲೆ ಇದ್ದಕ್ಕಿದ್ದಂತೆ ಇಳಿದು ಬಿಟ್ಟ. ಒಮ್ಮೆಲೆ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಿದಾಗ ಎಂದೂ ಮೊದಲು ಡ್ರೈವಿಂಗ್ ಮಾಡಲೇ ಇಲ್ಲ ಎನ್ನುವಂತೆ ಬೆವರಿನ ಹನಿಗಳು ಹಣೆಯ ಮೇಲೆ ಮೂಡಿದವು.

ಪಕ್ಕದಲ್ಲಿಯೇ ಹಸಿರನ್ನು ಸೂಸುವಂತಹ ಪಾರ್ಕ್ ನಲ್ಲಿ ಒಂದು ದಿನ ಚಳಿಗಾಲದಲ್ಲಿಯೂ ಇಂತಹದೇ ಬೆವರಿನ ಹನಿಗಳು ಅವನಿಗೆ ಮೂಡಿದ್ದವು. ಆ ದಿನ ಪಕ್ಕದ ಮನೆಯಾಕೆಯ ಮಗುವನ್ನು ಎತ್ತಿಕೊಂಡು ಇನ್ಯಾವುದೋ ಹುಡುಗಿಯೊಂದಿಗೆ ಮಾತನಾಡುತ್ತಿದ್ದ ಅಲ್ಕಾಳಿಗೆ ಅವನು ಹೋಗಿ ಕೇಳಿಯೇ ಬಿಟ್ಟಿದ್ದ. ನನ್ನನ್ನು ಮದುವೆಯಾಗುತ್ತೀಯಾ” ಅವಳ ದೊಡ್ಡ ಕಣ್ಣುಗಳು ಇನ್ನಷ್ಟು ಅಗಲವಾಗಿ ಅವನನ್ನೇ ಎವೆಯಿಕ್ಕದೇ ನೋಡುತ್ತಾ ನಿಂತು ಬಿಟ್ಟಿದಳು. ಅವಳ ಬಾಯಿ ತುಸುವೇ ತೆರೆದುಕೊಂಡಿತ್ತು. ಮರುದಿನ ಅದೇ ಜಾಗದಲ್ಲಿ ಒಬ್ಬಳೇ ನಿಂತುಕೊಂಡಿದ್ದ ಅಲ್ಕಾಳಿಗೆ ಮತ್ತೊಮ್ಮೆ ಸುಧೀರ ಅದೇ ಪ್ರಶ್ನೆಯನ್ನು ಕೇಳಿದಾಗ ಅವಳು ತಲೆ ತಗ್ಗಿಸಿದಳು. ಬಾಂದ್ರಾದಲ್ಲಿಯ ಆಫೀಸಿಗೆ ಹೋಗಿ ಮುಟ್ಟಿದ. ಆಗಲೇ ಕೆಲಸ ಶುರು ಮಾಡಿದ್ದ ಸಿಬ್ಬಂದಿ ವರ್ಗದವರು ತಮ್ಮ ಫೈಲ್‍ನಿಂದ ತಲೆ ಆಗಾಗ ಎತ್ತುತ್ತಿದ್ದರು. ಅಲ್ಕಾ ಜೊತೆಯಲ್ಲಿದ್ದರೆ ಇನ್ನೂ ಒಮ್ಮೆಲೆ ಪಿನ್‍ಡ್ರಾಪ್ ಸೈಲೆನ್ಸ್ ಆವರಿಸಿ ಬಿಡುತ್ತಿತ್ತು ಎಂದುಕೊಂಡ. ತನ್ನ ಕ್ಯಾಬಿನ್‍ನ ಸೀಟಿನ ಮೇಲೆ ಆಸೀನನಾಗುವವರೆಗೆ ಮೊಬೈಲ್ ರಿಂಗಣಿಸಿತು.

ಸುಧೀ, ನೀನೇ ಡ್ರೈವ್ ಮಾಡುತ್ತಿದ್ದೀಯಾ ಎಂದು ಫೋನ್ ಮಾಡಿರಲಿಲ್ಲ. ನಾವು ಪುಣೆಯಲ್ಲಿ ತೆಗೆದುಕೊಂಡ ಫ್ಲಾಟನ್ನು ಬಾಡಿಗೆಗೆ ಫಿಕ್ಸ್ ಮಾಡಿದೆ. ಅವನು ಆಂಗ್ಲೋ ಇಂಡಿಯನ್ ತಿಂಗಳಿಗೆ ರೂ. 60,000/- ಕೊಡುತ್ತಾನಂತೆ. ಪರವಾಗಿಲ್ಲ ಅಂತ ಅನಿಸುತ್ತೆ. ಲೀವ್ ಆ್ಯಂಡ್ ಲೈಸೆನ್ಸ್ ಎಗ್ರಿಮೆಂಟ್ ಫಿಕ್ಸ್ ಮಾಡುತ್ತೇನೆ’ ಎಂದು ಅಲ್ಕಾ ಹೇಳುತ್ತಿದ್ದಳು. ನಿನಗೆ ಹೇಗೆ ಸರಿ ಅನಿಸುತ್ತದೆಯೋ ಹಾಗೆಯೇ ಮಾಡು’ ಎಂದ. ಸುಧೀರ ಹಾಗೆಯೇ ಹೇಳುತ್ತಾನೆಂದು ಅಲ್ಕಾಳಿಗೆ ಗೊತ್ತು. ಆದರೂ ಅವಳು ಕೇಳುತ್ತಾಳೆ. ಅವನ ಉತ್ತರ ಕೂಡಾ ಮಾಮೂಲು.

ಇಂಜಿನಿಯರಿಂಗ್ ಮುಗಿಸಿ ಎಂ.ಬಿ.ಎ ಮಾಡಿದವನು ಅವನು. ಬಿ.ಎಸ್.ಸಿ ಮುಗಿಸಿದ ಅಲ್ಕಾಳಿಗೆ ಯಾವ ಮ್ಯಾನೇಜ್‍ಮೆಂಟ್ ಡಿಗ್ರಿಯೂ ಇಲ್ಲ. ಆದರೂ ಶೇರ್ ಮಾರ್ಕೆಟ್‍ನ ಬಿಸಿನೆಸ್ ಚ್ಯಾನಲ್ ಮೇಲೆ ದೃಷ್ಟಿ ಇಡುವವಳು ಅವಳೇ. ತನ್ನೆಲ್ಲಾ ಪದವಿ ಪತ್ರಗಳೊಂದಿಗೆ ಬಂಗಾರದ ಪದಕಗಳನ್ನು ಪೆಟ್ಟಿಗೆಯಲ್ಲಿ ತುಂಬಿಕೊಂಡು ಮುಂಬಯಿಗೆ ಬಂದ ಸುಧೀರ ಜೊತೆಯಲ್ಲಿಯೇ ಕನಸಿನ ಮೂಟೆಯನ್ನು ಹೊತ್ತಿಕೊಂಡು ಬಂದಿದ್ದ. ತನ್ನದೇ ಆದ ಫ್ಯಾಕ್ಟರಿ ತೆಗೆಯಬೇಕೆಂಬ ಕನಸಿಗೂ ಕೂಡಾ ಒಮ್ಮೆಟ್ವಿಸ್ಟ್’ ಬಂದು ಇದ್ದಕ್ಕಿದ್ದಂತೆ ವಾರಾಂತ್ಯದಲ್ಲಿರುವ ಐ.ಎ.ಎಸ್ ಟ್ರೇನಿಂಗ್ ಕ್ಲಾಸಿಗೆ ಸೇರಿದ. ವಾರದ ಐದು ದಿನಗಳಲ್ಲಿ ಒಂದು ಕೆಮಿಕಲ್ ಫ್ಯಾಕ್ಟರಿಯಲ್ಲಿ ಟೆಂಪರರಿ ಕೆಲಸ ಕೂಡಾ ಚಾಲು ಇತ್ತು.

ಈ ಟ್ರೇನಿಂಗ್ ಕ್ಲಾಸಿನ ಮೊದಲಿನ ದಿನ ಅದೇಕೋ ಕ್ಲಾಸಿನ ಬೀಗವನ್ನೇ ತೆರೆದಿರಲಿಲ್ಲ. ಕಲಿಯಲು ಬಂದ ವಿದ್ಯಾರ್ಥಿಗಳೆಲ್ಲ ಬೀದಿಯಲ್ಲಿ. ಅಲ್ಲಿ ಒಬ್ಬ ಹುಡುಗಿಯೊಬ್ಬಳು ತನ್ನ ದಪ್ಪನೆಯ ಗಂಟಲಲ್ಲಿ ಒದರಾಡುತ್ತಿದ್ದಳು. ಅವಳ ಗಂಟಲಷ್ಟೇ ಒರಟಾದ ಅವಳ ಗುಂಗುರು ಕೂದಲು ಕೂಡಾ ಅಂಕೆಗೆ ಸಿಗದೇ ಗಾಳಿಗೆ ಹಾರಾಡುತಿತ್ತು. ಸಿಟ್ಟು ಸೆಡವು ಹೆಪ್ಪುಗಟ್ಟಿದಂತಿಹ ನಸುಗಪ್ಪು ಮುಖ. ಆ ಅಸಹನೀಯ ವಾತಾವರಣದಲ್ಲಿ ಅವಳ ವರ್ತನೆ ಅಸಹನೆಯನ್ನು ಇನ್ನೂ ಹೆಚ್ಚಿಸುವಂತಿತ್ತು. ಅಲ್ಕಾ ಸ್ವಲ್ಪ ಸುಮ್ಮನಿರೇ ಎಂದು ಅವಳ ಗೆಳತಿ ಬೆನ್ನುತಟ್ಟಿ ಹೇಳುತ್ತಿರುವಾಗ ಅವನಿಗೆ ಹೆಣ್ಣು ಮಕ್ಕಳೂ ಅಷ್ಟು ಒರಟಾಗಿರುವುದುಂಟೇ ಅನಿಸಿತ್ತು. ಆ ಗಳಿಗೆಯಲ್ಲಿ ಒಂದು ದಿನ ತಾನವಳಿನ್ನು ಮದುವೆಯಾಗಬಹುದೆಂಬ ಕಲ್ಪನೆ ಅವನಿಗೆ ಹೇಗೂ ಮೂಡುವಂತಿರಲಿಲ್ಲ.
ಬಜಾರಿ ಎಂದೆನಿಸಿದರೂ ಅಲ್ಕಾ ಪರೀಕ್ಷೆಗಳಲ್ಲಿ ಸಲೀಸಾಗಿ ಅಂಕಗಳನ್ನು ಗಿಟ್ಟಿಸುತ್ತಿದ್ದಳು. ತನಗಿಂತಲೂ ಕಡಿಮೆ ಕಲಿತವಳು ತನಗಿಂತಲೂ ಹೆಚ್ಚಿಗೆ ಮಾಕ್ರ್ಸ್ ತೆಗೆದುಕೊಳ್ಳುವುದು ಸುಧೀರನಿಗೆ ಇರುಸು ಮುರುಸು. ಎದ್ಹೇಗೆ ಎಂದು ಸರ್’ಗಳ ತಲೆ ಕೊರೆಯುವಾಗ ಅವಳ ನಿಬಂಧಗಳು ಚೆನ್ನಾಗಿರುತ್ತವೆ ಎಂದು ಅವರು ಸಮಜಾಯಿಸುವಾಗ; ನೀನೇ ನೋಡಿಕೋ ಎಂದು ಅವಳು ತನ್ನ ಉತ್ತರ ಪತ್ರಿಕೆಗಳನ್ನು ಅವನಿಗೆ ಕೊಡುತ್ತಿದ್ದಳು. ಅದೇನು ಔದಾರ್ಯವೋ ಅಥವಾ ಸಾಂತ್ವನವೋ ಅವನಿಗೆ ಅರ್ಥವಾಗುತ್ತಿರಲಿಲ್ಲ.ಸಾರಿಡೇ’ ಎಂದು ಸೀರೆ ಉಟ್ಟುಕೊಂಡು ಬಂದಾಗ ಗಂಡುಮಕ್ಕಳಂತೆ ಸದೃಢವಾದ ಭುಜಗಳಿದ್ದರೂ ಅವಳ ನಡು ತೆಳ್ಳಗಿರುವುದು ಗಮನ ಸೆಳೆಯುವಂತಿತ್ತು.

ಆ ಕೋಚಿಂಗ್ ಕ್ಲಾಸಿನಲ್ಲಿ ಯಾರೂ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ತನ್ನ ಹಣೆಯಲ್ಲಿ ಅವಳ ಹೆಸರು ಬರೆದಿದ್ದರಿಂದಲೇ ತಾನು ಅಲ್ಲಿ ಸೇರಿಕೊಂಡೆ ಎಂದು ಅವನಿಗೆ ಅನೇಕ ಬಾರಿ ಅನಿಸಿದ್ದಿದೆ.
ಅವಳು ತನ್ನ ಪಕ್ಕದ ಕಟ್ಟಡದಲ್ಲಿಯೇ ಉಳಿದುಕೊಳ್ಳುವುದು ಎಂದು ಅವನಿಗೆ ತಿಳಿದಿದ್ದು ಕೂಡಾ ತಡವಾಗಿಯೇ. ಅವನು ತಾನು ಕೆಲಸ ಮಾಡುವ ಕ್ಯಾಮಿಕಲ್ ಫ್ಯಾಕ್ಟರಿಗೆ ಕೊಂಡೊಯ್ಯುವ ಬಸ್‍ಗಾಗಿ ಕಾಯ್ದು ನಿಂತಿರುವಾಗ ತನ್ನ ಬ್ಯಾಂಕಿನ ಕೆಲಸಕ್ಕೆ ಲೂನಾದ ಮೇಲೆ ಹೋಗುವ ಅವಳು ಅವನನ್ನು ಕಂಡಾಗೆಲ್ಲಾ ನಿಧಾನವಾಗುತ್ತಿದ್ದಳು. ನಕ್ಕಾಗೆಲ್ಲಾ ನಸುಗಪ್ಪು ಮುಖದ ಅವಳ ಹಲ್ಲುಗಳಷ್ಟೇ ಅಲ್ಲ ಅವಳ ಕಣ್ಣುಗಳು ಕೂಡಾ ವಿಶೇಷವಾಗಿ ಹೊಳೆಯುತ್ತಿದ್ದವು.

ಮುಂಬಯಿಯಲ್ಲಿ ತನ್ನದೇ ಆದ ಫ್ಯಾಕ್ಟರಿ ಹಾಕಬೇಕೆನ್ನುವ ಅವನ ಕನಸಿಗೆ ನಿಧಾನವಾಗಿ ಗರಿ ಮೂಡುತ್ತಿದ್ದಂತೆ ಆ ಕನಸಿನಲ್ಲಿ ಅವಳೂ ಬಂದು ಸೇರಿಕೊಂಡು ಬಿಡುತ್ತಿದ್ದಳು. ಜತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದಳು. ಅದಕ್ಕೆ ಧೈರ್ಯವಹಿಸಿ ಅವನು ಅವಳನ್ನು ಮದುವೆಯಾಗುತ್ತೀಯಾ ಎಂದು ಕೇಳಿಯೇ ಬಿಟ್ಟ. ಅಕಸ್ಮಾತ್ತಾಗಿ ಬಂದೆರಗಿದ ಆ ಪ್ರಶ್ನೆಯನ್ನು ಜೀರ್ಣಿಸಿಕೊಳ್ಳುವುದೇ ಅವಳಿಗೆ ಕಷ್ಟವಾಗಿತ್ತು. ಎರಡು ದಿನ ಒಂದೇ ಪ್ರಶ್ನೆ ಕೇಳಿ ಮಹಾ ಸಾಹಸವನ್ನು ಮಾಡಿ ಮುಗಿಸಿದಂತೆ ಮಾಯವಾದ ಅವನು, ಮೂರನೇ ದಿನವೂ ಅದೇ ಪ್ರಶ್ನೆಯನ್ನು ಉಚ್ಛರಿಸಿದಾಗ ಅವಳು ಕೇಳಿಯೇ ಬಿಟ್ಟಿದ್ದಳು ಮದುವೆಯಾಗುವ ಮೊದಲು ನಡೆಯುವ ಸ್ಫೋಟವನ್ನು ಎದುರಿಸಲು ನೀನು ತಯಾರ್ ಆಗಿದ್ದೀಯಾ”. ಸ್ಫೋಟ ಅವಳಂದಂತೆಯೇ ಇಬ್ಬರ ಮನೆಯಲ್ಲೂ ಆದವು. ಆದರೆ ಅವನ ಮನೆಯಲ್ಲಿ ಜ್ವಾಲೆಗಳು ಇನ್ನೂ ಎತ್ತರಕ್ಕೆ ಏರಿದ್ದವು. ಅಲ್ಕಾಳ ತಂಗಿ ಶಲಕಾಳ ಮದುವೆ ಅಲ್ಕಾಳಿಗಿಂತಲೂ ಮೊದಲೇ ಆಗಿ ಹೋಗಿತ್ತು. ಯಾರದ್ದೋ ಮದುವೆಯಲ್ಲಿ ಗೊಂಬೆಯಂತೆ ಓಡಾಡುತ್ತಿದ್ದ ಶಲಕಾಳನ್ನು ನೋಡಿ, ಮೆಚ್ಚಿ ಕೊಲ್ಹಾಪುರದ ದೊಡ್ಡ ಬಂಗಲೆಯ, ಉದ್ದನೆಯ ಕಾರಿನ ಹುಡುಗ ಮದುವೆಯಾಗಿದ್ದ. `ಚಂದ’ ಎನ್ನುವ ಸಾಲಿಗೆ ಸೇರದ, ನಸುಗಪ್ಪಿನ ಅಲ್ಕಾಳಿಗೆ ಅಷ್ಟು ಸಿರಿವಂತರಲ್ಲದಿದ್ದರೂ ತಕ್ಕಮಟ್ಟಿಗೆ ಇರುವವರಿಗಾದರೂ ಹುಡುಕಿ ಮದುವೆ ಮಾಡುವ ಹುನ್ನಾರದಲ್ಲಿ ಅಲ್ಕಾಳ ತಂದೆ ತಾಯಿಯವರು ಇದ್ದರು. ಸುಧೀರನೋ ಹೊನ್ನಾವರದ ಶಾಲಾ ಮಾಸ್ತರ ಮಗ. ಮುಂಬಯಿಯಲ್ಲಿ ಇನ್ನೂ ತಳವೂರಿಲ್ಲ. ಸ್ವಂತ ಮನೆಯೂ ಇಲ್ಲ.ಹುಡುಗ ಚಂದವಿರುವುದು ಮುಖ್ಯ ಅಲ್ಲ, ಅನುಕೂಲಸ್ಥನಾಗಿರಬೇಕು, ವಿಚಾರ ಮಾಡು” ಎಂದಿದ್ದರು ಅಪ್ಪ ಗಣೇಶ ರಾವ್.

ಆದರೆ ಸುಧೀರ್‍ನ ಅಮ್ಮ ತಾರಾಳನ್ನು ಒಪ್ಪಿಸುವುದು ಸಾಮಾನ್ಯವಾದ ಕೆಲಸವೇನೂ ಆಗಿರಲಿಲ್ಲ. ತನ್ನ ಮಗನ ರೂಪದ ಮೇಲೆ ಅಪಾರವಾದ ಹೆಮ್ಮೆ ಅವರಿಗೆ. ಜತೆಗೆ ಬುದ್ಧಿವಂತ ಬೇರೆ. ಕೇಳಬೇಕೇ? ಅವರ ಕಣ್ಣಳತೆಯಲ್ಲಿ ಆಗಲೇ ಮೂರು ನಾಲ್ಕು ಹೆಣ್ಣು ಮಕ್ಕಳಿದ್ದರು. ಮಗನು ಯಾರನ್ನೂ ಆಯ್ಕೆ ಮಾಡುತ್ತಾನೋ ಏನೋ ಎನ್ನುವ ಉತ್ಸಾಹ ದಲ್ಲಿದವರ ಮೇಲೆ ಬಾಂಬ್ ಹಾಕಿದಂತಾಯಿತು. ಮಗ ಒಪ್ಪಿಗೆಯನ್ನಾದರೂ ಕೇಳಿದನಾ? ತನ್ನ ನಿರ್ಧಾರವನ್ನು ತಿಳಿಸಿಬಿಟ್ಟ ನಲ್ಲ. ಅಲ್ಕಾಳನ್ನು ನೋಡಿದ ದಿನವಂತೂ ಅವಳ ಕಣ್ಣಿಂದ ಗಂಗಾ ಭವಾನಿ. ಎಲ್ಲಾ ಸಿಟ್ಟನ್ನು ಮರೆತು ಮಗನ ಕೈ ಅಲಗಿಸುತ್ತಾ ಕಕ್ಕುಲತೆಯಿಂದ ಕೇಳಿದ್ದರು. ನಿಜಕ್ಕೂ ನೀನು ಅವಳನ್ನು ಇಷ್ಟಪಟ್ಟು ಮದುವೆಯಾಗುತ್ತಿದ್ದೀಯಾ”. ಮದುವೆಯಾಗಿ ಅಲಕಾಳ ತಂದೆ ತಾಯಿಯ ಮನೆಯ ಬದಿಗೇ ಪುಟ್ಟ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಸಂಸಾರ ಪ್ರಾರಂಭವಾಗಿತ್ತು. ಆಫೀಸಿನಿಂದ ಬಂದ ಮೇಲೆ ಎಲ್ಲರೂ ಮಲಗುವ ಹೊತ್ತಿನಲ್ಲಿ ಗ್ಯಾಸ್ ಮೇಲೆ ಬೇರೆ ಬೇರೆ ಕೆಮಿಕಲ್ ಗಳನ್ನು ಕೂಡಿಸಿ ಅವನ ಪ್ರಯೋಗ ನಡೆಯುತ್ತಿತ್ತು.ಕಿಟಕಿ ಬಾಗಿಲುಗಳನ್ನು ಮುಚ್ಚಿದರೆ ಉಸಿರುಗಟ್ಟುತ್ತದೆ. ತೆರೆದರೆ ಪಕ್ಕದ ಮನೆಯಿಂದ ಕಂಪ್ಲೇಂಟ್ ಬರಬಹುದು” ಎನ್ನುತ್ತಾ ಕೆಮ್ಮುತ್ತಿದ್ದಳು ಅಲ್ಕಾ.
ಅವನ ಕನಸುಗಳು ಕೂಡಾ ಅಲ್ಕಾಳ ಲೂನಾದಂತೆ ಎಂತಹ ಸಂದಣಿಯಲ್ಲಿಯೂ ಜಾಗವನ್ನು ಹುಡುಕಿಕೊಂಡು ಮುಂದೆ ಸಾಗುತ್ತಿದ್ದವು. ಬಹುಶಃ ಇನ್ನು ಆಗಲಾರದು ಎನ್ನುತ್ತಿರುವಾಗಲೇ ಎಲ್ಲಿಂದಲೋ ಅನುಕೂಲ ಒದಗಿ ಬರುತ್ತಿತ್ತು. ಮೊದಲು ಸುಧೀರ ಕೆಲಸ ಬಿಟ್ಟು ಟೆಂಪರರಿ ಟೈಲುಗಳನ್ನು ಅಂಟಿಸುವ ಅಂಟನ್ನು ತಯಾರಿಸುವ ಫ್ಯಾಕ್ಟರಿ ಹಾಕುವ ತಯಾರಿಗೆ ತೊಡಗಿದಾಗ ಅಲ್ಕಾಳ ಕೆಲಸ ಮುಂದುವರಿದಿತ್ತು. ಅವನು ತನ್ನ ಉದ್ಯಮದಲ್ಲಿ ತಳವೂರಿದ ಮೇಲೆಯೇ ಅವಳು ರಾಜೀನಾಮೆ ಕೊಟ್ಟಿದ್ದಳು.

ಎಲ್ಲವೂ ಮನಸಿನ ಪ್ರಕಾರವೇ ನಡೆಯುತ್ತಿದೆಯಲ್ಲ ಎನ್ನುವ ಸೋಜಿಗ ಅವನಿಗೆ. ಆ ಮತ್ತು ತಲೆಗೇರುವ ಮೊದಲೇ, ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗದ ಸತ್ಯ ಅವನೆದುರಿಗೆ ಬೆರ್ಚಪ್ಪನಂತೆ ಅಣಕಿಸುತ್ತಿತ್ತು. ಎರಡು ಬಾರಿ ಗರ್ಭಪಾತವಾಗಿ ಆಸ್ಪತ್ರೆಯಲ್ಲಿ ಅಲ್ಕಾ ಮಲಗಿರುವಾಗ ಕಣ್ಣಿಂದ ಹೊರಬರದೆ ಎಲ್ಲೇ ಸುತ್ತಾಡುತ್ತಿರುವ ತೇವದಲ್ಲಿ ಎಲ್ಲಾ ಸರಿಯಾಗುತ್ತೆ ಎನ್ನುವ ಆತ್ಮವಿಶ್ವಾಸವೂ ಹೊಳೆದಂತಾಗುತ್ತಿತ್ತು. ಮಕ್ಕಳು ಸಿಕ್ಕಿದರೆಂದರೆ ಅವರನ್ನು ಎತ್ತಿಕೊಳ್ಳುವ ಅವಕಾಶಕ್ಕೆ ಕಾಯುತ್ತಿರುವ ಅವಳಿಗೆ ಈ ಗತಿಯೇ ಎಂದು ಮರುಕ ಪಡುವುದಕ್ಕೆ ಆಸ್ಪದವೇ ಇರದಂತಹ ಚಟುವಟಿಕೆಗಳಲ್ಲಿ ಅವಳು ಮುಳುಗಿರುತ್ತಿದ್ದಳು.
ಅವನ ಮೊಬೈಲ್ ಫೋನ್ ಇನ್ನೊಮ್ಮೆ ರಿಂಗಣಿಸತೊಡಗಿತು. ತುಮ್ ಮೀಲೇ ದಿಲ್ ಖಿಲೇ ಔರ್ ಜೀನೇಕೋ ಕ್ಯಾ ಚಾಹಿಯೇ” ಮತ್ತೇ ಅಲ್ಕಾ ಹೇಳುತ್ತಿದ್ದಳು.ನೋಡು ಸುಧಿ, ಕಳೆದ ತಿಂಗಳು ಫ್ಯಾಕ್ಟರಿಯಲ್ಲಿ ಅಪಘಾತಕ್ಕೊಳಗಾದವನು, ಖಂಡಿತ ಆದ ಖರ್ಚಿಗಿಂತಲೂ ಹೆಚ್ಚು ಪರಿಹಾರ ಕೇಳುತ್ತಿದ್ದಾನೆ. ಆದರೂ ಅದನ್ನು ಮಂಜೂರು ಮಾಡಿಬಿಡೋಣ” ಸರಿ ಎಂದು ಅವನು ಆಫ್ ಮಾಡುವವರೆಗೆ ಇನ್ನೊಮ್ಮೆ ರಿಂಗ್. ಈ ಸಲ ಗೆಳೆಯ ವಿನಯ್. ಅಮೇರಿಕಾದಿಂದ ಯಾವಾಗ ಬಂದನೋ ಎಂದುಕೊಳ್ಳುತ್ತಿರುವಾಗಲೇ ಅವನು ಹೇಳುತ್ತಿದ್ದ. ನಿನ್ನನ್ನು ಒಂದು ಭೇಟಿಯಾಗಲಿಕ್ಕೆ ಆಗಲಿಕ್ಕಿಲ್ಲ. ಸುಧೀ, ಈಗಷ್ಟೇ ಅಲ್ಕಾಳಿಗೆ ಫೋನ್ ಮಾಡಿ ಹುಟ್ಟಿದ ಹಬ್ಬಕ್ಕೆ ಶುಭಾಶಯಗಳನ್ನು ಹೇಳಿದೆ” ಎನ್ನುತ್ತಾ ಇನ್ನೇನೋ ಹೇಳುತ್ತಿದ್ದ. ಕೇಳುವ ಮನಸ್ಥಿತಿಯಲ್ಲಿ ಸುಧೀರನಿಗಿರಲಿಲ್ಲ. ಈ ವರ್ಷವೂ ಅವಳ ಹುಟ್ಟಿದ ದಿನವನ್ನು ಮರೆತು ಬಿಟ್ಟೆನಲ್ಲ! ಟೇಬಲ್ ಮೇಲಿನ ಫೋಟೋದಲ್ಲಿ ಮಗಳು ಅಪೂರ್ವಳನ್ನು ಎತ್ತಿಕೊಂಡ ಅಲ್ಕಾ ನಗುತ್ತಿದ್ದಳು. ದೇವಲೋಕದಿಂದ ಇಳಿದು ಬಂದ ಪುಟ್ಟ ಪರಿಯಂತಿದ್ದಳು ಮಗಳು ಅಪೂರ್ವ. ದಿನ ಬೆಳಿಗ್ಗೆ `ಅಪ್ಪೂ ಏಳೇ’ ಎಂದು ಎಷ್ಟೇ ಲಲ್ಲೆಗೆರೆದರೂ ಎಳೆದಿದ್ದವಳು `ಅಪ್ಪೂ’ ಎನ್ನುವ ಅಲ್ಕಾಳ ಧ್ವನಿ ಕೇಳಿದರೆ ಸಾಕು ಛಂಗನೇ ಎದ್ದು ಹುಲ್ಲೆಯಂತೆ ಹಾರುತ್ತಿದ್ದಳು.

ಅಮ್ಮ ತಾರಾ ಮೊಮ್ಮಗಳನ್ನು ಎತ್ತಿ ಮುದ್ದಾಡುತ್ತಿರುವಾಗ ಅದೆಷ್ಟೋ ಬಾರಿ ಹೇಳುತ್ತಿದ್ದರು ನನ್ನ ಮೊಮ್ಮಗಳು ಅಪ್ಪನ ಪಡಿಯಚ್ಚು ” ಅಲ್ಕಾ ಬಿಮ್ಮಗೆ ನಗುತ್ತಿದ್ದಳು. ಆಗೆಲ್ಲಾ ಸುಧೀರನಿಗೆ ಅನಿಸುತ್ತಿತ್ತು. ಮಗಳ ಕಣ್ಣುಗಳ ಹೊಳಪು ಮಾತ್ರ ಅವಳ ತಾಯಿಯದು”. ಮಗಳ ಹುಟ್ಟಿದ ದಿನವೊಂದನ್ನು ಬಿಟ್ಟು ಇನ್ಯಾರ ಹುಟ್ಟು ದಿನವೂ ಸುಧೀರನಿಗೆ ನೆನಪಿರುವುದಿಲ್ಲ. ತನ್ನ ಸ್ವಂತ ಹುಟ್ಟಿದ ದಿನ ಕೂಡಾ. ಆದರೆ ಅವನ ಹುಟ್ಟಿದ ದಿನ ಅವನು ಕಣ್ತೆರೆಯುವ ಮೊದಲೇ ಹಾಸಿಗೆ ಬಳಿಯಲ್ಲಿ ಅಲ್ಕಾ ಅವನಿಗಾಗಿ ಉಡುಗೊರೆ ಇಡುತ್ತಿದ್ದಳು. ಅವನಿಗೆ ಅದು ತೀರಾ ಬಾಲಿಶವೆನಿಸಿದರೂ ಪೊಟ್ಟಣವನ್ನು ಬಿಚ್ಚಿ ಚೆನ್ನಾಗಿದೆ ಅನ್ನುತ್ತಿದ್ದ. ಪಳಪಳ ಹೊಳೆಯುವ ಸ್ಟೀಲ್ ಕೆರಿಯರ್‍ನಲ್ಲಿ ಅದೇ ಬೀದಿಯಲ್ಲಿರುವ ಮೌಶಿ ಕಳುಹಿಸಿಕೊಟ್ಟ ಡಬ್ಬಾ ಇಂದು ದಿನಕ್ಕಿಂತಲೂ ಬೇಗ ಬಂದಂತಿತ್ತು. ತಿನ್ನುವ ಮನಸ್ಸಾಗಲಿಲ್ಲ. ಟೈಯನ್ನು ಕಳಚಿ ಡ್ರಾವರ್‍ನಲ್ಲಿಟ್ಟು ಹೊರ ನಡೆದ. ಕಾರಿನತ್ತ ಹೋದವನು. ಬೇಡ ಪಾರ್ಕಿಂಗ್ ಪ್ರಾಬ್ಲೆಮ್ ಅನ್ನುತ್ತಾ ಸ್ವಲ್ಪ ದೂರ ನಡೆದು ಆಟೋ ಹಿಡಿದು `ಲಿಂಕಿಂಗ್ ರೋಡ್ ಎಂದ.’ ಎಷ್ಟೋ ದಿನಗಳ ಮೇಲೆ ಪಕ್ಕದಲ್ಲಿರುವ ವಾಹನಗಳ ಹೊಗೆಯನ್ನು ಕುಡಿಯುವುದೂ ಕೂಡಾ ಆ ಸಮಯಕ್ಕೆ ಹಿತವೆನಿಸುತ್ತಿತ್ತು.

ಹಳದಿ ಸೀರೆಯನ್ನುಟ್ಟು ಗೊಂಬೆಯಿದ್ದ ಸೀರೆಯಂಗಡಿಯತ್ತ ನಿಲ್ಲಿಸು ಎಂದು ಡ್ರೈವರ್‍ನಿಗಂದ. ಅಂಗಡಿಯೊಳಗೆ ಸೇಲ್ಸ್‍ಮನ್ ಎಷ್ಟೇ ಸೀರೆ ತೆಗೆದು ಹಾಕಿದರೂ ಆ ಹಳದಿ ಸೀರೆಯ ಮೇಲೆ ಮನಸ್ಸು ನೆಟ್ಟಿದಂತಿತ್ತು. ಅಂಗಡಿಯವನಿಗೆ ಆ ಸೀರೆಯನ್ನೇ ಫಾಲ್ ಬೀಡಿಂಗ್ ಮಾಡಿ ತನ್ನ ಆಫೀಸ್‍ಗೆ ಮುಟ್ಟಿಸು ಎಂದು ವಿಸಿಟಿಂಗ್ ಕಾರ್ಡ್ ಕೊಟ್ಟ. ಇವತ್ತೇತಕೋ ಸುಧೀರ್‍ನಿಗೆ ಹಳದಿ ಬಣ್ಣದ ದುಪ್ಪಟ್ಟಾವನ್ನು ಹಾರಿಸುತ್ತಾ ಕ್ಲಾಸಿಗೆ ಬರುತ್ತಿದ್ದ ಅಲ್ಕಾ ನೆನಪಾಗುತ್ತಿದ್ದಳು. ಮದುವೆಯಾದ ಮೇಲೆ ಊರಿಗೆ ಹೋದಾಗ ನೆಂಟರ ಮನೆಗೆ ಹೊರಡಲೆಂದು ಹಳದಿ ಬಣ್ಣದ ಸೀರೆಯನ್ನು ಉಟ್ಟುಕೊಂಡಿದ್ದಳು.

ಇನ್ನೇನು ಅವಳು ಚಪ್ಪಲ್ ಹಾಕಿಕೊಳ್ಳಬೇಕು ಅಷ್ಟರಲ್ಲಿ ಅಮ್ಮ ನುಡಿದಿದ್ದಳು ಸರಿಯಾಗಿ ಅವನಿಗೆ ದೃಷ್ಟಿಬೊಟ್ಟು ಇಟ್ಟ ಹಾಗೆ ನೀನಿದ್ದೀಯಾ” ಅವಳ ನೋಯಿಸುವ ಉದ್ದೇಶವಿಲ್ಲದೆ ಅಪ್ರಯತ್ನವಾಗಿ ಹೊಮ್ಮಿದ ಮಾತುಗಳು! ಅರ್ಧ ಚಪ್ಪಲಿನೊಳಗೆ ಹೊಕ್ಕ ಅವಳು ಕಾಲ್ಗಳು ಪುನಃ ಹಿಂದಕ್ಕೆ ಬಂದವು. ಒಳಗೆ ಹೋಗಿ ಬೇರೆ ಸೀರೆ ಉಟ್ಟುಕೊಂಡು ಬಂದ ಅಲ್ಕಾ ದಾರಿಯ ಮೇಲೆ ಸುಧೀರ್‍ನನ್ನು ಕೇಳಿದ್ದಳು. ಸುಧೀ ನಾನು ಹಳದಿ ಸೀರೆಯನ್ನುಟ್ಟುಕೊಂಡರೆ ಇನ್ನಷ್ಟು ಕಪ್ಪಗೆ ಕಾಣುತ್ತೇನಾ”. ಸುಧೀರನಿಗೆ ಹೌದೆನ್ನಬೇಕೆನಿಸಿದರೂ ಅವಳಿಗೆ ಬೇಜಾರು ಏಕೆ ಮಾಡಬೇಕು ಎನಿಸಿ ಸುಮ್ಮನಾದ. ದಾರಿಯುದ್ದಕ್ಕೂ ಅವರಿಗೆ ಮೌನವೇ ಸಂಗತಿಯಾಗಿತ್ತು. ಅಮ್ಮ ಮುಂಬಯಿಗೆ ಬಂದಾಗ ಹೆಚ್ಚು ದಿನ ಉಳಿಯುವುದಕ್ಕೂ ಮತ್ತು ಅಲ್ಕಾಳಿಗೆ ತಲೆಸುತ್ತು ವಾಂತಿ ಶುರುವಾಗುವುದಕ್ಕೂ ಏನಾದರೂ ತಾಳೆಯಾಗುತ್ತದೆಯೇನೋ ಎನ್ನುವ ಅನುಮಾನ ಸುಧೀರನನ್ನು ಕಾಡುತ್ತಿದ್ದರೂ ಕೂಡಾಅಲ್ಕಾ, ಏತಕ್ಕೂ ಹೆದರದ ಅಲ್ಕಾ, ಅಮ್ಮನಿಗೆ ಹೆದರಲು ಹೇಗೆ ಸಾಧ್ಯ” ಎಂದು ತಲೆ ಕೊಡವಿಕೊಂಡು ಬಿಡುತ್ತಿದ್ದ.

ಮೂಲತಃ ಮರಾಠಿ ಭಾಷಿಕಳಾಗಿದ್ದರೂ ನೆರೆಹೊರೆಯವರ ಕನ್ನಡ ಮಾತುಗಳನ್ನು ಆಲಿಸಿ ಕನ್ನಡಕ್ಕೆ ಪರಿಚಿತಳಾಗಿದ್ದ ಅಲ್ಕಾ, ಬಹಳ ಬೇಗ ಕನ್ನಡದಲ್ಲಿ ಮಾತನಾಡಲು ಕಲಿತು ಬಿಟ್ಟಿದ್ದರಿಂದ, ಅವಳ ಮೇಲೆ ಅಮ್ಮನಿಗೆ ಅಂತಹ ಅಸಮಾಧಾನ ಇರಲಿಕ್ಕಿಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದ.

ತಾರಾಪುರದಲ್ಲಿ ಮೂರನೇಯ ಫ್ಯಾಕ್ಟರಿ ತೆರೆಯಲಿಕ್ಕೆಂದೇ ಫಿಕ್ಸ್ ಮಾಡಿದ ಮೀಟಿಂಗ್ ಕ್ಯಾನ್ಸಲ್ ಮಾಡಲು, ಮೊಬೈಲ್‍ನ್ನು ಒತ್ತುತ್ತ ಸುಮಾರು ಕಾಲ ಕಳೆದ. ಬೆಳಿಗ್ಗೆ ಅಲ್ಕಾ ಕೇಳುತ್ತಿದ್ದಳು ಇವತ್ತು ಅಪೂರ್ವಳ ಹೊಟ್ಟೆ ಸರಿಯಿಲ್ಲ, ಅವಳನ್ನು ಸ್ಕೂಲಿಗೆ ಕಳಿಸಲ್ಲ, ನಾನೂ ಆಫೀಸ್ ಬರಲ್ಲ, ನೀನು ಎಲ್ಲಾ ಮ್ಯಾನೇಜ್ ಮಾಡ್ತೀಯಾ? ಸುಧೀರ್ ಸಂಜೆ ಬೇಗ ಹೊರಟಿದ್ದರಿಂದ ರಸ್ತೆಯ ಮೇಲೆ ಟ್ರಾಫಿಕ್ ಜಾಮ್ ಇರಲಿಲ್ಲ. ಡ್ರೈವರ್ ಇದ್ದಿದ್ದರೆ ಮೊಬೈಲ್‍ನಲ್ಲಿ ಬಿಸಿನೆಸ್ ಬಗ್ಗೆ ಮಾತನಾಡುತ್ತಲೇ ದಾರಿ ಕಳೆದು ಹೋಗುತ್ತಿತ್ತು. ಇಂದು ರೇಡಿಯೋದಲ್ಲಿ ಮುಕೇಶ್‍ನ ಹಾಡನ್ನೇ ಹಾಕುತ್ತಿದ್ದರು. ಇವತ್ತೇನು ಅವನ ಹುಟ್ಟು ಹಬ್ಬವಾ ಎಂದುಕೊಳ್ಳುತ್ತಿರುವಾಗ, ಮುಕೇಶ್ ದುಃಖದ ಹಾಡುಗಳನ್ನು ಚೆನ್ನಾಗಿ ಹಾಡುವಷ್ಟೇ ರೊಮ್ಯಾಂಟಿಕ್ ಮೂಡಲ್ಲೂ ಚೆನ್ನಾಗಿದ್ದಾನೆ ಎಂದೆನಿಸುತ್ತಿತ್ತು. ಹಕ್ಕಿಯಂತೆ ಉಲಿದ ಕಾಲಿಂಗ್ ಬೆಲ್‍ನ ಸದ್ದಿಗೆ ಬಾಗಿಲು ತೆಗೆದ ಅಲ್ಕಾ ಹೇಳದೆ ಕೇಳದೇ ಬೇಗನೇ ಬಂದ ಗಂಡನನ್ನು ಕಂಡು ಆಶ್ಚರ್ಯದಿಂದ ಕಣ್ಣರಳಿಸಿದಳು. `ಹ್ಯಾಪಿ ಬರ್ತ್‍ಡೇ” ಎಂದು ಅವಳ ಕೈಕುಲುಕಿ ಅವಳ ಕೈಗೆ ಪ್ರೆಸೆಂಟೇಶನ್ ಪೇಪರ್‍ನಲ್ಲಿ ಸುತ್ತಿದ ಸೀರೆಯನ್ನು ಕೊಟ್ಟುಬಿಚ್ಚಿ ನೋಡು” ಎಂದ. `ಅಪೂರ್ವಳನ್ನು ನಿನ್ನ ಅಪ್ಪ ಅಮ್ಮನ ಜೊತೆಗೆ ಬಿಟ್ಟು ಇವತ್ತು ನಾವು ಹೊರಗೆ ಹೋಗಿ ಡಿನ್ನರ್ ಕೂಡ ಮುಗಿಸಿಕೊಂಡು ಬರೋಣ, ಇದೇ ಹಳದಿ ಸೀರೆ ಉಟ್ಟುಕೋ. ಅದಕ್ಕೆ ಮ್ಯಾಚಿಂಗ್ ಬ್ಲೌಸ್ ನಿನ್ನ ಹತ್ತಿರ ಯಾವುದಾದರೂ ಇರಬಹುದಲ್ಲ… ಎಲ್ಲಿಗೆ ಹೋಗೋಣ… ಸುಧೀರ್ ಮಾತನ್ನು ಮುಂದುವರಿಸುತ್ತಲೇ ಇದ್ದ. ಅಲ್ಕಾ ಅಪನಂಬಿಕೆಯಿಂದ ಅವನನ್ನೇ ನೋಡುತ್ತಿದ್ದಳು. ಕಣ್ಣುಗಳು ಅಗಲವಾಗಿ ರೆಪ್ಪೆಗಳು ಮುಚ್ಚುವುದನ್ನೇ ಮರೆತಂತಿದ್ದವು.ನನ್ನನ್ನು ಮದುವೆಯಾಗುತ್ತೀಯಾ’ ಎಂದು ಮೊದಲ ಬಾರಿ ಕೇಳಿದಾಗಲೂ ಅವಳು ಹೀಗೆ ನೋಡುತ್ತಾ ನಿಂತಿದ್ದು ನೆನಪಾಯಿತವನಿಗೆ. ಇದ್ದಕ್ಕಿದ್ದಂತೆ ಅವಳ ಕಣ್ಣುಗಳು ತುಂಬಿ ಬಂದು ಹನಿಗಳು ಕೆನ್ನೆಯ ಮೇಲೆ ಉದುರಿದ್ದನ್ನು ಮೊದಲ ಬಾರಿ ಕಂಡ ಸುಧೀರ್ ಅವಕ್ಕಾಗಿ ಮಾತನ್ನು ನಿಲ್ಲಿಸಿಬಿಟ್ಟ. ನಂಬಲಾರದವನಂತೆ ಅವಳನ್ನೇ ನೋಡುತ್ತಾ ನಿಂತುಬಿಟ್ಟ.