- ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ - ಸೆಪ್ಟೆಂಬರ್ 10, 2021
- ಸಂಪಾದಕೀಯ – ಡಾ. ಜಿ. ಎನ್. ಉಪಾಧ್ಯ - ಜುಲೈ 31, 2021
- ವೈದ್ಯಲೋಕದ ತವಕ ತಲ್ಲಣದ ಅನಾವರಣ - ಮಾರ್ಚ್ 21, 2021
ಜಗತ್ತಿನ ಮಹಾನಗರಗಳಲ್ಲಿ ಮುಂಬೈ ಸಹ ಒಂದು. ‘ನರರ ಶ್ರೇಷ್ಠ ನಗರವಾಗಿ ಮೆರೆಯುತ್ತಿದ್ದ ಬಾಂಬೆಪುರದಿ’ ಎಂಬುದಾಗಿ ಕವಿ ಡೇಂಗಾ ದೇವರಾಯ ನಾಯ್ಕ ಎರಡು ಶತಮಾನಗಳ ಕೆಳಗೆ ಈ ಮಾಯಾನಗರಿಯನ್ನು ಪುಂಖಾನುಪುಂಖವಾಗಿ ಬಣ್ಣಿಸಿದ್ದಾನೆ.ಮುಂಬೈ ಭಾರತದ ಭಾಗ್ಯ ನಗರಿ’ ಎಂಬ ಕೊಂಡಾಟಕ್ಕೆ ಪಾತ್ರವಾಗಿದೆ. ಭಾರತದ ಮಹಾನಗರಗಳಲ್ಲಿ ಮುಂಬೈಗೆ ವಿಶಿಷ್ಟವಾದ ಸ್ಥಾನಮಾನವಿದೆ. ಮುಂಬೈ ಒಂದು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿರುವ ನಗರ. ಪೋರ್ಚುಗೀಸರು ಹಾಗೂ ಬ್ರಿಟಿಷರ ಕಾಲದಲ್ಲೇ ಭಾರತದ ಹೆಬ್ಬಾಗಿಲು’ ಎಂದು ಕರೆಸಿಕೊಂಡಿರುವ ಈ ದೈತ್ಯ ನಗರದ ಇತಿಹಾಸ ಬಹು ರೋಚಕವಾಗಿದೆ. ಬ್ರಿಟಿಷರು ಮುಂಬೈ ಮಹಾನಗರವನ್ನು ಕಟ್ಟಿ ಬೆಳೆಸಿ ಬಹುದೊಡ್ಡ ವಾಣಿಜ್ಯ ನಗರವನ್ನಾಗಿ ಮಾಡಿದರು.
ಭಾರತದಲ್ಲೇ ಮೊತ್ತ ಮೊದಲು ರೈಲು ಸೌಲಭ್ಯ 1853ರಲ್ಲಿ ಮುಂಬೈಯಿಂದ ಥಾಣೆಯವರೆಗೆ ಆರಂಭಗೊಂಡಿತು. 1857ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಮೂರು ವಿಶ್ವವಿದ್ಯಾಲಯಗಳು ಆರಂಭವಾದವು.ಅವುಗಳಲ್ಲಿ ಮುಂಬೈ ವಿಶ್ವವಿದ್ಯಾಲಯವೂ ಒಂದು.1926ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಮುಂಬೈಯಲ್ಲಿ ಬಸ್ ಸೇವೆ ಆರಂಭವಾಯಿತು.ಮುಂಬೈನ ಜೇಮ್‍ಷಡ್ಜ್‍ಜಿ ಟಾಟಾ ಮೊದಲ ಬಾರಿಗೆ ಕಾರು ಖರೀದಿಸಿದ ಭಾರತೀಯ.1928ರಲ್ಲಿ ಮೊದಲ ಬಾರಿಗೆ ಮುಂಬೈನ ಜುಹೂದಲ್ಲಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಾಯಿತು.ವಾಣಿಜ್ಯ ನಗರವಾಗಿ,ಉದ್ಯಮ ನಗರವಾಗಿ ಮುಂಬೈ ಜನಪ್ರಿಯವಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈ ನಮ್ಮ ದೇಶದ ಎಲ್ಲ ಆಗುಹೋಗುಗಳ ಕೇಂದ್ರವಾಗಿತ್ತು.ಇವತ್ತಿಗೂ ಸಿನಿಮಾ, ಕ್ರಿಕೆಟ್, ಷೇರು ಮಾರುಕಟ್ಟೆ,ಬ್ಯಾಂಕ್, ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮುಂಬೈ ಸದಾ ಸುದ್ದಿಯಲ್ಲಿದೆ. ಮುಂಬೈ ಒಂದು ದೈತ್ಯ ನಗರ. ಅದರ ಅಕರಾಳ ವಿಕರಾಳ ಸ್ವರೂಪ ಬಣ್ಣಿಸಲಸದಳ. ಇದು ಒಂದು ಜನಾರಣ್ಯ. ನಿದ್ರಿಸದ ನಗರ ಎಂಬ ಅಭಿದಾನವೂ ಮುಂಬೈಗೆ ಇದೆ. ಇದು ಸ್ವಪ್ನ ನಗರಿ. ಮತ್ತೆ ಚಿತ್ರ ವಿಚಿತ್ರ ನಗರಿಯೂ ಆಗಿದೆ. ಥಳುಕು ಬಳುಕಿಗೆ ಹೆಸರಾದ ಅರಬ್ಬೀ ಕಡಲ ತೀರದ ಈ ನಗರಕ್ಕೆ ಜನರನ್ನು ಚುಂಬಕ ಶಕ್ತಿಯಂತೆ ಸೆಳೆಯುವ ಸಾಮರ್ಥ್ಯವಿದೆ.ಆಸೆಗಳನ್ನು ಚಿಗುರಿಸುವ ಕನಸುಗಳನ್ನು ಕುದುರಿಸುವ ಬದುಕ ಬಂದವರಿಗೆ ಆಸರೆ ನೀಡುವ ಈ ಮಾಯಾನಗರಿಯ ಕತೆ ಪತ್ತೇದಾರಿ ಕಾದಂಬರಿಯಂತೆ ಪುಟ ಪುಟಕ್ಕೂ ರೋಮಾಂಚನ ಹುಟ್ಟಿಸುತ್ತಲೇ ಇದೆ’ ಎಂಬ ಲೇಖಕ ಶ್ರೀನಿವಾಸ ಜೋಕಟ್ಟೆ ಅವರ ಮಾತು ನಿಜವೇ ಆಗಿದೆ.
ಮುಂಬೈ ನಮ್ಮ ದೇಶದ ಆರ್ಥಿಕ ರಾಜಧಾನಿ. ಇದೊಂದು ಉದ್ಯಮ ಪ್ರಧಾನ ಮಹಾನಗರ. ಹೀಗಾಗಿ ಇಲ್ಲಿನದು ಯಾಂತ್ರಿಕ ಬದುಕು. ಅಮಾನವೀಯತೆ, ಪೈಶಾಚಿಕತೆ, ಭೂಗತ ಜಗತ್ತಿನ ಚಟುವಟಿಕೆಗಳಿಂದಾಗಿ ಇದಕ್ಕೆ ರಾಕ್ಷಸ ನಗರಿ’ ಎಂಬ ಅಪಖ್ಯಾತಿಯೂ ತಗುಲಿದೆ. ಹೀಗಿದ್ದೂ ಮುಂಬೈಯೆಂಬ ಮಾಯಾನಗರಿ’ಯ ಆಕರ್ಷಣೆ, ಈ ಮಹಾನಗರದ ಜನರ ಅದಮ್ಯ ಜೀವನೋತ್ಸಾಹ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಕಾರ್ಯನಿಷ್ಠೆ, ಸಹಕಾರ ಗುಣಗಳಿಗೆ ಯಾರೂ ಬೆರಗಾಗಬೇಕು. ಮುಂಬಯಿ ಹೆಸರಲ್ಲ, ಅದೊಂದು ಪ್ರಕ್ರಿಯೆ. ಮುಂಬೈ ಗೀಳಾಗುವುದಿಲ್ಲ, ಬಾಳಾಗೇ ಉಳಿಯುತ್ತದೆ. ಯಾಂತ್ರಿಕ ಎಂದು ಯಾರೇ ಎಷ್ಟೇ ಬಡಬಡಿಸಿದರೂ ಯಾಂತ್ರಿಕತೆಯ ಒಡಲೊಳಗಿಂದಲೇ ಸ್ವಂತಿಕೆಯ ಪುಷ್ಟಿಗೆ ಬೇಕಾದ ಸ್ವಾತಂತ್ರ್ಯದ ತೇವ ಒದಗಿ ಬರುತ್ತದೆ. ಮುಂಬಯಿ ಒಂದು ದೊಡ್ಡ ನೈತಿಕ ಬೆಂಬಲವಾಗಿ ಪ್ರತೀ ವ್ಯಕ್ತಿಗೆ ಒದಗುತ್ತದೆ. ಇಲ್ಲಿ ಯಾವ ಕ್ಷಣವೂ ಆಕಳಿಸುವುದಿಲ್ಲ, ಅರಳುತ್ತದೆ, ಜಿಗಿಯುತ್ತದೆ, ತಿವಿಯುತ್ತದೆ, ಕಾಡುತ್ತದೆ, ಬಾಡುವುದಿಲ್ಲ’ ಎಂಬುದಾಗಿ ಸಾಹಿತಿ ಜಯಂತ ಕಾಯ್ಕಿಣಿ ಬಣ್ಣಿಸಿದ್ದಾರೆ.
ಸಾಹಿತ್ಯ ವಲಯವಾಗಿ ಮುಂಬೈ : ಹೊಸಗನ್ನಡ ಸಾಹಿತ್ಯ ವಿವಿಧ ವಲಯಗಳಲ್ಲಿ ಬೆಳೆದು ಬಂದುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅರ್ವಾಚೀನ ಕನ್ನಡ ವಾಙ್ಮಯ ಏಕಕಾಲಕ್ಕೆ ಧಾರವಾಡ, ಮಂಗಳೂರು, ಮೈಸೂರು ಹಾಗೂ ಮುಂಬೈ ವಲಯಗಳಲ್ಲಿ ಸಮೃದ್ಧವಾಗಿ ಮೂಡಿಬಂದಿತು. ಕರ್ನಾಟಕ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶ ಮುಂಬಯಿ. ಸುಮಾರು ಇಪ್ಪತು ಲಕ್ಷ ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ. ಕನ್ನಡ ವಾಙ್ಮಯಕ್ಕೂ ಮುಂಬಯಿಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಕನ್ನಡ ಸಾಹಿತ್ಯ – ಸಂಸ್ಕೄತಿ ಕುರಿತು ಮಾತನಾಡುವಾಗಲೆಲ್ಲ ಇತಿಹಾಸಕಾರರು, ವಿಮರ್ಶಕರು ಮುಂಬಯಿ ಕಡೆ ಮುಖ ಮಾಡಬೇಕಾಗುತ್ತದೆ. ಕನ್ನಡ ವಾಙ್ಮಯಕ್ಕೆ ಮುಂಬಯಿ ಕೊಟ್ಟ ಕೊಡುಗೆಯೂ ಗಮನಾರ್ಹವಾದುದು.
ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ನಾಟಕ ಎಂಬ ಕೀರ್ತಿಗೆ ಪಾತ್ರವಾದ ಕರ್ಕಿ ವೆಂಕಟರಮಣ ಶಾಸ್ತ್ರಿಗಳಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ಅಥವಾ ಕನ್ಯಾವಿಕ್ರಯದ ಪರಿಣಾಮವು’ ಪ್ರಕಟವಾದುದು (1887) ಈ ಮಹಾನಗರದಲ್ಲಿಯೇ. ಇಲ್ಲಿದ್ದುಕೊಂಡೇ ಚುರಮುರಿ ಶೇಷಗಿರಿರಾಯರು (ವೃತ್ತಿಯಲ್ಲಿ ಇಂಜಿನಿಯರ್) ಮೊದಲ ಬಾರಿಗೆ ಕಾಳಿದಾಸನ ಶಾಕುಂತಲ ನಾಟಕವನ್ನು (1870) ಕನ್ನಡಕ್ಕೆ ರೂಪಾಂತರಿಸಿದರು! ಮರಾಠಿ ರಂಗಭೂಮಿಗೆ ಜನ್ಮವಿತ್ತ ನಾಟಕವಿದು. ಹೊಸಗನ್ನಡದ ಮೊದಲ ಅನುವಾದ ಕೃತಿ ಬಿ. ಎಂ. ಶ್ರೀ ಅವರ ಇಂಗ್ಲಿಷ್ ಗೀತಗಳು’ ಎಂಬ ಮಾತಿದೆ. ಇದು ತರವಲ್ಲ. ಮುಂಬಯಿ ಕನ್ನಡಿಗ ಹಟ್ಟಿಯಂಗಡಿ ನಾರಾಯಣ ರಾಯರಆಂಗ್ಲ ಕವಿತಾವಳಿ’ 1919ರಲ್ಲಿ ಬೆಳಕು ಕಂಡಿದೆ. ಹೀಗಾಗಿ ಅದು ಹೊಸಗನ್ನಡದ ಮೊದಲ ಅನುವಾದ ಕಾವ್ಯಕೃತಿ ಎನ್ನಬಹುದು. ಹೀಗೆ ಮುಂಬಯಿ ಕನ್ನಡಿಗರ ಸಾಹಿತ್ಯಕ, ಸಾಂಸ್ಕøತಿಕ ಸಾಧನೆಗೆ ಸುಮಾರು ನೂರ ಐವತ್ತು ವರ್ಷಗಳ ಗಟ್ಟಿ ಇತಿಹಾಸವಿದೆ ಎಂಬುದು ಅಭಿಮಾನದ ಸಂಗತಿ.
ಮುಂಬಯಿ ಕ್ರಿಯಾಶೀಲರಿಗೆ ಯಾವತ್ತೂ ಅವಕಾಶಗಳನ್ನು ಒದಗಿಸುವ ಊರು. ಕನ್ನಡ ಸಾಹಿತ್ಯದ ಬೊಕ್ಕಸವನ್ನು ಶ್ರೀಮಂತಗೊಳಿಸುವಲ್ಲಿ ಮುಂಬಯಿ ಪಾಲೂ ದೊಡ್ಡದು. ಇಲ್ಲಿನ ಕನ್ನಡ ಲೇಖಕರು ಕಾವ್ಯ, ಕಾದಂಬರಿ, ನಾಟಕ, ಕಥೆ, ಲಲಿತ ಪ್ರಬಂಧ, ಅನುವಾದ, ಸಂಶೋಧನೆ, ಚುಟುಕು, ಗದ್ಯ ಬರಹ, ಪ್ರವಾಸ, ಸಾಹಿತ್ಯ, ಅಂಕಣ ಬರಹ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿ ಹೆಸರು ಮಾಡಿದ್ದಾರೆ.
1956ರಲ್ಲಿ ಭಾಷಾವಾರು ಪ್ರಾಂತ ನಿರ್ಮಾಣವಾಗಿ ಮುಂಬೈ ಹೊರನಾಡಾಗಿ ಪರಿಣಮಿಸಿದರೂ ಇಲ್ಲಿಯ ವಾಙ್ಮಯ ಸೇವೆಗೆ ಹಿನ್ನೆಡೆಯಾಗಲಿಲ್ಲ. ಕೃಷ್ಣಕುಮಾರ ಕಲ್ಲೂರ, ದಿನಕರ ದೇಸಾಯಿ, ಸುಂದರ ನಾಡಕರ್ಣಿ, ಆರ್. ಡಿ. ಕಾಮತ್, ಎಂ. ವಿ. ಕಾಮತ್, ಚಿದಂಬರ ದೀಕ್ಷಿತ್, ಶ್ರೀನಿವಾಸ ಹಾವನೂರು, ಬ್ಯಾತನಾಳ, ರಾಮಚಂದ್ರ ಉಚ್ಚಿಲ್, ಭೀಮರಾವ್ ಚಿಟಗುಪ್ಪಿ, ವಾಸಂತಿ ಪಡುಕೋಣೆ, ಡಿ. ಕೆ. ಮೆಂಡನ್, ವ್ಯಾಸರಾಯ ಬಲ್ಲಾಳ ಮೊದಲಾದವರು ಸ್ವಾತಂತ್ರ್ಯ ಪೂರ್ವದಲ್ಲೇ ಮುಂಬೈಯಲ್ಲಿ ಸಾಹಿತ್ಯ ಪರಿಚಾರಿಕೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದರು. 1946 – 48ರ ಹೊತ್ತಿಗೆ ಮುಂಬೈಯಿಂದ ಬೆಳಕು ಕಾಣುತ್ತಿದ್ದ ನುಡಿ ಪತ್ರಿಕೆ ಹೊಸ ಲೇಖಕರನ್ನು ಲೋಕಮುಖಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಯಿತು 1950ರಲ್ಲಿ ಮುಂಬೈಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ವಿ. ಕೃ. ಗೋಕಾಕರು ನವ್ಯಕಾವ್ಯವನ್ನು ಘೋಷಿಸಿದರು. ಇದಾದ ಅನಂತರ ಕನ್ನಡ ಕಾವ್ಯವಾಹಿನಿಯ ಗತಿಯೇ ಬದಲಾದುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕನ್ನಡ ವಾಙ್ಮಯಕ್ಕೆ ಹೊಸನೀರು ಹಾಯಿಸಿದ ಕೀರ್ತಿ ಮುಂಬೈ ಕನ್ನಡ ಲೇಖಕರಿಗೆ ಸಲ್ಲುತ್ತದೆ. ನಗರ ಪ್ರಜ್ಞೆ, ನಗರ ಜಾನಪದ, ಅನಾಥ ಪ್ರಜ್ಞೆ ಮೊದಲಾದ ಪರಿಕಲ್ಪನೆಗಳಿಗೆ ಜೀವ ತುಂಬಿದ ಶ್ರೇಯಸ್ಸು ಈ ಭಾಗದ ಲೇಖಕರದಾಗಿದೆ. ಮುಂಬೈನಲ್ಲಿ ನೆಲೆನಿಂತು ಸಾಹಿತ್ಯ ಕೃಷಿ ಮಾಡಿದ ಹೆಚ್ಚಿನ ಲೇಖಕರು ವಿಜ್ಞಾನ ಕ್ಷೇತ್ರದವರು. ಹೀಗಾಗಿ ಅವರು ಮುಂಬೈ ಮಹಾನಗರದ ಜೀವನ ದರ್ಶನವನ್ನು ಭಿನ್ನಪರಿಯಲ್ಲಿ ದಾಖಲಿಸಿ ಹೆಸರು ಮಾಡಿದರು. ಇಲ್ಲಿನ ಲೇಖಕರು ಬಹು ಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡವರು. ಮುಂಬೈ ಮಹಾನಗರದ ಸಂಕೀರ್ಣವೆನಿಸುವ ಬದುಕನ್ನು, ಅದು ಒಡ್ಡುವ ಸವಾಲುಗಳನ್ನು, ಅದು ತರುವ ಕುತೂಹಲಕಾರಕ ತಿರುವುಗಳನ್ನು, ಪರಿವರ್ತನೆಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿ ಹೊಸ ಅನುಭವ ಪ್ರಪಂಚವನ್ನು ಕನ್ನಡದೊಳಗೆ ತಂದು ಹೊಸ ಸಂವಾದಕ್ಕೆ ಅನುವು ಆಸ್ಪದ ಮಾಡಿಕೊಟ್ಟದ್ದು ಮುಂಬೈ ಲೇಖಕರ ಮಹತ್ವದ ಸಾಧನೆ. ಈ ವಾಣಿಜ್ಯ ಮಹಾನಗರಿಯಲ್ಲಿ ಕನ್ನಡದ ಬಾವುಟವನ್ನು ಏರಿಸಿ ನಿಲ್ಲಿಸಲು ಇಲ್ಲಿನ ಲೇಖಕರು ಪರಿಶ್ರಮ ವಹಿಸುತ್ತಾ ಬಂದಿರುವುದು ಗಮನೀಯ ಅಂಶ.
ಬಹುಕಾಲ ಮುಂಬೈಯಲ್ಲಿ ನೆಲೆಸಿ ವೈವಿಧ್ಯಮಯವಾದ ಸಾಹಿತ್ಯ ರಚಿಸಿ ಕನ್ನಡ ವಾಙ್ಮಯಕ್ಕೆ ಹೊಸ ಮೆರುಗು ನೀಡಿದ ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಡಾ. ಬಿ. ಎ. ಸನದಿ, ಡಾ. ವ್ಯಾಸರಾವ್ ನಿಂಜೂರು, ಅರವಿಂದ ನಾಡಕರ್ಣಿ, ಡಾ. ಜಯಂತ ಕಾಯ್ಕಿಣಿ, ಮಿತ್ರಾ ವೆಂಕಟ್ರಾಜ್, ಡಾ. ಸುನೀತಾ ಶೆಟ್ಟಿ, ಡಾ. ವಿಶ್ವನಾಥ ಕಾರ್ನಾಡ್, ಡಾ. ಜೀವಿ ಕುಲಕರ್ಣಿ, ಬಿ. ಎಸ್. ಕುರ್ಕಾಲ್, ಶ್ರೀನಿವಾಸ ಜೋಕಟ್ಟೆ, ಡಾ. ಮಂಜುನಾಥ ಮೊದಲಾದವರ ಸಾಧನೆ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಮುಂಬೈನ ಕನ್ನಡ ಲೇಖಕರು ಸಾವಿರಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಹೊರತಂದಿರುವುದು, ಇಂದಿಗೂ ಈ ಭಾಗದಲ್ಲಿ ನೂರಾರು ಕನ್ನಡ ಲೇಖಕರು ವಾಙ್ಮಯ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಹಿತ್ಯ ವಲಯವಾಗಿ ತನ್ನತನವನ್ನು ಉಳಿಸಿಕೊಳ್ಳುವಲ್ಲಿ ಮುಂಬಯಿ ಯಶಸ್ವಿಯಾಗಿದೆ.
ನಸುಕು ಮಹಾಸಂಚಿಕೆ! ಲೇಖಕರ ಅಭೂತಪೂರ್ವ ಸ್ಪಂದನ!..
ನಸುಕು ಡಾಟ್‍ಕಾಮ್ ಅಂತರಜಾಲ ಪತ್ರಿಕೆ ಈಗಾಗಲೇ ಸಾಕಷ್ಟು ಹೆಸರು ಮಾಡಿ ಸೈ ಎನಿಸಿಕೊಂಡಿದೆ. ಡಿಜಿಟಲ್ ವೇದಿಕೆಯ ಮೂಲಕ ನಸುಕು ಮಾಡುತ್ತಿರುವ ಕನ್ನಡ ಪರಿಚಾರಿಕೆ ನಾಡಿಗೆ ಮಾದರಿಯಾಗಿದೆ. ಮುಂಬೈನ ಕನ್ನಡ ಲೇಖಕರ ಒಂದು ವಿಶೇಷ ಸಂಚಿಕೆಯನ್ನು ತರಲು ಅವರು ಮನಸ್ಸು ಮಾಡಿದ್ದು ಇದು ಹೊರನಾಡ ಕನ್ನಡಿಗರಿಗೆ ಸಂದ ಗೌರವ ಎಂದು ನಾವು ಭಾವಿಸಿದ್ದೇವೆ. ಮುಂಬೈ ಸಾಹಿತ್ಯ ವಲಯವಾಗಿ ಮುಂಚಿನಿಂದಲೂ ಹೆಸರು ಮಾಡುತ್ತಾ ಬಂದಿದೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ ಎಂಬುದು ಅಭಿಮಾನದ ಸಂಗತಿ. ಈ ಶತಮಾನದ ಕಳೆದೆರಡು ದಶಕದಲ್ಲಿ ಮುಂಬೈ ಲೇಖಕರ ಸುಮಾರು 700 ಕೃತಿಗಳು ಬೆಳಕು ಕಂಡಿರುವುದು ಉಲ್ಲೇಖನೀಯ ಅಂಶ. ನಸುಕು ಡಾಟ್‍ಕಾಮ್ ನೀಡಿದ ಈ ಅವಕಾಶ ಇಲ್ಲಿನ ಸಾಹಿತ್ಯ ಕೈಂಕರ್ಯಕ್ಕೆ ನಾವೀನ್ಯ, ಉತ್ತಾನ ನೀಡುತ್ತದೆ ಎಂಬ ಭರವಸೆ ನಮಗಿದೆ.
ಮುಂಬೈ ಲೇಖಕರ ಸಂದೋಹ ದೊಡ್ಡದು.
ಅರವತ್ತಕ್ಕೂ ಹೆಚ್ಚು ಮಂದಿ ಲೇಖಕರು ಬರೆದ ವೈವಿಧ್ಯಮಯವಾದ ಸುರಚಿರ ಬೃಹತ್ ಸಂಚಿಕೆ ಇದಾಗಿದೆ. ಹಳಬರು ಹೊಸಬರು ಹಿರಿಯರು ಕಿರಿಯರು ತಂತಮ್ಮ ಯೋಗದಾನವನ್ನು ನೀಡಿ ಈ ಮಹಾಸಂಪುಟದ ಮೆರುಗನ್ನು ಹೆಚ್ಚಿಸಿದ್ದಾರೆ. ಈ ಸಂಚಿಕೆಯನ್ನು ಸಂಪಾದಿಸಿ ಕೊಡುವ ಸುಯೋಗ ನನಗೆ ಸಿಕ್ಕಿದೆ. ಇದು ಮುಂಬೈ ವಿವಿ ಕನ್ನಡ ವಿಭಾಗಕ್ಕೆ ಸಂದ ಗೌರವ ಎಂದೇ ಭಾವಿಸಿಕೊಳ್ಳುವೆ. ಈ ಸುಸಂಧಿಯನ್ನು ನೀಡಿದ ನಸುಕು ಡಾಟ್‍ಕಾಮ್‍ನ ವಿಜಯ್ ಅವರಿಗೆ ಅನಂತ ವಂದನೆಗಳು. ಈ ಸಂಚಿಕೆಯ ಅಂದ ಚಂದ ಹೆಚ್ಚಿಸಲು ಸಹಕರಿಸಿದ ವಿಭಾಗದ ಮಿತ್ರರಾದ ಡಾ. ಪೂರ್ಣಿಮಾ ಶೆಟ್ಟಿ, ಕಲಾ ಭಾಗ್ವತ್, ಸವಿತಾ ಶೆಟ್ಟಿ, ಜಯ ಸಾಲ್ಯಾನ್, ಅಮೃತಾ ಶೆಟ್ಟಿ ಮೊದಲಾದವರಿಗೆ ಹೃದ್ಯ ವಂದನೆಗಳು. ಎಲ್ಲ ಲೇಖಕರಿಗೆ ಇಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ. ಆಕೃತಿ, ಕೈಬರಹದಲ್ಲಿ ನೀಡಿದ ಲೇಖನಗಳನ್ನು ಈ ಸಂಚಿಕೆಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಇಂಥದೇ ಮತ್ತೊಂದು ಸಂಚಿಕೆ ತರುವ ಯೋಜನೆ ನಮ್ಮ ಮನದಲ್ಲಿ ಇದೆ. ಮುಂಬೈಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಎಲ್ಲ ಮನಸ್ಸುಗಳಿಗೆ ಮುಡಿಬಾಗಿ ನಮನಗಳು.
ಗೌರವ ಸಂಪಾದಕರು – ಮುಂಬಯಿ ನಸುಕು (ಮಹಾ ಸಂಚಿಕೆ)
ಜಿ. ಎನ್. ಉಪಾಧ್ಯ
ಕನ್ನಡ ವಿಭಾಗ, ಮುಂಬೈ ವಿವಿ,
ಮುಂಬೈ – 400098
kannadadepartment@gmail.com
ಹೆಚ್ಚಿನ ಬರಹಗಳಿಗಾಗಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ
ಕಣಗಿಲೆಯ ಫಿರ್ಯಾದು