ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಳ್ಳು ಹೇಳುವ ಕನ್ನಡಿ

ನೀತಾ ರಾವ್
ಇತ್ತೀಚಿನ ಬರಹಗಳು: ನೀತಾ ರಾವ್ (ಎಲ್ಲವನ್ನು ಓದಿ)

“ನಿನ್ನ ಮುಖಾ ಕನಡಿ ಒಳಗ ನೋಡಕೋ ಒಂದಸಲಾ, ಸಣ್ಣ ಹುಡಗಿಗತೆ ಕುಣಿಯೋ ವಯಸ್ಸಲ್ಲ ನಿಂದು. ಯಾವ ವಯಸ್ಸಿಗೆ ಏನ ಮಾಡಬೇಕೋ ಅದನ್ನ ಮಾಡಬೇಕು, ಅಂದ್ರ ಛಂದ ಕಾಣತದ”…

ಅವ ಓತಪ್ರೋತವಾಗಿ ಬಯ್ಯುತ್ತ ಹೋದಂತೆ ಕಾಲು ಉಳುಕಿ ಆದ ನೋವಿಗಿಂತ ಅವನ ಮಾತುಗಳಿಂದಾದ ನೋವೇ ಹೆಚ್ಚು ಘಾಸಿಗೊಳಿಸಿತು. “ಏನೋ ನನ್ನ ಸಂತೋಷಕ್ಕಾಗಿ ದಸರೆಯ ದಾಂಡಿಯಾ ನೃತ್ಯವನ್ನು ಕೂಡಾ ಮಾಡಬಾರದಷ್ಟು ವಯಸ್ಸಾಗಿ ಹೋಯ್ತೇ ನನಗೆ” ಎನಿಸಿ ಬೇಸರವಾಯಿತವಳಿಗೆ. ಅವನೇನೋ ನಿನಗೆ ವಯಸ್ಸಾಯ್ತು, ವಯಸ್ಸಾಯ್ತು ಎಂದು ಮೇಲಿಂದ ಮೇಲೆ ಇರಿಯುತ್ತಿದ್ದಾನೆ ಹೊರತು ತನಗೆಂದೂ ಹಾಗನಿಸಿಯೇ ಇಲ್ಲವಲ್ಲ! ತಾನೂ ದಿನಾಲೂ ಸಾಕಷ್ಟು ಸಲ ಕನ್ನಡಿಯ ಮುಂದೆ ನಿಂತೇ ಇರುತ್ತಿದ್ದಳು. ಒಂದು ಸಲವೂ ಚರ್ಮ ಮುದುಡಿದ್ದು, ಕೂದಲು ಸೆಣಬಿನಂತೆ ನೆಟ್ಟಗೆ ನಿಂತು ಬಿಳಿಬಿಳಿ ಮಿನುಗಿದ್ದು, ಸೊಂಟದಲ್ಲಿ ಎರಡು, ಮೂರು ಟಯರುಗಳು ಬಂದಿದ್ದು, ಊಹೂಂ, ಯಾವುದೂ ತನ್ನ ಕಣ್ಣಿಗೆ ಕಂಡಿಲ್ಲ.

ಕುಂಟುತ್ತ ಕುಂಟುತ್ತ ತನ್ನ ಬೆಡರೂಮಿನ ಲೈಫಸೈಝ್ ಕನ್ನಡಿಯ ಮುಂದೆ ಮತ್ತೆ ಹೋಗಿ ನಿಂತಳು. ವಯಸ್ಸಾಗಿದೆ ಆದರೆ ಅವನು ಹೇಳುವಷ್ಟೇನೂ ಮುದುಕಿಯಾಗಿಲ್ಲ ನಾನು. ಕೂದಲಿಗೆ ಹಾಕಿದ ಕಪ್ಪು ಕಡಿಮೆಯಾಗಿ ಅಲ್ಲಲ್ಲಿ ಬಿಳಿ ಇಣುಕಿದೆ, ಇಲ್ಲವೆಂದಲ್ಲ. ಆದರೆ ಅಷ್ಟಕ್ಕೇ ಎಲ್ಲಾ ಚಟುವಟಿಕೆಗಳನ್ನು, ಉತ್ಸಾಹವನ್ನು ಬಿಟ್ಟುಬಿಡಬೇಕೇ? ನಿನ್ನಲ್ಲಿನ್ನೂ ಸಾಕಷ್ಟು ಕಸುವಿದೆ ಎಂದು ಕನ್ನಡಿ ಹೇಳುತ್ತಿಲ್ಲವೇ? ಹೊಟ್ಟೆಕಿಚ್ಚವನಿಗೆ ಎಂದುಕೊಂಡು ಸಮಾಧಾನ ಮಾಡಿಕೊಂಡಳು.

ಈ ವಯಸ್ಸಿನಲ್ಲೂ ಇಷ್ಟೊಂದು ಹುರುಪಾಗಿದ್ದೀರಿ, ನಿಮ್ಮ ಜೀವನಪ್ರೀತಿಯನ್ನು ಮೆಚ್ಚಲೇಬೇಕು ಎಂದಿದ್ದಳಲ್ಲವೇ ಪಕ್ಕದ ಮನೆಯವರ ಹೊಸ ಸೊಸೆ? “ಅಂದ್ರೆ ನನ್ನ ವಯಸ್ಸೆಷ್ಟು ಅಂತ ನಿನ್ನ ಅಂದಾಜು?” ಕೇಳಬೇಕೆಂದು ಬಾಯ್ತುದಿಗೆ ಬಂದ ಪ್ರಶ್ನೆಯನ್ನು ಅಲ್ಲಿಯೇ ನುಂಗಿಕೊಂಡು ಮನೆಯೊಳಗೆ ಧಾವಿಸಿಬಂದು ಕುಳಿತಿದ್ದಳು. ಅವಳದು ಹೊಗಳಿಕೆಯೋ, ವಯಸ್ಸಾಗಿದೆಯೆಂದು ಪರ್ಯಾಯವಾಗಿ ಕೊಟ್ಟ ಸೂಚನೆಯೋ ಎಂದು ಇಡೀ ಒಂದು ದಿನ ತಲೆ ಕೆಡೆಸಿಕೊಂಡಿರಲಿಲ್ಲವೇ? “ಯಾರೇನಾದರೂ ಅಂದುಕೊಳ್ಳಲಿ ಬಿಡು, ಅದರಿಂದ ನನಗೇನಾಗಬೇಕಿದೆ?” ಎಂದು ಮತ್ತೆ ಯಥಾಸ್ಥಿತಿಗೆ ಪ್ರಯತ್ನಪಟ್ಟು ವಾಪಾಸ್ಸಾಗಿದ್ದಳು.

“ಅಮ್ಮಾ ನಿನ್ನ ಕಣ್ಣಿನ ಕೆಳಗೆ ಕಪ್ಪಾಗೇದ ನೋಡು” ಎಂದ ಮಗನನ್ನು ದುರುಗುಟ್ಟಿಕೊಂಡು ನೋಡಿ ಸುಮ್ಮನಾಗಿದ್ದಳು. ಆದರೆ ಈಗ ಇವನ ಬತ್ತಳಿಕೆಯಿಂದ ಹೊರಟ ಬಾಣಗಳು ಹೆಚ್ಚು ಘಾಸಿಗೊಳಿಸುತ್ತಿವೆ. ಮತ್ತೆ ಕನ್ನಡಿಯ ಮುಂದೆ ಬಂದು ನಿಂತಳು. ಇವರಿಗೆಲ್ಲಾ ಏನು ಹುಚ್ಚು ಹಿಡಿದಿದೆಯೇ? ಅಥವಾ ಕಣ್ಣು ಸರಿಯಿಲ್ಲವೋ? ಅಥವಾ, ಅಥವಾ ನನ್ನ ಕಣ್ಣಿಗೇ ನಾನು ಬೇರೆ ಕಾಣುತ್ತಿರುವೆನೋ? ಏನೋ ಅನುಮಾನ, ಎಂಥದೋ ಅಧೈರ್ಯ. ಧಡಧಡ ನಡೆದು ಮಗನ ರೂಮಿನ ಎತ್ತರದ ಕನ್ನಡಿಯ ಮುಂದೆ ನಿಂತಳು.

ಅರೇ ಇದೇನಿದು, ಈ ಕನ್ನಡಿಯಲ್ಲಿ ನನ್ನ ಮುಖ ಬೇರೆಯೇ ಕಾಣುತ್ತಿದೆ! ಎಷ್ಟೊಂದು ಬಿಳಿ ಕೂದಲು, ಮುಖದಲ್ಲಿ ಇಷ್ಟೊಂದು ನೆರಿಗೆಗಳು ಯಾವಾಗ ಆದವು? ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು! ಓ ದೇವರೇ ಇಷ್ಟು ದಿನ ನನಗೆ ಗೊತ್ತೇ ಆಗದೇ ಹೋದದ್ದಾದರೂ ಹೇಗೆ? ಅಳು ಒತ್ತರಿಸಿಕೊಂಡು ಬಂತು. ಆದರೂ ಒಪ್ಪಲು ತಯಾರಿಲ್ಲದ ಮನಸ್ಸು ಅವಳನ್ನು ಇನ್ನೊಂದು ಕನ್ನಡಿಯ ಮುಂದೆ ತಂದು ನಿಲ್ಲಿಸಿತು. ಅಲ್ಲಿಯೂ ಬಿಳಿ ಕೂದಲು, ಇಳಿಬಿದ್ದ ಕೆನ್ನೆ, ಕಣ್ಣ ಕೆಳಗಿನ ಕಪ್ಪು ವರ್ತುಲಗಳು!
ಮತ್ತೆ ತನ್ನ ಕನ್ನಡಿಯ ಮುಂದೆ ಬಂದು ನಿಂತಳು.

ಅರೆ ಇದೇನಿದು? ಇಲ್ಲಿ ಅವಳು ಹತ್ತು ವರ್ಷ ಚಿಕ್ಕವಳಂತೆ ಕಾಣುತ್ತಿದ್ದಾಳೆ. ಬಿಗಿ ಚರ್ಮದ ಮೃದು ಮುಖ, ಕಣ್ಣ ಕೆಳಗೆ ಒಂಚೂರೂ ಕಪ್ಪಿಲ್ಲ! ನಲವತ್ತು ಎನಿಸಿದರೂ ಮಾಗಿದ ಸೌಂದರ್ಯ! ಅದಹೇಗೆ ಸಾಧ್ಯ? ಹೇಗೆ?
ಈ ನನ್ನ ಕನ್ನಡಿ ಸುಳ್ಳು ಹೇಳುತ್ತಿದೆ. ಹೌದು ಗೊತ್ತಾಗಿಹೋಯ್ತು, ಇದು ಸುಳ್ಳು ಹೇಳುವ ಕನ್ನಡಿ. ಮೋಸದ ಕನ್ನಡಿ. ಎಷ್ಟು ವರ್ಷಗಳಿಂದ ಹೀಗೆಯೇ ಸುಳ್ಳು ಹೇಳುತ್ತ ಬಂದಿದೆ. ಇದನ್ನು ನಂಬಿದ ನಾನು ಎಷ್ಟು ಮೂರ್ಖಳಂತೆ ವರ್ತಿಸಿದೆನೋ ಏನೋ! ನಾನು ಇನ್ನೂ ಚಿಕ್ಕವಳು, ನನಗೆ ವಯಸ್ಸಾದರೇನಾಯ್ತು, ನನ್ನ ಮುಖ, ಮನಸ್ಸು ಎರಡೂ ತರುಣವಾಗಿವೆ ಎಂದುಕೊಂಡಿದ್ದೆ. ಅಂದರೆ ಹಾಗೆ ನಂಬಿಕೊಳ್ಳಲು ಈ ಕನ್ನಡಿ, ಈ ಸುಳ್ಳು ಕನ್ನಡಿ ಕಾರಣವಾಗಿತ್ತು. ಜನ ನನ್ನ ಬೆನ್ನ ಹಿಂದೆ ಅದೆಷ್ಟು ಆಡಿಕೊಂಡರೋ, ಅದೆಷ್ಟು ನಕ್ಕರೋ! ಎಲ್ಲ ಈ ಕನ್ನಡಿಯ ದೆಸೆಯಿಂದ.

ಅವಳಿಗೆ ಕನ್ನಡಿಯ ಮೇಲೆ ರೋಷ ಉಕ್ಕಿಬಂತು. ಆಚೆಈಚೆ ನೋಡಿದಳು. ಹೊಸದಾಗಿ ತಂದಿಟ್ಟ ದೊಡ್ಡ ಫೇಸಪೌಡರ್ ಡಬ್ಬಿ ಕನ್ನಡಿಯ ಮುಂದೆಯೇ ಕುಳಿತಿತ್ತು. ಒಂಚೂರು ಹಿಂದಕ್ಕೆ ಹೋಗಿ ಅದನ್ನು ಎತ್ತಿಕೊಂಡವಳೇ ಕನ್ನಡಿಯತ್ತ ರೊಂಯ್ಯನೇ ಬೀಸಿದಳು. ಬೀಸಿದ ಜೋರಿಗೆ ಕನ್ನಡಿ ಅಲ್ಲಲ್ಲಿ ಸೀಳಿ, ದಂಡೆಯಲ್ಲಿ ಒಡೆದು ಚೂರುಗಳು ಕೆಳಗೆ ಬಿದ್ದವು. “ಸುಳ್ಳು ಹೇಳುತ್ತೀಯಾ, ಏನು ಮಾಡಿದೆ ನೋಡು?” ಎಂದವಳು ಗಹಗಹಿಸಿದಳು. ನಂತರ “ಸುಳ್ಳು ಹೇಳಿ ಹೇಳಿ ಎಲ್ಲರ ಮುಂದೆ ನನ್ನನ್ನೇ ಸುಳ್ಳು ಮಾಡಿ ನಗೆಗೀಡು ಮಾಡಿದೆ” ಎನ್ನುತ್ತ ಅತ್ತಳು.