- ಮರುಭೂಮಿಯ ಮಾನಿನಿ - ಅಕ್ಟೋಬರ್ 31, 2021
- ಅಂತಿಮ ವಿದಾಯದ ಅಲಂಕಾರ - ಅಕ್ಟೋಬರ್ 17, 2021
- ವಯಸ್ಸು ಮತ್ತದರ ಸುಕ್ಕುಗಳು : ಆಮೋರ್ - ಅಕ್ಟೋಬರ್ 2, 2021
ಸಮಸ್ತ ಜೀವಲೋಕದಲ್ಲಿ ಬಹುಶಃ ಎರಡೇ ಎರಡು ಸಂಗತಿಗಳು ಮಾತ್ರವೇ ಇಡೀ ಜೀವಸಂಕುಲವನ್ನು ಒಂದೇ ತೆರನಾಗಿ ನೋಡುತ್ತವೆ; ಅದರಲ್ಲಿ ಒಂದು ಹುಟ್ಟು, ಇನ್ನೊಂದು ಸಾವು. ಈ ಚಕ್ರದಲ್ಲಿ ಅದೆಷ್ಟೋ ಜೀವಯೋನಿಗಳಲ್ಲಿ ಬದುಕು ರೂಪುಗೊಂಡು ಈ ಭೂಮಿಯ ಸುಖದುಃಖವನ್ನು ಅಲಂಕರಿಸುತ್ತದೆ. ಬೇರೆ ಬೇರೆ ಘಟ್ಟಗಳಲ್ಲಿ ಬೇರೆ ಬೇರೆ ದೇಹ ವಿನ್ಯಾಸದೊಂದಿಗೆ ಕಾಲಕ್ಕೆ ಜೊತೆಯಾಗುವುದು ಸಹಜ ಹಾಗೂ ಅದು ಹಾಗೇ ನಡೆಯುವ ಪ್ರಕ್ರಿಯೆ. ಈ ಎರಡರ ನಡುವಿನ ಭಾಗವನ್ನು ಬದುಕೆನ್ನಬಹುದು ಅಥವಾ ಭ್ರಮೆ ಅಂತಲೂ! ನೆಮ್ಮದಿಪೂರ್ಣ ದಿನಗಳಿಗಾಗಿಯೇ ಇಡೀ ಜೀವಿತಾವಧಿ ವ್ಯಯಿಸಲ್ಪಡುತ್ತದೆ. ಹೊರಟು ನಿಂತಾಗ ಎಲ್ಲವನ್ನೂ ಬಿಟ್ಟೇ ಹೊರಡಬೇಕು; ನಮ್ಮದೆಂದು ಅಂದುಕೊಂಡಿದ್ದ ದೇಹವನ್ನು ಕೂಡಾ.. ಚೈತನ್ಯ ಇರುವವರೆಗೆ ಕ್ರಿಯಾಶೀಲವಾಗಿರುವ ದೇಹ, ಅದು ಆರಿದ ಕೂಡಲೇ ತನ್ನನ್ನು ತಾನು ನಶಿಸಿಕೊಳ್ಳುವ ಕೆಲಸವನ್ನು ಪ್ರಾರಂಭಿಸುತ್ತದೆ. ಹೀಗಿರುವಾಗ, ಸಾವನ್ನೂ ಕೂಡಾ ಒಂದು ಪ್ರಯಾಣ ಅಂತಲೇ ಬಹುತೇಕ ಎಲ್ಲರೂ ಒಪ್ಪುತ್ತಾರೆ. ಅಂತಿಮ ಪ್ರಯಾಣ ಹೇಗಿರಬೇಕು, ಆ ಪ್ರಯಾಣದ ಸಿದ್ಧತೆಗಳೇನು, ಅಲ್ಲಿ ಹುಟ್ಟಬಹುದಾದ ಮನುಷ್ಯ ಸಹಜ ಉದ್ವೇಗಗಳೇನು ಇತ್ಯಾದಿಗಳನ್ನು ಜಪಾನಿನ ಪರಿಸರಕ್ಕನುಗುಣವಾಗಿ ಹೇಳುವ ಚಿತ್ರವೇ ಜಪಾನೀಸ್ ಭಾಷೆಯ, ೨೦೦೮ರ ‘ಡಿಪಾರ್ಚರ್ಸ್’ (Departures)
ಇಲ್ಲಿ ಹೇಳುವ ಸಿದ್ಧತೆಗಳ್ಯಾವವೂ ಸಾಯುವವರು ಮಾಡಿಕೊಳ್ಳಬೇಕಾದುದಲ್ಲ; ಸತ್ತ ಮೇಲೆ ವಿದಾಯ ಹೇಳುವ ವಿಧಾನದ ಸಮಾರಂಭ ಇದು. ಪ್ರತಿ ದೇಶದಲ್ಲೂ, ಪ್ರತಿ ಸಂಸ್ಕೃತಿಯಲ್ಲೂ ಸತ್ತವರನ್ನು ಕಳುಹಿಸಿಕೊಡುವ ರೀತಿ ಬೇರೆ ಬೇರೆ. ಆದರೆ, ಇಲ್ಲಿಯವರೆಗೇನೂ ಅಂಥ ಸುಖ ಕಂಡಿಲ್ಲ, ಹೋಗುವಾಗಲಾದರೂ ಸಂತೋಷದಿಂದ, ಸಂಭ್ರಮದಿಂದ ಕಳುಹಿಸಿಕೊಡೋಣ ಅನ್ನುವ ತೆರನಾದ ಆಚರಣೆಗಳೇ ಹೆಚ್ಚು ಕಡಿಮೆ ಎಲ್ಲಾ ಕಡೆಯಲ್ಲೂ ಇದೆ. ಕೆಲವರು ಮೆರವಣಿಗೆ ಮಾಡಿದರೆ, ಇನ್ನು ಕೆಲವರು ದೇವನಾಮ ಸ್ಮರಣೆ. ಜಪಾನಿನ ಹಳೆಯ ಆಚರಣೆಗಳಲ್ಲಿ ದೇಹವನ್ನು ಒರೆಸಿ ಶುದ್ಧೀಕರಿಸಿ ಅಲಂಕರಿಸಿ ತಯಾರು ಮಾಡಲಾಗುತ್ತದೆ. ಈ ಥರದ್ದನ್ನು ಮಾಡುವುದಕ್ಕೆಂದೇ ಕೆಲವು ಕಂಪನಿಗಳಿವೆ. ಹೀಗೆ ಅಂತಿಮ ಪಯಣದ ಅಲಂಕಾರ ಮಾಡುವವರನ್ನು ಅಲ್ಲಿನ ಸಮಾಜ ಅಸ್ಪೃಶ್ಯರೆಂದೇ ಪರಿಗಣಿಸುತ್ತದೆ. ಕಾರಣ ಅವರು ಶುಚಿಯಾಗಿರುವುದಿಲ್ಲವೆಂಬ ಭಾವನೆ ಸಮಾಜದ್ದು; ಹೆಣದ ಪಾಪಗಳನ್ನು ತೊಳೆಯುವವರು ಅವರೇ ಆದರೂ! ಈ ಸಿನೆಮಾದಲ್ಲಿ ಮನುಷ್ಯನ ಬದುಕು ಕೂಡಾ ಸಾವನ್ನೇ ಅವಲಂಬಿಸಿದೆ. ನಾಯಕ ಒಂದು ಸಂಗೀತ ತಂಡದ ಸದಸ್ಯನಾಗಿದ್ದು, ಆ ತಂಡವೇ ರದ್ದಾದಾಗ, ತನ್ನಿಷ್ಟದ ‘ಸೆಲ್ಲೋ'( cello )ವನ್ನು ಮಾರಾಟ ಮಾಡಿ ತನ್ನ ಹೆಂಡತಿಯ ಸಲಹೆಯಂತೆ ತನ್ನೂರಿಗೆ ಮರಳುತ್ತಾನೆ. ಬದುಕು ಮತ್ತೆ ತನ್ನಿಷ್ಟದ ವಸ್ತುವೂ ಇಲ್ಲದ ಸೊನ್ನೆಯಿಂದ ಪ್ರಾರಂಭವಾಗುತ್ತದೆ. ಆಗ ಹೊಸ ಕೆಲಸಕ್ಕಾಗಿ ಹುಡುಕುತ್ತಿದ್ದಾಗ ಕಣ್ಣಿಗೆ ಬೀಳುವ ಕೆಲಸದ ಜಾಹೀರಾತು ಪ್ರವಾಸಿ ಸಂಬಂಧಿತ ಕೆಲಸದ್ದಿರಬಹುದೆಂದು ಅಂದುಕೊಂಡು ಸಂದರ್ಶನಕ್ಕಾಗಿ ಹೋದಾಗ ಇಡೀ ವರ್ತಮಾನಕ್ಕೆ ಒಂದು ಹೊಸ ತಿರುವು ಸಿಗುತ್ತದೆ.
ಸಿನೆಮಾದಲ್ಲಿ ಕತೆಯ ನಾಯಕ ಆ ಕೆಲಸವನ್ನು ಪ್ರಾರಂಭಿಸುವಾಗ ಮಾತ್ರವೇ ಆ ಕೆಲಸದಲ್ಲಿ ಎದುರಾಗಬಹುದಾದ ಇತರ ಸಾಧ್ಯತೆಗಳನ್ನು ತೋರಿಸಿ, ಕೊನೆಗೆ ಇವೆಲ್ಲವನ್ನೂ ಒಂದು ಧ್ಯಾನದಂತೆ ತೋರಿಸಲಾಗಿದೆ. ವಾಸ್ತವದಲ್ಲಿ ಅದು ಅಷ್ಟು ಸಲೀಸಾಗಿ, ಯಾವುದೇ ತೊಳಲಾಟಗಳಿಲ್ಲದೇ ನಡೆಯುವಂಥದ್ದೇನಲ್ಲ. ಮನೆಗಳಲ್ಲಿ ಒಬ್ಬೊಬ್ಬರೇ ಇರುವಂಥ ಜಾಗಗಳಲ್ಲಿ ಸತ್ತವರ ಕುರಿತಾಗಿ ಒಮ್ಮೊಮ್ಮೆ ವಾರಗಳವರೆಗೆ ತಿಳಿಯುವುದೇ ಇಲ್ಲ, ದೇಹ ವಿಘಟಿಸತೊಡಗುತ್ತದೆ. ಅವುಗಳನ್ನೆಲ್ಲಾ ಹೀಗೆ ಅಲಂಕರಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಜಪಾನಿನಲ್ಲಿ ಒಂಟಿಯಾಗಿ ವಾಸಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಅಂತಲೂ ಹೇಳಲಾಗುತ್ತಿದೆ, ಅದರ ಜೊತೆಗೆ ಈಗ ಈ ಥರದ ಸಂಪ್ರದಾಯಗಳೂ ಬಹುತೇಕವಾಗಿ ಬದಲಾಗುತ್ತಾ ಇವೆ. ಸರಳವಾಗಿ ವಿದಾಯದ ಸಮಾರಂಭಗಳು ನಡೆಯುತ್ತವೆ. ಜೊತೆಗೆ ಹಲವು ಸಾವುಗಳು ಆಸ್ಪತ್ರೆಗಳಲ್ಲೇ ಆಗುವುದರಿಂದ ಅಲ್ಲಿ ಈ ಥರದ ಆಚರಣೆಗಳಿಗೆ ಆಸ್ಪದವಿರುವುದಿಲ್ಲ. ಗೌರವಪೂರ್ಣ ಹಾಗೂ ಆತ್ಮೀಯ ವಿದಾಯದ ಹಿನ್ನೆಲೆಯಲ್ಲಿನ ಈ ಎಲ್ಲಾ ಆಚರಣೆಗಳು ಈಗ ಬಹುಶಃ ಜಪಾನಿನ ಕೆಲವು ಹಳ್ಳಿಗಳಲ್ಲಿ ಮಾತ್ರವೇ ಅಸ್ತಿತ್ವ ಉಳಿಸಿಕೊಂಡಿವೆ ಅಂತ ಹೇಳಲಾಗುತ್ತದೆ. ಆದರೂ, ಒಂದು ವೇಳೆ ಯಾರಾದರೂ ಅವರ ಕೆಲಸವನ್ನು ಅಷ್ಟು ಶ್ರದ್ಧೆ ಹಾಗೂ ಪ್ರೀತಿಯಿಂದ ನೋಡಿದರೆ, ಅದು ಧ್ಯಾನವೇ ಆಗಬಹುದೇನೋ!
ಪತ್ರಗಳನ್ನೆಲ್ಲಾ ಬರೆಯುವ ಮೊದಲು ಮನುಷ್ಯರು ಹೇಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು ಅನ್ನುವುದಕ್ಕೆ ಒಂದು ಆಪ್ತ ಸನ್ನಿವೇಶವನ್ನು ಈ ಸಿನೆಮಾದಲ್ಲಿ ಕಟ್ಟಿಕೊಡಲಾಗಿದೆ. ಪತ್ರದ ಥರ ಕೊಟ್ಟ ಕಲ್ಲುಗಳ ಆಕಾರ ಹಾಗೂ ಮೇಲ್ಮೈಯ ನುಣುಪಿನ ಆಧಾರದ ಮೇಲೆ ಪತ್ರ ಕೊಟ್ಟವರ ಮನಸ್ಸಲ್ಲಿ ಏನು ನಡೆಯುತ್ತಿದೆ ಅನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು ಅಂತ ಸಿನೆಮಾದಲ್ಲಿ ಹೇಳಲಾಗಿದೆ. ಇಡೀ ಸಿನೆಮಾದಲ್ಲಿ ಸ್ಪರ್ಶದ ಕುರಿತಾಗಿ ವಿಶೇಷವಾಗಿ ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ. ಮನುಷ್ಯನ ದೇಹ ಸ್ಪರ್ಶಕ್ಕೆ ಅತ್ಯಂತ ತೀವ್ರವಾಗಿ ಸ್ಪಂದಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಬೇರೆ ಯಾರಾದರೂ ಎತ್ತಿಕೊಂಡರೆ ಅಳುವ ಮಗು ತನ್ನ ತಾಯಿ ಎತ್ತಿಕೊಂಡ ಕೂಡಲೇ ಸುಮ್ಮನಾಗುತ್ತದೆ. ತಾಯ ದೇಹದ ಪರಿಮಳ, ಸ್ಪರ್ಶ ಆ ಮಗುವಿಗೆ ತಿಳಿಯುತ್ತದೆ. ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಗರ್ಭದಲ್ಲಿರುವಾಗಲೇ ಮಗು ತಾಯ ಸ್ಪರ್ಶಕ್ಕೆ ಸ್ಪಂದಿಸತೊಡಗುತ್ತದೆ ಅನ್ನುವ ಅಂಶ ತಿಳಿದುಬಂದಿದೆ. ಮನುಷ್ಯ ದೇಹ, ಸ್ಪರ್ಶ ಹಾಗೂ ದೇಹದ ಬಿಸಿಯನ್ನು ಬಹುಶಃ ಸದಾ ಕಾಲ ನೆನಪಲ್ಲಿಟ್ಟುಕೊಳ್ಳುತ್ತದೆ. ಇದು ವಿಚಿತ್ರವೆನಿಸಿದರೂ ಬಹುತೇಕ ಸತ್ಯ! ನಮ್ಮನ್ನು ಪ್ರೀತಿಸುವವರಿಗೆ ಅಥವಾ ನಾವು ಪ್ರೀತಿಸುವವರಿಗೆ ಆ ಒಂದು ಸ್ಪರ್ಶವೇ ಸಂಜೀವಿನಿಯಾಗಬಹುದು, ಅಷ್ಟಕ್ಕೂ ಮನುಷ್ಯ ದೇಹವನ್ನು, ಅದರೊಳಗಿನ ಭಾವಪಲ್ಲಟವನ್ನು ನಾವು ಸಂಪೂರ್ಣವಾಗಿ ಅಧ್ಯಯನ ಮಾಡಿಯೇ ಇಲ್ಲವಲ್ಲ ಇನ್ನೂ…
೮೧ನೇ ಆಸ್ಕರ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರ ಪಡೆದುಕೊಂಡಿದೆ. ಇದರ ಜೊತೆಜೊತೆಗೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಸಿನೆಮಾಗಳು ಕೇವಲ ಮನರಂಜನೆಗಾಗಿ ಅಷ್ಟೇ ಅಲ್ಲ; ಅದು ಮನುಷ್ಯಲೋಕದ ಆಗುಹೋಗುಗಳ ಕನ್ನಡಿ ಅನ್ನುವುದನ್ನು ನಾವು ಮತ್ತೆ ಮತ್ತೆ ಹೇಳಿಕೊಳ್ಳಬೇಕಾಗಿದೆ.
ಸತ್ತಾಗ, ಸತ್ತವರ ಮೇಲೆ ಆಗುವ ಪರಿಣಾಮಕ್ಕಿಂತ ಬದುಕಿದವರ ಮೇಲಾಗುವ ಪರಿಣಾಮಗಳು ಹಾಗೂ ಪರಿವರ್ತನೆಗಳು ಕೆಲವೊಮ್ಮೆ ಗಾಢವಾದವುಗಳು. ಕೆಲವೊಮ್ಮೆ ದುಃಖ, ಕೆಲವೊಮ್ಮೆ ಶೋಕ. ಮತ್ತೆ ಸ್ವಲ್ಪ ದಿನಗಳ ನಂತರ ಕೆಲವರನ್ನು ಮಾತ್ರ ಬಿಟ್ಟು ಉಳಿದವರೆಲ್ಲರಲ್ಲೂ ತೀವ್ರತೆ ಕಡಿಮೆಯಾಗುತ್ತದೆ. ಸಹಜ ಓಟಕ್ಕೆ ಬದುಕು ತೆರೆದುಕೊಳ್ಳುತ್ತದೆ ಮತ್ತೊಂದು ಸಾವು ಎದುರಾಗುವವರೆಗೆ..
ಹೆಚ್ಚಿನ ಬರಹಗಳಿಗಾಗಿ
ಸ್ನೇಹ ಸೌರಭ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ