- ಷೋರೂಂ ಬೈಕಿನ ಸ್ವಗತಗಳು - ಜುಲೈ 10, 2023
- ಕಾವ್ಯವೆಂದರೆ ಅದೇನದು? - ಫೆಬ್ರುವರಿ 5, 2022
- ಗರುಡ ಗಮನ ; ವೃಷಭ ವಾಹನ - ನವೆಂಬರ್ 28, 2021
ಅವತ್ತು ಬೆಂಗಳೂರಿಗೆ ಮೊದಲ ಬಾರಿಗೆ ಹೊರಡುತ್ತಿದ್ದೆ. ಅವ್ವ ಒಂದು ವಾರದಿಂದಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದಳು. ಮಾವಿನಕಾಯಿ ಉಪ್ಪಿನಕಾಯಿ, ಸಂತೆಯಿಂದ ತಂದ ಸೀಗಡಿ-ಕರ್ಮೀನು, ಕೊಬ್ಬರಿ-ಬೆಲ್ಲ, ಸೀಗೇಕಾಯಿ ಪೌಡರ್, ಒಣಗಿಸಿದ ಕರಿಬೇವು, ಮೊಳಕೆ ಕಟ್ಟಿದ ಕಾಳು, ಚಕ್ಳಿ, ನಿಪ್ಪಟ್ಟು, ಕೋಡಬಳ್ಳೆ, ಕರ್ಜಿಕಾಯಿ ಎಲ್ಲವನ್ನೂ ಗಂಟು ಮಾಡಿ ಚೀಲ ತುಂಬಿಸಿದ್ದಳು. ಬಸ್ಸು ಬಂದ ತಕ್ಷಣ ಅವಳ ಕಣ್ಣು ತುಂಬಿದವು. ಎಷ್ಟೋ ದಿನದಿಂದ ಸೆರಗಿನ ಗಂಟಿನಲ್ಲಿ ಕಟ್ಟಿಟ್ಟು ಬೆವತ್ತಿದ್ದ ನೂರೈವತ್ತು ರೂಪಾಯಿಗಳನ್ನು ನನ್ನ ಕೈಗಿತ್ತು, “ಮಗಾ ಪ್ಯಾಟೆ ಮಂದಿ ಜೊತೆ ಉಷಾರು! ಮನೆ ಬುಟ್ರೆ ಕಾಲೇಜು, ಕಾಲೇಜು ಬುಟ್ರೆ ಮನೆ ಆಯ್ತು ಅಂತ ಚೆನ್ನಾಗ್ ಓದ್ಕೋ.. ಟೈಮ್ ಟೈಮ್ಗೆ ಊಟ-ನಿದ್ದೆ ಮಾಡು. ಬಸ್ಸಲ್ಲಿ ಎಚ್ಚರ ತಪ್ಪಿ ಮಲುಗ್ಬೇಡ ಮತ್ತೆ.. ಬೆಂಗ್ಳೂರ್ಗೆ ಹ್ವಾದ್ ತಕ್ಷ್ಣ ಫೋನ್ ಮಾಡು..” ಅಂತ ಒಂದೇ ಸಮನೆ ಉಸುರಿ ಬಸ್ಸು ಹತ್ತಿಸಿದಳು. ಬಸ್ ಹಾರ್ನ್ ಮಾಡಿಕೊಂಡು ಬುಸುಗುಟ್ಟಿತು.
ಬಸ್ಸು ಓಡಿದಂತೆ ಅದರ ಹಿಂದೆ ನನ್ನವ್ವನೂ ಹೆಜ್ಜೆ ಸವೆಸುತ್ತಿದ್ದಳು. ಊರಿನ ಕೊನೆಯ ತಿರುವಿನಲ್ಲಿ ಬಸ್ಸು ತಿರುವು ಪಡೆದಾಗ ನನ್ನವ್ವ ದೂರದಲ್ಲಿ ಕಂಡಳು. ಅವಳು ಕಂಗಳಲ್ಲಿ ನನ್ನನ್ನು ಕಳೆದುಕೊಳ್ಳುವ ತವಕವಿತ್ತು.
ಹಳ್ಳಿ ಇಂದ ಬಂದ ನನ್ನಂತವರಿಗೆ ಅವ್ವ ಎಂಬ ಪದ ಬಹಳ ಆಪ್ತವಾದುದು. ಅದು ಉಸಿರಿನಷ್ಟೇ ಸರಾಗ ಹಾಗೂ ನಿರಾಳತೆಯನ್ನು ಕೊಡುವ ಮಾಂತ್ರಿಕ ಶಕ್ತಿ. ಜಗತ್ತಿನಲ್ಲಿ ಎಲ್ಲದಕ್ಕೂ ಪರ್ಯಾಯವಿದೆ, ತಾಯಿಯೊಬ್ಬಳನ್ನು ಬಿಟ್ಟು!. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ‘ರತ್ನನ್ ಪ್ರಪಂಚ’ ಚಲನಚಿತ್ರದಲ್ಲಿನ ತಾಯಿ-ಮಗನ ಅಮೋಘ ಸಂಬಂಧಗಳ ಕುರಿತ ದೃಶ್ಯಾವಳಿಗಳು ಮನಕೊರೆಯುತ್ತವೆ. ಕೆ.ಆರ್.ಜಿ ಸಂಸ್ಥೆಯ ನಿರ್ಮಾಣದಲ್ಲಿ, ನಿರ್ದೇಶಕ ರೌಹಿತ್ ಪದಕಿಯ ಸೃಜನಶೀಲತೆಯಲ್ಲಿ ಮೂಡಿಬಂದ ಈ ಚಿತ್ರ ಅಮೇಜಾನ್ ಪ್ರೈಂ ವೀಡಿಯೋ ಪ್ಲಾಟ್ ಪಾರಂನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ಪಡೆದಿದೆ.
ಕಥಾನಾಯಕರಾಗಿ ಡಾಲಿ ಧನಂಜಯ್ಯ ಹಾಗೂ ಪ್ರಮೋದ್ ಪಂಜು ಅವರು ನಟಿಸಿದ್ದು, ಅಚ್ಯುತ್ ರಾವ್, ಶೃತಿ, ಉಮಾಶ್ರೀ, ರೆಬಾ ಮೋನಿಕ, ರವಿ ಶಂಕರ್, ಅನು ಪ್ರಭಾಕರ್ ಅವರಂತಹ ಅದ್ಭುತ ತಾರಾಗಣ ಇಲ್ಲಿ ಶ್ರಮವಹಿಸಿ ದುಡಿದಿದ್ದಾರೆ.
ಮೊದಲಿಗೆ ಮಿಡಲ್ ಕ್ಲಾಸ್ ಫ್ಯಾಮಿಲಿಯ ತೊಳಲಾಟಗಳಲ್ಲಿ ಈಜಿ, ಅಚ್ಚುಕಟ್ಟಾದ ಬದುಕು ಕಟ್ಟಿಕೊಳ್ಳಲು ಒದ್ದಾಡುವ ರತ್ನಾಕರನ ಬಾಡಿಗೆ ಕುಟುಂಬ ಪರಿಚಯವಾಗುತ್ತದೆ. ತನ್ನನ್ನು ಸಾಕಿದವಳು ತನ್ನ ಹೆತ್ತವಳಲ್ಲ ಎಂದು ತಿಳಿದ ಕಥಾನಾಯಕ ತನ್ನ ಹೆತ್ತವಳನ್ನು ಹುಡುಕಲು ಮುಂದಾಗುತ್ತಾನೆ. ಅಲ್ಲೆಲ್ಲೋ ಸಿಗುವ ಮುಸ್ಲಿಂ ಕುಟುಂಬವೊಂದಕ್ಕೆ ಜೋತುಬಿದ್ದು, ಮತ್ತೊಂದು ರಹಸ್ಯ ಬಯಲಾಗುತ್ತದೆ. ಮತ್ತೆ ತನ್ನ ತಮ್ಮನನ್ನು ಹುಡುಕಿಕೊಂಡು ಉತ್ತರ ಕರ್ನಾಟಕದ ಕಡೆ ಪಯಣ ಬೆಳೆಸುತ್ತಾನೆ. ಆ ದಾರಿಯಲ್ಲಿ ಕಥಾನಾಯಕಿಯ ಸಾಕು ತಾಯಿ ಸಿಗುತ್ತಾಳೆ. ಆಕೆ ತೃತೀಯ ಲಿಂಗಿ. ಸಮಾಜ ಒಪ್ಪಿಕೊಳ್ಳದಿದ್ದರೂ ನಾಯಕಿ ಆಕೆಯನ್ನು ತಾಯಿಯಾಗಿ ಒಪ್ಪಿಕೊಂಡಿರುತ್ತಾಳೆ. ಆ ತೃತೀಯ ಲಿಂಗಿಗಳು ನಾಯಕನನ್ನು ಅಪ್ಪುವಾಗ, ಪ್ರಪಂಚದ ಎಲ್ಲಾ ಜಾತಿ-ಧರ್ಮಗಳು ಕರುಣೆಯಲ್ಲಿ ಮಿಂದು ಐಕ್ಯವಾಗಿ ನಾವೆಲ್ಲ ಒಂದೇ ಎನ್ನುವ ಭಾವ ಮೂಡುತ್ತದೆ.
ಉತ್ತರ ಕರ್ನಾಟಕದ ಮಂದಿ ಮಾತಿನಲ್ಲಿ ಅಷ್ಟೇ ಉಡಾಳರು. ಆದರೆ ಮನಸ್ಸಿನಿಂದ ಮಗುವಿನಂಥರು ಎಂದು ತೆರೆಯ ಮೇಲೆ ಸಂಪೂರ್ಣವಾಗಿ ಸಾಬೀತಾಗಿದೆ. ಅವರ ಮಾತುಗಳಿಂದಾಗುವ ಯಡವಟ್ಟು, ಹಾಸ್ಯ ಮನೋಭಾವಗಳು, ಸುಡುವ ಬಿಸಿಲಿನಂತಾ ಕೋಪ ಎಲ್ಲವೂ ಕಥೆಗೆ ಪೂರಕವಾಗಿ ಹೊದಿಕೆಯಂತೆ ಆವರಿಸಿಕೊಂಡಿವೆ. ಎರಡನೇ ಕಥಾನಾಯಕನಾಗಿ ಪ್ರಮೋದ್ ತೆರೆಯ ಮೇಲೆ ವಿಜೃಂಭಿಸಿದ್ದಾರೆ. ಅವರ ಮುಗ್ಧ ಅಭಿನಯ ಹಾಗೂ ಮಾತಿನ ಸೊಗಡು ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸುತ್ತದೆ. ಮತ್ತೆ ಅಲ್ಲೊಂದು ರಹಸ್ಯ ಬಯಲಾಗಿ ಎರಡನೇ ಕಥಾನಾಯಕ ತನ್ನ ಹೆತ್ತವಳನ್ನು ಹುಡುಕಲು ಶುರುಮಾಡಿ, ಸೋತು, ಪ್ರಸ್ತುತ ಸತ್ಯವನ್ನು ಒಪ್ಪಿಕೊಳ್ಳುತ್ತಾನೆ. ಮೊದಲ ಕಥಾನಾಯಕ ತನ್ನ ಹೆತ್ತವಳನ್ನು ಹುಡುಕುವಲ್ಲಿ ಯಶಸ್ವಿಯಾಗಿ, ತನ್ನನ್ನ ಸಾಕಿದವಳನ್ನು ಕಳೆದುಕೊಳ್ಳುತ್ತಾನೆ. ಹೀಗೆ ಚಿತ್ರದುದ್ದಕ್ಕೂ ಸಂಬಂಧಗಳ ಗಟ್ಟಿತನದ ಹುಡುಕಾಟ ಸಾಗುತ್ತಾ.. ಕೊನೆಯೇ ಇಲ್ಲದಂತೆ ಅದೃಶ್ಯವಾಗುತ್ತದೆ.
ಸರಳ ಛಾಯಾಗ್ರಹಣ, ಮನಸ್ಸು ತಟ್ಟುವ ಸಂಭಾಷಣೆ, ಒಗ್ಗುವ ಸಂಗೀತ, ಕಲಾವಿದರ ಹಾಗೂ ತಂತ್ರಜ್ಞರ ಒಟ್ಟು ಪರಿಶ್ರಮ.. ಪ್ರೇಕ್ಷಕರ ಕಣ್ಣೀರಾಗಿ ಹರಿಯುತ್ತದೆ. ಇಂಗ್ಲೀಷ್ ಬೇಡಿಕೆ, ಯಲ್ಲವ್ವ ದೇವಿ ರೂಪದ ಮಾನವೀಯತೆ, ಉತ್ತರ ಕರ್ನಾಟಕ, ಹಿಮಾಚಲ ಹಾಗೂ ಬೆಂಗಳೂರುಗಳಂತಹ ಸುಂದರ ಸ್ಥಳಗಳು ಎಲ್ಲವೂ ಪ್ರೇಕ್ಷಕರ ಕಣ್ ಕಟ್ಟುತ್ತವೆ. ಕಥೆಯೇ ಇಲ್ಲದ ಚಿತ್ರಗಳು ನಿರ್ಮಾಣವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಮನಸ್ಸಿಗೆ ಹಿಡಿಸಿದ ಒಂದೊಳ್ಳೆ ಚಿತ್ರ ‘ರತ್ನನ್ ಪ್ರಪಂಚ’. ಸಾಯೋದ್ರೊಳಗೆ ಒಮ್ಮೆ ಜೋಗದ್ ಗುಂಡಿ ನೋಡಿ ಅಂತ ಹಿರಿಯರು ಹೇಳಿದ್ದಾರೆ. ಹಾಗೆಯೇ ‘ಪ್ರಪಂಚ ಬಿಟ್ಟೋಗೋಕ್ ಮುಂಚೆ ಒಮ್ಮೆ ರತ್ನನ್ ಪ್ರಪಂಚ ನೋಡಿ’ ಅನ್ನೋ ಲೇಟೆಸ್ಟ್ ಉಕ್ತಿಯಾಗುವಷ್ಟು ಚಲನಚಿತ್ರ ಪರಿಣಾಮಕಾರಿಯಾಗಿ ಎಲ್ಲರನ್ನೂ ಮುಟ್ಟುವಲ್ಲಿ ಯಶಸ್ವಿಯಾಗಿದೆ.
ತಂಡಕ್ಕೆ ಶುಭ ಕೋರುತ್ತಾ.. ಇಂತಹ ಇನ್ನಷ್ಟು ಅದ್ಭುತ ಚಿತ್ರಗಳು ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..