- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಅಲ್ಲಿ ಸಡಗರ ಮನೆಮಾಡಿತ್ತು
ಕವಿ ಸತ್ತಿದ್ದ
ಚರ್ಚೆ ನಡೆದಿತ್ತು ಬಿಸಿ ಬಿಸಿ
ಅಂತ್ಯಕ್ರಿಯೆ
ಸರ್ಕಾರಿಯೋ ಸಾರ್ವಜನಿಕವೋ ಸಾಂಸಾರಿಕವೋ
ಪೋಲೀಸರು ಬರುವರೇ,ಎಷ್ಟು ನಕ್ಷತ್ರದವರು
ಸಂಸ್ಕೃತಿ ಮಂತ್ರಿಯೋ ಅಥವಾ ಮುಖ್ಯರೋ
ಪ್ರತಿಕೆಯವರು ಟೀವಿಯವರು
ಗಣ್ಯರು ಅತಿಗಣ್ಯರು ಅಗಣ್ಯರು
ಶಾಮಿಯಾನ, ಐಸ್ಬಾಕ್ಸು ಹಾರ
ಇವರೆಂದರು
ಕವಿ ದೊಡ್ಡವ ಬರೆದದ್ದು ರಾಶಿ ರಾಶಿ
ಶತಮಾನಗಳ ವಿಬುಧ ಕವಿಗಳ
ಸಾಲಿನಲಿ ಹೊಳೆವ ನಕ್ಷತ್ರ
ಸಂಪ್ರದಾಯದೊಳಗಿದ್ದೂ ಹೊರಗಾದವನು
ವಿರೋಧಿಸಿ ಓಲೈಸಿದವನು
ವಿಚಾರವಾದಿ ಚಿಂತಕ ಮೇಲಾಗಿ ದಾರ್ಶನಿಕ
ಮುಂದೆ ಶತಮಾನಗಳ ಕಾಲ ಜನರು
ಇವನನೋದುವರು ಸ್ಮರಿಸುವರು.
ಎಲ್ಲಿ ಅಂತ್ಯಕ್ರಿಯೆ
ರಾಜಾಪುರ ಸ್ಮಶಾನ ರಾಜಕಾರಣಿಗಳಿಗೆ
ನಟನಾಪುರವು ನಟವರ್ಯರಿಗೆ
ಹ್ಞಾ.. ಸಾಹಿತಿಗಳಿಗೆ ಬರೆಪುರವೋ
ಏನೂ ಬರೆಯದವರಿಗೂ ಬರೆಪುರ !
ಆ ಪುಂಗಿ ಕವಿಗೂ ಅಲ್ಲೆ !!
ಸರ್ಕಾರದ ಮರ್ಜಿ
ಆ ಪ್ರಶಸ್ತಿ ಈ ಪ್ರಶಸ್ತಿಗಳ ಮಡಿಲಿಗೇರಿಸಿದ ಮುಕುಟಮಣಿಯಿವಗೆ ಅಲ್ಲೇ ಆಗಬೇಕು.
ಕಟ್ಟೆ ಕಟ್ಟಿ ಬೋರ್ಡು ಹಾಕಬೇಕು
ವರ್ಷವರ್ಷೇ ನೆನಪು ಭಾಷಣಗಳು
ಒಂದೆರಡು ಪ್ರಶಸ್ತಿ ಎದೆಮಟ್ಟದ ಮೂರ್ತಿ, ಅಧ್ಯಯನ ಪೀಠ ಹ್ಞು.. ಆಗಬೇಕು ,
ಅಂದಹಾಗೆ ಓಟಿನ ಜಾತಿಯವನಲ್ಲವೇ
ಚರ್ಚೆ ಕಾವೇರುತ್ತಿತ್ತು,
ಅವರು ಇವರು ಬಾರದಿದ್ದರೆ
ಇವೆಲ್ಲಾ ಘೋಷಣೆಯಾಗದಿದ್ದರೆ
ಧರಣಿ, ಹೆಣದ ಮೆರವಣಿಗೆ ಪತ್ರಿಕಾ ಹೇಳಿಕೆ.
ಕವಿ ಹೇಳಿದ್ದ, ಶಾಶ್ವತರು ಯಾರಿಲ್ಲ
ಸೂರ್ಯ ಚಂದ್ರರನುಳಿದು
ಬುವಿಯ ತೆರೆದಿಡುವ ಮುಂದಿನವರಿಗೆ
ಸಮಾಧಿಗಳ ಕಟ್ಟದರೆ ಉಳಲು ನೆಲವೆಲ್ಲಿ ಉಳಿದವರಿಗೆ ತಾವೆಲ್ಲಿ.
ಅಲ್ಲಿ ಸರಕಾರದ ಗುಡಿಯಲ್ಲಿ
ಇವನಾರವ ಇವನಾರವ
ಎಡ ಬಲವೋ ಮಧ್ಯಮನೋ
ಆ ದಾರ ಈ ದಾರ ಯಾವುದವನ ಆಧಾರ
ಯಾರೂ ಕಾಣುತ್ತಿಲ್ಲ
ನಡೆಯಿರಿ ಮುಮಂ ಮನೆಗೆ
ನುಡಿದನೊಬ್ಬ ಕ್ರಾಂತಿಕಾರಿ
ಅವನಾಗಲೆ ಸಂತಾಪದೊಂದಿಗೆ
ಕ್ರಾಂತಿಯ ದೊಂದಿ ಹಿಡಿದಿದ್ದ
ಮಧ್ಯಾನ್ಹವಾಯಿತು, ಸಂಜೆ… ಜನ ಕರಗಿತು.
ಮುಂದಿನ ಹೋರಾಟ ಮಾರ್ಗ ನಾಳೆ ತಿಳಿಸುವೆವು ಎಂದವ ಕಾಣದಂತೆ ಜಾರಿದ್ದ.
ಸಂಜೆಗತ್ತಲು
ಕವಿಯ ಮಗ ಬಂದ, ಅಮೇರಿಕೆ ಪೌರ.
ಕನ್ನಡಬಾರದ ಕನ್ನಡದ ಕಂದ
Whom are we waiting for
ಅಂದವ ಅಪ್ಪನ ಹೆಣವ ಗಾಡಿಗೇರಿಸಿ
ಸ್ಮಶಾನದ ಕಡೆಗೆ ಹೊರಟ.
ಚಿತ್ರ ಕೃಪೆ ಚಾರ್ಲ್ಸ್ ದೆಮುತ್ ಪಬ್ಲಿಕ್ ಡೊಮೇನ್ ೧೯೧೭
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ