ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಿಕ್ಷಾ ಪುರಾಣ

ಶೀಲಾ ಪೈ
ಇತ್ತೀಚಿನ ಬರಹಗಳು: ಶೀಲಾ ಪೈ (ಎಲ್ಲವನ್ನು ಓದಿ)

ಹುಟ್ಟಿದೂರನ್ನು ಬಿಟ್ಟು ನಮ್ಮ ದೇಶದ ವಿವಿಧ ರಾಜ್ಯಗಳ ನಗರಗಳಲ್ಲಿ ವಾಸಮಾಡಿದ ನನಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜೀವನದ ಪಾಠಗಳನ್ನು ಕಲಿಸಿದ ಅನೇಕರಲ್ಲಿ ಆಟೋರಿಕ್ಷಾ ಚಾಲಕರು ಬಹುಮುಖ್ಯವಾದವರು ಎಂದರೆ ಉತ್ಪ್ರೇಕ್ಷೆಯಾಗಲಾರದು.

ಮೊದಲಿನಿಂದಲೂ ನನಗೆ ಅಟೋರಿಕ್ಷಾದಲ್ಲಿ ಪ್ರಯಾಣಿಸುವುದೆಂದರೆ ಬಹಳ ಇಷ್ಟ. ಸುಯ್ಯೆಂದು ಓಡಿ , ಒಳದಾರಿಗಳಲ್ಲಿ ನುಗ್ಗಿ, ಗಲ್ಲಿ ಗಲ್ಲಿಗಳಲ್ಲಿ ನುಸುಳಿ ಶೀಘ್ರವಾಗಿ ಗಮ್ಯಸ್ಥಾನವನ್ನು ತಲುಪಿಸುವ ರಿಕ್ಷಾ ಬೇರೆಲ್ಲಾ ವಾಹನಗಳಿಗಿಂತ ಹೆಚ್ಚು ಅನುಕೂಲಕರ ಎಂದು ಕಾಣಿಸುತ್ತದೆ. ಇವೇ ಅನುಕೂಲಗಳು ದ್ವಿಚಕ್ರ ವಾಹನಗಳಲ್ಲಿಯೂ ಇವೆ. ಆದರೆ ಅಲ್ಲಿ ಬಿಸಿಲು ಮಳೆಯಿಂದ ರಕ್ಷಣೆ ಇಲ್ಲ. ರಿಕ್ಷಾ ಆದರೆ ಹತ್ತಿದ ದುಡ್ಡು ಕೊಟ್ಟ ಇಳಿದ. ವಾಹನ ಚಲಾಯಿಸುವ, ಪಾರ್ಕಿಂಗ್ ಮಾಡುವ ರಗಳೆಗಳಿಲ್ಲ . ಮೇಲಿಂದ ಬಹಳಷ್ಟು ಸಲ ಮರೆಯಲಾಗದಂತಹ ಸಿಹಿ ಕಹಿ ಅನುಭವಗಳನ್ನು ಪುಕ್ಕಟೆಯಾಗಿ ಒದಗಿಸುತ್ತದೆ.

ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ರಾಜರಸ್ತೆಗಳ ಇಕ್ಕೆಲಗಳಲ್ಲಿ ಮೈತುಂಬ ತಿಳಿಗುಲಾಬಿ, ಕಡುಗೆಂಪು ,ಕೇಸರಿ ಬಣ್ಣದ ಹೂವುಗಳನ್ನು ಹೊತ್ತುಕೊಂಡು ಹೆಮ್ಮೆಯಿಂದ ಆಕಾಶದೆತ್ತರಕ್ಕೆ ಮುಖಮಾಡಿ ನಿಲ್ಲುವ ಮರಗಳ ಸೊಬಗನ್ನು ಪೂರ್ತಿಯಾಗಿ ಆಸ್ವಾದಿಸಬೇಕಾದರೆ ರಿಕ್ಷಾದಲ್ಲಿಯೇ ಹೋಗಬೇಕು ಎಂದು ನನ್ನ ಮತ. ಅಂತಹ ಸಮಯದಲ್ಲಿ ಎಂ ಜಿ ರೋಡು , ಅಲಸೂರು, ರಿಚ್ಮಂಡ್ ಸರ್ಕಲ್ಲಿನ ಸುತ್ತ ಮುತ್ತಲಿನ ಅಗಲವಾದ ರಸ್ತೆಗಳಲ್ಲಿ ರಿಕ್ಷಾದಲ್ಲಿ ಕುಳಿತು ಹೋಗುವಾಗ ಕತ್ತು ಹೊರಗಡೆ ತಿರುಗಿಸಿ ಕುಳಿತರೆ ಮಾತೂ ಬೇಕಾಗುವುದಿಲ್ಲ, ಪಕ್ಕದಲ್ಲಿ ಯಾರು ಕುಳಿತಿದ್ದಾರೆ ಎನ್ನುವುದೂ ಮರೆತು ಹೋಗುತ್ತದೆ

ಒಂದು ಸಲ ಊರಿನಿಂದ, ಜಯನಗರದ ನಮ್ಮ ಮನೆಗೆ ಬಂದಿದ್ದ ಸ್ನೇಹಿತರೊಬ್ಬರನ್ನು ಬಿಡಲೆಂದು ಜೆಪಿ ನಗರಕ್ಕೆ ರಿಕ್ಷಾದಲ್ಲಿ ಹೋಗಿದ್ದೆ. ಅವರನ್ನು ಬಿಟ್ಟು ವಾಪಸ್ಸು ಬರುವಾಗ ಕತ್ತಲೆಯಾಗಿತ್ತು. ಚಾಲಕನಿಗೆ ಅದೇನೆನಿಸಿತೋ “ ಇವತ್ತೇನು ವಿಶೇಷ ಹೇಳಿ” ಎಂದು ಪ್ರಶ್ನೆ ಹಾಕಿದ. ನನಗೆ ಗೊತ್ತಾಗಲಿಲ್ಲ . “ ಎಂತಹ ಕನ್ನಡಿಗರು ರೀ ನೀವು? ರಾಜ್ಯೋತ್ಸವದ ದಿನ ಎಂದು ಕೂಡ ಗೊತ್ತಿಲ್ವಾ? ನಿಮ್ಮಂತಹವರಿಂದಲೇ ನಮ್ಮ ಕನ್ನಡ ಭಾಷೆ ಹಾಳಾಗುತ್ತಿರುವುದು” ಎಂದೆಲ್ಲ ಚೆನ್ನಾಗಿ ನನ್ನ ಮುಖಕ್ಕೆ ಉಗಿದುಬಿಟ್ಟ. ನಿಜಕ್ಕೂ ನನ್ನ ಇಬ್ಬರು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವಷ್ಟರಲ್ಲಿ ಸೋತು ಸುಣ್ಣವಾಗುತ್ತಿದ್ದ ನನಗೆ ಆವತ್ತು ನವೆಂಬರ್ ಒಂದು ಎಂದು ನೆನಪೇ ಇರಲಿಲ್ಲ. ರಿಕ್ಷಾ ಚಾಲಕನ ಕನ್ನಡಾಭಿಮಾನ ಕಂಡು ಬಹಳ ಸಂತೋಷವಾಗಿತ್ತು. ಅವನಿಗೇನು ದಿನ ನಿತ್ಯದ ಪರದಾಟಗಳು , ಸಂಸಾರ ತಾಪತ್ರಯಗಳಿರುವುದಿಲ್ಲವೇ? ಆದರೆ ಅದಕ್ಕೂ ಮೀರಿ ಕನ್ನಡ ಭಾಷೆಯ ಬಗೆಗಿನ ಅವನ ಕಳಕಳಿ, ಅಭಿಮಾನ ಶ್ಲಾಘನೀಯ. ಅವನ ಮಾತುಗಳು ನನ್ನಲ್ಲಿ ಹೊಸ ಅರಿವನ್ನು ಹುಟ್ಟು ಹಾಕಿದವು.

ನನ್ನ ಆಪ್ತ ಸ್ನೇಹಿತೆಯೊಬ್ಬಳು ಜಯನಗರಕ್ಕೆ ಸ್ವಲ್ಪ ದೂರದ ಬಡಾವಣೆಯೊಂದರಲ್ಲಿ ಹೊಸ ಮನೆ ಕಟ್ಟಿಸಿಕೊಂಡು ಹೊರಟುಹೋಗಿದ್ದಳು . ಹಾಗೆಂದು ಸ್ನೇಹವನ್ನು ಬಿಡಲಾಗುತ್ತದೆಯೇ? ನಾನು ಆಗಾಗ ರಿಕ್ಷಾ ಮಾಡಿಕೊಂಡು ಅವಳ ಮನೆಗೆ ಹೋಗುತ್ತಿದ್ದೆ. ಮುಖ್ಯರಸ್ತೆಯಿಂದ ಒಳಗೆ ಹೋಗುವ ಕಲ್ಲುಮಣ್ಣಿನ ದಾರಿ ಬರೀ ಬುರ್ನಾಸು. ಒಂದು ಸಾರಿ ಹೋದಾಗ ಅವಳಿಗೆ ನನ್ನನ್ನು ನೋಡಿ ಕಣ್ಣಲ್ಲಿ ನೀರೇ ಬಂದಿತ್ತು . “ರಸ್ತೆ ಚೆನ್ನಾಗಿಲ್ಲವೆಂದು ಬೇರೆ ಯಾವ ನೆಂಟರೂ ,ಸ್ನೇಹಿತರೂ ಬರುವುದನ್ನೇ ಬಿಟ್ಟಿದ್ದಾರೆ. ಕಾರು ಹಾಳಾಗುತ್ತದೆ ,ರಿಪೇರಿ ಬರ್ತದೆ ಅಂತ. ನೀನಾದ್ರೂ ರಿಕ್ಷಾದಲ್ಲಿ ಬರ್ತಿ, ಅವರೆಲ್ಲಾ ಹಾಗೆ ರಿಕ್ಷಾ ಹತ್ತುವ ಜನರಲ್ಲ” ಅಂದಳು. ರಿಕ್ಷಾ ಹತ್ತುವುದಕ್ಕೂ , ಸಾಮಾಜಿಕ ಸ್ಥಾನಮಾನಗಳಿಗೂ ಸಂಬಂಧವುಂಟು ಎಂದು ನನಗೆ ಅವತ್ತೇ ಗೊತ್ತಾಗಿದ್ದು.

ಮುಂದೆ ಚೆನ್ನೈಗೆ ವಾಸಕ್ಕೆ ಹೋದಾಗ ಈ ನನ್ನ ಅನುಭವಗಳಿಗೊಂದು ಹೊಸ ಆಯಾಮ ಸಿಕ್ಕಿತ್ತು. ಚೆನ್ನೈಯ ರಿಕ್ಷಾ ಚಾಲಕರು ಎಂದರೆ ಒಂದು ರೀತಿಯ ತುಂಡರಸರಿದ್ದಂತೆ. ಮೀಟರನ್ನು ನಾಮಕಾವಾಸ್ತೆಗೆ ಇಟ್ಟುಕೊಂಡು, ಹತ್ತುವವರ ಮುಖ ನೋಡಿ ತಮ್ಮ ಮನಸ್ಸಿಗೆ ತೋಚಿದಷ್ಟು ಬಾಡಿಗೆ ನಿಗದಿ ಮಾಡುವವರು. ಮೊದಲೇ ಸರಿಯಾಗಿ ಬಾಡಿಗೆ ನಕ್ಕಿ ಮಾಡಿದೆವೋ ನಾವು ಬಚಾವ್ ಇಲ್ಲದಿದ್ದರೆ ತಮಿಳಿನಲ್ಲಿ ಸಿಕ್ಕಾಪಟ್ಟೆ ಮಾತನಾಡಿ ತಲೆ ಕೆಡಿಸಿಬಿಡುವಲ್ಲಿ ನಿಸ್ಸೀಮರು. ಯಾಕಾದರೂ ಇವರ ರಿಕ್ಷಾ ಹತ್ತಿದೆವೋ ಎಂದು ಪರಿತಪಿಸುವಂತೆ ಮಾಡಿಬಿಡುತ್ತಾರೆ. ಬೆಂಗಳೂರಿನಲ್ಲಿ ಮೀಟರ್ ನೋಡಿ ದುಡ್ಡುಕೊಟ್ಟು ಎಲ್ಲೆಂದರಲ್ಲಿಗೆ ರಿಕ್ಷಾದಲ್ಲಿ ಹೋಗುವ ಸೌಕರ್ಯದ ಮಹತ್ವ ತಿಳಿಯಬೇಕಾದರೆ ಚೆನ್ನೈಯ ರಿಕ್ಷಾ ಚಾಲಕರ ಉಡಾಪಿ ನೋಡಿ ಅನುಭವಿಸಬೇಕು. ಕಾಟನ್ ಸೀರೆ ಉಟ್ಟು ಕೈಯಲ್ಲಿ ದೇವರನಾಮದ ಪುಸ್ತಕ ಹಿಡಿದು ಸಂಜೆಯ ಹೊತ್ತು ತಿರುಗುವ ಪಾಟಿ ( ಅಜ್ಜಿ) ಯರನ್ನು ಹತ್ತು ರೂಪಾಯಿಗೇ ರಿಕ್ಷಾದಲ್ಲಿ ಕೂರಿಸಿಕೊಂಡು ಹೇಳಿದಲ್ಲಿಗೆ ತಂದು ಬಿಡುವ ದಯಾಮಯಿ ಚಾಲಕರು ನಮ್ಮಂತಹ ಹೊರರಾಜ್ಯದ, ತಮಿಳು ಬರದವರನ್ನು ಕಂಡೊಡನೆ ಹೆಬ್ಬುಲಿಗಳಾಗಿಬಿಡುವುದು ಆಶ್ಚರ್ಯವೇ ಸೈ. ಮೊದಲೆರಡು ವರ್ಷ ಅಷ್ಟೇ. ಆಮೇಲೆ ಹರುಕುಮುರುಕು ತಮಿಳು ಕಲಿತು ನಾನೂ ತಯಾರಾಗಿಬಿಟ್ಟೆ. ಮನೆಯ ಮುಂದೆಯೇ ರಿಕ್ಷಾ ಸ್ಟ್ಯಾಂಡ್ ಇದ್ದರೂ ಹತ್ತದೆ , ಅದಾಗಲೇ ರಸ್ತೆಯಲ್ಲಿ ಓಡುತ್ತಿರುವ ಆಟೋಗಳನ್ನೇ ಹತ್ತಬೇಕೆಂಬ ಪಾಠ ಕಲಿತೆ .

ನಮ್ಮ ಮನೆಯ ಮುಂದಿನ ಸ್ಟ್ಯಾಂಡ್ ನಲ್ಲಿ ಒಬ್ಬ ಚಿಕ್ಕ ವಯಸ್ಸಿನ ಚಾಲಕನಿದ್ದ. ಅವನ ರಿಕ್ಷಾ ಅಂದರೆ ಅದು ಯಾವ ಒಂದು ಲಕ್ಷುರಿ ಕಾರಿಗೂ ಕಮ್ಮಿಯದಲ್ಲ. ಹೊಚ್ಚಹೊಸ ಮಾಡೆಲ್ ನ ರಿಕ್ಷಾದ ಒಳಗೆ ನೋಡುಗರು ದಂಗಾಗುವಂತಹ ಒಳ್ಳೆಯ ಕೆಂಪುಬಣ್ಣದ ಮೆತ್ತಗಿನ ಸೋಫಾ ಸೀಟು ಕೂರಿಸಿ ಒಳಾಂಗಣ ವಿನ್ಯಾಸಗಳನ್ನು ಒಂದಕ್ಕೊಂದು ಒಪ್ಪುವಂತಹ ಬಣ್ಣಗಳಿಂದ ಅಲಂಕರಿಸಿದ್ದ ಆ ಆಟೋಗೆ ಕಿಂಗ್ ಆಟೋ ಎಂದೇ ಹೆಸರಿಟ್ಟಿದ್ದೆವು . ಕಾಲಿರಿಸಲು ಹಾಕಿದ ಮ್ಯಾಟ್ ನ ಗುಣಮಟ್ಟ ನೋಡಿದರೆ ಕಾಲಿಡುವ ಮನಸ್ಸಾಗುತ್ತಿರಲಿಲ್ಲ . ಒಂದು ಧೂಳಿನ ಕಣವೂ ಇರದಂತೆ ರಿಕ್ಷಾವನ್ನು ಯಾವಾಗಲೂ ಒರೆಸುತ್ತಲೇ ಇರುವುದನ್ನು ನಮ್ಮ ಬಾಲ್ಕನಿಯಿಂದ ಹಲವಾರು ಸಲ ನೋಡಿದ್ದೆ. ಅವನಿಗೆ ತನ್ನ ವೃತ್ತಿಯ ಮೇಲಿದ್ದ ಶ್ರದ್ಧೆ , ವಾಹನದ ಮೇಲಿರುವ ಮೋಹ ನೋಡಿ ಖುಷಿಯಾಗುತ್ತಿತ್ತು.

ಹ್ಯಾರಿಂಗ್ ಟನ್ ರೋಡಿನ ಅಡಿಟೋರಿಯಂ ಒಂದರಲ್ಲಿ ಶಬಾನಾ ಆಜ್ಮಿಯವರ ಏಕಪಾತ್ರಾಭಿನಯದ ” ಬ್ರೋಕನ್ ಇಮೇಜಸ್ ” ಪ್ರದರ್ಶನವಾದಾಗ ಹೋಗದೆ ಬಿಡುವುದುಂಟೆ? ನಮ್ಮ ಮನೆಯಿಂದ ಬರೀ ನಾಲ್ಕು ಕಿಲೋಮೀಟರ್ ಗಳು. ಒಬ್ಬಳೇ ಹೋಗಿದ್ದೆ. ವಿಶಿಷ್ಟ ಕಥಾವಸ್ತು, ಗಿರೀಶ್ ಕಾರ್ನಾಡರು ಬರೆದ ನಾಟಕ , ಅದ್ಭುತವಾಗಿ ನಟಸಿದ ಶಬಾನಾ ಅವರನ್ನು ರಂಗದಮೇಲೆ ನೋಡಿ, ಸಭಿಕರೊಂದಿಗಿನ ಅವರ ಪ್ರಶ್ನೋತ್ತರಗಳನ್ನೆಲ್ಲಾ ಕೇಳಿ ಆನಂದಿಸಿ ಬಾನಿನಲ್ಲಿಯೇ ತೇಲುತ್ತಾ ಹೊರಗೆ ಬಂದು ಸಿಕ್ಕಿದ್ದ ಆಟೋ ಹತ್ತಿದ್ದೆ . ನೂರು ಮೀಟರ್ ಹೋದೆವೋ ಇಲ್ಲವೋ ರಿಕ್ಷಾ ಗೂಳಿಯಂತೆ ಗುಟುರು ಹಾಕಲಾರಂಭಿಸಿತು . ರಾತ್ರಿಯ ಒಂಬತ್ತು ಗಂಟೆಯ ಮೇಲಾಗಿತ್ತು. ಗಡ ಗಡ ನಡುಗುತ್ತಾ ಸ್ವಲ್ಪ ದೂರ ಹೋಗುತ್ತದೆ, ಗಕ್ಕನೆ ನಿಲ್ಲುತ್ತದೆ . ಮತ್ತೆ ಗಾಡಿ ಸ್ಟಾರ್ಟ್ ಮಾಡಿದರೆ ,ಅದೇ ಪುನರಾವರ್ತನೆ. ನನಗೋ ಜೀವದ ಮೇಲೆ ಆಸೆ , ಚಾಲಕನಿಗೆ ಪೂರ್ತಿ ದುಡ್ಡು ಕೊಟ್ಟು ಬದುಕಿದೆಯಾ ಬಡಜೀವವೇ ಎಂದು ಇಳಿದುಬಿಟ್ಟೆ . ನಿರ್ಜನ ರಸ್ತೆ ಅದು ಬೇರೆ ಆಟೋ ಆ ಹೊತ್ತಿನಲ್ಲಿ ಸಿಗುವಂತಿರಲಿಲ್ಲ ನಡೆದುಕೊಂಡೇ ಹೋಗಿ ಆಮೇಲೆ ಸಿಕ್ಕಿದ ಒಂದು ಆಟೋ ಹಿಡಿದು ಅಂತೂ ಇಂತೂ ಮನೆ ಸೇರಿದೆ.

ಫೋನಿನಲ್ಲಿ ಮಾತನಾಡುತ್ತಾ ರಿಕ್ಷಾ ಓಡಿಸುವವರು, ಗಟ್ಟಿಯಾಗಿ ಹಾಡುಗಳನ್ನು ಹಾಕುವವರು , ಟ್ರಾಫಿಕ್ ನಿಯಮಗಳನ್ನು ಪಾಲಿಸದೆ ಅಡ್ಡಾದಿಡ್ಡಿ ನುಗ್ಗಿಸುವವರು, ದಾರಿಯಲ್ಲಿ ಸಿಕ್ಕಿದ ಉಳಿದ ರಿಕ್ಷಾದವರಿಗೆ ಬೈಯುತ್ತಲೋ , ಮಾತನಾಡುತ್ತಲೋ ಚಲಾಯಿಸುವವರು ಹೀಗೆ ಹಲವಾರು ನಮೂನೆಯ ಚಾಲಕರಿದ್ದಾರೆ. ನಾವು ಹತ್ತಿದ ಕೂಡಲೇ ಪಕ್ಕದಲ್ಲಿರುವ ಪೆಟ್ರೋಲ್ ಪಂಪಿಗೆ ಓಡಿಸಿ ನಮ್ಮ ಹತ್ತಿರವೇ ದುಡ್ಡು ತೆಗೆದುಕೊಂಡು ಪೆಟ್ರೋಲು ಹಾಕಿಸಿಕೊಳ್ಳುವುದು ಚೆನ್ನೈ ರಿಕ್ಷಾದವರ ಮಾಮೂಲಿ ಅಭ್ಯಾಸ . ಹತ್ತಿಸಿಕೊಳ್ಳುವ ಮೊದಲು ಹತ್ತು ಪ್ರಶ್ನೆಗಳನ್ನು ಕೇಳಿ ತಮಗೆ ಮೋಸವಾಗದಂತೆ ನೋಡಿಕೊಳ್ಳುವ ಚಾಲಕರು ಚಿಲ್ಲರೆ ವಾಪಸು ಕೊಡುವಾಗ ಮಾತ್ರ ಬಹಳ ಹಿಂದೆ ಮುಂದೆ ನೋಡುತ್ತಾರೆ, ಐದು ,ಹತ್ತು ರೂಪಾಯಿಗಳನ್ನು ಹಿಡಕೊಂಡು ಬಿಡುವುದು ಮಾಮೂಲು. ಇವರೊಡನೆ ಜಗಳವಾಡುವುದಕ್ಕೂ ಇಲ್ಲ, ದುಡ್ಡು ಬಿಡುವಂತೆಯೂ ಇಲ್ಲ ಏಕೆಂದರೆ ಅದಾಗಲೇ ನ್ಯಾಯವಾಗಿ ಚಾರ್ಜ್ ಮಾಡುವುದಕ್ಕಿಂತ ಎರಡು ಮೂರು ಪಟ್ಟು ಹೆಚ್ಚಿನ ಬಾಡಿಗೆ ತೆತ್ತಾಗಿರುತ್ತದೆ , ಹೀಗೆಂದೇ ಹತ್ತು ಇಪ್ಪತ್ತು ರೂಪಾಯಿಯ ನೋಟುಗಳನ್ನು ರಿಕ್ಷಾದಲ್ಲಿ ಹೋಗುವಾಗ ಉಪಯೋಗಿಸಲೆಂದೇ ಬೇರೆಯೊಂದು ಪರ್ಸಿನಲ್ಲಿ ಇಟ್ಟಿರುವ ಅಭ್ಯಾಸ ಮಾಡಿಕೊಂಡಿದ್ದೇನೆ. ಪ್ರಶ್ನೆ ದುಡ್ಡಿನದಲ್ಲ, ನಿಯತ್ತಿನದ್ದು .ಒಂದು ಸಲ ಬಾಡಿಗೆ ಇಂತಿಷ್ಟೆಂದು ನಿಗದಿ ಮಾಡಿದ ಮೇಲೆ ಇನ್ನೂ ಹೆಚ್ಚು ಸೆಳೆಯುವ ದುರ್ಬುದ್ದಿ ಯಾಕೆ? ಅದಕ್ಕಿಂತ ಮೀಟರು ಹಾಕಿ ಓಡಿಸಬಾರದೇ ? ಎಲ್ಲರೂ ಹೀಗೆಯೇ ಎಂದಿಲ್ಲ, ‌ ಕೆಲವರು ಬಹಳ ಒಳ್ಳೆಯವರಿರುತ್ತಾರೆ, ಯಾವಾಗಲೂ ನೆನಪಿನಲ್ಲುಳಿಯುತ್ತಾರೆ. ಇಂತಹ ಒಂದು ಅನುಭವ ಮಗನೊಡನೆ ಪಿಟಿಎ ಮೀಟಿಂಗ್ ಎಂದು ಅವನ ಶಾಲೆಗೆ ರಿಕ್ಷಾದಲ್ಲಿ ಹೋದಾಗ ಆಗಿತ್ತು. ಹೋದ ಕೆಲಸ ಮುಗಿಸಿ ವಾಪಸ್ಸು ಬಂದು ಮನೆಯ ಬೀಗ ತೆಗೆಯುವಷ್ಟರಲ್ಲಿ ಅವನು ಹೊಸ ನೋಕಿಯಾ ಫೋನನ್ನು ರಿಕ್ಷಾದಲ್ಲಿ ಬಿಟ್ಟುಬಂದಿದ್ದೇನೆ ಎಂದು ಹೇಳಿದ. ಕೂಡಲೇ ಇನ್ನೊಂದು ರಿಕ್ಷಾ ಮಾಡಿಕೊಂಡು ಶಾಲೆಗೆ ಹೋದೆ. ಹೊಸ ಫೋನಿಗೆ ಕಾಲ್ ಮಾಡಿದೆ ರಿಂಗಣಿಸುತ್ತಿತ್ತು ಯಾರೂ ಎತ್ತಿಕೊಳ್ಳಲಿಲ್ಲ. ಇದು ಹೋದ ಹಾಗೆ ಅಂದುಕೊಂಡೆ.

Now, luggage charge burden | Deccan Herald

ಶಾಲೆಯ ಹೊರಗೆ ಸಾಲಾಗಿ ನಿಂತ ರಿಕ್ಷಾಗಳ ಮುಂದೆ ಕೆಲವು ಚಾಲಕರು ನಿಂತುಕೊಂಡು ಹರಟೆ ಹೊಡೆಯುತ್ತಿದ್ದರು. ಅವರಲ್ಲಿ ವಿಷಯ ತಿಳಿಸಿದಾಗ ಯಾವ ರಿಕ್ಷಾ ಚಾಲಕ, ನೋಡಲು ಹೇಗಿದ್ದಾರೆ ಎಂದೆಲ್ಲ ಕೇಳಿದರು. ತಲೆ ಬೋಳಾಗಿತ್ತು ಎಂದು ಮಗ ಹೇಳಿದ.” ಓ ದಿನಕರನ? ಫೋನ್ ಮಾಡುತ್ತೇವೆ “ಎಂದು ಕೂಡಲೇ ಫೋನ್ ಮಾಡಿದರು.ಮುಂದಿನ ಹತ್ತು ನಿಮಿಷಗಳಲ್ಲಿ ಆತ ಬಂದು ನನ್ನ ಕೈಯಲ್ಲಿ ಫೋನ್ ಇಟ್ಟರು. ಎಂತಹ ಪ್ರಾಮಾಣಿಕತೆ! ಆಗಿನ್ನೂ ಮೊಬೈಲ್ ಫೋನ್ ಈಗಿನಂತೆ ಕಾಮನ್ ಆಗಿರಲಿಲ್ಲ. ನಮ್ಮನ್ನು ಮನೆಗೆ ಬಿಟ್ಟ ಆ ದಿನಕರ ಎನ್ನುವವರು ಚಹಾ ಕುಡಿಯಲೆಂದು ಹೋಗಿದ್ದರಂತೆ . ನಾನು ಕಾಲ್ ಮಾಡಿದಾಗ ಸೀಟಿನ ಮೇಲೆ ಫೋನ್ ಇದ್ದುದನ್ನು ಅವರು ಗಮನಿಸಿರಲಿಲ್ಲ. ಮತ್ತೆ ಅವರದೇ ರಿಕ್ಷಾದಲ್ಲಿ ಕುಳಿತು ಮನೆಗೆ ಬಂದೆವು. ಅವರಿಗೆ ಬಾಡಿಗೆ ಜೊತೆಗೆ ಭಕ್ಷೀಸನ್ನೂ ಕೊಟ್ಟೆ. ಅವರ ಫೋನ್ ನಂಬರನ್ನು ತೆಗೆದುಕೊಂಡು ಆಮೇಲೆ ಎಷ್ಟೋ ಸಾರಿ ಒಬ್ಬಳೇ ಹೋಗಬೇಕಾದಾಗ ಅವರ ಜೊತೆಯಲ್ಲಿಯೇ ಹೋಗುತ್ತಿದ್ದೆ .

ಇತ್ತೀಚೆಗೆ ಅಮೃತಸರಕ್ಕೆ ಹೋದಾಗ ಸಿಟಿ ಲೈಫ್ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಕುಳಿತು ಕೊಳ್ಳುವ ಅವಕಾಶ ಒದಗಿತು. ಇಬ್ಬಿಬ್ಬರು ಎದುರುಬದುರಾಗಿ ನಾಲ್ಕು ಜನ ಆರಾಮವಾಗಿ ಕುಳಿತುಕೊಳ್ಳಬಲ್ಲಂತಹ ಈ ರಿಕ್ಷಾಗಳು ನೋಡಲು ಆಕರ್ಷಕವಾಗಿರುವುದರ ಜೊತೆಗೆ ವಾಯು ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಎಲೆಕ್ಟ್ರಿಕ್ ಆಟೋ ಗಳು ಈ ಊರಿನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಕುರುಹಾಗಿ ಎಲ್ಲಿ ನೋಡಿದರಲ್ಲಿ ಈ ಆಟೋಗಳೇ ಕಾಣಿಸುತ್ತಿದ್ದವು. ಇವುಗಳನ್ನು ನೋಡಿದ ಮೇಲೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಇದನ್ನೇ ಬಳಸಿಕೊಂಡೆವು . ಪರಿಸರ ಸಂರಕ್ಷಣೆಗೆ , ಈಗಿನ ಕಾಲದ ನ್ಯೂಕ್ಲಿಯರ್ ಕುಟುಂಬಕ್ಕೆ ಹೇಳಿ ಮಾಡಿಸಿದಂತಹ ಆಟೋ ಇದು

ರಿಕ್ಷಾ ಚಾಲಕರೊಂದಿಗೆ ನನ್ನ. ” ತೂ ತೂ ಮೈ ಮೈ” ನೋಡಿ ಕೇಳಿ ರೋಸಿಹೋದ ನನ್ನ ಮಕ್ಕಳು ಇನ್ನುಮೇಲೆ ಅಮ್ಮನೊಡನೆ ರಿಕ್ಷಾದಲ್ಲಿ ಹೋಗುವುದಿಲ್ಲ ಎಂದು ಶಪಥ ಮಾಡಿದ್ದಿದೆ . ನಿಜಕ್ಕೂ ಚೆನ್ನೈನಲ್ಲಿ ತಮಿಳು ಭಾಷೆ ಸರಿಯಾಗಿ ಬರದೇ ಇದ್ದುದರಿಂದ ಆದ ತೊಂದರೆಯಿದು ಇಲ್ಲದಿದ್ದರೆ ನಾನು ಯಾರೊಂದಿಗೂ ವಾಗ್ವಾದ ಮಾಡುವವಳಲ್ಲ ಎಂದು ಅವರನ್ನು ಒಪ್ಪಿಸಲು ಪ್ರಯತ್ನಪಟ್ಟು ನಾನು ಸೋತಿದ್ದೇನೆ. ಯಾರಾದರೂ ನಮ್ಮ ಬೆಂಗಳೂರಿನ ರಿಕ್ಷಾ ಚಾಲಕರನ್ನು ದೂರಿದರೆ ನನಗೆ ನಖಶಿಖಾಂತ ಉರಿದುಬಿಡುತ್ತದೆ. ನಿಜಕ್ಕೂ ನಮ್ಮ ಕನ್ನಡದ ಜನರು, ರಿಕ್ಷಾ ಚಾಲಕರನ್ನು ಸೇರಿಸಿ, ತುಂಬಾ ಸಾಧು ಜನರು. ಇದು ಅರ್ಥವಾಗಬೇಕಾದರೆ ಬೇರೆ ಊರುಗಳ ಜನರನ್ನು ನೋಡಬೇಕು. ಹಿತ್ತಲ ಗಿಡ ಮದ್ದಲ್ಲ ಎಂದು ಕೇಳಿಲ್ಲವೇ?

ಈಗಂತೂ ಓಲಾ, ಉಬರ್ ಎಂದು ಫೋನ್ ನೋಡುವುದು, ಲೊಕೇಶನ್ ಹಾಕುವುದು ,ಬುಕ್ ಮಾಡುವುದು. ಅಷ್ಟೇ ಕೆಲಸ. ಮಾತನಾಡುವ ಅಗತ್ಯವೇ ಇಲ್ಲ. ಗಮ್ಯಸ್ಥಾನ ಬಂದಕೂಡಲೇ ಇಳಿದು ಬಿಡುವುದು. ಹಣ ಕೊಡುವ, ಚಿಲ್ಲರೆ ತೆಗೆದುಕೊಳ್ಳುವ ರಗಳೆಗಳೇ ಇಲ್ಲ . ಎಲ್ಲವೂ ಎಷ್ಟು ಸಲೀಸೋ ಅಷ್ಟೇ ಯಾಂತ್ರಿಕ ಕೂಡ. ಕೋವಿಡ್ ನಿಂದಾಗಿ, ಚಾಲಕರ ಮತ್ತು ಕುಳಿತುಕೊಳ್ಳುವವರ ಮಧ್ಯೆ ದಪ್ಪನೆಯ ಪ್ಲಾಸ್ಟಿಕ್ ಶೀಟು ಬೇರೆ. ಏನನ್ನೋ ಕಳೆದುಕೊಂಡಂತೆ ಖಾಲಿ ಖಾಲಿ ಅನಿಸುತ್ತಿರುತ್ತದೆ . ರಿಕ್ಷಾ ಏರುವಾಗ ಬಾಯಿ ಮುಚ್ಚಿಕೊಂಡಿದ್ದರೆ ಏನಿದೆ ಮಜಾ? ಅವರು ಎಲ್ಲಿಗೆ? ಎಂದು ಕೇಳಬೇಕು, ಬರುವುದಿಲ್ಲ ಅನ್ನಬೇಕು, ನಾವು ಮುಖ ತಿರುಗಿಸಿ ಸ್ವಲ್ಪ ದೂರ ಹೋಗಿ ನಿಂತು, ನಾಲ್ಕೈದು ಸಾರಿ ಆಟೋ ಆಟೋ ಎಂದು ಕೂಗಿ ಒಳಗೆ ಜನ ಇದ್ದಾರೋ ಇಲ್ಲವೋ ಕಾಣದೆ ಸಿಕ್ಕ ಸಿಕ್ಕ ಆಟೋ ಗಳನ್ನು ಕೈ ಅಡ್ಡ ಮಾಡಿ ನಿಲ್ಲಿಸುವ ಪ್ರಯತ್ನ ಮಾಡುತ್ತಿರಬೇಕು. ಒಳಗಡೆ ಅದಾಗಲೇ ಯಾರಾದರೂ ಕುಳಿತಿದ್ದರೆ ರಿಕ್ಷಾ ನಮ್ಮನ್ನು ದಾಟಿ ಹೋಗುವ ಮೊದಲು ಸಿಗುವ ಎರಡು ಕ್ಷಣಗಳಲ್ಲಿ ಅಯ್ಯೋ ಬಡಪಾಯಿ ಎಂದು ಅವರು ನಮ್ಮೆಡೆ ಕರುಣಾಪೂರಿತ ದೃಷ್ಟಿ ಬೀರಬೇಕು. ಕೊನೆಗೊಮ್ಮೆ ಯಾವುದಾದರೊಬ್ಬ ಪುಣ್ಯಾತ್ಮನ ರಿಕ್ಷಾ ಹತ್ತಿ ಕೂತು ಉಸ್ಸೆನ್ನಬೇಕು. ಇದ್ಯಾವುದೂ ಇಲ್ಲದಿರುವುದೇ ಒಂದು ಕೊರತೆಯಂತೆ ಕಾಣಿಸುತ್ತದೆ. ಅದು ಯಾವುದು ಹೇಗೆಯೇ ಇರಲಿ ರಿಕ್ಷಾದಿಂದ ಇಳಿಯುವಾಗ ಮಾತ್ರ ಚಾಲಕನ ಮುಖ ನೋಡಿ ಥ್ಯಾಂಕ್ಯೂ ಎಂದು ಹೇಳಿಯೇ ಹೇಳುತ್ತೇನೆ. .