ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೆನಪಿನ ಡಬ್ಬಿ ತೆರೆದಾಗ

"ಈ ನೆಲವನ್ನು ಯಾವತ್ತೂ ಹುಚ್ಚು ಬಳ್ಳಿಯಂತೆ ಹಬ್ಬಿರುವ ಪ್ರೇಮ ಕಾಪಾಡಿ ಕೊಂದು ಕಡೆದು ನಿಲ್ಲಿಸಿದ ಪ್ರತಿಮೆಗಳು ನಿಶ್ಯಬ್ದ ಆವರಿಸಿದಾಗೆಲ್ಲಾ ಉಸಿರಾಡುತ್ತವೆ..' ಎಂದು ನೆನಪುಗಳ ಡಬ್ಬಿಯ ತೆರೆದು ಕವಿತೆಯನ್ನು ಬರೆದವರು ಮಲ್ಲಿಕಾರ್ಜುನಗೌಡ ತೂಲಹಳ್ಳಿ.

ಟೀವಿಯಲ್ಲೀಗ
ನೀನೆ ಮೊದಲು ನೀನೆ ಕೊನೆಯೂ
ಎಂಬ ಸಿನಿಮಾ ಹಾಡು ಬಂದು ಹೋಯಿತು

ಆಕಾಶಕ್ಕೊಮ್ಮೆ ಮುಖ ಮಾಡಿ
ಕಣ್ಣಿಗೆ ಅಡ್ಡ ಬಂದ
ಲೈಟಿನ ಬೆಳಕನು ದೂಡಿ
ಭೇಟಿಯಾದಾಗೆಲ್ಲಾ
ನಾವು ನೋಡುತ್ತಿದ್ದ ನಕ್ಷತ್ರ ಹುಡುಕಿದೆ
ಕಾಣಲಿಲ್ಲ
ಈ ಹಾಡಿನಂತೆ
ನಾನು ನೀನು ಪದೇ ಪದೇ
ಇಂಥದ್ದೇ ಮಾತುಗಳನ್ನು ಹೇಳಿಕೊಂಡು
ಎಷ್ಟು ಬಾರಿ
ಮರಳಿನ ಗೂಡು ಕಟ್ಟಿ ಕೆಡವಿದ್ದೆವು?

ಹಾಡಿನ ಲಹರಿಯೊಂದು
ಈ ಕಡು ಬೇಸಗೆಯಲಿ
ಉರಿಯುವ ಮೈಗೆ
ನಿನ್ನ ಬಿಚ್ಚುಗೂದಲಿನಂತೆ
ನೀರ ಪರದೆಯ ತಾಗಿಸಿ
ನೆನಪಿನ ಡಬ್ಬಿಯ ತೆರೆಯಿತು

ಈ ನೆಲವನ್ನು
ಯಾವತ್ತೂ
ಹುಚ್ಚು ಬಳ್ಳಿಯಂತೆ ಹಬ್ಬಿರುವ ಪ್ರೇಮ
ಕಾಪಾಡಿ ಕೊಂದು
ಕಡೆದು ನಿಲ್ಲಿಸಿದ ಪ್ರತಿಮೆಗಳು
ನಿಶ್ಯಬ್ದ ಆವರಿಸಿದಾಗೆಲ್ಲಾ ಉಸಿರಾಡುತ್ತವೆ

ಈಗಲೂ ಹೊಲದ ಬದು
ಬೀಳಾದ ಬಯಲುಗಳ
ಸುಮ್ಮನೇ ತಿರುಗಿ ಹುಡುಕುತ್ತಿರುತ್ತೇನೆ
ಹೆಸರೇ ಗೊತ್ತಿಲ್ಲದ
ನೂರಾರು ಗಿಡ ಬಳ್ಳಿ ಹೂಗಳು
ಮರೆಯಲ್ಲಿ ನಗುವ ಕಾಪಿಟ್ಟುಕೊಂಡಿವೆ
ಎಲ್ಲೋ ಇರುವ ನಿನ್ನ ನೆನಪಿನಂತೆ