- ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ - ಅಕ್ಟೋಬರ್ 31, 2024
- ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ.. - ಆಗಸ್ಟ್ 23, 2024
- ನಮ್ಮೂರ ರಾಮ :ಹರವು ಶ್ರೀ ರಾಮ ಮಂದಿರ - ಜನವರಿ 20, 2024
ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ. ಅದು ನಮ್ಮ ಪ್ರಕೃತಿ, ಬದುಕು, ಜನ, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಒಂಬತ್ತನೇ ಸಂಚಿಕೆ ನಿಮ್ಮ ಮುಂದೆ…
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೇವಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ “ದಡಗ” ಗ್ರಾಮವು, ತಾಲ್ಲೂಕು ಕೇಂದ್ರವಾದ ನಾಗಮಂಗಲದಿಂದ ೩೦ ಕಿಮೀ ದೂರ ಮತ್ತು ಹಾಸನ ಬೆಂಗಳೂರು ಹೆದ್ದಾರಿಯಲ್ಲಿ ಬರುವ ಬೆಳ್ಳೂರು ಕ್ರಾಸಿನಿಂದ ೮ ಕಿಮೀ ದೂರದಲ್ಲಿದೆ.
ದಡಗಾ ಗ್ರಾಮದಲ್ಲಿ ಲಭ್ಯವಿರುವ ಶಾಸನಗಳ ಪ್ರಕಾರ ಗ್ರಾಮದ ಇತಿಹಾಸವು ಹೊಯ್ಸಳರ ಪ್ರಸಿದ್ಧ ರಾಜ ‘ವಿಷ್ಣುವರ್ಧನ’ನ ಕಾಲಕ್ಕೆ ಕೊಂಡೊಯ್ಯುತ್ತದೆ. ದಡಗನ ಕೆರೆ ಕೋಡಿ ಬಳಿ ಇರುವ ‘ಕೋಡಿಹಳ್ಳಿ’ಯು ಹಿಂದೊಮ್ಮೆ ಅಗ್ರಹಾರವಾಗಿತ್ತು. ಈ ಕೆರೆಯ ಉತ್ತರ ಭಾಗದಲ್ಲಿ ದಡಗ ಗ್ರಾಮವಿದೆ.
ದಡಗ ಗ್ರಾಮದ ಹೆಸರು ಗಂಗರ ಅರಸನಾದ ‘ದಡಿಗ’ನ ನೆನಪನ್ನು ತರುವಂತಿದೆ. ದಡಗ ಗ್ರಾಮದ ಶ್ರೀ ಯೋಗಾ ನರಸಿಂಹ ಸ್ವಾಮಿ ಮತ್ತು ಕೋಡಿ ಹಳ್ಳಿಯ ದಡಿಗೇಶ್ವರ ದೇವಾಲಯಗಳು ಇಟ್ಟಿಗೆ ಗೋಡೆಯಿಂದ ಕಟ್ಟಲ್ಪಟ್ಟಿವೆ. ಹೊರ ನೋಟಕ್ಕೆ ಇವುಗಳ ರಚನೆ ಇತ್ತೀಚಿನದಂತೆ ಕಂಡುಬಂದರೂ ದೇವಾಲಯದ ಒಳಗಿನ ಕಂಬಗಳು, ಅವುಗಳ ನಡುವಿನ ದೊಡ್ಡ ಅಂಕಣದ ಚಾವಣಿಯಲ್ಲಿನ ಉಬ್ಬು ರೀತಿಯಲ್ಲಿ ಬಿಡಿಸಿರುವ ಅರಳಿದ ಪದ್ಮ ಮೊದಲಾದ ಕೆತ್ತನೆಗಳು ಗಂಗರ ಕಾಲದ ಪ್ರಾರಂಭಿಕ ಕಾಲ ಘಟ್ಟದ ರಚನೆಯನ್ನು ಹೋಲುತ್ತವೆ.
ಈ ದೇವಾಲಯದ ಶ್ರೀ ಯೋಗಾ ನರಸಿಂಹನ ವಿಗ್ರಹವು ಅತ್ಯಂತ ಸುಂದರ ರೂಪದಲ್ಲಿದ್ದು, ಭಕ್ತಾದಿಗಳ ಕಣ್ಮನ ಸೆಳೆಯುತ್ತದೆ. ಮಂಡ್ಯ ಜಿಲ್ಲೆ ಶಾಸನ ಸಂಪುಟ ೭ ರಲ್ಲಿ ಉಲ್ಲೇಖವಾಗಿರುವ ಶಾಸನಗಳು (ಸಂಖ್ಯೆ ೬೫, ೬೬, ೬೮, ೭೦) ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುತ್ತಿವೆ.
ಈ ಶಾಸನಗಳಲ್ಲಿ ಗ್ರಾಮದ ‘ಪಂಚ ಕೂಟ ಬಸದಿ'(ಶಾಸನ ಸಂಖೆ ೬೮) ಹೊಯ್ಸಳ ದೊರೆ ವಿಷ್ಣುವರ್ಧನನ ಮಹಾಪ್ರಧಾನ ಮರಿಯನೆ ದಂಡನಾಯಕ ಭರ್ತಿಮಯ್ಯ ಇವರು, ಮಣಿಭದ್ರ ಸಿದ್ಧಾಂತದೇವರ ಶಿಷ್ಯರಾದ ಮೇಘ ಚಂದ್ರ ಸಿದ್ದಾಂತ ದೇವ ಇವರ ಮಾರ್ಗದರ್ಶನದಲ್ಲಿ ಈ ಬಸದಿಯನ್ನು ನಿರ್ಮಿಸಿದ ಮತ್ತು ನಿರ್ವಹಣೆ ಸಲುವಾಗಿ ನೀಡಿದ ದಾನಗಳ ವಿವರವಿದೆ.
ಈ ಗ್ರಾಮದ ಮತ್ತೊಂದು ಐತಿಹಾಸಿಕ ದೇವಾಲಯ ‘ಚನ್ನಕೇಶವ ದೇವಾಲಯ’. ಈ ದೇವಾಲಯದ ಉತ್ತರ ದಿಕ್ಕಿನ ತೊಲೆಯ ಮೇಲೆ (ಶಾಸನ ಸಂಖ್ಯೆ ೬೬) ಶ್ರೀ ಲಕ್ಷ್ಮೀ ದೇವಾಲಯ ನಿರ್ಮಾಣ ವಿವರಗಳ (ಶ್ರೀ ಕಾಳಉಕ್ತಿ ನಾಮ ಸಂವತ್ಸರ, ಅಶ್ವಯುಜ ಮಾಸ) ಸೂಚನೆ ಸಿಗುತ್ತದೆ.
ಇದೇ ಕೇಶವ ದೇವಾಲಯದ ಪಶ್ಚಿಮ ದಿಕ್ಕಿನ ತೊಲೆಯ ಮೇಲಿನ ಶಾಸನ(ಸಂಖ್ಯೆ ೬೭)ದಲ್ಲಿ ಊರಿನ ಸಮಸ್ತ ಮಹಾಜನರ ಸಮ್ಮುಖದಲ್ಲಿ ಈ ದೇವಾಲಯಕ್ಕೆ ಸೇರಿದ ಒಂದು ಮನೆ ಮತ್ತು ಕೆಲವು ಭೂಭಾಗಗಳನ್ನು ೫ ಪಣಗಳಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಮಾದೇವ (ಈಶ್ವರ) ದೇವಾಲಯದ ವಿಮಾನ ಗೋಪುರ ನಿರ್ಮಾಣ ಮಾಡಿದ ಉಲ್ಲೇಖವಿದೆ. ಈ ಶಾಸನ ೧೩ರಿಂದ ೧೪ನೇ ಶತಮಾನಕ್ಕೆ ಸಂಬಂಧಿಸಿದ್ದಾಗಿದೆ. ಶಾಸನ ಲಿಪಿಕಾರ ‘ಕಲಿದೇವ’ನ ಮಗನಾದ ‘ಲಚ್ಚಣ್ಣ’ ಎಂಬ ದಾಖಲೆ ಇದೆ.
ಇದೇ ದೇವಾಲಯದ ನವರಂಗ ಮಂಟಪದ ನಾಲ್ಕನೇ ಅಂಕಣದ ತೊಲೆಯ ಮೇಲೆ ಕ್ರಿ.ಶ. ೧೪೦೦ರ ಶಾಸನ ಪಟ್ಟಂಗಿ ವೀರಪಿಳ್ಳನ ಪತ್ನಿ ತನಗೆ ದೇವಾಲಯ ನೀಡಿದ್ದ ಜಮೀನನ್ನು ಮಾರಿ ಬಂದ ಹಣದಿಂದ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಕಲ್ಲಿನ ಮಂಟಪ ನಿರ್ಮಿಸಿದ ಉಲ್ಲೇಖವಿದೆ.
ಒಟ್ಟಿನಲ್ಲಿ ಈ ಗ್ರಾಮವು ಶೈವ, ವೈಷ್ಣವ ಮತ್ತು ಜೈನ ಸಮುದಾಯಗಳ ಸಮನ್ವಯ ಸಾರುವ ಐತಿಹಾಸಿಕ ಗ್ರಾಮ ಎಂಬುದನ್ನು ಶಾಸನಗಳು ಸಾರುತ್ತಿವೆ.
ಇಂಥ ಐತಿಹಾಸಿಕ ದೇವಾಲಯಗಳ, ಅದರಲ್ಲೂ ಸರ್ಕಾರದಿಂದಾಗಲೀ, ಸಾರ್ವಜನಿಕರಿಂದಾಗಲೀ ಸರಿಯಾದ ರೀತಿ ಸಂರಕ್ಷಣೆ ಆಗದೇ ಶಿಥಿಲಾವಸ್ಥೆ ತಲುಪಿರುವ ದೇವಾಲಯಗಳನ್ನು ಸರ್ಕಾರ, ದಾನಿಗಳು, ಭಗವಂತನ ಭಕ್ತರ ಸಹಕಾರದಿಂದ ಸಂರಕ್ಷಿಸಬೇಕು. ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವ ಪ್ರಯತ್ನ ನಿರಂತರವಾಗಿ ನಡೆಯಬೇಕು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ