- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಮಾನವನ ಅದ್ವಿತೀಯ ಆವಿಷ್ಕಾರಗಳಲ್ಲಿ ಅಗ್ನಿಯೂ ಒಂದು. ಈ ಅಗ್ನಿಯನ್ನು ಸಂಕೇತಿಸುವುದು ದೀಪ, ಹಣತೆ, ಪ್ರಣತಿ, ಜ್ಯೋತಿಯೆಂದರೆ ….. ದೀಪವೇ. ದೀಪಕ್ಕೆ ಬೆಳಕು, ಮಾರ್ಗ,ಸ್ಪೂರ್ತಿ,ಜ್ಞಾನ ಎಂಬ ಅರ್ಥಗಳೂ ಇವೆ. ನಮ್ಮ ಮನಸ್ಸಿನ ಕತ್ತಲನ್ನು ಹೊಡೆದೋಡಿಸುವ ದೀಪದ ಸಹಚರ್ಯ ನಮಗೆ ಯಾವಾಗಲೂ ಬೇಕು. ದೀಪದ ಬೆಳಕನ್ನು ‘ಜ್ಯೋತಿ’ ಎನ್ನುವುದಿದೆಯೇ ಹೊರತು ‘ಕಿಡಿ’ ಎಂದಾಗಲಿ, ‘ಬೆಂಕಿ’,’ಉರಿ’,’ಜ್ವಾಲೆ’,’ಅನಲ’ ,’ಕಿಚ್ಚು’ ಎಂದು ಕರೆಯುವುದಿಲ್ಲ. ಇದರಲ್ಲೆ ದೀಪದ ಮಹತ್ವ ಅಡಗಿದೆ. ಲೋಕವ್ಯಾಪಾರದ ಕತ್ತಲನ್ನು ಹೊಡೆದೋಡಿಸಲು ‘ದೀಪ’ ಅಥವಾ ‘ಪ್ರಣತಿ’ ಅಗತ್ಯ ಆದರೆ ನಮ್ಮಂತರ್ಗತ ಅಜ್ಞಾನವನ್ನು ಹೊಡೆದೋಡಿಸಲು’ ಜ್ಞಾನ’ ಎಂಬ ದೀವಿಗೆಯ ಅವಶ್ಯಕತೆ ಇದೆ.
‘ಮನುಷ್ಯನ ಬಾಳುವೆ ದೀಪದ ಹಾಗಿರಬೇಕು’ ಎನ್ನುತ್ತಾರೆ ಹಿರಿಯರು. ತನ್ನ ಬುಡದಲ್ಲಿ ಕತ್ತಲನ್ನು ಅಡಗಿಸಿಕೊಂಡು ತನ್ನ ಸುತ್ತಲೂ ಬೆಳಕನ್ನು ಅರ್ಥಾತ್ ಜ್ಞಾನವನ್ನು ಪಸರಿಸುವ ದೀಪದ ಮಾದರಿ ಅನುಕರಣನೀಯ ಅಲ್ವೆ! ಇಷ್ಟೇ ಅಲ್ಲ! ದೀಪವೆಂದರೆ ತನ್ನ ಅಸ್ತಿತ್ವವಾದ ಬತ್ತಿಯನ್ನು ಉರಿಸಿಕೊಂಡು ಇತರರಿಗೆ ಆದರ್ಶವಾದಂತೆ ಮನುಷ್ಯ ತನ್ನೆಲ್ಲಾ ಅಹಂಕಾರವನ್ನು ದಹಿಸಿಕೊಂಡು ಲೋಕಕ್ಕೆ ಮಾದರಿಯಾಗಬೇಕು. ದೇವರ ಕೋಣೆಯಲ್ಲಿ ದೀಪವನ್ನು ಪ್ರತಿಷ್ಟಾಪಿಸುವಂತೆ ನಮ್ಮ ಹೃದಯದಲ್ಲೂ ‘ಹೃದಯವಂತಿಕೆ’ ಎಂಬ ಹಣತೆ ಅವಶ್ಯ ಬೆಳಗಬೇಕು. ಅಷ್ಟು ಸುಲಭಕ್ಕೆ ಸೋತುತಲೆ ಬಾಗುವ ಜಾಯಮಾನ ದೀಪದ್ದಲ್ಲ! ಬಿರುಸಿನ ಗಾಳಿ ಬೀಸುವಾಗಲೂ ತೊನೆಯುತ್ತಾ ಮಂಕಾಗುತ್ತಾ ತನ್ನೆಲ್ಲಾ ಶಕ್ತಿಯನ್ನು ಸಂಚಯಿಸಿಕೊಂಡು ತನ್ನ ಇರುವನ್ನು ಸಮರ್ಥಿಸಿಕೊಳ್ಳುತ್ತದೆ.
‘ದೀಪ’ ಮತ್ತು ‘ಅವಳಿ’ ಸೇರಿ ‘ದೀಪಾವಳಿ’ ಆಗಿದೆ ಇದನ್ನು ‘ದೀವಳಿಗೆ’ ಎನ್ನುವುದಿದೆ. ‘ಅವಳಿ’ ಅಂದರೆ ‘ಜೊತೆ’, ಆವಳಿ ಅಂದರೆ ‘ಸಮೂಹ’ ಅನ್ನುವ ಅರ್ಥವೂ ಇದೆ.ಕನ್ನಡದ ‘ದೀಪಾವಳಿ’ ಹಿಂದಿಯಲ್ಲಿ ‘ದಿವಾಲಿ’ ಎಂದಾಗುತ್ತದೆ. ನರಕಾಸುರನನ್ನು ಕೊಂದು ಅವನಿಂದ ಪೀಡಿತರಾಗಿದ್ದವರನ್ನು ಕೃಷ್ಣ ಕಾಪಾಡಿದ ದಿನವನ್ನು ‘ನರಕಚತುರ್ದಶಿ’ ಎಂದು ಕರೆಯುತ್ತೇವೆ ಅಂದರೆ ‘ಬಂಧನ ‘ಎನ್ನುವ ಕತ್ತಲಲ್ಲಿ ಇದ್ದವರನ್ನು ಬಿಡುಗಡೆ ಎಂಬ ಬೆಳಕಿಗೆ ತಂದವನು ಶ್ರೀಕೃಷ್ಣ. ಬಲಿ ಚಕ್ರವರ್ತಿ ಭೂಮಿಗೆ ಬರುವ ದಿನವನ್ನು ‘ಬಲಿಪಾಡ್ಯ’ ಎನ್ನುತ್ತೇವೆ. ಇಲ್ಲೆಲ್ಲ ಸಂತಸವನ್ನೆ ಕಾಣುವುದು. ಇಷ್ಟೆ ಎನ್ನುವುದೆ? ಖಂಡಿತಾ ಇಲ್ಲ! ಅಶ್ವಯುಜ ಮಾಸ ಕಳೆದು ಕಾರ್ತಿಕ ಮಾಸ ಬರುವ ಸಂದರ್ಭಕ್ಕೆ ಭೂಮಿಯಲ್ಲಿ ಸಹಜವಾಗಿ ಕತ್ತಲು ಹೆಚ್ಚಾಗಿ ಆವರಿಸಿರುತ್ತದೆ. ವರ್ಷದಲ್ಲಿ ಅತ್ಯಂತ ಕಡಿಮೆ ಬೆಳಕಿರುವ ದಿನ ಡಿಸೆಂಬರ್ 22ಕ್ಕೆ. ಈ ದಿನಕ್ಕೂ ಮುನ್ನ ಕಾರ್ತಿಕ ಮಾಸವಿರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನವೆಂಬರ್ನಲ್ಲಿ ಕಾರ್ತಿಕ ಮಾಸ ಪ್ರಾರಂಭವಾಗಿ ಸರಿಸುಮಾರು ಡಿಸೆಂಬರ್ ಮಧ್ಯದವರೆಗೂ ಇರತ್ತದೆ. ಹಾಗಾಗಿ ವಾಸ್ತವದಲ್ಲಿ ಕಡಿಮೆ ಬೆಳಕಿರುವ ಈ ದಿನಗಳಲ್ಲಿ ಹೆಚ್ಚು ದೀಪವನ್ನು ಪ್ರಜ್ವಲಿಸುವುದರಿಂದ ಹೆಚ್ಚು ಕತ್ತಲೂ ದೂರವಾಗುತ್ತದೆ .
‘ರಾಮಾಯಣ’, ‘ಮಹಾಭಾರತ’ ಕಾಲದಲ್ಲೂ ಚಿನ್ನ ಮತ್ತು ಬೆಲೆಬಾಳುವ ಹರಳುಗಳಿಂದ ಅಲಂಕರಿಸುತ್ತಿದ್ದ ಉದಾಹರಣೆಗಳು ಬರುತ್ತವೆ. ಅದರಲ್ಲೂ ರಾಮಾಯಣದ ‘ಸುಂದರಕಾಂಡ’ದಲ್ಲಿ ರತ್ನದೀಪದ ಉಲ್ಲೇಖ ಬರುತ್ತದೆ ಕಾಳಿದಾಸನೂ ‘ಮೇಘದೂತ’ದಲ್ಲೂ ಯಕ್ಷನು ಅಲಕಾನಗರಿಯಲ್ಲಿ ಉಪಯೋಗಿಸುತ್ತಿದ್ದ ರತ್ನಖಚಿತ ದೀಪಗಳ ಕುರಿತು ವರ್ಣಿಸಿದ್ದಾನೆ. ಪಾಚೀನ ಕಾಲದಲ್ಲಿ ದೀಪಗಳನ್ನು ಕಲ್ಲುಗಳಿಂದ ಮಾಡುತ್ತಿದ್ದರೆಂದು ತಿಳಿಯುತ್ತದೆ(ಹಾಸನಾಂಬ ದೇವಾಲಯದ ಗರ್ಭಗುಡಿಯಲ್ಲಿರುವುದು ಕಲ್ಲು ದೀಪಗಳು) ಕ್ರಮೇಣ ಮಣ್ಣಿನ ದೀಪಗಳು, ಲೋಹದ ದೀಪಗಳು ಪ್ರವರ್ಧಮಾನಕ್ಕೆ ಬಂದವು. ಸಿಂಧೂ ನಾಗರಿಕತೆಯ ಮೊಹೆಂಜಾದಾರೊವಿನ ಪ್ರಮುಖ ರಸ್ತೆಯಲ್ಲಿಯೂ ಒಂದೊಂದು ದೀಪಸ್ತಂಭ ಇರುತ್ತಿತ್ತು ಎಂಬ ಉಲ್ಲೇಖವಿದೆ.
ಭಾರತೀಯ ವಾಸ್ತುಶಿಲ್ಪಕ್ಕೆ ಬಂದಂತೆ ಆಂಧ್ಪ್ರಪ್ರದೇಶದ ಅಮರಾವತಿಯಲ್ಲಿ ದೀಪಗಳ ಚಿತ್ರಣವಿದೆ. ಆಗ್ನೇಯ ಏಷ್ಯಾದ ಬೋರೋಬುದುರ್ ಸ್ತೂಪದ ಮೇಲೆ ಅಲಂಕೃತ ದೀಪದ ಮಾದರಿಗಳನ್ನು ಕೆತ್ತಲಾಗಿದೆ. ಅಲ್ಲದೆ ಮೊಗಲರು,ರಾಜಪೂತರು,ಮರಾಠರ ಸ್ತಂಭದೀಪಗಳನ್ನು ವೈವಿಧ್ಯಮಯವಾಗಿ ಬೆಳಗಿಸುತ್ತಿದ್ದರು ಎಂದೂ ದಕ್ಷಿಣಭಾರತದ ಚೋಳರ ಕಾಲದ ತಾಮ್ರ ಪತ್ರವೊಂದರಲ್ಲಿ ನಂದಾದೀಪದ ಉಲ್ಲೇಖವಿರುವುದನ್ನು ಇತಿಹಾಸ ಹೇಳುತ್ತದೆ. ಇಂದಿನ ದಿನಮಾನಗಳಲ್ಲೂ ಪ್ರಾರ್ಥನೆಗಾಗಿ ಆರತಿದೀಪ, ದೇವರ ಮುಂದೆ ಬೆಳಗಲು ನಂದಾದೀಪ. ತೂಗುಹಾಕುವ ತೂಗುದೀಪಗಳು, ಕಂಬದ ಮೇಲೆ ಅಲವಡಿಸಿದ ದೀಪದ ಬಟ್ಟಲು ಕಾಲುದೀಪಗಳು,ವೈಷ್ಣವತೆಯ ಸಂಕೇತಗಳಾಗಿ ಶಂಕು ಮತ್ತು ಚಕ್ರದ ಚಿತ್ರವಿರುವ ದೀಪಗಳು, ಆಮೆಯ ಬೆನ್ನಿನ ಮೇಲಿರುವಂತೆ ರಚನೆಯಾದ ಆಮೆದೀಪ, ಹಂಸೆಯ ಬೆನ್ನ ಮೇಲೆ ಹೊತ್ತಿಸುವಂತೆ ಇರುವ ಹಂಸದೀಪಗಳನ್ನು ಕಾಣಬಹುದು. ನೇಪಾಳದಲ್ಲಿ ಇಂದಿಗೂ ಬಳಸುವ ನಾಗಕುಂಭ ದೀಪ ಪ್ರಮುಖವಾದವು. 18ನೆ ಶತಮಾನದ ಕಾಕಡಾರತಿಯಲ್ಲೂ ಹನುಮಂತನ ಚಿತ್ರವಿದ್ದು ಪ್ರಬಾವಳಿಗೆ ದೀಪದ ಪಾತ್ರೆಗಳಿರುವುದು ವಿಶೇಷವಾಗಿದೆ. ಇನ್ನು ಕೆಲವು ದೀಪದ ಮೇಲ್ಭಾಗದಲ್ಲಿನಂದಿ,ಗಿಳಿ,ಸರ್ಪ,ನವಿಲು ಮುಂತಾದವು ಇರುತ್ತವೆ. ಇವಿಷ್ಟು ದೀಪದ ಮಾದರಿಗಳ ಕಿರುಮಾಹಿತಿ.
‘ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಯ್ಯ ಬಡವನಯ್ಯ’ ಎಂಬಂತೆ ಉಳ್ಳವರು ಬೆಲೆಬಾಳುವ ದೀಪಗಳನ್ನು ಆಕರ್ಷಕವಾಗಿ, ವಿವಿಧ ವಿನ್ಯಾಸಗಳಲ್ಲಿ ಹೊತ್ತಿಸಿ ಸಂಭ್ರಮಿಸಿದರೆ ಬಡವನೂ ಮಣ್ಣಿನ ಹಣತೆಯನ್ನು ಹೊತ್ತಿಸಿ ಸಂಭ್ರಮಿಸುತ್ತಾನೆ. ಮಣ್ಣಿನ ಹಣತೆ ಮತ್ತು ಮಾನವ ಪಂಚಭೂತಗಳಿಂದಲೇ ಆವೃತವಾಗಿರುವುದೇ ಇಲ್ಲಿ ಸಮಾನ ಅಂಶ. ಅಂತೆಯೇ ಜಾನಪದರಲ್ಲಿ ದೀಪದ ಉಲ್ಲೇಖ ಅದ್ವಿತೀಯವಾಗಿದೆ.
‘ಆಚಾರಕರಸಾಗು ನೀತಿಗೆ ಪ್ರಭುವಾಗು ಮಾತಿನಲಿ ಚೂಡಾಮಣಿಯಾಗು |ನನಕಂದ ಜ್ಯೋತಿಯೆ ಆಗು ಜಗಕೆಲ್ಲ’ ಎಂಬಲ್ಲಿ ತಾಯಿಯಾದವಳು ತನ್ನ ಕಂದ ಹೇಗೆ ಬಾಳಬೇಕು ಎಂಬ ಹಂಬಲವನ್ನು ಹೇಳಿಕೊಂಡು ಜಗಕೆ ಜ್ಯೋತಿಯಾಗಬೇಕು ,ದಿಗ್ದರ್ಶಕನಾಗಬೆಕು, ಮಾರ್ಗದರ್ಶಕನಾಗಬೇಕು ಎಂಬ ಆಶಾವಾದವನ್ನು ಹೊಂದಿರುವುದು ಲೋಕೋತ್ತರವಾದುದು. ಹಾಗೆ ನವೋದಯ ಕಾಲದ ಕವಿತೆ ದೀಪಧಾರಿಯಲ್ಲಿ ಕಣವಿಯವರು ಮಗುವನ್ನು ಮನೆಯ ಅಧ್ಯಕ್ಷನನ್ನಾಗಿ ಮಾಡಿ ಎದ್ದೆದ್ದು ಬಿದ್ದು ಮುನ್ನುಗ್ಗುವ ಅವನ ಸಂಭ್ರಮವನ್ನು ಕಂಡು ಹಿಗ್ಗುತ್ತಾರೆ. ಶೀರ್ಷಿಕೆಯೇ ಹೇಳುವಂತೆ ಇಲ್ಲ ‘ದೀಪಧಾರಿ’ ಎಂದರೆ ಮಗು . ಮಗುವೆ ಮನೆಯ ‘ದಾರಿದೀಪ’ ಎಂದು ತುಂಬು ಪ್ರೀತಿಯಿಂದ ಹೇಳುತ್ತಾರೆ.
ಯಾರು ಇದ್ದರೂ ನನ್ನ ತಾಯವ್ವನ್ಹೋಲರ
ಸಾವಿರ ಕೊಳ್ಳಿ ಒಲೆಯಾಗ| ಇದ್ದರ
ಜ್ಯೋತಿ ನಿನ್ಯಾರ ಹೋಲರ||
ಸರ್ವಕಾಲಕ್ಕೂ ಅನ್ವಯಿಸುವಂಥ ತಾಯಿಯ ಮಹತ್ವವನ್ನು ಸಾರುವ ತ್ರಿಪದಿ ಇದು. ಸಾವಿರ ಕೊಳ್ಳಿ ಒಟ್ಟಿಗೆ ಉರಿದರೂ ಮಣ್ಣಿನ ಹಣತೆಯ ಬೆಳಕಿನ ಶ್ರೇಷ್ಟತೆಯನ್ನು ಸರಿಗಟ್ಟಲು ಸಾಧ್ಯವಿಲ್ಲ! ಅಂತೆಯೇ ಸಕಲಬಂಧುತ್ವವನ್ನು ಮೀರಿದ ಆತ್ಮ ಬಂಧುರತೆ ತಾಯಿಯದು ಎನ್ನುತ್ತಾರೆ ಜಾನಪದರು. ‘ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ ……ಕೃತಕ ದೀಪ ಕತ್ತಲಲ್ಲಿ ಕಳೆದು ಹೋಗದಂತೆ ಸೂರ್ಯ ಚಂದ್ರ ತಾರೆಯಾಗಿ ಹೊಳೆದು ಬಾಳುವಂತೆ” ಎಂಬ ಎಂ. ಆರ್. ಕಮಲರವರ ಸಾಲುಗಳು ಅಮ್ಮನ ಪ್ರಾಮುಖ್ಯತೆಯನ್ನೇ ಕುರಿತು ಹೇಳುತ್ತವೆ. ಕಾಲ ಎಷ್ಟೇ ಸರಿದರೂ ಸ್ಫುರಿಸುವ ಭಾವಗಳು ಒಂದೇ ಅಲ್ಲವೆ!
ಕವಿ ರನ್ನ ತನ್ನ ಆಶ್ರಯಧಾತ ಇರಿವಬೆಡಂಗನ ಶ್ರೇಷ್ಟತೆಯನ್ನುಕುರಿತು ಬರೆಯುವಾಗ
ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆಪ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು ಮೆರೆವನಿರಿವ ಬೆಡಂಗಂ
ಎಂದು ಉಲ್ಲೇಖಿಸಿದ್ದಾನೆ ಅಂದರೆ ಉಜ್ವಲವಾಗಿ ಪ್ರಕಾಶಿಸುತ್ತಿರುವ ದೀಪದಿಂದ ತಮ್ಮ ದೀಪಗಳನ್ನು ಹಚ್ಚಿ ಬೆಳಗಿಸಿ ಹಲವರು ತೆಗೆದುಕೊಂಡು ಹೋದರೂ ದೀಪವು ಎಂದಿನಂತೆ ಪ್ರಕಾಶಿಸುವ ಹಾಗೆ ,ಯಾಚಕರಾಗಿ ಬಂದವರಿಗೆಲ್ಲಾ ಯಥೇಚ್ಛ ದಾನ ಮಾಡಿದರು ತನ್ನ ಭಂಡಾರವು ಕ್ಷಯವಾಗದಿರಲು , ಇರಿವಬೆಡಂಗನು ಅತಿವೈಭವದಿಂದ ಶೋಭಿಸಿದನ ಎಂದು ತನ್ನ ಆಸ್ರಯಧಾತನ ಶ್ರೇಷ್ಟತೆಯನ್ನು ಹೇಳುತ್ತಾನೆ.
ಹದಿಹರೆಯದ ಎಳೆಯರ ಮನಸ್ಸನ್ನು ವಿಚಲಿತಗೊಳಿಸುತ್ತಾ ಇರುವುದು ಹಳಗನ್ನಡ ಕವಿ ನಾಗವರ್ಮನೇ ಹೇಳಿರುವಂತೆ ಇಂದಿಗೂ ಅನ್ವಯವಾಗುವ “ತಮ” ಎಂಬ ರಕ್ತಬೀಜಾಸುರ.
ಕೈದೀವಿಗೆಯ ಬೆಳಗಿನಿಂ ಕಾಯ್ದೆಸೆವ ಸಹಸ್ರಕಿರಣನಿಂ
ಭೇದಿಸಲ್ ಏಗೈದೂಂ ಬಾರದು ದಲ್
ತವೆ ಮಾಯ್ದ ಈ ಜವ್ವನದ ಒಡಲೊಳ್ ಇಡಿದಿರ್ದ ತಮ
ಎಂದು ಕಡ್ಡಿ ಮುರಿದಂತೆ ಕವಿ ಹೇಳುವ “ಪ್ರಾಯದ ಹುಡುಗರ ದೇಹದ ತಮ” ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ. ಇದನ್ನು ಜವ್ವನದ ಸೊಕ್ಕು ಎನ್ನಲೂ ಬಹುದು. ತಮದಲ್ಲಿ ಎದಿರು ಬರುವ ದೇವತೆಯೂ ಒಂದೇ ಸೈತಾನನೂ ಒಂದೇ ಎಂಬಂತಾಗಿದೆ. ಇಲ್ಲಿ ‘ಕೈದೀವಿಗೆ’ ಎಂಬ ಮಾತು ಮಾರ್ಗದರ್ಶಕ ಎಂಬರ್ಥದಲ್ಲಿ ಬಳಕೆಯಾಗಿದೆ. ಅಂಥ ಕೈದೀವಿಗೆಯ ಬೆಳಕನ್ನು ಮಂಕಾಗಿಸುವುದು ‘ಜವ್ವನಿಗರ ಸೊಕ್ಕು’ ಎಂಬ ಅಭಿಪ್ರಾಯವಾಗಿದೆ.
ಕುಮಾರವ್ಯಾಸನ ‘ಗದುಗಿನ ಭಾರತದ ‘ದ್ರೋಣಪರ್ವ’ದ 33ನೆಯ ಪದ್ಯದಲ್ಲಿ ದೀಪಗಳ ವರ್ಣನೆಯಿದೆ.
ಬೆಳಗಿದವು ಬೊಂಬಾಳ ದೀವಿಗೆ
ಬಲದೊಳಾನೆಗೆ ಹತ್ತುರಥಿಕಾ
ವಳಿಗೆ ನಾಲಕು ಹಯಕರೆಡು ಕಾಲಾಳಿಗೊಂದೊಂದು
ಬಲಸಮುದ್ರದೊಳೊಗೆದ ವಡಬಾನಳಝಳವೋ ಮೃತ್ಯುವಿನ
ದೀವಳಿಗೆಯಿರುಳೋ ತಿಳಿಯಲರಿದನೆಚಿರ್ದತವಾಯ್ತೆಂದ
ಇಲ್ಲಿಯ ವಿವರಣೆ ಯುದ್ಧಕಾಲದ ರಾತ್ರಿಯೊಂದರ ಕುರಿತಾಗಿದೆ. ಹಾಗೆ ಗಮನಿಸಿದರೆ ಯುದ್ಧ ಕಾಲದ ರಾತ್ರಿಗಳಲ್ಲಿ ಅದೆಷ್ಟು ದೀಪಗಳನ್ನು ಅಲ್ಲಿ ಉರಿಸಿದ್ದರೆಂದು ತಿಳಿಯುವುದಿಲ್ಲ. ಬಹುಶಃ ಯುದ್ಧರಾಕ್ಷಸ ಇರುವ ಎಲ್ಲ ತೈಲವನ್ನು ಬಡಬಾಗ್ನಿಯಂಥ ಕ್ರೂರ ಹಸಿವಿಗೆ ಬಳಸಿಕೊಂಡಿದ್ದನೆ ಎಂಬ ಅಭಿಪ್ರಾಯವೂ ಬರುತ್ತದೆ.
ಲಕ್ಷ್ಮೀಶನ ‘ಜೈಮಿನಿ ಭಾರತ’ದ ಎಂಟನೆಯ ಸಂಧಿಯಲ್ಲಿ ದೀಪದ ವಿವರಣೆಯಂತೂ ಅನನ್ಯವಾಗಿದೆ. ಮಂತ್ರಿದುಷ್ಟಬುದ್ಧಿಯ ಕಪಿಮುಷ್ಟಿಗೆ ಸಿಲುಕಿ ನಲುಗಿದ್ದ ಬಾಲಕ ಕುಳಿಂದಕನ ಕೈಗೆ ಸಿಗುವ ಸಂದರ್ಭದಲ್ಲಿ
ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ
ಬತ್ತಿದ ಸರೋವರಕೆ ನವ ಜಲಮೊದವಿದಂತೆ
ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತ ಭುತದೊಳು
ಮತ್ತೆ ಸಂತಾನಮಿಲ್ಲದ ಕುಳಿಂದನ ಬಾಳ್ಮೆ
ಗುತ್ತಮ ಕುಮಾರನಾದಂ ಚಂದ್ರಹಾಸನೆನ
ಲುತ್ತರೋತ್ತರಮಪ್ಪದಚ್ಚರಿಯೆ ಸುರಪುರದ ಲಕ್ಷ್ಮೀವರನ ಭಕ್ತರು ಎಮಬ ವಿವರಣೆಯಿದೆ. ಅಂದರೆ
ಕತ್ತಲು ಕವಿದಿದ್ದ ಮನೆಗೆ ಮಣಿದೀಪವಾದಂತೆ(ಎಣ್ಣೆ ಬತ್ತಿಗಳಿಲ್ಲದಿದ್ದರೂ ಉರಿಯುವ ದೀಪ) ಒಣಗಿದ ಸರೋವರಕ್ಕೆ ಹೊಸನೀರು ಬಂದಂತೆ , ವಿಸ್ತಾರವಾದ ಕಾವ್ಯಕ್ಕೆ ದೇವತಾಸ್ತುತಿಯು ಶೋಭಿಸುವಂತೆ ಮಕ್ಕಳಿಲ್ಲದ ಕುಳಿಂದಕನ ಬಾಳಿಗೆ ಉತ್ತಮನಾದ ಚಂದ್ರಹಾಸನು ಮಗನಾಗುತ್ತಾನೆ ಎಂದು ಕವಿ ವಿವರಿಸಿದ್ದಾನೆ ಅಂದರೆ ಕುಳಿಂದಕನ ಮನೆಗೆ ಚಂದ್ರಹಾಸ ದೀಪವಾದ ಎಂದಲ್ಲವೆ?
“ಎಲ್ಲರೊಳಗೊಂದೊಂದು ನುಡಿಕಲಿತು ವಿದ್ಯೆಯ ಪರ್ವತವೆ ಅದ ಸರ್ವಜ್ಞ” ಎಂಬ ಮಾತಿದೆ ಅಂಥ ಎಲ್ಲ ಬಲ್ಲವನು ಜ್ಯೋತಿಯ ಬಗ್ಗೆ ನುಡಿಯುವಾಗ
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ?
ಜಾತಿವಿಜಾತಿಯೆನಬೇಡ ದೇವನೊಲಿದಾತನೇ
ಜಾತ ಸರ್ವಜ್ಞ|| ಎಂದಿದ್ದಾನೆ.
ಅಂದರೆ ಬೆಳಕಿನಲ್ಲಿ , ದೀಪದ ಕಾಂತಿಯಲ್ಲಿ ಹೇಗೆ ಬೇಧವಿರುವುದು ಸಾಧ್ಯವಿಲ್ಲವೋ ಹಾಗೆ ಮನುಕುಲವೂ ಎನ್ನುವ ಅಭಿಪ್ರಾಯಕ್ಕೆ ಬರುತ್ತಾನೆ ಅರ್ಥಾತ್ ಅವನಲ್ಲಿರುವ ಜಾತ್ಯಾತೀತ ಮನೋಭಾವ ಇಲ್ಲಿ ಸ್ಪಷ್ಟವಾಗುತ್ತದೆ. ದೀಪದ ಮಹಿಮೆಯೇ ಹಾಗೆ ಎಲ್ಲವನ್ನೂ ಮೀರಿನಿಂತ ಪ್ರಾದುರ್ಭಾವ!
ಸುರಚಾಪಾಯತಮಿಂದ್ರಜಾಲದ ಬಲಂ ಮೇಘಂಗಳಾಕಾರ ಬಾಲರು ಕಟ್ಟಾಡುವ ಕಟ್ಟೆ ಸ್ವಪ್ನದ ಧನಂ ನೀರ್ಗುಳ್ಳೆ ಗಾಳಿಸೊಡರ್ಪರಿವಿತ್ತಿರ್ಪ ಮರೀಚಿಕಾ ಜಲ ಜಲಾವರ್ತಾಕ್ಷರಂ ತೋರುವೈಸಿರಿ ಪುಲ್ಲಗ್ರದ ತುಂತುರೈ ಹರಹರಾ ಶ್ರೀಚೆನ್ನಸೋಮೇಶ್ವರಾ||
ಸರಳವಾಗಿ ಹೇಳುವುದಾದರೆ ಕಾಮನಬಿಲ್ಲು ,ಇಂದ್ರಜಾಲದಿಂದ ತೋರಿದ ಸೈನ್ಯ,ಮೋಡಗಳುಹೊಂದುವ ಬಗೆಬಗೆಯಾಕಾರ, ಆಟಕ್ಕಾಗಿ ಹುಡುಗರು ಕಟ್ಟುವ ಕಟ್ಟೆ, ಕನಸಿನಲ್ಲಿ ಕಾಣೂವ ಹಣ ನೀರಮೇಲಣ ಗುಳ್ಳೆ, ಗಾಳಿಯಲ್ಲಿಟ್ಟ ದೀಪ, ಹರಿಯುವಂತೆ ಕಾಣುವ ಬಿಸಿಲ್ಗುದುರೆ, ನೀರಿನ ಮೇಲಿನ ಅಕ್ಷರ, ಹುಲ್ಲಿನ ಕೊನೆಯಲ್ಲಿರುವ ನೀರಿನ ತುಂತುರು ಇವುಗಳಂತೆ ಸಿರಿವಂತಿಕೆ ಕ್ಷಣಿಕ ಎನ್ನುತ್ತಾನೆ. ಅಂದರೆ ಲೋಕವ್ಯಾಪರದಲ್ಲಿ ದೀಪವೂ ಶಾಶ್ವತವಲ್ಲ ಎಂಬ ನಿಲುವನ್ನು ಪುಲಿಗೆರೆಯ ಸೋಮನಾಥ ತಳೆದಿದ್ದಾನೆ.
‘ಕಾರ್ತಿಕ ಮಾಸ’ , ‘ದೀಪಾವಳಿ ‘ ಬಂದಿತೆಂದರೆ ಅಂತರಂಗವನ್ನು ಕಲುಕುವ ಕವಿತೆಗಳೆಂದರೆ ಜಿ.ಎಸ್. ಎಸ್ ಅವರ ‘ಹಣತೆ ಮತ್ತು ‘ನನ್ನ ಹಣತೆ’ ಕವಿತೆಗಳು ಮತ್ತು ಕೆ.ಎಸ್. ನ ರವರ ‘ದೀಪಾವಳಿ’ ಕವಿತೆ .ಶ್ರೀಮಂತರ ಮನೆಯಲ್ಲಿ ಬೆಳಗುವ ದುಬಾರಿ ಮತ್ತು ಆಕರ್ಷಕ ದೀಪಗಳಿಗಿಂತ ಬಡವರ ಮನೆಯ ಮಣ್ಣಿನ ಹಣತೆ ಚಿಕ್ಕದಾದರೆನೆಂತೆ ಅದು ಕೊಡುವ ಬೆಳಕು ಚಿಕ್ಕದೇ ? ಎಂಬ ಪ್ರಶ್ನೆಯನ್ನುಜಿ.ಎಸ್.ಎಸ್ ಅವರು ಎತ್ತಿದ್ದಾರೆ.
ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಆದರೂ ಹಣತೆ ಹಚ್ಚುತ್ತನೆ ನಾನು
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು,ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹನತೆ ಆರಿದ ಮೇಲೆ .ನೀನು ಯಾರೋ,ಮತ್ತೆ
ನಾನು ಯಾರೋ?
ಈ ಕವಿತೆಯ ಸಾಲುಗಳಲ್ಲಿ ಉಕ್ತವಾಗಿರುವ ‘ನಾನೂ’ ಶಬ್ಬ ಅತ್ಯಂತ ರೋಚಕವಾಗಿ ಪ್ರಯೋಗವಾಗಿದೆ. ಕವಿ ಎಲ್ಲರ ಹಾಗೆ ನಾನೂ ಹಣತೆ ಹಚ್ಚುತ್ತೇನೆ ಆದರೆ ಕತ್ತಲನ್ನೂ ಒಡಿಸಿಯೆ ತೀರುವೆ ಎಂಬ ವಿಶ್ವಾಸವಿಲ್ಲ ಭ್ರಮೆಯಿಲ್ಲ ಎನ್ನುವಲ್ಲಿ ಸರಳ ಹಾಗು ಮಾನವೀಯ ಹೃದಯ ವೈಶಾಲ್ಯವುಳ್ಳ ಕವಿ ಮನಸ್ಸನ್ನು ಅರ್ಥಮಾಡಿಕೊಳ್ಳಬಹುದು ಜೊತೆಗೆ ಬಾಳಿನ ನವುರಾದ ಮಾಧುರ್ಯಭರಿತ ನೊಟಕ್ಕೆ ಹಣತೆ ಇನ್ನಿಲ್ಲವಾದ ಮೇಲೆ ಯಾರಿಗೆ ಯಾರೂ ಸಿಗಲಾರರು ಎಂಬುದೇ ಸತ್ಯವನ್ನು ಅರಿಯಬಹುದು.
ನಮ್ಮ ಬದುಕಿನಲ್ಲಿರುವ ಅಸಂಖ್ಯ ನಿರೀಕ್ಷೆಗಳು ಅತಿ ಆಸೆ,ಭ್ರಮೆ,ಮಹತ್ವಾಕಾಂಕ್ಷೆಗಳನ್ನು ತಣ್ಣಗೆ ಪ್ರಶ್ನಿಸುವ ಕವನ. ಕೆ.ಎಸ್,ನ ಅವರ ಪ್ರಾತಿನಿಧಿಕ ಪ್ರೇಮ ಕವನ ‘ ದೀಪಾವಳಿ’.ಕವಿ ತನ್ನವಳನ್ನು ದೀಪಕ್ಕೆ ಹೋಲಿಸಿ ‘ತನ್ನಂತರಂಗದ ಜೀವನದಿ ‘ಎನ್ನುತ್ತಾ ನಿನ್ನಿಂದ ದೀಪಾವಳಿ’ ಹಬ್ಬದ ಸಡಗರ ವಸ್ತು ಅಡಂಬರಗಳಿಂದಲ್ಲ ವ್ಯಕ್ತಿ ಸಂಬಂಧಗಳಿಂದ ಎಂದು ಘೋಷಿಸುತ್ತಾರೆ.
ಬೇಂದ್ರೆಯವರ ನಾದಲೀಲೆ ಕವನ ಸಂಕಲನದ ‘ ದೀಪ’ ಕವಿತೆಯ
ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ದೀಪ ತೇಲಿಬಿಟ್ಟೆವೇ–
ದೀಪ ತೇಲಿಬಿಟ್ಟೆವು.
ಸಾಲುಗಳನ್ನು ಅನುಸಂಧಾನಿಸುವುದಾದರೆ ಬ್ರಾಹ್ಮಿ ಮುಹೂತ್ರದಲ್ಲಿ ನದಿಯಲ್ಲಿ ದೀಪಗಳನ್ನು ತೇಲಿಬಿಡುತ್ತಾರೆ. ತೇಲಿಬಿಡುವುದು ಧಾರ್ಮಿಕವಿಧಿಯ ಭಾಗವೆ ಆಗಿದ್ದರು ದಂಪತಿಗಳಿಬ್ಬರ ಪ್ರೇಮಭಾವವನ್ನು ಉದ್ದೀಪಿಸುವ ಸಂಗತಿಯೂ ಆಗಿದೆ. ‘ದೀಪ’ ಎಂಬಉದು ಕವಿಗಳ ಹೃದಯದಲ್ಲಿ ಅದು ಬೆಳಗಿರುವ ಭಾವಗಳು ಎಷ್ಟು ಸಾರವತ್ತಾಗಿ ರಸವತ್ತಾಗಿವೆ ಅಲ್ಲವೆ!
ದಾಸರು ತಮ್ಮ ಕೀರ್ತನೆಗಳಲ್ಲಿ ‘‘ಬಂದದ್ದೆಲ್ಲಾ ಬರಲಿ ಭಗವಂತನ ದಯೆವೊಂದಿರಲಿ’’ ಎಂದು ಸಮಸ್ತವೂ ‘ಭಗವಂತ ‘ ಎಂದು ಹೇಳಿದಂತೆ ಕೆ.ಎಸ್ . ನ ತಮ್ಮ ‘ಪ್ರಥಮರಾಜನಿಗೆ’ ಕವಿತೆಯಲ್ಲಿಯೂ ಅದ್ಭುತ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ. “ ದೀಪವೂ ನಿನ್ನದೆ ಗಾಳಿಯೂ ನಿನ್ನದೆ,ಆರದಿರಲಿ ಬೆಳಕು ! ಕಡಲೂ ನಿನ್ನದೆ, ಹಡಗೂ ನಿನ್ನದೆ , ಮುಳುಗದಿರಲಿ ಬದುಕು!” ಎಂದು ಎಲ್ಲವೂ ಆಗಿರುವ ದೇವರನ್ನು ಪರಸ್ಪರ ವೈರುಧ್ಯ ಹೊಂದಿರುವ ಪರಿಭಾಷೆಗಳೊಡನೆ ಸಮೀಕರಿಸಿರುವ ಬಗೆ ಅದ್ಭುತ .ಕುವೆಂಪು ಅವರು ಕೂಡ ತಮ್ಮ ‘ಋತಚಿನ್ಮಯೀ ಜಗನ್ಮಾತೆಗೆ’ ಎಂಬ ಕವಿತಯೆಯಲ್ಲಿ ಎಲ್ಲವನು ಮಾಡಿ ,ಎಲ್ಲರೊಳಗೂಡಿ,ನೀನೆ ಎಲ್ಲಾದರೂ ..” ಎಂದು ಇದನ್ನೇ ಹೇಳಿರುವುದು.
ನಿಸಾರ್ ಅಹಮದ್ ಅವರ ‘ಶಿಲುಬೆ ಏರಿದ್ದಾನೆ’ ಕವಿತೆಯಲ್ಲಿ ‘ದೀಪ’ ‘ ಕ್ರಿಸ್ಮಸ್ ಹೊತ್ತು ತಂದಿದೆ ಈ ಮನೆಗೆ,ಕೇಕು ,ಚಳಿ ನಕ್ಷತ್ರ ದೀಪ’ ಎಂದು ಹಬ್ಬದ ಸಂಭ್ರಮದೊಂದಿಗೆ ಪ್ರಾರಂಭವಾಗಿ ‘ಪ್ಲಾಸ್ಟಿಕ್ ನಕಲಿನ ಕುಬ್ಜತೆಗೆ ಕರುಣಿಸಿದೆ ಗಿಡದ ರೂಪ’ ಕೃತಕತೆಯನ್ನು ಹೇಳುತ್ತಾ ‘ಮಾಹೆಗೊಂದಾವರ್ತಿ ಹಣತೆ ಹೊತ್ತಿಸಿಕೊಳದ ದಲಿತ ವಾಸದ ಸೋಗೆ ಬಿಲಗಳಲ್ಲಿ’ ಎಂದು ಬಡತನದ ಧಾರುಣತೆಯನ್ನು ಬಿಚ್ಚಿಡುತ್ತದೆ. ದೀಪ ಇದೆ….ದೀಪ ಕೃತಕವಾಗಿದೆ…..ದೀಪ ಇಲ್ಲ ಎಂಬದನ್ನು ಕವಿ ಇಲ್ಲಿ ಹೃದ್ಯವಾಗಿ ಹೇಳಿದ್ದಾರೆ. ದೀಪದ ಬಗೆಗಿನ ವಿಭಿನ್ನ ದೃಷ್ಟಿಕೋನದ ಕವಿತೆ ಇದು.
ನವೆಂಬರ್ ಮತ್ತೆ ಬರುತ್ತಿದೆ ಕನ್ನಡ ರಾಜ್ಯೋತ್ಸವದ ಹೊಸ್ತಿಲಲ್ಲಿ ನಾವು ನೆನೆಯಲೇ ಬೇಕಾದವು ‘ಹಚ್ಚೇವು ಕನ್ನಡದ ದೀಪ’ ಮತ್ತು ‘ಹೊತ್ತಿತೋ ಹೊತ್ತಿತೋ ಕನ್ನಡದ ದೀಪ’ ಕವಿತೆಗಳು.
‘ಹಚ್ಚೆವು ಕನ್ನಡದ ದೀಪ’ ಡಿ.ಎಸ್.ಕರ್ಕಿಯವರು ಕನ್ನಡಿಗರ ಹೃದಯಾಂತರಾಳದಲಿ ಅಚ್ಚೊತ್ತಿರುವ ಸಾಲುಗಳು ಎಂದು ಮತ್ತೆ ಹೇಳಬೇಕಿಲ್ಲ. ಈ ಸಾಲುಗಳು ಕನ್ನಡ ನಾಡು ನುಡಿ ಇರುವವರೆಗೂ ಚಿರಸ್ಥಾಯಿ. ಹಾಗಂದ ಮಾತ್ರಕ್ಕೆ ಕನ್ನಡ ಉಳಿಯುತ್ತದೆ ಎಂದಲ್ಲ. ಕನ್ನಡ ಸಂವರ್ಧನೆ ಬಗ್ಗೆ ಕನ್ನಡ ಸಾಹಿತ್ಯದ ಹಿರಿಮೆ,ಭಾಷಾವೈವಿಧ್ಯತೆ ಇತ್ಯಾದಿಗಳ ಬಗ್ಗೆ ನಮಗೆ ಕಾಳಜಿ ಇರಬೇಕು ಎಂಬುದಾಗಿಯೂ ಅರ್ಥೈಸಿಕೊಳ್ಳಬೇಕು.
ಡಾ. ಸಿದ್ಧಯ್ಯಪುರಾಣಿಕರ ‘‘ಹೊತ್ತಿತೋ ಹೊತ್ತಿತ್ತು ಕನ್ನಡದ ದೀಪ’’ ಕವಿತೆಯ ಸಾಲು ಕನ್ನಡ ನಾಡಿನ ಅಭ್ಯುದಯದ ಕುರಿತು, ರಾಜ್ಯೋತ್ಸವದ ನೆಲೆಯ ಕನ್ನಡಿಗರೆ ನೆಲೆ-ಬೆಲೆಯನ್ನು ಕುರಿತದ್ದಾಗಿದೆ. ಕನ್ನಡವೆಂಬುದು ಕೇವಲ ಒಂದು ನಾಡಿನ ಜನರು ಆಡುವ ಭಾಷೆಯಲ್ಲ ಅದು ಒಂದು ಜನಾಂಗದ ಅಸ್ಮಿತೆಯೂ ಹೌದು!
ಉರಿವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುತ್ತಿಯಾಗಿ..
ಧರಿಸಯವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ….
ಹೊತ್ತಿತ್ತೋ ಹೊತ್ತೊತ್ತೋ ಕನ್ನಡದ ದೀಪ ! ಎಂದು ನಮ್ಮ ಪೂರ್ವಿಕರು ಹಾಡಿದರೂ ಅದರ ಬಗ್ಗೆ ನಾವು ಹೇಗೆ ಧನಾತ್ಮಕವಾಗಿ ಆಲೋಚಿಸಿದ್ದೇವೆ ಎಂಬುದನ್ನು ಅಂತರ್ಮುಖಿಯಾಗಿ ಮನನ ಮಾಡಿಕೊಳ್ಳಬೇಕಿದೆ.
ದೀಪ ನಂದಿದ ಹೊತ್ತು ಭಯಭಿತನಾಗದಿರು
ಬಿರುಗಾಳಿ ಬೀಸಿನಲಿ ಕೊಚ್ಚಿಹೋಗದಿರು
ಇರುಳೆಂತೋ ಅಂತೆ ಈ ಬಾಳಿನಲಿ
ನಗಬೇಕು ಕಷ್ಟದಲಿ!-ಮುದ್ದುರಾಮ ಈ ಚೌಪದಿಯಲ್ಲಿ ಕೆ.ಸಿ ಶಿವಪ್ಪನವರು ದೀಪ ನಂದಿದರೂ.. ಕುಂದದಿರು ಎನ್ನುತ್ತಾ ಇರುಳು ಹಗಲಿನ ಆವರ್ತವನ್ನು ಅರ್ಥೈಸಿಕೊಂಡು ಕಷ್ಟವನ್ನು ಸಹಿಸುವ ಕ್ಷಮತೆಯನ್ನು ರೂಢಿಸಿಕೊಳ್ಳುವ ಸಲಹೆಯನ್ನು ಕೊಡುತ್ತಾರೆ. ವಚನಕಾರ ಉರಿಲಿಂಗಪೆದ್ದಿ ಸೂರ್ಯನಿಲ್ಲದೆ ಹಗಲುಂಟೇ ಅಯ್ಯಾ! ದೀಪವಿಲ್ಲದೆ ಬೆಳಕುಂಟೆ ಎನ್ನುವ ಪ್ರಶ್ನೆ ಎತ್ತುತ್ತಾರೆ ಅಂದರೆ ಬೆಳಕನ್ನು ಜ್ಞಾನ ಎಂಬ ಬೆಳಕನ್ನು ಕೊಡದ ದೀಪಕರು ಇಲ್ಲದೆ ಇದ್ದಿದ್ದರೆ ಏನಾಗುತ್ತಿತ್ತು ಎನ್ನುವ ಪ್ರಶ್ನೆಯೇ ಅಲ್ಲವೆ? ಅಮದರೆ ಪ್ರಶ್ನೆಯಲ್ಲಿಯೇ ದೀಪದ ಮಹಿಮೆಯನ್ನು ಹೇಳುತ್ತಾರೆ. ಮನೆಮನೆಯಲಿ ಎಲ್ಲರೂ ದೀಪ ಹೊತ್ತಿಸುತ್ತೇವೆ. ಆದರೆ ದೇಸಿ ಹಣತೆ, ಹೂಗಳ ಅಲಂಕಾರಕ್ಕೆ ಬದಲಾಗಿ ಕೃತಕ ದೀಪಗಳು, ಕೃತಕ ಸಿಹಿ,ಕೃತಕ ಹೂವಿನ ಹಾರಗಳದ್ದೆ ಹಾವಳಿ ಆಗಿದೆ. ದೇಸೀ ಆಚರಣೆಯ ಪರಿಪ್ರೇಕ್ಷಗಳಿಗೆ ಅತೀ ವ್ಯಾಪಾರೀಕರಣದ ಲೇಪ ಆಗಿರುವುದು ಬೇಸರದ ಸಂಗತಿ. ಅನುಭವ ಶೂನ್ಯ, ನೋಟವಷ್ಟೆ ಸುಂದರವಾಗಿರುವ ಇವುಗಳು ಹಬ್ಬದ ಸಡಗರವನ್ನು ಮುಕ್ಕಾಗಿಸಿವೆ. ಪಟಾಕಿಯನ್ನು ದುಷ್ಟ ಶಕ್ತಿಯನ್ನು ಹೊಡೆದೋಡಿಸುವ ಸಂಕೇತವಾಗಿ ಹೊಡೆಯುತ್ತಿದ್ದುದು ಇಂದಿಗೆ ಅತೀ ಮೋಜಿನ ಸಂಗತಿಯಾಗಿದೆ.
ಮನುಷ್ಯನ ಕೈಗಳು ದೀಪವನ್ನು ಹೊತ್ತಿಸುವ ಕೈಗಳನ್ನು ಬಲಪಡಿಸಬೇಕೇ ವಿನಃ ಬೆಂಕಹೊತ್ತಿಸುವ ಕೈಗಳನ್ನಲ್ಲ! ಹಾಗಿರಬೇಕಾದರೆ ಬಿಗುವಿನ ಮುಖಕಳೆ ಕಳೆದು ನಗುವಿನ ದೀಪವನ್ನು ಉರಿಸಬೇಕು !ತನ್ನಂತರಗದಲ್ಲಿ ಮಾನವತೆ ಎನ್ನುವ ನಂದಾದೀಪವನ್ನು ಸದಾ ಉರಿಸುತಲಿರಬೇಕು!
ಈ ಹೊತ್ತಿಗೆ “ಅಂತೆಯೇ ಮುನಿಸು ಒಲವಿಗೆ ದೀಪ;ಉಣಿಸು ಒಡಲಿಗೆ ದೀಪ ; ಕರುಣೆ ನಂದಾದೀಪ ಲೋಕದಲ್ಲಿ” ಎನ್ನುವ ಕೆ.ಎಸ್. ನ ಅವರ ಸಾಲುಗಳು ನಮಗೆ ದೀಪಧಾರಿ ಅಲ್ವೆ!
ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ
ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ
ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು